ಕಸಬರಿಕೆ ಹಿಡಿದ ಕಾವ್ಯರಾಣಿ
‘‘ಖಡ್ಗವಾಗಿ ಮಂಟಾಕಿದ್ದು ಸಾಕು ಬಾರಮ್ಮ ಬಾ ನನ್ನ ಕಾವ್ಯ ರಾಣಿ, ಅದಕ್ಕಿಂತ ನನ್ನ ಜನರ ಕೈಯ ಕಸಬರಿಕೆಯಾಗು ಬಾ...’’ ‘‘ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ತೃಪ್ತಿ ಪಡಿಸಿದ್ದು ಸಾಕು, ಅಗ್ರಹಾರದ ಗೋಮುಖ ವ್ಯಾಘ್ರಗಳನ್ನು ನಂಜು ಕಕ್ಕುವ ನರಿಗಳನ್ನು. ಬಾ ಸುಮ್ಮನೆ ಬಾ, ಕಣ್ಣು ಕರುಳಿಲ್ಲದ ಆ ಜನರ ರೋಗಿಷ್ಠ ಬದುಕನ್ನೇ ಇನ್ನೆಷ್ಟು ಹಾಡುತ್ತೀಯೆ...?’’ ಈ ಎರಡು ಸಾಲುಗಳನ್ನು ತಳಹದಿಯಲ್ಲಿಟ್ಟುಕೊಂಡು ಬರೆದಿರುವ ಕವಿತೆಗಳಾಗಿವೆ ಮಹಾದೇವ ಕುಕ್ಕರಹಳ್ಳಿಯವರ ‘ಪ್ರಜಾಪ್ರಭುತ್ವದ ಶವ ಯಾತ್ರೆ’ ಕೃತಿ. ಇಲ್ಲಿರುವುದು ಕವಿತೆಗಳಲ್ಲ, ದೇಶವಾಸಿಗಳ ಜೀವನ ದರ್ಶನವಾಗಿದೆ. ವರ್ತಮಾನದ ವಿವಿಧ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಗಳಿಗೆ ಇಲ್ಲಿರುವ ಕವಿತೆಗಳು ನೇರ ಪ್ರತಿಕ್ರಿಯೆಗಳಾಗಿವೆ. ದಲಿತ ಚಿಂತನೆ ಕವಿತೆಗಳ ಹೃದಯ ಕೇಂದ್ರವಾಗಿದೆ.
ಅಣ್ಣಾ ಹಝಾರೆಯ ಉಪವಾಸದ ಪ್ರಹಸನ, ಹಸಿವಿನ ಬೇರೆ ಬೇರೆ ಮುಖಗಳು, ಮಡೆಸ್ನಾನ ಮತ್ತು ಅದರ ವಿರುದ್ಧ ಎದ್ದ ಪ್ರತಿಭಟನೆಗಳು, ದುಷ್ಕರ್ಮಿಗಳ ಗುಂಪಿನಿಂದ ಥಳಿತಕ್ಕೊಳಗಾದವನ ಅಳಲು, ಭಾರತ ಮತ್ತು ಇಂಡಿಯಾದ ನಡುವಿನ ವಿಪರ್ಯಾಸಗಳು, ಅಭಿವೃದ್ಧಿ ಎಂಬ ಎಂಜಲು ತಟ್ಟೆ, ದೇವನೂರರ ಎದೆಗೆ ಬಿದ್ದ ಅಕ್ಷರ, ಶೌಚಾಲಯದಲ್ಲಿ ದೇವರು, ದಸಂಸ ಹೋರಾಟದ ದುರಂತ, ಆದಿವಾಸಿಗಳ ಒಕ್ಕಲೆಬ್ಬಿಸುವಿಕೆ, ಛತ್ತೀಸ್‌ಗಡದಲ್ಲಿ ನಾಗರಿಕರನ್ನೇ ಎನ್‌ಕೌಂಟರ್ ಮಾಡಿ ಕೊಂದ ಕ್ರೌರ್ಯ, ಹುತಾತ್ಮರಾದ ಕರ್ಕರೆ ಮತ್ತು ಅವರ ತಂಡಕ್ಕೆ ಒಂದು ಹನಿ ಕಣ್ಣೀರು ಸುರಿಸದೆ, ಅವರೊಂದಿಗೆ ಮಡಿದ ಯೋಧನ ಕುರಿತಂತೆ ಮೊಸಳೆ ಕಣ್ಣೀರು, ಅತ್ಯಾಚಾರವನ್ನು ಸಮರ್ಥಿಸುವ ರಾಜಕಾರಣಿಗಳು, ಒಳ್ಳೆಯ ಆಹಾರಕ್ಕಾಗಿ ಮೊರೆಯಿಟ್ಟ ಸೈನಿಕರ ಅಳಲು, ಶಿವರಾಮ ಕಾರಂತರ ಚೋಮನ ದುಡಿ.....ಎಲ್ಲವೂ ಇಲ್ಲಿ ಅಕ್ರೋಶದ ಕುಲುಮೆಯಲ್ಲಿ ಕವಿತೆಗಳಾಗಿ ಅರಳಿವೆ. ಹೆಚ್ಚಿನ ಕವಿತೆಗಳಿಗೆ ಆ ಕವಿತೆಯ ಹುಟ್ಟಿಗೆ ಕಾರಣವಾದ ಪತ್ರಿಕೆಗಳಲ್ಲಿ ಬಂದ ಸುದ್ದಿಗಳ ಜೆರಾಕ್ಸ್‌ನ್ನು ಅಂಟಿಸಲಾಗಿದೆ. ಖ್ಯಾತ ಸಂಸ್ಕೃತಿ ಚಿಂತಕ ಲಕ್ಷ್ಮಿ ರಾಮ್ ಅವರು ಈ ಕವಿತೆಗಳ ಕುರಿತಂತೆ ‘‘ದೇವನೂರ, ಸಿದ್ದಲಿಂಗಯ್ಯನವರ ಪ್ರಭಾವದಲ್ಲಿ ಸಿಕ್ಕಿಕೊಂಡಿದ್ದ ದಲಿತ ಸಾಹಿತ್ಯವನ್ನು ಬಿಡಿಸಿಕೊಂಡು ಹೊರಬಂದಿರುವುದು ಇದರ ಹೆಗ್ಗಳಿಕೆ’’ ಎಂದು ಬರೆಯುತ್ತಾರೆ.
ಸಹಜಾ ಪ್ರಕಾಶನ ಮೈಸೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 220. ಮುಖಬೆಲೆ 225 ರೂ. ಆಸಕ್ತರು 97436 56033 ದೂರವಾಣಿಯನ್ನು ಸಂಪರ್ಕಿಸಬಹುದು.