ನಮ್ಮ ನಿಮ್ಮ ಭಾವಕ್ಕೂ ಹೊಂದಿಕೊಳ್ಳುವ 'ಅವರವರ ಭಾವಕ್ಕೆ'
ಪ್ರಕಾಶ್ ರೈ ಮತ್ತೆ ಮಾತಿಗೆ ಸಿಕ್ಕಿದರು. ‘ಸಾವಣ್ಣ ಪ್ರಕಾಶನ’ ಅವರೊಂದಿಗಿನ ಮಾತಿಗೆ ಸೇತುವಾಯಿತು. ‘ಇರುವುದೆಲ್ಲವ ಬಿಟ್ಟು’ ಕೃತಿಯ ಬಳಿಕ ‘ಅವರವರ ಭಾವ’ಕ್ಕೆ ಕೃತಿಯ ಮೂಲಕ ಪ್ರಕಾಶ್ ರೈ ಮತ್ತೆ ತನ್ನನ್ನು ತೆರೆದುಕೊಂಡರು. ಓದುಗನ ಮುಂದಿಟ್ಟರು. ‘ಅವರವರ ಭಾವ’ಕ್ಕೆ ಅವರ ಅಂಕಣಗಳ ಕಣಜ. ಅವರ ಬದುಕಿನ ಕಾನ್ಸೆಪ್ಟಿನ ಹೊಸತನ, ಬದುಕು ಮನುಷ್ಯನನ್ನು ಬದುಕಿಸುವ ಪರಿ, ಸೋಲು ಗೆಲುವಿನ ಭಾವಗಳು ಕೃತಿಯಲ್ಲಿ ಕಲೆಗೊಂಡಿವೆ. ಅಮ್ಮ, ತಂದೆ, ಮಗಳು, ಹೀಗೆ ಭಿನ್ನ ಸ್ತರಗಳಲ್ಲಿರುವ ವ್ಯಕ್ತಿ ಭಾವಗಳು ಇಲ್ಲಿ ಒಗ್ಗೂಡಿವೆ. ಸಾಧಾರಣವಾಗಿ ನಾವು ಅಂದುಕೊಳ್ಳುವುದಕ್ಕಿಂತ ಹೆಚ್ಚಾಗಿ ವಿಶೇಷ ರೀತಿಯಲ್ಲಿ ಒಂದು ವಿಚಾರವನ್ನು ಪ್ರಸ್ತಾಪಿಸುವುದು ಪ್ರಕಾಶ್ ರೈ ಅವರ ಹೆಚ್ಚುಗಾರಿಕೆ. ವಿಶೇಷತೆ. ಸಂಬಂಧಗಳ ನಡುವೆ ಬೆಳೆದು ಬಂದು ಮುಂದೆ ಸಮಾಜದ ಭಾಗವಾಗುವ ಮಕ್ಕಳು ಅವ್ವ ನಿಂದ ಹೇಳಿಸಿಕೊಳ್ಳುವ ಮಾತುಗಳಿವೆ ಕೃತಿಯಲ್ಲಿ. ಮನುಷ್ಯನಿಗೆ ತನ್ನವರೇ ಆದ ಇತರ ಮನುಷ್ಯರ ಬಗ್ಗೆ ತಿಳಿಯಲಿರುವ ಪ್ರಯಾಣದ ಜರೂರತ್ತನ್ನು, ಪ್ರಯಾಣ ಕೊಡುವ ಅನುಭವದ ಜಗತ್ತಿನತ್ತ ಕೃತಿ ಮುಖ ಮಾಡುತ್ತದೆ. ಬದುಕು ಹಾಗೆ. ಕಷ್ಟ ಸುಖಗಳ ಸಮ್ಮಿಲನ. ಅರ್ಥ ಕಳೆದುಕೊಂಡ ಬಾಳು ಆತ್ಮಹತ್ಯೆಯ ಹಾದಿಯತ್ತ ಹೊರಳಿಕೊಳ್ಳುತ್ತದೆ ಮತ್ತು ಕೊನೆಯಾಗುತ್ತದೆ. ಬದುಕಿನಲ್ಲಿ ತನ್ನನ್ನು ಎದುರು ಹಾಕಿಕೊಂಡ ಕಷ್ಟಗಳನ್ನು ಮೆಟ್ಟಾಗಿಸಿ, ಸಾವಿರ ಆತ್ಮಹತ್ಯೆ ಮಾಡಿಕೊಳ್ಳುವ ಕಾರಣಗಳ ಮಧ್ಯೆ ಬದುಕುವ ಒಂದೇ ಕಾರಣವನ್ನು ಮುನ್ನೆಲೆಗೆ ತಂದು ಬದುಕುವ ತೀರ್ಮಾನಕ್ಕೆ ಬರುತ್ತದಲ್ಲ, ಅದು ಬದುಕನ್ನು ಅರ್ಥ ಮಾಡಿಕೊಂಡ ಬಗೆ. ಬದುಕಿನ ಪ್ರೀತಿ. ಬದುಕಿನಲ್ಲಿ ನಮ್ಮೆದುರಿಗೆ ಧುತ್ತನೆ ಎರಗುವ ಉತ್ತರವಿಲ್ಲದ ಪ್ರಶ್ನೆಗಳು ನಮ್ಮನ್ನು ಚಿಂತನೆಯ ಆಳಕ್ಕಿಳಿಸುತ್ತದೆ. ಮಗುವೊಂದರ ಸಾಮಾನ್ಯ ಪ್ರಶ್ನೆ ನಮ್ಮನ್ನು ಕೆಲವೊಂದು ಬಾರಿ ಜೀವನ ಪೂರ್ತಿ ಕೊರೆಸುತ್ತದೆ. ಸಿಲ್ಲಿ ಪ್ರಶ್ನೆ ನಮ್ಮನ್ನು ಗಲಿಬಿಲಿಗೊಳಗಾಗಿಸುತ್ತದೆ. ಕೆಲವರು ಮಾತ್ರ ಬದುಕಿನ ಬಗ್ಗೆ ತೃಪ್ತರು. ಹಲವರದು ಗೋಳೇ. ‘‘ಮೂರ್ತಿಯಿಲ್ಲದ ಗುಡಿಗಳಿವೆ ಹುಂಡಿಯಿಲ್ಲದ ಗುಡಿಗಳಿಲ್ಲ’’ ಎನ್ನುವ ಬರಹ ಹಣಕ್ಕೆ ಹೆಣವನ್ನೂ ಐ.ಸಿ.ಯು ವಿನಲ್ಲಿ ಉಳಿಸಿಕೊಳ್ಳುವ, ಸುಖಪ್ರಸವದಲ್ಲಿ ಹುಟ್ಟಬೇಕಾದ ಮಗುವಿಗೆ ಸಿಸೇರಿಯನ್‌ನಲ್ಲಿ ಹುಟ್ಟಿಸುವ, ಭಿಕ್ಷುಕರ ಕಾಸನ್ನು ಕದಿಯುವ ಮನಸ್ಸು ಕೊಡುವ ತಾಕತ್ತಿದೆ. ದುರಂತ ಇದು. ಬದುಕಲು ಬೇಕಾದ ಹಣ ಇಡೀ ಬದುಕಿನ ನಿರ್ಧಾರಕವಾಗಿ ಮನುಷ್ಯತ್ವ, ಪ್ರೀತಿ, ಸಂಬಂಧಗಳನ್ನೆಲ್ಲಾ ಮುದ್ದೆ ಮಾಡಿ ಮೂಲೆಗೆಸೆದ ರೀತಿಯ ಬಗ್ಗೆ ಕೃತಿಯಲ್ಲಿ ನೋವಿದೆ. ಹಣ ಮನುಷ್ಯನನ್ನೂ ಎಂಥಾ ಕೆಳಮಟ್ಟಕ್ಕೂ, ಹೇಸಿಗೆಗೂ ಇಳಿಸಿಕೊಳ್ಳುತ್ತದೆ. ‘‘ಪಯಣಿಸುತ್ತ ಕಂಡುಕೊಂಡ ಬಿಡುಗಡೆ’’ ಬರಹ ನಮ್ಮ ಬದುಕಿನಲ್ಲಿ ಯಾರಿಗೋ ಪ್ರಿಯವಾಗುವುದು, ಅಪ್ರಿಯವಾಗುವುದು ಮುಖ್ಯವಲ್ಲ. ನನ್ನ ಬದುಕನ್ನು ನಾನು ಬದುಕಬೇಕಷ್ಟೇ. ಮನಸಾಕ್ಷಿಗೆ ಎದುರಾಗಿ ಬಾಳದಿದ್ದರಾಯಿತು ಎನ್ನುತ್ತದೆ. ಬದುಕು ತೆರೆದ ಪುಸ್ತಕವಾಗಬೇಕು. ಅಲ್ಲಿ ದ್ವೇಷ, ವಂಚನೆಗಳಿಗೆ ಎಡೆಯಿರಬಾರದು. ಎಲ್ಲವೂ ಶುದ್ಧವಿರಬೇಕು. ಬದುಕನ್ನು ಪಯಣವೆಂದು ಕರೆದ ಕೃತಿ ಪಯಣ ಕೊಡುವ ಅನುಭೂತಿಗಳೊಂದಿಗೆ ಓದುಗನನ್ನು ಆವರಿಸಿಕೊಳ್ಳುತ್ತದೆ. ಪ್ರಯಾಣದ ಖುಷಿಯಿರುವುದು ಪಯಣದಲ್ಲೇ. ಬಳಿಕ ಅವು ನೆನಪಿನ ತಿಜೋರಿ ಸೇರುತ್ತವೆ. ತಾಯ್ತನದ ಗುಣವನ್ನು ಗುಣಗಾನ ಮಾಡುವ ಕೃತಿ ಇನ್ನೊಬ್ಬನ ಹಸಿವನ್ನು, ನೋವನ್ನು ಅರ್ಥಮಾಡಿಕೊಳ್ಳಲು ಆ ತಾಯ್ತನದ ಗುಣವೇ ಬೇಕು ಎನ್ನುವ ಮಾತು ಮುಖ್ಯವಾಗುತ್ತದೆ. ಹಲವು ಬಾರಿ, ಹಲವೆಡೆ ಲೇಖಕರ ವೃತ್ತಿ ಜೀವನದ ಅನುಭವದ ಭಾವಗಳು ಇಲ್ಲಿ ಲಿಖಿತವಾಗಿ ಉಳಿದಿದೆ. ಕೆಲವು ವೈಯಕ್ತಿಕ. ಹಲವು ಚಿಂತನಾರ್ಹ. ಓದುಗನಿಗೂ ಒಂದಷ್ಟು ಭಾಗೀದಾರಿಕೆಯ ಭಾವ. ತನ್ನ ಬದುಕಿನ ನೋವಿನ ದಿನಗಳು, ಕುಟುಂಬದ ವಿಚಾರಗಳನ್ನೆಲ್ಲಾ ಹೇಳಿಕೊಳ್ಳುತ್ತಾ ಹೋದಂತೆ ಲೇಖಕರು ನನ್ನೊಂದಿಗೆ ಊರಿನ ಕಟ್ಟೆಯಲ್ಲಿ ಕೂತು ಮಾತಿಗಿಳಿದಂತೆ ಭಾವ. ಹೊಸತನ. ತವರಿನೊಂದಿಗೆ ಹೆಣ್ಣೊಬ್ಬಳಿಗಿರುವ ಕಾಳಜಿ, ಪ್ರೀತಿಯ ಬಗ್ಗೆ ಕೃತಿ ಮಾತಾಗುತ್ತದೆ. ಸಮಾಜದ ಭಾಗವಾದ ಮಕ್ಕಳನ್ನು ಒಳಿತಿನಲ್ಲಿ ಬೆಳೆಸುವ ಅಮ್ಮನ ತ್ಯಾಗವನ್ನು ಕೃತಿ ಅರ್ಥೈಸುತ್ತದೆ. ಅವಳೆಡೆಗೆ ಗೌರವದ, ಹೆಮ್ಮೆಯ ನೋಟ ಬೀರುತ್ತದೆ. ಭವಿಷ್ಯವನ್ನು ಹುಡುಕುತ್ತಾ ಸಾಗುವ ಇಂದಿನ ಶಿಕ್ಷಣದಲ್ಲಿ ಹಿಂದಿನವುಗಳು ಕಥೆಯಂತೆ. ಜೀವನ ಪಾಠ ಹೇಳುವ ಹಿರಿಯರನ್ನು, ಸಂಸ್ಕೃತಿಯೆಲ್ಲವನ್ನು ಕಳೆದು ಕೊಂಡು ಮಾರು ದೂರ ಸಾಗಿದ್ದಾರೆ ಇಂದಿನ ಮಕ್ಕಳು. ‘ಪಠ್ಯಕ್ಕೆ ಸೀಮಿತ ಉದ್ಯೋಗಕ್ಕೆ ಮೀಸಲು’ ಎನ್ನುವಂತೆ. ರಜೆಯಲ್ಲೂ ಟ್ಯೂಶನ್ ಕೊಟ್ಟು ಕೊಟ್ಟು ನಾಲ್ಕು ಗೋಡೆಗಳ ಮಧ್ಯೆ ಬೆಳೆಯುವ ಮಕ್ಕಳಿಗೆ ಸಂಬಂಧದ ಮಧುರತೆಯನ್ನು ಕಲಿಸುವ ಕೆಲಸವಾಗಬೇಕು ಎನ್ನುತ್ತಾರೆ ಲೇಖಕರು. ‘ಯಾವ ಜೀವದ ಹಾದಿ ಎಲ್ಲಿ ತೆರೆವುದೋ’ ಎಂಬ ಬರಹ ಮರವನ್ನು ಉದಾಹರಿಸಿ ಮನುಷ್ಯನನ್ನು ಪ್ರಶ್ನೆಗೊಡ್ಡುತ್ತದೆ. ಮರ ಮತ್ತು ಮನುಷ್ಯ ಎರಡೂ ಕೂಡಾ ಪ್ರಕೃತಿಯ ಭಾಗವೇ. ಮನುಷ್ಯ ಇನ್ನೂ ತನ್ನಲ್ಲಿ ಉಳಿಸಿಕೊಂಡಿರುವ ಸ್ವಾರ್ಥಪರತೆಯನ್ನು ನೋಡುವಾಗ ಜಾತಿ ನೋಡದೆ ಸರ್ವ ಪ್ರಾಣಿಗಳಿಗೂ ನೆರಳುಣ್ಣಿಸುವ, ಫಲವೀಯುವ ಮರ ಶ್ರೇಷ್ಠವೆಂದು ಅನ್ನಿಸಿ ಬಿಡುತ್ತದೆ. ಇನ್ನು ಬೆನ್ನುಡಿಯಲ್ಲಿ ಜೋಗಿ ಹೇಳಿದ ಹಾಗೆ ‘‘ತನ್ನ ಭಾವ ಭಂಗಿ ನಮ್ಮ ನಿಮ್ಮ ಭಾವಕ್ಕೂ ಒದಗುವಂತೆ ಬರೆಯಬಲ್ಲ ಪ್ರಕಾಶ್ ರೈ ಕನ್ನಡಕ್ಕೇನೋ ವಿಶೇಷವಾದುದನ್ನು ಕೊಡುತ್ತಿದ್ದಾರೆ’’ ಎನ್ನುವುದು ಮಾತ್ರ ದಿಟ. ಸಾಮಾಜಿಕ ಹೋರಾಟಗಳಲ್ಲೂ ಮುಂದಿರುವ ಪ್ರಕಾಶ್ ರೈ ಭಾರತದ ಬಹುತ್ವಕ್ಕೆ ಬದ್ಧರಾದವರು. ಯಾವುದನ್ನೂ ಧೈರ್ಯವಾಗಿ ಪ್ರಶ್ನಿಸಬಲ್ಲ ಹಿಮ್ಮತ್ತು ಅವರದು. ಲೇಖಕರಿಗೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಯೋಧರೊಬ್ಬರು ‘ನಮ್ಮ ಪ್ರಶ್ನೆಗಳನ್ನು ನೀವು ಕೇಳುತ್ತಿದ್ದೀರಿ. ನಿಮ್ಮಂಥವರು ನಮ್ಮ ಹೆಮ್ಮೆ’ ಎಂದಿದ್ದರಂತೆ. ನಾನು ಹೇಳಬೇಕಾದ ಮಾತನ್ನೇ ಯೋಧನೂ ಪ್ರಕಾಶ್ ರೈಗೆ ಹೇಳಿದ್ದಾರೆ ಎನ್ನುವುದರಲ್ಲಿ ನನಗೆ ತುಂಬು ಖುಷಿ. ಅಂದ ಹಾಗೆ ‘ಸಾವಣ್ಣ ಪ್ರಕಾಶನ’ಕ್ಕೆ ನನ್ನ ತುಂಬು ಕೃತಜ್ಞತೆ. ತನ್ನ ಭಾವ ತೆರೆದಿಟ್ಟ ಪ್ರಕಾಶ್ ರೈ ಅವರಿಗೂ.