ನರಿಯ ತಂತ್ರ ರಾಜಕೀಯ

Update: 2019-03-23 19:26 GMT

ಆಕಾಡಿನಲ್ಲಿ ರಾಜಾ ಸಿಂಹನಿಗೂ ಮಂತ್ರಿ ನರಿಗೂ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಒಂದೇ ಪಕ್ಷದಲ್ಲಿದ್ದ ಇಬ್ಬರೂ ವಿರೋಧಿಗಳಾದರು. ಹತ್ತಿರದಲ್ಲೇ ಸಾರ್ವತ್ರಿಕ ಚುನಾವಣೆ ಇದ್ದುದರಿಂದ ಇವರಿಬ್ಬರ ಜಗಳ ಮಹತ್ವ ಪಡೆದಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲಿ ಜಾರಿಯಲ್ಲಿದ್ದುದರಿಂದ ಯಾರಾದರೂ ಅಲ್ಲಿ ಅಧಿಕಾರ ಹಿಡಿಯಬಹುದಿತ್ತು. ಈ ಬಾರಿ ಚುನಾವಣೆ ತುಂಬಾ ತುರುಸಿನಿಂದ ಕೂಡಿತ್ತು. ಆಡಳಿತ ಪಕ್ಷದ ಸಿಂಹವನ್ನು ಸೋಲಿಸಿ ಅಧಿಕಾರ ಹಿಡಿಯಬೇಕೆಂದು ನರಿಯು ತಂತ್ರ ರಾಜಕಾರಣಕ್ಕೆ ಮೊರೆ ಹೋಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಗೆಲ್ಲುವಂತಹ ಅಭ್ಯರ್ಥಿಗಳನ್ನೇ ಹುರಿಯಾಳಾಗಿಸಿತ್ತು. ಚುನಾವಣೋತ್ತರ ಸಮೀಕ್ಷೆಗಳು ಸಿಂಹಕ್ಕೆ ಅಧಿಕಾರ ಎಂದು ಭವಿಷ್ಯ ನುಡಿದಿದ್ದವು.

ಆ ದಿನ ಫಲಿತಾಂಶ. ಎಲ್ಲರೂ ತುದಿಗಾಲ ಮೇಲೆ ನಿಂತಿದ್ದರು. 12 ಕ್ಷೇತ್ರಗಳಲ್ಲಿ ನರಿಯು 5 ಮತ್ತು ಸಿಂಹ 6 ಸ್ಥಾನ ಗೆದ್ದು, ಅಚ್ಚರಿಯೆಂಬಂತೆ 1 ಸ್ಥಾನ ಕರಡಿ ಗೆದ್ದುಕೊಂಡು ಅತಂತ್ರ ಸ್ಥಿತಿ ನಿರ್ಮಾಣವಾಯಿತು. ಕಾಡಿನ ರಾಜ್ಯಪಾಲ ಆನೆ ವಿಜೇತರೆಲ್ಲರ ಸಭೆ ಕರೆದು ‘ಬಹುಮತ ತೋರಿಸಿದವರು ಕಾಡಿನ ರಾಜಾ ಆಗಿ ಐದು ವರ್ಷ ಅಧಿಕಾರ ನಡೆಸಿ’ ಎಂದು ಆದೇಶಿಸಿತು. ಬಹುಮತ ಸಾಬೀತುಪಡಿಸಲು ಮೂರು ದಿನಗಳ ಕಾಲಾವಕಾಶ ನೀಡಿತು. ಸಿಂಹ ಕರಡಿಯನ್ನು ಸಂಪರ್ಕಿಸಿ ಮಂತ್ರಿ ಮಂಡಲದಲ್ಲಿ ಉನ್ನತ ಸ್ಥಾನ ನೀಡುವ ಭರವಸೆ ನೀಡಿ ಬೆಂಬಲ ಕೋರಿತು. ಕರಡಿಯೂ ಒಪ್ಪಿಕೊಂಡಿತು. ಕರಡಿಯ ಬೆಂಬಲದಿಂದ ಏಳು ಸದಸ್ಯ ಬಲ ಹೊಂದಿದ ಸಿಂಹ ಸರಳವಾಗಿ ರಾಜನ ಸ್ಥಾನ ಬಲಪಡಿಸಿಕೊಂಡಿತು. ಬಹುಮತ ಸಾಬೀತುಪಡಿಸುವ ದಿನ ಬಂದೇ ಬಿಟ್ಟಿತು. ರಾಜ್ಯಪಾಲ ಆನೆಯ ಮುಂದೆ ಸಿಂಹ ಸರಕಾರ ರಚಿಸುವ ಹಕ್ಕು ಮಂಡಿಸಿತು. ಕಾಡಿನ ಎಲ್ಲ ಪ್ರಾಣಿ-ಪಕ್ಷ್ಷಿಗಳು ಸಭೆಯಲ್ಲಿ ಹಾಜರಿದ್ದವು. ಕರಡಿ ಬಹಿರಂಗವಾಗಿ ಸಿಂಹಕ್ಕೆ ಬೆಂಬಲ ನೀಡಿದ್ದರಿಂದ ಬಹುಮತ ಸಾಬೀತುಪಡಿಸುವ ಈ ಕಾರ್ಯಕ್ರಮ ಅಷ್ಟೊಂದು ಕುತೂಹಲ ಪಡೆದಿರಲಿಲ್ಲ. ಎಲ್ಲರೂ ಬೇಗ ಬೇಗ ಕಾರ್ಯಕ್ರಮ ಮುಗಿಸಿಬಿಡಿ ಎಂದು ಆನೆಗೆ ಒತ್ತಾಯ ಮಾಡುತ್ತಿರುವಾಗ ನರಿ ತಾನು ಮತ್ತು ತನ್ನ ನಾಲ್ಕೂ ನರಿಗಳೊಂದಿಗೆ ಎದ್ದು ನಿಂತು ಸರಕಾರ ರಚಿಸುವ ಹಕ್ಕು ಮಂಡಿಸಿತು. ಒಂದು ಕ್ಷಣ ಎಲ್ಲರೂ ಆವಕ್ಕಾದರು. ರಾಜ್ಯಪಾಲ ಆನೆ ಇಬ್ಬರೂ ನಾಯಕರಿಗೆ ಮಧ್ಯಾಹ್ನದ ಒಳಗೆ ಬಹುಮತ ಸಾಬೀತು ಪಡಿಸಲು ಸಮಯ ನಿಗದಿ ಮಾಡಿತು. ಒಂದೆಡೆ ಸಿಂಹ ಕರಡಿಯೊಂದಿಗೆ ಕುಳಿತು ತನ್ನ ಸದಸ್ಯರ ಆಗಮನಕ್ಕಾಗಿ ಕಾಯುತ್ತಿತ್ತು. ಇತ್ತ ನರಿಗಳ ನಾಯಕ ಅತ್ಯಂತ ಶಾಂತ ಚಿತ್ತದಿಂದ ಹಸನ್ಮುಖಿ ಯಾಗಿ ತನ್ನ ನಾಲ್ಕೂ ಸದಸ್ಯರೊಂದಿಗೆ ಹರಟೆ ಹೊಡೆಯುತ್ತಿತ್ತು.

