"ಕಾರಣವಿಲ್ಲದೇ ಚುನಾವಣಾ ಕರ್ತವ್ಯದಿಂದ ವಿನಾಯಿತಿ ಕೋರಿದರೆ ಶಿಸ್ತುಕ್ರಮ"!

Update: 2019-03-21 17:47 GMT

ಶಿವಮೊಗ್ಗ, ಮಾ. 21: 'ಸಕಾರಣವಿಲ್ಲದೆ, ಅನಗತ್ಯವಾಗಿ ಚುನಾವಣಾ ಕರ್ತವ್ಯದಿಂದ ವಿನಾಯಿತಿ ಕೋರಿ ಬರುವವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು'. ಇದು, ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ, ಚುನಾವಣಾ ಕರ್ತವ್ಯಕ್ಕೆ ನಿಯೋಜಿತವಾಗಿರುವ ಸರ್ಕಾರಿ ನೌಕರರನ್ನುದ್ದೇಶಿಸಿ ಹಾಕಿರುವ ಫ್ಲೆಕ್ಸ್ ನಲ್ಲಿರುವ ಸಂದೇಶದ ಪ್ರಮುಖಾಂಶ.

ಒಂದೆಡೆ ಲೋಕಸಭೆ ಸಾರ್ವತ್ರಿಕ ಚುನಾವಣೆಯ ಯಶಸ್ಸಿಗೆ, ಜಿಲ್ಲಾ ಚುನಾವಣಾ ಆಯೋಗ ಸಮರೋಪಾದಿ ಸಿದ್ಧತೆ ನಡೆಸತೊಡಗಿದೆ. ಹಗಲಿರುಳು ತಯಾರಿ ನಡೆಸುತ್ತಿದೆ. ಕಾಲಿಗೆ ಚಕ್ರಕಟ್ಟಿಕೊಂಡವರ ರೀತಿಯಲ್ಲಿ ಹಿರಿಯ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೆಯೇ ಚುನಾವಣಾ ಕಾರ್ಯಕ್ಕೆ ಅಗತ್ಯ ಸಿಬ್ಬಂದಿ ನಿಯೋಜನೆ ಹಾಗೂ ತರಬೇತಿ ಕಾರ್ಯ ಕೂಡ ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ. 

ಇದೆಲ್ಲದರ ನಡುವೆಯೇ, ಚುನಾವಣಾ ಕಾರ್ಯಕ್ಕೆ ನಿಯೋಜನೆಯಾಗುವ ಅಧಿಕಾರಿ-ಸಿಬ್ಬಂದಿಗಳಲ್ಲಿ ಕೆಲವರು ನಾನಾ ಕಾರಣ ಮುಂದಿಟ್ಟುಕೊಂಡು ಚುನಾವಣಾ ಕಾರ್ಯಭಾರದಿಂದ ವಿನಾಯಿತಿ ನೀಡುವಂತೆ ಕೋರಿ ಜಿಲ್ಲಾಧಿಕಾರಿ ಕಚೇರಿಗೆ ದಿನನಿತ್ಯ ಎಡತಾಕಲಾರಂಭಿಸಿದ್ದಾರೆ. ಇದು ಡಿ.ಸಿ ಕೆ.ಎ.ದಯಾನಂದ್ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 

ದಿನದಿಂದ ದಿನಕ್ಕೆ ಕರ್ತವ್ಯದಿಂದ ವಿನಾಯಿತಿ ಕೋರಿ ಕಚೇರಿಗೆ ಆಗಮಿಸುವ ನೌಕರರ ಸಂಖ್ಯೆ ಹೆಚ್ಚುತ್ತಿದೆ. ಕರ್ತವ್ಯಕ್ಕೆ ಅಧಿಕೃತವಾಗಿ ನಿಯೋಜಿಸಿದ ನಂತರ, ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳೂ ಇವೆ. ಈ ಎಲ್ಲ ಕಾರಣಗಳಿಂದ ಜಿಲ್ಲಾಧಿಕಾರಿಗಳು, ತಮ್ಮ ಕೊಠಡಿಯ ಪ್ರವೇಶ ದ್ವಾರದ ಬಳಿಯೇ 'ವಿಶೇಷ ಸೂಚನೆ' ಫ್ಲೆಕ್ಸ್ ಹಾಕಿಸಿದ್ದಾರೆ. 

'ಚುನಾವಣಾ ಕರ್ತವ್ಯಕ್ಕೆ ವಿನಾಯಿತಿ ಕೋರಿ ಗರ್ಭೀಣಿ ಸ್ತ್ರೀಯರು ಹಾಗೂ 9 ತಿಂಗಳ ಒಳಗಿನ ಹಸುಗೂಸಿನ ತಾಯಂದಿರುಗಳನ್ನು ಹೊರತುಪಡಿಸಿ, ಬೇರೆ ಯಾವುದೇ ರೀತಿಯ ಸಕಾರಣಗಳನ್ನು ನೀಡಿ ಚುನಾವಣಾ ಕರ್ತವ್ಯದ ವಿನಾಯಿತಿಗಾಗಿ ಕಚೇರಿಗೆ ಆಗಮಿಸುವುದು ಸಮಂಜಸವಲ್ಲ. ಅನಗತ್ಯವಾಗಿ ಚುನಾವಣಾ ಕರ್ತವ್ಯಕ್ಕೆ ವಿನಾಯಿತಿ ಕೋರಿ ಬರುವವರ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದು' ಎಂದು ಎಚ್ಚರಿಕೆ ನೀಡಿದ್ದಾರೆ. 

