ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಭದ್ರಕೋಟೆಯನ್ನು ಮತ್ತೊಮ್ಮೆ ಭೇದಿಸುವುದೇ ಬಿಜೆಪಿ ?
ಮೈಸೂರು, ಎ.3: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ದಿನೇ ದಿನೇ ರಂಗು ಪಡೆಯುತ್ತಿದ್ದು ಕಾಂಗ್ರೆಸ್ ಭಧ್ರಕೋಟೆಯನ್ನು ಮತ್ತೊಮ್ಮೆ ಬಿಜೆಪಿ ಭೇದಿಸುವುದೇ? ಎಂಬ ಚರ್ಚೆಗಳು ಜಿಲ್ಲೆಯಾದ್ಯಂತ ನಡೆಯುತ್ತಿದೆ.
ಮೈಸೂರು ಲೋಕಸಭಾ ಕ್ಷೇತ್ರಹಿಂದಿನಿಂದಲೂ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿದೆ. ಈವರೆಗೆ ನಡೆದಿರುವ 14 ಚುನಾವಣೆಗಳಲ್ಲಿ ಕಾಂಗ್ರೆಸ್ 11 ಬಾರಿ ಜಯಗಳಿಸಿದ್ದು ಮೂರು ಬಾರಿ ಬಿಜೆಪಿ ಜಯಸಾಧಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಬಾವುಟ ಹಾರಿಸಲು ಯತ್ನಿಸುತ್ತಿದ್ದರೆ ಬಿಜೆಪಿ ಸಹ ಕಮಲ ಅರಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಕಾಂಗ್ರೆಸ್ - ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲಬಂದಿದ್ದು ಈ ಬಾರಿ ಅತ್ಯಧಿಕ ಮತಗಳ ಅಂತರದಿಂದ ಗೆಲವು ಸಾಧಿಸುತ್ತೇವೆ ಎಂಬ ಆತ್ಮವಿಶ್ವಾಸ ಮೈತ್ರಿ ನಾಯಕರಲ್ಲಿ ಮೂಡಿದೆ. ಇನ್ನು ಬಿಜೆಪಿ ಐದು ವರ್ಷದಲ್ಲಿ ನಾವು ಮಾಡಿರುವ ಸಾಧನೆ ಮತ್ತು ಮೋದಿ ಹೆಸರಿನೊಂದಿಗೆ ಪ್ರಚಾರಕ್ಕಿಳಿದಿದ್ದು ಮತ್ತೊಮ್ಮೆ ಗೆಲುವು ನಮ್ಮದೆ ಎಂಬ ನಾಗಾಲೋಟದಲ್ಲಿ ತೇಲುತ್ತಿದೆ.
ಕಾಂಗ್ರೆಸ್ - ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿ ಸಿ.ಎಚ್.ವಿಜಯಶಂಕರ್, ಬಿಜೆಪಿಯಿಂದ ಪ್ರತಾಪ್ ಸಿಂಹ ನಡುವೆ ಜಿದ್ದಾ ಜಿದ್ದಿ ಕಣವಾಗಿ ಏರ್ಪಟ್ಟಿದೆ. ವಿಪರ್ಯಾಸ ಎಂದರೆ ಬಿಜೆಪಿಯಿಂದ ಎರಡು ಬಾರಿ ಸಿ.ಎಚ್.ವಿಜಯಶಂಕರ್ ಸಂಸದರಾಗಿ ಆಯ್ಕೆಯಾಗಿದ್ದರು. ಒಂದು ಬಾರಿ ಪ್ರತಾಪ್ ಸಿಂಹ ಆಯ್ಕೆಯಾಗಿದ್ದಾರೆ. ಈಗ ಕಾಂಗ್ರೆಸ್ ಪಕ್ಷದಿಂದ ಅಗ್ನಿಪರೀಕ್ಷೆಗಿಳಿದಿರುವ ಸಿ.ಎಚ್.ವಿಜಯಶಂಕರ್ ಜಯಭೇರಿ ಬಾರಿಸುವರೆ ಎಂಬುದು ಕುತೂಹಲ ಮೂಡಿಸಿದೆ.
1951ರಲ್ಲಿ ದ್ವಿಸದಸ್ಯ ಕ್ಷೇತ್ರದಿಂದ ಎನ್.ರಾಚಯ್ಯ (ಕಾಂಗ್ರೆಸ್) ಮತ್ತು ಎಂ.ಎಸ್.ಗುರುಪಾದಸ್ವಾಮಿ (ಕೆಎಂಪಿಪಿ) ಪಕ್ಷದಿಂದ ಜಯಗಳಿಸಿದ್ದರು. 1957ರಲ್ಲಿ ಕಾಂಗ್ರೆಸ್‌ನವರೇ ಆದ ಎಂ.ಶಂಕರಯ್ಯ, ಎಸ್.ಎಂ.ಸಿದ್ದಯ್ಯ ಅವರು ಆಯ್ಕೆಯಾಗಿದ್ದರು. ನಂತರ ಏಕ ಸದಸ್ಯ ಕ್ಷೇತ್ರವಾಗಿ ಪರಿವರ್ತನೆಯಾದ ನಂತರ 1962ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಎಂ.ಶಂಕರಯ್ಯ(ಕಾಂಗ್ರೆಸ್) ಜಯಗಳಿಸಿ ಸತತ ಎರಡನೇ ಬಾರಿಗೆ ಲೋಕಸಭೆ ಪ್ರವೇಶಿಸಿದ್ದರು. ನಂತರ1967 ರಿಂದ 1977ರವರೆಗೆ ನಡೆದ ಮೂರು ಚುನಾವಣೆಯಗಳಲ್ಲಿ ಎಚ್.ಡಿ.ತುಳಸಿದಾಸಪ್ಪ ಅವರು ಆಯ್ಕೆಯಾಗಿದ್ದರು. 1980ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಎಂ.ರಾಜಶೇಖರಮೂರ್ತಿ ಜಯಗಳಿಸಿದ್ದರು. ನಂತರ ನಡೆದ 1984, 1989, 1996 ಮತ್ತು 1999ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಆಯ್ಕೆಯಾಗಿದ್ದರು. 1998 ಮತ್ತು 2004ರಲ್ಲಿ ಬಿಜೆಪಿಯಿಂದ ಸಿ.ಎಚ್.ವಿಜಯಶಂಕರ್ ಆಯ್ಕೆಯಾಗಿದ್ದರು. ಕ್ಷೇತ್ರ ಪುನರ್ ವಿಂಗಡಣೆಯ ನಂತರ 2009 ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ ರಚನೆಯಾಯಿತು. ಆಗ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಅಡಗೂರು ಎಚ್.ವಿಶ್ವನಾಥ್ ಆಯ್ಕೆಯಾಗಿದ್ದರು. 2014ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ಆಯ್ಕೆಯಾಗಿ ಮತ್ತೊಮ್ಮೆ ಅಗ್ನಿಪರೀಕ್ಷೆಗೆ ಮುಂದಾಗಿದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅಡಗೂರು ಎಚ್.ವಿಶ್ವನಾಥ್ ಜೆಡಿಎಸ್ ಪಕ್ಷ ಸೇರಿದ್ದರೆ ಸಿ.ಎಚ್.ವಿಜಯಶಂಕರ್ ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ. ಇತ್ತ ಬಲಿಷ್ಠಗೊಂಡಿರುವ ಬಿಜೆಪಿ ಏಕಾಂಗಿ ಹೋರಾಟ ನಡೆಸುತ್ತಿದ್ದು ಕಾಂಗ್ರೆಸ್ ಭದ್ರಕೋಟೆಯನ್ನು ಮತ್ತೊಮ್ಮೆ ಭೇದಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.