ಬಹುಜನೋದ್ಧಾರಕ ಕನಸುಗಾರ ಕಾನ್ಶೀರಾಂ

Update: 2019-03-16 16:05 GMT

ಬನ್ನೂರು ಕೆ. ರಾಜು

ಬದುಕಿರುವಾಗಲೇ ದಂತ ಕಥೆಯಾಗಿದ್ದ ಕಾನ್ಶೀರಾಂರ ಬದುಕೇ ಒಂದು ಬ್ರಹ್ಮಾಂಡ. 1934ರ ಮಾರ್ಚ್ 15 ರಂದು ಪಂಜಾಬ್‌ನ ರೋಪುರ್ ಜಿಲ್ಲೆಯ ಖಾವಾಸ್ಪುರ ಗ್ರಾಮದಲ್ಲಿ ಇವರ ಜನನ. ತಾಯಿ ಬಿಷನ್‌ಕೌರ್, ತಂದೆ ಹರಿಸಿಂಗ್, ಮೂಲತಃ ದಲಿತರಾಗಿದ್ದು, ಸಿಖ್ ಧರ್ಮಕ್ಕೆ ಮತಾಂತರಗೊಂಡ ಕುಟುಂಬವಿದು. ನಾಲ್ವರು ಸಹೋದರಿಯರು, ಇಬ್ಬರು ಸಹೋದರರನ್ನು ಹೊಂದಿದ್ದ ಕಾನ್ಶೀರಾಂರ ಕುಟುಂಬದ ಸದಸ್ಯರೆಲ್ಲರೂ ಆ ಕಾಲದಲ್ಲೇ ಸಂಪೂರ್ಣ ವಿದ್ಯಾ ವಂತರಾಗಿದ್ದರು. ಇಂತಹ ವಿದ್ಯೆಯ ಬೆಳಕೇ ಇತರರಿಗೂ ಬೆಳಕು ನೀಡುವ ಎತ್ತರದ ಬದುಕಿಗೆ ಇವರನ್ನು ಕರೆತಂದಿತೇನೋ. ಹಿರಿಯ ಮಗನ ಸ್ಥಾನ ದಲ್ಲಿದ್ದ ಕಾನ್ಶೀರಾಂ ಭೌತಶಾಸ್ತ್ರದಲ್ಲಿ ಬಿ.ಎಸ್ಸಿ. ಪದವಿ ಗಳಿಸಿ ನಂತರ ದಲಿತರ ಮೀಸಲಾತಿಯಲ್ಲಿ ಪೂನಾದ ಡಿಫೆನ್ಸ್ ಪ್ರೊಡಕ್ಷನ್ ಡಿಪಾರ್ಟ್ ಮೆಂಟ್‌ನಲ್ಲಿ ಸಹಾಯಕ ವಿಜ್ಞಾನಿಯಾಗಿ ನೌಕರಿಗೆ ಸೇರಿಕೊಂಡು ಇಡೀ ಸಂಸಾರದ ಜವಾಬ್ದಾರಿ ಹೊತ್ತಿದ್ದರು.