ಈ ಫ್ಲೆಕ್ಸ್ ಅಳವಡಿಕೆಯ ನಂತರ, ವಿನಾಯಿತಿ ಕೋರಿಕೊಂಡು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಲು ಆಗಮಿಸುವ ಅಧಿಕಾರಿ - ಸಿಬ್ಬಂದಿಗಳ ಸಂಖ್ಯೆ ಇಳಿಕೆಯಾಗಿದೆ. ಡಿ.ಸಿ ಕಚೇರಿ ಬಾಗಿಲ ಮುಂಭಾಗದಲ್ಲಿ ಹಾಕಿರುವ ಖಡಕ್ ಎಚ್ಚರಿಕೆಯ ಸಂದೇಶ ಗಮನಿಸಿ ಹಾಗೂ ಶಿಸ್ತುಕ್ರಮಕ್ಕೆ ತುತ್ತಾಗುವ ಭೀತಿಯಿಂದ, ಕೆಲವರು ಡಿ.ಸಿ ಯನ್ನು ಭೇಟಿಯಾಗುವ ಗೋಜಿಗೆ ಹೋಗದೆ ಹಿಂದಿರುಗುತ್ತಿದ್ದಾರೆ. 

ಕೆಲಸ ಮಾಡಬೇಕು: ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ್‍ರವರು ಮಾತನಾಡಿದರು. ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗುವವರು ಪ್ರಸ್ತುತ ಸೂಚಿಸಲಾಗಿರುವ ಕಾರಣಗಳು ಹೊರತುಪಡಿಸಿ, ಉಳಿದ ಕಾರಣ ಮುಂದಿಟ್ಟುಕೊಂಡು ಕರ್ತವ್ಯದಿಂದ ಬಿಡುಗಡೆ ಕೋರಿ ಕಚೇರಿಗೆ ಆಗಮಿಸಬಾರದು. ಸಕಾರಣವಿದ್ದವರಿಗೆ ಮಾತ್ರ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. 

ಕೆಲವರು ಸಣ್ಣಪುಟ್ಟ ವಿಷಯ, ವೈಯಕ್ತಿಕ ಕಾರಣ ಮುಂದಿಡುತ್ತಿದ್ದಾರೆ. ಇನ್ನೂ ಕೆಲವರು ಸುಳ್ಳು ಮಾಹಿತಿ ಕೂಡ ನೀಡುತ್ತಿದ್ದಾರೆ. ಇದು ಜಿಲ್ಲಾಧಿಕಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಕಾರಣದಿಂದ ನಿರ್ದಿಷ್ಟ ಕಾರಣ ಹೊರತುಪಡಿಸಿ ಉಳಿದವರು ಚುನಾವಣಾ ಕರ್ತವ್ಯದಿಂದ ವಿನಾಯಿತಿ ಕೋರಿಕೊಂಡು ಬಂದರೆ, ಕಠಿಣ ಕ್ರಮ ಜರುಗಿಸುವ ಎಚ್ಚರಿಕೆಯ ಸಂದೇಶವನ್ನು ಡಿ.ಸಿ ಯವರು ಹಾಕುವಂತಾಗಿದೆ' ಎಂದು ಹೆಸರೇಳಲಿಚ್ಚಿಸದ ಚುನಾವಣಾ ವಿಭಾಗದ ಸಿಬ್ಬಂದಿಯೋರ್ವರು ಹೇಳುತ್ತಾರೆ. 

ನೌಕರರ ಬಳಕೆ: ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. ಕಳೆದ ನಾಲ್ಕು ತಿಂಗಳ ಹಿಂದೆ ನಡೆದ ಲೋಕಸಭೆ ಉಪ ಚುನಾವಣೆ ವೇಳೆ, ಒಟ್ಟಾರೆ ಸರಿಸುಮಾರು 12 ಸಾವಿರ ಸರ್ಕಾರಿ ನೌಕರರನ್ನು ಚುನಾವಣಾ ಆಯೋಗ ಬಳಕೆ ಮಾಡಿತ್ತು. ಈ ಬಾರಿಯೂ ಕೂಡ ಅಷ್ಟೆ ಪ್ರಮಾಣದ ನೌಕರರನ್ನು ನಿಯೋಜನೆಯಾಗುವ ಸಾಧ್ಯತೆಗಳಿವೆ. 

ನೆಪ ಹೇಳುವುದು ಸರಿಯಲ್ಲ : ಡಿ.ಸಿ ಕೆ.ಎ.ದಯಾನಂದ್
ಚುನಾವಣಾ ಕರ್ತವ್ಯಕ್ಕೆ ನಿಯೋಜನೆಯಾದವರಲ್ಲಿ ಕೆಲವರು ನಾನಾ ನೆಪ ಹೇಳಿಕೊಂಡು, ಚುನಾವಣಾ ಕಾರ್ಯಭಾರದಿಂದ ವಿನಾಯಿತಿ ಕೇಳಿಕೊಂಡು ಬರುತ್ತಾರೆ. ಇದು ಸರಿಯಾದ ಕ್ರಮವಲ್ಲ. ಈ ರೀತಿ ಅಹವಾಲು ಹೇಳಿಕೊಂಡು ಆಗಮಿಸುವ ನೌಕರರಿಂದ, ನಮ್ಮ ಸಮಯವು ವ್ಯರ್ಥವಾಗುತ್ತದೆ. ಈ ಕಾರಣದಿಂದ ಕಚೇರಿ ಹೊರ ಭಾಗದಲ್ಲಿ ವಿಶೇಷ ಸೂಚನೆಯ ಪ್ರಕಟಣೆ ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ತಿಳಿಸುತ್ತಾರೆ. 

ಎಲ್ಲರ ಸಹಕಾರ ಅಗತ್ಯ: ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ
ಚುನಾವಣೆಯ ಯಶಸ್ವಿಗೆ ಇಡೀ ಜಿಲ್ಲಾಡಳಿತ ಹಗಲಿರುಳು ಕಾರ್ಯನಿರ್ವಹಿಸುತ್ತಿದೆ. ಹಿರಿಯ ಅಧಿಕಾರಿಗಳು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಹಾಗೆಯೇ ವಿವಿಧ ಇಲಾಖೆಯ ಅಧಿಕಾರಿ-ನೌಕರರು ಕೂಡ ಈ ನಿಟ್ಟಿನಲ್ಲಿ ಪ್ರಾಮಾಣಿಕ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಹಾಗೆಯೇ ವಿನಾ ಕಾರಣ ಚುನಾವಣಾ ಕರ್ತವ್ಯದಿಂದ ವಿನಾಯಿತಿ ಕೋರಿ ಜಿಲ್ಲಾಧಿಕಾರಿ, ಇತರೆ ಹಿರಿಯ ಅಧಿಕಾರಿಗಳನ್ನು ಭೇಟಿಯಾಗುವುದು ಸರಿಯಲ್ಲ. ಆದರೆ ಸಕಾರಣವಿದ್ದವರಿಗೆ ಜಿಲ್ಲಾಡಳಿತ ಕರ್ತವ್ಯದಿಂದ ವಿನಾಯಿತಿ ಕೊಡುತ್ತದೆ. ನೌಕರರು ಚುನಾವಣೆಯ ಯಶಸ್ಸಿಗೆ ಶ್ರಮಿಸಬೇಕು. ಈ ವಿಷಯದಲ್ಲಿ ಜಿಲ್ಲಾಡಳಿತಕ್ಕೆ ನೌಕರರ ಸಂಘವು ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದ್ದಾರೆ. 

ನಮ್ಮೆಲ್ಲರ ಆದ್ಯ ಕರ್ತವ್ಯ: ನೌಕರ ನವೀನ್‍ಮೂರ್ತಿ
ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬವಾಗಿದೆ. ಹಾಗೆಯೇ ಅತ್ಯಂತ ಮಹತ್ವದ್ದಾಗಿದೆ. ಜಿಲ್ಲಾಡಳಿತ ಹಾಗೂ ಹಿರಿಯ ಅಧಿಕಾರಿಗಳು ಸೂಚಿಸುವ ಕರ್ತವ್ಯ ನಿರ್ವಹಿಸುವುದು ಪ್ರತಿಯೋರ್ವ ಸರ್ಕಾರಿ ನೌಕರನ ಆದ್ಯ ಕರ್ತವ್ಯವಾಗಿದೆ. ಈ ವಿಷಯದಲ್ಲಿ ದಿನದ 24 ಗಂಟೆಯೂ ಸನ್ನದ್ದವಾಗಿರಬೇಕಾಗುತ್ತದೆ. ಪ್ರಾಮಾಣಿಕತೆ, ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು. ಈ ಮೂಲಕ ಚುನಾವಣೆಯ ಯಶಸ್ವಿಗೆ ನಾವೆಲ್ಲರೂ ಶ್ರಮಿಸಬೇಕು' ಎಂದು ನೌಕರ ಕೆ.ನವೀನ್‍ ಮೂರ್ತಿಯವರು ಅಭಿಪ್ರಾಯಪಡುತ್ತಾರೆ. 

Writer - ವರದಿ: ಬಿ.ರೇಣುಕೇಶ್

contributor

Editor - ವರದಿ: ಬಿ.ರೇಣುಕೇಶ್

contributor

Similar News