‘ಕೈ’ಗೆ ದಕ್ಷಿಣ ಭಾರತ ಸುರಕ್ಷಿತವೇ?

Update: 2019-04-07 18:35 GMT

ಕಾಂಗ್ರೆಸ್ ಪಕ್ಷವು ದಕ್ಷಿಣ ಭಾರತದ ಬೃಹತ್ ರಾಜ್ಯಗಳಲ್ಲಿ ಅಸ್ಮಿತೆಯ ಹಾಗೂ ಸೈದ್ಧಾಂತಿಕ ದೃಷ್ಟಿಯಿಂದ ಪ್ರತಿಕೂಲಕರವಾದ ವಾತಾವರಣವನ್ನು ಎದುರಿಸುತ್ತಿದೆ. ಈ ಗ್ರಹಿಕೆಯೊಂದಿಗೆ ಹೇಳುವುದಾದರೆ, ಕೇರಳದಲ್ಲಿ ರಾಹುಲ್ ಅವರ ಸ್ಪರ್ಧೆಯು ಒಂದು ದಿಟ್ಟತನದ ಕ್ರಮವೆಂದು ಹೇಳಬಹುದಾಗಿದೆ.

ಆಗ 1980ನೇ ಇಸವಿ. ಇಂದಿರಾಗಾಂಧಿಯವರ ನಿಷ್ಠಾವಂತ ಅನುಯಾಯಿಯಾದ ಸಿ.ಎಂ. ಸ್ಟೀಫನ್ ಅವರು ಹೊಸದಿಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಎ.ಬಿ.ವಾಜಪೇಯಿ ವಿರುದ್ಧ ಸ್ಪರ್ಧಿಸಿ, ಸುಮಾರು 5,045 ಮತಗಳಿಂದ ಪರಾಭವಗೊಂಡಿದ್ದರು. ಆದರೆ ಇಂದಿರಾಗಾಂಧಿಯವರಿಗೆ ಸ್ಟೀಫನ್ ಮತ್ತೆ ಸಂಸತ್ತಿಗೆ ಬರುವುದು ಬೇಕಾಗಿತ್ತು. ಹೀಗಾಗಿ, ಆಕೆ ಅವರನ್ನು ಹೈದರಾಬಾದ್-ಕರ್ನಾಟಕ ಪ್ರಾಂತದಲ್ಲಿರುವ ಕಲಬುರಗಿಯಲ್ಲಿ ಉಪಚುನಾವಣೆಗೆ ಸ್ಪರ್ಧಿಸಲು ಕಳುಹಿಸಿದರು.
ಆ ದಿನಗಳಲ್ಲಿ ಕಲಬುರಗಿ ಮೀಸಲು ಕ್ಷೇತ್ರವಾಗಿರಲಿಲ್ಲ. ಧರಂ ಸಿಂಗ್ ಅವರು 1.17 ಲಕ್ಷ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು ಹಾಗೂ ಶೇ.56.20ರಷ್ಟು ಮತಗಳನ್ನು ಪಡೆದುಕೊಂಡಿದ್ದರು. ಧರಂ ಸಿಂಗ್ ಅವರು ಲೋಕಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲೇ, ರಾಜೀನಾಮೆ ನೀಡುವಂತೆ ಅವರಿಗೆ ಸೂಚಿಸಲಾಯಿತು ಹಾಗೂ ಸ್ಟೀಫನ್ ಅವರಿಗೆ ಅವಕಾಶ ಮಾಡಿಕೊಡುವುದಕ್ಕಾಗಿ ಬಲವಂತದ ಉಪಚುನಾವಣೆಯನ್ನು ಹೇರಲಾಯಿತು.
