ಪಿಡುಗು
ಹನುಮಂತ ಹಾಲಿಗೇರಿ
ಮುಖದ ಮ್ಯಾಲಿನ ಬೆವ್ರ ಒರ್ಸಕೋತ ಒಳಬಂದ ಆ ಹೆಂಗ್ಸು ತನ್ನ ಸ್ಥೂಲದೇಹವನ್ನು ನನ್ನ ಮುಂದಿನ ಚೇರಿನಲ್ಲಿಳಿಸಿ ಕೇಳಲೋ ಬೇಡ್ವೋ ಎಂಬಂತೆ ‘ಸಾಹೇಬ್ರ ನಂದೋಟು ರಕ್ತಾ ಚೆಕ್ ಮಾಡಬೇಕಿತ್ರಿ’ ಅಂದ್ಲು. ತಾಲೂಕು ಆಸ್ಪತ್ರೆಯೊಂದರ ವಿಸಿಟಿಸಿ ಕೇಂದ್ರದಲ್ಲಿ ಆಪ್ತ ಸಮಾಲೋಚಕನಾಗಿದ್ದ ನನಗೆ ಆ ಹೆಂಗ್ಸನ್ನು ನೋಡಿದೊಡನೆಯೇ ಇದು ಅದೆ ಕೇಸು ಎಂಬುದು ಮನದಟ್ಟಾಗಿ ಹೋಗಿತ್ತು.
ಗುಂಡ್ಗುಂಡಕ ಪಸಂದಾಗೆ ಇದ್ದ ಆಕಿ ಮಾರಿ ಮ್ಯಾಲಿನ ಸ್ನೋ ಪೌಡರ್ ಒತ್ತಿಕೊಂಡು ಬೆವ್ರ ಒಸರತೊಡಗಿದ್ದರಿಂದಾಗಿ ವಾರ್ಡೊಳಗೆ ವಿಚಿತ್ರ ಘಮಲು ಆವರಿಸತೊಡಗಿತ್ತು.
ಸ್ಥೂಲದೇಹಕ್ಕೆ ತಕ್ಕಂತೆ ದೊಡ್ಡ ಎದೆ, ಡೊಳ್ಳು ಹೊಟ್ಟೆಯ ಹೊಕ್ಕಳಿನ ಆಳ, ಸೊಂಟದಲ್ಲಿನ ಮಡಿಕೆಗಳು, ಬೆನ್ನ ಮೇಲಿನ ತಗ್ಗು, ಅಲ್ಲಿಳಿದಿದ್ದ ಮೋಟು ಜಡೆ, ಒಟ್ಟಾರೆ ಈ ಕಾಲದ ಮಧ್ಯಮ ವರ್ಗದ ಮಧ್ಯವಯಸ್ಕ ಗೃಹಿಣಿಯಂತಿದ್ದ ಆಕೆಯ ಮೆದುಳನ್ನು ನನ್ನ ಆಪ್ತ ಸಮಾಲೋಚನಾ ಸಲಕರಣೆಗಳಿಂದ ಕೆದಕತೊಡಗಿದಾಗ ದಕ್ಕಿದ್ದಿಷ್ಟು.
ಹೆಸರು ಲತಾ. ಕುಡುಕನೂ, ಹೆಣ್ಣುಬಾಕನೂ ಆಗಿದ್ದ ಆಕಿ ಗಂಡ ಇವುಗಳ ವಿಪರೀತದಿಂದಾಗಿ ನೌಕರಿ ಕಳೆದುಕೊಂಡು ಮನೆಗೆ ಮೂಲವಾಗಿದ್ದಾನಂತೆ. ಇದ್ದೊಬ್ಬ ಮಗಳು ಪಿಯುಸಿ ಸೈನ್ಸ್ ಓದುತ್ತಿದ್ದು, ಅವಳನ್ನು ದೊಡ್ಡ ನೌಕರಿಯೊಂದಕ್ಕೆ ಸೇರಿಸುವ ಆಸೆ ಅಂತೆ. ಮಗಳಿಗಾಗಿ ಈ ಮೈ ಮಾರುವ ದಂಧೆಗೆ ಇಳಿಯಬೇಕಾಯಿತಂತೆ. ನೋಡಲು ಸುಸಂಸ್ಕೃತ ಗೃಹಿಣಿಯಂತಿದ್ದ ಆಕೆ ಕೊಟ್ಟ ಕಾರಣ ಕೇಳಿ ನನಗೆ ಅಸಹ್ಯ ಅನಿಸ್ತು. ಹೆಂಗೋ ಸಹಿಸಿಕೊಂಡು ಕೆಲ ಆಪ್ತ(?) ಸಲಹೆಗಳನ್ನು ನೀಡಿ ಸಾಗಹಾಕಿ ನಿರುಮ್ಮಳಗೊಂಡೆ.
