‘ನ್ಯಾಯ್’: ಕನಿಷ್ಠ ಆದಾಯ ಖಾತರಿ ಯೋಜನೆಯ ಹಿಂದು-ಮುಂದು

Update: 2019-04-03 18:33 GMT

ಒಂದು ವೇಳೆ ಜಾರಿಗೊಂಡರೆ ದೇಶದ ಸಮಾಜೋ-ಆರ್ಥಿಕ ಸ್ವರೂಪ ಬದಲಿಸಬಲ್ಲ ಈ ಕನಿಷ್ಠ ಆದಾಯ ಯೋಜನೆ ಕುರಿತು ಕಾಂಗ್ರೆಸ್ ಸೀರಿಯಸ್ ಆಗಿದೆಯೆ ಎನ್ನುವುದೇ ಇಲ್ಲಿ ಯಕ್ಷ ಪ್ರಶ್ನೆ. ಉತ್ಸಾಹವನ್ನು ಮೀರಿ ಕಾಳಜಿ ಮುಖ್ಯವಾಗಬೇಕಾದ ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಬಳಿ ಬಡಜನರ ಕುರಿತಾದ ಕಳಕಳಿಯ ಕೊರತೆ ಕಾಣುತ್ತಿದೆ. ರಾಜಕೀಯ ಇಚ್ಛಾಶಕ್ತಿ ಮತ್ತು ಬದ್ಧತೆಯನ್ನು ಪ್ರದರ್ಶಿಸಿದರೆ ಇದು ಒಂದು ಕ್ರಾಂತಿಕಾರಿ ಹೆಜ್ಜೆಯಾಗುತ್ತದೆ.

25, ಮಾರ್ಚ್ 2019ರಂದು ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ವಾರ್ಷಿಕ ರೂ. 72,000 ಮೊತ್ತವನ್ನು ದೇಶದ ಶೇ. 20 ಪ್ರಮಾಣದ ಬಡಕುಟುಂಬಗಳ (5 ಕೋಟಿ) ಬ್ಯಾಂಕ್ ಖಾತೆಗೆ ನೇರ ಜಮಾವಣೆ ಮಾಡಲಾಗುವುದು ಎಂದು ಪ್ರಕಟಿಸಿದರು. ಇದನ್ನು ‘ನ್ಯಾಯ್’ ಅಂದರೆ ‘ಕನಿಷ್ಠ ಆದಾಯ ಯೋಜನೆ’ ಅಡಿಯಲ್ಲಿ ಜಾರಿಗೊಳಿಸಲಾಗುತ್ತದೆ ಎಂದು ಹೇಳುತ್ತ ‘‘ಇದು ಬಡತನದ ಮೇಲಿನ ಸರ್ಜಿಕಲ್ ದಾಳಿ’’ ಎಂದು ಬಣ್ಣಿಸಿದರು. ಮೇಲ್ನೋಟಕ್ಕೆ ಕಾಣುವಂತೆ ‘ನ್ಯಾಯ್’ ಅತ್ಯಂತ ಮಹತ್ವ್ವಾಕಾಂಕ್ಷೆ, ಜನಪರ ಯೋಜನೆಯಾಗಿದೆ. ಇದು ಜಾರಿಗೊಂಡರೆ ದೇಶದ ಅತಿಶ್ರೀಮಂತರು/ಶ್ರೀಮಂತರು ಮತ್ತು ಅತಿ ಬಡವರ ನಡುವಿನ ಅಗಾಧ ಕಂದರವನ್ನು ಕಡಿಮೆಗೊಳಿಸುತ್ತದೆ ಮತ್ತು ಬಡತನದ ನಿರ್ಮೂಲನದಲ್ಲಿ ತುಳಿದಂತಹ ಮಹತ್ತರ ಹೆಜ್ಜೆಯಾಗುತ್ತದೆ. ಈ ಯೋಜನೆಯು ಬಡಕುಟುಂಬದ ವಾಸ್ತವದ ಆದಾಯಕ್ಕೂ ಮತ್ತು ಕನಿಷ್ಠ ಖಾತರಿ ಮಾಸಿಕ ಆದಾಯ ರೂ. 