ಅಯೋಧ್ಯೆ ಎಂಬ ಆಪತ್ತು ಮತ್ತು ಅಧಿಕಾರವೆಂಬ ಸಂಪತ್ತು
ಜನರ ಭಾವನೆಗಳು ಮತ್ತು ನಂಬಿಕೆಗಳ ವಿಷಯಗಳೂ ಒಳಗೊಂಡಿರುವ ಆಯಕಟ್ಟಿನ ಒಂದು ಭೂ ವಿವಾದ ಪ್ರಕರಣವನ್ನು ನಿಭಾಯಿಸುವುದು ಹಲವು ಭಾವನೆ ಹಾಗೂ ನಂಬಿಕೆಗಳನ್ನು ಹೊತ್ತ ಮನುಷ್ಯರೇ ಆಗಿರುವ ನ್ಯಾಯಾಧೀಶರಿಗೂ ಸುಲಭದ ಕೆಲಸವಲ್ಲ. ಆದರೆ ಈ ಕೆಲಸ ವಿವಾದಿತ ತುಂಡು ಭೂಮಿಯೊಂದು ದೇಶವನ್ನು ಸತತವಾಗಿ, ಆಗಾಗ ಹಿಂಸೆಗೆ ತಳ್ಳುವ ನೆಲಬಾಂಬುಗಳಾಗದಂತೆ ತಡೆಯಬಲ್ಲ ಸೂಪರ್ ಪವರ್ ಸುಪ್ರೀಂ ಕೋರ್ಟ್ ಮಾತ್ರ ಆಗಿರುವುದರಿಂದ ಅಂತಿಮವಾಗಿ ‘‘ಇತ್ತು-ಇಲ್ಲ’’ ಎಂಬುದು ನ್ಯಾಯಾಲಯದ ಅಂಗಳದಲ್ಲೇ ತೀರ್ಮಾನವಾಗಬೇಕಾಗಿದೆ.
ಮೂರು ದಶಕಗಳಿಂದ ಧಾರ್ಮಿಕ ದಳ್ಳುರಿಯಾಗಿ, ರಾಜಕೀಯ ದಾಳವಾಗಿ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಕೆಲವು ಸಾವಿರ ಹೆಣಗಳು ಉರುಳುವುದಕ್ಕೆ ಕಾರಣವಾದ ಹಾಗೂ ಈ ದೇಶದ ಸೆಕ್ಯುಲರ್ ಬಳ್ಳಿಗಳನ್ನು ಕತ್ತರಿಸುತ್ತ ಬಂದ ಒಂದು ವಿವಾದ ಈಗ ಹೊಸತೊಂದು ಮಜಲಿಗೆ ಬಂದು ನಿಂತಿದೆ. ಮಧ್ಯಸ್ಥಿಕೆ-ಮಾತುಕತೆ-ಸಂಧಾನದ ನೆಪದಲ್ಲಿ ಮತ್ತೊಮ್ಮೆ ಪರಿಹಾರ ಪೋಸ್ಟ್‌ಪೋನ್ ಆಗಿದೆ. ಸಂವಿಧಾನದ ಮೂಲಕ ಆಳಲ್ಪಡುವ ಯಾವುದೇ ಆಧುನಿಕ ರಾಷ್ಟ್ರದಲ್ಲಿ ಕಾನೂನಾತ್ಮಕ ಪರಿಹಾರ ಸಿಗಲು ಸಾಧ್ಯವೇ? ಎಂದು ಅನುಮಾನಿಸುವಂತಹ ಸ್ಥಿತಿ ಬಂದಿದೆ. ನಂಬಿಕೆಯೇ ಪರಮ ಸತ್ಯ; ನಂಬಿಕೆಯ ಮುಂದೆ ಕಾನೂನು ಏನು ಅಲ್ಲ; ಪುರಾಣವೇ ಇತಿಹಾಸ; ಪೌರಾಣಿಕ ‘ಸತ್ಯ’ವೇ ಐತಿಹಾಸಿಕ ಸತ್ಯ; ‘ಆ ಜಾಗ ನಮ್ಮದು ಎಂದು ನಾವು ನಂಬಿರುವುದರಿಂದ ಆ ಜಾಗವನ್ನು