ಈ ಚುನಾವಣೆ ಜನತಂತ್ರದ ಅಗ್ನಿಪರೀಕ್ಷೆ

Update: 2019-03-18 03:19 GMT

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಮೋದಿ ಎಂಬ ಸರ್ವಾಧಿಕಾರಿಯನ್ನು ಮುಂದಿಟ್ಟುಕೊಂಡು ಬಿಜೆಪಿ ಸರಕಾರ ಏನೇನು ಮಾಡಿತು ಎಂಬುದು ಎಲ್ಲರಿಗೂ ಗೊತ್ತಿದೆ. ರಿಸರ್ವ್ ಬ್ಯಾಂಕ್ ಗಮನಕ್ಕೆ ತಾರದೆ ಮಾಡಿದ ನೋಟು ಅಮಾನ್ಯೀಕರಣ, ಜಿಎಸ್‌ಟಿ ಅವಾಂತರ, ಸಿಬಿಐನಲ್ಲಿ ಹಸ್ತಕ್ಷೇಪ, ಚುನಾವಣಾ ಆಯೋಗವನ್ನು ನಿಯಂತ್ರಿಸಲು ನಡೆಸುತ್ತಿರುವ ಯತ್ನ, ಸಾಂವಿಧಾನಿಕ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿಸುವ ಹುನ್ನಾರ ಎಲ್ಲವನ್ನೂ ದೇಶ ನೋಡಿದೆ.

ನನಗೆ ತಿಳುವಳಿಕೆ ಬಂದಾಗಿನಿಂದ ಅಂದರೆ 1962ರಿಂದ ನಾನು ಅನೇಕ ಚುನಾವಣೆ ನೋಡಿದ್ದೇನೆ. ಆಗ ನಮ್ಮ ಮತ ಕ್ಷೇತ್ರ ಜಮಖಂಡಿ. ಅಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಡಿ. ಜತ್ತಿ ಮತ್ತು ಅವರ ಎದುರಿಗೆ ಸ್ಪರ್ಧಿಸುತ್ತಿದ್ದ ಮಹಾದೇವಪ್ಪಮುರಗೋಡರ ನಡುವಿನ ಚುನಾವಣೆಯು ನಮ್ಮ ಭಾಗದಲ್ಲಿ ಅತ್ಯಂತ ತುರುಸಿನಿಂದ ಕೂಡಿರುತಿತ್ತು. ಜನರಿಂದ ದೇವರು ಎಂದು ಕರೆಯಿಸಿಕೊಳ್ಳುತ್ತಿದ್ದ ಮಹಾದೇವಪ್ಪ ಮುರಗೋಡರ ಪರ ಹುಡುಗರಾಗಿದ್ದ ನಾವೆಲ್ಲ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದೆವು. ರಾಷ್ಟ್ರ ಮತ್ತು ರಾಜ್ಯಮಟ್ಟದ ಕಮ್ಯುನಿಸ್ಟ್ ಮತ್ತು ಸೋಷಲಿಸ್ಟ್ ನಾಯಕರು ಮಹಾದೇವಪ್ಪನವರ ಪ್ರಚಾರಕ್ಕೆ ಬರುತ್ತಿದ್ದರು. ಅವರ ಭಾಷಣಗಳನ್ನು ಕೇಳುತ್ತ ನಾನು ರಾಜಕೀಯ ಆಲೋಚನಾ ಕ್ರಮ ರೂಪಿಸಿಕೊಂಡೆ. ಹೀಗೆ ಅನೇಕ ಚುನಾವಣೆಗಳನ್ನು ನೋಡಿದ ನಾನು ಪ್ರಚಾರದಲ್ಲಿ ಕಾರ್ಯಕರ್ತನಾಗಿ ಪಾಲ್ಗೊಂಡೆ. ಪತ್ರಕರ್ತನಾದ ನಂತರ ವರದಿಗಾಗಿ ಹೋದೆ. ಆದರೆ, ನನಗೆ ಈಗ ದೇಶದಲ್ಲಿ ನಡೆಯುತ್ತಿರುವ ಚುನಾವಣೆ ಕಂಡು ದಿಗ್ಭ್ರಮೆಯಾಗಿದೆ. ಇಂಥ ಚುನಾವಣೆ ನಾನು ಹಿಂದೆಂದೂ ನೋಡಿಲ್ಲ.