12,000 ನಡುವಿನ ಅಂತರವನ್ನು ತುಂಬುತ್ತದೆ. ಈ ಯೋಜನೆ ಜಾರಿಗೊಂಡರೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬವು ತಮ್ಮ ಮಕ್ಕಳನ್ನು ಸಮೀಪದ ಉತ್ತಮ ಶಾಲೆಗೆ ಸೇರಿಸಬಹುದು, ಗುಣಮಟ್ಟದ ವೈದ್ಯಕೀಯ ಸೌಲಭ್ಯ ಪಡೆಯಬಹುದು, ಮೀಟರ್ ಬಡ್ಡಿ ಸಾಲದ ವಿಷಚಕ್ರದಿಂದ ಹೊರಬರಬಹುದು, ಟ್ರಾಕ್ಟರ್ ಬಾಡಿಗೆ, ಬೀಜ ಖರೀದಿಗೆ ಅಗತ್ಯವಾದ ಹಣ ದೊರಕುತ್ತದೆ, ಜನರಿಂದ ಆಯ್ಕೆಯಾದ ಸರಕಾರವು ಪ್ರಜೆಗಳಿಗೆ ಉತ್ತಮ ಗುಣಮಟ್ಟದ ಕಡ್ಡಾಯ, ಉಚಿತ ಶಿಕ್ಷಣ, ಆರೋಗ್ಯ ಕೊಡಲು, ರೈತರಿಗೆ ತಾವು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಕೂಲಿ ಕಾರ್ಮಿಕರಿಗೆ ಕನಿಷ್ಠ ವೇತನ ದೊರಕಿಸಲು ವಿಫಲವಾದಾಗ ಈ ಮಾದರಿಯ ಜನಕಲ್ಯಾಣ ಯೋಜನೆ ಅನಿವಾರ್ಯವಾಗುತ್ತದೆ.
ಇದಕ್ಕೂ ಮೊದಲು ಬಡತನರೇಖೆ ಕುರಿತಾದ ರಾಜಕೀಯವನ್ನು ಅರಿಯೋಣ
ಆರ್ಥಿಕತಜ್ಞ ಮೋಹನ್ ಗುರುಸ್ವಾಮಿಯವರು ‘‘ಹಸಿವು ದೈಹಿಕ ಸ್ಥಿತಿ. ದೈಹಿಕ ಸ್ಥಿತಿಯಾದ ಹಸಿವಿಗೆ ಕಾರಣ ಬಡತನವೆನ್ನುವ ಆರ್ಥಿಕ ಸ್ಥಿತಿ. ಇಲ್ಲಿ ಹಸಿವು ಎನ್ನುವುದು ಸ್ಥಿರವಾದದ್ದು. ಆದರೆ ಬಡತನದ ವ್ಯಾಖ್ಯಾನ ಮತ್ತು ಸ್ಥಿತಿ ಶಾಸಕಾಂಗ ಮತ್ತು ಕಾರ್ಯಾಂಗ ನೀತಿಗಳಿಗೆ ಅನುಗುಣವಾಗಿ ನಿರಂತರವಾಗಿ ಬದಲಾಗುತ್ತಿರುತ್ತದೆ’’ ಎಂದು ಹೇಳುತ್ತಾರೆ. ನವ ಉದಾರೀಕರಣದಲ್ಲಿ ಬಡತನದ ವಿಶ್ಲೇಷಣೆ ಹೇಗಿರುತ್ತದೆಯೆಂದರೆ ಅವನು ಶ್ರೀಮಂತ, ಅವನ ಊಟಕ್ಕೆ ರೂ. 500 ಖರ್ಚಾಗುತ್ತದೆ, ಅದು ಸಹಜ, ನೀನು ಬಡವ, ನಿನ್ನ ಊಟಕ್ಕೆ ರೂ. 