ಮೂಲತಃ ಕೇರಳದವರಾದ ಸ್ಟೀಫನ್, ಇಂದಿರಾಗಾಂಧಿಯವರ ಸಂಪುಟದಲ್ಲಿ ಸಂಪರ್ಕ ಸಚಿವರಾಗಿದ್ದರು. ಜನತಾ ಪಕ್ಷ ಸರಕಾರದ ಆಳ್ವಿಕೆಯ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು. ಇಲ್ಲಿ ಅಚ್ಚರಿ ಮೂಡಿಸುವ ವಿಷಯವೆಂದರೆ ಸಾಂಸ್ಕೃತಿಕ ವೈರುಧ್ಯ. ವರ್ಷವಿಡೀ ಸದಾ ಹಚ್ಚ ಹಸಿರಿನಿಂದ ಕಂಗೊಳಿಸುವ ಹಾಗೂ ಹೇರಳ ಮಳೆಯಾಗುವ ಕೇರಳದ ಮಾವೆಲಿಕ್ಕರದಲ್ಲಿ ಬೆಳೆದ ವ್ಯಕ್ತಿಯೊಬ್ಬ, ಒಣ ಹಾಗೂ ಬರಪೀಡಿತ ಮತ್ತು ಹಿಂದುಳಿದ ಜಿಲ್ಲೆಯಾದ ಕಲಬುರಗಿಯಲ್ಲಿ ಸ್ಪರ್ಧೆಗಿಳಿದಿದ್ದರು.
 ಕೇರಳೀಯ ಕ್ರೈಸ್ತರಾದ ಸ್ಟೀಫನ್ ಈ ಕ್ಷೇತ್ರಕ್ಕೆ ನಿಜಕ್ಕೂ ಸರಿಯಾಗಿ ಹೊಂದಿಕೆಯಾಗುವ ವ್ಯಕ್ತಿಯಲ್ಲವೆಂಬುದು ಸ್ಪಷ್ಟ. ಅದೇ ರೀತಿ ಧರಂಸಿಂಗ್ ಕೂಡಾ, ಆ ಕ್ಷೇತ್ರವನ್ನು ಗೆದ್ದಿರುವುದು ಅಚ್ಚರಿಯೇ ಸರಿ. ಯಾಕೆಂದರೆ ಜಾತಿವಾರು ದೃಷ್ಟಿಯಲ್ಲಿ ನೋಡಿದರೆ ಅವರು ಆ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯಲ್ಲ. ಧರಂಸಿಂಗ್ ರಜಪೂತ ಸಮುದಾಯಕ್ಕೆ ಸೇರಿದ್ದು, ಕಲಬುರಗಿ ಕ್ಷೇತ್ರದಲ್ಲಿ ಆ ಜಾತಿಯವರು ಕೆಲವೇ ನೂರು ಸಂಖ್ಯೆಯಲ್ಲಿದ್ದಾರೆ.
ಇಂತಹ ವೈರುಧ್ಯಗಳಿರುವ ಕಲಬುರಗಿ ಕ್ಷೇತ್ರದಲ್ಲಿ ಸ್ಟೀಫನ್‌ರನ್ನು ಗೆಲ್ಲಿಸುವ ಸವಾಲುದಾಯಕವಾದ ಕೆಲಸವನ್ನು ಧರಂಸಿಂಗ್ ಹಾಗೂ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ವಹಿಸಲಾಗಿತ್ತು. ಅವರು ಮತದಾರರಿಗೆ ಸ್ಟೀಫನ್‌ರನ್ನು , ಸ್ಥಳೀಯರಲ್ಲಿ ಜನಪ್ರಿಯ ಲಿಂಗಾಯತ/ ಓಬಿಸಿ ಸಮುದಾಯಗಳಲ್ಲಿ ಸಾಮಾನ್ಯವಾಗಿರುವ ತಿಪ್ಪಣ್ಣ ಎಂಬ ಹೆಸರಿನಿಂದಲೇ ಪರಿಚಯಿಸಿದರು ಹಾಗೂ ಸುಮಾರು 10 ಸಾವಿರ ಮತಗಳ ಅಂತರದಲ್ಲಿ ಅವರು ಗೆಲ್ಲುವಂತೆ ಮಾಡಿದರು. ಸುಮಾರು 40 ವರ್ಷಗಳ ಹಿಂದೆ ನಡೆದ ಈ ವಿದ್ಯಮಾನದಿಂದ ಕಲಿಯಬೇಕಾದ ಪಾಠಗಳು ಸಾಕಷ್ಟಿವೆ.
ಆದರೆ ಕಾಂಗ್ರೆಸ್ ಪಕ್ಷವು ಇದೇ ರೀತಿಯ ಸಾಧನೆಯನ್ನು 2019ರಲ್ಲೂ ಪುನರಾವರ್ತಿಸಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈಗ ಅಸ್ಮಿತೆ ಹಾಗೂ ಉಪರಾಷ್ಟ್ರೀಯತಾವಾದಿ ರಾಜಕೀಯವು ವಿವಿಧ ಅವತಾರಗಳನ್ನು ತಳೆದಿದೆ. ಇದಕ್ಕಿಂತಲೂ ಮುಖ್ಯವಾಗಿ, ದಕ್ಷಿಣ ಭಾರತದಲ್ಲಿ ತನಗೆ ಈ ಹಿಂದೆ ಇದ್ದ ಜನಬೆಂಬಲವನ್ನು ಈಗಲೂ ಹೊಂದಿದೆಯೇ ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ.