ಕಳೆದ ಐದು ದಶಕಗಳಿಂದ ಕುಸಿಯುತ್ತಲೇ ಬಂದ ಚುನಾವಣೆಯ ಗುಣಮಟ್ಟ ಈ ಬಾರಿ ಪಾತಾಳಕ್ಕೆ ತಲುಪಿದೆ. ಈ ದೇಶದಲ್ಲಿ ಮುಂದೆ ಮತ್ತೆ ಚುನಾವಣೆ ನಡೆಯುವುದೇ ಎಂಬ ಆತಂಕ ಮೂಡಿಸಿದೆ. ಈಗ ಅಧಿಕಾರದಲ್ಲಿರುವ ಪಕ್ಷ ಇಂಥ ಆತಂಕಕ್ಕೆ ಕಾರಣವಾಗಿದೆ. 1975ರಲ್ಲಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಜಾರಿ ಮಾಡಿದ ನಂತರ ನಡೆದ ಚುನಾವಣೆಯಲ್ಲೂ ಇಂಥ ಅನುಭವ ನನಗಾಗಿರಲಿಲ್ಲ. ಇಂದಿರಾ ಗಾಂಧಿಯವರು ಪ್ರತಿಪಕ್ಷ ನಾಯಕರನ್ನೆಲ್ಲ ಜೈಲಿಗೆ ತಳ್ಳಿ ತುರ್ತು ಪರಿಸ್ಥಿತಿ ಜಾರಿಗೆ ತಂದಾಗಲೂ ಇಂಥ ಅನುಭವ ಆಗಿರಲಿಲ್ಲ. 1977ರಲ್ಲಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಹಿಂದೆಗೆದುಕೊಂಡು ಲೋಕಸಭೆಗೆ ಚುನಾವಣೆ ಘೋಷಿಸಿದ್ದರು. ತುರ್ತು ಪರಿಸ್ಥಿತಿಯಲ್ಲಿ ಸರ್ವಾಧಿಕಾರಿಯಂತೆ ಮೊೆದ ಇಂದಿರಾಗಾಂಧಿ ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದರು. ಜಿಲ್ಲೆಗಳನ್ನೆಲ್ಲ ಸುತ್ತಿ ತಡ ರಾತ್ರಿ ಬಾಗಲಕೋಟೆಗೆ ಬಂದಾಗ ಅಲ್ಲಿನ ಸರಕಾರಿ ಪ್ರವಾಸಿ ಮಂದಿರದಲ್ಲಿ ಅವರಿಗೆ ಕೊಠಡಿ ನೀಡಲು ನಿರಾಕರಿಸಲಾಗಿತ್ತು. ಆಗ ಪ್ರವಾಸಿ ಮಂದಿರದ ಅಂಗಳದಲ್ಲಿ ಕಾರು ನಿಲ್ಲಿಸಿ ಅದರಲ್ಲೇ ಒಂದು ಪುಟ್ಟ ನಿದ್ರೆಯನ್ನು ಇಂದಿರಾ ಮಾಡಿದರು, ಮಾರನೇ ದಿನ ಎಂದಿನಂತೆ ಪ್ರಚಾರ ಮುಂದುವರಿಸಿದ್ದರು.