***
ಕೇವಲ ಎರಡ್ಮೂರು ತಿಂಗಳುಗಳ ಅಲ್ಲಿನ ಆಪ್ತಸಮಾಲೋಚನೆಯ ಸರ್ವಿಸ್‌ನಿಂದಾಗಿ ಆ ಪುಟ್ಟ ಪಟ್ಟಣದ ನೂರಾರು ಮಧ್ಯವಯಸ್ಕ ಹೆಂಗಸರ ಹಾದರತನ ಕೇಳಿ.. ಕೇಳಿ.. ತಲೆಚಿಟ್ಟು ಹಿಡಿತಿತ್ತು. ನೋಡಲು ಎಲ್ಲರೂ ಸದ್ಗಹಸ್ಥ ಗೃಹಿಣಿಯರೇ, ಮಾಡೋದು ಮಾತ್ರ ಹಲ್ಕಾ... ಥೂ.., ಈಗೀಗ ನನಗೆ ಹೆಣ್ಕುಲದ ಬಗ್ಗೆನೆ ಹೇಸಿಗೆ ಅನಿಸತೊಡಗಿತು. ತಮ್ಮೆಳಗಿನ ಹೇಸಿಗೆಗೆ, ಮೈಮನದ ಹಸಿವಿಗೆ ಮಕ್ಕಳ ಓದು, ಗಂಡನ ಕುಡಿತ, ಅತ್ತೆಮಾವಂದಿರಿಗೆ ಔಷ್ದಿ... ಎಂಥೆಂಥ ಸಬೂಬುಗಳು. ಇಂಥ ದರಿದ್ರ ಹೆಂಗಸರನ್ನು ನೋಡಿದ್ರೆ ಮೈ ಉರಿತಿತ್ತು. ಕೆಲವೊಮ್ಮೆ ಇಂಥ ದರಿದ್ರದವರ ನಿರ್ಮೂಲನಗಾಗಿಯೇ ದೇವರು ಏಡ್ಸ್ ರೋಗ ಎಂಬ ಮರಣಜಾಲ ಹೆಣೆದಿರಬಹುದು ಅಂತ ಮನಸ್ಸು ವಿಕ್ಷಿಪ್ತಗೊಳ್ಳುತ್ತಿತ್ತು.
ಮಾಡೋರ ಪಾಪ ಆಡೋರ ಬಾಯಾಗ ಅನ್ನುವ ಮಾತಿನಂತೆ ಈ ಹೆಂಗಸರ ಪಾಪದ ಕಾಯಕದ ಬಗ್ಗೆ ಕೇಳಿಕೇಳಿ ನನಗೂ ಪಾಪ ಹತ್ತದೋ ಅನ್ನೋ ಡೌಟು ಶುರುವಾಗಿತ್ತು. ಇಡಿ ಜಗತ್ತು ಭೋಗದೊಳಗ ಮುಳಗ್ಯಾದ. ಜಗತ್ ಪ್ರಳಯ ಆಗೋ ವ್ಯಾಳೆ ಹತ್ರ ಬಂದದ ಅಂತ ಈಗೀಗ ಬಾಳ ಅನ್ಸಾಕ ಹತ್ತಿತ್ತು.
