‘ಗೇರು ಮತ್ತು ಬಾಲ್ಯದ ಕಾರುಬಾರು’

Update: 2019-03-24 07:12 GMT

           ಸಫ್ವಾನ್ ಸವಣೂರು

ಕರಾವಳಿ ಪ್ರದೇಶದ ಗುಡ್ಡೆಗಳಲ್ಲಿ ಹೇರಳವಾಗಿ ಕಾಣಸಿಗುತ್ತಿದ್ದ ಗೇರು ಬೀಜದ ಮರಗಳು ಈಗ ದಿನಕಳೆದಂತೆ ಕಣ್ಮರೆಯಾಗುತ್ತಿವೆ. ಖಾಸಗಿ ಜಮೀನುಗಳಲ್ಲಿ ರಬ್ಬರ್ ಬೆಳೆ ಆರಂಭವಾದ ನಂತರ ಗೇರುಮರಗಳು ಅವನತಿಯ ಅಂಚಿಗೆ ತಲುಪಿವೆ. ಈಗ ಸರಕಾರಿ ಹಾಡಿಗಳಲ್ಲಿ ಮಾತ್ರ ಗೇರು ಮರಗಳನ್ನು ನೋಡಬೇಕಾದ ಅನಿವಾರ್ಯಕ್ಕೆ ನಾವು ತಲುಪಿದ್ದೇವೆ. ಉಳಿದಂತೆ ಕೆಲವೊಂದು ಮನೆಗಳ ಆಸುಪಾಸಿನಲ್ಲಿ ಮಾತ್ರ ಬೆರಳೆಣಿಕೆಯ ಮರಗಳು ಉಳಿದುಕೊಂಡಿವೆ.

ಗೇರುಬೀಜದ ಇಳುವರಿ ಕಡಿಮೆಗೊಂಡ ಪರಿಣಾಮ ಕಳೆದ ಕೆಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಕಚ್ಚಾ ಗೋಡಂಬಿಗೆ ಒಳ್ಳೆಯ ಬೆಲೆಯೂ ಇದೆ.ಆದ್ದರಿಂದ ಕೆಲವು ಕೃಷಿಕರು ಮತ್ತೆ ತಮ್ಮ ಖಾಲಿ ಜಮೀನಿ ನಲ್ಲಿ ಹೈಬ್ರಿಡ್ ಗೇರು ಸಸಿಗಳನ್ನು ನೆಡುತ್ತಿದ್ದಾರೆ.ಗೇರು ಕೃಷಿಯನ್ನು ಉತ್ತೇಜಿಸಲು ಸರಕಾರವೂ ಕೂಡಾ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ.

ಈ ಬಾರಿ ಮತ್ತೆ ಗೇರು ಮರ ಫಸಲು ಬಿಟ್ಟಿದೆ.

ಮರದ ಕೊಂಬೆಗಳಲ್ಲಿ ತುಂಬಿರುವ ಹೂ, ಕಾಯಿ,ಹಣ್ಣಿನ ಗೊಂಚಲನ್ನು ನೋಡುವಾಗ ಬಾಲ್ಯದ ಕೆಲವು ಸವಿನೆನಪುಗಳು ಮರುಕಳಿಸುತ್ತಿವೆೆ. ಬಾಲ್ಯದಲ್ಲಿ ಶಾಲೆ ಬಿಟ್ಟು ಬಂದ ಕೂಡಲೇ ಮನೆಯ ಸುತ್ತಲೂ ಬೆಳೆದಿದ್ದ ಗೇರುಮರಗಳಿಗೆ ಹತ್ತಿ ಬೀಜ ಕೊಯ್ಯುವಾಗಿನ ಆ ಗೌಜಿಗದ್ದಲಗಳು ಕಿವಿಗಳಲ್ಲಿ ಪ್ರತಿಧ್ವನಿಸುತ್ತಿವೆೆ.