ತುರ್ತು ಪರಿಸ್ಥಿತಿಗೂ ಮುನ್ನ ನಡೆದ ಜೆಪಿ ಚಳವಳಿ ಕಾಂಗ್ರೆಸ್ ವಿರೋಧಿ ಪಕ್ಷಗಳಿಗೆ ವೇದಿಕೆಯಾಗಿದ್ದೇನೊ ನಿಜ. ಆದರೆ ಸೋಷಲಿಸ್ಟ್, ಸಂಸ್ಥಾ ಕಾಂಗ್ರೆಸ್ ನಂಥ ಪಕ್ಷಗಳನ್ನು ಮುಗಿಸಿ ಸಂಘ ಪರಿವಾರದ ಜನಸಂಘವೇ ಪ್ರಬಲ ಪಕ್ಷವಾಗಿ ಹೊರಹೊಮ್ಮಿತು. ಎಲ್ಲ ಪ್ರತಿಪಕ್ಷಗಳನ್ನು ವಿಲೀನಗೊಳಿಸಿ ಒಂದೇ ಪಕ್ಷ ಮಾಡಬೇಕೆಂಬ ಜೆಪಿ ಪ್ರಸ್ತಾವವನ್ನು ಒಪ್ಪಿ ಸಮಾಜವಾದಿ, ಸ್ವತಂತ್ರಪಕ್ಷ ಹಾಗೂ ಸಂಸ್ಥಾ ಕಾಂಗ್ರೆಸ್ ಗಳು ತಮ್ಮ ಅಸ್ತಿತ್ವ ಕಳೆದುಕೊಂಡವು, ಆದರೆ ಆರೆಸ್ಸೆಸ್ ತನ್ನ ಅಸ್ತಿತ್ವ ಉಳಿಸಿಕೊಂಡು ಜನಸಂಘಕ್ಕೆ ಬಿಜೆಪಿ ಎಂಬ ಹೊಸ ಹೆಸರು ಕೊಟ್ಟು ಪ್ರಬಲವಾಗಿ ಬೆಳೆಯಿತು. ಈಗ ದೇಶದ ಅಧಿಕಾರ ಸೂತ್ರವೇ ಅದರ ಕೈಯಲ್ಲಿದೆ.

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಮೋದಿ ಎಂಬ ಸರ್ವಾಧಿಕಾರಿಯನ್ನು ಮುಂದಿಟ್ಟುಕೊಂಡು ಬಿಜೆಪಿ ಸರಕಾರ ಏನೇನು ಮಾಡಿತು ಎಂಬುದು ಎಲ್ಲರಿಗೂ ಗೊತ್ತಿದೆ. ರಿಸರ್ವ್ ಬ್ಯಾಂಕ್ ಗಮನಕ್ಕೆ ತಾರದೆ ಮಾಡಿದ ನೋಟು ಅಮಾನ್ಯೀಕರಣ, ಜಿಎಸ್‌ಟಿ ಅವಾಂತರ, ಸಿಬಿಐನಲ್ಲಿ ಹಸ್ತಕ್ಷೇಪ, ಚುನಾವಣಾ ಆಯೋಗವನ್ನು ನಿಯಂತ್ರಿಸಲು ನಡೆಸುತ್ತಿರುವ ಯತ್ನ, ಸಾಂವಿಧಾನಿಕ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿಸುವ ಹುನ್ನಾರ ಎಲ್ಲವನ್ನೂ ದೇಶ ನೋಡಿದೆ.

