ಮುಸ್ಲಿಂ ಅಭ್ಯರ್ಥಿ ಆಗ್ರಹ ಮತ್ತು ನೀರ್ ಸಾಬ್ ನೆನಪುಗಳು
ಸಲೈನ್ ಡ್ರಿಪ್ ಹಾಕಿಸಲೆಂದು ನನ್ನ ಕ್ಲಿನಿಕಿಗೆ ಬೋಳಿಯಾರ್ ಮಂಡಲ ಪಂಚಾಯತ್ ನ ಮಾಜಿ ಮಂಡಲ ಪ್ರಧಾನ ಬೋಳಿಯಾರ್ ರಹೀಮಾಕ ಬಂದಿದ್ದರು. ಅವರು ನನಗೆ ಆತ್ಮೀಯರಾದುದರಿಂದ ಅವರ ಜೊತೆ ಸಾಮಾನ್ಯವಾಗಿ ನಾನು ರಾಜಕೀಯ ಮಾತನಾಡುವುದಿದೆ. ಮಾತನಾಡುತ್ತಾ ಮಾತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಪಾರ್ಲಿಮೆಂಟ್ ಟಿಕೆಟ್ ನೀಡುವುದರತ್ತ ಹೊರಳಿತು.
ಮುಸ್ಲಿಂ ನಾಯಕತ್ವದ ಕುರಿತಂತೆ ಮಾತನಾಡುತ್ತಾ ಅವರು ಮರ್ಹೂಂ ನೀರ್ ಸಾಬ್ ಯಾನೆ ನಝೀರ್ ಸಾಬ್ ರನ್ನು ನೆನಪಿಸಿದರು. ಮಾತನಾಡುತ್ತಲೇ ಅವರು ತುಸು ಭಾವುಕರಾದರು.
ಅವರು ಪ್ರತ್ಯಕ್ಷ ಸಾಕ್ಷಿಯಾಗಿದ್ದ ಎರಡು ಘಟನೆಗಳನ್ನು ವಿವರಿಸಿದರು.
1989 .. ನೀರ್ ಸಾಬ್ ಡಿಸ್ಟ್ರಿಕ್ಟ್ ಮಿನಿಸ್ಟರ್. ಮಂಗಳೂರು ಐ.ಬಿ.ಯಲ್ಲಿ ಅಭಿವೃದ್ಧಿ ಕಾರ್ಯಗಳ ಸಭೆ ಕರೆದಿದ್ದರು. ಮಂಡಲ ಪ್ರಧಾನನೆಂಬ ನೆಲೆಯಲ್ಲಿ ನಾನೂ ಹೋಗಿದ್ದೆ. ನೀರಾವರಿ ಇಲಾಖೆಯ ಕೆಲಸಗಳ ಪ್ರಗತಿ ಪರಿಶೀಲನೆ ನಡೆಸುತ್ತಿದ್ದರು. ಜನತಾ ದಳದಿಂದ ಜಿಲ್ಲಾ ಪರಿಷತ್ ಸದಸ್ಯರಾಗಿದ್ದ ಕುರ್ನಾಡು ರಾಮಯ್ಯ ನಾಯಕ್ ಎದ್ದು ನಿಂತರು. ಹಾ... ಹೇಳು ಎಂದರು ನೀರ್ ಸಾಬ್.
ಸಾರ್... ನನ್ನ ಕ್ಷೇತ್ರದಲ್ಲಿ ಎಲ್ಲೆಡೆಯೂ ಬೋರ್ ವೆಲ್ ಹಾಕಿಸಿರುವೆ. ಒಳ್ಳೆಯ ನೀರೂ ಸಿಕ್ಕಿದೆ. ಆದರೆ ಕಲ್ಲಡ್ಕದಲ್ಲಿ ಬೋರ್ ಹಾಕಿಸಲು ಪ್ರಭಾಕರ ಭಟ್ ಆಕ್ಷೇಪವೆತ್ತಿದ್ದರಿಂದ ಅಲ್ಲಿನದ್ದೊಂದು ಬಾಕಿಯುಳಿದಿದೆ ಎಂದರು.