ಚಿಕ್ಕಂದಿನಲ್ಲಿ ಗೇರುಮರಕ್ಕೂ ನಮಗೂ ಅವಿನಾಭಾವ ಸಂಬಂಧ. ನಮ್ಮ ಮನೆಯ ಆಸುಪಾಸಿನ ಗೇರುಮರದ ಫಸಲಿನ ಹಕ್ಕು ನಮ್ಮ ಅಜ್ಜನದ್ದಾಗಿದ್ದರೂ, ನಾವು ಅವರ ಕಣ್ಣುತಪ್ಪಿಸಿ ಬೀಜ ಹೆಕ್ಕಿ ಅಂಗಡಿಗೆ ಮಾರುತ್ತಿದ್ದೆವು. ಕೆಲವೊಂದು ನಿರ್ದಿಷ್ಟ ಬಣ್ಣದ ಹಣ್ಣುಗಳನ್ನು ಗುರುತಿಸಿ ತಿನ್ನುತ್ತಿದ್ದೆವು.ಆ ಹಣ್ಣುಗಳು ನಮ್ಮ ಪಾಲಿಗೆ ‘ಆ್ಯಪಲ್’ ಆಗಿತ್ತು. ಆ ಹಣ್ಣುಗಳ ರುಚಿಯನ್ನು ಆಧರಿಸಿ ಅವುಗಳಿಗೆ ಒಂದೊಂದು ಹೆಸರನ್ನೂ ಇಡುತ್ತಿದ್ದೆವು. ಹೆಚ್ಚಿನ ಹಣ್ಣುಗಳು ಒಗರು ರುಚಿಯನ್ನು ಹೊಂದಿದ್ದ ಕಾರಣ ತಿನ್ನಲು ಆಗುತ್ತಿರಲಿಲ್ಲ.

ಗೇರುಬೀಜದ ಫಸಲು ಮುಗಿದ ನಂತರ ಬರುವ ಮೊದಲ ಮಳೆಗೆ ಮರದಡಿ ಬೆಳೆದ ಪೊದೆಗಳಲ್ಲಿ ಬಾಕಿಯಾದ ಬೀಜಗಳು ಮೊಳಕೆಯೊಡೆಯುತ್ತಿದ್ದವು. ಆ ಮೊಳಕೆಯೊಡೆದ ಸಸಿಗಳ ಕೆಳಗೆ ಗೋಡಂಬಿ ಯ ಎಳೆ ತಿರುಳು ದೊರಕುತ್ತಿತ್ತು. ತುಂಬಾ ರುಚಿಕರವಾಗಿದ್ದ ಅವುಗಳನ್ನು ನಾವು ಹೆಕ್ಕಿ ತಿನ್ನುತ್ತಿದ್ದೆವು.

ನಾವು ದಿನಾಲೂ ಶಾಲೆಗೆ ಹೋಗುವ ದಾರಿಯುದ್ದಕ್ಕೂ ಸಿಗುವ ಮರಗಳಿಂದಲೂ ಗೇರುಬೀಜ ಕೊಯ್ದು ಅಂಗಡಿಗೆ ಮಾರುತ್ತಿದ್ದೆವು. ಎಷ್ಟೋ ಬಾರಿ ಆ ಗೇರುಮರಗಳಿರುವ ಜಾಗದ ಒಡೆಯರಿಂದ ಬೈಗುಳ ತಿನ್ನುತ್ತಿದ್ದೆವು. ಕೆಲವರಂತೂ ದೊಣ್ಣೆ ಹಿಡಿದು ಅಟ್ಟಾಡಿಸಿಕೊಂಡು ಬರುತ್ತಿದ್ದರು, ನಾವೂ ಓಡಿ ತಪ್ಪಿಸಿಕೊಳ್ಳುತ್ತಿದ್ದೆವು. ಇನ್ನೊಂದು ತಮಾಷೆಯ ಸಂಗತಿಯೆಂದರೆ ನಾವು ಕಲಿಯುತ್ತಿದ್ದ ಮದ್ರಸದ ಸಮೀಪದಲ್ಲಿ ಒಬ್ಬರ ಅಂಗಡಿ ಯಿತ್ತು, ಮದ್ರಸಕ್ಕೆ ಹೋಗುವ ಕಾಲುದಾರಿಯಲ್ಲಿ ಅವರ ತೋಟವೂ ಇತ್ತು.ನಾವು ಅವರ ತೋಟದ ಮರಗಳಿಂದಲೇ ಗೇರುಬೀಜ ಹೆಕ್ಕಿ ಅದನ್ನು ಅವರ ಅಂಗಡಿಗೇ ಮಾರಿ ತಿಂಡಿ ಖರೀದಿಸಿ ತಿನ್ನುತ್ತಿದ್ದೆವು.