ಹಾಗೆ ಹೇಳುವುದಾದರೆ, ಕಾಂಗ್ರೆಸ್ ಪಕ್ಷಕ್ಕೆ ದಕ್ಷಿಣ ಭಾರತವು ಒಂದು ರೀತಿಯ ವಿಮಾ ಪ್ಯಾಕೇಜ್‌ನಂತಿತ್ತು. ಚುನಾವಣೆಯಲ್ಲಿ ಭಾರತದ ಉಳಿದೆಡೆ ಕಾಂಗ್ರೆಸ್ ಪಕ್ಷವು ವಿಫಲಗೊಂಡಾಗ, ದಕ್ಷಿಣ ಭಾರತವು ಕಾಂಗ್ರೆಸ್‌ನ ದೀಪವು ಆರದಂತೆ ನೋಡಿಕೊಳ್ಳುತ್ತಿತ್ತು. ಪಕ್ಷವು ವಿಭಜನೆಗೊಂಡಾಗಲೂ, ನೆಹರೂ-ಇಂದಿರಾ ಕುಟುಂಬಕ್ಕೆ ನೈತಿಕ ಹಾಗೂ ಭೌತಿಕ ಬೆಂಬಲವು ದಕ್ಷಿಣ ಭಾರತದಿಂದ ದೊರೆಯುತ್ತಿತ್ತು. ಆದರೆ ಕಳೆದ ಒಂದು ದಶಕದಲ್ಲಿ ಅದೆಲ್ಲವೂ ಬದಲಾಗಿದೆಯೇ ಅಥವಾ ಹಾಗೆಂದು ಭಾಸವಾಗುತ್ತಿದೆಯೇ?.
ಕೇರಳದ ವಯನಾಡಿನಿಂದ ಸ್ಪರ್ಧಿಸಲು ರಾಹುಲ್‌ಗಾಂಧಿ ಈಗ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಈ ರೀತಿಯ ಜಿಜ್ಞಾಸೆಯು ಪ್ರಸಕ್ತವಾದುದಾಗಿದೆ. ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯ ಬಳಿಕ 1999ರಲ್ಲಿ ಈ ಲೋಕಸಭಾ ಸ್ಥಾನವನ್ನು ಸೃಷ್ಟಿಸಲಾಗಿತ್ತು. ಕೇರಳದಲ್ಲಿ ಸ್ಪರ್ಧಿಸಲು ರಾಹುಲ್ ತೀರ್ಮಾನಿಸುವವರೆಗೆ, ಕಾಂಗ್ರೆಸ್ ನಾಯಕರು ಅವರನ್ನು ದಕ್ಷಿಣ ಭಾರತದ ಕ್ಷೇತ್ರವನ್ನು ಆಯ್ದುಕೊಳ್ಳುವಂತೆ ಪದೇಪದೇ ಒತ್ತಾಯಿಸುತ್ತಾ ಬಂದಿದ್ದರು.
ರಾಜ್ಯದಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್ ಕರ್ನಾಟಕ ಘಟಕವು ರಾಹುಲ್‌ರನ್ನು ಒತ್ತಾಯಿಸುವುದರೊಂದಿಗೆ , ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಅಧ್ಯಕ್ಷರ ಸ್ಪರ್ಧೆಯ ಪ್ರಸ್ತಾಪ ಮಾಡಿತ್ತು. ಆನಂತರ ತಮಿಳು ಹಾಗೂ ಅಂತಿಮವಾಗಿ ಕೇರಳದ ಕಾಂಗ್ರೆಸ್ ಘಟಕ ಕೂಡಾ ರಾಹುಲ್‌ರನ್ನು ಆಹ್ವಾನಿಸಿತು. ವಿಚಿತ್ರವೆಂಬಂತೆ, ಪಕ್ಷದ ಆಂಧ್ರ ಹಾಗೂ ತೆಲಂಗಾಣ ಘಟಕಗಳು ಮಾತ್ರ ವೌನ ತಾಳಿದ್ದವು. ಬೀದರ್, ಕೊಪ್ಪಳ, ಬೆಂಗಳೂರು ಗ್ರಾಮಾಂತರ ಹಾಗೂ ವಯನಾಡ್ ರಾಹುಲ್‌ಗೆ ಸುರಕ್ಷಿತವಾದ ಕ್ಷೇತ್ರಗಳೆಂದು ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾದವು. ಅಂತಿಮವಾಗಿ ಅವರೀಗ ವಯನಾಡನ್ನು ಆಯ್ದುಕೊಂಡಿದ್ದಾರೆ.
