ಮಿಸ್ಸಿಂಗ್ ಬಾಯ್: ಕಳೆದುಕೊಂಡವರ ಕುರಿತಾದ ಕಳೆದುಕೊಳ್ಳಬಾರದಂಥ ಚಿತ್ರ
ತಾಯಿ ಮಮತೆ ಜಾಗತಿಕವಾಗಿರುವ ಭಾವನಾತ್ಮಕ ಬಂಧ. ಅದರಲ್ಲಿಯೂ ತಾಯಿಯ ಕುರಿತಾದ ಸಿನೆಮಾಗಳನ್ನು ಭಾರತೀಯರು ಕೈ ಬಿಡುವುದೇ ಇಲ್ಲ. ಅಂಥದೊಂದು ದೊಡ್ಡ ಪ್ರೇಕ್ಷಕ ಸಮೂಹವನ್ನೇ ಸೆಳೆಯುವ ರೀತಿಯಲ್ಲಿ ಮೂಡಿ ಬಂದಿರುವ ಚಿತ್ರ ಮಿಸ್ಸಿಂಗ್ ಬಾಯ್.
ಯುರೋಪ್‌ನಲ್ಲಿ ಜನಪ್ರಿಯ ಯುವ ಉದ್ಯಮಿ ನಿಶ್ಚಯ್. ಆತ ಅಲ್ಲಿ ತನ್ನ ತಂದೆ ತಾಯಿಯೊಂದಿಗೆ ವಾಸವಾಗಿರುತ್ತಾನೆ. ಅಲ್ಲಿನ ಟಿ.ವಿ. ಮಾಧ್ಯಮವೊಂದು ಆತನ ಸಂದರ್ಶನ ಮಾಡುತ್ತದೆ. ಮೂಲತಃ ಕನ್ನಡಿಗಳಾದ ನಿರೂಪಕಿ ನನಸು ಎನ್ನುವಾಕೆ ಈ ಸಂದರ್ಶನವನ್ನು ನಡೆಸಿಕೊಡುತ್ತಾಳೆ. ಸಂದರ್ಶನದ ನಡುವೆ ನಿಶ್ಚಯ್ ತನ್ನ ನಿಜವಾದ ತಾಯಿಯ ಬಗ್ಗೆ ನೆನಪಿಸಿಕೊಂಡು ಕಣ್ಣೀರಾಗುತ್ತಾನೆ. ಅಂದರೆ 25 ವರ್ಷಗಳ ಹಿಂದೆ ತನ್ನನ್ನು ಅನಾಥಾಲಯಕ್ಕೆ ನೀಡಿದಂಥ ಆ ತಾಯಿ ಯಾರು ಎಂದು ಪತ್ತೆಗೈಯಲು ಭಾರತಕ್ಕೆ ಹೋಗುವುದಾಗಿ ತನ್ನನ್ನು ಸಾಕುತ್ತಿರುವ ತಂದೆ ತಾಯಿಗೆ ಹೇಳುತ್ತಾನೆ. ಈ ಪ್ರಯಾಣದಲ್ಲಿ ಮಾಧ್ಯಮದ ಕಣ್ಣಾಗಿ ನನಸು ಕೂಡ ಜೊತೆಯಾಗುತ್ತಾಳೆ. 25 ವರ್ಷಗಳ ಹಿಂದೆ ತನ್ನನ್ನು ಅನಾಥಾಶ್ರಮದಲ್ಲಿ ಬಿಟ್ಟು ಹೋದ ತಾಯಿಯನ್ನು ಪತ್ತೆ ಮಾಡುವ ಶ್ರಮವೇ ಚಿತ್ರ ಪ್ರಮುಖ ಅಂಶ.
