ಪರೀಕ್ಷೆ ಎಂಬ ಸವಾಲು
ಯೋಗೇಶ್ ಮಾಸ್ಟರ್
►ಅಧ್ಯಯನ ಮತ್ತು ಅರಿವು
►ಕಲಿಕೆಯೆಂಬ ಪ್ರಕ್ರಿಯೆ
ಪರೀಕ್ಷೆ ಎಂಬುದು ಯುದ್ಧವಲ್ಲ
ಶಿಕ್ಷಣದಲ್ಲಿ ಪರೀಕ್ಷೆ ಎಂಬ ವ್ಯವಸ್ಥೆಯನ್ನು ಇಷ್ಟಪಡಲಿ, ಇಷ್ಟ ಪಡದಿರಲಿ, ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಅದನ್ನು ಹಾದು ಹೋಗಲೇ ಬೇಕು. ಕಲಿಕೆಯಲ್ಲಿ ಬೇಕಾದ ಮಾರ್ಪಾಡುಗಳನ್ನು ಮಾಡಿಕೊಳ್ಳಬಹುದು. ಆದರೆ ಪರೀಕ್ಷೆ ಎಂಬುದು ಅನಿವಾರ್ಯ.ಅದನ್ನು ಒಪ್ಪಿಕೊಂಡು ಪರೀಕ್ಷೆಯನ್ನು ಎದುರಿಸುವ ತಂತ್ರ ಮತ್ತು ಕೌಶಲ್ಯಗಳನ್ನು ಕಲಿತರೆ, ಅದೂ ಒಂದು ಕಲಿಕೆಯ ಭಾಗವೊಂದನ್ನು ಕರಗತ ಮಾಡಿ ಕೊಂಡಂತೆ. ಯಾವಾಗಲೂ ಮುಂಬರುವ ಪರೀಕ್ಷೆಗಳ ಕುರಿತಾಗಿ ಮಕ್ಕಳಿಗೆ ಮುಂಚಿತವಾಗಿಯೇ ವಿಶೇಷ ಶಿಬಿರಗಳು ನಡೆಯಬೇಕು. ಪರೀಕ್ಷೆ ಗಳ ಕುರಿತಾಗಿ ನಡೆಯುವ ಶಿಬಿರಗಳಲ್ಲಿ ಗಮನಕ್ಕೆ ತಂದುಕೊಳ್ಳಬೇಕಾದ ಹಲವಾರು ವಿಷಯಗಳಿರುತ್ತವೆ. ಮೊದಲನೆಯದಾಗಿ ಪರೀಕ್ಷೆಗೆಂದು ಕೆಲವು ಕಾಲದ ಹಿಂದೆ ಸಿದ್ಧವಾಗುವುದು ಒಂದಾದರೆ, ಪರೀಕ್ಷೆಯ ದಿನ ಅಥವಾಪರೀಕ್ಷೆಗಳು ನಡೆಯುವ ಸಮಯದಲ್ಲಿ ಸಿದ್ಧವಾಗುವುದು. ಈ ಸಿದ್ಧತೆಯಲ್ಲಿ ಮಕ್ಕಳಿಗೆ ಮಾನಸಿಕ, ಭಾವನಾತ್ಮಕ ಮತ್ತು ಬೌದ್ಧಿಕವಾಗಿ ತಯಾರಾಗುವುದರ ತಿಳುವಳಿಕೆಯನ್ನು ಮತ್ತು ತರಬೇತಿ ಯನ್ನು ನೀಡಬೇಕಾಗುತ್ತದೆ.
ಪರೀಕ್ಷೆ ಎಂಬುದು ಗುಮ್ಮವಲ್ಲ:
ಪರೀಕ್ಷೆ ಎಂಬುದನ್ನು ಕಲಿಕೆಯ ಪ್ರಕ್ರಿಯೆಯಲ್ಲಿ ಆ ವರ್ಷದ ಅಂತಿಮ ಸವಾಲು ಎಂಬುದರ ಬದಲು ಅದೇ ಬದುಕಿನ ಅಂತಿಮವೇನೋ ಎಂಬಂತೆ ಆಡುವ ಪೋಷಕರ ಮತ್ತು ಶಿಕ್ಷಕರ ಧೋರಣೆಯಿಂದಾಗಿ ಮಕ್ಕಳು ಒತ್ತಡಕ್ಕೆ ಸಿಕ್ಕಿಬೀಳುತ್ತಾರೆ. ಇದರಿಂದಾಗಿ ಪರೀಕ್ಷೆ ಎಂಬುದನ್ನು ಕ್ರೀಡಾ ಮನೋಭಾವದಿಂದ ಮತ್ತು ಪ್ರೀತಿಯಿಂದ ಸ್ವೀಕರಿಸುವ ಬದಲು ಒಲ್ಲದ ಮದುವೆ ಮಾಡಿಕೊಳ್ಳುವವರಂತೆ ಮಕ್ಕಳು ಬಳಲುತ್ತಾರೆ.