1978ರಲ್ಲಿ ಚಿಕ್ಕಮಗಳೂರು ಕ್ಷೇತ್ರದ ಉಪಚುನಾವಣೆಯಲ್ಲಿ ಇಂದಿರಾಗಾಂಧಿಯವರ ಗೆಲುವು, ದಕ್ಷಿಣ ಭಾರತವು ಕಾಂಗ್ರೆಸ್ ಪಕ್ಷದ ಸುರಕ್ಷಿತ ತಾಣವೆಂಬ ಕಥೆಯ ಅತ್ಯಂತ ಜನಪ್ರಿಯ ಭಾಗವಾಗಿದೆ. ಈ ಉಪಚುನಾವಣೆಯು ಆಕೆಯ ರಾಜಕೀಯ ಜೀವನದ ಪುನರುತ್ಥಾನಕ್ಕೆ ದಾರಿ ಮಾಡಿಕೊಟ್ಟಿತು. ವಾಸ್ತವವಾಗಿ 1977ರ ಲೋಕಸಭಾಚುನಾವಣೆಯಲ್ಲಿ ತನ್ನ ಸೋಲಿನ ಬಳಿಕ ಇಂದಿರಾಗಾಂಧಿಯವರು ದಕ್ಷಿಣ ಭಾರತದೆಡೆಗೆ ಮುಖಮಾಡಿದ್ದರು. ಚಿಕ್ಕಮಗಳೂರಿನಲ್ಲಿ ಭರ್ಜರಿ ಗೆಲುವು ಸಾಧಿಸಿದ ಇಂದಿರಾಗೆ ಮತ್ತೆ ರಾಜಕೀಯ ಪುನರ್ಜನ್ಮ ದೊರೆಯಿತು.
‘ಇಂದಿರಾ ಎಂದರೆ ಭಾರತ’ ಎಂದು ಆಗಿನ ಕಾಂಗ್ರೆಸ್ ನಾಯಕ ಡಿ.ಕೆ. ಬರೂವಾ ಅವರ ವಿವಾದಾತ್ಮಕ ಘೋಷಣೆಗೆ ಪ್ರತಿಯಾಗಿ ವಿರೋಧಿಗಳು ‘ ಇಂದಿರಾ ಎಂದರೆ ಭಾರತವಲ್ಲ, ಆದರೆ ಆಕೆ ಕನಿಷ್ಠ ದಕ್ಷಿಣ ಭಾರತಕ್ಕಂತೂ ಆಗಿದ್ದಾರೆ’ ಎಂಬ ಚಟಾಕಿ ಹಾರಿಸಿದ್ದರು.
ಆದರೆ ಅದು ನಿಜವೆನಿಸಿತು. ಚಿಕ್ಕಮಗಳೂರಿನಲ್ಲಿ ಮಾತ್ರವಲ್ಲ, 1980ರ ಲೋಕಸಭಾ ಚುನಾವಣೆಯಲ್ಲಿ ಅವರು ಆಂಧ್ರಪ್ರದೇಶದ ಮೇಡಕ್‌ನಲ್ಲಿ ಸ್ಪರ್ಧಿಸಿ 67.93 ಶೇಕಡ ಮತಗಳ ಅಂತರದಿಂದ ಜಯಭೇರಿ ಬಾರಿಸಿದರು. ಆಕೆಯ ನಿಕಟ ಪ್ರತಿಸ್ಪರ್ಧಿ ಜೈಪಾಲ್ ರೆಡ್ಡಿಗೆ ಕೇವಲ 18.57 ಶೇಕಡ ಮತಗಳಷ್ಟೇ ದೊರೆತವು. ಇದಾದ 20 ವರ್ಷಗಳ ಆನಂತರ 1999ರಲ್ಲಿ ಸೋನಿಯಾ ಗಾಂಧಿ ಬಳ್ಳಾರಿ ಕ್ಷೇತ್ರದಲ್ಲಿ ಸ್ಪರ್ಧಿಸಿ, ಬಿಜೆಪಿಯ ಬಲಿಷ್ಠ ಅಭ್ಯರ್ಥಿ ಸುಶ್ಮಾ ಸ್ವರಾಜ್ ಅವರನ್ನು ಪರಾಭವಗೊಳಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ನೆಹರೂ-ಗಾಂಧಿ ಕುಟುಂಬದ ಪ್ರಾಮುಖ್ಯತೆಯನ್ನು ಮರುಸ್ಥಾಪಿಸುವ ಕ್ಷಣ ಅದಾಗಿತ್ತು.