ಸುಮಾರು ಏಳೆಂಟು ವರ್ಷಗಳ ತನಕವೂ ಕಾನ್ಶೀರಾಂ ಸಾಮಾನ್ಯ ವ್ಯಕ್ತಿಯಾಗಿ ತಾನಾಯಿತು ತನ್ನ ಕೆಲಸವಾಯಿತೆಂಬಂತೆ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಅಂಬೇಡ್ಕರ್‌ರ ವಿಚಾರಧಾರೆಗೆ ಮನ ಸ್ಸೊಡ್ಡಿಕೊಂಡ ಇವರು ಅಂಬೇಡ್ಕರ್‌ರನ್ನು ಓದುತ್ತಾ ಹೋದರು. ಮೊದಲೇ ಬಾಲ್ಯದಲ್ಲಿ ಅಸ್ಪಶ್ಯತೆಯ ನೋವುಂಡ ಮನಸ್ಸು, ಆಗೇನೂ ಅದರ ಬಗ್ಗೆ ಇವರಿಗೆ ಅಷ್ಟು ತಿಳುವಳಿಕೆ ಇರಲಿಲ್ಲ. ಆದರೆ ಈಗ ಅಸ್ಪಶ್ಯತೆಯ ತಾಪ ತನ್ನ ದಲಿತ ಜನರನ್ನು ಸುಟ್ಟ ಪರಿ ಹೆಜ್ಜೆ ಹೆಜ್ಜೆಗೂ ಇವರ ಎದೆಗಿಳಿದು ಅರಿವಾಗತೊಡಗಿತು. ಅದರಲ್ಲೂ ವಿಶೇಷವಾಗಿ ಅಂಬೇಡ್ಕರ್ ಅವರ “ANNIHILATION OF CASTE” ಪುಸ್ತಕವನ್ನು ಒಂದೇ ರಾತ್ರಿಯಲ್ಲಿ ಹುಚ್ಚುಹಿಡಿ ದವರಂತೆ ಮೂರ್ನಾಲ್ಕು ಬಾರಿ ಕಾನ್ಶೀರಾಂ ಓದಿದ್ದರು. ಈ ಕೃತಿ ಇವರ ಮೇಲೆ ಗಾಢ ಪ್ರಭಾವ ಬೀರಿತ್ತು. ಆ ರಾತ್ರಿ ಕತ್ತಲು ಸರಿದು ಮುಂಜಾನೆ ಬೆಳಕು ಹರಿಯುತ್ತಿದ್ದಂತೆಯೇ ಅಂಬೇಡ್ಕರರೇ ಇವರೊಳಕ್ಕೆ ಬಂದು ಸೇರಿಕೊಂಡಂತೆ ಕಾನ್ಶೀರಾಂ ಬೇರೆಯೇ ಕಾನ್ಶೀರಾಂ ಆಗಿ ಬದಲಾಗಿದ್ದರು. ಅಂದೇ ತಮ್ಮ ಸರಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ್ದೂ ಅಲ್ಲದೆ ಹೆತ್ತ ತಂದೆ ತಾಯಿಗಳನ್ನು, ಒಡಹುಟ್ಟಿದವರನ್ನೆಲ್ಲಾ ಬಿಟ್ಟು ಮನೆ ಮಠ ಎಲ್ಲವನ್ನೂ ತೊರೆದು ಇವರು ಏನನ್ನೋ ನಿಶ್ಚಯಿಸಿಕೊಂಡವರಂತೆ ಕುಟುಂಬ ಬಂಧನ ದಿಂದ ಹೊರಕ್ಕೆ ಬಂದೇಬಿಟ್ಟರು. ಒಂದು ರೀತಿ ಸಿದ್ಧಾರ್ಥ ಬುದ್ಧನೆಡೆಗೆ ಸಾಗಿದಂತೆ...! ಹೀಗೆ ಇವರು ಹೊರಬಂದಾಗ ಮುಂದೊಂದು ದಿನ ದಲಿತರ ಕಷ್ಟ ಕಳೆವ, ಹಿಂದುಳಿದವರ ಕಣ್ಣೊರೆಸುವ, ಅಲ್ಪಸಂಖ್ಯಾತರ ನೋವು ನೀಗುವ ಬಹುಜನರ ರಾಷ್ಟ್ರನಾಯಕರಾಗಿ ಕಾನ್ಶೀರಾಂ ಹೊರಹೊಮ್ಮುತ್ತಾರೆಂದು ಯಾರೂ ಅಂದುಕೊಂಡಿರಲಿಲ್ಲ. ಆದರೆ ಇವರು ಅಂದುಕೊಂಡಿದ್ದರೆಂದು ಕಾಣುತ್ತದೆ. ಏಕೆಂದರೆ ಅಂಬೇಡ್ಕರರ ಕನಸನ್ನು ನನಸು ಮಾಡುವುದೇ ತಮ್ಮ ಬದುಕಿನ ಗುರಿ ಎಂದು ನಿರ್ಧರಿಸಿ ಹೊರಬಂದಿದ್ದರಿವರು.