ಕೂಡಲೇ ನೀರ್ ಸಾಬ್, ಯಾರ್ರೀ ಆತ... ಕುಡಿಯುವ ನೀರಿಗೆ ಆಕ್ಷೇಪ ಎತ್ತುವವನು...? ಲೋ..ಎಸ್ಪಿಗೆ ಫೋನ್ ಕನೆಕ್ಟ್ ಮಾಡು ಎಂದು ತನ್ನ ಪಿ.ಎ.ಗೆ ಹೇಳಿದರು.
ಹಲೋ ನೋಡ್ರೀ... ಯಾವನೋ ಅವನು ಕಲ್ಲಡ್ಕ ಪ್ರಭಾಕರ ಭಟ್ಟನಂತೆ... ಬೋರ್ ವೆಲ್ ಹಾಕಕ್ಕ್ ಬಿಡಲ್ವಂತೆ... ಈಗಲೇ ಜನ ಕಳಿಸ್ತೀನಿ.. ಇಂದು ಸಂಜೆಯೊಳಗೆ ಬೋರ್ ವೆಲ್ ರೆಡಿಯಾಗ್ಬೇಕು.. ಅವನದೇನಾದ್ರೂ ಕಿರಿಕ್ ಇದ್ರೆ ಕೂಡಲೇ ಅವನನ್ನು ಒದ್ದು ಒಳಗೆ ಹಾಕ್ಬೇಕು... ಗೊತ್ತಾಯಿತೇನ್ರೀ...ಇಟ್ ಇಸ್ ಮೈ ಆರ್ಡರ್... ಎಂದು ಎಸ್ಪಿಗೆ ಹೇಳಿದರು.
ಇಲ್ಲಿ ಬಾರಯ್ಯಾ ರಾಮಯ್ಯ.. ಇಂದು ಸಂಜೆಯೊಳಗೆ ಎಷ್ಟು ನೀರು ಸಿಕ್ಕಿದೆ ಎಂದು ನನಗೆ ರಿಪೋರ್ಟ್ ಮಾಡ್ಬೇಕು...
ರಾಮಯ್ಯ ನಾಯಕ್ ತನ್ನ ಪೊದೆ ಮೀಸೆ ಕುಣಿಸಿ ಗೆಲುವಿನ ನಗೆ ಬೀರಿದರು....
............................
1989.... ಕಮಾಲ್ ಸಾಬ್ ಜೊತೆಗಿದ್ದೆ. ಲೋ...ರಹೀಂ..., ನೀರ್ ಸಾಬ್ ಬಂದಿದ್ದಾರೆ. ಸ್ವಲ್ಪ ಮಾತಾಡುವುದಿದೆ. ನೀನೂ ಬರ್ತೀಯಾ ಎಂದು ಕೇಳಿದರು. ಸರಿ ಹೋಗೋಣ ಎಂದೆ.
ನಮ್ಮ ತಂಡ ಐ.ಬಿ.ಗೆ ಹೋಯಿತು.
ಕಮಾಲ್ ಸಾಬ್ ಈಗಿನ ಹಂಪನಕಟ್ಟೆ ಮಸ್ಜಿದುನ್ನೂರ್ ಗೆ ಇರುವ ಸ್ಟೇ ಬಗ್ಗೆ ಸುಮಾರು ಮುಕ್ಕಾಲು ಗಂಟೆಗಳ ಕಾಲ ನೀರ್ ಸಾಬರಿಗೆ ವಿವರಿಸಿದರು.
ಯಾರಯ್ಯಾ.... ಅದು ಬಿಡದವನು...ಎಂದು ನೀರ್ ಸಾಬ್ ಪ್ರಶ್ನಿಸಿದರು.
ಸರ್... ಡಿ.ಐ.ಜಿ.ರೇವಣ ಸಿದ್ದಯ್ಯ ವಿರೋಧಿಸ್ತಿದ್ದಾರೆ ಸಾರ್ ಎಂದರು.
ಪಿ.ಎ.ಗೆ ಕರೆದು ಐ.ಜಿ.ಪಿ.ಗೆ ಫೋನ್ ಹಚ್ಚೋ ಎಂದರು.
