ಸಂಶೋಧನೆಗೂ ಸೆನ್ಸಾರ್ ಕತ್ತರಿ

Update: 2019-03-28 18:37 GMT

ಸರಕಾರದ ಸುತ್ತೋಲೆಯನ್ನು ಗಮನಿಸಿದರೆ ಭವಿಷ್ಯದಲ್ಲಿ ಸಂಶೋಧಕರು ಒಂದೋ ಸರಕಾರದ ಮರ್ಜಿಗನುಗುಣವಾಗಿ ಸಂಶೋಧನೆ ನಡೆಸುತ್ತಾ ತೆಪ್ಪಗೆ ಬಿದ್ದಿರಬೇಕು ಅಥವಾ ತಮ್ಮ ಸ್ವಂತ ಆಯ್ಕೆಯ ವಿಷಯದಲ್ಲಿ ಸಂಶೋಧನೆ ನಡೆಸಿ ಅದರ ಫಲಿತಾಂಶ ಪ್ರಭುತ್ವದ ಮರ್ಜಿಗೆ ಅನುಗುಣವಾಗಿ ಇಲ್ಲವೆಂದಾದಲ್ಲಿ ಕಿರುಕುಳ ಅನುಭವಿಸಲು, (ಪ್ರಭುತ್ವಕ್ಕೆ ಅಥವಾ ಪ್ರಭುತ್ವದ ದಾಸರಿಗೆ ‘ಅನಿವಾರ್ಯ’ ಎನಿಸಿದಲ್ಲಿ) ದೇಶದ್ರೋಹದ ಆಪಾದನೆಯ ಮೇರೆಗೆ ಜೈಲಿಗೆ ಹೋಗಲು ಸಿದ್ಧರಿರಬೇಕು.

ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿಂದತಿ
-ಭಗವದ್ಗೀತೆ (4:38)

ಈ ಪ್ರಪಂಚದಲ್ಲಿ ಜ್ಞಾನಕ್ಕೆ ಸಮಾನವಾದದ್ದು, ಜ್ಞಾನಕ್ಕಿಂತ ಶ್ರೇಷ್ಠವಾದುದು ಯಾವುದೂ ಇಲ್ಲ ಎಂಬ ಭಗವದ್ಗೀತೆಯ ಈ ಮೇಲಿನ ಮಾತನ್ನು ನಾವು ನಮ್ಮ ಭಾರತೀಯ ಸಂಸ್ಕೃತಿಯ ಹಿರಿಮೆ ಎಂದು ಹೆಮ್ಮೆ ಪಡುತ್ತೇವೆ. ಜ್ಞಾನದ ಹುಡುಕಾಟ, ಅವ್ಯಕ್ತ ದಿಂದ ವ್ಯಕ್ತದ ಕಡೆಗೆ ಸಾಗುವ ನಿರಂತರ ಪಯಣ ಶತ ಶತಮಾನಗಳಿಂದ ಇಲ್ಲಿ ನಡೆಯುತ್ತ ಬಂದಿದೆ. ಜ್ಞಾನವನ್ನು ಮತ್ತು ಪ್ರಪಂಚ ಪರಿಸರದ ಕುರಿತಾದ ತನ್ನ ಅರಿವಿನ ಪರಿಧಿಯನ್ನು ಮನುಷ್ಯ ವಿಸ್ತರಿಸುತ್ತಾ, ವಿಸ್ತರಿಸಲು ಪ್ರಯತ್ನಿಸುತ್ತಾ ಬಂದಿದ್ದಾನೆ. ಈ ಪ್ರಯತ್ನಕ್ಕೆ ಮಾನವನ ಇತಿಹಾಸದ ವಿವಿಧ ಘಟ್ಟಗಳಲ್ಲಿ ಆಗೊಮ್ಮೆ ಈಗೊಮ್ಮೆ ತಡೆಯೊಡ್ಡುವ ಪ್ರಸಂಗಗಳು ನಡೆದಿವೆ. ವಿಶ್ವದ ಕುರಿತಾದ ಗೆಲಿಲಿಯೋನಂತಹ ಖಗೋಳ ವಿಜ್ಞಾನಿಯ ಹೊಸ ಸಂಶೋಧನೆಯನ್ನು ಹತ್ತಿಕ್ಕಿ ಆತನನ್ನು ಶಿಕ್ಷಿಸುವ, ಹೊಸ ವಿಚಾರಗಳನ್ನು ಮಂಡಿಸುವವರಿಗೆ ಕಿರುಕುಳ ಕೊಡುವ ಘಟನೆಗಳು ಸಂಭವಿಸಿವೆ. ಆದರೂ ಒಟ್ಟಿನಲ್ಲಿ ಹೊಸ ಶೋಧಗಳು ಸಂಶೋಧನೆಗಳು ಜಗತ್ತನ್ನು ಅಭಿವೃದ್ಧಿಯ ಕಡೆಗೆ ಮುನ್ನಡೆಸಿವೆ.