ದಲಿತ ಉದ್ಯೋಗಿಗಳನ್ನೆಲ್ಲಾ ಸಂಘಟಿಸಿ, ಅಂಬೇಡ್ಕರ್ ಜನ್ಮದಿನಕ್ಕೆ ಸಾರ್ವತ್ರಿಕ ರಜೆ ನೀಡಬೇಕೆಂದು ಸರಕಾರವನ್ನು ಆಗ್ರಹಿಸಿ 1960ರಲ್ಲಿ ಪ್ರಪ್ರಥಮ ವಾಗಿ ಕಾನ್ಶೀರಾಂ ಹೋರಾಟಕ್ಕೆ ಧುಮುಕಿದರು. ಅಲ್ಲಿಂದೀಚೆಗೆ ಸಾಮಾಜಿಕ ಹೋರಾಟಕ್ಕೆ ದಿಟ್ಟ ಹೆಜ್ಜೆ ಹಾಕಿದ ಇವರು ದಿನದಿಂದ ದಿನಕ್ಕೆ ದಲಿತ ಪರ ಚಳವಳಿಯಲ್ಲಿ ಬೆಳೆಯತೊಡಗಿದರು. ಅಂಬೇಡ್ಕರರ ತತ್ವ ಸಿದ್ಧಾಂತ ಗಳನ್ನೇ ಮೈಮನಗಳಲ್ಲೆಲ್ಲಾ ತುಂಬಿಕೊಂಡು ಮೊತ್ತಮೊದಲ ಅಂಬೇಡ್ಕರ್‌ವಾದಿಯಾಗಿ ರೂಪುಗೊಂಡಿದ್ದ ಕಾನ್ಶೀರಾಂ, ಮೊದಲಿಗೆ ವಿದ್ಯಾವಂತ ದಲಿತರು ಮತ್ತು ಉದ್ಯೋಗಸ್ಥ ದಲಿತರನ್ನು ಸಂಘಟಿಸಿದರು. ಆ ಸಂದರ್ಭ ದಲ್ಲಿ ಅವರು ಅಖಿಲ ಭಾರತ ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತ ನೌಕರರ ಒಕ್ಕೂಟವನ್ನು ಆರಂಭಿಸಿ ಈ ವರ್ಗದ ಜನರ ಕಲ್ಯಾಣಕ್ಕಾಗಿ ಕಂಕಣ ಬದ್ಧರಾಗಿ ದುಡಿಯತೊಡಗಿದರು. ಆನಂತರ 1971ರಲ್ಲಿ ಪರಿಶಿಷ್ಟ ಜಾತಿ, ಪಂಗಡ, ಇತರ ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಂಘವನ್ನು ಕಟ್ಟಿದರು. ಮುಂದೆ 1973ರ ಹೊತ್ತಿಗೆ BAMCEF (All India Backward and Minority Employees Federation) ಸಂಘ ಸ್ಥಾಪಿಸಿ ದಿಲ್ಲಿಯಲ್ಲಿ ಅದರ ಕಚೇರಿ ತೆರೆದರು. ಈ ಬಾಮ್‌ಸೆಫ್ ಸಂಘಟನೆಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶಾದ್ಯಂತ ಸಂಚರಿಸತೊಡಗಿದ ಅವರು, ತಮ್ಮ ನಡೆಯ ಉದ್ದಕ್ಕೂ ದಲಿತರನ್ನು, ಹಿಂದುಳಿದವರನ್ನು, ಅಲ್ಪಸಂಖ್ಯಾತರನ್ನು ಸಮುದ್ರದೋಪಾದಿಯಲ್ಲಿ ಒಂದುಗೂಡಿಸತೊಡಗಿದರು....!

ವಿವಿಧ ದಲಿತ ಸಂಘಟನೆಗಳನ್ನು ಕಲೆಹಾಕಿ, ನಿಷ್ಕ್ರಿಯಗೊಂಡಿದ್ದ ದಲಿತ ಸಂಘಟನೆಗಳನ್ನು ಪುನಶ್ಚೇತನಗೊಳಿಸಿದ ಅವರು, ದಲಿತರೊಡನೆ ಹಿಂದುಳಿದ ವರ್ಗಗಳನ್ನೂ ಸೇರಿಸಿದರು. ಶೋಷಿತರ ಪರವಾಗಿ ದನಿ ಎತ್ತಿ ದುಡಿದ ಮಹಾಪುರುಷರಾದ ಜ್ಯೋತಿಬಾಪುಲೆ, ಛತ್ರಪತಿ ಶಾಹುಮಹಾರಾಜ್, ನಾರಾಯಣಗುರು, ಪೆರಿಯಾರ್ ರಾಮಸ್ವಾಮಿಯವರ ತತ್ವಾದರ್ಶಗಳನ್ನು ರಾಷ್ಟ್ರಾದ್ಯಂತ ಇವರು ಸಾರಿ ಶೋಷಿತ ದಲಿತರಲ್ಲಿ ಅರಿವಿನ ದೀಪ ಬೆಳಗಿಸಿ ದರು. ತಮಿಳಿನ ದ್ರಾವಿಡ ನಾಯಕ ಪೆರಿಯಾರ್ ಕುರಿತು ಉತ್ತರ ಪ್ರದೇಶ ದಲ್ಲಿ ಬಹುದೊಡ್ಡ ಕಾರ್ಯಕ್ರಮ ರೂಪಿಸಿ ಪೆರಿಯಾರ್‌ರನ್ನು ಉತ್ತರಕ್ಕೆ ಪರಿಚಯಿಸಿದ ಕೀರ್ತಿ ಕಾನ್ಶೀರಾಂರವರದ್ದು.