ನಮಗೆ ಬಿಟ್ಟುಕೊಡಿ’ ಎಂದು ವಾದಿಸುವವರ ಮತ್ತು ಸಂವಿಧಾನವೇ ಪರಮಸತ್ಯ ಎಂದು ವಾದಿಸುವವರ ನಡುವೆ ಸಿಕ್ಕಿಹಾಕಿಕೊಂಡಿರುವ ಬಿಡಿಸಲಾಗದ ಕಗ್ಗಂಟಾಗಿ ಉಳಿದಿದೆ. ಗಂಟನ್ನು ಬಿಡಿಸುವುದಕ್ಕೆ ಬದಲಾಗಿ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವ ಸ್ವ-ಹಿತಾಸಕ್ತ ಧಾರ್ಮಿಕ ನಾಯಕರು ಮತ್ತು ಧಾರ್ಮಿಕತೆಯ ಸೋಗು ಹಾಕಿರುವ ರಾಜಕೀಯ ದುರಂಧರರು ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳುವುದರಲ್ಲೇ ಬಿಜಿಯಾಗಿದ್ದರೆ. ಈ ನಡುವೆ ಪ್ರಭುತ್ವಕ್ಕೆ, ಕಾರ್ಯಾಂಗಕ್ಕೆ ತುಸು ಹೆದರಿದಂತೆ ಕಾಣುವ ನ್ಯಾಯಾಂಗ ಕೂಡ ‘ಕ್ಲೆವರ್’ ಆದಂತೆ ಕಂಡರೆ ಆಶ್ಚರ್ಯಪಡಬೇಕಾಗಿಲ್ಲ.
ಯಾಕೆಂದರೆ ಮೂರು ಬಾರಿ ನಡೆದ ವಿಫಲ ಸಂಧಾನಗಳ ಹಿನ್ನೆಲೆ ಹೊಂದಿರುವ ಅಯೋಧ್ಯಾ ವಿವಾದದಲ್ಲಿ, ವಿವಾದಾಸ್ಪದ ಸ್ಥಳದಲ್ಲಿ ಮಸೀದಿ ಇದ್ದ ಜಾಗದಲ್ಲಿ ರಾಮ ಮಂದಿರ ಇತ್ತೇ? ಎಂಬ ಐತಿಹಾಸಿಕ ವಾಸ್ತವವನ್ನು ನಿರ್ಧರಿಸಲು ಸುಪ್ರೀಂ ಕೋರ್ಟ್ ಯಾವತ್ತೋ ನಿರಾಕರಿಸಿದೆ. ‘ಇತ್ತು-ಇಲ್ಲ’ಎನ್ನುವುದು ಈಗ ಉಭಯ ಪಕ್ಷಗಳ ನಡುವೆ ಸಮೂಹ ಸನ್ನಿಯ ಸೃಷ್ಟಿಗೆ, ಗುಂಪುಗಳಿಗೆ ಮಾರಾಮಾರಿಗೆ ಕಾರಣವಾಗಿ, ‘ಇಲ್ಲ ಎಂದರೆ, ಜೋಕೆ’ ಎಂದು ಬೆದರಿಸುವ ಮಟ್ಟ ತಲುಪಿದೆ. ‘ಇತ್ತು’ ಎಂಬ ಬಗ್ಗೆ ಅನುಮಾನವೇ ಇಲ್ಲ ಎಂದು ವಾದಿಸುವವರು ಯಾವ ಮಟ್ಟದ ವಾದವನ್ನು ಮುಂದು ಮಾಡುತ್ತಿದ್ದಾರೆ ಎಂದರೆ 3,500 ವರ್ಷಗಳ ಹಿಂದಿನ ಋಗ್ವೇದವನ್ನೂ ಬದಿಗೆ ತಳ್ಳಿ ತಮ್ಮ ವಾದವೇ ಅಂತಿಮ ಎಂಬಂತೆ ಮಾತಾಡುತ್ತಿದ್ದಾರೆ.
ಈ ವಾದದ ಒಂದು ಝಲಕ್ ಎಂಬಂತೆ ಇತ್ತೀಚೆಗೆ ಮಂಡಿಸಲಾದ ತರ್ಕ ಇದು: ದೇವರು ಇದ್ದಾನೋ, ಇಲ್ಲವೋ ಎಂಬ ವಿಚಾರದಲ್ಲಿ ಸಂಧಾನ ಬೇಕೆ? ರಾಮಮಂದಿರ ಅಯೋಧ್ಯೆಯಲ್ಲಿ ಇದ್ದದ್ದು ದೇವರಿದ್ದಷ್ಟೇ ನಿಶ್ಚಿತವಾಗಿರುವುದರಿಂದ ಮತ್ತೆ ಸಂಧಾನ ಏತಕ್ಕೆ?
ಈ ವಾದವನ್ನು ಮುಂದುವರಿಸುವುದಾದಲ್ಲಿ ಸಂಧಾನವೂ ಬೇಡ. ಸಂವಿಧಾನವೂ ಬೇಡ, ಸಂವಿಧಾನ/ಕಾನೂನು/ಸುಪ್ರೀಂ ಕೋರ್ಟ್ ಬೇಡ ಎಂದ ಮೇಲೆ ಇನ್ನು ತಡ ಯಾಕೆ?
ಕುತೂಹಲದ ವಿಷಯವೆಂದರೆ ಸನಾತನ ಧರ್ಮದ ಆಲದ ಮರ ಎಂದು ನಾವು ಹೆಮ್ಮೆ ಪಡುವ ಅದ್ಭುತ ಸ್ಮತಿ, ಅಸಾಮಾನ್ಯ ಕಾವ್ಯ, ಪ್ರಪಂಚದ ಮೊತ್ತ ಮೊದಲ ಶ್ರೇಷ್ಠ ಸಾಹಿತ್ಯ ಕೃತಿಯಾಗಿರುವ ಋಗ್ವೇದವೇ ‘ದೇವರು ಇದ್ದಾನೆ’ ಎಂಬ ಬಗ್ಗೆ ‘ಇಲ್ಲವೋ ಏನೋ’ ಎಂಬ ತತ್ವಶಾಸ್ತ್ರೀಯ ಅನುಮಾನದ ಧ್ವನಿಯಲ್ಲಿ ಮಾತಾಡುತ್ತದೆ. ಋಗ್ವೇದದ ನಾಸದೀಯ ಸೂಕ್ತದ ಮಂತ್ರಗಳ ಕಡೆಗೆ ಕಣ್ಣು ಹಾಯಿಸಿದರೆ ಇದು ಸ್ಪಷ್ಟವಾಗುತ್ತದೆ. ‘‘ಸೃಷ್ಟಿ ಹೇಗಾಯಿತೋ ಗೊತ್ತಿಲ್ಲ ಮತ್ತು ಅದೆಲ್ಲಾ ಸಂಭವಿಸಿದ್ದ ನಂತರದಲ್ಲಿ ಮನುಷ್ಯ ದೇವರ ಸೃಷ್ಟಿಯನ್ನು ಮಾಡಿಕೊಂಡ’’ (ಕೋ ಅದ್ಧಾ ವೇದ ಕ ಇಹ ಪ್ರವೋಚತ್ ಕುತಃ ಆಜಾತಾ ಕುತಃ ಇಯಂ ವಿಸೃಷ್ಟಿಃ ಅರ್ವಾಕ್ ದೇವಾಃ ಅಸ್ಯ ವಿಸರ್ಜನೇನ ಅಥ ಕಃ ವೇದ ಯತಃ ಆಬಭೂವ).