 ಇದಾದ ಎರಡು ದಶಕಗಳ ಸುದೀಘ ಅಂತರದ ಬಳಿಕ 2019ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮೋದಿ ನೇತೃತ್ವದ ಬಲಪಂಥೀಯರಿಂದ ಸೈದ್ಧಾಂತಿಕ ಸವಾಲು ಎದುರಾಗಿದೆ. ಆದರೆ ಈಗಿನ ದಕ್ಷಿಣವು ಖಂಡಿತವಾಗಿಯೂ 20 ಅಥವಾ ನಲ್ವತ್ತು ವರ್ಷಗಳ ಹಿಂದೆ ರಾಹುಲ್‌ರ ತಾಯಿ ಅಥವಾ ಅಜ್ಜಿಯ ಪಾಲಿಗೆ ಇದ್ದುದಕ್ಕಿಂತ ತೀರಾ ಭಿನ್ನವಾಗಿದೆ.
1996ನೇ ಇಸವಿಯ ಬಳಿಕ ಕರ್ನಾಟಕದ ರಾಜಕೀಯ ವಾತಾವರಣದಲ್ಲಿ ಬದಲಾವಣೆಗಳಾದವು. ಬಳ್ಳಾರಿಯಲ್ಲಿ ಸೋನಿಯಾ ಗಾಂಧಿಯವರ ಗೆಲುವನ್ನು ಕಾಂಗ್ರೆಸ್ ಪಕ್ಷದ ಅಳಿದುಳಿದ ಪ್ರಭಾವಳಿಯೆಂದೇ ಭಾವಿಸಬಹುದು. ಯಾಕೆಂದರೆ, ಈ ಚುನಾವಣೆಯ ಬಳಿಕ ಆ ಇಡೀ ಪ್ರಾಂತವು ಬಿಜೆಪಿಯ ಭದ್ರಕೋಟೆಯಾಗಿ ಮಾರ್ಪಾಡುಗೊಂಡಿತ್ತು.
1971ರಲ್ಲಿ ಆಗಿನ ಮೈಸೂರು ರಾಜ್ಯವು ಕಾಂಗ್ರೆಸ್‌ಗೆ ನೂರು ಶೇಕಡಾ ಅಂದರೆ ಎಲ್ಲಾ 27 ಸೀಟುಗಳನ್ನು ನೀಡಿತ್ತು. ನೆರೆಯ ರಾಜ್ಯವಾದ ಆಂಧ್ರಪ್ರದೇಶದಲ್ಲಿ ಕಮ್ಯೂನಿಸ್ಟರು ಪ್ರಬರಾಗಿದ್ದ ಹೊರತಾಗಿಯೂ ಕಾಂಗ್ರೆಸ್ 41 ಸ್ಥಾನಗಳ ಪೈಕಿ 28 ಸ್ಥಾನಗಳನ್ನು ಗೆದ್ದಿತ್ತು. ದ್ರಾವಿಡ ಚಳವಳಿಯ ತೀವ್ರತೆಯ ನಡುವೆಯೂ ತಮಿಳುನಾಡಿನಲ್ಲಿ ಪಕ್ಷವು 39 ಸ್ಥಾನಗಳಲ್ಲಿ 9ನ್ನು ತನ್ನ ಬಗಲಿಗೆ ಹಾಕಿಕೊಂಡಿತ್ತು. ಇತ್ತ ಕಮ್ಯೂನಿಸ್ಟರ ಭದ್ರಕೋಟೆಯಾದ ಕೇರಳದಲ್ಲೂ ಕಾಂಗ್ರೆಸ್ 19 ಸ್ಥಾನಗಳಲ್ಲಿ 6ನ್ನು ಗೆದ್ದುಕೊಂಡಿತ್ತು. ಆದರೆ ತುರ್ತುಪರಿಸ್ಥಿತಿ ರದ್ದುಗೊಂಡ ಬಳಿಕ 1977ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದೇಶಾದ್ಯಂತ 