ಪುಟ್ಟ ಕಂದಮ್ಮಗಳ ಕೈ ಹಿಡಿಯುವ ಕೃತಿ
‘‘ದೇಶವೊಂದು ಎಷ್ಟು ಸದೃಢವಾಗಿದೆ ಎನ್ನುವುದನ್ನು ಅಳೆಯಲು ಬೇರೇನೂ ಮಾನದಂಡ ಬೇಡ. ಆ ದೇಶ ಅಲ್ಲಿನ ಮಕ್ಕಳ ಆರೋಗ್ಯ, ಭದ್ರತೆ, ಸುರಕ್ಷತೆ, ಶಿಕ್ಷಣಕ್ಕೆ ಎಷ್ಟು ಗಮನ ಕೊಡುತ್ತಿದೆ ಹಾಗೂ ಮಗುವಿನ ಕುಟುಂಬ ಮತ್ತು ಹೊರಗಿನ ಸಮಾಜದಲ್ಲಿ ಮಕ್ಕಳಿಗೆ ಅಗತ್ಯ ಪ್ರೀತಿ ಮನ್ನಣೆ ಸಿಗುತ್ತಿದೆಯೇ ಎನ್ನುವುದನ್ನು ಗಮನಿಸಿದರೆ ಸಾಕು...’’ ಇದು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಬಂಡಿಕೆಯಲ್ಲಿ ಬರುವ ಸಾಲು.
ಭಾರತದ ಮೂಲಭೂತ ಸಮಸ್ಯೆಯನ್ನು ನಾವು ಈ ನೆಲೆಯಲ್ಲಿ ನೋಡಬೇಕಾಗಿದೆ. ನಾವಿಂದು ಕ್ರೀಡಾಪಟುಗಳನ್ನು, ವಿಜ್ಞಾನಿಗಳನ್ನು, ಕಲಾಕಾರರನ್ನು ಯುವಕರಲ್ಲಿ ಹುಡುಕುತ್ತೇವೆ. ಆದರೆ ಒಬ್ಬ ಕ್ರೀಡಾ ಪಟು ಸಹಿತ ಯಾವುದೇ ಸೃಜನಶೀಲ ಪ್ರತಿಭೆಗಳು ಹುಟ್ಟುವುದು ಬಾಲ್ಯದಲ್ಲಿ. ಮಕ್ಕಳಿರುವಾಗ ನಾವು ಅದಕ್ಕೆ ಹಾಕಿದ್ದ ಗೊಬ್ಬರ ಪೋಷಕಾಂಶದ ಫಲ, ಯೌವನದಲ್ಲಿ ಬಿಡುತ್ತದೆ. ಮಕ್ಕಳ ಕುರಿತಂತೆ ಭಾರತದ ಗಾಢ ನಿರ್ಲಕ್ಷವೇ ಈ ದೇಶ ಹಲವು ಕ್ಷೇತ್ರಗಳಲ್ಲಿ ಇನ್ನೂ ಹಿಂದುಳಿಯಲು ಕಾರಣ ಎನ್ನುವುದು ಮೇಲ್ನೋಟಕ್ಕೆ ಅರಿವಿಗೆ ಬರುತ್ತದೆ. ರೂಪಾ ಹಾಸನ ಅವರ ಕೃತಿ ‘ಕೈ ಚಾಚುತಿದೆ ಕಂದಮ್ಮಗಳು’ ಭಾರತದ ಮಕ್ಕಳ ಕುರಿತ ವಿವರಗಳನ್ನು ಸಮಗ್ರವಾಗಿ ಕಟ್ಟಿ ಕೊಡುತ್ತದೆ.