ಇಂತಹ ಮುನ್ನಡೆಗೆ ಆಧುನಿಕ ರಾಷ್ಟ್ರಗಳು, ವಿಶೇಷವಾಗಿ ಪ್ರಜಾಸತ್ತಾತ್ಮಕ ಸರಕಾರಗಳು ತಡೆಯೊಡ್ಡಿದ ಬಹಳ ಉದಾಹರಣೆಗಳಿಲ್ಲ. ಆದರೆ ನಮ್ಮ ದೇಶದಲ್ಲಿ ಇತ್ತೀಚೆಗೆ ಆಗಿರುವ ಬೆಳವಣಿಗೆಯೊಂದು ಜ್ಞಾನದ ಅನ್ವೇಷಣೆಗೆ ಕೊಡಲಿ ಏಟು ಹಾಕುವ ಪ್ರಭುತ್ವದ ಒಂದು ಹುನ್ನಾರ ಇರಬಹುದೇ ಎಂಬ ಸಂಶಯ ದೇಶದ ಪ್ರಜ್ಞಾವಂತ ವಲಯವನ್ನು ಕಾಡಲಾರಂಭಿಸಿದೆ.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಹೊರಡಿಸಿರುವ ಸುತ್ತೋಲೆಯೊಂದು ಈ ದೇಶದಲ್ಲಿ ಇನ್ನು ಮುಂದಕ್ಕೆ ಪಿಎಚ್‌ಡಿ ಮತ್ತಿತರ ಸಂಶೋಧನೆಗಳಲ್ಲಿ ತೊಡಗುವ ವಿದ್ಯಾರ್ಥಿಗಳು ರಾಷ್ಟ್ರೀಯ ಆದ್ಯತೆಗೆ ಸಂಬಂಧಪಟ್ಟ ವಿಚಾರಗಳನ್ನು ತಮ್ಮ ಸಂಶೋಧನಾ ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳಬೇಕೆಂದು ಹೇಳಿದೆ. ಸುತ್ತೋಲೆಯ ಪ್ರಕಾರ ಸಂಶೋಧನಾ ವಿದ್ಯಾರ್ಥಿಗಳು ರಾಷ್ಟ್ರೀಯ ಆದ್ಯತೆಯ ವಿಚಾರಗಳನ್ನು ಆಧರಿಸಿದ ವಿಷಯಗಳ ಕುರಿತಾಗಿ ಮಾತ್ರ ಸಂಶೋಧನೆ ನಡೆಸಬೇಕು. ಈ ಆದ್ಯತೆಯ ಹೊರತಾದ ‘ಅಪ್ರಸ್ತುತ’ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲು ಅವರಿಗೆ ಅವಕಾಶವಿರುವುದಿಲ್ಲ. ಅಲ್ಲದೆ, ಸಂಶೋಧನಾ ವಿದ್ಯಾರ್ಥಿಗಳು ಸಂಶೋಧನೆಗಾಗಿ ವಿಷಯವನ್ನು ಆಯ್ದುಕೊಳ್ಳುವಾಗ ಆಯಾ ಇಲಾಖಾ ತಜ್ಞರೇ ರೂಪಿಸಿದ ವಿಷಯಗಳ ಪಟ್ಟಿಯಿಂದ ಒಂದು ವಿಷಯವನ್ನು ಆರಿಸಿಕೊಳ್ಳಬೇಕು.