12 ಸಾಕು, ಬಡವನಾದ ನೀನು ಆ ರೂ. 500 ಊಟಕ್ಕೆ ಪ್ರಯತ್ನಿಸುವಂತಿಲ್ಲ. ಎರಡೂ ವಾಸ್ತವವಾದ್ದರಿಂದ ದೇಶ ಸದಾ ಪ್ರಕಾಶಿಸುತ್ತದೆ ಮತ್ತು ಬಡತನ ರೇಖೆಯ ಪ್ರಮಾಣ ಕುಂಠಿತಗೊಳ್ಳುತ್ತಲೇ ಇರುತ್ತದೆ. 1984ರಲ್ಲಿ ಬಡತನರೇಖೆಗಿಂತ ಕೆಳಗಿರುವ ಕುಟುಂಬದ ಪ್ರಮಾಣ ಶೇ. 43 ಪ್ರಮಾಣದಲ್ಲಿದ್ದಾಗ ಆ ಕುಟುಂಬದ ವ್ಯಕ್ತಿ ಸೇವಿಸುವ ಆಹಾರದ, ಪೋಷಕಾಂಶಗಳ, ಕ್ಯಾಲೋರಿಯ ಪ್ರಮಾಣ ಸರಾಸರಿ ಶೇ. 38ರಷ್ಟಿದ್ದರೆ, 2012ರಲ್ಲಿ ಆಗಿನ ಯೋಜನಾ ಆಯೋಗದ ಅನುಸಾರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಪ್ರಮಾಣ ಶೇ. 22ಕ್ಕೆ ಕುಸಿದಾಗ ಆ ಕುಟುಂಬದ ವ್ಯಕ್ತಿ ಸೇವಿಸುವ ಪೋಷಕಾಂಶಗಳ, ಕ್ಯಾಲೋರಿಗಳ ಪ್ರಮಾಣ ಶೇ.24ರಷ್ಟಿದೆ. ಅಂದರೆ ಬಡತನ ಕಡಿಮೆಯಾದಷ್ಟು ಬಡಜನರು ಸೇವಿಸುವ ಆಹಾರದ ಪೋಷಕಾಂಶಗಳ ಪ್ರಮಾಣವೂ ಕಡಿಮೆಯಾಗುತ್ತದೆ. ಈ ಮಾದರಿಯ ಅಮಾನವೀಯ ಸಮೀಕ್ಷೆಯನ್ನು ತಿರಸ್ಕರಿಸುವ ಇಚ್ಛಾಶಕ್ತಿ ಯಾವುದೇ ರಾಜಕೀಯ ಪಕ್ಷಗಳಿಗಿಲ್ಲ. ಇಂತಹ ತಗಲೂಫಿತನದ, ಬೌದ್ಧಿಕ ದಿವಾಳಿತನದ ಮುಕ್ತ ಮಾರುಕಟ್ಟೆಯ ಆರ್ಥಿಕ ನೀತಿಯಿಂದ ಕಳಚಿಕೊಂಡು ಪ್ರಜಾಪ್ರಭುತ್ವವನ್ನು ಪುನಶ್ಚೇತನಗೊಳಿಸಲು ಮತ್ತೆ ಸಮಾಜವಾದದ ಕಡೆಗೆ ದೇಶದ ಆರ್ಥಿಕ ನೀತಿಯನ್ನು ಹೊರಳಿಸಲು ಈ ಕನಿಷ್ಠ ಆದಾಯ ಖಾತರಿ ಯೋಜನೆಯಾದ ‘ನ್ಯಾಯ್’ ಆರಂಭದ ಮೆಟ್ಟಿಲು ಎಂದೇ ಹೇಳಬಹುದು
