ಹಂತಕರ ಪೂರ್ವಾಪರದ ಬೆನ್ನು ಹಿಡಿದು...

Update: 2019-03-26 18:31 GMT

ಭಾಗ-16

ನಾಥೂರಾಮ್ ಗುಂಡಿಕ್ಕಿ ಕೊಂದಾಗ ಅವನ ಹತ್ತಿರ ಇದ್ದ ಇಬ್ಬರು ಓಡಿ ಹೋದರೆಂಬುದು ದಿಟವಾಗಿತ್ತು. ಆ ಇಬ್ಬರು ಯಾರು ಎಂಬ ಬಗ್ಗೆ ಮದನಲಾಲ್ ಸುಳಿವು ಕೊಟ್ಟಿದ್ದ. ಅವರಲ್ಲಿ ಒಬ್ಬನು ಪುಣೆಯಲ್ಲಿ ‘ಹಿಂದೂ ರಾಷ್ಟ್ರ’ ಎಂಬ ಪತ್ರಿಕೆ ಹೊರಡಿಸುತ್ತಿದ್ದ ಆಪ್ಟೆ ಎಂಬ ಸುಳಿವು ಹಿಡಿದು ಪುಣೆಯಲ್ಲಿ ಅವನಿಗಾಗಿ ಹುಡುಕಿದರೆ ಅವನು ಕಣ್ತಪ್ಪಿಸಿಕೊಂಡಿದ್ದ. ಬಿರ್ಲಾಗೃಹದಿಂದ ತಪ್ಪಿಸಿಕೊಂಡು ಓಡಿ ಹೋದ ಮೇಲೆ ಆಪ್ಟೆ, ಕರ್ಕರೆ ನೇರವಾಗಿ ಮುಂಬೈಗೆ ಹೋಗದೆ ಅಲಹಾಬಾದ್‌ಗೆ ಹೋಗಿ ಅಲ್ಲಿಂದ ಮುಂಬೈಗೆ ಫೆಬ್ರವರಿ 3ನೇ ತಾರೀಕು ತಲುಪಿದ್ದರು.

ಸಾವರ್ಕರ್‌ರನ್ನು ಅರೆಸ್ಟ್ ಮಾಡದೆ ಅವರ ವಿರುದ್ಧ ಸಿಗಬಹದಾದ ಸಾಕ್ಷಕ್ಕಾಗಿ ತಪಾಸಣಾಧಿಕಾರಿ ನಗರವಾಲಾ ಇತರ ಆರೋಪಿಗಳನ್ನು ಪತ್ತೆ ಹಚ್ಚ ತೊಡಗಿದರು. ನಾಥೂರಾಮ್ ಗುಂಡಿಕ್ಕಿ ಕೊಂದಾಗ ಅವನ ಹತ್ತಿರ ಇದ್ದ ಇಬ್ಬರು ಓಡಿ ಹೋದರೆಂಬುದು ದಿಟವಾಗಿತ್ತು. ಆ ಇಬ್ಬರು ಯಾರು ಎಂಬ ಬಗ್ಗೆ ಮದನಲಾಲ್ ಸುಳಿವು ಕೊಟ್ಟಿದ್ದ. ಅವರಲ್ಲಿ ಒಬ್ಬನು ಪುಣೆಯಲ್ಲಿ ‘ಹಿಂದೂ ರಾಷ್ಟ್ರ’ ಎಂಬ ಪತ್ರಿಕೆ ಹೊರಡಿಸುತ್ತಿದ್ದ ಆಪ್ಟೆ ಎಂಬ ಸುಳಿವು ಹಿಡಿದು ಪುಣೆಯಲ್ಲಿ ಅವನಿಗಾಗಿ ಹುಡುಕಿದರೆ ಅವನು ಕಣ್ತಪ್ಪಿಸಿಕೊಂಡಿದ್ದ. ಬಿರ್ಲಾಗೃಹದಿಂದ ತಪ್ಪಿಸಿಕೊಂಡು ಓಡಿ ಹೋದ ಮೇಲೆ ಆಪ್ಟೆ, ಕರ್ಕರೆ ನೇರವಾಗಿ ಮುಂಬೈಗೆ ಹೋಗದೆ ಅಲಹಾಬಾದ್‌ಗೆ ಹೋಗಿ ಅಲ್ಲಿಂದ ಮುಂಬೈಗೆ ಫೆಬ್ರವರಿ 3ನೇ ತಾರೀಕು ತಲುಪಿದ್ದರು. ಅಲ್ಲಿ ‘ಸೀ ಗ್ರೀನ್’ (ನಾರ್ತ್) ಹೊಟೇಲಿನಲ್ಲಿ ಒಂದು ದಿನವಿದ್ದು 3ನೇ ತಾರೀಕು ಥಾಣಾ ನಗರಕ್ಕೆ ಹೋದರು. ಅಲ್ಲಿಂದ 9ನೇ ತಾರೀಕು ಪುಣೆಗೆ ಬಂದರು. ಅಲ್ಲಿ ಅವರಿಗಾಗಿ ಪೊಲೀಸರು ಹೊಂಚು ಹಾಕಿದ್ದರೆಂಬ ಸುದ್ದಿ ತಿಳಿದು ಕಾಲ್ತೆಗೆದು ಮುಂಬೈಗೆ ಹೋದರು. ಅಲ್ಲಿ ಅವರ ಆಪ್ತ ಜೋಷಿ ಅವರ ಮನೆಯಲ್ಲಿ ಎರಡು ದಿನ ಅಡಗಿದ್ದರು. ಅಲ್ಲಿಂದ ಮತ್ತೆ ಥಾಣೆಗೆ ಹೋದರು. ಇನ್ನು ಈ ದೇಶದಲ್ಲಿ ಎಲ್ಲಿಯೂ ಅವರಿಗೆ ರಕ್ಷಣೆ ಸಿಗಲಾರದೆಂದು ಈ ದೇಶದಿಂದಲೇ ಪರಾರಿಯಾಗಿ ವಿದೇಶದಲ್ಲಿ ತಲೆತಪ್ಪಿಸಿಕೊಳ್ಳಲು ನಿರ್ಧರಿಸಿ ಮತ್ತೆ ಮುಂಬೈಗೆ ಬಂದು ತಾಜ್ ಹೊಟೇಲಿಗೆ ಸಮೀಪ ಇದ್ದ ‘ಪೈರ್ಕ್ಸ್ ಅಪಲೊ’ ಹೊಟೇಲ್‌ನ ಎರಡನೇ ಅಂತಸ್ತಿನ 29ನೆ ನಂಬರ್ ಕೊಠಡಿಯನ್ನು ಗೊತ್ತು ಮಾಡಿಕೊಂಡು ‘ಎನ್.ಕಾಶೀನಾಥ್’, ‘ಆರ್. ಬಿಷ್ಣು’ ಎಂಬ ಸುಳ್ಳು ಹೆಸರು ಕೊಟ್ಟು ಅದರಲ್ಲಿ ತಂಗಿದರು. ವಿದೇಶ ಪ್ರಯಾಣಕ್ಕೆ ಬೇಕಾದ ಕನಿಷ್ಠ ಧನಸಹಾಯ ಪಡೆಯಲು ನಗರಕ್ಕೆ ತೆರಳಿದರು. ಮರುದಿನ ಬೆಳಗ್ಗೆ ಹತ್ತು ಗಂಟೆಗೆ ಆಪ್ಟೆ ತನ್ನ ಪ್ರೇಯಸಿ ಮನೋರಮಾ ಸಾಳ್ವೆ ಎಂಬಾಕೆಗೆ ಫೋನ್ ಮಾಡಿ ಆ ಸಂಜೆ ಆರು ಗಂಟೆಗೆ ರೂಮ್ ನಂ. 29ರಲ್ಲಿ ತನ್ನನ್ನು ಕಾಣಬೇಕೆಂದು ತಿಳಿಸಿ ಹೊರಗೆ ಹೋದ.