1980ರಲ್ಲಿ ‘‘ಅಂಬೇಡ್ಕರ್ ಮೇಳ ಆನ್ ವ್ಹೀಲ್ಸ್’’ ಎಂಬ ಬೀದಿ ಪ್ರದರ್ಶನ ಹುಟ್ಟು ಹಾಕಿದ ಕಾನ್ಶೀರಾಂ, ಅಂಬೇಡ್ಕರ್‌ರ ವಿವಿಧ ಬಗೆಯ ಚಿತ್ರಗಳನ್ನು, ಪುಸ್ತಕಗಳನ್ನು, ತತ್ವಗಳನ್ನು ಬಹುಜನರಿಗೆ ತಲುಪಿಸತೊಡಗಿದರು. ತಮ್ಮ ಭವಿಷ್ಯದ ರಾಜಕೀಯದ ಮುನ್ನುಡಿ ಎಂಬಂತೆ 1981ರಲ್ಲಿ ದಲಿತ ಶೋಷಿತ ಸಂಘರ್ಷ ಸಮಿತಿ (DS4) ಯನ್ನು ಕಟ್ಟಿ ತಮ್ಮ ಸಾಮಾಜಿಕ ದಲಿತ ಚಳವಳಿಗೊಂದು ಹೊಸ ರೂಪ ಕೊಟ್ಟರು. ಅಲ್ಲಿ ಅಸ್ಪಷ್ಟವಾಗಿ ಆಗಲೇ ಗೋಚರಿಸುತ್ತಿದ್ದವು ಕಾನ್ಶೀರಾಂರ ರಾಜಕೀಯ ಮೆಟ್ಟಿಲುಗಳು. ಇನ್ನು ಹತ್ತುವುದಷ್ಟೇ ಅವರಿಗೆ ಬಾಕಿ ಇತ್ತು. ಕಾನ್ಶೀರಾಂ ತಡಮಾಡಲಿಲ್ಲ. DS4 ನಲ್ಲಿ ಕಾರ್ಯನಿರ್ವಹಿಸುತ್ತಲೇ 1984ರಲ್ಲಿ ತಮ್ಮ ಬಹುದಿನದ ಕನಸಾದ ‘ಬಹುಜನ ಸಮಾಜ ಪಕ್ಷ’ವನ್ನು ಎಪ್ರಿಲ್ 14ರ ಅಂಬೇಡ್ಕರ್ ಜನ್ಮದಿನದಂದು ಸ್ಥಾಪಿಸಿ ಅದಕ್ಕೆ ಭದ್ರಬುನಾದಿ ಹಾಕಿದರು. ಕಾನ್ಶೀರಾಂ ಪದೇ ಪದೇ ಹೇಳುತ್ತಿದ್ದರು. ‘‘ದೇಶದ ಒಟ್ಟು ಜನಸಂಖ್ಯೆಯ ಪ್ರಮಾಣದಲ್ಲಿ ಮೇಲ್ಜಾತಿಯವರು ಕೇವಲ 15 ಪರ್ಸೆಂಟ್. ಹಾಗಿದ್ದೂ ಇವರುಪ್ರತಿಯೊಂದು ಕ್ಷೇತ್ರಗಳನ್ನೂ ಆಕ್ರಮಿಸಿಕೊಂಡಿದ್ದಾರೆ. ಮೇಲ್ಜಾತಿಯವರ ಆಧಿಪತ್ಯ ಹಾಗೂ ಪ್ರಾಬಲ್ಯದಿಂದಾಗಿ ಉಳಿದ 85 ಪರ್ಸೆಂಟ್ ಜನರು ಅಧಿಕಾರ ಮತ್ತು ಅವಕಾಶದಿಂದ ದೂರವಾಗಿದ್ದಾರೆ’’ ಎಂದು. ಹೀಗೆ ಅವಕಾಶ ವಂಚಿತರಾದ 85 ಪರ್ಸೆಂಟ್ ಜನರನ್ನೇ ಅವರು ‘‘ಬಹುಜನ’’ ಎಂದು ಕರೆದರು. ಅಂತಹವರನ್ನು ಮುನ್ನಡೆಸಿ ಅವರನ್ನು ಅಧಿಕಾರದ ಪಟ್ಟಕ್ಕೇರಿಸಲು ಬಹುಜನ ಸಮಾಜ ಪಕ್ಷ ಕಟಿಬದ್ಧವಾಯಿತು. ಅಲ್ಲಿಂದ ಶುರುವಾಯಿತು ನೋಡಿ ಕಾನ್ಶೀರಾಂರ ತೀವ್ರಗಾಮಿ ರಾಜಕೀಯ ಹೋರಾಟ. ದಲಿತರು, ಶೋಷಿತರು, ಅಲ್ಪಸಂಖ್ಯಾತರು ಹೀಗೆ ಬಹು ಜನರನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸುವುದೇ ತಮ್ಮ ಪರಮ ಗುರಿಯಾಗಿಸಿಕೊಂಡ ಅವರು ಈ ದಿಕ್ಕಿನಲ್ಲಿ ಧೀಶಕ್ತಿಯಾಗಿ ವಿಜೃಂಭಿಸಿದರು. ‘‘ಬೇಡಿದರೆ ತನ್ನ ಜನಕ್ಕೆ ಒಂದು ಹೊತ್ತಿನ ಕೂಳು ದೊರಕಿಸಿಕೊಡ ಬಹುದು. ಇನ್ನೂ ಹೆಚ್ಚೆಂದರೆ ಒಂದು ದಿನದ ತುತ್ತಿನ ಚೀಲವನ್ನು ತುಂಬಿಸಿಕೊಡಬಹುದು. ಅದೇ ಆಳುವ ವರ್ಗವಾ ಗಿಸಿದರೆ ಶಾಶ್ವತವಾಗಿ ಹಸಿವನ್ನು ನೀಗಿಸಬಹುದು...’’ ಎಂಬ ತಮ್ಮದೇ ಆದ ಸರಳ ಫಿಲಾಸಫಿ ಹೊಂದಿದ್ದ ಕಾನ್ಶೀರಾಂ, ಇದಕ್ಕಾಗಿ ತಾವು ಕಟ್ಟಿದ ಬಿಎಸ್ಪಿ ಯೊಡನೆ ಕಿತ್ತುಹೋದ ಹವಾಯ್ ಚಪ್ಪಲಿಯಲ್ಲೇ ದೇಶದ ಉದ್ದಗಲಕ್ಕೂ ಸೈಕಲ್‌ನಲ್ಲಿ, ಕಾಲುನಡಿಗೆಯಲ್ಲಿ ಭರಭರನೆ ಸುತ್ತಿದರು. ಹೀಗೆ ಇವರು ಬೇಡುವ ಜನರನ್ನು ಆಳುವ ಜನರನ್ನಾಗಿ ಪರಿವರ್ತಿಸಲು ಸುಮಾರು 20 ಲಕ್ಷ ಕಿ.ಮೀ.ಗೂ ಹೆಚ್ಚು ದೇಶ ಸಂಚರಿಸಿದರು! ಅದುವರೆಗೂ ಅಸಂಘಟಿತರಾಗಿಯೇ ಉಳಿದಿದ್ದ ದಲಿತರು ಕಾನ್ಶೀರಾಂರ ಕೂಗಿಗೆ ಎಚ್ಚೆತ್ತು ಸಂಘಟಿತರಾಗತೊಡಗಿ ದರು. ಇವರ ಒಗ್ಗೂಡುವಿಕೆ ಬಲವಾದಂತೆ ಬಿಎಸ್ಪಿ ಕೂಡ ಬಲಿಯತೊಡಗಿತು. ಬಹುಜನರೊಡನೆ ಪಕ್ಷ ಸಂಘಟನೆ ಮಿಂಚಿನಂತೆ ಸಾಗಿತು. ಕಾನ್ಶೀರಾಂರ ವೇಗವೇ ಅಂತಾದ್ದು. ಹೀಗೆ ಪಕ್ಷ ಸಂಘಟನೆಯಲ್ಲಿ ಅವಿರತವಾಗಿ ನಡೆದಿದ್ದ ಕಾನ್ಶೀರಾಂರ ಸಭೆ-ಸಮಾರಂಭಗಳು ಎಲ್ಲೇ ನಡೆದರೂ ಗಣ್ಯರು ಬರುವ ಮೊದಲೇ ವೇದಿಕೆ ಹತ್ತಿ ನೆರೆದಿದ್ದ ಜನರಿಗೆ ತನ್ನ ಮಾತಿನ ಮೋಡಿಯ ಮೂಲಕವೇ ಕಾನ್ಶೀರಾಂ ಮತ್ತು ಬಿಎಸ್ಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ತಿಳಿಯಪಡಿಸಿ ಚಪ್ಪಾಳೆ ಗಿಟ್ಟಿಸುತ್ತಿದ್ದ ಮಾಯಾವತಿ ಎಂಬ ಯುವತಿಯ ಕ್ರಿಯಾಶೀಲತೆ ಕಾನ್ಶೀರಾಂ ರನ್ನು ಆಕರ್ಷಿಸಿತು. ಆ ಕ್ಷಣವೇ ಗಾಝಿಯಾಬಾದ್‌ನಲ್ಲಿ ಸರಕಾರಿ ಶಾಲಾ ಶಿಕ್ಷಕಿಯಾಗಿದ್ದ ಮಾಯಾವತಿಯನ್ನು ರಾಜಕೀಯಕ್ಕೆ ಕರೆತಂದು ತಮ್ಮ ಬಿಎಸ್ಪಿ ಪಕ್ಷದ ಮುಂಚೂಣಿಗೆ ಬಿಟ್ಟರು. ಮಾಯಾವತಿ ಕೂಡ ಕಾನ್ಶೀರಾಂರ ಹೆಜ್ಜೆಗೆ ಹೆಜ್ಜೆ ಹಾಕುತ್ತಾ ಅವರ ಗುರಿ ಸಾಧನೆಯ ಹಾದಿಯಲ್ಲಿ ಬಹುಜನರ ಸಂಘಟನೆಗೆ ಮುನ್ನಡೆದರು. 80 ರ ದಶಕದಲ್ಲಿ ಎಲ್ಲೆಲ್ಲೂ ಕಾನ್ಶೀರಾಂರ ಬಹುಜನ ಸಮಾಜ ಪಕ್ಷದ ಧ್ವನಿ ಪಾಂಚಜನ್ಯವಾಗಿ ಮೊಳಗತೊ ಡಗಿತು. ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಗಳಲ್ಲೂ ದಲಿತ ಜಾಗೃತಿ ಮೂಡಿಸಿ ಇದು ಸದ್ದು ಮಾಡಿತು. ಬಿಎಸ್ಪಿ ಭರಾಟೆಗೆ ಕಾಂಗ್ರೆಸ್, ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳು ತತ್ತರಿ ಸತೊಡಗಿದವು. ಅದರಲ್ಲೂ ಉತ್ತರ ಪ್ರದೇಶದಲ್ಲಿ ಕಾನ್ಶೀರಾಂರ ಬಿಎಸ್ಪಿ ಮುಂದೆ ಎಲ್ಲಾ ರಾಜಕೀಯ ಪಕ್ಷಗಳು ಹುಲಿ ಎದುರಿನ ಇಲಿ ಗಳಂತಾಗಿದ್ದವು. ಯಾವುದೇ ಬಂಡವಾಳ ಶಾಹಿಗಳ, ಉದ್ಯಮಿಗಳ ನೆರವಿಲ್ಲದೆಯೇ ಭಾರತ ದೇಶದ 3ನೇ ಅತಿದೊಡ್ಡ ರಾಷ್ಟ್ರೀಯ ಪಕ್ಷವಾಗಿ ಬಿಎಸ್ಪಿ ಹೊರಹೊಮ್ಮಿತ್ತೆಂದರೆ ಕಾನ್ಶೀರಾಂರ ಇಚ್ಛಾಶಕ್ತಿಯ ಸಂಘಟನಾಯುಕ್ತಿಯ ತಾಕತ್ತು ಎಂತಾದ್ದಿರಬಹುದು?!