ವೇದಗಳಿಗೆ ವಾಕ್ಯಾರ್ಥ ಬರೆದಿರುವ 14ನೇ ಶತಮಾನದ ಭಾಷ್ಯಕಾರ ಮಹಾ ವಿದ್ವಾಂಸ ಸಾಯಣನು ಕೂಡ ‘‘ದೇವತೆಗಳು ಈ ಜಗತ್ತಿನಲ್ಲಿ ಪ್ರಕೃತಿಯ ಸೃಷ್ಟಿಯ ನಂತರ ಅಸ್ತಿತ್ವಕ್ಕೆ ಬಂದಿರುವವರು’’ (ದೇವಾಃ ಅಸ್ಯ ಜಗತಃ ವಿಸರ್ಜನೇನ ವಿಯದಾದಿ ಭೂತೋತ್ಪತ್ತಿ ಅನಂತರಂ...) ಎನ್ನುತ್ತಾನೆ ಎಂಬುದನ್ನೂ ಗಮನಿಸಬಹುದು.
ತನಗೆ ಎಲ್ಲಾ ಗೊತ್ತಿದೆ, ತಾನು ಹೇಳುವುದೇ ಪರಮ ಸತ್ಯ, ಅದರ ಬಗ್ಗೆ ಚಿಂತನ ಅನುಸಂಧಾನ, ಚರ್ಚೆ ಬೇಕಾಗಿಯೇ ಇಲ್ಲವೆಂಬ, ಋಗ್ವೇದದ ರಚನೆಕಾರನಿಗೂ ಇಲ್ಲದ ಖಚಿತತೆಯಿಂದ ತಾವು ವೇದಗಳ ವಾರೀಸುದಾರರು ಎಂದು ಹೇಳುವವರು ಮಾತಾಡುವ ಒಂದು ಸನ್ನಿವೇಶದಲ್ಲಿ ಸಂಧಾನ-ಮಧ್ಯಸ್ಥಿಕೆ ಯಶಸ್ವಿಯಾಗುವ ಬಗ್ಗೆ ಅನುಮಾನ ತೀರ ಸಹಜ.
ಅಲ್ಲದೆ ಈ ತಥಾಕಥಿತ ಸಂಧಾನ ಪ್ರಕ್ರಿಯೆಯಲ್ಲಿ ಗಮನಿಸಬೇಕಾದ ಇನ್ನೂಂದು ಅಂಶವಿದೆ. ನ್ಯಾಯಾಲಯವೊಂದು ನ್ಯಾಯಾಲಯದ ಹೊರಗೆ ಸಂಧಾನದ ಮೂಲಕ ನಿಮ್ಮ ವಿವಾದವನ್ನು ಬಗೆಹರಿಸಿಕೊಳ್ಳಿ ಎಂದು ಹೇಳುವುದು ವಿಶೇಷ ಸಂದರ್ಭಗಳಲ್ಲಿ ಮಾತ್ರ. ತಾನು ನೀಡುವ ತೀರ್ಪು ಉಭಯ ಪಕ್ಷಗಳಿಗೂ ಒಪ್ಪಿಗೆಯಾಗದಿರುವ ಸಾಧ್ಯತೆ ಇರುವುದರಿಂದ ಮತ್ತು ಈ ಸಾಧ್ಯತೆ ಸಾಮಾಜಿಕ ಸಂಘರ್ಷಕ್ಕೆ ಎಡೆಮಾಡಿಕೊಡುವ ಅಪಾಯವಿರುವುದರಿಂದ ಉಭಯ ಪಕ್ಷಗಳು ತಮಗೆ ಒಪ್ಪಿಗೆಯಾಗುವ ಮಧ್ಯಸ್ಥಿಕೆದಾರರಿಂದ ವಿವಾದವನ್ನು ಬಗೆಹರಿಸಿಕೊಳ್ಳಲಿ ಎಂಬ ಸದಾಶಯ ನ್ಯಾಯಾಲಯದ್ದಾಗಿರುತ್ತದೆ. ಆದರೆ ಈ ಸದಾಶಯ ಈಡೇರಬೇಕಾದರೆ ಸಂಧಾನ ನಡೆಸುವವರು ಸಂಪೂರ್ಣ ವಸ್ತುನಿಷ್ಠತೆಗೆ ಬದ್ಧರಾಗಿರಬೇಕು ಮತ್ತು ಯಾವ ಸಂದರ್ಭದಲ್ಲೂ ಪರಿಹಾರ ಬಯಸುವ ಎರಡು ಪಕ್ಷಗಳಲ್ಲಿ (ವಾದಿ, ಪ್ರತಿವಾದಿಗಳಲ್ಲಿ) ಯಾವ ಒಂದು ಪಕ್ಷದ ಪರವಾಗಿಯೂ ಒಲವು ಅಥವಾ ಪಕ್ಷಪಾತ ಮನೋಭಾವ ಉಳ್ಳವರಾಗಿರಬಾರದು ಎಂಬುದು ಸಾಮಾನ್ಯ ತಿಳಿವಳಿಕೆಯ ವಿಚಾರ.