ತುರ್ತು ಪರಿಸ್ಥಿತಿ ಹೇರಿದರೂ ನಂತರ ಅದನ್ನು ವಾಪಸು ಪಡೆದ ಇಂದಿರಾ ಗಾಂಧಿ ಜನತಂತ್ರದ ಆಶಯಗಳನ್ನು ಮನ್ನಿಸಿದರು. ಆದರೆ ಅಘೋಷಿತ ತುರ್ತು ಪರಿಸ್ಥಿತಿ ಹೇರಿದ ಈ ಐವತ್ತಾರು ಇಂಚಿನ ವಿಶ್ವಗುರು ತನ್ನನ್ನು ತನ್ನ ಪರಿವಾರವನ್ನು ವಿರೋಧಿಸುವವರನ್ನೆಲ್ಲ ದೇಶದ್ರೋಹದ ಆರೋಪ ಹೊರಿಸಿ ಜೈಲಿಗೆ ತಳ್ಳಿದ್ದಾರೆೆ. ಬುದ್ಧಿಜೀವಿಗಳೇ ಈಗಿನ ಅಧಿಕಾರ ಸೂತ್ರ ಹಿಡಿದವರ ಮೊದಲ ಶತ್ರುಗಳು. ಅಂತಲೇ ಡಾ. ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸ್ಸಾರೆ, ಡಾ. ಎಂ. ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್‌ರ ಹತ್ಯೆಯ ಹಿಂದಿನ ಕೈವಾಡ ಇನ್ನೂ ಬಯಲಾಗಿಲ್ಲ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎಸ್‌ಐಟಿ ರಚಿಸಿದ್ದರಿಂದ ಹಂತಕರ ಜಾಲ ಭೇದಿಸಲು ಸಾಧ್ಯವಾಯಿತು. ಆದರೆ ಮಹಾರಾಷ್ಟ್ರದಲ್ಲಿ ಪನ್ಸಾರೆ ಹಂತಕರ ಜಾಲ ಪತ್ತೆ ಹಚ್ಚಲು ಇನ್ನೂ ಸಾಧ್ಯವಾಗಿಲ್ಲ. ಈ ವೈಫಲ್ಯಕ್ಕಾಗಿ ಅಲ್ಲಿನ ಬಿಜೆಪಿ ಸರಕಾರವನ್ನು ಮುಂಬೈ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಈ ಹಿನ್ನೆಲೆಯಲ್ಲಿ ಈಗ ನಡೆಯುತ್ತಿರುವ ಚುನಾವಣೆ ಹಿಂದಿನ ಚುನಾವಣೆಗಳಂತಲ್ಲ. ಈ ಬಾರಿ ನರೇಂದ್ರ ಮೋದಿ ನಾಯಕತ್ವದ ಬಿಜೆಪಿ ಗೆದ್ದರೆ ಈ ದೇಶದಲ್ಲಿ 2024ರಲ್ಲಿ ಚುನಾವಣೆ ನಡೆಯುವುದಿಲ್ಲ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ ಹೇಳಿದ ಮಾತನ್ನು ಹಗುರವಾಗಿ ತೆಗೆದುಕೊಳ್ಳಲು ಬರುವುದಿಲ್ಲ. ಚುನಾವಣೆ ನಡೆಯುವುದಿಲ್ಲ ಎಂದರೆ ಅದರ ಅರ್ಥ ಇಲ್ಲಿ ಈಗಿನ ಸಂವಿಧಾನ ಇರುವುದಿಲ್ಲ. ಪ್ರಜಾಪ್ರಭುತ್ವ ಮಾಯವಾಗುತ್ತದೆ. ಪ್ರಜಾಪ್ರಭುತ್ವ ಈ ದೇಶದ ಸಂಸ್ಕೃತಿಗೆ ಹೊಂದುವುದಿಲ್ಲ ಎಂದು ಆರೆಸ್ಸೆಸ್‌ನ ಹಿಂದಿನ ಗುರು ಮಾಧವ ಸದಾಶಿವ ಗೊಳ್ವಾಲ್ಕರ್ ಹೇಳಿದ್ದಾರೆ. ಅದರಂತೆ ಸ್ವಯಂ ಸೇವಕ ಮೋದಿ ನಡೆದುಕೊಳ್ಳಲೇಬೇಕು. ಈ ಚುನಾವಣೆಯ ಮೂಲಕ ಭಾರತವನ್ನು ಸಂಪೂರ್ಣ ಹಿಡಿತಕ್ಕೆ ತೆಗೆದುಕೊಂಡ ನಂತರ ನಾಝಿ ಜರ್ಮನಿಯ ಅವತಾರ ಉದಯವಾಗಲಿದೆ.