ತಾಯಿಯನ್ನು ಕಂಡ ಸ್ಪಷ್ಟ ನೆನಪಿರದ ಮಗ ಆಕೆಗಾಗಿ ಹುಡುಕಾಟ ನಡೆಸುವುದು ಆಕರ್ಷಕ ವಿಚಾರ ಸರಿ. ಆದರೆ ಆ ಹುಡುಕಾಟವನ್ನು ಆಸಕ್ತಿಯುತವಾಗಿ ತೋರಿಸುವುದು ನಿಜಕ್ಕೂ ಕ್ಲಿಷ್ಟಕರ ಸಂಗತಿ. ಆದರೆ ಬೆಂಗಳೂರಿಗೆ ಬಂದೊಡನೆ ಆ ಹುಡುಕಾಟಕ್ಕೆ ಲವಕುಮಾರ್ ಎನ್ನುವ ಎಸಿಪಿ ನೀಡುವ ಸಾಥ್, ಅದಕ್ಕೊಂದು ಶಕ್ತಿ ನೀಡುತ್ತದೆ. ಆಹಾರಗಳ ಮೂಲಕ, ವಸ್ತ್ರ ವೈವಿಧ್ಯಗಳ ಮೂಲಕ ಪತ್ತೆಗೆ ಪ್ರಯತ್ನಿಸುವ ಆತನ ಪ್ರಯತ್ನ ಶ್ಲಾಘನೀಯ ಎನಿಸುತ್ತದೆ. ಹುಬ್ಬಳ್ಳಿಯ ತನಕ ಸಾಗುವ ಹುಡುಕಾಟದ ಪಯಣದಲ್ಲಿ ಹಲವಾರು ತಾಯಂದಿರು ಬಂದು ಹೋಗುತ್ತಾರೆ. ಈತ ತನ್ನ ಮಗನೇ ಇರಬಹುದು ಎಂದುಕೊಂಡು ಬರುವ ತಾಯಿ ಒಂದು ಕಡೆಯಾದರೆ, ನಿಶ್ಚಯ್‌ನ ಆಸ್ತಿಗಾಗಿ ಆಸೆಪಟ್ಟು ತಾಯಿ ಎನ್ನುವ ಸೋಗಿನಲ್ಲಿ ಬರುವ ಮಹಿಳೆಯನ್ನೂ ಚಿತ್ರದಲ್ಲಿ ತೋರಿಸಲಾಗಿದೆ. ಜೊತೆಗೆ ಕೈಕಾಲು ಸ್ವಾಧೀನ ಕಳೆದುಕೊಂಡ ಮಗನನ್ನು ಅಕ್ಕರೆಯಿಂದ ನೋಡಿಕೊಳ್ಳುವ ತಾಯಿಯನ್ನು ಕೂಡ ತೋರಿಸಲಾಗಿದೆ. ಒಟ್ಟಿನಲ್ಲಿ ಸದಭಿರುಚಿಯ ಚಿತ್ರವೊಂದನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ.
ಯುರೋಪ್‌ನ ಐಶಾರಾಮಿ ದೃಶ್ಯಗಳಿಂದ ಆರಂಭವಾಗುವ ಚಿತ್ರ, ಅಲ್ಲಿನ ಭಾರತೀಯ ಮನಸ್ಸುಗಳ ಮೂಲಕ ಮನಸ್ಸಿಗೆ ಹತ್ತಿರವಾಗುತ್ತವೆ. ಅದರಲ್ಲಿಯೂ ಜೈಜಗದೀಶ್ ಮತ್ತು ವಿಜಯಲಕ್ಷ್ಮೀಸಿಂಗ್ ದಂಪತಿಯ ಪುತ್ರ ನಿಶ್ಚಯ್ ಪಾತ್ರದಲ್ಲಿ ಗುರುನಂದನ್ ಬಲು ಬೇಗ ಆಪ್ತವಾಗುತ್ತಾರೆ. ಅವರಿಗೆ ಹಾಸ್ಯದ ಇಮೇಜ್ ಮುರಿಯುವಂಥ ಚಿತ್ರ ಇದು ಎನ್ನಬಹುದು. ಆತನಿಗೆ ಯುರೋಪ್ ವಾಹಿನಿಯ ಪ್ರತಿನಿಧಿಯಾಗಿ ಸಾಥ್ ನೀಡುವ ‘ನನಸು’ ಎನ್ನುವ ಯುವತಿಯಾಗಿ ಅರ್ಚನಾ ಜಯಕೃಷ್ಣನ್ ನಟಿಸಿದ್ದಾರೆ. ವಿದೇಶದಲ್ಲಿದ್ದಾಗ ಲಕ್ಷಣವಾಗಿ ಕಾಣುವ ಆಕೆ, ಅದೇಕೋ ಭಾರತಕ್ಕೆ ಕಾಲಿಟ್ಟೊಡನೆ ಕನ್ನಡಕ ಧರಿಸಿ ಕಳೆಗುಂದಿದ ಹಾಗೆ ಭಾಸವಾಗುತ್ತಾರೆ. ಲವ ಕುಮಾರ್ ಎನ್ನುವ ಪೊಲೀಸ್ ಅಧಿಕಾರಿಯಾಗಿ ರಂಗಾಯಣ ರಘು ತಮ್ಮ ಎಂದಿನ ಅತಿಯಾದ ಲವಲವಿಕೆ ಬದಿಗಿಟ್ಟು ಗಂಭೀರವಾದ ನಟನೆ ನೀಡಿದ್ದಾರೆ.
