ಅಂಬೇಡ್ಕರ್ ಬದುಕು ಸಾಧನೆಗಳನ್ನು ತೆರೆದಿಡುವ ‘ವಿಮೋಚಕನ ಹೆಜ್ಜೆಗಳು’
‘ವಿಮೋಚಕನ ಹೆಜ್ಜೆಗಳು’ ಡಾ. ಎಚ್. ಎಸ್. ಅನುಪಮಾ ಅವರು ಬರೆದಿರುವ ಡಾ. ಬಿ. ಆರ್. ಅಂಬೇಡ್ಕರ್ ಅವರ ಬದುಕು ಸಾಧನೆಗಳ ಕತೆ. ಗಾಂಧಿಯ ಬದುಕಿನ ಮೇಲೆ ಬೆಳಕು ಚೆಲ್ಲಿದಷ್ಟು, ಅಂಬೇಡ್ಕರ್ ಬದುಕಿನ ಮೇಲೆ ಬರಹಗಳು ಬೆಳಕು ಚೆಲ್ಲಿದ್ದು ತೀರಾ ಕಡಿಮೆ. ಅಂಬೇಡ್ಕರ್ ಅವರು ಎರಡು ಬಗೆಯ ಸ್ವಾತಂತ್ರ ಹೋರಾಟದಲ್ಲಿ ಗುರುತಿಸಿಕೊಂಡರು. ಒಂದು, ಬ್ರಿಟಿಷರ ವಿರುದ್ಧ ಭಾರತೀಯರ ಬಿಡುಗಡೆಗಾಗಿ ಹೋರಾಡಿದ್ದಾದರೆ, ಇನ್ನೊಂದು, ಭಾರತೀಯರೆನಿಸಿಕೊಂಡ ಮೇಲ್ಜಾತಿಯಿಂದ ಕೆಳಜಾತಿಗಳ ಬಿಡುಗಡೆಗೆ ನಡೆಸಿದ ಹೋರಾಟ. ಅವರ ಹೋರಾಟಗಳ ಒಳ ಸಂಘರ್ಷಗಳನ್ನು ಈ ಕೃತಿ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ.
ಕೃತಿಯಲ್ಲಿ ಒಟ್ಟು 42 ಅಧ್ಯಾಯಗಳಿವೆ. ದೇಶದ ಜಾತಿ ರಾಜಕೀಯಗಳನ್ನು ವಿಮರ್ಶಿಸುತ್ತಾ, ಅದರ ವಿರುದ್ಧ ಅಂಬೇಡ್ಕರ್ ಹಂತ ಹಂತವಾಗಿ ಹೇಗೆ ಜನರನ್ನು ಸಂಘಟಿತಗೊಳಿಸಿದ್ದರು ಎನ್ನುವ ಕುರಿತ ರೋಚಕ ವಿವರಗಳು ಇದರಲ್ಲಿವೆ. ಅವರ ಬಾಲ್ಯ, ಶಿಕ್ಷಣ, ಅಧ್ಯಯನ ಇವೆಲ್ಲವುಗಳನ್ನು ಆರಂಭದಲ್ಲಿ ಕಟ್ಟಿಕೊಂಡರೆ, ಮಹಾಡ್ ಕೆರೆಯ ನೀರು ಕುಡಿದದ್ದು, ಮನುಸ್ಮತಿ ದಹನ, ಗಾಂಧಿ ಅಂಬೇಡ್ಕರ್ ನಡುವಿನ ತಿಕ್ಕಾಟ, ಪೂನಾ ಒಪ್ಪಂದ, ಹರಿಜನ ಪದ ಬಳಕೆಯ ವಿರುದ್ಧ ಹೋರಾಟ, ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರ, ಚುನಾವಣೆ, ಸ್ವತಂತ್ರ ಕಾರ್ಮಿಕ ಪಕ್ಷ ಸ್ಥಾಪನೆ, ಪತ್ರಿಕಾ ಹೋರಾಟ, ಸಂವಿಧಾನ ರಚನೆಯ ಹಿನ್ನೆಲೆ, ಮುನ್ನೆಲೆ, ಸಂಸಾರಿಗರಾಗಿ ಅಂಬೇಡ್ಕರ್ ...ಹೀಗೆ ಅಂಬೇಡ್ಕರ್ ಸಾಗಿದ ದಾರಿಯನ್ನು ಈ ಕೃತಿ ಅವಲೋಕಿಸುತ್ತದೆ. ಹಾಗೆಯೇ ಅಂಬೇಡ್ಕರ್ ಹೋರಾಟದಲ್ಲಿ ಕೈಜೋಡಿಸಿದ ಸಹಯಾನಿಗಳ ಬಗ್ಗೆಯೂ ವಿವರಗಳನ್ನು ನೀಡುತ್ತದೆ. ಅಂಬೇಡ್ಕರ್‌ರ ಆನಂತರ ಹೇಗೆ ಅಂಬೇಡ್ಕರ್ ಚಿಂತನೆಗಳನ್ನು ತಿರುಚಲು ಸಂಘಪರಿವಾರ ಹವಣಿಸುತ್ತಿದೆ, ಅಂಬೇಡ್ಕರ್ ಚಿಂತನೆಗಳನ್ನು ರಾಜಕೀಯ ಶಕ್ತಿಗಳು ಹೇಗೆ ಮೂಲೆಗುಂಪು ಮಾಡಿದವು ಎನ್ನುವುದನ್ನು ಲೇಖಕಿ ಕೊನೆಯಲ್ಲಿ ಚರ್ಚಿಸುತ್ತಾರೆ.
ಅಂಬೇಡ್ಕರ್ ಕೇವಲ ಸಂಕೇತವಾಗಬಾರದು, ಜಾಗೃತ ಪ್ರಜ್ಞೆಯಾಗಿ ಮನಸ್ಸುಗಳಲ್ಲಿ ಇಳಿಯಬೇಕು, ಹೋರಾಟ ಅಂಬೇಡ್ಕರ್ ಕಾಲಕ್ಕೇ ಮುಗಿದು ಹೋಗಲಿಲ್ಲ. ಅದು ನಿರಂತರ ಮುಂದುವರಿಯಬೇಕು ಎನ್ನುವ ಸದಾಶಯವನ್ನು ಕೃತಿ ತೆರೆದಿಡುತ್ತದೆ.
ಲಡಾಯಿ ಪ್ರಕಾಶನ ಗದಗ ಈ ಕೃತಿಯನ್ನು ಹೊರತಂದಿದೆ. 300 ಪುಟಗಳ ಈ ಕೃತಿಯ ಮುಖಬೆಲೆ 150 ರೂಪಾಯಿ. ಆಸಕ್ತರು 9480286844 ದೂರವಾಣಿಯನ್ನು ಸಂಪರ್ಕಿಸಬಹುದು.