ಗೇರುಮರದಲ್ಲಿ ಫಸಲು ಇಲ್ಲದ ಸಮಯದಲ್ಲೂ ಅವುಗಳು ನಮ್ಮ ನೆಚ್ಚಿನ ಆಟದ ತಾಣವಾಗಿತ್ತು. ಗೇರು ಮರದ ದೊಡ್ಡ ರೆಂಬೆಗಳಿಗೆ ಹಳೆ ಸೀರೆಗಳನ್ನು ಕಟ್ಟಿ ಜೋಕಾಲಿಯಾಡುತ್ತಿದ್ದೆವು. ವಿಶಾಲವಾದ ಮರಗಳ ಅಡಿಯಲ್ಲಿ ಚಪ್ಪರ ಕಟ್ಟಿ ಆಟವಾಡುತ್ತಿದ್ದೆವು. ಮರಗಳ ಮೇಲೇರಿ ಮರಕೋತಿ ಆಡುತ್ತಿದ್ದೆವು. ಮರಗಳಿಗೆ ಜೋತುಬಿದ್ದು ನಾನಾ ಕಸರತ್ತು ಗಳನ್ನು ಕಲಿಯುತ್ತಿದ್ದೆವು. ಮರದಿಂದ ಜಾರಿಬಿದ್ದು ಕೈಕಾಲುಗಳಿಗೆ ಏಟು ಮಾಡಿಕೊಳ್ಳುತ್ತಿದ್ದೆವು. ನಾನಂತೂ ಒಮ್ಮೆ ತುಂಬಾ ಎತ್ತರದಿಂದ ಆಯತಪ್ಪಿ ಬಿದ್ದುಬಿಟ್ಟಿದ್ದೆ. ಪುಣ್ಯಕ್ಕೆ ದೊಡ್ಡಮಟ್ಟದ ಪೆಟ್ಟು ತಗಲಿರಲಿಲ್ಲ. ಆದರೂ ಆ ನೆಪದಿಂದ ಮೂರ್ನಾಲ್ಕು ದಿನ ಶಾಲೆಗೂ, ಮದ್ರಸಕ್ಕೂ ರಜೆ ಮಾಡಿದ್ದೆ.

ನಾನು ಬೇಸಿಗೆ ರಜೆಗಳಲ್ಲಿ ಸರಕಾರಿ ಗೇರು ಹಾಡಿಗಳಿಗೆ ಬೀಜ ಹೆಕ್ಕುವ ಕೆಲಸಕ್ಕೆ ಹೋಗುತ್ತಿದ್ದೆ. ಮರಗಳ ಅಡಿಯಲ್ಲಿ ಬಿದ್ದ ಹಣ್ಣುಗಳನ್ನು ಹಿಂಡಿ ಬೀಜ ಬೇರ್ಪಡಿಸಿ ಸಂಗ್ರಹಿಸಬೇಕಿತ್ತು. ಆ ಬಿರುಬೇಸಿಗೆಯಲ್ಲಿ ಗೇರುಹಣ್ಣಿನ ರಸ ಬೆವರಿನೊಂದಿಗೆ ಬೆರೆತು ಬಟ್ಟೆಗೆ ಅಂಟಿ ಭಾರೀ ಘಾಟು ಬೀರುತ್ತಿತ್ತು. ಆ ಘಾಟನ್ನು ಸಂಜೆಯವರೆಗೆ ಸಹಿಸುತ್ತಾ ಕೆಲಸ ಮಾಡುವುದೇ ಬಲು ದೊಡ್ಡ ಸವಾಲಾಗಿತ್ತು. ಆದರೂ ಶಾಲೆಯ ಪುಸ್ತಕದ ಖರ್ಚಿಗಾದರೂ ದುಡ್ಡು ಹೊಂದಿಸುವ ಆಸೆಯಿಂದ ರಜೆಯ ಬಹುತೇಕ ದಿನಗಳಲ್ಲಿ ಕೆಲಸಕ್ಕೆ ತೆರಳುತ್ತಿದ್ದೆ. ಈಗ ಗೇರುಬೀಜಕ್ಕೆ ಒಳ್ಳೆಯ ಬೆಲೆಯಿದ್ದರೂ, ಮನೆಗಳ ಆಸು ಪಾಸಿನ ಮರಗಳ ಅಡಿಗೆ ಹೋಗಲು ನಮಗೆ ಸಮಯವಿಲ್ಲ. ಈಗಿನ ಮಕ್ಕಳಂತೂ ಆ ಮರಗಳ ಬಳಿಗೆ ಸುಳಿಯು ವುದೇ ಇಲ್ಲ. ಒಂದು ಕಾಲದಲ್ಲಿ ಗೇರುಬೀಜ ಹೆಕ್ಕಿ ಮಾರಿ ತಮ್ಮ ಸಣ್ಣಪುಟ್ಟ ಅಗತ್ಯಗಳಿಗೆ ಹಣ ಹೊಂದಿಸುತ್ತಿದ್ದ ಮನೆಯ ಹೆಂಗಸರಿಗೂ ಈಗ ಗೇರುಮರದ ಕುರಿತು ನೆನಪೇ ಇಲ್ಲ.

Writer - ಸಫ್ವಾನ್ ಸವಣೂರು

contributor

Editor - ಸಫ್ವಾನ್ ಸವಣೂರು

contributor

Similar News