154 ಸ್ಥಾನಗಳನ್ನು ಗೆದ್ದಿತ್ತು, ಆ ಪೈಕಿ 92 ಸ್ಥಾನಗಳಲ್ಲಿ ಅದಕ್ಕೆ ದಕ್ಷಿಣದ ರಾಜ್ಯಗಳಿಂದಲೇ ದೊರೆತಿದ್ದು, ಇದು ಒಟ್ಟು ಸ್ಥಾನಗಳಿಕೆಯ ಶೇ.60ರಷ್ಟಾಗಿದ್ದು, ಕರ್ನಾಟಕ ಹಾಗೂ ಆಂಧ್ರಗಳಲ್ಲಿ ಹತ್ತಿರ ಹತ್ತಿರ ಶೇ.100 ಸೀಟುಗಳು ದೊರೆತಿದ್ದರೆ, ಕೇರಳ ಹಾಗೂ ತಮಿಳುನಾಡಿನಲ್ಲಿ ಅದು ತನ್ನ ಬಲವನ್ನು ತುಸು ಹೆಚ್ಚಿಸಿಕೊಂಡಿತ್ತು.
1980ರಲ್ಲಿ ಇಂದಿರಾಗಾಂಧಿ ಅವರು ಚುನಾವಣೆಯಲ್ಲಿ ಗೆದ್ದು ಬಂದ ಬಳಿಕ, ಕಾಂಗ್ರೆಸ್ ಪಕ್ಷವು ಎರಡನೆ ಭಾರೀ ವಿಭಜನೆಗೊಂಡಿತು. ಈ ಸಲವೂ ದಕ್ಷಿಣ ಭಾರತ ಅದರ ಕೈಹಿಡಿಯಿತು. ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಕೆಲವು ಸ್ಥಾನಗಳನ್ನು ಕಳೆದುಕೊಂಡಿತಾದರೂ, ತಮಿಳುನಾಡಿನಲ್ಲಿ 39 ಸ್ಥಾನಗಳ ಪೈಕಿ 20 ಸ್ಥಾನಗಳನ್ನು ಬಾಚಿಕೊಂಡಿತು. ಈ ಸಲವೂ ಮತ್ತೊಮ್ಮೆ ಕಾಂಗ್ರೆಸ್ ಪಡೆದ ಒಟ್ಟು ಸ್ಥಾನಗಳ ಬಲಾಬಲದ ಶೇ.26 ದಕ್ಷಿಣದ ರಾಜ್ಯಗಳದ್ದಾಗಿದ್ದವು.
ಇಂದಿರಾಗಾಂಧಿಯವರ ಹತ್ಯೆಯ ಬಳಿಕ 1984ರಲ್ಲಿ ನಡೆದ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್‌ಗೆ ಭಾರೀ ಏಟು ಬಿದ್ದಿತ್ತು. ಆ ರಾಜ್ಯದಲ್ಲಿ ಪ್ರಾದೇಶಿಕ ವಿಷಯಗಳನ್ನು ಕಾರ್ಯಸೂಚಿಯಾಗಿಸಿಕೊಂಡು ಕಣಕ್ಕಿಳಿದ ತೆಲುಗುದೇಶಂ ಒಟ್ಟು 42 ಸ್ಥಾನಗಳ ಪೈಕಿ 30ನ್ನು ಬಾಚಿಕೊಂಡು, ಕೇವಲ 6ನ್ನು ಮಾತ್ರವೇ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿತು.