ಆದರೆ ಈ ಎಲ್ಲಾ ಆಶಯಗಳ ಆಚೆ ಕಾಂಗ್ರೆಸ್ ಪಕ್ಷ ಉತ್ತರಿಸಬೇಕಾದ ಮೂಲಭೂತ ಪ್ರಶ್ನೆಗಳಿವೆ. ಮೊದಲನೆಯದಾಗಿ ಈ ಯೋಜನೆಯಲ್ಲಿ ಖಾತರಿ ಆದಾಯ ರೂ.12,000ಕ್ಕೆ ಕಡಿಮೆಯಾಗುವ ಮೊತ್ತವನ್ನು (top-uptop-up ) ಮಾತ್ರ ಪಾವತಿಸುತ್ತದೆಯೋ ಅಥವಾ ಕನಿಷ್ಠ ಮೊತ್ತ ರೂ. 6,000ವನ್ನು ಸಮಾನವಾಗಿ ಪಾವತಿಸುತ್ತದೆಯೋ ಎಂಬುದರ ಕುರಿತು ಗೊಂದಲವಿದೆ. ಆರ್ಥಿಕ ತಜ್ಞ ಜೀನ್ ಡ್ರೀಜೆ ಅವರು ಇದು ಖಂಡಿತವಾಗಿಯೂ ಯೋಜನೆ ಅಲ್ಲ. ಇದು ಸರಳವಾದ ಏಕರೂಪವಾಗಿ, ಸಮಾನವಾಗಿ ರೂ. 6,000 ಮೊತ್ತವನ್ನು ಬಡಕುಟುಂಬದ ಖಾತೆ ಜಮಾ ಮಾಡಲಾಗುತ್ತದೆ ಎಂದು ಹೇಳುತ್ತಾರೆ. ಒಂದು ಮಾಹಿತಿಯ ಪ್ರಕಾರ ಕೆಳಸ್ತರದ ಶೇ. 20 ಪ್ರಮಾಣದ ಪ್ರತಿ ಕುಟುಂಬದ ವಾರ್ಷಿಕ ಆದಾಯವು ಸರಾಸರಿ ರೂ. 77,000 ಇದೆ. ಈ ‘ನ್ಯಾಯ್’ ಯೋಜನೆ ಅನುಸಾರ ಉಳಿದ ರೂ. 72,000 ಮೊತ್ತವನ್ನು ನೇರವಾಗಿ ಪಾವತಿಸುವುದರ ಮೂಲಕ ಸರಾಸರಿ ವಾರ್ಷಿಕ ಆದಾಯವನ್ನು ರೂ.1,44,000ಗೆ (ತಿಂಗಳಿಗೆ ರೂ.12,000) ಹೆಚ್ಚಿಸಲಾಗುತ್ತದೆ.

ಇಲ್ಲಿ ಅತಿಬಡ ಕುಟುಂಬಗಳನ್ನು ಹೇಗೆ ಗುರುತಿಸಲಾಗುತ್ತದೆ? ಈ ಹಿಂದೆ ನಡೆದಂತೆ ಅರ್ಹರಿಗೆ ಈ ಯೋಜನೆ ತಲುಪದೆ ಅನರ್ಹರು ಮತ್ತು ಉಳ್ಳವರು ವಾಮಮಾರ್ಗದಿಂದ ದುರುಪಯೋಗಪಡಿಸಿಕೊಳ್ಳುವುದನ್ನುತಡೆಗಟ್ಟುವುದಕ್ಕೆ ಯಾವ ನಿಯಂತ್ರಣ ನೀತಿಸಂಹಿತೆಗಳಿವೆ? (ಮೇಲ್ಜಾತಿಗಳು ಸೃಷ್ಟಿಸಿದ ಸುಳ್ಳು ಜಾತಿ ಪ್ರಮಾಣ ಪತ್ರಗಳು, ಮಧ್ಯಮವರ್ಗ ಸೃಷ್ಟಿಸಿಕೊಂಡ ನಕಲಿ ಬಿಪಿಎಲ್ ಕಾರ್ಡ್‌ಗಳ ಉದಾಹರಣೆ ನಮ್ಮ ಮುಂದಿದೆ). 2011ರ ಜನಗಣತಿಯನ್ನು ಆಧರಿಸಿ ಬಡಕುಟುಂಬಗಳನ್ನು ಗುರುತಿಸಲಾಗುತ್ತದೆ ಎಂದು ರಾಹುಲ್ ಹೇಳಿದ್ದಾರೆ. ಇದು ಈಗ ಅತ್ಯಂತ ಪ್ರಶ್ನಾರ್ಹ ವಿಷಯವಾಗಿದೆ. ಮೊದಲು ಈ 2011ರ ಜನಗಣತಿಯ ಮಾಹಿತಿಯನ್ನು ಸಂಕ್ಷಿಪ್ತವಾಗಿ ವಿಶ್ಲೇಷಿಸೋಣ.
ಸ್ವಾತಂತ್ರ್ಯ ಬಂದ ದಿನದಿಂದ (1947ರಿಂದ) ಎಪ್ಪತ್ತು ವರ್ಷಗಳವರೆಗೆ ಶೇ. 60 ಪ್ರಮಾಣದ ಜನಸಂಖ್ಯೆ ಬಡತನ ರೇಖೆಗಿಂತ ಕೆಳಗೆ ಬದುಕುತ್ತಿವೆ. ಜಾಗತೀಕರಣದ ನಂತರ ಈ ಪ್ರಮಾಣವು ಹೆಚ್ಚುತ್ತ ಹೋಗಿದೆ. ಈ ಬಡತನರೇಖೆಯನ್ನು ಗುರುತಿಸುವಲ್ಲಿಯೂ ಯೋಜನಾ ಆಯೋಗ ಮತ್ತು ಸರಕಾರಗಳು ಸಂಪೂರ್ಣ ಹಾದಿತಪ್ಪಿವೆ ಮತ್ತು ನಿರ್ಲಕ್ಷ್ಯ, ಕ್ರೌರ್ಯದಿಂದ ವರ್ತಿಸಿವೆ. 1957ರಲ್ಲಿ ಕೇಂದ್ರ ಯೋಜನಾ ಆಯೋಗವು ಪ್ರತೀ ವ್ಯಕ್ತಿ ಖರ್ಚು ಮಾಡುವ ಶಕ್ತಿಗೆ ಅನುಗುಣವಾಗಿ ರೂ.20 ಬಡತನರೇಖೆ ಎಂದು ಗುರುತಿಸಿತ್ತು. ಅಂದರೆ ವ್ಯಕ್ತಿಯೊಬ್ಬ ತಿಂಗಳಿಗೆ ರೂ. 21 ಖರ್ಚು ಮಾಡಬಲ್ಲವನಾದರೆ ಆತ ಬಡತನರೇಖೆಗಿಂತ ಮೇಲೇರುತ್ತಾನೆ. 1979ರಲ್ಲಿ ನಗರವಾಸಿಗೆ ಬದುಕಲು ಪ್ರತಿ ತಿಂಗಳಿಗೆ ಕನಿಷ್ಠ ರೂ.57, ಗ್ರಾಮೀಣವಾಸಿಗೆ ಕನಿಷ್ಠ ರೂ.47 ಎಂದು ನಿಗದಿಪಡಿಸಿತು. 2000ರಲ್ಲಿ ನಗರವಾಸಿಗೆ ಪ್ರತಿ ತಿಂಗಳಿಗೆ ರೂ. 454, ಗ್ರಾಮೀಣವಾಸಿಗೆ ಪ್ರತಿ ತಿಂಗಳಿಗೆ ರೂ. 357 ಎಂದು ನಿಗದಿಪಡಿಸಿತು. 2005ರಲ್ಲಿ ನಗರವಾಸಿಗೆ ಪ್ರತಿ ತಿಂಗಳಿಗೆ ರೂ.559, ಗ್ರಾಮೀಣವಾಸಿಗೆ ಪ್ರತಿ ತಿಂಗಳಿಗೆ ರೂ. 368 ಎಂದು ನಿಗದಿಪಡಿಸಿತು. 2012ರಲ್ಲಿ ಮೋಂಟೆಕ್ ಸಿಂಗ್ ಅಹ್ಲುವಾಲಿಯ ಅವರು ಬದುಕಲು ನಗರವಾಸಿಗೆ ಪ್ರತಿ ತಿಂಗಳಿಗೆ ರೂ.990, ಗ್ರಾಮೀಣವಾಸಿಗೆ ಪ್ರತಿ ತಿಂಗಳಿಗೆ ರೂ. 810 ಎಂದು ನಿಗದಿಪಡಿಸಿದರು. ಈ ಸಮೀಕ್ಷೆಗೆ ಬಳಸಿಕೊಂಡ ಮಾನದಂಡಗಳು ಪ್ರಶ್ನಾರ್ಹವಾಗಿದ್ದವು. ಈ ಎಲ್ಲವೂ ಅಂಕಿಅಂಶಗಳ ಮೇಲಾಟ ಹೊರತಾಗಿ ವಾಸ್ತವಕ್ಕೂ ಇದಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