***
ಅವತ್ತೊಂದಿನ ಕೃಶ ಶರೀರದ ಆಸಾಮಿಯೊಂದರ ಬಗಲಿಗೆ ಹೆಗಲಗೊಟ್ಟು ಆ ಲತಾ ಎನ್ನುವ ಹೆಂಗಸು ಆಸ್ಪತ್ರೆಯೊಳಕ್ಕೆ ಕರ್ಕಂಬರೋದು ವಾರ್ಡ್ ಕಿಡಕಿಯಿಂದ ಕಾಣಿಸ್ತು. ಯಾವನೋ ಮಿಂಡ ಇರಬೌದು ಅನ್ಕೊಂಡು ನಾನು ನನ್ನ ಕೆಲಸದೊಳಗೆ ತಲ್ಲೀನನಾದೆ.
ಸ್ವಲ್ಪೊತ್ತು ಬಿಟ್ಟು ತಲೆ ಎತ್ತಿದಾಗ ಆ ಹೆಂಗಸು ಕ್ಯಾಂಟಿನೊಂದರಲ್ಲಿ ತನ್ನ ಮಿಂಡನಿಗೆ ತುತ್ತು ಮಾಡಿ ಏನನ್ನೋ ತಿನಿಸುತ್ತಿದ್ದುದು ಕಾಣಿಸ್ತು. ಆತನ ಕುಂಡೆಗೆ ಇಳಿಸಿದ್ದ ಇಂಜಕ್ಷನ್ನು ಕೆಲಸ ಪ್ರಾರಂಭಿ ಸಿದ್ದರಿಂದ ಆತಮೊದಲಿಗಿಂತ ಚೇತರಿಸಿಕೊಂಡಿದ್ದ. ಥೂ ಅಸಹ್ಯ, ಆ ಕಡೆ ನೋಡಲೇಬಾರದು ಅನ್ಕೊಂಡು ಫೈಲ್‌ನೊಳಗೆ ಮತ್ತೆ ಮುಖ ಹುದುಗಿಸಿದೆ. ಸ್ವಲ್ಪ ಹೊತ್ತಿಗೆ ಆಸ್ಪತ್ರೆಯ ಗೇಟ್‌ನೊಳಕ್ಕೆ ಲಬೋ ಲಬೋ ಹೊಯ್ಕೋಳ್ಳೋದು ಶುರುವಾತು. ಓಡ್ಹೋಗಿ ನೋಡಿದರೆ ಆತ ಆಕೆಯ ಮೋಟ್ಜಡೆ ಹಿಡ್ಕೊಂಡು ಎಳೆದಾಡಾತಿದ್ದ. ಬಲೆ ಮೋಜು ಅನಿಸಿದ್ದರಿಂದ ಅಲ್ಲೆ ನಿಂತುಕೊಂಡೆ. ಆತ ಆಕೆಯ ಎದೆಗೆ ಕೈ ಹಾಕುತ್ತಿದ್ದುದು, ಆಕೆ ಎದೆಗೆ ಎರಡು ಕೈ ಕ್ರಾಸಾಗಿ ಹಿಡ್ಕೊಂಡು ತಪ್ಪಿಸಿಕೊಳ್ಳಲು ಹೆಣಗುತ್ತಿದ್ದು ಒಂಥರಾ ಬಾಳ ಚಂದ ಇತ್ತು. ನಿಮ್ಮೌನ, ಮಿಂಡ್ರು ಕೊಡೋ ರೊಕ್ಕದಾಗ ನಿ ಒಬ್ಬಾಕೆ ಚೈನಿ ಮಾಡಬೇಕಂತಿ?, ತೆಗಿ ರೊಕ್ಕಾ ಅಂತ ಆತ ಅದೊಮ್ಮೆ ಆಕೆಯ ಎದೆಗೆ ಕೈ ಹಾಕುವಲ್ಲಿ ಯಶಸ್ವಿಯಾಗಿಬಿಟ್ಟ. ಮರುಕ್ಷಣ ಅವನ ಕೈಯಲ್ಲಿ ಒಂದೆರಡು ನೋಟುಗಳ ಜೊತೆಗೆ ಆಕೆ ತನ್ನ ಬತ್ತಿದಮೊಲೆಗಳು ದುಂಡ್ದುಂಗೆ ಕಾಣಲೆಂತ ತುರುಕಿ ಕೊಂಡಿದ್ದ ಹತ್ತಿ ಉಂಡೆಯೂ ಹೊರಬಂತು!