‘‘ವೋಟ್ ಹಮಾರಾ, ರಾಜ್ ತುಮ್ಹಾರಾ, ನಹಿ ಚಲೇಗಾ, ಯೇ ನಹಿ ಚಲೇಗಾ.....’’ ಎನ್ನುವ ಸ್ಲೋಗನ್ನಿನ ಸಿಡಿಗುಂಡುಗಳನ್ನು ಮೇಲ್ವರ್ಗದವರತ್ತ ಸಿಡಿಸುತ್ತಾ ದಲಿತರ, ಶೋಷಿತರ, ಅಲ್ಪಸಂಖ್ಯಾತರ ನರನಾಡಿಗಳಲ್ಲಿ ಜಾಗೃತಿಯ ಕಿಚ್ಚು ಹಚ್ಚಿದ್ದ ಕಾನ್ಶೀರಾಂ, ಮನುವಾದಿಗಳ ವಿರುದ್ಧ ಸಮರ ಸಾರಿದ್ದರು. ಚುನಾವಣೆ ಬಂತೆಂದರೆ ಕೈಗೆರಡು ಸಾರಾಯಿ ಪ್ಯಾಕೇಟ್ಟು, ಜೇಬಿಗೊಂದು ನೋಟು ಕೊಟ್ಟರಾಯಿತು ದಲಿತರ ವೋಟನ್ನು ಕಿತ್ತುಕೊಳ್ಳಬಹುದೆಂಬ ಭಾವನೆ ಇದ್ದ ಕಾಲದಲ್ಲಿ ದಲಿತರನ್ನು ಜಾಗೃತಿಗೊಳಿಸಿ ಅಂತಹ ಭಾವನೆಗೆ ಕಾನ್ಶೀರಾಂ ಬೆಂಕಿ ಹಾಕಿದ್ದರು. ಅಷ್ಟೇ ಅಲ್ಲ, ‘ದಲಿತರ ಮತಮಾರಾಟಕ್ಕಿಲ್ಲ’ ಎಂಬ ಸ್ಪಷ್ಟ ಸಂದೇಶವನ್ನು ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗೂ, ರಾಜಕಾರಣಿಗಳಿಗೂ ಇವರು ಮುಟ್ಟಿ ನೋಡಿಕೊಳ್ಳುವಂತೆ ಮುಟ್ಟಿಸಿದರು. 1987 ರಲ್ಲಿ ಅಲಹಾಬಾದ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಪ್ರಪ್ರಥಮವಾಗಿ ಸ್ಪರ್ಧಿಸಿದ ಕಾನ್ಶೀರಾಂ, ಅಲ್ಲಿ ಮಾಜಿ ಪ್ರಧಾನಿ ವಿ.ಪಿ. ಸಿಂಗ್ ವಿರುದ್ಧ ಸೋತರೂ 1991 ರಲ್ಲಿ ಇಟಾವ ಕ್ಷೇತ್ರದಿಂದ ಲೋಕ ಸಭೆಗೆ ಆಯ್ಕೆಯಾದರು. ಆನಂತರ ಅವರ ಗೆಲುವಿನ ಓಟ ನಿರಂತರ ಸಾಗಿತು. ಮತ್ತೆಂದೂ ಅವರು ಹಿಂದಿರುಗಿ ನೋಡಲಿಲ್ಲ. ಉತ್ತರ ಪ್ರದೇಶದಂತಹ ಅರ್ಧ ಭಾರತದಲ್ಲಿ ತಮ್ಮ ಬಹುಜನ ಸಮಾಜ ಪಕ್ಷದ ಬಾವುಟವನ್ನು ಅದ್ವಿತೀಯವಾಗಿ ಹಾರಿಸಿದರು. ಹಾಗೆಯೇ ದಕ್ಷಿಣ ಭಾರತದಲ್ಲೂ ಬಿಎಸ್ಪಿ ನೆಲೆಯೂರುವಂತೆ ಮಾಡಿದ್ದರು.