22, ಜುಲೈ 2013ರಂದು ಆಗಿನ ಯೋಜನಾ ಆಯೋಗವು 2011-12ರ ಸಮೀಕ್ಷೆಯ ಅನುಸಾರ ದೇಶದಲ್ಲಿ ಬಡತನವು ಶೇ. 22 ಪ್ರಮಾಣಕ್ಕೆ ಇಳಿದಿದೆ ಎಂದು ಪ್ರಕಟಿಸಿತು. ಕಳೆದ ಒಂದು ದಶಕದಲ್ಲಿ (2004-2005ರಿಂದ 2009-10ರ ವರೆಗೆ) ಶೇ. 37.2 ಪ್ರಮಾಣದಿಂದ ಶೇ 29.8 ಪ್ರಮಾಣಕ್ಕೆ ಇಳಿದಿದೆ ಎಂದು ವಿವರಿಸಲಾಯಿತು. ಆಗಿನ ತೆಂಡುಲ್ಕರ್ ಸಮಿತಿಯ ಸಮೀಕ್ಷೆಯ ಪ್ರಕಾರ (2011) ಬಡತನ ರೇಖೆಗಿಂತ ಕೆಳಗಿರುವವರ ಜನಸಂಖ್ಯೆ 269.3 ಮಿಲಿಯನ್ (27 ಕೋಟಿ) ಎಂದೂ ಅದರಲ್ಲಿ 216.5 ಮಿಲಿಯನ್ (22 ಕೋಟಿ) ಗ್ರಾಮೀಣ ಭಾರತದಲ್ಲಿ, 52.8 ಮಿಲಿಯನ್ (5.3 ಕೋಟಿ) ನಗರ ಭಾಗದಲ್ಲಿ ವಾಸಿಸುತ್ತಿದ್ದಾರೆಂದು ಹೇಳಿತ್ತು. (1973-74ರಲ್ಲಿ ಗ್ರಾಮೀಣ ಭಾಗದಲ್ಲಿ ಶೇ. 56, ನಗರ ಭಾಗದಲ್ಲಿ ಶೇ.49 ಪ್ರಮಾಣದ ಜನಸಂಖ್ಯೆ ಬಡತನ ರೇಖೆಗಿಂತ ಕೆಳಗಿದ್ದರು). ಅದೇ ವರ್ಷ ಅಂದರೆ 2010ರ ಸಮೀಕ್ಷೆ ಅನುಸಾರ ಪ್ರತಿ ವರ್ಷ 26 (2.6 ಕೋಟಿ) ಮಿಲಿಯನ್ ಮಕ್ಕಳು ಹುಟ್ಟುತ್ತಾರೆ. ಅದರಲ್ಲಿ 1.83 (19 ಲಕ್ಷ) ಮಿಲಿಯನ್ ಮಕ್ಕಳು ಐದನೇ ವಯಸ್ಸು ತಲುಪುವ ಮುಂಚೆಯೆ ಸಾವನ್ನಪ್ಪುತ್ತಾರೆ. ಇವರಲ್ಲಿ ಅರ್ಧದಷ್ಟು ಮಕ್ಕಳು ಹುಟ್ಟಿದ ಒಂದು ತಿಂಗಳ ಒಳಗೆ ಮೃತರಾಗುತ್ತಾರೆ. ಇದೆಲ್ಲವೂ ಅಪೌಷ್ಟ್ಟಿಕತೆಯ ಕಾರಣದಿಂದ. ಅಲ್ಲದೆ 350 (35 ಕೋಟಿ) ಮಿಲಿಯನ್ ಜನರು ಉಪವಾಸ ಮಲಗುತ್ತಾರೆ ಎಂದು ವಿವರಿಸಲಾಗಿತ್ತು. ಆಗ ಯೋಜನಾ ಆಯೋಗದ ಉಪಾಧ್ಯಕ್ಷರಾದ ಮೋಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ‘‘ಸಂತೃಪ್ತಿಯಿಂದ ಬದುಕಲು ಪ್ರತೀ ವ್ಯಕ್ತಿಗೆ ದಿನವೊಂದಕ್ಕೆ ರೂ. 27 ಸಾಕಾಗುತ್ತದೆ’’ ಎಂದು ಹೇಳಿ ಪ್ರಜ್ಞಾವಂತರನ್ನು ದಂಗುಬಡಿಸಿದ್ದರು.