ಇಷ್ಟರವರೆಗೆ ರೂಢಿಯಲ್ಲಿರುವ ಸಂಶೋಧನಾ ಪ್ರಕ್ರಿಯೆಯ ಪ್ರಕಾರ, ಸಂಶೋಧಕರು ತಮ್ಮ ಆಯ್ಕೆಯ ವಿಷಯವನ್ನು ವಿಶ್ವವಿದ್ಯಾನಿಲಯ ಸಂದರ್ಶನದಲ್ಲಿ ಸೂಚಿಸುತ್ತಾರೆ. ತಜ್ಞರ ಸಮಿತಿಯ ಮುಂದೆ ಈ ವಿಷಯದ ‘ಏನು? ಯಾಕೆ? ಎಷ್ಟು ಪ್ರಸ್ತುತ? ಇತ್ಯಾದಿಗಳ ಬಗ್ಗೆ ಸಮರ್ಥನೆ ನೀಡುತ್ತಾರೆ. ಸಮಿತಿಯು ಒಂದೋ ಆ ವಿಷಯವನ್ನು ಅನುಮೋದಿಸುತ್ತದೆ. ಅಥವಾ ಅದಕ್ಕೆ ಕೆಲವು ಬದಲಾವಣೆಗಳನ್ನು ಸೂಚಿಸುತ್ತದೆ. ಅಂತಿಮವಾಗಿ, ವಿದ್ಯಾರ್ಥಿಗಳು ತಾವು ನಡೆಸಬಹುದಾದ ಸಂಶೋಧನೆಯನ್ನು (ತಾವು ಆಯ್ದುಕೊಂಡ ವಿಷಯದಲ್ಲಿ) ನಡೆಸುವುದಕ್ಕೆ ಅನುಮತಿ ನೀಡಲಾಗುತ್ತದೆ. ಆದರೆ ಸರಕಾರ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಇದೆಲ್ಲ ಇನ್ನು ಮುಂದೆ ನಡೆಯುವುದಿಲ್ಲ. ಸರಕಾರಿ ತಜ್ಞರು ಅಥವಾ ಸರಕಾರದ ಅಕಾಡಮಿಕ್ ಜೀಹುಜೂರ್‌ಗಳು ಹೇಳಿದಂತೆಯೇ ಎಲ್ಲವೂ ನಡೆಯಬೇಕಾಗುತ್ತದೆ. ಸರಕಾರದ ಈ ಸುತ್ತೋಲೆ ಸಂಶೋಧಕರ ಹಾಗೂ ಸಂಶೋಧನೆಯ ಪಾಲಿಗೆ ಶುದ್ಧ ಸಂಶೋಧನೆಯ ಸಾವನ್ನು ತಿಳಿಸುವ ಸುತ್ತೋಲೆಯಾದರೂ ಆಶ್ಚರ್ಯವಿಲ್ಲ.
ಯಾಕೆಂದರೆ ‘ಸಂಶೋಧನೆ’ ಶಬ್ದದ ನಿಜವಾದ ಅರ್ಥ ತಿಳಿದಿರುವ ಯಾವ ಪ್ರಭುತ್ವವೂ ಇಂತಹ ಸುತ್ತೋಲೆಯನ್ನು ಹೊರಡಿಸುವ ಸಾಹಸ ಮಾಡಲಾರದು.
ಸಂಶೋಧನೆ ಅಥವಾ ‘ರಿಸರ್ಚ್’ ಎಂಬ ಪದದ ಅರ್ಥವೇ ‘ಹುಡುಕುವುದು, ಜ್ಞಾನವನ್ನು ಹುಡುಕಿಕೊಂಡು ಹೋಗುವುದು.’
