ಆ ಅಮೃತ ಘಳಿಗೆಗೆ ಕಾದಿದ್ದರು ಗಾಂಧೀಜಿ
ಭಾಗ-13
ಫೆಬ್ರವರಿ ತಿಂಗಳಲ್ಲಿ ಗಾಂಧೀಜಿ ದಿಲ್ಲಿಯಿಂದ ಪಾಕಿಸ್ತಾನಕ್ಕೆ ಕಾಲ್ನಡಿಗೆಯಿಂದ ಹೋಗಲು ತೀರ್ಮಾನಿಸಿದ್ದರು. ಪಾಕಿಸ್ತಾನದಿಂದ ಓಡಿ ಬಂದಿದ್ದ ಹಿಂದೂ ಸಿಖ್ ನಿರಾಶ್ರಿತರನ್ನು ತಮ್ಮಿಡನೆ ಕರೆದ್ಯೊಯಲು ನಿರ್ಧರಿಸಿದ್ದರು. ತಾವು ಕ್ರಮಿಸಬೇಕೆಂದಿದ್ದ ಐವತ್ತು ಮೈಲಿಗಳ ಉದ್ದಕ್ಕೂ ಇಲ್ಲಿಂದ ಹೋಗುವ ಹಿಂದೂ ಸಿಖ್ ನಿರಾಶ್ರಿತರನ್ನು ಅಲ್ಲಿಯ ಮುಸ್ಲಿಂ ಬಾಂಧವರು ಇವರನ್ನು ಸ್ವಾಗತಿಸಿ ಬಿಗಿದಪ್ಪಿಕೊಳ್ಳುವ ದೇವದುರ್ಲಭ ದೃಶ್ಯವನ್ನು ಕಣ್ಣಾರೆ ಕಾಣುವ ಕೋಮುಸೌಹಾರ್ದ, ಪ್ರೇಮ, ಅಹಿಂಸೆಯ ಪ್ರತ್ಯಕ್ಷ ಪವಾಡವನ್ನು ತಾವು ನೋಡುವ ಜಗತ್ತಿಗೆ ತೋರಿಸುವ ಮಹಾಸುದಿನದ ದಿವ್ಯದರ್ಶನವನ್ನು ಕಂಡರು.
ಮದನ್‌ಲಾಲ್‌ನಿಂದ ದೊರೆತ ಮಾಹಿತಿಯನ್ನು ದಿನಾಂಕ 23-01-48ರಂದು ಮುಂಬೈ ಪೊಲೀಸ್ ಅಧಿಕಾರಿ ನಗರವಾಲಾರಿಗೆ ರವಾನಿಸಲಾಗಿತ್ತು. ಪುಣೆಯ ಪೊಲೀಸ್ ಕಮಿಷನರರಿಗೂ ಆ ಮಾಹಿತಿಯ ಸಂಕ್ಷಿಪ್ತ ವರದಿ ಕಳಿಸಲಾಗಿತ್ತು. ಪುಣೆಯ ಮರಾಠಿ ಪತ್ರಿಕೆಯ ಸಂಪಾದಕ ಮತ್ತು ಪ್ರಕಾಶಕರು ಯಾರೆಂಬುದನ್ನು ಅವರು ನಿರ್ದಿಷ್ಟವಾಗಿ ಪತ್ತೆೆಹಚ್ಚಲಿಲ್ಲ. ಅವರ ಚಹರೆ ಏನು ಎಂಬುದನ್ನು ಕಂಡುಹಿಡಿಯಲಿಲ್ಲ. ಗಾಂಧಿ ಹತ್ಯೆಯ ವಿಚಾರದಲ್ಲಿ ತರುವಾಯ 1964ರಲ್ಲಿ ಕೇಂದ್ರ ಸರಕಾರ ನೇಮಿಸಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕಪೂರ್ ಆಯೋಗ ಮುಂಬೈ ಮತ್ತು ಪುಣೆ ಪೊಲೀಸರ ಈ ಪ್ರಾಥಮಿಕ ಕರ್ತವ್ಯಚ್ಯುತಿಯನ್ನು ಕಟುವಾಗಿ ಖಂಡಿಸಿ ‘‘ಇವರ ಕರ್ತವ್ಯಲೋಪ ಆಶ್ಚರ್ಯಕರವಾಗಿ ಕಾಣುತ್ತದೆ. ಕಾರಣ ಏನೆಂಬುದು ಗೊತ್ತಾಗುವುದಿಲ್ಲ’’ ಎಂದು ಸಖೇದಾಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಮುಂಬೈ ಪೊಲೀಸ್ ಡೆಪ್ಯುಟಿ ಕಮಿಷನರ್‌ಗೆ ತಲೆತಪ್ಪಿಸಿಕೊಂಡಿದ್ದ ಪಾತಕಿಗಳ ಪತ್ತೆ ಸಿಗದಿದ್ದರೂ, ಅವನ ಗೂಢಚಾರರು ಯಾವ ನಿರ್ದಿಷ್ಟ ವರ್ತಮಾನ ಕೊಡಲಾಗಲಿಲ್ಲ. ಆದರೆ ಅವನಿಗೆ ಒಳಗೊಳಗೇ ಈ ಹಂತಕರ ತಂಡ ಮತ್ತೆ ಕ್ಷಿಪ್ರ ಸಮಯದಲ್ಲಿ ಗಾಂಧಿ ಹತ್ಯೆಗೆ ಪ್ರಯತ್ನಿಸುವರೆಂಬ ಒಳದನಿ, ಮುಂಬರುವ ದುರ್ಘಟನೆಯ ಮುನ್ಸೂಚನೆ ಸ್ಪಷ್ಟವಾಗಿ ನುಡಿಯುತ್ತಿತ್ತು. ನಗರವಾಲಾ, ದಿಲ್ಲಿ ಪೊಲೀಸ್ ಕಮಿಷನರ್ ಸಂಜೀವಿಗೆ ತನ್ನ ಬಲವಾದ ಕ್ರಮವಾಗಿ ಬಿರ್ಲಾ ಗೃಹಕ್ಕೆ ಗಾಂಧಿ ಪ್ರಾರ್ಥನಾ ಸಭೆಗೆ ಬರುವವರನ್ನೆಲ್ಲ ಅಂಗಶೋಧ ಮಾಡಲು ನೆಹರೂ ಮತ್ತು ಪಟೇಲರ ಒಪ್ಪಿಗೆ ಪಡೆದ. ಗಾಂಧಿಗೆ ಈ ಸಂಗತಿ ಗೊತ್ತಾಗಿ: ಪ್ರಾರ್ಥನಾ ಸಭೆಗೆ ಬರುವವರನ್ನು ಝಡ್ತಿ ಮಾಡಿದರೆ, ಸಮವಸ್ತ್ರ ಧರಿಸಿದ ಪೊಲೀಸರು ಕಣ್ಣಿಗೆ ಬಿದ್ದರೆ ಆಮರಣಾಂತ ಉಪವಾಸ ಕೈಗೊಳ್ಳುವುದಾಗಿ ಹೇಳಿಬಿಟ್ಟರು! ಈಗ ನೆಹರೂ, ಪಟೇಲ್ ಪೊಲೀಸರ ಮುಂದಿದ್ದ ಉತ್ತರಿಸಲಾಗದ ಹಿಮಾಲಯದೆತ್ತರದ ಸಂದಿಗ್ಧ ಪರಿಸ್ಥಿತಿ, ಸಮಸ್ಯೆ ಪೊಲೀಸರಿಗೆ ಶೋಧ ಕಾರ್ಯಕ್ಕೆ ಅನುಮತಿ ಕೊಟ್ಟು ಗಾಂಧೀಜಿ ಉಪವಾಸ ಮಾಡಿ ಸಾಯಿಸುವುದೇ ಅಥವಾ ಹಂತಕರ ಗುಂಡಿಗೆ ಆಹುತಿಯಾಗಿ ಹುತಾತ್ಮರಾಗಿ ಗಾಂಧೀಜಿ ಸಾಯಲು ಬಿಡುವುದೇ? ಈ ಸಂಕಟದ ಸಮಸ್ಯೆಗೆ ಪರಿಹಾರ ಕಾಣದೆ ಕೇಂದ್ರ ಸರಕಾರ ದಿಲ್ಲಿ ಪೊಲೀಸರು ಗಾಂಧೀಜಿ ಕಣ್ಣಿಗೆ ಕಾಣದಂತೆ ಗೂಢಚಾರ ಪೊಲೀಸರು ಸಭಿಕರೊಡನೆ ಬೆರೆತು ಬಂದು ಹೋಗುವವರ ಮೇಲೆ ನಿಗಾ ಇಟ್ಟು, ಕಾಯಲು ನಿರ್ಧರಿಸಿದರು. ಆದರೆ ಬಂದವರು ಆಯುಧಪಾಣಿಗಳೆಂಬುದನ್ನು ತಿಳಿಯುವುದು ಸಾಧ್ಯವಾಗುತ್ತಿರಲಿಲ್ಲ.