hit-or-miss scoring system ಕಡೆಗೂ ‘‘ನಮ್ಮ ಎಲ್ಲಾ ಆಸೆಗಳನ್ನು, ಬಯಕೆಗಳನ್ನು ಸಂಪೂರ್ಣವಾಗಿ ಈಡೇರಿಸಿಕೊಳ್ಳುವುದು ಸಂತೋಷದಾಯಕ ಪ್ರವೃತ್ತಿಯಲ್ಲ, ಬದಲಿಗೆ ನಮ್ಮ ಆಸೆ, ಬಯಕೆಗಳನ್ನು ಆದಷ್ಟು ಸೀಮಿತಗೊಳಿಸಿಕೊಂಡು ಕನಿಷ್ಠ ತೃಪ್ತಿಯಲ್ಲಿ ಬದುಕುವುದು ಸಂತೋಷದಾಯಕವಾದದ್ದು’’ ಎಂದು ಪಶ್ಚಿಮದ ಆರ್ಥಿಕತಜ್ಞ ಜೆ.ಎಸ್.ಮಿಲ್ ಹೇಳಿದ್ದು ಭಾರತದಲ್ಲಿ ಕೇವಲ ಬಡವರಿಗೆ ಮಾತ್ರ ಅನ್ವಯಿಸುತ್ತದೆ. ಆ ಕಾರಣಕ್ಕಾಗಿಯೇ ಶೇ. 1 ಪ್ರಮಾಣದ ಅತಿ ಶ್ರೀಮಂತರ ಬಳಿ ದೇಶದ ಶೇ. 69 ಪ್ರಮಾಣದ ಸಂಪತ್ತಿದೆ. ಈ ಎಲ್ಲಾ ಸಮೀಕ್ಷೆಗಳು ಬಡತನರೇಖೆಯನ್ನು ಗುರುತಿಸುವಲ್ಲಿ ಸೋತಿವೆ. ರಂಗರಾಜನ್ ಸಮಿತಿಯು ಎಂಟು ವರ್ಷಗಳ ಹಿಂದಿನ (2011)ರ ಅವೈಜ್ಞಾನಿಕ ಸಮೀಕ್ಷೆಯನ್ನು, ಮಾಹಿತಿಯನ್ನು ಈ ಕಾಲಕ್ಕೆ ಒಂದು ಮಾನದಂಡವಾಗಿ ಬಳಸುವುದು ಎಷ್ಟು ಸರಿ ಎನ್ನುವ ಪ್ರಶ್ನೆಗೆ ರಾಹುಲ್ ಗಾಂಧಿ, ಕಾಂಗ್ರೆಸ್‌ನ ನಾಯಕರ ಬಳಿ ಉತ್ತರವಿಲ್ಲ. ಕಾಂಗ್ರೆಸ್ ದತ್ತಾಂಶ ಇಲಾಖೆಯ ಮುಖ್ಯಸ್ಥ ಪ್ರವೀಣ್ ಚಕ್ರವರ್ತಿಯವರ ಬಳಿಯೂ ಇದಕ್ಕೆ ಸ್ಪಷ್ಟತೆ ಇಲ್ಲ. ಏಕೆಂದರೆ ಬಡತನ ರೇಖೆಯನ್ನು ಗುರುತಿಸಲು ಮತ್ತು ಅದರ ಪ್ರಮಾಣವನ್ನು ಕಂಡುಹಿಡಿಯಲು ಮೇಲಿನ ಮಾದರಿಗಳು ಅತ್ಯಂತ ದೋಷಪೂರಿತವಾಗಿವೆ. ಡ್ರೀಜೆ ಅವರು ಈ 2011ರ ಸಮೀಕ್ಷೆ ಎಂದು ವಿವರಿಸುತ್ತಾರೆ. ಇದು ಬಡತನದ ಸಮಾಜೋ-ಆರ್ಥಿಕ ನೆಲೆಯನ್ನು ಆಧರಿಸಿ ನಡೆಸಿದ ಸಮೀಕ್ಷೆಯಲ್ಲ. ಹಾಗಿದ್ದಲ್ಲಿ ಪ್ರಸ್ತುತ ಈ ಶೇ. 20 ಪ್ರಮಾಣದ ಅತಿ ಬಡಕುಟುಂಬಗಳನ್ನು ಗುರುತಿಸುವುದು ಹೇಗೆ? ಯೋಜನೆಗೆ ಅಗತ್ಯವಾದ ವಾರ್ಷಿಕ ರೂ. 3.6 ಲಕ್ಷ ಕೋಟಿಯು ಅಭಿವೃದ್ಧಿ ಸೂಚ್ಯಂಕದ ಶೇ. 