ನೀವು ವಾಟ್ಸ್ಯಾಪ್ ಬಳಕೆದಾರರೇ?: ಹಾಗಿದ್ದರೆ ಈ ಹೊಸ ಗ್ರೂಪ್ ಫೀಚರ್ ಬಗ್ಗೆ ತಿಳಿದುಕೊಳ್ಳಿ

Update: 2019-04-03 15:22 GMT

ಹೊಸದಿಲ್ಲಿ, ಎ.3: ಇನ್ನು ಮುಂದೆ ವಾಟ್ಸಾಪ್ ಗುಂಪಿಗೆ ಸೇರಬೇಕೇ ಬೇಡವೇ ಎಂಬುದನ್ನು ಬಳಕೆದಾರರು ನಿರ್ಧರಿಸಲಿದ್ದಾರೆ. ವಾಟ್ಸಾಪ್ ನೂತನ ಫೀಚರ್ ಒಂದನ್ನು ಸೇರಿಸಿದ್ದು, ಇದನ್ನು ಬಳಸಿಕೊಂಡು ಬಳಕೆದಾರರು ವಾಟ್ಸ್ಯಾಪ್ ಗುಂಪಿಗೆ ಸೇರಬೇಕೇ ಅಥವಾ ಬೇಡವೇ ಎಂಬುದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.

ಹೊಸ ಪ್ರೈವೆಸಿ ಸೆಟ್ಟಿಂಗ್ ಅನ್ನು ಸೇರಿಸಲಾಗಿದ್ದು, ಇಲ್ಲಿ ಬಳಕೆದಾರರು ತಮ್ಮನ್ನು ಯಾವ ಗ್ರೂಪ್ ಗೆ ಸೇರಿಸಬಹುದು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಹಿಂದೆ ವಾಟ್ಸಾಪ್ ಬಳಕೆದಾರರ ಅನುಮತಿ ಪಡೆಯದೇ ಅವರನ್ನು ಗ್ರೂಪ್ ಗಳಿಗೆ ಸೇರಿಸಿಕೊಳ್ಳಬಹುದಿತ್ತು. ವಾಟ್ಸ್ಯಾಪ್ ನ  Account > Privacy > Groups ಗೆ ಕ್ಲಿಕ್ ಮಾಡಿದರೆ Nobody, My Contacts, and Everyone. ಆಯ್ಕೆಗಳು ಕಾಣಿಸಿಕೊಳ್ಳುತ್ತವೆ.

ಇಲ್ಲಿ Nobody  ಎಂಬುದನ್ನು ಕ್ಲಿಕ್ ಮಾಡಿದರೆ ಆಹ್ವಾನಿಸಿರುವ ಎಲ್ಲಾ ಗ್ರೂಪ್ ಗಳಿಗೂ ಸೇರ್ಪಡೆಗೊಳ್ಳುವುದನ್ನು ಬಳಕೆದಾರರು ಅನುಮೋದನೆ ಮಾಡಬೇಕು. My Contacts ಆಯ್ಕೆ ಮಾಡಿದರೆ, ಬಳಕೆದಾರರ ಕಾಂಟ್ಯಾಕ್ಟ್ ಲಿಸ್ಟ್ ‌ನಲ್ಲಿರುವ ವ್ಯಕ್ತಿಗಳು ಸೇರ್ಪಡೆಗೊಳಿಸಬಹುದು. ಈ ಹಂತದಲ್ಲಿ ನಿಮ್ಮನ್ನು ಗ್ರೂಪ್ ಗೆ ಆಹ್ವಾನಿಸಿದ ವ್ಯಕ್ತಿ ಚಾಟ್ ಮೂಲಕ ಗ್ರೂಪ್ ಗೆ ಸೇರುವಂತೆ ಬಳಕೆದಾರರಿಗೆ ಖಾಸಗಿ ಆಹ್ವಾನ ಕಳಿಸಬಹುದು. ಒಂದು ಆಹ್ವಾನವನ್ನು ಒಪ್ಪಲು ಮೂರು ದಿನದ ಅವಕಾಶ ನೀಡಲಾಗುತ್ತದೆ ಬಳಿಕ ಅವಧಿ ಮುಗಿಯುತ್ತದೆ.

ಈ ಹೊಸ ವೈಶಿಷ್ಟದಿಂದಾಗಿ ಬಳಕೆದಾರರಿಗೆ ತಾವು ಪಡೆಯುವ ಗ್ರೂಪ್ ಮೆಸೇಜ್ ಬಗ್ಗೆ ಹೆಚ್ಚಿನ ನಿಯಂತ್ರಣ ಪಡೆಯಲು ಸಾಧ್ಯವಾಗುತ್ತದೆ. ಬುಧವಾರದಿಂದಲೇ ಹೊಸ ಪ್ರೈವೆಸಿ ಸೆಟ್ಟಿಂಗ್ ಅನ್ನು ಕೆಲವು ಬಳಕೆದಾರರಿಗೆ ರವಾನಿಸಲಾಗಿದೆ. ವಾಟ್ಸಾಪ್ ‌ನ ಇತ್ತೀಚಿನ ಆವೃತ್ತಿ ಬಳಸುವವರಿಗೆ ಮುಂದಿನ ವಾರಗಳಲ್ಲಿ ಕಳುಹಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಭಾರತವು ಅಧಿಕ ವಾಟ್ಸಾಪ್ ಬಳಕೆದಾರರಿರುವ ರಾಷ್ಟ್ರಗಳಲ್ಲಿ ಒಂದಾಗಿದ್ದು ದೇಶದಲ್ಲಿ 200 ಮಿಲಿಯನ್‌ಗೂ ಅಧಿಕ ಬಳಕೆದಾರರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ವಾಟ್ಸಾಪ್ ವೇದಿಕೆಯಲ್ಲಿ ಪ್ರಸಾರವಾಗುವ ಗಾಳಿ ಸುದ್ದಿಗಳ ಕಾರಣದಿಂದ ಗುಂಪಿನಿಂದ ಥಳಿತ, ಹತ್ಯೆ ಮುಂತಾದ ದುರ್ಘಟನೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇಂತಹ ಪ್ರಕರಣಗಳ ನಿಯಂತ್ರಣಕ್ಕೆ ಕೇಂದ್ರ ಸರಕಾರ ವಾಟ್ಸಾಪ್‌ ಗೆ ಸೂಚನೆ ನೀಡಿತ್ತು. ಅದರಂತೆ ವಾಟ್ಸಾಪ್ ‌ನ ಮೆಸೇಜ್‌ಗಳನ್ನು ಫಾರ್ವರ್ಡ್ ಮಾಡುವ ಮಿತಿಯನ್ನು ಐದಕ್ಕೆ ಸೀಮಿತಗೊಳಿಸಲಾಗಿದೆ. ದೇಶದಲ್ಲಿ ಈಗ ಲೋಕಸಭಾ ಚುನಾವಣೆಯ ಕಣ ಕಾವೇರಿದ ಹಿನ್ನೆಲೆಯಲ್ಲಿ, ಫೇಸ್ ಬುಕ್ ಕೈಗೊಂಡಿರುವ ಈ ಕ್ರಮಕ್ಕೆ ಹೆಚ್ಚಿನ ಮಹತ್ವವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News