ಸಮಯದ ಒತ್ತಡ:
ಪರೀಕ್ಷೆ ಎಂಬುದು ಹತ್ತಿರ ಹತ್ತಿರ ಬರುತ್ತಿದ್ದಂತೆ, ಸಮಯ ಸಾಲುವುದಿಲ್ಲ, ಸಾಲುತ್ತಿಲ್ಲ, ಪರೀಕ್ಷೆ ಬಂದೇಬಿಟ್ಟಿತು ಇನ್ನೇನು ಎಂಬಂತೆ ಮಕ್ಕಳನ್ನು ಪೋಷಕರು ಮತ್ತು ಶಿಕ್ಷಕರು ಒತ್ತರಿಸುತ್ತಿರುತ್ತಾರೆ. ಇಲ್ಲಾಂದ್ರೆ ಒಂದು ವರ್ಷ ವ್ಯರ್ಥವಾಗಿಬಿಡುತ್ತದೆ ಎಂಬ ಹೆದರಿಕೆಯನ್ನು ಒಡ್ಡುತ್ತಿರುತ್ತಾರೆ.
ಕಷ್ಟಪಟ್ಟರೆ ಫಲವುಂಟು:
ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆ ಮಾತಿನ ಸೂತ್ರದಡಿ ಯಲ್ಲಿ ಮಕ್ಕಳಿಗೆ ಕಷ್ಟಪಡಿಸಿ ಫಲವನ್ನು ಉಣ್ಣಿಸುವ ಸಾಹಸ ಪೋಷಕರು ಮತ್ತು ಶಿಕ್ಷಕರು ಮಾಡುತ್ತಿರುತ್ತಾರೆ. ನಿಜ ಹೇಳಬೇಕೆಂದರೆ, ಮಕ್ಕಳಾಗಲಿ, ಕಲಿಸುವ ಶಿಕ್ಷಕರಾಗಲಿ, ಕಷ್ಟಪಟ್ಟು ಕೆಲಸ ಮಾಡುವ ಅಗತ್ಯವಿಲ್ಲ. ಬದಲಿಗೆ ಸ್ಮಾರ್ಟ್ ಆಗಿ, ಕೌಶಲ್ಯದಿಂದ ಕೆಲಸ ಮಾಡುವುದನ್ನು ಕಲಿಸುವ ಅಗತ್ಯವಿದೆ. ಶಿಕ್ಷಕರು ಮತ್ತು ಪೋಷಕರು ಸ್ಮಾರ್ಟ್ ಆದರೆ, ಮಕ್ಕಳೂ ಸ್ಮಾರ್ಟ್ ಆಗುತ್ತಾರೆ. ಸರಾಗವಾಗಿ ಇರುವ ಸಮಯವನ್ನು ಮತ್ತು ಕಡಿಮೆ ಶ್ರಮದಿಂದ (ಕಡಿಮೆ ಎನ್ನುವುದಕ್ಕಿಂತಲೂ ಒತ್ತಡರಹಿತ ಶ್ರಮ ಎನ್ನುವುದು ಹೆಚ್ಚು ಸೂಕ್ತ) ಆಟವಾಡಿದಷ್ಟೇ ಖುಷಿ ಮತ್ತು ತಾನಾಗಿ ಭಾಗವಹಿಸುವ ಮನಸ್ಥಿತಿಯಿಂದ ಪರೀಕ್ಷೆಯನ್ನು ಬರಮಾಡಿಕೊಳ್ಳಬೇಕು. ಕೌಶಲ್ಯ ಮತ್ತು ಕ್ರಮ; ಈ ಎರಡರಿಂದ ಪರೀಕ್ಷೆ ಎಂಬುದನ್ನು ಎದುರಿಸುವುದು ಬಹಳ ಮುಖ್ಯ. ಪರೀಕ್ಷೆ ಎಂಬುದು ಯುದ್ಧವಲ್ಲ.