ಮನುಷ್ಯ, ಸಮಾಜ, ಪರಿಸರ, ಧರ್ಮ, ಸಂಸ್ಕೃತಿ, ಪ್ರಭುತ್ವ ಕುರಿತಾದ ಜ್ಞಾನವೂ ಒಳಗೊಂಡಂತೆ, ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗುವುದು. ನಮಗೆ ಈಗಾಗಲೇ ತಿಳಿದಿರುವುದು ಸರಿಯೋ ತಪ್ಪೋ ಎಂದು ಹೊಸ ಪುರಾವೆಗಳ ಮೂಲಕ ಪರೀಕ್ಷಿಸುವುದು, ನಮ್ಮ ಬದುಕನ್ನು, ಸಂಸ್ಕೃತಿಯನ್ನು, ಅರ್ಥ ವ್ಯವಸ್ಥೆಯನ್ನು ಕಾಡುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹಾರಗಳನ್ನು ಸೂಚಿಸುವುದು. ಈ ಎಲ್ಲ ಪ್ರಕ್ರಿಯೆಗಳ ಅಂತಿಮ ಫಲಿತಾಂಶ ನಮಗೆ, ನಮ್ಮ ಪ್ರಭುತ್ವಕ್ಕೆ, ಸಮಾಜಕ್ಕೆ ಒಪ್ಪಿಗೆ ಆಗಬಹುದು ಅಥವಾ ಆಗದಿರಬಹುದು. ಅದಕ್ಕಾಗಿ ಸಂಶೋಧಕನಿಗೆ (ಡಾ. ಎಂ. ಎಂ. ಕಲಬುರ್ಗಿ ಅವರಿಗೆ ನೀಡಿದಂತೆ ಕಿರುಕುಳ ನೀಡುವಂತಿಲ್ಲ; ಅವರನ್ನು ಗುಂಡು ಹೊಡೆದು ಸಾಯಿಸುವಂತಿಲ್ಲ) ಸರಕಾರದ ಸುತ್ತೋಲೆಯನ್ನು ಗಮನಿಸಿದರೆ ಭವಿಷ್ಯದಲ್ಲಿ ಸಂಶೋಧಕರು ಒಂದೋ ಸರಕಾರದ ಮರ್ಜಿಗನುಗುಣವಾಗಿ ಸಂಶೋಧನೆ ನಡೆಸುತ್ತಾ ತೆಪ್ಪಗೆ ಬಿದ್ದಿರಬೇಕು ಅಥವಾ ತಮ್ಮ ಸ್ವಂತ ಆಯ್ಕೆಯ ವಿಷಯದಲ್ಲಿ ಸಂಶೋಧನೆ ನಡೆಸಿ ಅದರ ಫಲಿತಾಂಶ ಪ್ರಭುತ್ವದ ಮರ್ಜಿಗೆ ಅನುಗುಣವಾಗಿ ಇಲ್ಲವೆಂದಾದಲ್ಲಿ ಕಿರುಕುಳ ಅನುಭವಿಸಲು, (ಪ್ರಭುತ್ವಕ್ಕೆ ಅಥವಾ ಪ್ರಭುತ್ವದ ದಾಸರಿಗೆ ‘ಅನಿವಾರ್ಯ’ ಎನಿಸಿದಲ್ಲಿ) ದೇಶದ್ರೋಹದ ಆಪಾದನೆಯ ಮೇರೆಗೆ ಜೈಲಿಗೆ ಹೋಗಲು ಸಿದ್ಧರಿರಬೇಕು.


