ಎರಡನೆಯ ಭಾಸ್ಕರಾಚಾರ್ಯ (ಭಾಸ್ಕರ ॥)
ಖಗೋಳಶಾಸ್ತ್ರ ಮತ್ತು ಗಣಿತಗಳನ್ನು ಕುರಿತ ತನ್ನ ಗ್ರಂಥಗಳಿಂದ ಕೀರ್ತಿ ಭಾಜನನಾದ, ಆ ಎರಡೂ ವಿಷಯಗಳಲ್ಲಿ ಅಸಾಧಾರಣ ಪ್ರತಿಭಾಶಾಲಿ ಯಾದ ಭಾಸ್ಕರಾಚಾರ್ಯ ಹನ್ನೆರಡನೆಯ ಶತಮಾನ ದಲ್ಲಿ ಜೀವಿಸಿದ್ದನು. ಏಳನೆಯ ಶತಮಾನದಲ್ಲಿ ಆಗಿ ಹೋದ ಅದೇ ಹೆಸರಿನ (ಭಾಸ್ಕರಾಚಾರ್ಯ ) ಖಗೋಳಗಣಿತ ಶಾಸ್ತ್ರಜ್ಞನಿಂದ ಪ್ರತ್ಯೇಕಿಸಿ ತೋರಿಸಲು ಅವನನ್ನು (ಭಾಸ್ಕರ ॥
‘ವಿಜ್ಜವೀಡ’ ಅಥವಾ ‘ಬಿಜಬೀಡ’ (ಬಹುಶಃ ಇಂದಿನ ವಿಜಾಪುರ)ದ ನಿವಾಸಿಯಾದ ಭಾಸ್ಕರ ತನ್ನ ಮೂವತ್ತಾರನೆಯ ವರ್ಷದಲ್ಲಿ ಪ್ರಸಿದ್ಧ ಗ್ರಂಥವಾದ ‘ಸಿದ್ಧಾಂತ ಶಿರೋಮಣಿ’ಯನ್ನು ರಚಿಸಿದನು. ಅವನ ಕಾಲದ ಖಗೋಳಶಾಸ್ತ್ರ ಮತ್ತು ಗಣಿತದ ವಿವಿಧ ಆಯಾಮಗಳು ಮತ್ತು ಅವನದೇ ಆದ ನವೀನ ಆವಿಷ್ಕಾರಗಳನ್ನೊಳಗೊಂಡ ಈ ಗ್ರಂಥ ನಿಜಕ್ಕೂ ಒಂದು ತಿಳಿಯಾದ ಪ್ರಸ್ತುತಿಯಾಗಿದೆ. ಇದರಲ್ಲಿ ನಾಲ್ಕು ಭಾಗಗಳುಂಟು: (1) ಲೀಲಾವತಿ ಅಂಕಗಣಿತ, (2) ಬೀಜಗಣಿತ, (3) ಗ್ರಹಗಣಿತಮ್ ಮತ್ತು (4) ಗೋಲಾಧ್ಯಾಯ (ಕೊನೆಯವರೆಡೂ ಖಗೋಳಶಾಸ್ತ್ರ ಸಂಬಂಧಿತ). ಆನಂತರ ಅವನು ಕರಣ ಕುತೂಹಲ ಎಂಬ ಚಿಕ್ಕ ಗ್ರಂಥವನ್ನು ಬರೆದರು. ಗ್ರಹಗಣಿತ ಮತ್ತು ಗೋಲಾಧ್ಯಾಯಗಳಲ್ಲಿ, ಭಾಸ್ಕರನು ಗ್ರಹಗಳ ಸರಾಸರಿ ಮತ್ತು ಋಜುಗತಿ, ದಿಕ್ಕು, ಕಾಲ ಮತ್ತು ದೇಶಗಳ ಮೂರು ಸಮಸ್ಯೆಗಳು ಗ್ರಹಣಗಳು, ಗ್ರಹಗಳ ಉದಯಾಸ್ತಮಾನ ಹಾಗೂ ಯೋಗಗಳು ಮುಂತಾದವುಗಳನ್ನು ಉಳಿದ ಮುಖ್ಯ ಸಿದ್ಧಾಂತ ಗ್ರಂಥಗಳಲ್ಲಿ ಚರ್ಚಿತವಾದ ರೀತಿಯಲ್ಲಿಯೇ ಯುಕ್ತ ಖಗೋಳಶಾಸ್ತ್ರೀಯ ಗಣಿತದೊಂದಿಗೆ ವಿವರಿಸಿದ್ದಾನೆ. ಗೋಲಾಧ್ಯಾಯದಲ್ಲಿ, ಗ್ರಹಗಳ ಗತಿಯ ಉಪರಿವೃತ್ತ ಮತ್ತು ವಿಕೇಂದ್ರಿತ ವೃತ್ತ ಸಿದ್ಧಾಂತಗಳನ್ನು ಸವಿವರವಾಗಿ ಪ್ರಸ್ತುತಪಡಿಸಲಾಗಿದೆ. ಈ ಗ್ರಂಥದಲ್ಲಿ ವರ್ಣಿಸಲಾದ ಖಗೋಳ-ಯಂತ್ರಗಳ ಸಂಖ್ಯೆಯೂ ದೊಡ್ಡದು. ವಿವರಣೆಯೂ ಸುಸ್ಪಷ್ಟವಾಗಿದೆ. ‘ಕರಣ ಕುತೂಹಲ’ (‘ಗ್ರಹಗಾಮ ಕುತೂಹಲ’ ಅಥವಾ ‘ಬ್ರಹ್ಮಸಿದ್ಧಾಂತತುಲ್ಯ’ ಎಂದೂ ಕರೆಯಲಾದ) ಗ್ರಂಥದಲ್ಲಿ 1104ನೆಯ ಶಕವರ್ಷವನ್ನು ಯುಗಾರಂಭ ವರ್ಷ (Epochal Year) ಎಂದು ಪರಿಗಣಿಸಲಾಗಿದೆ. ಅದರಲ್ಲಿ ಹತ್ತು ಅಧ್ಯಾಯಗಳಿದ್ದು, ಒಟ್ಟು 139 ಶ್ಲೋಕಗಳುಂಟು. ಭಾಸ್ಕರನ ಜನಪ್ರಿಯತೆ ಮತ್ತು ಪ್ರಾಮಾಣ್ಯಗಳು ಎಂಥವಿತ್ತೆಂದರೆ, ತದನಂತರದ ಶತಮಾನದಲ್ಲಿ ಅದರ ಅನೇಕ ಭಾಷ್ಯಗಳು ಬಂದವು ಮತ್ತು ನವೀನ ಬೌದ್ಧಿಕ ಉತ್ಸಾಹದಿಂದ ಭಾರತೀಯ ಖಗೋಳಶಾಸ್ತ್ರದ ಪರಂಪರೆಯನ್ನು ಎತ್ತರಕ್ಕೆ ಎತ್ತಿಹಿಡಿದವು.