ಪರೀಕ್ಷೆಯಲ್ಲಿ ಸೋಲು ಮತ್ತು ಗೆಲುವುಗಳಿಲ್ಲ:
ಪರೀಕ್ಷೆಯನ್ನು ದೊಡ್ಡ ಯುದ್ಧದಂತೆ ಬಿಂಬಿಸುವವರ ಬಗ್ಗೆ ನನಗೆ ಭಾರೀ ಕೋಪವಿದೆ. ಪರೀಕ್ಷೆಯನ್ನು ಪ್ರದರ್ಶಕ ಕಲೆಯಂತೆ ನೋಡಬೇಕು. ನಾವು ಏನನ್ನೋ ಕಲಿತಿರುವುದನ್ನು ಪ್ರೀತಿಯಿಂದ ಮತ್ತು ಹೆಮ್ಮೆಯಿಂದ ಪ್ರದರ್ಶಿಸುವ ಹುಮ್ಮಸ್ಸು ಮತ್ತು ಸಂತೋಷ ನಮ್ಮಲ್ಲಿರಬೇಕು. ಪರೀಕ್ಷೆ ನಮ್ಮ ಜ್ಞಾನ, ಕೌಶಲ್ಯ ಮತ್ತು ಪ್ರತಿಭಾ ಪ್ರದರ್ಶನದ ವೇದಿಕೆ. ಅದು ನಮ್ಮ ಆನಂದಕ್ಕೆ ಮತ್ತು ನಮ್ಮದೇ ಕುತೂಹಲಕ್ಕೆ. ಇಷ್ಟರಮಟ್ಟಿಗೆ ಮನೋಭೂಮಿಕೆ ಸಿದ್ಧವಾದ ಮೇಲೆ ಮುಂದಿನ ತಾಂತ್ರಿಕ ವಿಷಯಗಳೆಲ್ಲವೂ ಸುಲಭ. ಪರೀಕ್ಷೆಯ ಮೂಲವೆಲ್ಲಿದೆಯೆಂದರೆ:
ವಿಷಯದ ಮೇಲಿನ ಆಸಕ್ತಿ ಮತ್ತು ಕುತೂಹಲವೇ ಆಯಾ ವಿಷಯದ ಪರೀಕ್ಷೆಯನ್ನು ಎದುರಿಸುವ ಮೊದಲ ಆಯಾಮ. ಆ ವಿಷಯವನ್ನು ಕಲಿಯುವ ಕಾರಣವೇ ಮಕ್ಕಳಿಗೆ ತಿಳಿದಿಲ್ಲವಾದರೆ, ಪರೀಕ್ಷೆ ಇರಲಿ, ವಿಷಯವೇ ಅಪಥ್ಯ ವಾಗಿರುವುದು. ಒಂದು ವಿಷಯವನ್ನು ಕಲಿಯಲು, ಹಾಗೆಯೇ ಒಂದು ಪರೀಕ್ಷೆಯನ್ನು ಎದುರಿಸಲು ಹಲವಾರು ಒಳ್ಳೆಯ ಮತ್ತು ಮೆಚ್ಚುವಂತಹ ಕಾರಣಗಳಿರಬೇಕು. ಪಾಸು, ಫೇಲುಗಳನ್ನು ಮಾತ್ರವೇ ಕಾರಣವನ್ನಾಗಿ ಒಡ್ಡುವ ಯಾವುದೇ ಪೋಷಕರಾಗಲಿ, ಶಿಕ್ಷಕರಾಗಲಿ; ಅವರು ಶಿಕ್ಷಣದ ತಾತ್ವಿಕ ಬುನಾದಿಯನ್ನೇ ಹೊಂದಿಲ್ಲವೆಂದೇ ಅರ್ಥ. ಮಕ್ಕಳಾಗಲಿ, ದೊಡ್ಡವರಾಗಲಿ; ಅವರ ಕಲಿಕೆಯ ಮತ್ತು ಎದುರಿಸುವ ಪರೀಕ್ಷೆಯ ಕಾರಣಗಳು ಅವರದೇ ಜೀವನಕ್ಕೆ ಅಗತ್ಯವೆಂಬ ಭಾವನೆಗಳು ಇದ್ದರೆ ಮಾತ್ರವೇ ಮನಸ್ಸು ಸಿದ್ಧವಾಗುತ್ತದೆ. ಇಂತಹ ಸ್ಪಷ್ಟತೆ ಇಲ್ಲದಿರುವ ಕಾರಣದಿಂದಲೇ ಕಲಿಕೆ ಮತ್ತು ಪರೀಕ್ಷೆಗಳೆರಡೂ ವಿಫಲವಾಗುತ್ತಿರುವುದು. ಅಂಕಿಗಳೇ ಗುರಿ ಎಂಬಂತೆ ವರ್ತಿಸುವ ಶಿಕ್ಷಣ ಸಂಸ್ಥೆಗಳು, ಶಿಕ್ಷಕರು ಮತ್ತು ಪೋಷಕರು ಮಕ್ಕಳನ್ನು ಹಾಳುಗೆಡವುತ್ತಿರುವುದು.