ತೆಲುಗುದೇಶಂ ಪಕ್ಷದ ಉದಯದ ಬಳಿಕ, ಕಾಂಗ್ರೆಸ್ ಪಕ್ಷಕ್ಕೆ ಆಂಧ್ರದ ನಿಷ್ಠೆಯು ಚಂಚಲಗ್ರಸ್ತವಾಯಿತು. ಆದರೆ 1989ರ ಲೋಕಸಭಾ ಚುನಾವಣೆಯಲ್ಲಿ 39 ಸ್ಥಾನಗಳನ್ನು ಗೆದ್ದ ಹಾಗೆ, ಪ್ರತಿ ಸಲವು ಒಂದು ಚುನಾವಣೆಯ ನಂತರ ನಡೆದ ಚುನಾವಣೆಗಳಲ್ಲಿ ಆ ರಾಜ್ಯವು ಕಾಂಗ್ರೆಸ್ ಪರವಾಗಿರುತ್ತಿತ್ತು. ರಾಜೀವ್ ಗಾಂಧಿ ಹತ್ಯೆಯಾದ ಬಳಿಕ 1991ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷದ ಸೀಟುಗಳಿಕೆಯಲ್ಲಿ ಕುಸಿತ ಕಂಡುಬರತೊಡಗಿತು. ಆಂಧ್ರದವರೇ ಆದ ಪಿ.ವಿ.ನರಸಿಂಹರಾವ್, ಪ್ರಧಾನಿ ಹುದ್ದೆಯನ್ನು ಅಲಂಕರಿಸಿದರೂ, ಕಾಂಗ್ರೆಸ್ ತನ್ನ ಹಿಂದಿನ ವರ್ಚಸ್ಸನ್ನು ಪಡೆಯುವಲ್ಲಿ ವಿಫಲವಾಯಿತು.
ಆದಾಗ್ಯೂ, ಬಾಬರಿ ಮಸೀದಿ ಧ್ವಂಸ ಘಟನೆಯ ಬಳಿಕ ಕಾಂಗ್ರೆಸ್‌ನ ಅದೃಷ್ಟವು ದಕ್ಷಿಣ ಭಾರತದಲ್ಲಿ ಮಂಕಾಗತೊಡಗಿತು.ಕಾಂಗ್ರೆಸನ್ನು ದೃಢವಾಗಿ ಬೆಂಬಲಿಸುತ್ತಾ ಬಂದಿದ್ದ ಕರ್ನಾಟಕದಲ್ಲಿ 1996ರ ಲೋಕಸಭಾ ಚುನಾವಣೆಯಲ್ಲಿ ಜನತಾದಳ 28 ಸ್ಥಾನಗಳ ಪೈಕಿ 16ನ್ನು ತನ್ನ ತೆಕ್ಕೆಗೆ ತೆಗೆದುಕೊಂಡರೆ, ಕೇವಲ 5 ಕ್ಷೇತ್ರಗಳಷ್ಟೇ ಕಾಂಗ್ರೆಸ್‌ನ ಪಾಲಾದವು. ಆದರೆ ಅದೇ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಧೂಳೀಪಟಗೊಂಡಿತು.
ತಮಿಳುನಾಡಿನ ಪ್ರಮುಖ ಕಾಂಗ್ರೆಸ್ ನಾಯಕರು ತಮಿಳು ಮಾನಿಲ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿ, ಚುನಾವಣೆಯಲ್ಲಿ 20 ಸ್ಥಾನಗಳನ್ನು ಗೆದ್ದರು. ಅತ್ಯಂತ ಸತ್ವಪರೀಕ್ಷೆಯ ಸಮಯದಲ್ಲೂ ತನಗೆ ಸರಾಸರಿ 20 ಸ್ಥಾನಗಳನ್ನು ನೀಡಿದ ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಸ್ಥಿರವಾದ ವೋಟುಗಳಿಕೆಯ ಪ್ರಮಾಣವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಯಿತು. ದ್ರಾವಿಡ ಪಕ್ಷಗಳ ಮೈತ್ರಿಕೂಟವನ್ನೇ ಕಾಂಗ್ರೆಸ್ ಪಕ್ಷವು ತನ್ನ ಅಸ್ತಿತ್ವಕ್ಕಾಗಿ ಅವಲಂಬಿಸಬೆೇಕಾಯಿತು. ಕುತೂಹಲಕರವೆಂದರೆ, 1995ರಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳದೆ ಎಲ್ಲಾ 35 ಕ್ಷೇತ್ರಗಳಿಗೆ ಏಕಾಂಗಿಯಾಗಿ ಸ್ಪರ್ಧಿಸಿತ್ತು. ಆದರೆ ಆ ಎಲ್ಲಾ ಕ್ಷೇತ್ರಗಳಲ್ಲಿ ಠೇವಣಿಯನ್ನು ಕಳೆದುಕೊಂಡಿತು.
