ಮೈಸೂರು-ಕೊಡಗು ಕ್ಷೇತ್ರ: ಮೈತ್ರಿ ನಾಯಕರಲ್ಲಿ ಮೂಡಿದ ಒಗ್ಗಟ್ಟು, ಕಾರ್ಯಕರ್ತರಲ್ಲಿ ಇನ್ನೂ ಬಿಕ್ಕಟ್ಟು

Update: 2019-04-05 17:39 GMT

ಮೈಸೂರು,ಎ.5: ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲಿಸುವಂತೆ ಹೇಳಿ ನಾಯಕರಲ್ಲಿ ಒಗ್ಗಟ್ಟು ಮೂಡುತ್ತಿದ್ದರೆ ಕಾರ್ಯಕರ್ತರಲ್ಲಿ ಮಾತ್ರ ಇನ್ನೂ ಬಿಗ್ಗಟ್ಟು ಮುಂದುವರಿಯುತ್ತಲೇ ಇದೆ. 

ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾತುಕತೆಗೆ ಮುಂದಾಗಿ ಯಶಸ್ಸು ಕಂಡು 21 ಕಾಂಗ್ರೆಸ್‍ಗೆ 7 ಜೆಡಿಎಸ್ ಪಕ್ಷಕ್ಕೆ ಎಂಬ ತೀರ್ಮಾನಕ್ಕೆ ಬರಲಾಯಿತು. ಅದರಂತೆ ಬೆಂಗಳೂರಿನಲ್ಲಿ ನಾಯಕರು ಒಟ್ಟಿಗೆ ಸಭೆ ಮತ್ತು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಪಕ್ಷದ ನಾಯಕರು ಮತ್ತು ಮುಖಂಡರು ಮೈತ್ರಿ ಧರ್ಮ ಪಾಲನೆ ಮಾಡುವಂತೆ ಪಾಠ ಹೇಳಿದ್ದರು.

ಅದರಂತೆ ಮೈಸೂರು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆ ಮಾಡಬೇಕಿದ್ದ ಸಚಿವ ಜಿ.ಟಿ.ದೇವೇಗೌಡ ಮೊನ್ನೆಯವರೆಗೂ ಚುನಾವಣಾ ಕಣಕ್ಕೆ ಇಳಿಯದೆ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ನಂತರ ಕಾಂಗ್ರೆಸ್ ಪಕ್ಷದ ನಾಯಕರು ಭೇಟಿ ಮಾಡಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಕೋರಿದ್ದರು. ಅದಕ್ಕೂ ಮನಸ್ಸು ಬದಲಿಸದ ಜಿ.ಟಿ.ದೇವೇಗೌಡ ನನ್ನ ಜೊತೆ ಸಿದ್ದರಾಮಯ್ಯ ಇದುವರೆಗೂ ಒಂದು ಮಾತನ್ನು ಆಡಿಲ್ಲ ಹಾಗಿದ್ದ ಮೇಲೆ ನಾನು ಹೇಗೆ ಮತಯಾಚಿಸಲಿ ಎಂಬ ಅಸಮಧಾನವನ್ನು ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೇ ಬುಧವಾರ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸಚಿವ ಜಿ.ಟಿ.ದೇವೇಗೌಡರ ಜೊತೆ ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿ ಜೊತೆ ಕೈಜೋಡಿಸುವಂತೆ ಹೇಳಿದ್ದರು. ಇದರಿಂದ ಉತ್ಸುಕರಾದ ಸಚಿವ ಜಿ.ಟಿ.ದೇವೇಗೌಡ ಶುಕ್ರವಾರ ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಯಾವುದೇ ಕಾರಣಕ್ಕೂ ನಾವು ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸುವುದಿಲ್ಲ, ಯಾರನ್ನ ಕೇಳಿ ನೀವು ಮೈತ್ರಿ ಮಾಡಿಕೊಂಡಿರಿ ಎಂದು ಕಾರ್ಯಕರ್ತರು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಹಿಂದೆ ನಡೆದ ಚಾಮುಂಡೇಶ್ವರಿ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಮೇಲೆ ಹಲ್ಲೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ನಿಮ್ಮ ಗೆಲುವಿಗೆ ಸಾಕಷ್ಟು ಹೋರಾಟವನ್ನು ಮಾಡಿದ್ದೇವೆ. ಹಾಗಿದ್ದ ಮೇಲೆ ನಾವು ಹೇಗೆ ಇವರನ್ನು ಬೆಂಬಲಿಸುವುದು ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.

ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಿಖಿಲ್ ಪರ ಕೆಲಸ ಮಾಡುತ್ತಿಲ್ಲ, ಮೈಸೂರಿನಲ್ಲಿ ಮಾತ್ರ ಮೈತ್ರಿ ಪಾಲನೆ ಮಾಡಿ ಎನ್ನುತ್ತೀರಿ. ಅವರು ಬೆಂಬಲ ನೀಡದಿದ್ದ ಮೇಲೆ ನಾವು ಸಹ ಕಾಂಗ್ರೆಸ್‍ಗೆ ಬೆಂಬಲ ನೀಡುವುದಿಲ್ಲ ಎಂಬ ಮಾತನ್ನು ಹೇಳಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಗೊಂದಲಕ್ಕೊಳಗಾದ ಸಚಿವ ಜಿ.ಟಿ.ದೇವೇಗೌಡ ನಿಮ್ಮಲ್ಲಾ ನೋವು ನನಗೆ ಅರ್ಥವಾಗುತ್ತದೆ. ನಮಗೆ ವ್ಯಕ್ತಿಗಿಂತ ಪಕ್ಷ ಮುಖ್ಯ ಹಾಗಾಗಿ ನೀವು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಪಕ್ಷದ ನಾಯಕರೇನೊ ಒಂದಾಗುತ್ತಾರೆ. ಕಾರ್ಯಕರ್ತರಾದ ನಾವು ನಿಮ್ಮ ಪರ ಸದಾ ದುಡಿಯಬೇಕು. ಇದರಿಂದ ನಮಗೇನು ಲಾಭ ಎಂಬ ಪ್ರಶ್ನೆಯನ್ನು ಕಾರ್ಯಕರ್ತರು ಎತ್ತಿದ್ದಾರೆ ಎಂದು ಬಲ್ಲಮೂಲಗಳು ತಿಳಿಸಿವೆ. 

ಒಟ್ಟಿನಲ್ಲಿ ಪಕ್ಷಗಳ ನಾಯಕರಲ್ಲಿ ಮೂಡಿದ ಒಗ್ಗಟ್ಟು ಕಾರ್ಯಕರ್ತರಲ್ಲಿ ಮೂಡದಿರುವುದು ಮಾತ್ರ ವಿಪರ್ಯಾಸ. ಮುಂದಿನ ದಿನಗಳಲ್ಲಿ ಯಾವ ರೀತಿ ಮೈತ್ರಿ ಪಾಲನೆಯಾಗುವುದೋ ಕಾದು ನೋಡಬೇಕು.

Writer - ನೇರಳೆ ಸತೀಶ್‍ ಕುಮಾರ್

contributor

Editor - ನೇರಳೆ ಸತೀಶ್‍ ಕುಮಾರ್

contributor

Similar News