ಜಾನಪದ ದರ್ಶನ: ಸಂಶೋಧನಾ ಬರಹಗಳು

Update: 2019-03-24 18:34 GMT

ಡಾ. ಎಸ್. ಎಂ. ಮುತ್ತಯ್ಯ ಅವರ ಕೃತಿ ‘ಜಾನಪದ ದರ್ಶನ’ ಹೆಸರೇ ಹೇಳುವಂತೆ ಜಾನಪದ ಜಗತ್ತನ್ನು ಕೇಂದ್ರವಾಗಿಟ್ಟುಕೊಂಡು ಬರೆದ ಲೇಖನಗಳ ಸಂಗ್ರಹ. ಇದು ಶಾಸ್ತ್ರೀಯವಾಗಿ ನಿರೂಪಿಸಲ್ಪಟ್ಟ ಸಂಶೋಧನಾ ಗ್ರಂಥವಲ್ಲ. ಸಾಂದರ್ಭಿಕವಾಗಿ ಬರೆದ ಲೇಖನಗಳನ್ನು ಈ ಕೃತಿ ಹೊಂದಿದೆ. ಬದಲಾದ ಕಾಲದಲ್ಲಿ ಸ್ಥಿತ್ಯಂತರಗಳಿಗೆ ಸಿಕ್ಕ ಬುಡಕಟ್ಟು ಬದುಕಿನ ಅಪೂಪದ ವಿವರಗಳು ಈ ಕೃತಿಯಲ್ಲಿವೆ.
ಕೃತಿಯಲ್ಲಿ ಒಟ್ಟು ಹದಿನೇಳು ಲೇಖನಗಳಿವೆ. ‘ಕನ್ನಡ ಸಂಶೋಧನೆಯ ಹೊಸ ನೆಲೆಗಳು’ ಅಧ್ಯಾಯ ಜಾನಪದ ಅಧ್ಯಯನದ ದಾರಿಯ ಕುರಿತಂತೆ ಬೆಳಕು ಚೆಲ್ಲುತ್ತದೆ. ಈ ಕ್ಷೇತ್ರದಲ್ಲಿ ನಡೆದ ಸಂಶೋಧನೆಗಳ ನೆಲೆಗಳು ಮತ್ತು ಈ ಕ್ಷೇತ್ರಕ್ಕೆ ವಿವಿಧ ಕೊಡುಗೆಗಳನ್ನು ನೀಡಿದ ಸಂಶೋಧಕರನ್ನು ಪರಿಚಯಿಸುವ ಉದ್ದೇಶವನ್ನು ಈ ಲೇಖನ ಹೊಂದಿದೆ.ನಮ್ಮ ಜಾನಪದ ಅಧ್ಯಯನಗಳು ಭಾವನಾತ್ಮಕತೆಯ ದೃಷ್ಟಿಯನ್ನು ಮೀರಿ, ಸಮತೋಲ ದೃಷ್ಟಿಯನ್ನು ಹೊಂದಬೇಕು ಎನ್ನುವುದು ಲೇಖಕರ ಆಶಯ. ‘ಬುಡಕಟ್ಟು ವೌಖಿಕ ಸಾಹಿತ್ಯ: ವಿಭಿನ್ನ ಸ್ವರೂಪಗಳು’ ಲೇಖನ ಬುಡಕಟ್ಟು ಸಾಹಿತ್ಯದ ಭಾಷೆ, ಅಭಿವ್ಯಕ್ತಿಯ ರೀತಿಯನ್ನಲ್ಲದೆ ಆ ಸಾಹಿತ್ಯ ಹೇಗೆ ಬುಡಕಟ್ಟು ಅಸ್ಮಿತೆಯನ್ನು ಎತ್ತಿಹಿಡಿಯುತ್ತದೆ ಎನ್ನುವ ಅಂಶವನ್ನು ಗುರುತಿಸುತ್ತಾರೆ. ಬುಡಕಟ್ಟುಗಳ ಅನುಭಾವ ನೆಲೆಗಳ ಬಗ್ಗೆ ಬರೆಯುತ್ತಾ, ಬದುಕಲ್ಲಿ ಸಿಕ್ಕ, ರೂಢಿಸಿಕೊಂಡ ಸಾಮಾಜಿಕ ಮತ್ತು ಸಾಂಸ್ಕೃತಿಕ ತಿಳುವಳಿಕೆಗಳನ್ನು ಅವರು ಸಾಹಿತ್ಯದಲ್ಲಿ ಹೊರಹೊಮ್ಮಿಸಿದ ರೀತಿಯನ್ನು ಬರೆಯುತ್ತಾರೆ.ಮಲೆನಾಡಿನ ಬುಡಕಟ್ಟು ಮಹಿಳೆ, ಅಲ್ಲಿನ ಸಾಮಾಜಿಕ ಸ್ಥಿತಿಗತಿ, ಜನಪದ ಆತ್ಮಕತೆಗಳ ಸಾಮಾಜಿಕ ಸಂಘರ್ಷ, ಜನಪದ ಮಹಾಕಾವ್ಯಗಳ ಪ್ರತಿಮಾ ವಿಧಾನಗಳು, ಬಯಲಾಟ, ಜಾನಪದ ಸಾಂಸ್ಕೃತಿಕ ವೀರರ ನಾಟಕಗಳು, ಜಾನಪದದಲ್ಲಿ ಕೋಮುಸೌಹಾರ್ದತೆಯ ಕುರುಹುಗಳು, ಹೀಗೆ ಜಾನಪದ ಅಂತರಗಂಗೆಯನ್ನು ಶೋಧಿಸುತ್ತಾ ಅಮೂಲ್ಯ ವಿವರಗಳನ್ನು ಈ ಕೃತಿ ನಮಗೆ ನೀಡುತ್ತದೆ.
ಕನ್ನಡ ಸಾಹಿತ್ಯ ಪರಿಷತ್ ಈ ಕೃತಿಯನ್ನು ಹೊರತಂದಿದೆ. 170 ಪುಟಗಳ ಈ ಕೃತಿಯ ಮುಖಬೆಲೆ 140 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News