ಕಾಂಗ್ರೆಸ್ ಪಕ್ಷವು ದಕ್ಷಿಣ ಭಾರತದ ಬೃಹತ್ ರಾಜ್ಯಗಳಲ್ಲಿ ಅಸ್ಮಿತೆಯ ಹಾಗೂ ಸೈದ್ಧಾಂತಿಕ ದೃಷ್ಟಿಯಿಂದ ಪ್ರತಿಕೂಲಕರವಾದ ವಾತಾವರಣವನ್ನು ಎದುರಿಸುತ್ತಿದೆ. ಈ ಗ್ರಹಿಕೆಯೊಂದಿಗೆ ಹೇಳುವುದಾದರೆ, ಕೇರಳದಲ್ಲಿ ರಾಹುಲ್ ಅವರ ಸ್ಪರ್ಧೆಯು ಒಂದು ದಿಟ್ಟತನದ ಕ್ರಮವೆಂದು ಹೇಳಬಹುದಾಗಿದೆ. ಅಂಕಿಅಂಶಗಳಿಗೆ ಅನುಸಾರವಾಗಿ ಹಾಗೂ ಭಾವಾನಾತ್ಮಕವಾಗಿಯೂ ಹೇಳುವುದಾದರೆ ವಯನಾಡ್ ಕ್ಷೇತ್ರವು ಕಾಂಗ್ರೆಸ್‌ಗೆ ಸುರಕ್ಷಿತ ಕಣವೆಂಬುದಕ್ಕೆ ಯಾವುದೇ ಖಾತರಿಯಿಲ್ಲ.
2009ರಲ್ಲಿ ವಯನಾಡ್ ಕ್ಷೇತ್ರ ರಚನೆಯಾದ ಬಳಿಕ ಸತತ ಎರಡನೇ ಬಾರಿಗೆ ಅಂದರೆ 2014ರಲ್ಲಿಯೂ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಶಾನವಾಝ್ ಅವರ ವಿಜಯದ ಅಂತರವು 1.50 ಲಕ್ಷಗಳಿಂದ 20,870 ಮತಗಳಿಗೆ ಇಳಿಯಿತು. ಅದರ ಮತಗಳಿಕೆಯ ಪ್ರಮಾಣವು ಶೇ.8.65ಕ್ಕೆ ಕುಸಿಯಿತು.ವಾಸ್ತವಿಕವಾಗಿ, ಶಬರಿಮಲೆ ವಿವಾದದ ಬಳಿಕವಂತೂ ಅನಿಶ್ಚಿತತೆಯ ವಾತಾವರಣವುಂಟಾಗಿದೆ. ಶಬರಿಮಲೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ತೀರ್ಪನ್ನು ವಿರೋಧಿಸಿರುವ ರಾಜ್ಯದ ಕಾಂಗ್ರೆಸ್ ಘಟಕವು, ಅಲ್ಲಿ ಯಥಾಸ್ಥಿತಿ ಮುಂದುವರಿಯಬೇಕೆಂದು ಆಗ್ರಹಿಸಿದೆ. ಅಷ್ಟೇ ಅಲ್ಲದೆ ಕೇರಳದಲ್ಲಿ ಎಡಪಕ್ಷಗಳು ಕಾಂಗ್ರೆಸ್ ಪಕ್ಷದ ಕಟ್ಟಾ ವಿರೋಧಿಗಳಾಗಿದ್ದಾರೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ದಕ್ಷಿಣದಲ್ಲಿ ಈಗ ಕಾಂಗ್ರೆಸ್‌ಗೆ ಯಾವುದೇ ಸುರಕ್ಷಿತ ವಾದ ಕ್ಷೇತ್ರವಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲಿ ಅದು ಪ್ರಬಲ ಹೋರಾಟ ನಡೆಸಿಯೇ ಗೆಲ್ಲಬೇಕಾದಂತಹ ಪರಿಸ್ಥಿತಿಯಿದೆ. ಸುಲಭ ಜಯಕ್ಕೆ ದಾರಿಯಾಗುವ ಯಾವುದೇ ಕ್ಷೇತ್ರವೂ ಇಲ್ಲೀಗ ಉಳಿದಿಲ್ಲ.
ಕೃಪೆ: thewire.in

Writer - ಸುಗತ ಶ್ರೀನಿವಾಸ ರಾಜು

contributor

Editor - ಸುಗತ ಶ್ರೀನಿವಾಸ ರಾಜು

contributor

Similar News

ಜಗದಗಲ
ಜಗ ದಗಲ