ಸಮಯ ಸರಿದಂತೆಲ್ಲ ಇನ್ನೂ ಎರಡು ಸಿಂಹಗಳು ಸಭೆಯತ್ತ ಬರದಿರುವುದು ನಾಯಕ ಸಿಂಹನಿಗೆ ಚಿಂತೆಯಾಯಿತು. ಎಷ್ಟು ಬಾರಿ ಎಣಿಸಿದರೂ ತಾನು ಮತ್ತೆರಡು ಸಿಂಹ ಮತ್ತು ಕರಡಿ ನಾಲ್ಕೇ ಸದಸ್ಯರು ಕಾಣಿಸುತ್ತಿದ್ದರು. ಆ ಎರಡು ಸಿಂಹಗಳು ಎಲ್ಲಿರುವವೋ ಎಂಬುದು ಯಕ್ಷ ಪ್ರಶ್ನೆಯಾಯಿತು. ಅವುಗಳನ್ನು ಹುಡುಕಲು ಹೋದ ಸಿಂಹದ ಬೆಂಬಲಿಗರು ನಿರಾಸೆಯಿಂದ ಮರಳಿದರು. ಮಧ್ಯಾಹ್ನದ ಸಮಯವಾದ್ದರಿಂದ ರಾಜ್ಯಪಾಲ ಆನೆ ಆಯ್ಕೆಯಾದ ಸದಸ್ಯರಿಗೆ ಹಿಂಭಾಗದ ಎರಡು ಕಾಲಿನ ಮೇಲೆ ನಿಲ್ಲುವ ಮೂಲಕ ನಿಮ್ಮ ನಾಯಕರಿಗೆ ಬೆಂಬಲ ಸೂಚಿಸಿ. ಯಾವ ನಾಯಕರು ಹೆಚ್ಚು ಮತ ಪಡೆಯುವರೋ ಅವರೇ ಮುಂದಿನ ಐದು ವರ್ಷಗಳ ಅವಧಿಗೆ ಈ ಕಾಡಿನ ರಾಜ ಎಂದು ಹೇಳಿತು. ಕರಡಿಯ ಬೆಂಬಲ ಪಡೆದರೂ ನಾಲ್ಕೇ ಸದಸ್ಯರಾದ ಸಿಂಹ ತಲೆ ತಗ್ಗಿಸಿತು. ನಾಲ್ಕು ನರಿಗಳ ಬೆಂಬಲದೊಂದಿಗೆ ನರಿ ಬಹುಮತ ಸಾಬೀತುಪಡಿಸಿ ರಾಜನಾಗಿ ಅಧಿಕಾರ ಸ್ವೀಕರಿಸಿತು.