ಯಾಕೆಂದರೆ ಒಂದು ವಿಷಯ ‘ರಾಷ್ಟ್ರೀಯ ಆದ್ಯತೆ’ಯ ವಿಚಾರಗಳನ್ನು ಆಧರಿಸಿದೆಯೋ ಇಲ್ಲವೋ ಎಂದು ನಿರ್ಧರಿಸುವವರು ಯಾರು? ಅಲ್ಲದೆ ಸಂಶೋಧನಾ ವಿಷಯವೊಂದು ಅಪ್ರಸ್ತುತ ಎನ್ನುವಾಗ ಈ ಅಪ್ರಸ್ತುತತೆಯನ್ನು ನಿರ್ಧರಿಸಲು ಬಳಸುವ ಮಾನದಂಡಗಳು ಯಾವುವು? ಆಯಾ ಇಲಾಖಾ ತಜ್ಞರೇ ತಯಾರಿಸಿದ ವಿಷಯಗಳ ಪಟ್ಟಿಯಿಂದ ಒಂದು ವಿಷಯವನ್ನು ಆಯ್ದುಕೊಳ್ಳಬೇಕು ಎಂದರೆ, ಆ ತಜ್ಞರೆನಿಸಿದವರೆಲ್ಲ ಸರಕಾರ ನೀಡುವ ಅನುದಾನದಿಂದಲೇ ವೇತನ ಪಡೆದು ಹೊಟ್ಟೆ ಹೊರೆದುಕೊಳ್ಳುವವರಾದ್ದರಿಂದ ಅವರು ಸಹಜವಾಗಿಯೇ ಪ್ರಭುತ್ವದ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಸಿದ್ಧಾಂತಗಳಿಗೆ ಪೂರಕವಾದ ವಿಷಯಗಳನ್ನಷ್ಟೇ ಅವರ ವಿಷಯಗಳ ಪಟ್ಟಿಯಲ್ಲಿ ಸೇರಿಸುತ್ತಾರೆ. ಇಲ್ಲವಾದಲ್ಲಿ ಅವರ ಹೊಟ್ಟೆಪಾಡಿಗೇ (ವೇತನಕ್ಕೆ) ಸಂಚಕಾರ ಬರಬಹುದು. ಹೀಗಾದಾಗ ಸಂಶೋಧನೆ, ವಿಶೇಷವಾಗಿ ಅರ್ಥ ವ್ಯವಸ್ಥೆ, ವಾಣಿಜ್ಯ, ಮಾನವಿಕ ವಿಷಯಗಳು ಹಾಗೂ ಧರ್ಮಕ್ಕೆ ಸಂಬಂಧಿಸಿದಂತೆ ಎಷ್ಟು ಮುಕ್ತವೂ, ಸ್ವತಂತ್ರವೂ, ಸತ್ಯಶೋಧಕವೂ ಆಗಿರಲು ಸಾಧ್ಯ?
ಈ ಪ್ರಶ್ನೆಗಳೆಲ್ಲ ಯಾಕೆ ಮುಖ್ಯವಾಗುತ್ತವೆಂದು ತಿಳಿಯಬೇಕಾದರೆ ವಿಶ್ವದಾದ್ಯಂತ ಕೆಲವು ಮುಂದುವರಿದ ದೇಶಗಳಲ್ಲಿ ನಡೆದಿರುವ, ನಡೆಯುತ್ತಿರುವ ಸಂಶೋಧನಾ ವಿಷಯಗಳ ಕಡೆಗೆ ಕಣ್ಣು ಹಾಯಿಸಬೇಕು. ನಾನು ನನ್ನ ಪಿ.ಎಚ್‌ಡಿ. ಅಧ್ಯಯನಕ್ಕೆ ‘‘ಕರ್ನಾಟಕದ ಶಿಕ್ಷಣ ಕ್ರಮದಲ್ಲಿ ಭಾಷೆ, ಮಹಿಳೆಯರ ಸ್ಥಾನಮಾನ ಹಾಗೂ ಕೋಮು ಸಾಮರಸ್ಯ’’ ಎಂಬ ವಿಷಯವನ್ನು ಆಯ್ದುಕೊಂಡಾಗ ನನ್ನ ಸಂಶೋಧನಾ ಅಧ್ಯಯನಕ್ಕೆ ಬೇಕಾದ ಸಂಶೋಧನಾ ಸಾಹಿತ್ಯದ ಅವಲೋಕನಕ್ಕಾಗಿ ಒಂದು ವಿದೇಶಿ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ನಾಲ್ಕುನೂರುಕ್ಕೂ ಹೆಚ್ಚು ಪಿಎಚ್.ಡಿ. ಮಹಾಪ್ರಬಂಧಗಳನ್ನು ಗಮನಿಸಿದ್ದೆ. ಆ ಮಹಾಪ್ರಬಂಧಗಳ ಶೀರ್ಷಿಕೆಗಳು, ಅಧ್ಯಯನದ ವಿಷಯಗಳು ಎಷ್ಟೊಂದು ಅಗಾಧವಾದ ವ್ಯಾಪ್ತಿಯ ಕ್ಷೇತ್ರಗಳನ್ನು ಒಳಗೊಂಡಿವೆಯೆಂದರೆ ಅಲ್ಲಿ ಪ್ರಭುತ್ವವೊಂದು ಮಧ್ಯ ಪ್ರವೇಶಿಸಿ ‘ರಾಷ್ಟ್ರೀಯ ಆದ್ಯತೆ’ಯ ಆಧಾರದಲ್ಲಿ ವಿಷಯವನ್ನು ನಿರ್ಧರಿಸುವುದಾಗಿದ್ದಲ್ಲಿ, ಅದೆಷ್ಟೋ ಅಧ್ಯಯನಗಳು ಸಾಧ್ಯವೇ ಆಗುತ್ತಿರಲಿಲ್ಲ.
ಜಾಗತೀಕರಣದ ಈ ಯುಗದಲ್ಲಿ ಯಾವುದು ‘ರಾಷ್ಟ್ರೀಯ’, ಯಾವುದು ‘ಪ್ರಾದೇಶಿಕ’, ಯಾವುದು ‘ಸ್ಥಳೀಯ’ ಎಂದು ನಿರ್ಧರಿಸುವುದು ತುಂಬಾ ತೊಡಕಿನ ವಿಷಯ. ಒಂದು ನಿರ್ದಿಷ್ಟ ಧಾರ್ಮಿಕ ಸಿದ್ಧಾಂತಕ್ಕೆ ಬದ್ಧವಾದ ಒಂದು ಪ್ರಭುತ್ವಕ್ಕೆ ಅಯೋಧ್ಯೆ ವಿವಾದ ಒಂದು ವಿಷಯ ‘ರಾಷ್ಟ್ರೀಯ’ ಆದ್ಯತೆಯಾದರೆ ರಾಷ್ಟ್ರಾದ್ಯಂತ ಹರಡಿರುವ ಮಧ್ವ ಮತಾನುಯಾಯಿಗಳಿಗೆ ಉಡುಪಿಯ ಶ್ರೀಕೃಷ್ಣನ ದೇವಾಲಯಕ್ಕೆ ಚಿನ್ನದ ತಗಡು ಹೊದಿಸುವುದು ಕೂಡ ಅಷ್ಟೇ ಆದ್ಯತೆಯ ವಿಷಯವಾಗುತ್ತಿದೆ.