‘‘ರಾಜ್ಯಾಡಳಿತವಷ್ಟೇ ಅಲ್ಲ ದಲಿತರ ಕೈಗೆ ದೇಶದ ಆಡಳಿತ ನೀಡುತ್ತೇನೆ’’ ಎಂದು ಘರ್ಜಿಸುತ್ತಲೇ ಬಹುಜನರೊಡನೆ ಸಾಗಿಬಂದ ಕಾನ್ಶೀರಾಂ, ಶೋಷಿತ ರೂ ತಮ್ಮ ಸ್ವಂತಶಕ್ತಿಯ ಮೇಲೆ ರಾಜ್ಯಾಧಿಕಾರ ಹಿಡಿಯಬಲ್ಲರು......, ರಾಜ್ಯಭಾರ ಕೂಡ ಮಾಡಬಲ್ಲರೆಂಬುದನ್ನು ಪ್ರಪಂಚಕ್ಕೆ ತೋರಿಸಿಕೊಟ್ಟ ಕಿಂಗ್‌ಮೇಕರ್ ಇವರು. ಕಾನ್ಶೀರಾಂ ಅವರಿಗೆ ಆಯಸ್ಸು ಮತ್ತು ಆರೋಗ್ಯ ಚೆನ್ನಾಗಿದ್ದಿದ್ದರೆ ಖಂಡಿತವಾಗಿಯೂ ಭಾರತ ದೇಶ ದಲಿತನೊಬ್ಬ ಪ್ರಧಾನಿಯಾಗು ವುದನ್ನು ಕಾಣಬಹುದಾಗಿತ್ತು!

  ಆಶ್ಚರ್ಯವೆಂದರೆ ಕಾನ್ಶೀರಾಂ ಸಂಸಾರಿಯಾಗಲೇ ಇಲ್ಲ. ಅವರ ತೀವ್ರತರ ಹೋರಾಟದ ಬದುಕಿನಲ್ಲಿ ಅದಕ್ಕೆ ಬಿಡುವೂ ಇರಲಿಲ್ಲ. ಬಹುಜನರಿಗಾಗಿ ತಾನು ಹುಟ್ಟುಹಾಕಿದ್ದ ಬಿಎಸ್ಪಿ ಪಕ್ಷವನ್ನು ತನ್ನ ಕುಟುಂಬವೆಂದುಕೊಂಡಿದ್ದರು. ಹಾಗಾಗಿ ಈ ಬಹುಜನ ಪ್ರೇಮಿ ಜೀವನ ಪರ್ಯಂತ ಬ್ರಹ್ಮಚಾರಿಯಾಗಿಯೇ ಬದುಕಿದರು. ಬಹುಜನರ ಬದುಕಿಗೆ ಚಂದನದ ಕೊರಡಾಗಿದ್ದರು. ಕೆಲವರು ಮಾಯಾವತಿ ನಡುವಿನ ಇವರ ಸಂಬಂಧವನ್ನು ಬಹಳಷ್ಟು ರೀತಿಯಲ್ಲಿ ವಿಶ್ಲೇಷಿಸಿ ಮಾತನಾಡುವುದುಂಟು. ನಿಜ ಹೇಳಬೇಕೆಂದರೆ ಇವರು ಮಾಯಾವತಿಯಲ್ಲಿ ಇಟ್ಟುಕೊಂಡಿದ್ದ ಪ್ರೀತಿ ವಿಶ್ವಾಸಗಳು ಪ್ರಾಮಾಣಿಕತೆಯ ಪ್ರತೀಕವಾಗಿದ್ದವು. ಬಹುಜನರನ್ನು ಮೆರೆಸಲು ತಮ್ಮ ವೈಯಕ್ತಿಕ ಬದುಕನ್ನೇ ಮರೆತ ಮಹಾನುಭಾವನೀತ. ಶೋಷಿತ ಸಮುದಾಯಗಳನ್ನು ಸಂಘಟಿಸಿ ದೇಶದ ರಾಜಕಾರಣಕ್ಕೆ ಹೊಸದೊಂದು ಭಾಷ್ಯ ಬರೆದ ಭಾರತ ಕಂಡ ಅಪ್ರತಿಮ ರಾಜಕೀಯ ಮುತ್ಸದ್ದಿಯೂ ಹೌದು!

Writer - ಬನ್ನೂರು ಕೆ. ರಾಜು

contributor

Editor - ಬನ್ನೂರು ಕೆ. ರಾಜು

contributor

Similar News