ಬಹುಶಃ ಅದು ನೈಜವಾಗಿ ಲವಕುಮಾರ್ ಎನ್ನುವ ವ್ಯಕ್ತಿಯ ಪಾತ್ರ ಎಂಬ ಕಾರಣದಿಂದಲೇ ಸಹಜ ನಟನೆಗೆ ಯತ್ನಿಸಿರಬಹುದು. ಇವರ ಹುಡುಕಾಟದ ವಾಹನಕ್ಕೆ ಚಾಲಕನಾಗಿ ರವಿಶಂಕರ್ ಗೌಡ ಉತ್ಸಾಹದ ಮಾತುಗಳ ಬಾಬ ಭಕ್ತನಾಗಿ ಚಿತ್ರಕ್ಕೆ ಹುರುಪು ತುಂಬಿದ್ದಾರೆ. ಮಿಮಿಕ್ರಿ ಗೋಪಿಯ ನಟನೆಯನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬಹುದು. ತಾಯಂದಿರಾಗಿ ಒಂದೇ ದೃಶ್ಯದಲ್ಲಿ ಬಂದರೂ ನಟಿಯರಾದ ಸುಮಿತ್ರಾ ಬಾಬು ಮತ್ತು ರಾಧಾರಾಮಚಂದ್ರ ತಮ್ಮ ನಟನೆಯ ಮೂಲಕ ಮಾತೃ ಹೃದಯ ತೆರೆದಿಡುವಲ್ಲಿ ಯಶಸ್ವಿಯಾಗಿದ್ದಾರೆ. ಸಂಭಾಷಣೆಗಳು ಸಹಜವಾಗಿರುವುದು ಮತ್ತು ಯಾವುದೇ ದೃಶ್ಯಗಳನ್ನು ಎಳೆದಾಡದಂಥ ಸಂಕಲನ ಚಿತ್ರದ ಹೈಲೈಟ್. ಆದರೆ ಅನಾಥಾಲಯದಿಂದ ಬಂದ ಹುಡುಗನೆಂದು ತಿಳಿದ ಮೇಲೆ ತಾಯಿಗಾಗಿ ಹುಡುಕುವ ಪ್ರಯತ್ನದಲ್ಲಿ ತಂದೆಯ ಬಗ್ಗೆ ಒಮ್ಮೆಯೂ ನೆನಪಿಸಿಕೊಳ್ಳದಿರುವುದು ಮಾತ್ರ ವಿಪರ್ಯಾಸ. ನ್ಯೂಝಿಲ್ಯಾಂಡ್ ಮತ್ತು ಉತ್ತರ ಕರ್ನಾಟಕದ ಸುಂದರ ತಾಣಗಳನ್ನು ಸೆರೆ ಹಿಡಿದಂಥ ಛಾಯಾಗ್ರಹಣ ಮತ್ತು ಮೈಮರೆಸುವ ಹಿನ್ನೆಲೆ ಸಂಗೀತ ಆಕರ್ಷಕ.
ಎರಡು ವರ್ಷಗಳ ಹಿಂದೆ ತೆರೆಕಂಡಿದ್ದ ಆಂಗ್ಲ ಚಿತ್ರ ‘ಲಯನ್’ನ ಕಂಟೆಂಟ್‌ಗೂ ಇದಕ್ಕೂ ಹತ್ತಿರದ ಸಂಬಂಧ ಇದೆ. ಅದರಲ್ಲಿಯೂ ವಿದೇಶಿ ಪ್ರಜೆ ತನ್ನ ತಾಯಿಯನ್ನು ಹುಡುಕಿಕೊಂಡು ಬರುವುದು ಭಾರತಕ್ಕೇನೇ ಎನ್ನುವುದು ಪ್ರಮುಖ ಹೋಲಿಕೆ. ಆದರೆ ಈ ಚಿತ್ರಕ್ಕೆ ‘ಮಿಸ್ಸಿಂಗ್ ಬಾಯ್’ ಎನ್ನುವ ಡಾಕ್ಯುಮೆಂಟರಿಯೇ ಆಧಾರ ಎಂದು ಖುದ್ದು ನಿರ್ದೇಶಕ ರಘುರಾಮ್ ಹೇಳಿದ್ದಾರೆ. ಜೋನಾಥನ್ ಎನ್ನುವ ವ್ಯಕ್ತಿ ಸ್ವೀಡನ್‌ನಿಂದ ಬಂದು ಭಾರತದಲ್ಲಿ ತನ್ನ ತಾಯಿಯನ್ನು ಹುಡುಕಿದ ನೈಜ ಘಟನೆಯನ್ನು ಆಧರಿಸಿ ಚಿತ್ರ ಮಾಡಿರುವುದಾಗಿ ಅವರು ಹೇಳಿದ್ದಾರೆ. ತಾಯಿ ಮತ್ತು ಮಗನ ಭೇಟಿಯ ಕ್ಲೈಮ್ಯಾಕ್ಸ್ ಸನ್ನಿವೇಶ ಮತ್ತು ಅದರಲ್ಲಿ ತಾಯಿಯಾಗಿ ರಂಗಭೂಮಿ ನಟಿ ಭಾಗೀರಥಿ ಭಾಯಿಯವರ ಅಭಿನಯ ಅದ್ಭುತವೆನಿಸುತ್ತದೆ. ಆ ಮುಹೂರ್ತವನ್ನು ತಾಯಿಯೊಂದಿಗೆ ಕುಳಿತು ಚಿತ್ರ ನೋಡುವ ಮೂಲಕ ಸಾಕ್ಷಾತ್ಕಾರ ಮಾಡಿಕೊಳ್ಳಬಹುದು.
ತಾರಾಗಣ: ಗುರುನಂದನ್, ಅರ್ಚನಾ ಜಯಕೃಷ್ಣನ್
ನಿರ್ದೇಶಕ: ರಘುರಾಮ್
ನಿರ್ಮಾಪಕ: ಕೊಲ್ಲ ಪ್ರವೀಣ್