► ಪರೀಕ್ಷೆಗೆ ಪೂರ್ವಭಾವಿ ಸಿದ್ಧತೆ
ಅಧ್ಯಯನಕ್ಕೆ ಬೇಕಾದ ಆಕರಗಳು ಮತ್ತು ಪರಿಕರಗಳು: ಬಹಳಷ್ಟು ಶಾಲೆಗಳಲ್ಲಿ ವಿದ್ಯಾರ್ಥಿಗಳು ತಾವೇ ಟಿಪ್ಪಣಿ ಅಥವಾ ನೋಟ್ಸ್ ಮಾಡಿಕೊಳ್ಳುವುದನ್ನು ಕಲಿಸುವುದೇ ಇಲ್ಲ. ಶಿಕ್ಷಕರೇ ಅದನ್ನು ಸಿದ್ಧಪಡಿಸುತ್ತಾರೆ ಅಥವಾ ಮಾರುಕಟ್ಟೆಯಲ್ಲಿ ವಾಣಿಜ್ಯದ ದೃಷ್ಟಿಯಿಂದ ಮಾರುವ ಟಿಪ್ಪಣಿಯ ಪುಸ್ತಕಗಳು ಅಥವಾ ಮಾರ್ಗದರ್ಶಿ(ಗೈಡ್)ಗಳನ್ನು ಅವಲಂಬಿಸುತ್ತಾರೆ. ಅಲ್ಲಿಗೆ ಶಿಕ್ಷಣದ ಉದ್ದೇಶ ಮೊದಲ ಹಂತದಲ್ಲೇ ಕುಸಿಯಿತು.
ತನ್ನ ಅಧ್ಯಯನ, ತನ್ನ ಗಮನ, ತನ್ನ ಗ್ರಹಿಕೆ, ತನ್ನ ವಿಚಾರಗಳನ್ನೆಲ್ಲಾ ತನ್ನ ಸಾಮರ್ಥ್ಯದ ಅನುಸಾರವಾಗಿಯೇ ಟಿಪ್ಪಣಿ ಮಾಡಿಕೊಳ್ಳುವುದನ್ನು ಮಕ್ಕಳಿಗೆ ಕಲಿಸಿದ್ದೇ ಆದರೆ, ಪರೀಕ್ಷೆಗೆ ಅವರು ಉರು ಹೊಡೆಯುವ ಪ್ರಾರಬ್ಧವೇ ಇರುವುದಿಲ್ಲ. ಅವರು ತಾರ್ಕಿಕವಾಗಿ ವಿಷಯವನ್ನು ಅರ್ಥ ಮಾಡಿಕೊಂಡಿರುತ್ತಾರೆ ಮತ್ತು ವಿಷಯದ ಜ್ಞಾನ ಅಥವಾ ತಿಳುವಳಿಕೆ ಅರ್ಥವಾಗಿರುತ್ತದೆ.
ಮಕ್ಕಳಿಗೆ ಈ ಟಿಪ್ಪಣಿಗಳು ಹೇಗೆಲ್ಲಾ ಸಹಾಯಕವಾಗುತ್ತದೆ ಎಂದರೆ,
1.ತಮ್ಮ ಗಮನದ ಸಾಕ್ಷಿಯಾಗಿ ವಿಷಯವನ್ನು ಅಥವಾ ತಿಳುವಳಿಕೆಯನ್ನು ದಾಖಲಿಸಿ ಕೊಂಡಿದ್ದು, ನಂತರ ಅದನ್ನು ಪುನರಾವರ್ತನೆ ಮಾಡುವಾಗ ತಿಳುವಳಿಕೆ ಹರಳು ಗಟ್ಟುವುದು. ದಾಖಲೀಕರಣದಲ್ಲೇ ವಿಷಯವು ಮಕ್ಕಳಲ್ಲಿ ಪ್ರವೇಶಿಸುತ್ತದೆ.