ಉಪವಾಸ ನಿಲ್ಲಿಸಿ ಏಳೆಂಟು ದಿನಗಳಾಗುವುದರಲ್ಲಿ ಗಾಂಧೀಜಿ ಆಶ್ಚರ್ಯಕರವಾಗಿ ಚೇತರಿಸಿಕೊಂಡರು. ದಿನಾಂಕ 27ರಂದು ದಿಲ್ಲಿಗೆ ಐದು ಮೈಲು ದೂರದಲ್ಲಿರುವ ಮೆಹರೌಲಿಯಲ್ಲಿರುವ ಮುಸ್ಲಿಮರ ಅತ್ಯಂತ ಪುರಾತನ, ಬಾಬರಿ ಮಸೀದಿಗಿಂತಲೂ ಪುರಾತನವಾದ, ಸಾವಿರ ವರ್ಷಗಳ ಹಿಂದೆ ಕುತುಬುದ್ದೀನ್ ಖಿಲ್ಜಿ ಎಂಬ ‘ದಾಸದೋರೆ’ 27 ಹಿಂದೂ ಮತ್ತು ಜೈನ ಮಂದಿರಗಳನ್ನು ನೆಲಸಮ ಮಾಡಿ ಆ ಜಾಗದಲ್ಲಿ ಕಟ್ಟಿಸಿದ್ದ ಮಸೀದಿಯಲ್ಲಿ ವರ್ಷಕ್ಕೊಮ್ಮೆ ಉರೂಸು ನೆರವೇರುತ್ತಿತ್ತು. ಆ ಮೇಳಕ್ಕೆ ಹಿಂದೆ ದಿಲ್ಲಿಯಲ್ಲಿ ನೆಲೆಸಿದ್ದ ಶಾಂತಿ, ಕೋಮುಸೌಹಾರ್ದ ಸನ್ನಿವೇಶದಲ್ಲಿ ಆ ಮೇಳಕ್ಕೆ ಹಿಂದೂ ಸಿಖ್ ಜನ ತಂಡೋಪತಂಡವಾಗಿ ಹೋದರು. ಕೇವಲ ಒಂದೆರಡು ವಾರಗಳ ಹಿಂದೆ ಮಸೀದಿಗಳನ್ನು ಹಿಂದೂ ಸಿಖ್ಖರು ದುರಾಕ್ರಮಣ ಮಾಡುವುದನ್ನು ತಡೆಯಲು ಒರೆಗಳಚಿದ ಖಡ್ಗ ಹಿಡಿದು ನಿಂತಿರುತ್ತಿದ್ದ ಮುಸ್ಲಿಮರು ಇಂದು ಚೆಂಡುಹೂವಿನ ಮಾಲೆಗಳನ್ನು ಹಿಡಿದು ಅವುಗಳನ್ನು ಮಸೀದಿಗೆ ಬರುತ್ತಿದ್ದವರಿಗೆ ಹಾಕಿ ಹಿಂದೂ ಸಿಖ್ಖರನ್ನು ಬಿಗಿದಪ್ಪಿಕೊಂಡರು. ಈ ಪವಾಡವನ್ನು ಕಂಡ ಗಾಂಧೀಜಿ ಪುಲಕಿತರಾದರು !! ತಮ್ಮ ಅಹಿಂಸಾ ಸಿದ್ಧಾಂತ, ಸೌಹಾರ್ದ ತತ್ತ್ವ ಯಶಸ್ವಿಯಾದುದನ್ನು ಕಣ್ಣಾರೆ ಕಂಡು ಆನಂದಬಾಷ್ಪ ಸುರಿಸಿರಬಹುದು. ಪ್ರೇಮದಿಂದ ಶತ್ರುವನ್ನು ಜಯಿಸುವುದಲ್ಲದೆ, ವೈರದಿಂದ ವೈರಿಯನ್ನು ಗೆಲ್ಲುವುದು ಸಾಧ್ಯವೇ?