ಹೆಚ್ಚು ಸದಸ್ಯ ಬಲವಿದ್ದೂ ಬಹುಮತ ಸಾಬೀತುಪಡಿಸುವ ದಿನ ಎರಡು ಸಿಂಹಗಳು ಗೈರಾದ ಕಾರಣಕ್ಕೆ ಕಂಗಾಲಾದ ನಾಯಕ ಸಿಂಹ ಮೈ ಪರಚಿಕೊಳ್ಳುತ್ತ ಅರಚುತ್ತಿತ್ತು. ಅಷ್ಟೊತ್ತಿಗೆ ಅಲ್ಲಿಗೆ ಬಂದ ಗುಪ್ತಚರರು ‘‘ದೊರೆಗಳೇ, ಎರಡು ಸಿಂಹಗಳು ಗೈರಾದ ಕಾರಣ ತಿಳಿದುಕೊಂಡು ಬಂದಿದ್ದೇವೆ. ಹಿಂದಿನ ದಿನ ರಾತ್ರಿ ನರಿಯು ಸಿಂಹಗಳನ್ನು ಭೇಟಿಯಾಗಿ ತನಗೆ ಬೆಂಬಲ ಕೇಳಿದೆ. ಅವು ಸಾಧ್ಯವಿಲ್ಲ. ನಮ್ಮ ನಾಯಕನಿಗೆ ವಿರುದ್ಧವಾಗಿ ನಾವು ನಡೆದುಕೊಳ್ಳುವುದಿಲ್ಲ ಎಂದಿವೆ. ಆಗ ನರಿ ನಿಮ್ಮ ನಾಯಕ ರಾಜಾ ಆಗಬೇಕಾದರೆ ನೀವೇಕೆ ಆಗಬಾರದು. ಅವನಷ್ಟೇ ಸಾಮರ್ಥ್ಯ, ಶಕ್ತಿ ನಿಮಗೂ ಇದೆಯಲ್ಲ? ಎಂದಿದೆ. ಆಗ ಸಿಂಹಗಳು ಅಧಿಕಾರದ ಆಸೆಯಿಂದ ‘ಹೌದಲ್ಲವೇ? ಹೇಳು, ನಾವು ಈಗೇನು ಮಾಡಬೇಕು? ಎಂದಿದೆ. ನರಿ ನಾಳೆ ನೀವಿಬ್ಬರೂ ಸಭೆಗೆ ಗೈರಾಗಿಬಿಡಿ. ಆಗ ಬಹುಮತ ಸಾಬೀತುಪಡಿಸುವ ದಿನ ಮುಂದೂಡಲ್ಪಡುತ್ತದೆ. ನಂತರದ ದಿನ ನಾವು ಐವರೂ ನಿಮಗೆ ಬೆಂಬಲ ನೀಡುತ್ತೇವೆ. ಆಗ ನೀವೇ ಈ ಕಾಡಿನ ರಾಜ ಮತ್ತು ಮಂತ್ರಿಯಾಗಬಹುದು ಎಂದು ಅವುಗಳ ತಲೆಯಲ್ಲಿ ಹುಳು ಬಿಟ್ಟು ನರಿ ಕುತಂತ್ರದಿಂದ ನಮ್ಮವರನ್ನು ಹಳ್ಳಕ್ಕೆ ಬೀಳಿಸಿ ತಾನು ರಾಜಾ ಆಯ್ತು’’ ಎಂದರು.

ಇಲ್ಲಿ ನೆರೆದಿದ್ದ ಇತರ ಪ್ರಾಣಿಗಳು ಒಳಗೊಳಗೆ ಮುಸಿಮುಸಿ ನಕ್ಕವು. ನರಿಯ ಕುತಂತ್ರದಿಂದ ಬಹುಮತವಿದ್ದೂ ಸಿಂಹ ಅಧಿಕಾರ ಪಡೆಯುವಲ್ಲಿ ವಿಫಲವಾಯಿತು.

ಅಶೋಕ ವಿ ಬಳ್ಳಾ, ಸೂಳೇಬಾವಿ

Writer - ಅಶೋಕ ವಿ ಬಳ್ಳಾ, ಸೂಳೇಬಾವಿ

contributor

Editor - ಅಶೋಕ ವಿ ಬಳ್ಳಾ, ಸೂಳೇಬಾವಿ

contributor

Similar News