ಮಕ್ಕಳು ಎದುರಿಸುತ್ತಿರುವ ಸವಾಲುಗಳನ್ನು ಬೇರೆ ಬೇರೆ ನೆಲೆಗಳಲ್ಲಿ ಈ ಕೃತಿ ನೋಡುತ್ತದೆ. ಬಹುಶಃ ಮಕ್ಕಳ ಕುರಿತಂತೆ ಅಂಕಿಅಂಶಗಳನ್ನು ಆಧಾರವಾಗಿಟ್ಟು ಬಂದ ಅಪರೂಪದ ಕೃತಿಗಳಲ್ಲಿ ‘ಕೈ ಚಾಚುತಿದೆ ಕಂದಮ್ಮಗಳು’ ಒಂದು. ಈ ಕೃತಿಯನ್ನು ಐದು ಭಾಗಗಳಾಗಿ ವಿಂಗಡಿಸಲಾಗಿದೆ. ಬಾಲ್ಯ ಕಾಲದಲ್ಲಿ ಮಕ್ಕಳು ಭೌತಿಕವಾಗಿ ಎದುರಿಸುವ ಸವಾಲುಗಳು, ಮಕ್ಕಳೊಂದಿಗೆ ಮಾನಸಿಕವಾಗಿ ನಾವು ಹೊಂದಿರಬೇಕಾದ ಸಂಬಂಧಗಳು, ಮಕ್ಕಳ ಹಿತರಕ್ಷಣೆಗಾಗಿ ನಮ್ಮ ಹೊಣೆಗಾರಿಕೆಗಳು, ಮಕ್ಕಳಿಗಾಗಿ ಓದು, ಪುಸ್ತಕಗಳು, ದೇಶದಲ್ಲಿ ಮಕ್ಕಳ ಸ್ಥಿತಿಗತಿಯ ಕುರಿತ ಬೇರೆ ಬೇರೆ ಅಂಕಿಂಶಗಳನ್ನು ಈ ಅಧ್ಯಾಯಗಳು ಹೊಂದಿೆ. ಮಕ್ಕಳನ್ನು ಬೆಳೆಸುವ ಕುರಿತಂತೆ ಹಲವು ಮಾನಸಿಕ ಮತ್ತು ಶಿಕ್ಷಣ ತಜ್ಞರು ಬರೆದಿದ್ದಾರೆ. ಇಲ್ಲಿ ಮಾನಸಿಕವಾಗಿ ಮಾತ್ರವಲ್ಲ, ದೈಹಿಕವಾಗಿ ಮಕ್ಕಳು ಎದುರಿಸುತ್ತಿರುವ ಸವಾಲುಗಳು ಮತ್ತು ಒಂದು ದೇಶ ಮಕ್ಕಳಿಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಎತ್ತಿ ತೋರಿಸುತ್ತದೆ. ಮಕ್ಕಳ ಕಳ್ಳತನ, ಬಾಲ್ಯ ವಿವಾಹ, ಮಕ್ಕಳನ್ನು ಕಾಡುವ ಬಡತನ, ಹೆಣ್ಣು ಮಕ್ಕಳ ಶಿಕ್ಷಣ, ಬಾಲಕಾರ್ಮಿಕ ಪದ್ಧತಿ, ಬಾಲಾಪರಾಧ ಮೊದಲಾದ ವಿಷಯಗಳನ್ನು ಈ ಕೃತಿ ಚರ್ಚಿಸುತ್ತದೆ.
ಪಾಲಕರು, ಶಿಕ್ಷಕರು ಮಾತ್ರವಲ್ಲ, ಭವಿಷ್ಯದ ಕುರಿತಂತೆ ಕಾಳಜಿಯುಳ್ಳ ಎಲ್ಲರೂ ಓದಬೇಕಾದ ಕೃತಿ ಇದು. ಇಂದಿನ ಮಕ್ಕಳೇ ಮುಂದಿನ ಭವಿಷ್ಯ ಹೇಗೆ ಎನ್ನುವುದನ್ನು ಅರ್ಥಮಾಡಿಸಿಕೊಡುವ ಕೃತಿ ಇದು. ಅಭಿರುಚಿ ಗಣೇಶ್ ಬೆಂಗಳೂರು ಪ್ರಕಾಶನದಿಂದ ಈ ಕೃತಿ ಹೊರಬಂದಿದೆ. ಒಟ್ಟು ಪುಟಗಳು 248. ಮುಖಬೆಲೆ 225 ರೂ. ಆಸಕ್ತರು 99805 60013 ದೂರವಾಣಿಯನ್ನು ಸಂಪರ್ಕಿಸಬಹುದು.