ಅವಮಾನ ತಾಳಲಾರದೆ ಲತಾ ಅವನನ್ನು ತದುಕಲು ಹೋಗಿ ಅವಳೆ ತದುಕಿಸಿಕೊಂಡ ದೃಶ್ಯ ಸುತ್ತಲಿನ ಪ್ರೇಕ್ಷಕರಿಗೆ ತಮಾಷೆಯ ಉತ್ತುಂಗಕ್ಕೇರಿಸಿತ್ತು.
ಈ ಘಟನೆಯಿಂದ ನಾನು ವಾರಗಟ್ಟಲೆ ತಳಮಳಗೊಂಡಿದ್ದೆ. ಕೆಳವರ್ಗದಿಂದ ಮಧ್ಯಮ ವರ್ಗಕ್ಕೇರುವ ಸ್ಪರ್ಧೆಯಲ್ಲಿರುವ ಈ ಮಧ್ಯವಯಸ್ಕ ಹೆಂಗಸರು ಮೈ ಮಾರುವ, ಅದಕ್ಕೆ ಪ್ರತಿಫಲ ವಾಗಿ ಬದುಕುಕೊಳ್ಳುವ ಈ ವ್ಯವಹಾರ ಬರೊಬ್ಬರಿ ಐತಿ ಅಂತ ಈಗೀಗ ಅನಿಸತೊಡಗಿತ್ತು.
***
ಮತ್ತೊಂದಿನ ಮುದ್ದುಮುಖದ ಮಗಳೊಂದಿಗೆ ಬಂದಿದ್ದ ಈ ಲತಕ್ಕ ಈ ಸಲ ನಿಜವಾಗಲೂ ಲತೆಯಂತೆ ಕೃಶವಾಗಿದ್ದಳು. ತಪಾಸನೆಗಳೆಲ್ಲವೂ ಮುಗಿದು ಕೈಯೊಳಗಿನ ಕವರ್‌ದೊಳಕ್ಕೆ ಉಚಿತ ಮಾತ್ರೆಗಳ ಕಟ್ಟು ಇಳಿಸಿಕೊಂಡಿದ್ದ ಅವಳು ಬೆಂಚೊಂದರಲ್ಲಿ ತನ್ನ ಮಗಳನ್ನು ಕೂಡ್ರಿಸಿ ನನ್ನ ವಾರ್ಡ್‌ಗೆ ಬಂದಳು.
ಅಂವ ನಡುನೀರಾಗ ಬಿಟ್ಟು ಹೋಗಿ ಬಿಟ್ಟ ಸಾಹೇಬ್ರ, ನಿನ್ನೂ.. ಬಿಡೂದಿಲ್ಲಂತ ಈ ಏಡ್ಸು ನನ್ನ ಸರೀರದಾಗ ಹೊಕ್ಕೊಂಡೈತಿ. ಅಲ್ಲಿ ಕುಂತಾಳಲ್ಲ, ಅಕಿ ನನ್ನ ಮಗಳ ಭಾರತವ್ವ ಅಂತ್ರಿ. ಆಕಿನ ಓದು ಮುಗಿಸಿ ಲಗ್ನ ಮಾಡಿನ ಶಿವನಪಾದ ಸೇರಬೇಕಂತ ಬಾಳ ಆಸೆ ಏನೋ ಐತ್ರಿ. ಆದ್ರ, ಅದು ಆಗುವಂಗ ಕಾಣುದಿಲ್ಲ. ನಿಮ್ಮಂಥ ಪುಣ್ಯಾತ್ಮರು ಯಾರಾದ್ರೂ ವರ ಇದ್ರಿ ಹೇಳಿ ಪುಣ್ಯ ಕಟ್ಕೊಳ್ರಿ ಸಾಹೇಬ್ರ ಅಂತ ಕಣ್ಣೀರು ಹಾಕೋತ ಮ್ಯಾಲಕ್ಕ ನೋಡಿದ್ಲು. ನಾನು ಆ ಬೆಂಚ್ ಮೇಲೆ ಕುಳಿತಿದ್ದವಳ ಕಡೆ ನೋಡಿದೆ. ಮುದ್ದುಮುದ್ದಾಗಿ ಕಾಣುತ್ತಿದ್ದ ಅವಳು ನೋಡುನೋಡುತ್ತಿದ್ದಂತೆ ನನ್ನೊಳಗೆ ಬೃಹದಾಕಾರದ ಪ್ರಶ್ನೆಯಾಗಿ ಬೆಳೆಯತೊಡಗಿದ್ದಳು.
