ಕತೆಗಳ ಹಿಂದಿನ ಕತೆ-ಸಂಶೋಧನಾ ಕೃತಿ

Update: 2019-03-21 18:38 GMT

ಕನ್ನಡ ಸಣ್ಣ ಕತೆಗಳಿಗೆ ಸುದೀರ್ಘ ಇತಿಹಾಸವಿದೆ. ವಡ್ಡಾರಾಧನೆಯಿಂದ ಹಿಡಿದು ಇತ್ತೀಚಿನ ನ್ಯಾನೋ ಕತೆಗಳವರೆಗೆ ಕಾಲಕಾಲಕ್ಕೆ ಕತೆಗಳು ವಿಭಿನ್ನವಾಗಿ ಸ್ಪಂದಿಸುತ್ತಾ ಬಂದಿವೆೆ. ಧಾರ್ಮಿಕ ಹಿನ್ನೆಲೆಯಾಗಿ ಹುಟ್ಟಿದ ಕತೆಗಳು ನಿಧಾನಕ್ಕೆ ಅಧ್ಯಾತ್ಮಿಕ, ಸಾಮಾಜಿಕ ವಿಷಯಗಳಿಗೆ ಸ್ಪಂದಿಸುತ್ತಾ ಹೋಯಿತು. ಕತೆಗಳು ಜನಕೇಂದ್ರಿತವಾದಂತೆಯೇ ಸಣ್ಣ ಕತೆಗಳು ತಮ್ಮ ವ್ಯಾಪ್ತಿಯನ್ನು ಹಿಗ್ಗಿಸಿದವು. ಕತೆಗಳೆನ್ನುವುದು ಕೇವಲ ಮನರಂಜನೆಗಷ್ಟೇ ಸೀಮಿತವಾಗುಳಿಯದೆ ಸಾಮಾಜಿಕ, ರಾಜಕೀಯ ಪ್ರತಿಕ್ರಿಯೆ ಗಳಾಗಿಯೂ ಹೊರಹೊಮ್ಮ ತೊಡಗಿದವು. ಇದೀಗ ಕನ್ನಡದ ಸಣ್ಣ ಕತೆಗಳ ಚರಿತ್ರೆಯನ್ನು ಒಟ್ಟುಗೂಡಿಸುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡಿದೆ. ಡಾ. ಜಿ. ಆರ್. ತಿಪ್ಪೇಸ್ವಾಮಿ ಅವರು, ಸಣ್ಣ ಕತೆ ನಡೆದು ಬಂದ ದಾರಿಯನ್ನು ಅನ್ವೇಷಿಸಿದ್ದಾರೆ.
 ಆರಂಭದಲ್ಲಿ ಸಣ್ಣ ಕತೆಗಳ ಪ್ರಾಚೀನತೆಯನ್ನು ಲೇಖಕರು ಗುರುತಿಸುತ್ತಾರೆ. ಜೈನಧರ್ಮದ ಪ್ರಚಾರದ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ವಡ್ಡಾರಾಧನೆ ಕತೆಗಳು ನಿಧಾನಕ್ಕೆ ಪಡೆಯುವ ವಿಕಾಸದ ಹಂತಗಳನ್ನು ಅವರು ವಿವರಿಸುತ್ತಾರೆ. ಮುದ್ದಣನ ಕಾಲಘಟ್ಟದಲ್ಲಿ ಗದ್ಯ ಪಡೆದುಕೊಳ್ಳುವ ತಿರುವು, ಕನ್ನಡ ಕತೆಗಳ ಮೇಲಿನ ಪಾಶ್ಚಾತ್ಯ ಪ್ರಭಾವ ಇತ್ಯಾದಿಗಳನ್ನು ಮೊದಲ ಅಧ್ಯಾಯದಲ್ಲಿ ಲೇಖಕರು ಚರ್ಚಿಸುತ್ತಾರೆ. ಪಂಜೆ ಮಂಗೇಶರಾಯರು, ಕೆರೂರು ವಾಸುದೇವಾಚಾರ್ಯರು, ಎಂ. ಎನ್. ಕಾಮತ್, ಮಾಸ್ತಿ, ನವರತ್ನ ರಾಮರಾಯ, ಅಜ್ಜಂಪುರ ಸೀತಾರಾಮ್...ಹೀಗೆ ಕನ್ನಡದ ಹಿರಿಯ ೇಖಕರ ಮೂಲಕ ಕನ್ನಡ ಕತೆಗಳು ನಿಧಾನಕ್ಕೆ ಹೇಗೆ ಪುಷ್ಟಿಗೊಳ್ಳುತ್ತಾ ಹೋದವು   ಎನ್ನುವುದನ್ನು ವಿವರಿಸುತ್ತಾರೆ.
 ಬಳಿಕ ನವೋದಯ, ಪ್ರಗತಿಶೀಲ, ನವ್ಯದ ಮೂಲಕ ಕತೆಗಳನ್ನು ಗುರುತಿಸುತ್ತಾರೆ. ಸ್ವಾತಂತ್ರ ಹೋರಾಟವೂ ಕತೆಗಳ ಮೇಲೆ ತನ್ನದೇ ಪ್ರಭಾವವನ್ನು ಬೀರಿದ್ದು, ನವೋದಯ ಕಾಲದಲ್ಲಿ ಹುಟ್ಟಿದ ಕತೆಗಾರರು ಈ ಹೋರಾಟಗಳನ್ನು ತಮ್ಮ ವಸ್ತುವಾಗಿ ಆರಿಸಿರುವುದನ್ನು ಲೇಖಕರು ಗಮನಿಸುತ್ತಾರೆ. ನವೋದಯದಲ್ಲಿ ಅತ್ಯುತ್ಸಾಹದಿಂದ ತೊಡಗಿಕೊಂಡ ಮಹಿಳಾ ಲೇಖಕಿಯರ ಪಟ್ಟಿಯನ್ನು, ಅವರ ಹಿನ್ನೆಲೆಗಳನ್ನು ಕೃತಿ ದಾಖಲಿಸುತ್ತದೆ. 1970ರಿಂದ 2000ದ ವರೆಗಿನ ಕತೆಗಳಲ್ಲಿನ ದಲಿತ ಬಂಡಾಯ, ದಲಿತ ಸಂವೇದನೆ, ಸ್ತ್ರೀ ಸಂವೇದನೆ, ಮುಸ್ಲಿಮ್ ಸಂವೇದನೆಗಳನ್ನು ಲೇಖಕರು ಗುರುತಿಸುತ್ತಾರೆ. ಹೊಸ ಕತೆಗಾರರ ಹೊಸ ಪ್ರಯೋಗಗಳ ಕಡೆಗೂ ಅವರು ಬೆಳಕು ಚೆಲ್ಲುತ್ತಾರೆ. ಕನ್ನಡ ಕತೆಗಳ ಇತಿಹಾಸವನ್ನು ನಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಈ ಕೃತಿ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು, ಬರಹಗಾರರಿಗೆ ಈ ಕೃತಿ ಪ್ರಯೋಜನಕಾರಿಯಾಗಿದೆ.456 ಪುಟಗಳ ಈ ಕೃತಿಯ ಮುಖಬೆಲೆ 350 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News