ಹಲೋ... ನೋಡ್ರೀ... ನಿಮ್ಮ ಡಿಐಜಿ ರೇವಣ ಸಿದ್ದಯ್ಯ ಮಂಗಳೂರಲ್ಲಿ ಮಸೀದಿಗೆ ವಿರೋಧ ಮಾಡ್ತಿದ್ದಾನಂತೆ.. ಎಲ್ಲಾ ಕಿರಿಕ್ ಈ ಕೂಡಲೇ ನಿಲ್ಸೋಕ್ ಹೇಳ್ರೀ... ಇಲ್ಲಾಂದ್ರೆ ನಿಮ್ಮನ್ನೂ, ನಿಮ್ಮ ಡಿ.ಐ.ಜಿ.ಯನ್ನು ಎಲ್ಲಿಗೆ ಹಾಕ್ಬೇಕು, ಏನು ಮಾಡ್ಬೇಕು ಅಂತ ನನಗೆ ಗೊತ್ತು ಎಂದು ಫೋನ್ ಕುಕ್ಕಿದರು.
ಇದರ ವಿರೋಧದ ಹಿಂದಿನ ಅಸಲಿ ಕತೆ ಬೇರೆಯೇ ಇದೆ. ಇದಕ್ಕೆ ನಿಜವಾಗಿ ಆಕ್ಷೇಪ ಎತ್ತಿರುವವರು ಬೇರೆ ಯಾರೂ ಅಲ್ಲ. ಜನಾರ್ದನ ಪೂಜಾರಿ...!!
ಮುಸ್ಲಿಮರನ್ನು ಎದುರು ಹಾಕಿಕೊಳ್ಳುವ ಧೈರ್ಯ ಇಲ್ಲದೇ ಆಗಿನ ಮಂಗಳೂರು ಶಾಸಕ ಬ್ಲೇಸಿಯಸ್ ಡಿಸೋಜರ ಮೂಲಕ ಕ್ರೈಸ್ತ ಸಮುದಾಯಕ್ಕೆ ನಿಜವಾಗಿಯೂ ಇಲ್ಲದ ಆಕ್ಷೇಪ ಎತ್ತಿಸಿ ಡಿಐಜಿ ರೇವಣ ಸಿದ್ದಯ್ಯರಿಗೆ ದೂರು ಕೊಡಿಸಿದವರು ಇದೇ ಜನಾರ್ದನ ಪೂಜಾರಿ. ಅದೇ ಕೊನೆ ಮುಂದೆಂದೂ ಜನಾರ್ದನ ಪೂಜಾರಿ ಚುನಾವಣೆ ಗೆಲ್ಲಲು ಸಾಧ್ಯವಾಗಿಲ್ಲ.
........................
ರಹೀಮಾಕ ಹೇಳಿದ್ರು... ಮುಸ್ಲಿಂ ಕ್ಯಾಂಡಿಡೇಟ್ ಅಂತೀಯಲ್ಲ... ಯಾರಿದ್ದಾರೆ ಅಂತಹ ಗಟ್ಸ್ ಇರುವ ಮುಸ್ಲಿಂ ನಾಯಕರೀಗ....?
ಹೌದಲ್ವಾ....
ತನಗಾಗಿ ಏನೇನು ಮಾಡದ... ತನ್ನ ಬದುಕನ್ನೇ ಸಮಾಜದ ಶೋಷಿತರಿಗೆ, ಬಡವರಿಗೆ ಅರ್ಪಿಸಿದ ನೀರ್ ಸಾಬರ ವ್ಯಕ್ತಿತ್ವದ ಹತ್ತಿರ ಸುಳಿಯಬಲ್ಲ ನಾಯಕರು ಯಾರಿದ್ದಾರೆ ಈ ಸಮಾಜದಲ್ಲೀಗ..?
ಕರ್ನಾಟಕದಲ್ಲಿ 1983ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರಕಾರ ಅಧಿಕಾರಕ್ಕೇರುವಲ್ಲಿ ಲಂಕೇಶ್ ಮೇಸ್ಟ್ರ ಕೊಡುಗೆ ಬಹು ದೊಡ್ಡದಿದೆ. ಆಗ ಮುಖ್ಯಮಂತ್ರಿ ಹುದ್ದೆಗೆ ಲಂಕೇಶರ ಆಯ್ಕೆ ಇದೇ ನೀರ್ ಸಾಬ್ ಆಗಿದ್ದರು. ಆದರೆ ದುರದೃಷ್ಟವಶಾತ್ ಲಂಕೇಶರ ಕನಸು ಕೊನೆಗೂ ನನಸಾಗಲಿಲ್ಲ..