ಸಂವಿಧಾನದ ಕುರಿತಂತೆ ಜಾಗೃತಿ

Update: 2019-03-16 18:38 GMT

 ಸಂವಿಧಾನ ಅಪಾಯದಲ್ಲಿದೆ ಎನ್ನುವ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಇದೇ ಸಂದರ್ಭದಲ್ಲಿ ಸಂವಿಧಾನವನ್ನು ಹೊಸ ತಲೆ ಮಾರು ಎಷ್ಟರ ಮಟ್ಟಿಗೆ ತನ್ನದಾಗಿಸಿಕೊಂಡಿದೆ ಎಂದು ನೋಡಿದರೆ ನಿರಾಶೆ ಕಟ್ಟಿಟ್ಟ ಬುತ್ತಿ. ಪ್ರಜಾಸತ್ತೆಯ ಅಡಿಗಲ್ಲಾಗಿರುವ, ನಮ್ಮ ದೈನಂದಿನ ಬದುಕಿನ ಭಾಗವಾಗಿರುವ ಸಂವಿಧಾನವನ್ನು ನಾವು ಪಠ್ಯ ಪುಸ್ತಕಕ್ಕಷ್ಟೇ ಸೀಮಿತಗೊಳಿಸಿದ್ದೇವೆ. ಸಂವಿಧಾನದ ಕುರಿತಂತೆ ದೇಶದ ಜನರ ವಿಸ್ಮತಿಯನ್ನೇ ಸಂವಿಧಾನ ವಿರೋಧಿಗಳು ತಮ್ಮ ಬಂಡವಾಳವಾಗಿಸುತ್ತಿದ್ದಾರೆ. ಅದನ್ನು ದುರ್ಬಲಗೊಳಿಸಲು ಹವಣಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಲವು ಚಿಂತಕರು ಸಂವಿಧಾನವನ್ನು ಪರಿಚಯಿಸುವ ಆಂದೋಲನವನ್ನು ನಡೆಸುತ್ತಿದ್ದಾರೆ. ಅದರ ಭಾಗವಾಗಿದೆ, ಎಂ. ಅಬ್ದುಲ್ ರೆಹಮಾನ್ ಪಾಷ ಬರೆದಿರುವ ‘ಭಾರತ ಸಂವಿಧಾನ-ಅರ್ಥ ಅರಿವು ಜಾಗೃತಿ’ ಕೃತಿ. ಸಂವಿಧಾನ ಸಾಕ್ಷರತೆಯ ಕೈಪಿಡಿ ಎಂದು ಅವರು ಇದನ್ನು ಕರೆದಿದ್ದಾರೆ. ಯುವಕರಿಗಾಗಿ, ವಿದ್ಯಾರ್ಥಿಗಳಿಗಾಗಿ ಸರಳವಾಗಿ ರೂಪುಗೊಂಡ ಸಂವಿಧಾನದ ಸಾರಾಂಶವನ್ನು ಹೊಂದಿದ ಕೃತಿ ಇದಾಗಿದೆ.
ಭಾರತ ಸಂವಿಧಾನವನ್ನು ಓದಿ, ಅರ್ಥ ಮಡಿಕೊಂಡು ಆ ಮೂಲಕ ಈ ದೇಶದ ನಾಗರಿಕರಾಗಿ ನಮ್ಮ ಹೊಣೆಗಾರಿಕೆಗಳನ್ನು ಅರಿತುಕೊಳ್ಳುವ ತುರ್ತು ಎಂದಿಗಿಂತ ಹೆಚ್ಚಾಗಿದೆ. ಸ್ವಾತಂತ್ರ ಸಂಗ್ರಾಮ ಮತ್ತು ಅದರ ಫಲವಾಗಿ ಸ್ವಾತಂತ್ರ ಬಂದ ವಿದ್ಯಮಾನಗಳ ತೀವ್ರತೆ ಸ್ವಲ್ಪವೂ ತಟ್ಟಿರದ ನಮ್ಮ ಈಗಿನ ಪೀಳಿಗೆಗೆ ಅದರ ಮಹತ್ವವನ್ನು ಅರ್ಥ ಮಾಡಿಸುವ ಮೂಲಕ ಭಾರತ ಸಂವಿಧಾನದ ಪ್ರಸ್ತುತತೆಯನ್ನು ಮನವರಿಕೆ ಮಾಡಿಸುವ ಪ್ರಯತ್ನ ಇಲ್ಲಿದೆ. ಕೃತಿಯಲ್ಲಿ ಒಟ್ಟು ಹನ್ನೊಂದು ಅಧ್ಯಾಯಗಳಿವೆ. ಆರಂಭದಲ್ಲಿ ಸಂವಿಧಾನ ಎಂದರೆ ಏನು ಎನ್ನುವುದನ್ನು ಕೃತಿ ವಿವರಿಸುತ್ತದೆ. ಅದನ್ನು ನಾವು ಏಕೆ ತಿಳಿದುಕೊಳ್ಳಬೇಕು, ಸಂವಿಧಾನಕ್ಕಾಗಿ ನಾವು ತೆತ್ತ ಬೆಲೆಯೇನು, ಸಂವಿಧಾನದ ಸ್ವಭಾವ, ಅದರ ಉಗಮ, ವಿಕಾಸ, ಹಿನ್ನೆಲೆ ಇತ್ಯಾದಿಗಳನ್ನು ಆನಂತರದ ಅಧ್ಯಾಯಗಳು ವಿವರಿಸುತ್ತವೆ. ಉಳಿದಂತೆ ಸಂವಿಧಾನ ನಮಗೆ ನೀಡಿರುವ ಹಕ್ಕು, ಕರ್ತವ್ಯಗಳು, ರಾಜ್ಯನೀತಿಯ ನಿರ್ದೇಶಕ ತತ್ವಗಳ ಸಾರಾಂಶವನ್ನು ನೀಡಲಾಗಿದೆ. ಯುವಕರು ಮತ್ತು ವಿದ್ಯಾರ್ಥಿಗಳು ಅವಶ್ಯವಾಗಿ ಹೊಂದಿರಬೇಕಾದ ಕೈ ಪಿಡಿ ಇದು.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು64. ಮುಖಬೆಲೆ 50 ರೂ.

 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News