2 ಪ್ರಮಾಣದಷ್ಟಾಗುತ್ತದೆ. ಈ ಮೊತ್ತವನ್ನು ಎಲ್ಲಿಂದ ಕ್ರೋಡೀಕರಿಸಲಾಗುತ್ತದೆ? ಒಂದು ವೇಳೆ ಈ ಅಭಿವೃದ್ಧಿ ಸೂಚ್ಯಂಕವು (ಇದನ್ನು ಅಳೆಯುವ ಮಾನದಂಡವು ದೋಷಪೂರಿತವಾಗಿದೆ) ಪ್ರತಿ ವರ್ಷವು ಹೆಚ್ಚಳವಾಗುತ್ತಾ ಹೋದಂತೆ ಅದರ ‘ನ್ಯಾಯ್’ ಯೋಜನೆಯ ಪ್ರಮಾಣವು ಕಡಿಮೆ (1.2) ಆಗುತ್ತ ಹೋಗುತ್ತದೆ. ಆದರೆ ಮುಂದಿನ ಐದು ವರ್ಷಗಳಲ್ಲಿ ದೇಶದ ಉತ್ನನ್ನ, ಮಾರಾಟ ಮತ್ತು ಆದಾಯವನ್ನು ಹೆಚ್ಚಿಸಲು ಕಾಂಗ್ರೆಸ್ ಪಕ್ಷದ ಬಳಿ ಯಾವುದೇ ಮುನ್ನೋಟದ ಕಾರ್ಯಯೋಜನೆಗಳಿಲ್ಲ. ಇದೇ ಇಲ್ಲಿನ ದೊಡ್ಡ ಸಮಸ್ಯೆ. ಇದಕ್ಕೂ ಮೊದಲು ದೇಶದ ಅತಿ ಶ್ರೀಮಂತರು/ ಶ್ರೀಮಂತರ ಆದಾಯದ ಮೇಲಿನ ತೆರಿಗೆಯನ್ನು ಹೆಚ್ಚಿಸಬೇಕಾಗುತ್ತದೆ. ಇದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಇಚ್ಛಾಶಕ್ತಿ ಇದೆಯೇ? ಇಲ್ಲಿನ ಆರ್ಥಿಕ ತಜ್ಞರು ಈ ನ್ಯಾಯ್ ಯೋಜನೆಯಿಂದ ವಿತ್ತೀಯ ಕೊರತೆ ಪ್ರಮಾಣದ ಹೆಚ್ಚುತ್ತದೆ; ಇದನ್ನು ಸರಿತೂಗಿಸಲು ಅನೇಕ ಸಬ್ಸಿಡಿಗಳನ್ನು ನಿಲ್ಲಿಸಬೇಕು ಎಂದು ಶಿಫಾರಸು ಮಾಡುತ್ತಾರೆ. ಆದರೆ ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಡಕುಟುಂಬಗಳಿಗೆ ಸುಸ್ಥಿರ ಬದುಕು ಕಲ್ಪಿಸದೆ ಈ ನ್ಯಾಯ್ ಯೋಜನೆಗಾಗಿ ಈಗಿರುವ ಜನಕಲ್ಯಾಣ ಯೋಜನೆಗಳನ್ನು ಮತ್ತು ಸಬ್ಸಿಡಿಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಈ ಆತಂಕದ ಕುರಿತು ಸಹ ಕಾಂಗ್ರೆಸ್ ಬಳಿ ಸೂಕ್ತ ಉತ್ತರವಿಲ್ಲ.
ಒಂದು ವೇಳೆ ಜಾರಿಗೊಂಡರೆ ದೇಶದ ಸಮಾಜೋ-ಆರ್ಥಿಕ ಸ್ವರೂಪ ಬದಲಿಸಬಲ್ಲ ಈ ಕನಿಷ್ಠ ಆದಾಯ ಯೋಜನೆ ಕುರಿತು ಕಾಂಗ್ರೆಸ್ ಸೀರಿಯಸ್ ಆಗಿದೆಯೆ ಎನ್ನುವುದೇ ಇಲ್ಲಿ ಯಕ್ಷ ಪ್ರಶ್ನೆ. ಉತ್ಸಾಹವನ್ನು ಮೀರಿ ಕಾಳಜಿ ಮುಖ್ಯವಾಗಬೇಕಾದ ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಬಳಿ ಬಡಜನರ ಕುರಿತಾದ ಕಳಕಳಿಯ ಕೊರತೆ ಕಾಣುತ್ತಿದೆ. ರಾಜಕೀಯ ಇಚ್ಛಾಶಕ್ತಿ ಮತ್ತು ಬದ್ಧತೆಯನ್ನು ಪ್ರದರ್ಶಿಸಿದರೆ ಇದು ಒಂದು ಕ್ರಾಂತಿಕಾರಿ ಹೆಜ್ಜೆಯಾಗುತ್ತದೆ.

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News

ಜಗದಗಲ
ಜಗ ದಗಲ