ಸುಳ್ಳುಗಳಿಗೆ ರೆಕ್ಕೆ
► ಫ್ಲೈಯಿಂಗ್ ಲೈಸ್: ಇಂಡಿಯಾಸ್ ಬಿಗ್ಗೆಸ್ಟ್ ಡಿಫೆನ್ಸ್ ಸ್ಕಾಂಡಲ್
(ಹಾರುವ ಸುಳ್ಳುಗಳು: ಭಾರತದ ಅತೀದೊಡ್ಡ ರಕ್ಷಣಾ ಹಗರಣ)
►ಲೇಖಕರು: ರವಿ ನಾಯರ್
►ಮುದ್ರಕರು: ಪರಂಜೋಯ್ ಗುಹಾ ತಕುರ್ತಾ
►ಮಾರಾಟ: ಅಮೆಝಾನ್ ಏಶ್ಯಾ-ಪೆಸಿಫಿಕ್ ಹೋಲ್ಡಿಂಗ್ಸ್
ಅಮೆಝಾನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ
►ಪುಟಗಳು: 37, ಕಿಂಡ್ಲೆ ಪ್ರತಿ: ರೂ.49
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ ಹಾಕುವ ಎಲ್ಲರೂ ರವಿ ನಾಯರ್ ಅವರ ಫ್ಲೈಯಿಂಗ್ ಲೈಸ್ ಪುಸ್ತಕ ಓದಲೇ ಬೇಕು. 37 ಪುಟಗಳ ಈ ಪುಸ್ತಕದಲ್ಲಿ ಭಾರತದ ಅತೀದೊಡ್ಡ ರಕ್ಷಣಾ ಒಪ್ಪಂದ ರಫೇಲ್‌ನ ಸುತ್ತ ಹಬ್ಬಿರುವ ಸುಳ್ಳುಗಳ ಪದರಗಳನ್ನು ಲೇಖಕರು ವ್ಯವಸ್ಥಿತವಾಗಿ ಹೊರಗೆಳೆದಿದ್ದಾರೆ. ಈ ಒಪ್ಪಂದದ ಬಗ್ಗೆ ಇನ್ನಷ್ಟು ವಿವರಗಳುಳ್ಳ ಮತ್ತೊಂದು ಪುಸ್ತಕ ಸದ್ಯದಲ್ಲೇ ಹೊರಬರಲಿದೆ. ಮೋದಿ ಸರಕಾರದ ಬಹುಚರ್ಚಿತ ಮೇಕ್ ಇನ್ ಇಂಡಿಯಾದ ಭಾಗವಾಗಿ ರಫೇಲ್ ಒಪ್ಪಂದ ಮಾಡಲಾಯಿತು.
ಈ ಒಪ್ಪಂದ ಮತ್ತೇನೂ ಅಲ್ಲ, ವಿಮಾನ ತಯಾರಿಕೆ ದೂರದ ಮಾತು ವಿಮಾನ ನಿರ್ವಹಣೆಯ ಅಲ್ಪ ಅನುಭವವೂ ಇಲ್ಲದ ಉದ್ಯಮಿ ಗೆಳೆಯನಿಗೆ ಲಾಭ ಮಾಡುವ ಉದ್ದೇಶವನ್ನಷ್ಟೇ ಹೊಂದಿತ್ತು ಎಂದು ಲೇಖಕರು ಹೇಳುತ್ತಾರೆ. ಈ ಒಪ್ಪಂದದಲ್ಲಿ ಭಾರತದ ಅತ್ಯಂತ ಪ್ರಸಿದ್ಧ ಮತ್ತು ಅನುಭವಿ ಯುದ್ಧವಿಮಾನ ತಯಾರಿಕಾ ಘಟಕ ಎಚ್‌ಎಎಲ್‌ಗೆ ವಿಮಾನ ತಯಾರಿಸುವ ಅವಕಾಶ ನಿರಾಕರಿಸಲಾಯಿತು. ಸರಕಾರ ಈ ಒಪ್ಪಂದದಲ್ಲಿ ವಿಮಾನಗಳ ದರಗಳನ್ನು ಹೆಚ್ಚಿಸಿದ್ದು ಮಾತ್ರವಲ್ಲ ವಿಮಾನಗಳ ಸಂಖ್ಯೆಯಲ್ಲೂ ಇಳಿಕೆ ಮಾಡಿತು. ಅದೂ ಚೀನಾದ ವಿರುದ್ಧ ಭಾರತೀಯ ವಾಯುಪಡೆ ಯುದ್ಧವಿಮಾನಗಳ ಅಗಾಧ ಕೊರತೆ ಎದುರಿಸುತ್ತಿರುವ ಸಮಯದಲ್ಲಿ. ಜೊತೆಗೆ ಈ ಒಪ್ಪಂದ ಸಾರ್ವಜನಿಕ ಚರ್ಚೆಗೆ ಬಂದಾಗ ಸರಕಾರ ಹಳೆಯ ವಸಾಹತು ಕಾಲದ ಅಧಿಕೃತ ರಹಸ್ಯ ಕಾಯ್ದೆಯ ಅಡಿಯಲ್ಲಿ ಅಡಗಲು ಯತ್ನಿಸಿತು. ಈ ಹಗರಣವನ್ನು ಬಯಲಿಗೆಳೆದ ಮೊದಲಿಗರಾದ ಲೇಖಕ ರವಿ ನಾಯರ್ ಅವರು, ಯಾವ ರೀತಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ಮತ್ತು ಆಕೆಯ ಸಚಿವಾಲಯವನ್ನು ಮೂಲೆಗುಂಪು ಮಾಡಿ 2015ರ ಎಪ್ರಿಲ್‌ನಲ್ಲಿ ಫ್ರಾನ್ಸ್ ಅಧ್ಯಕ್ಷ ಒಲಾಂಡ್ ಜೊತೆ ಒಪ್ಪಂದ ಮಾಡಿದ್ದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ.
ಯುಪಿಎ ಆಡಳಿತದ ಸಮಯದಲ್ಲಿ ಭಾರತ ಸರಕಾರ ಪ್ರತಿ ವಿಮಾನಕ್ಕೆ 563 ಕೋಟಿ ರೂ.ನಂತೆ 126 ರಫೇಲ್ ಯುದ್ಧವಿಮಾನಗಳನ್ನು ಖರೀದಿಸುವ ಒಪ್ಪಂದವನ್ನು ಬಹುತೇಕ ಅಂತಿಮಗೊಳಿಸಿತ್ತು. ರಫೇಲ್ ನಿರ್ಮಾಣ ಸಂಸ್ಥೆ ಡಸ್ಸಾಲ್ಟ್‌ನ ಸಿಇಒ ಎರಿಕ್ ಟ್ರೇಪಿಯರ್ ಪ್ರಕಾರ, 108 ರಫೇಲ್ ಯುದ್ಧವಿಮಾನಗಳನ್ನು ಭಾರತದಲ್ಲಿ ತಯಾರಿಸಲು ಎಚ್‌ಎಎಲ್ ಜೊತೆ ಔಪಚಾರಿಕ ಮತ್ತು ಸಂಪೂರ್ಣ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆದರೆ ಹೊಸ ಒಪ್ಪಂದದಲ್ಲಿ ವಿಮಾನಗಳ ಸಂಖ್ಯೆಯನ್ನು 36ಕ್ಕೆ ಇಳಿಸಲ್ಪಟ್ಟಿದ್ದು ದರವನ್ನು ಪ್ರತಿ ವಿಮಾನಕ್ಕೆ 1,660 ಕೋಟಿ ರೂ.ಗೆ ಏರಿಸಲಾಗಿತ್ತು. ಪ್ರಧಾನಿ ಮೋದಿಯ ಗೆಳೆಯ ಉದ್ಯಮಿ ಅನಿಲ್ ಅಂಬಾನಿಗೆ ಲಾಭ ಮಾಡಲು ಈ ರೀತಿ ಏರಿಕೆ ಮಾಡಲಾಗಿತ್ತು. ಅನಿಲ್ ಅಂಬಾನಿ ಸಂಸ್ಥೆಯು 1,21,000 ಕೋಟಿ ರೂ.ನ ಬಾಧ್ಯತೆ ಹೊಂದಿತ್ತು ಮತ್ತು 45,000 ಕೋಟಿ ರೂ. ಸಾಲದಲ್ಲಿ ಮುಳುಗಿತ್ತು. (ಕೆಲದಿನಗಳ ಹಿಂದಷ್ಟೇ ಎರಿಕ್ಸನ್ ಪ್ರಕರಣದಲ್ಲಿ ಸಹೋದರ ಮುಕೇಶ್ ಅಂಬಾನಿ 550 ಕೋಟಿ ರೂ. ನೀಡಿದ ಕಾರಣದಿಂದ ಅನಿಲ್ ಅಂಬಾನಿ ಜೈಲು ಶಿಕ್ಷೆಗೊಳಗಾಗುವುದರಿಂದ ತಪ್ಪಿಸಿಕೊಂಡಿದ್ದರು).
ರಫೇಲ್ ಒಂದು ಮಧ್ಯಮ ಬಹುಪಾತ್ರದ ಯುದ್ಧ ವಿಮಾನವಾಗಿದೆ (ಎಂಎಂಆರ್‌ಸಿಎ). ಭಾರತೀಯ ವಾಯುಪಡೆಗೆ 126 ಯುದ್ಧವಿಮಾನಗಳನ್ನು ಖರೀದಿಸುವ ಪ್ರಸ್ತಾವ 2000 ಇಸವಿಯಲ್ಲಿ ಸರಕಾರದ ಮುಂದೆ ಇಡಲಾಯಿತು. ಆದರೆ ಈ ನಿಟ್ಟಿನಲ್ಲಿ ಪ್ರಕ್ರಿಯೆ ಮಾತ್ರ 2007ರಲ್ಲಿ ಯುಪಿಎ ಸರಕಾರದ ಅವಧಿಯಲ್ಲಿ ಆರಂಭ ವಾಯಿತು. ಆರು ವಿವಿಧ ಯುದ್ಧವಿಮಾನ ತಯಾರಿಕಾ ಸಂಸ್ಥೆಗಳಿಂದ ಪ್ರಸ್ತಾವನೆ ಆಹ್ವಾನಿಸಲಾಯಿತು. ಅವುಗಳೆಂದರೆ, ಮಿಗ್-35 (ರಶ್ಯಾ), ಜಾಸ್-39(ಸ್ವೀಡನ್), ಡಸ್ಸಾಲ್ಟ್ ರಫೇಲ್(ಫ್ರಾನ್ಸ್), ಎಫ್-16 ಫಾಲ್ಕನ್, ಲೊಕ್‌ಹಿಡ್ ಮಾರ್ಟಿನ್(ಅಮೆರಿಕ), ಎಫ್/ಎ-18 ಸೂಪರ್ ಹೋರ್ನೆಟ್ ಬೋಯಿಂಗ್ (ಅಮೆರಿಕ) ಮತ್ತು ಯೂರೊಫಯರ್ ಟೈಫೂನ್ (ಇಎಡಿಎಸ್). 2012ರಲ್ಲಿ ದರ ಮತ್ತು ಜೀವನಚಕ್ರ ವೆಚ್ಚವನ್ನು ಆಧರಿಸಿ ರಫೇಲ್ ಯುದ್ಧವಿಮಾನವನ್ನು ಖರೀದಿಸಲು ನಿರ್ಧರಿಸಲಾಯಿತು. ಒಪ್ಪಂದದ ಪ್ರಕಾರ, ಸಂಸ್ಥೆಯು ಒಪ್ಪಂದದ ವೌಲ್ಯದ ಅರ್ಧದಷ್ಟು ಮೊತ್ತವನ್ನು ಭಾರತದಲ್ಲಿ ರಕ್ಷಣಾ ಸಾಧನಗಳ ತಯಾರಿಕೆಗೆ ಹೂಡಿಕೆ ಮಾಡಬೇಕು. ಕಂಪೆನಿಯು, ಭಾರತದಲ್ಲಿ ರಕ್ಷಣಾ ಯುದ್ಧವಿಮಾನಗಳನ್ನು ತಯಾರಿಸುವ ಸರಕಾರಿ ಸಂಸ್ಥೆ ಹಿಂದೂಸ್ಥಾನ್ ಏರೊನಾಟಿಕ್ಸ್ ಲಿ.ಗೆ (ಎಚ್‌ಎಎಲ್) ತಂತ್ರಜ್ಞಾನವನ್ನು ವರ್ಗಾಯಿಸಲು ಬದ್ಧವಾಗಿರಬೇಕು. ಎಚ್‌ಎಎಲ್ ಈಗಾಗಲೇ ಸುಖೋಯ್ ಯುದ್ಧವಿಮಾನವನ್ನು ತಯಾರಿಸಿರುವ ಅನುಭವವನ್ನು ಹೊಂದಿದೆ.