 ಹಿಂದೆಲ್ಲ ಚುನಾವಣೆ ಅಂದರೆ ಮತಗಟ್ಟೆಯ ಆಕ್ರಮಣ , ಹೆಂಡ ಸಾರಾಯಿ ಹಂಚಿಕೆ,ಹಣ ವಿತರಣೆಗಳು ನಡೆಯುತ್ತಿದ್ದವು. ಆದರೆ ಈಗ ಆರೆಸ್ಸೆಸ್ ಕಾರ್ಯಕರ್ತರ ಪಡೆಯ ವಿನೂತನ ತಂತ್ರ ಅನುಸರಿಸಿ ಲಕ್ಷಾಂತರ ಬೆಂಬಲಿಗರನ್ನು ಸೃಷ್ಟಿಸಲಾಗಿದೆ. ಮಾನಸಿಕ ಹಿಡಿತ ಸಾಧಿಸಲಾಗಿದೆ. ಪ್ರತಿ ಮತಗಟ್ಟೆಗೆ ಮತಗಟ್ಟೆ ಪ್ರಮುಖ ಹಾಗೂ ಮತದಾರರ ಪಟ್ಟಿಗೆ ಪ್ರತಿ ಪುಟಕ್ಕೆ ಒಬ್ಬ ಪ್ರಮುಖನನ್ನು ನೇಮಿಸಲಾಗಿದೆ. ಮಾಧ್ಯಮಗಳ ಮೂಲಕ ಮೋದಿ ಮೇನಿಯಾ ಸೃಷ್ಟಿಸಲಾಗಿದೆ. ರಫೇಲ್ ನಂತಹ ಭಾರೀ ಭ್ರಷ್ಟಾಚಾರದ ಹಗರಣದ ಬಗ್ಗೆ ಜನರು ಅದರಲ್ಲೂ ಯುವಕರು ಮಾತಾಡದಂತೆ ಜಾತಿ, ಧರ್ಮದ ಅನಸ್ತೇಸಿಯಾ ನೀಡಿ ಸಂಘಪರಿವಾರದ ಶಸತ್ರಚಿಕಿತ್ಸೆ ನಡೆದಿದೆ. ಇಲ್ಲಿ ಮೋದಿ ನಿಮಿತ್ತ ಮಾತ್ರ. ಆರೆಸ್ಸೆಸ್ ಮತ್ತು ಕಾರ್ಪೊರೇಟ್ ಬಂಡವಾಳಶಾಹಿಯ ಚೌಕಿದಾರನಾಗಿ ಆತ ಕೆಲಸ ಮಾಡುತ್ತಿದ್ದಾರೆ.