2.ವಿಷಯಗಳನ್ನು ತಮ್ಮ ಗ್ರಹಿಕೆಯ ಪ್ರಕಾರ ಅವರು ವ್ಯಕ್ತಪಡಿಸುವುದರಿಂದ ಮಕ್ಕಳ ಕಲಿಕಾ ಸಾಮರ್ಥ್ಯದ ಜೊತೆಗೆ ಅವರ ನ್ಯೂನತೆಗಳಾಗಲಿ, ಅವರ ಪ್ರತಿಭೆೆಗಳಾಗಲಿ, ಅವರ ಶಿಕ್ಷಣದ ವಿಚಾರದಲ್ಲಿ ಅವರ ಬೆಳವಣಿಗೆಯ ಹಂತಗಳಾಗಲಿ ಸ್ಪಷ್ಟವಾಗಿ ಮತ್ತು ನೇರವಾಗಿ ತಿಳಿಯುತ್ತಿರುತ್ತದೆ.
3.ತಾವೇ ಟಿಪ್ಪಣಿಗಳನ್ನು ಮಾಡಿಕೊಳ್ಳುವುದರಿಂದ ವಿಷಯದ ಮುಖ್ಯ ಅಥವಾ ಕೇಂದ್ರ ಭಾಗ ಎಂಬುದೂ ಮತ್ತು ಅದಕ್ಕೇ ಸಂಬಂಧಪಟ್ಟ ವಿವರಗಳು ಯಾವುವು ಎಂಬುದು ತಿಳಿದಿರುತ್ತದೆ. ವಿಷಯದ ಕೇಂದ್ರಭಾಗ ಮತ್ತು ವಿವರದ ವಿಸ್ತರಣೆಗಳನ್ನು ತಿಳಿದಿದ್ದೇ ಆದಲ್ಲಿ ಪರೀಕ್ಷೆಯಲ್ಲಿ ಎಷ್ಟು ಕೇಳಿರುತ್ತಾರೋ ಅಷ್ಟರಮಟ್ಟಿಗೆ ಉತ್ತರಿಸಲು ಮಕ್ಕಳು ಸಮರ್ಥರಾಗಿರುತ್ತಾರೆ.
4.ಟಿಪ್ಪಣಿ ಮಾಡಿಕೊಳ್ಳುವುದರ ಬಹುಮುಖ್ಯವಾದ ಭಾಗವೆಂದರೆ, ಅವು ವಿಷಯಕ್ಕೆ ಬೇಕಾದ ಎಲ್ಲಾ ಸರಕುಗಳನ್ನು ಒದಗಿಸಿರುತ್ತವೆ. ಮಾತ್ರವಲ್ಲದೇ ಅದನ್ನು ಸಂಕ್ಷಿಪ್ತವಾಗಿ ಅಥವಾ ವಿಸ್ತೃತವಾಗಿ ಬರೆಯುವ ಸಾಮರ್ಥ್ಯ ಮಕ್ಕಳಿಗಿರುತ್ತವೆ. ಆದ್ದರಿಂದ ಅವರ ಕಲಿಕಾ ಮಾಧ್ಯಮದ ಭಾಷೆ ಯಾವುದೇ ಆಗಲಿ ಅದನ್ನು ಚೆನ್ನಾಗಿ ಕಲಿಸುವ ಕೆಲಸ ಆಗಲೇ ಬೇಕು.
5.ಮಕ್ಕಳು ಓದುವುದನ್ನಾಗಲಿ ಅಥವಾ ಕೇಳುವುದನ್ನಾಗಲಿ ಟಿಪ್ಪಣಿ ಮಾಡಿಕೊಳ್ಳುವ ಅಭ್ಯಾಸವನ್ನು ಪ್ರಾರಂಭದಿಂದಲೇ ಮಾಡಿಸಬೇಕು. ಒಟ್ಟಾರೆ ಪರೀಕ್ಷೆಯನ್ನು ಎದುರಿಸುವ ಪ್ರಸಂಗದಲ್ಲಿ ಮಾಡಿಕೊಂಡಿರುವ ಟಿಪ್ಪಣಿಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಇನ್ನೂ ಹಲವಾರು ಪರೀಕ್ಷೆಗೆ ಪೂರಕವಾಗಿರುವ ಅಂಶಗಳುಯಾವುವೆಂದು ಮುಂದೆ ನೋಡೋಣ.