ಈ ಮನೋರಮಾ ಸಾಳ್ವೆ ಯಾರು? ನಾರಾಯಣ ಆಪ್ಟೆಗೂ ಆಕೆಗೂ ಏನು, ಹೇಗೆ ಸಂಬಂಧ? ಆಪ್ಟೆ ತಕ್ಕಮಟ್ಟಿಗೆ ಸ್ಥಿತಿವಂತರ ಮಗ. ಒಳ್ಳೆ ವ್ಯಕ್ತಿ. ವಿವಿಧ ಪೋಷಾಕು ಹಾಕಿಕೊಂಡು ಖಯಾಲಿಯಾಗಿ ಓಡಾಡುತ್ತಿದ್ದ ಉಂಡಾಡಿ. ಆಗ ಪುಣೆಯಲ್ಲಿ ಪ್ರಭಾವಶಾಲಿಯಾಗಿದ್ದ ಆರೆಸ್ಸೆಸ್‌ನಲ್ಲಿ ಸಕ್ರಿಯ ಕಾರ್ಯಕರ್ತ. ಚಿಕ್ಕಂದಿನಲ್ಲಿಯೇ ಚಂಪಾ ಎಂಬ ಹುಡುಗಿಯೊಡನೆ ಮದುವೆಯಾಗಿದ್ದ. ಆಕೆಗೊಂದು ಗಂಡು ಮಗುವಾಗಿತ್ತು. ಅದಕ್ಕೆ ಬುದ್ಧಿಮಾಂದ್ಯ! ಹೆಂಡತಿಯೂ ಮೊದ್ದು! ದಾಂಪತ್ಯ ಸುಖವಿಲ್ಲದ ಆಪ್ಟೆ ಮುಂಬೈಯಲ್ಲಿ ಒಂದು ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಸೇರಿದ. ಅಲ್ಲಿದ್ದ ವಿದ್ಯಾರ್ಥಿನಿ ಮನೋರಮಾ. ಮದುವೆಯಾಗದೆಯೆ ಲೈಂಗಿಕ ಸಂಪರ್ಕ ಹೊಂದಿ ಆಕೆ ಗರ್ಭಿಣಿಯಾದಳು. ಅವರಿಬ್ಬರೂ ಈ ‘ಅಪಲೋ’ ಹೊಟೇಲಿನಲ್ಲಿ ಎಷ್ಟೋ ಸಾರಿ ರಾತ್ರಿ ತಂಗಿದ್ದರು. ಈ ಸಂಬಂಧ ಮನೋರಮಾ ಸಾಳ್ವೆ ತಂದೆಗೂ ಗೊತ್ತಿತ್ತು. ಆತ ಮುಂಬೈ ಪೊಲೀಸ್ ಇಲಾಖೆಯಲ್ಲಿ ಕೆಲಸದಲ್ಲಿದ್ದ. ಆತನ ಮನೆಗೆ ದೂರವಾಣಿ ಸಂಪರ್ಕವಿತ್ತು. ಆ ದೂರವಾಣಿ ಪೊಲೀಸ್ ಇಲಾಖೆಯ ಒಂದು ವಿಸ್ತೃತ ತಂತು ಸಂಖ್ಯೆ (Extension Line) ಹೊಟೇಲ್‌ನಿಂದ ಆ ವಿಸ್ತೃತ ಸಂಖ್ಯೆಗೆ ಕರೆ ಮಾಡಿದಾಗ ದೂರವಾಣಿ ವಿನಿಮಯ ಕೇಂದ್ರದ ನೌಕರ ಆಪ್ಟೆ ಮಾತನಾಡಿದ್ದನ್ನು ಕದ್ದಾಲಿಸಿದ್ದ. ಆಪ್ಟೆಗಾಗಿ ಮುಂಬೈ ಪೊಲೀಸರು ಹೊಂಚು ಹಾಕಿದ್ದಾರೆಂದು ಗೊತ್ತಿದ್ದ ಆ ನೌಕರ ತನಗೆ ಸಿಕ್ಕ ಈ ಅಮೂಲ್ಯ ಸುದ್ದಿಯನ್ನು ಮೇಲಧಿಕಾರಿಗಳಿಗೆ ತಿಳಿಸಿದ. ನಗರವಾಲಾ ತನ್ನ ಅಧೀನ ಪೊಲೀಸ್ ಅಧಿಕಾರಿ ಹಳದಿಪೂರ್ ಎಂಬಾತನಿಗೆ ತಿಳಿಸಿ ಆ ಸಂಜೆ 5ರಿಂದ ಅಪಲೊ ಹೊಟೇಲ್ ಬಳಿ ಹೊಂಚು ಹಾಕಿದ್ದು ಆಪ್ಟೆಯನ್ನು ವಶಕ್ಕೆ ತೆಗೆದುಕೊಳ್ಳಲು ಆಜ್ಞೆ ಮಾಡಿದ್ದರು. ಆಪ್ಟೆ ತನ್ನ ಪ್ರೇಯಸಿಯನ್ನು ಕಾಣಲೆಂದು ಸಂಜೆ 5:30ಕ್ಕೆ ಅಪಲೊ ಹೊಟೇಲಿಗೆ ಬಂದ. ಸ್ವಾಗತಕಾರನ ಮುಂದೆ ನಿಂತು 29ನೆ ಕೊಠಡಿಯ ಬೀಗದ ಕೈ ಕೇಳಿದ. ಸ್ವಾಗತಕಾರ ಪಿಂಟೋ ಬೀಗದ ಕೈ ಕೊಡುವ ನೆಪದಿಂದ ತಲೆ ಹಾಕಿ ಸಂಜ್ಞೆ ಮಾಡಿ ಕೈಕೊಟ್ಟ. ಆಪ್ಟೆಗಾಗಿ ಕಾದು ನಿಂತಿದ್ದ ಆ ಹಳದಿಪೂರ್ ಚಂಗನೆ ನೆಗೆದು ಆಪ್ಟೆಯನ್ನು ಹಿಡಿದುಕೊಂಡು ಸದ್ದಿಲ್ಲದೆ ಪೊಲೀಸ್ ಸ್ಟೇಷನ್‌ಗೆ ಕರೆದೊಯ್ದು ಅವನನ್ನು ನಗರವಾಲಾರ ವಶಕ್ಕೆ ಒಪ್ಪಿಸಿದ.

ಅದೇ ರಾತ್ರಿ 8:30ಕ್ಕೆ ಕರ್ಕರೆ ಹೊಟೇಲಿಗೆ ಬಂದ. ಪೊಲೀಸರ ಬಲೆಗೆ ಬಿದ್ದ. ಅಂತೂ ಗಾಂಧೀ ಹತ್ಯೆಯ ಮುಖ್ಯಪಾತ್ರಧಾರಿಗಳಾದ ನಾಥೂರಾಮ್ ಗೋಡ್ಸೆ, ನಾರಾಯಣ ಆಪ್ಟೆ, ವಿಷ್ಣು ಕರ್ಕರೆ ಸಿಕ್ಕಿಬಿದ್ದರು. ಇನ್ನುಳಿದ ಸಹಾಯಕ ಪಾತ್ರಧಾರಿಗಳಲ್ಲಿ ಕೆಲವರು ಆಗಲೇ ಕೈವಶರಾಗಿದ್ದರು. ಮುಖ್ಯವಾಗಿ ಹತ್ಯೆಗೆ ಉಪಯೋಗಿಸಲಾಗಿದ್ದ ವಿದೇಶಿ ಪಿಸ್ತೂಲನ್ನು ದೊರಕಿಸಿ ಕೊಟ್ಟವನ ಪತ್ತೆ ಹಚ್ಚಲು ನಗರವಾಲಾ ಕಾರ್ಯೋನ್ಮುಖರಾದರು.

ಜನವರಿ 20ರಂದು ಮದನಲಾಲ್ ದಿಲ್ಲಿ ಪೊಲೀಸರಿಗೆ ಕೊಟ್ಟ ಹೇಳಿಕೆಯಲ್ಲಿ ಪುಣೆಯಲ್ಲೊಬ್ಬ ‘ಕಿರ್ಕೆ’ ಎಂಬ ಹಿಂದೂ ಮಹಾಸಭಾ ಮುಖಂಡನಿದ್ದಾನೆ. ಅವನು ಗಾಂಧಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಸಂಗತಿ ಗೊತ್ತಾಗಿತ್ತು. ದಿನಾಂಕ 21ರಂದು ಮುಂಬೈಯಲ್ಲಿ ಡಾ.ಆರ್.ಸಿ.