ಈಗ ಸುಪ್ರೀಂ ಕೋರ್ಟ್ ರಚಿಸಿರುವ ತ್ರಿಸದಸ್ಯ ಸಮಿತಿಯ ಓರ್ವ ಸದಸ್ಯರ ಬಗ್ಗೆ ಈಗಾಗಲೇ ಅಸಮಾಧಾನ ವ್ಯಕ್ತವಾಗಿದೆ. ರಾಮಮಂದಿರ ನಿರ್ಮಿಸದಿದ್ದರೆ ಭಾರತ ಸಿರಿಯದ ಹಾಗಾಗುತ್ತದೆ. ಇಲ್ಲಿ ‘ಅಂತರ್ಯುದ್ಧ’ (ಸಿವಿಲ್ ವಾರ್) ನಡೆಯುತ್ತದೆ ಎಂದು ಹೇಳಿದ್ದವರು ಉಭಯ ಪಕ್ಷಗಳ ಬಗ್ಗೆ ಸಮಾನವಾಗಿ ನಿಷ್ಪಕ್ಷಪಾತಿಗಳಾದಾರೇ? ಎಂಬ ಪ್ರಶ್ನೆ ವಿವಾದದಲ್ಲಿ ಒಳಗೊಂಡಿರುವ ಒಂದು ಸಮುದಾಯವನ್ನು ಕಾಡುತ್ತಿದೆ.
ಇದರ ಜೊತೆಗೆ ಬಹಳಷ್ಟು ಜನ ಗಮನಿಸದೆ ಇರುವ ಒಂದು ವಿಷಯವೂ ಈ ಎಂಟು ವಾರಗಳ ಗಡಿ ವಿಧಿಸಲಾಗಿರುವ ಸಂಧಾನ ಪ್ರಕ್ರಿಯೆಯಲ್ಲಿದೆ. ಸುಪ್ರೀಂ ಕೋರ್ಟ್ ತ್ರಿಸದಸ್ಯ ಸಮಿತಿಗೆ ನಾಲ್ಕು ವಾರಗಳಲ್ಲಿ ಅದು ನ್ಯಾಯಾಲಯಕ್ಕೆ ಒಂದು (ಸದ್ಯದ ಪರಿಸ್ಥಿತಿಯ) ‘ಸ್ಟೇಟಸ್’ ವರದಿಯನ್ನೂ, ಎಂಟು ವಾರಗಳಲ್ಲಿ ಅಂತಿಮ ವರದಿಯನ್ನೂ ನೀಡಬೇಕು ಎಂದಿದೆ. ಈ ಒಟ್ಟು ಎಂಟು ವಾರಗಳಲ್ಲಿ ಸಮಿತಿ ಅದೆಷ್ಟು ‘ಸಂತ್ರಸ್ತ’ರನ್ನು ಭೇಟಿ ಮಾಡಿ ಅವರ ಅಹವಾಲುಗಳನ್ನು ಆಲಿಸುತ್ತದೋ, ಆ ಅಹವಾಲುಗಳು/ವಾದಗಳು/ಅಭಿಪ್ರಾಯಗಳು ಎಷ್ಟರ ಮಟ್ಟಿಗೆ ವಿವಾದದಲ್ಲಿ ಒಳಗೊಂಡಿರುವ ಎಲ್ಲ ಪಕ್ಷಗಳ/ಗುಂಪುಗಳ ಅಭಿಪ್ರಾಯಗಳಾಗಿರುತ್ತವೋ? ಎಂಬ ಸಂದೇಹ ಒಂದೆಡೆಯಾದರೆ, ನಾಲ್ಕು ವಾರಗಳ ಅಂತ್ಯದಲ್ಲಿ ಸಿದ್ಧವಾಗುವ ‘ಸ್ಟೇಟಸ್’ ವರದಿ ಸೋರಿಕೆಯಾಗಿ (ಅಥವಾ ಕಳವಾಗಿ) ಮಾಧ್ಯಮಗಳ ಮೂಲಕ ಬಹಿರಂಗಗೊಂಡಾಗ ಏನೇನಾಗಬಹುದು? ದೇಶದಲ್ಲಿ ಒಂದು ಗುಂಪು ಯಾವ ರೀತಿಯ ಚುನಾವಣಾ ಉನ್ಮಾದ ಸೃಷ್ಟಿಸಬಹುದು? ಎಂಬ ಆತಂಕವೂ ಇನ್ನೊಂದೆಡೆ ಇದೆ. ರಕ್ಷಣಾ ದಾಖಲೆಗಳೇ ಕಳವಾಗುವ ದೇಶದಲ್ಲಿ ಕಳ್ಳರು ಯಾವ ಯಾವ ವೇಷಗಳಲ್ಲಿರುತ್ತಾರೆಂದು ಹೇಗೆ ಹೇಳುವುದು?!
ಯಾಕೆಂದರೆ ಈಗ ದೇಶದಲ್ಲಿ ಎಲ್ಲವನ್ನೂ ಚುನಾವಣೆಗಳಿಗಾಗಿ ಬಳಸಿಕೊಳ್ಳುವ ಮತಾಂಧ ಮತದಾಹಿಗಳು ಆ ವರದಿಯ ಆಧಾರದಲ್ಲಿ ಯಾವ ರೀತಿಯ ಚುನಾವಣಾ ಸನ್ನಿಯನ್ನು ಸೃಷ್ಟಿಸಿಯಾರು? ಎಂಬುದು ಶಾಂತಿ ಪ್ರಿಯರನ್ನು ಕಾಡುವ ಪ್ರಶ್ನೆಯಾಗಿದೆ.
ಮಧ್ಯಯುಗದಲ್ಲಿ ದಾಳಿಕೋರರು ಕೆಲವು ಮಂದಿರಗಳನ್ನು ಮಸೀದಿಯಾಗಿ ಮಾಡಿದ್ದಾರೆ ಎಂದು ವಾದಿಸುವವರ ಪಟ್ಟಿಯಲ್ಲಿ ಅಯೋಧ್ಯೆಯೊಂದೇ ಅಲ್ಲದೆ ಹಲವು ಇದೆಯಾದ್ದರಿಂದ ಈಗ ದೇಶಕ್ಕೆ ಬಂದೊದಗಿರುವ ಅಯೋಧ್ಯೆ ಎಂಬ ಆಪತ್ತು ಪರಿಹಾರವಾದರೂ, ಇಂತಹ ಆಪತ್ತುಗಳಲ್ಲೇ ತಮ್ಮ ಅಧಿಕಾರ ಹಾಗೂ ಚುನಾವಣಾ ರಾಜಕೀಯ ಸಂಪತ್ತು ಹುದುಗಿದೆ ಎಂದು ತಿಳಿದಿರುವ ಮಂದಿಗೆ ಅಯೋಧ್ಯೆ ಒಂದು ಪೂರ್ವನಿದರ್ಶನವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸುಪ್ರೀಂ ಕೋರ್ಟ್‌ಗೆ ಇದೆ. ನ್ಯಾಯಾಂಗ ಕೂಡ ಭಾವನೆಗಳಿಗೆ ಬೆದರುತ್ತದೆ ಎಂದು ದೃಢಪಟ್ಟಲ್ಲಿ ‘ಭಾವನೆ ವಾದಿ’ಗಳು ತಮ್ಮ ಪಟ್ಟಿಯಲ್ಲಿರುವ ಒಂದೊಂದೇ ಕಟ್ಟಡವನ್ನು ಕೆಡವಲು ಸಂಚು ಹೂಡದಿರುವುದಿಲ್ಲ. ನಿವೃತ್ತಿಯ ಅಂಚಿನಲ್ಲಿರುವ ನ್ಯಾಯಾಧೀಶರಿಗೆ ನಿವೃತ್ತಿಯ ನಂತರ ರಾಜ್ಯಪಾಲ, ರಾಜ್ಯಸಭಾ ಸದಸ್ಯತ್ವದಂತಹ ಹುದ್ದೆಗಳ ಆಮಿಷ ತೋರಿಸುವ ಪ್ರಭುತ್ವದಲ್ಲಿ ಆಮಿಷಕ್ಕೊಳಗಾಗದೆ, ನಂಬಿಕೆ ಆಧಾರಿತವಾದ ವಾದಗಳನ್ನು ಬದಿಗೊತ್ತಿ ಭೂ ವಿವಾದ ಪ್ರಕರಣಗಳಲ್ಲಿ ಕಾನೂನಾತ್ಮಕವಾದ ತೀರ್ಪು ಕೊಡುವ ನೈತಿಕ ಸ್ಥೈರ್ಯವನ್ನು ನ್ಯಾಯಾಂಗ ತೋರಿದಾಗ ಮಾತ್ರ ಅಯೋಧ್ಯಾ ವಿವಾದ ಒಂದು ಕೆಟ್ಟ ಪೂರ್ವನಿದರ್ಶನವಾಗದಂತೆ ತಡೆಯಲು ಸಾಧ್ಯವಾಗಬಹುದು. ಜನರ ಭಾವನೆಗಳು ಮತ್ತು ನಂಬಿಕೆಗಳ ವಿಷಯಗಳೂ ಒಳಗೊಂಡಿರುವ ಆಯಕಟ್ಟಿನ ಒಂದು ಭೂ ವಿವಾದ ಪ್ರಕರಣವನ್ನು ನಿಭಾಯಿಸುವುದು ಹಲವು ಭಾವನೆ ಹಾಗೂ ನಂಬಿಕೆಗಳನ್ನು ಹೊತ್ತ ಮನುಷ್ಯರೇ ಆಗಿರುವ ನ್ಯಾಯಾಧೀಶರಿಗೂ ಸುಲಭದ ಕೆಲಸವಲ್ಲ. ಆದರೆ ಈ ಕೆಲಸ ವಿವಾದಿತ ತುಂಡು ಭೂಮಿಯೊಂದು ದೇಶವನ್ನು ಸತತವಾಗಿ, ಆಗಾಗ ಹಿಂಸೆಗೆ ತಳ್ಳುವ ನೆಲಬಾಂಬುಗಳಾಗದಂತೆ ತಡೆಯಬಲ್ಲ ಸೂಪರ್ ಪವರ್ ಸುಪ್ರೀಂ ಕೋರ್ಟ್ ಮಾತ್ರ ಆಗಿರುವುದರಿಂದ ಅಂತಿಮವಾಗಿ ‘‘ಇತ್ತು-ಇಲ್ಲ’’ ಎಂಬುದು ನ್ಯಾಯಾಲಯದ ಅಂಗಳದಲ್ಲೇ ತೀರ್ಮಾನವಾಗಬೇಕಾಗಿದೆ.