ಹಳೆಯ ಸತ್ತ ಗೆಳೆಯ
ನೆನ್ನೆ ಮೊನ್ನೆ ನನ್ನಂತೆಯೆ ಇದ್ದ
ಆ ಹಳೆಯ ಗೆಳೆಯ ಹೇಗೆಲ್ಲಾ ಕಳಚಿಹೋದ
ಕೈ ಹಿಡಿದು ಕೊಂಡು ಭುಜ ತಟ್ಟಿಕೊಂಡು
ಮಾತು ಮಾತಿಗೆ ಕಲಸಿ ನಗುವುಂಡಿದ್ದು
ಈಗೆಲ್ಲಾ ದ್ರುಪದನ ನೆನಪು
ಕರಿಕುರ್ಚಿಯಲ್ಲಿ ಅವನು
ನೀಲಿಕುರ್ಚಿಯಲ್ಲಿ ನಾನು
ಒಡೆದ ಲೋಕದ ಪ್ರತಿನಿಧಿಗಳಂತೆ
ತನ್ನನ್ನ ಅದ್ದಿಕೊಂಡಿದ್ದ ಆ ಕನಸಿನಲ್ಲಿ
ಕರಕರಗಿ ಹೊಸ ಎರಕದಲ್ಲೆದ್ದು
ಪೀಠಸ್ಥನಾದ ಅವನಿಂದ ಬಿದ್ದ
ಕಣ್ಣೀರಿನಲ್ಲಿ ಸಂಕೋಚ ಓಡಿಹೋದ
ಸ್ನೇಹದ ಕನ್ನಡಿಯ ಮಾತು ಮನಸ್ಸುಗಳ
ಒಪ್ಪದೆ ಒಡೆದು ನುಚ್ಚುನೂರು ಮಾಡಿದ
ಆ ನುಚ್ಚಿನಲ್ಲಿ ಸಹಸ್ರ ಸಹಸ್ರ ಛಿದ್ರವಾದ
ತನ್ನದೆ ಕಣ್ಣ ನಕ್ಷತ್ರಗಳ ಗೋಡೆ
ಗೋಡೆ ತುಂಬ ಅಲಂಕರಿಸಿ ಬೀಗಿದ
ಒಳಗ ಹೊರಗ ದೃಶ್ಯಗಳ ಎಳೆದು ತಂದು
ಕಣ್ಣೆದುರು ನಿಲ್ಲಿಸಿಕೊಂಡು ಸದಾ ಗದರುವ
ತಿರುಳಿಲ್ಲದ ಸೋರೆಯಂತ ಬುರುಡೆಗಳ
ತನ್ನ ಭಜನಾ ತಂಬೂರಿಯ ಮಾಡಿಕೊಂಡ
ಭಜನೆಯ ಮಧ್ಯದಲ್ಲೇ ಎಷ್ಟೊಂದು ಭುಜಿಸಿದ ಭುಜಿಸಿದ ಭುಜಗಳ ತಟ್ಟಿ ತಾ ಸೇನಾನಿ ಎಂದ
ಹಗಲಿರುಳು ಕುಡಿದು ಬಿಡುವ ಅಸಹನೆಯ ಉಸಿರ
ಆ ಉಸಿರ ವಾಸನೆಯ ಬಾಯಲ್ಲಿ
ಹುಳುಕು ಹುಳುಕಾದ ಸುಳ್ಳು ನಗೆಮಾತು ಚೆಲ್ಲಿ
ಎಲ್ಲೆಲ್ಲೂ ಬಿತ್ತಿ ಬೆಳೆದ ಬೆಳೆಯ ಮೂಸಿ ಮುಡಿದಿವೆ
ತುರುಬು ತುರುಬಾದ ಕಣ್ಣು ಕಿವಿಗಳು
ಅವನ ಜೊತೆಗಿದ್ದ ನಾನು
ಅವನ ಕಾಲ ಕೆಳಗೆ
ನಡೆಯುವ ಪಾದಕ್ಕೆ ಮುಳ್ಳಂತೆ
ತೊಡರಿ ತಬ್ಬಿಕೊಳ್ಳುವ ಬಳ್ಳಿಯಂತೆ
ಮತ್ತೆ ಮತ್ತೆ ಪ್ರಶ್ನೆಯಾಗಿ ಚುಚ್ಚಿ ಸುತ್ತಿ ಹಿಡಿಯಲು
ಮುಳ್ಳು ಮೊನೆ ಮುರಿದ
ಬಳ್ಳಿ ಬುಡವ ತರಿದ
ಮಾತಿಲ್ಲದೆ ಕೂತೆ
ಮೌನವೇ ಮುಳ್ಳೊಡೆದು
ಅವನ ತಲೆಯ ಕಿರೀಟವಾಗಿ
ಸಿಹಿ ರಕ್ತವ ಕೀವು ಮಾಡುವ ಸಲುವಾಗಿ