ಒಂದು ದೇಶದ ಬಹುಮುಖ ಪ್ರಗತಿಗೂ ಆ ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ, ಮಾನವಿಕ ವಿಷಯಗಳು ಆಡಳಿತ ಮತ್ತು ವಾಣಿಜ್ಯ ರಂಗಗಳಲ್ಲಿ ನಡೆಯುವ ಸಂಶೋಧನೆಗಳಿಗೂ ನಿಕಟ ಸಂಬಂಧವಿದೆ. ಸಂಶೋಧನೆ ಮೂಲ ಸಂಶೋಧನೆ, ವೈಜ್ಞಾನಿಕ ಸಂಶೋಧನೆ, ಮಾನವಿಕ ವಿಷಯಗಳ ಸಂಶೋಧನೆ, ಐತಿಹಾಸಿಕ ಸಂಶೋಧನೆ ಅಥವಾ ಕಲಾತ್ಮಕ ಸಂಶೋಧನೆ ಯಾವುದೇ ಇರಬಹುದು. ಅದು ಗುಣಾತ್ಮಕ (ಕ್ವಾಲಿಟೇಟಿವ್) ಅಥವಾ ಪರಿಮಾಣಾತ್ಮಕ (ಕ್ವಾಂಟಿಟೇಟಿವ್) ಸಂಶೋಧನೆ ಇರಬಹುದು. ಯಾವ ರೀತಿಯ ಸಂಶೋಧನೆಗೂ ಪ್ರಭುತ್ವದ ಕಟ್ಟು ಪಾಡುಗಳಿಲ್ಲದಾಗ ಮಾತ್ರ ಸಂಶೋಧನೆ ನಿಜವಾದ ಅರ್ಥದಲ್ಲಿ ಸತ್ಯದ ಜೊತೆ ಸಂಶೋಧಕ ನಡೆಸುವ ಪ್ರಯೋಗಗಳಾಗುತ್ತದೆ. ಇಂತಹ ಪ್ರಯೋಗಗಳಿಗೆ ತಡೆ ಇರದಿದ್ದಾಗ ಮಾತ್ರ ಸ್ಥಳೀಯ ಅಥವಾ ಪ್ರಾದೇಶಿಕವಾದದ್ದು ರಾಷ್ಟ್ರೀಯವಾಗುತ್ತದೆ; ‘ರಾಷ್ಟ್ರೀಯ ಆದ್ಯತೆ’ಯ ವಿಷಯವಾಗುತ್ತದೆ.
ಸಂಶೋಧನೆಗೆ ಮುಕ್ತ ಅವಕಾಶವಿರುವ ಅಮೆರಿಕದಲ್ಲಿ, ಒಂದು ವರದಿಯ ಪ್ರಕಾರ, 2014ರಲ್ಲಿ 67,449 ಪಿಎಚ್.ಡಿ. ಮಹಾಪ್ರಬಂಧಗಳು ಹೊರಬಂದವು. (ಸುಮಾರು ತಲಾ ಎಂಟು ನಿಮಿಷಗಳಲ್ಲಿ ಒಂದು ಪಿಎಚ್. ಡಿ.) ಅದೇ ವರ್ಷ ಬೃಹತ್ ಭಾರತದಲ್ಲಿ ಹೊರಬಂದ ಪಿಎಚ್.ಡಿ. ಪ್ರಬಂಧಗಳು 16,039 ಪಿಎಚ್.ಡಿ. ಮಹಾಪ್ರಬಂಧಗಳ ಸಂಖ್ಯೆಗಿಂತ ಅವುಗಳ ಗುಣಮಟ್ಟ ಹೆಚ್ಚು ಮುಖ್ಯ ಎಂಬ ಮಾತು ನಿಜವೇ ಆದರೂ, ಸಂಶೋಧನಾ ವಿಷಯಗಳಲ್ಲೂ ಪ್ರಭುತ್ವವೊಂದು ಮೂಗು ತೂರಿಸಿ ಸಂಶೋಧನೆಗಳಿಗೆ ಪರೋಕ್ಷವಾಗಿ ಸೆನ್ಸಾರ್ ಕತ್ತರಿ ಹಾಕುವುದು ದೇಶದ ಧೀಮಂತ ಆರೋಗ್ಯಕ್ಕೆ ಪೂರಕವಲ್ಲ.
(bhaskarrao599@gmail.com) 

Writer - ಡಾ. ಬಿ. ಭಾಸ್ಕರ ರಾವ್

contributor

Editor - ಡಾ. ಬಿ. ಭಾಸ್ಕರ ರಾವ್

contributor

Similar News

ಜಗದಗಲ
ಜಗ ದಗಲ