ಫ್ಯಾಶಿಸ್ಟ್ ಶಕ್ತಿಗಳ ಈ ದುಷ್ಟ ಹುನ್ನಾರವನ್ನು ಎದುರಿಸುವ ಸಂಘಟನಾಶಕ್ತಿ, ಇಚ್ಛಾಶಕ್ತಿ ಕಾಂಗ್ರೆಸ್‌ಗೆ ಇಲ್ಲ. ಕಮ್ಯುನಿಸ್ಟ್ ಪಕ್ಷಗಳಿಗೆ ಈ ಬಗ್ಗೆ ಅರಿವಿದೆ. ಆದರೆ ಅ ಪಕ್ಷಗಳ ನೇತೃತ್ವದ ಕಾರ್ಮಿಕ ಸಂಘಟನೆಗಳಲ್ಲೂ ಮೋದಿ ಬೆಂಬಲಿಗರಿದ್ದಾರೆ. ಸಂಘಟಿತ ಕಾರ್ಮಿಕ ವರ್ಗದ ವೋಟುಗಳೂ ಬಿಜೆಪಿಗೆ ಹೋಗುತ್ತವೆ. ಆದರೆ ಕೇರಳದಂಥ ರಾಜ್ಯದಲ್ಲಿ ಮಾತ್ರ ಕಮ್ಯುನಿಸ್ಟ್ ಚಳವಳಿ ಜನರ ಬದುಕಿನ ಭಾಗವಾಗಿರುವುದರಿಂದ ಅಲ್ಲಿ ಇಂದಿಗೂ ಅದು ಪ್ರಬಲವಾಗಿದೆ. ಅಂತಲೆ ಶಬರಿಮಲೆ ವಿವಾದದದಲ್ಲಿ ಸಂಘ ಪರಿವಾರದ ಆಟ ನಡೆಯಲಿಲ್ಲ,

ಇಂಥ ಸನ್ನಿವೇಶದಲ್ಲಿ ಜನತಂತ್ರದ ಕಾವಲುಗಾರಿಕೆ ವಹಿಸಬೇಕಾಗಿದ್ದ ಮಾಧ್ಯಮಗಳು ಮೋದಿ ಸರಕಾರದ ತುತ್ತೂರಿಗಳಾಗಿವೆ. ಆಳುವ ವರ್ಗ ಸಾಮಾಜಿಕ ಜೀವನದಲ್ಲಿ ತನ್ನದೇ ಆದ ದೊಡ್ಡ ಬೆಂಬಲಿಗರ ಪಡೆಯನ್ನು ತಯಾರು ಮಾಡಿದೆ. ಮೋದಿ ಸರಕಾರ ದಲಿತರ ಮೀಸಲಾತಿಯನ್ನು ರದ್ದು ಪಡಿಸಬೇಕೆಂದು ಬಯಸುವ ಮೇಲ್ಜಾತಿಯ ಮಧ್ಯಮ ವರ್ಗ ಈ ಸರಕಾರಕ್ಕೆ ಬೆಂಗಾವಲಾಗಿ ನಿಂತಿದೆ. ವಿವೇಚನೆ ಕಳೆದುಕೊಂಡ ಈ ವರ್ಗದಿಂದಲೇ ಭಕ್ತರ ದೊಡ್ಡ ಹಿಂಡು ತಯಾರಾಗಿದೆ. ಇಂಥ ಸನ್ನಿವೇಶದಲ್ಲಿ ಈ ಚುನಾವಣೆ ಬರೀ ಪಕ್ಷಗಳ ಸೋಲು ಗೆಲುವಿನ ಚುನಾವಣೆಯಲ್ಲ. ಇದು ಈ ದೇಶದ ಪ್ರಜಾಪ್ರಭುತ್ವದ ಸಂವಿಧಾನದ ಅಳಿವು ಉಳಿವಿನ ಚುನಾವಣೆ. ಈ ಚುನಾವಣೆಯಲ್ಲಿ ಪ್ರತಿ ಪಕ್ಷಗಳು ಒಂದುಗೂಡಿದರೆ ಮಾತ್ರ ಜನತಂತ್ರದ ವಿರುದ್ಧ ನಡೆದಿರುವ ಈ ಹುನ್ನಾರವನ್ನು ಸೋಲಿಸಬಹುದು. ರಾಷ್ಟ್ರೀಯ ಮಟ್ಟದಲ್ಲಿ ಸಾಧ್ಯವಾಗದಿದ್ದರೂ ರಾಜ್ಯಗಳ ಮಟ್ಟದಲ್ಲಾದರೂ ಬಿಜೆಪಿ ವಿರೋಧಿ ಪಕ್ಷಗಳು ಒಂದಾಗಬೇಕು. ಈಗ ನಾವು ಸಂವಿಧಾನವನ್ನು ರಕ್ಷಿಸಿದರೆ ಅದು ನಮ್ಮನ್ನು, ಇಡೀ ದೇಶವನ್ನು ರಕ್ಷಿಸುತ್ತದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ಜಗದಗಲ
ಜಗ ದಗಲ