ತಂತ್ರಜ್ಞಾನ ವರ್ಗಾವಣೆಯಿಂದ ಅದರ ಪರಿಣತಿ ಮತ್ತು ಉದ್ಯೋಗ ಸಾಮರ್ಥ್ಯ ಹೆಚ್ಚಾಗುತ್ತಿತ್ತು. ಎಚ್‌ಎಎಲ್‌ನ ಮಾಜಿ ಮುಖ್ಯಸ್ಥ ಮತ್ತು ವ್ಯವಸ್ಥಾಪನಾ ನಿರ್ದೇಶಕ ಸುವರ್ಣ ರಾಜು ಹೇಳುವಂತೆ, ಎಚ್‌ಎಎಲ್ ಡಸ್ಸಾಲ್ಟ್‌ನೊಂದಿಗೆ ಶೇ.95ರಷ್ಟು ಕೆಲಸ ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿತ್ತು. ವಾಸ್ತವದಲ್ಲಿ ಎಚ್‌ಎಎಲ್ ಅದಾಗಲೇ ಐಎಎಫ್‌ನಿಂದ ಗುತ್ತಿಗೆ ಪಡೆದಿದ್ದ 272 ಸುಖೋಯಿ ಯುದ್ಧವಿಮಾನಗಳ ಪೈಕಿ 249ನ್ನು ಪೂರೈಸಿಯಾಗಿತ್ತು. ಆದರೆ ಪ್ರಧಾನಿ ಮೋದಿ ರಕ್ಷಣಾ ಸಚಿವೆ, ರಕ್ಷಣಾ ಸ್ವಾಧೀನ ಸಮಿತಿ ಮತ್ತು ಐಎಎಫ್‌ನ ತಂತ್ರಜ್ಞಾನ ತಜ್ಞರ ಪೀಠವನ್ನು ನಿರ್ಲಕ್ಷಿಸಿ ತಾವೇ ಒಪ್ಪಂದವನ್ನು ಅಂತಿಮಗೊಳಿಸಿದರು. ಮೊದಲ ಒಪ್ಪಂದದ ಪ್ರಕಾರ ಡಸ್ಸಾಲ್ಟ್ ಎಚ್‌ಎಎಲ್ ಜೊತೆ ತನ್ನ ಉತ್ಪಾದನಾ ತಂತ್ರಜ್ಞಾನವನ್ನು ವರ್ಗಾಯಿಸಿಕೊಳ್ಳಬೇಕಿತ್ತು. ಆದರೆ ಮೋದಿಯ ಒಪ್ಪಂದದಲ್ಲಿ ಡಸ್ಸಾಲ್ಟ್ ತನ್ನಿಷ್ಟದ ಖಾಸಗಿ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಳ್ಳಬಹುದಾಗಿತ್ತು. ಭಾರತದ ಯಾವುದೇ ಖಾಸಗಿ ಕಂಪೆನಿಗೂ ಯುದ್ಧವಿಮಾನ ತಯಾರಿಕೆಯಲ್ಲಿ ಅನುಭವವಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು.
ಆದರೂ ಡಸ್ಸಾಲ್ಟ್ ಅನಿಲ್ ಅಂಬಾನಿಯ ರಿಲಯನ್ಸ್ ಡಿಫೆನ್ಸ್ ಲಿ.ನ ಅಂಗಸಂಸ್ಥೆ ರಿಲಯನ್ಸ್ ಏರೊಸ್ಟ್ರಕ್ಚರ್ ಲಿ. (ಆರ್‌ಎಎಲ್) ಅನ್ನು ತನ್ನ ಭಾರತೀಯ ಜೊತೆಗಾರನನ್ನಾಗಿ ಆಯ್ಕೆ ಮಾಡಿತು. ಇದರ ಅರ್ಥವೆಂದರೆ, ಯುದ್ಧವಿಮಾನದ ನಿರ್ವಹಣೆಯ ಹೊಣೆ ಅನನುಭವಿ ಕೈಗಳಿಗೆ ಸೇರಿತ್ತು. ಒಲಾಂಡ್ ಫ್ರೆಂಚ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ಅನಿಲ್ ಅಂಬಾನಿಯ ಕಂಪೆನಿ ಜೊತೆ ಒಪ್ಪಂದ ಮಾಡಿಕೊಳ್ಳುವಂತೆ ಡಸ್ಸಾಲ್ಟ್ ಮೇಲೆ ಭಾರತ ಸರಕಾರ ಒತ್ತಡ ಹೇರಿತ್ತು. ಹಾಗಾಗಿ ಒಪ್ಪಂದವನ್ನು ಪಡೆದುಕೊಳ್ಳುವ ಸಲುವಾಗಿ ನಮ್ಮ ಸರಕಾರ ಹಾಗೆ ಮಾಡಿತು ಎಂದು ತಿಳಿಸಿದ್ದಾರೆ. ಅಂತಿಮವಾಗಿ, ಎಚ್‌ಎಎಲ್ ರಫೇಲ್ ಯುದ್ಧವಿಮಾನವನ್ನು ತಯಾರಿಸುವಷ್ಟು ಪರಿಣತಿಯನ್ನು ಹೊಂದಿರಲಿಲ್ಲ ಎಂಬ ಸುಳ್ಳನ್ನೂ ಈ ಪುಸ್ತಕ ತಳ್ಳಿಹಾಕುತ್ತದೆ. ಭಾರತದಲ್ಲಿ 108 ಯುದ್ಧವಿಮಾನಗಳನ್ನು ತಯಾರಿಸಲು ಡಸ್ಸಾಲ್ಟ್ಟ್ ಎಚ್‌ಎಎಲ್ ಜೊತೆ ಔಪಚಾರಿಕ ಮತ್ತು ಸಂಪೂರ್ಣ ಒಪ್ಪಂದ ಮಾಡಿಕೊಂಡಿತ್ತು ಎಂದು ಟ್ರೇಪಿಯಾರ್ ಸ್ಪಷ್ಟಪಡಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಲೇಖಕರು ಹೇಳುತ್ತಾರೆ. ಇಡೀ ವಿಷಯದ ಮೇಲೆ ಸಣ್ಣ ಇಣುಕು ನೋಟ ಕೂಡಾ ಮೋದಿ ಸರಕಾರ ಹಲವು ವಿಷಯಗಳಲ್ಲಿ ದೇಶವನ್ನು ತಪ್ಪುದಾರಿಗೆಳೆದಿದೆ ಎಂಬದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ರಕ್ಷಣಾ ಒಪ್ಪಂದಗಳನ್ನು ಸಾಮಾನ್ಯವಾಗಿ ಸುತ್ತುವರಿದಿರುವ ರಹಸ್ಯದ ವೇಷದಲ್ಲಿ ಸರಕಾರ ತನ್ನ ಬಂಡವಾಳಶಾಹಿ ಗೆಳೆಯನಿಗೆ ಲಾಭ ಮಾಡಲು ಹೋಗಿ ಎಚ್‌ಎಎಲ್‌ನಂಥ ಪ್ರತಿಷ್ಠಿತ ಸಾರ್ವಜನಿಕ ಕಂಪೆನಿ ತನ್ನ ಪರಿಣತಿಯನ್ನು ಉನ್ನತ ದರ್ಜೆಗೆ ಏರಿಸುವ ಮತ್ತು ಸಾಕಷ್ಟು ಉದ್ಯೋಗ ಸೃಷ್ಟಿಸುವ ಅವಕಾಶದಿಂದ ವಂಚಿತಗೊಳಿಸಿದೆ. ತನಿಖೆಗೆ ಒಳಪಟ್ಟಾಗ, ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾರನ್ನು ವಜಾಗೊಳಿಸಿ ಅವರ ಜಾಗದಲ್ಲಿ ಇನ್ನೋರ್ವ ವಂಚಕ ರಾಕೇಶ್ ಅಸ್ತಾನರನ್ನು ತಂದು ಕೂರಿಸುವಾಗಲೂ ಸರಕಾರ ಎರಡು ಬಾರಿ ಯೋಚಿಸಲಿಲ್ಲ.
ಒಪ್ಪಂದದ ಕುರಿತ ಸಾಕಷ್ಟು ಮಾಹಿತಿಯನ್ನು ನೀಡುವ ವೇಳೆ ಸರಕಾರ ಸರ್ವೋಚ್ಚ ನ್ಯಾಯಾಲಯವನ್ನೇ ತಪ್ಪುದಾರಿಗೆಳೆದಿದೆ. ಸಮಯೋಚಿತವಾಗಿ ಹೊರಬಂದಿರುವ ಈ ಪುಸ್ತಕ ರಫೇಲ್ ಒಪ್ಪಂದದ ಸಂಕೀರ್ಣ ಒಳಸುಳುಹುಗಳನ್ನು ಜನಸಾಮಾನ್ಯರೂ ಸುಲಭವಾಗಿ ತಿಳಿಯಲು ನೆರವಾಗುತ್ತದೆ.