***
ಈಗೀಗ ಅವರಿಬ್ಬರು ದವಾಖಾನಿ ಕಡೆ ಬಂದೇ ಇಲ್ಲ. ಏನಾತೋ.. ಏನ್ಕತೆಯೋ..? ಯಾಕೋ ಅವತ್ತಿನ ಭಾರತಿಯ ಮುದ್ದು ಮುಖ ಮನಸ್ಸೊಳಗೆ ಅಚ್ಚೊತ್ತಿಬಿಟ್ಟಿದೆ. ಆ ತಾಯಿ ಹೃದಯ ನಿಮ್ಮಂಥ ಪುಣ್ಯಾತ್ಮರು ಅನ್ನೋ ಮಾತು ನನಗ ಒತ್ತಿ ಹೇಳಿದಂತಿತ್ತು ಎನಿಸತೊಡಗಿದ್ದರಿಂದಲೋ ಅಥವಾ ಆ ಮುದ್ದು ಮುಖದ ಮೇಲೆ ನನಗೆ ಅರಿವಿಲ್ಲದೆ ಪ್ರೀತಿ ಹುಟ್ಟಿತ್ತೋ? ಗೊತ್ತಿಲ್ಲ, ಒಟ್ಟಿನಲ್ಲಿ ಒಂದೆರಡು ಸಲ ಹುಡುಗಿ ಓದುತ್ತಿರುವ ಕಾಲೇಜು ಮುಂದೆ ಅಡ್ಡಾಡಿ ಆಕೆಗಾಗಿ ಆಸೆಯಿಂದ ಕಾಯ್ದು ಬಂದದ್ದೂ ಆಗಿದೆ.
ಲತಕ್ಕ ಇಷ್ಟೊತ್ತಿಗಾಗಲೇ ಶಿವನಪಾದ ಸೇರಿರಬೌದು, ಆ ಹುಡುಗಿ ಏನಾತೋ ಏನೋ ಅಂತ ತಳಮಳಿಸುತ್ತಿರುವ ಒಂದು ಸುಡು ಮಧ್ಯಾಹ್ನ ನನ್ನ ವಿಸಿಟಿಸಿಯೊಳಗ ಬೆವರೊರಿಸಿಕೊಳ್ಳುತ್ತಾ ಬಂದ ಭಾರತಿ ನಂದೊಟು, ರಕ್ತ ತಪಾಸಣಾ ಮಾಡಬೇಕಿತ್ರಿ ಸಾಹೇಬ್ರ.. ಬಿಟ್ಟಿದ್ಲು. ಪಾಪ ಆರಾಮ ಇರಲಿಲ್ಲಂಥ ಕಾಣ್ತದ. ಮುಖದ ಮ್ಯಾಲ ಕಳಾ ಅನ್ನೂದ ಇರಲಿಲ್ಲ. ಸುಸ್ತಾದವಳಂತೆ ಬಂದು ನನ್ನ ಮುಂದಿನ ಬಾಕ್ಸ್ ಮೇಲೆ ಕುಳಿತ ಅವಳು, ಯಾಕೋ, ಆರಿಬಿಟ್ಟ ಉರಿ ಬರಾಕ ಹತ್ಯಾವರಿ ಸಾಹೇಬ್ರ. ನಂದೋಟು ರಕ್ತ ಚೆಕ್ ಮಾಡ್ರಿ ಅಂತಂದ್ಲು.