ಜೈನ್ ಎಂಬ ಮಹಾಶಯರು ಮೊರಾರ್ಜಿ ದೇಸಾಯಿಗೆ ಪುಣೆಯಲ್ಲಿ ಗಾಂಧಿ ಹತ್ಯೆ ಪಿತೂರಿ ನಡೆಯುತ್ತಿದೆ ಎಂಬ ವರ್ತಮಾನ ಕೊಟ್ಟಿದ್ದರು. ಅದಕ್ಕಿಂತ ಮೊದಲೇ ವಿಷ್ಣು ಕರ್ಕರೆಯ ‘ಡೆಕ್ಕನ್ ಗೆಸ್ಟ್ ಹೌಸ್’ ಉಪ್ಪರಿಗೆಯ ಕೊಠಡಿಯಲ್ಲಿ ಆಯುಧಗಳ ಸಂಗ್ರಹ ಇದೆ ಎಂಬುದು ಗೃಹಮಂತ್ರಿಗಳಿಗೆ ಗೊತ್ತಿತ್ತು. ಅವನನ್ನು ಅರೆಸ್ಟ್ ಮಾಡಲು ಆದೇಶ ನೀಡಿದ್ದರು. ಈ ಹಿಂದೆ ಗಮನಿಸಿರುವಂತೆ ಆ ಆಜ್ಞೆಯನ್ನು ಜಾರಿಗೊಳಿಸುವುದರಲ್ಲಿ ವಿಳಂಬವಾಗಿತ್ತು. ಅವನು ಈ ಪಿತೂರಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ. ಅವನು ಅಹಮದ್‌ನಗರ ಹಿಂದೂ ಮಹಾಸಭೆಯ ಅಧ್ಯಕ್ಷನಾಗಿದ್ದ. ಸ್ಥಳೀಯ ಮುನಿಸಿಪಾಲಿಟಿಯ ಪ್ರಮುಖ ಸದಸ್ಯನಾಗಿದ್ದ. 1937ರಲ್ಲಿ ಮುಂಬೈ ರಾಜ್ಯದಲ್ಲಿ ಪ್ರಥಮ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ, ಸಾವರ್ಕರ್‌ರ ಮೇಲೆ ಬ್ರಿಟಿಷ್ ಸರಕಾರ ವಿಧಿಸಿದ್ದ ದಿಗ್ಬಂಧನವನ್ನು ರದ್ದುಪಡಿಸಿತ್ತು. ಅವರು ರತ್ನಗಿರಿ ಬಿಟ್ಟು ಎಲ್ಲಿಗಾದರೂ ಹೋಗಲು ಸ್ವಾತಂತ್ರ ದೊರಕಿತ್ತು. 1938ರಲ್ಲಿ ಸಾವರ್ಕರ್‌ರು ಅಹಮದ್‌ನಗರಕ್ಕೆ ಬಂದಿದ್ದಾಗ ಮುನಿಸಿಪಲ್ ಕೌನ್ಸಿಲ್ ಸದಸ್ಯ ಕರ್ಕರೆಯ ಪರಿಚಯವಾಗಿತ್ತು. ಸಾವರ್ಕರ್‌ರ ಗೌರವಾರ್ಥವಾಗಿ ತನ್ನ ಒಂದು ನಾಟಕ ಮಂಡಳಿಯ ಆಶ್ರಯದಲ್ಲಿ ಒಂದು ನಾಟಕವನ್ನೂ ಆಡಿಸಿದ್ದ. ಸಾವರ್ಕರ್‌ರಿಗೆ ಅವನ ಕಾರ್ಯನಿರ್ವಹಣೆಯ ಚಾತುರ್ಯ, ಸಾಮರ್ಥ್ಯ, ಕಾರ್ಯನಿಷ್ಠೆ, ಹಿಂದೂಗಳ ಸಂರಕ್ಷಣಾ ಆಸಕ್ತಿ, ಮುಸ್ಲಿಮರ ಮೇಲೆ ಅವನಿಗಿದ್ದ ದ್ವೇಷ ಮೆಚ್ಚುಗೆಯಾಗಿತ್ತು. ಬರಬರುತ್ತ ನಿಕಟ ಪರಿಚಯ ಒಡನಾಟವುಂಟಾಯಿತು. ರತ್ನಗಿರಿಯಲ್ಲಿ ನಾಥೂರಾಮ್ ಗೋಡ್ಸೆ ಅವರ ಆಪ್ತ ಕಾರ್ಯದರ್ಶಿಯಂತೆ ಇಲ್ಲಿ ಕರ್ಕರೆ ಅವರ ಆಪ್ತ ಕಾರ್ಯನಿರ್ವಾಹಕನಾಗಿದ್ದ.

ಅವನು ಯಾರು? ಪೂರ್ವಾಪರಗಳೇನು? ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ತಂದೆಯಿಂದ ದೂರವಾದ ಅನಾಥ ಬಾಲಕ. ಮುಂಬೈಯಲ್ಲಿ ನಾರ್ಟ್ ಕೋಟೆ ಅನಾಥಾಶ್ರಯದಲ್ಲಿ ಬೆಳೆದ. ಅಲ್ಲಿ ಮರಾಠಿ ಪ್ರಾಥಮಿಕ ಶಿಕ್ಷಣ ಪಡೆದ. ಹತ್ತು ವರ್ಷದವನಿದ್ದಾಗ ಅನಾಥಾಶ್ರಮದಿಂದ ತಪ್ಪಿಸಿಕೊಂಡು ಓಡಿಹೋದ. ಯಾವುದೋ ಒಂದು ಸಣ್ಣ ಚಹಾ ಅಂಗಡಿಯಲ್ಲಿ ಚಹಾ ಕೊಡುವ ಕೆಲಸಕ್ಕೆ ಸೇರಿಕೊಂಡು ಅಲ್ಲೇನಾಯಿತೋ ಏನೋ, ಅಲ್ಲಿಂದ ಪುಣೆಗೆ ಹೋದ. ಅಲ್ಲಿ ಏನೇನೋ ಕೆಲಸ ಮಾಡಿಕೊಂಡು 10-15 ವರ್ಷ ಜೀವನ ಸಾಗಿಸಿದ. ಹಿಂದಿ ಮಾತನಾಡಲು, ಮರಾಠಿ ಬರೆಯಲು ಕಲಿತುಕೊಂಡ. ಅಲ್ಲಿ ಆರೆಸ್ಸೆಸ್ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿದ. ಮುಸ್ಲಿಮರ ಮಸೀದಿಗಳ ಮುಂದೆ ಬಾಜಾಬಜಂತ್ರಿ ಬಾರಿಸುವವರೊಡನೆ ಸೇರಿಕೊಂಡು ದೊಂಬಿ ಎಬ್ಬಿಸುವ ‘ವಿಧಾಯಕ ಕಾರ್ಯಕ್ರಮ’ದಲ್ಲಿ ಸಕ್ರಿಯ ಭಾಗವಹಿಸಿದ್ದಿರಬೇಕು. ಇಪ್ಪತ್ತೈದು ವರ್ಷದ ಯುವಕ ಕರ್ಕರೆ ಅಹಮದ್‌ನಗರಕ್ಕೆ ಹೋದ. ಅಲ್ಲೊಂದು ಪಾಳುಬಿದ್ದ ದನದ ಕೊಟ್ಟಿಗೆ, ಗುಡಿಸಲಿನಲ್ಲಿ ಚಹಾ ಅಂಗಡಿ ತೆರೆದ. ಬರಬರುತ್ತ ಆ ಗುಡಿಸಲನ್ನು ವಿಸ್ತರಿಸಿ ಆ ಊರಿಗೆ ಬರುವವರು ರಾತ್ರಿ ತಂಗಲು ಒಂದು ಜೋಪಡಿ ‘ವಸತಿಗೃಹ’ ಏರ್ಪಡಿಸಿದ. ಒಬ್ಬರಿಗೆ ಒಂದು ರಾತ್ರಿ ಇರಲು ನಾಲ್ಕಾಣೆಯೋ ಎಂಟಾಣೆಯೋ ‘ಬಾಡಿಗೆ’ ತೆಗೆದುಕೊಳ್ಳುತ್ತಿದ್ದ. ಕ್ರಮೇಣ ಶ್ರೀಮಂತನಾದ. ‘ಡೆಕ್ಕನ್ ಗೆಸ್ಟ್ ಹೌಸ್’ ಕಟ್ಟಿಸಿದ. ಇನ್ನೂ ಶ್ರೀಮಂತನಾದ. ಈಗ ‘ಕರ್ಕರೆ ಶೇಠ್’ ಆದ. ಮದುವೆಯಾದ. ಮುನಿಸಿಪಲ್ ಕೌನ್ಸಿಲ್‌ಗೆ ಅವಿರೋಧ ಆಯ್ಕೆ ಆದ. ಸ್ಥಳೀಯ ಹಿಂದೂ ಮಹಾಸಭೆಯ ಸಂಸ್ಥಾಪಕನಾದ. ಆಗ ಪಂಜಾಬಿನಿಂದ ನಿರಾಶ್ರಿತನಾಗಿ ಬಂದಿದ್ದ ಮದನಲಾಲ್ ಪಹ್ವಾನನ್ನು ಅತಿಥಿಗೃಹದಲ್ಲಿ ಜವಾನನನ್ನಾಗಿ ನೇಮಿಸಿಕೊಂಡ. ದೇಶ ಇಬ್ಭಾಗವಾಗುವುದಕ್ಕೆ ಸ್ವಲ್ಪ ಮುಂಚೆ, ತರುವಾಯ ಸಿಂಧ್ ಪ್ರಾಂತದಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದವರಿಗೆ ಆಶ್ರಯ ನೀಡುವ ಶಿಬಿರಗಳನ್ನು ಅಹಮದ್‌ನಗರದಲ್ಲಿ ಏರ್ಪಡಿಸಿದ. ಆ ಶಿಬಿರಗಳಿಗೆ ಬೇಕಾಗುವ ಧನಧಾನ್ಯ ವಸನಕ್ಕಾಗಿ ಪಟ್ಟಿ ಎತ್ತುವ ಕೆಲಸದಲ್ಲಿ ತೊಡಗಿ ಆಪಾರ ಹಣ ಸಂಗ್ರಹ ಮಾಡಿದ. ಹೀಗೆ ಪಿತೂರಿಗಾರರ ಅಷ್ಟಗ್ರಹ ಕೂಟ ರೂಪುಗೊಂಡಿತು.

ಆದರೆ ಡೆಕ್ಕನ್ ಗೆಸ್ಟ್ ಹೌಸ್‌ನಲ್ಲಿ ಅಕ್ರಮ ಶಸ್ತ್ರ ಸಂಗ್ರಹ ಮಾಡಬೇಕಾದ ಅಗತ್ಯವೇನಿತ್ತು? ಹೈದರಾಬಾದ್ ನಿಜಾಮ ರಾಜ್ಯದಲ್ಲಿ ಆಗ ರಜಾಕಾರ್ ಹಾವಳಿ ಮಿತಿಮೀರಿತ್ತು. ರಜ್ವಿ ಎಂಬ ಒಬ್ಬ ಅಗ್ನಿ ಭಕ್ಷಕ ಮುಸ್ಲಿಂ ಮುಂದಾಳು ಹೈದರಾಬಾದ್ ಸ್ವತಂತ್ರ ದೇಶವಾಗಬೇಕೆಂದು, ನಿಜಾಮರು ಆ ದೇಶದ ದೊರೆಯಾಗಬೇಕೆಂದು ಭಯಂಕರವಾದ ಆಂದೋಲನ ನಡೆಸಿದ್ದ. ನಿಜಾಮರ ಆಳ್ವಿಕೆಗೆ ವಿರೋಧವಾಗಿದ್ದ ಹೈದರಾಬಾದ್ ಹಿಂದೂ ಪ್ರಜೆಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಚಿತ್ರಹಿಂಸೆ, ಕೊಲೆ, ಸುಲಿಗೆ, ಆಸ್ತಿ ಅಪಹರಣ, ಸ್ತ್ರೀ ಮಾನಭಂಗ ಮುಂತಾದ ದುಷ್ಕೃತ್ಯವನ್ನೆಸಗಿ ಅಲ್ಲಿಯ ಜನರ ಬಾಳು ಅಸಹನೀಯವನ್ನಾಗಿ ಮಾಡಿದ್ದ. ಆ ಹಿಂಸೆಯನ್ನು ಸಹಿಸಲಾರದೆ ನೆರೆಯ ಮುಂಬೈ ರಾಜ್ಯಕ್ಕೆ ಓಡಿಬಂದು ಆಶ್ರಯ ಪಡೆದಿದ್ದರು. ಅವರಿಗೆ ಕರ್ಕರೆ ಆಶ್ರಯ ಕೊಟ್ಟಿದ್ದಲ್ಲದೆ, ಹೈದರಾಬಾದಿನ ಮೇಲೆ ದಾಳಿ ಮಾಡುವ ಸಲುವಾಗಿ ಅಲ್ಲಿರುವ ಹಿಂದೂಗಳಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಲು, ಅಲ್ಲದೆ ಭಾರತದಲ್ಲಿರುವ ಮುಸ್ಲಿಮರನ್ನು ಬಗ್ಗು ಬಡಿಯಲು ಶಸ್ತ್ರಗಳನ್ನು ಒದಗಿಸಲೂ ಏರ್ಪಾಟೂ ಮಾಡಿದ್ದ. ಆದ್ದರಿಂದ ಮುಂಬೈ ಶಹರದಲ್ಲಿ ಶಸ್ತ್ರಗಳ ತಯಾರಕರ ಮತ್ತು ವ್ಯಾಪಾರಿಗಳ ಪರಿಚಯವೂ ಅವನಿಗಿತ್ತು. ಅಂತಹ ಶಸ್ತ್ರಗಳ ವ್ಯಾಪಾರಿ ದಿಗಂಬರ ಬಡ್ಗೆ ಎಂಬ ಸಾಧು ವೇಷಧಾರಿ. ಇಂತಹ ಅಕ್ರಮ ವ್ಯವಹಾರದಲ್ಲಿ ತೊಡಗಿದ್ದ ಅವನು ಸನ್ಯಾಸಿಗಳಂತೆ ಉದ್ದವಾದ ದಾಡಿ, ದೀರ್ಘ ತಲೆಗೂದಲು ಬೆಳೆಸಿದ್ದ. ಅದಕ್ಕೆ ತಕ್ಕಂತೆ ಒಮ್ಮೆಮ್ಮೆ ಕಾವಿ ಕಾಷಾಯ ವಸ್ತ್ರ ಧರಿಸುತ್ತಿದ್ದ. ಡೋಲು ಬಾರಿಸುತ್ತ ಬೀದಿಯಲ್ಲಿ ಹಾಡುತ್ತ ಹೋಗುತ್ತಿದ್ದ! ಕಾವಿ ಏನನ್ನಾದರೂ ಮುಚ್ಚಿಕೊಳ್ಳುತ್ತದೆ ಎಂಬ ಮಾತಿಗೆ ಬಡ್ಗೆಯ ಶಸ್ತ್ರಾಸ್ತ್ರ ವ್ಯವಹಾರವೂ ಸಾಕ್ಷಿಯಾಗಿತ್ತು. ಆದರೂ ಸರಕಾರದಿಂದ ಪರವಾನಿಗೆ ಇಲ್ಲದೆ ಬಳಸಬಹುದಾಗಿದ್ದ, ತಯಾರಿಸಬಹುದಾಗಿದ್ದ ಚಾಕು, ಚೂರಿ, ಭರ್ಜಿ, ಜಂಬಿಯಾ, ಉಕ್ಕಿನ ಹುಲಿ ಉಗುರು, ಈಟಿ ಮುಂತಾದ ನಿತ್ಯೋಪಯೋಗಿ ನಿರುಪದ್ರ ಆಯುಧಗಳನ್ನು ಮಾರುವ ಒಂದು ‘ಶಸ್ತ್ರ ಭಂಡಾರ’ವನ್ನು ತೆರೆದಿದ್ದ. ಅವನು ಕರ್ಕರೆ ಬಳಗಕ್ಕೆ ಶಸ್ತ್ರಗಳನ್ನು ಪೂರೈಸುತ್ತಿದ್ದ. ಅವನನ್ನು ಪೊಲೀಸರು 31-1-48ರಂದೇ ವಶಕ್ಕೆ ತೆಗೆದುಕೊಂಡಿದ್ದರು. ಅವನು ಪೊಲೀಸರಿಗೆ ಒದಗಿಸಿದ್ದ ಮಾಹಿತಿಯಿಂದ ಗೋಡ್ಸೆ ಗಾಂಧಿ ಹತ್ಯೆಗೆ ಬಳಸಿದ್ದ ವಿದೇಶಿ ಪಿಸ್ತೂಲಿನ ಮೂಲವನ್ನು ಶೋಧಿಸಲು ನಗರವಾಲಾ ತಪಾಸಣೆ ಮುಂದುವರಿಸಿದರು. ಆ ಪಿಸ್ತೂಲನ್ನು ಗ್ವಾಲಿಯರ್‌ನ ಹಿಂದೂ ಮಹಾಸಭಾ ಮುಖಂಡ ಡಾ.ಪರಚುರೆ ಒದಗಿಸಿದ್ದನೆಂದು ತಿಳಿದು ಗ್ವಾಲಿಯರ್‌ಗೆ ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