ಹಿಂದೆ 1947ಡಿಸೆಂಬರ್‌ನಲ್ಲಿ ಪಾಕಿಸ್ತಾನದಿಂದ ನಿರಾಶ್ರಿತರಾಗಿ ಆಸ್ತಿಹರಣಕ್ಕೆ ಒಳಗಾಗಿ ಹೆತ್ತವರನ್ನು ಬಂಧು-ಬಳಗವನ್ನು ಕಳೆದುಕೊಂಡು ಬಂದಿದ್ದ ನಿರಾಶ್ರಿತರು ಗಾಂಧೀಜಿ ಕಿವಿಗೆ ಬೀಳುವಂತೆ ‘‘ಇಲ್ಲಿ ನಮಗೆ ಶಾಂತಿ ಸೌಹಾರ್ದ, ಪ್ರೇಮ, ಅಹಿಂಸೆಯ ನೀತಿ ಸಂದೇಶ ಹೇಳುವ ನೀವು ಪಾಕಿಸ್ತಾನಕ್ಕೆ ಹೋಗಿ ಮುಸ್ಲಿಮರಿಗೆ ಯಾಕೆ ಹೇಳಬಾರದು?’’ ಎಂದು ಅಣಕಿಸುವ ದನಿಯಲ್ಲಿ ಕೆಣಕಿದ್ದರು. ಅವರ ಈ ‘ಕೆಣಕು’ ಸರಿಯೆಂದು ತೋರಿತ್ತು. ಆದ್ದರಿಂದ ಉಪವಾಸ ನಿಲ್ಲಿಸಿದ ಮೇಲೆ ಶಾಂತಿ, ಸೌಹಾರ್ದ, ಅಹಿಂಸಾ ಸಂದೇಶ ವಾಹಕವಾಗಿ ಪಾಕಿಸ್ತಾನಕ್ಕೆ ಹೋಗಲು ನಿರ್ಧರಿಸಿದ್ದರು. ಆದರೆ ಪಾಕಿಸ್ತಾನ ಈಗ ನಮಗೆ ವಿದೇಶಿ ರಾಷ್ಟ್ರ. ಅವರ ಅಪ್ಪಣೆಯಿಲ್ಲದೆ ಅಲ್ಲಿಗೆ ಪ್ರವೇಶವಿಲ್ಲ. ಆ ಪ್ರವೇಶಾವಕಾಶವನ್ನು ಭಾರತ ಸರಕಾರದ ರಾಜತಾಂತ್ರಿಕ ಮಾರ್ಗದಿಂದಲ್ಲೇ ಪಡೆಯಬೇಕಾಗಿತ್ತು. ಗಾಂಧೀಜಿಯ ಇಚ್ಛೆಯನ್ನು ಪಾಕಿಸ್ತಾನದ ಗರ್ವನರ್ ಜನರಲ್ ಮುಹಮ್ಮದ್ ಅಲಿ ಜಿನ್ನಾರಿಗೆ ತಿಳಿಸಿದರು. ಜಿನ್ನಾ ಅದಕ್ಕೊಪ್ಪಿ ಗಾಂಧೀಜಿಯನ್ನು ಪಾಕಿಸ್ತಾನಕ್ಕೆ ಬರಮಾಡಿಕೊಳ್ಳಲು ಒಪ್ಪಿಕೊಂಡು ಆಹ್ವಾನ ಕಳಿಸಿದ್ದರು. ಗಾಂಧೀಜಿಗೆ ಇದರಿಂದ ಅಪರಿಮಿತ ಸಂತೋಷವಾಗಿತ್ತು. ಫೆಬ್ರವರಿ ತಿಂಗಳಲ್ಲಿ ಗಾಂಧೀಜಿ ದಿಲ್ಲಿಯಿಂದ ಪಾಕಿಸ್ತಾನಕ್ಕೆ ಕಾಲ್ನಡಿಗೆಯಿಂದ ಹೋಗಲು ತೀರ್ಮಾನಿಸಿದ್ದರು. ಪಾಕಿಸ್ತಾನದಿಂದ ಓಡಿ ಬಂದಿದ್ದ ಹಿಂದೂ ಸಿಖ್ ನಿರಾಶ್ರಿತರನ್ನು ತಮ್ಮಿಡನೆ ಕರೆದ್ಯೊಯಲು ನಿರ್ಧರಿಸಿದ್ದರು. ತಾವು ಕ್ರಮಿಸಬೇಕೆಂದಿದ್ದ ಐವತ್ತು ಮೈಲಿಗಳ ಉದ್ದಕ್ಕೂ ಇಲ್ಲಿಂದ ಹೋಗುವ ಹಿಂದೂ ಸಿಖ್ ನಿರಾಶ್ರಿತರನ್ನು ಅಲ್ಲಿಯ ಮುಸ್ಲಿಂ ಬಾಂಧವರು ಇವರನ್ನು ಸ್ವಾಗತಿಸಿ ಬಿಗಿದಪ್ಪಿಕೊಳ್ಳುವ ದೇವದುರ್ಲಭ ದೃಶ್ಯವನ್ನು ಕಣ್ಣಾರೆ ಕಾಣುವ ಕೋಮುಸೌಹಾರ್ದ, ಪ್ರೇಮ, ಅಹಿಂಸೆಯ ಪ್ರತ್ಯಕ್ಷ ಪವಾಡವನ್ನು ತಾವು ನೋಡುವ ಜಗತ್ತಿಗೆ ತೋರಿಸುವ ಮಹಾಸುದಿನದ ದಿವ್ಯದರ್ಶನವನ್ನು ಕಂಡರು. ತನ್ನಾಪ್ತ, ಆರೋಗ್ಯರಕ್ಷಕರಾದ ಸುಶೀಲಾ ನಯ್ಯರ್ ಅವರನ್ನು ಕರೆದು ‘‘ನೀನು ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಜನರ, ನಾಯಕರ ನಾಡಿ ಮಿಡಿತವನ್ನು ಕಂಡುಕೊಂಡುಬರಬೇಕೆಂದು’’ ಸೂಚಿಸಿದರು. ಅದನ್ನು ಶಿರಸಾವಹಿಸಿ ನಿರ್ವಹಿಸುವುದಾಗಿ ಒಪ್ಪಿದರು. ಮತ್ತೆ ಪಾಕಿಸ್ತಾನದಿಂದ ಹಿಂದಿರುಗುವಾಗ ಅಲ್ಲಿಂದ ಭಾರತದಿಂದ ಓಡಿ ಹೋಗಿದ್ದ ಮುಸ್ಲಿಮರನ್ನು ತಮ್ಮಿಡನೆ ಹಿಂದಕ್ಕೆ ಕರೆತರುವ, ಅವರನ್ನು ಇಲ್ಲಿಯ ಹಿಂದೂ ಸಿಖ್ ಜನರು ಸ್ವಾಗತಿಸಿ ಬಿಗಿದಪ್ಪಿಕೊಳ್ಳುವ ಕೋಮು ಸೌಹಾರ್ದ, ಶಾಂತಿ, ಪ್ರೇಮದ ಸಾಕ್ಷಾತ್ ದೃಶ್ಯವನ್ನು ಸ್ಥಾಪಿಸುವ ಕನಸು ಗಾಂಧೀಜಿಗೆ. ಬಹುಶಃ ಇಂತಹ ಅಮೃತಘಳಿಗೆ ತಮ್ಮ ಜೀವನದಲ್ಲಿ ಹಿಂದೆ ಎಂದೂ ಬಂದಿರಲಿಕ್ಕಿಲ್ಲ!
ಇಂತಹ ಸುಂದರ, ಸವಿಯಾದ ಕನಸು ಕಾಣುತ್ತ ಗಾಂಧೀಜಿ ಅಂದು ಸಂಜೆ ಪ್ರಾರ್ಥನಾ ಸಭೆಗೆ ಹೋದರು. ಸಭೆ ಪ್ರಾರಂಭವಾಗುತ್ತಿದ್ದಂತೆ ಪಾಕಿಸ್ತಾನದ ಈಶಾನ್ಯ ಸರಹದ್ದು ಪ್ರಾಂತದಿಂದ ಓಡಿಬಂದಿದ್ದ ಹಿಂದೂ ಮತ್ತು ಶಿಖ್ ನಿರಾಶ್ರಿತರ ಗುಂಪೊಂದು ನುಗ್ಗಿ ಬಂತು. ‘‘ಇನ್ನು ಸಾಕು ನಿಮ್ಮ ಸಹವಾಸ. ದಯೆಯಿಟ್ಟು ನಮ್ಮಷ್ಟಕ್ಕೆ ನಮ್ಮನ್ನು ಬಿಡಿ! ನೀವು ಹಿಮಾಲಯಕ್ಕೆ ಹೋಗಿಬಿಡಿ!’’ ಎಂದು ಬೊಬ್ಬೆ ಹಾಕಿದರು.
(ಬುಧವಾರದ ಸಂಚಿಕೆಗೆ ಮುಂದುವರಿಯುವುದು)