ಶಿವಮೊಗ್ಗ ಕ್ಷೇತ್ರದಲ್ಲಿ 'ಮತ ಬೇಟೆ' ಜೋರು: ಬಿಸಿಲ ಬೇಗೆಯ ನಡುವೆಯೂ ಬಿರುಸಿನ ಮತಯಾಚನೆ

Update: 2019-04-07 18:44 GMT

ಶಿವಮೊಗ್ಗ, ಏ. 5: ಮಾಜಿ ಸಿಎಂ ಪುತ್ರರಿಬ್ಬರ ಸ್ಪರ್ಧೆಯಿಂದ, 'ಹೈವೋಲ್ಟೇಜ್' ಕಣವಾಗಿ ಬಿಂಬಿತವಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಕಣ ರಂಗೇರಿದೆ. ದಿನದಿಂದ ದಿನಕ್ಕೆ ಪ್ರಚಾರದ ಅಬ್ಬರ ಕಾವೇರಲಾರಂಭಿಸಿದೆ. ರಾಜಕೀಯ ಸಂಬಂಧಿತ, ಸಭೆ-ಸಮಾವೇಶಗಳ ಭರಾಟೆ ಹೆಚ್ಚಾಗಿದೆ. 'ಮತ ಬೇಟೆ' ಜೋರಾಗಿದೆ. 

ಒಟ್ಟಾರೆ 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಎ.8 ನಾಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ. ಸದ್ಯ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹಾಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಪ್ರಚಾರ ಕಣದಲ್ಲಿ ಈ ಎರಡು ಪಕ್ಷಗಳು ಆರ್ಭಟಿಸುತ್ತಿವೆ. ಉಳಿದಂತೆ ಇತರೆ ಉಮೇದುವಾರರು ಇನ್ನಷ್ಟೆ ಪ್ರಚಾರಕ್ಕೆ ಚಾಲನೆ ನೀಡಬೇಕಾಗಿದೆ. 

ಕಳೆದ ಉಪ ಚುನಾವಣೆಯಲ್ಲಿ ಮುಖಾಮುಖಿಯಾಗಿದ್ದ ಬಿ.ವೈ.ರಾಘವೇಂದ್ರ ಹಾಗೂ ಮಧು ಬಂಗಾರಪ್ಪರವರು ಈ ಚುನಾವಣೆಯಲ್ಲಿಯೂ ಎದುರಾಳಿಗಳಾಗಿದ್ದಾರೆ. ಉಪ ಚುನಾವಣೆಯ ರೀತಿಯಲ್ಲಿ ಇಬ್ಬರು ಪ್ರಸ್ತುತ ಸಾರ್ವತ್ರಿಕ ಚುನಾವಣೆಯಲ್ಲಿಯೂ, ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಕ್ಷೇತ್ರ ಸುತ್ತು ಹಾಕುತ್ತಿದ್ದಾರೆ. 

ನಾಯಕರ ಪ್ರಚಾರ: ಬಿ.ವೈ.ಆರ್. ನಾಮಪತ್ರ ಸಲ್ಲಿಸುವ ವೇಳೆ ಬಿಜೆಪಿಯ ಹಲವು ಮುಖಂಡರು ಭಾಗವಹಿಸಿ ಪ್ರಚಾರ ನಡೆಸಿದ್ದರು. ಕಳೆದೆರೆಡು ದಿನಗಳಿಂದ ಅವರ ತಂದೆ ಬಿ.ಎಸ್.ಯಡಿಯೂರಪ್ಪ ಕ್ಷೇತ್ರದಲ್ಲಿ ಮತಯಾಚನೆ ನಡೆಸುತ್ತಿದ್ದಾರೆ. ಶಿಕಾರಿಪುರ, ಭದ್ರಾವತಿ ಮೊದಲಾದೆಡೆ ಕಾರ್ಯಕರ್ತರು-ಮತದಾರರ ಸಭೆಯಲ್ಲಿ ಭಾಗವಹಿಸಿದ್ದರು. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕೂಡ ಭಾನುವಾರದಿಂದ ಶಿವಮೊಗ್ಗ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಉಳಿದಂತೆ ಸ್ಥಳೀಯ ಬಿಜೆಪಿ ನಾಯಕರು ಪ್ರಚಾರ ಕಾರ್ಯದಲ್ಲಿ ತಲ್ಲೀನವಾಗಿದ್ದಾರೆ. 

ಮತ್ತೊಂದೆಡೆ ಮಧು ಪರವಾಗಿ ಮೈತ್ರಿಕೂಟದ ಪ್ರಮುಖ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಈಗಾಗಲೇ ಸಚಿವ ಡಿ.ಕೆ.ಶಿವಕುಮಾರ್ ಕ್ಷೇತ್ರದ ವಿವಿಧೆಡೆ ಪ್ರಚಾರ ನಡೆಸಿದ್ದಾರೆ. ಮಧು ನಾಮಪತ್ರ ಸಲ್ಲಿಸುವ ವೇಳೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭಾಗವಹಿಸಿದ್ದರು. ಉಳಿದಂತೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ ಸೇರಿದಂತೆ ಜೆಡಿಎಸ್, ಕಾಂಗ್ರೆಸ್ ಪಕ್ಷಗಳ ಸ್ಥಳೀಯ ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 

ಆಗಮಿಸಲಿದೆ ದಂಡು: ಮುಂದಿನ ದಿನಗಳಲ್ಲಿ, ಬಿಜೆಪಿ ಹಾಗೂ ಮೈತ್ರಿಕೂಟದ ನಾಯಕರ ದಂಡೇ ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆಯಿದೆ. ಪ್ರಸ್ತುತ ಎರಡೂ ಪಕ್ಷಗಳ ಸ್ಟಾರ್ ಪ್ರಚಾರಕರು ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಕೆಲ ದಿನಗಳಲ್ಲಿ ಈ ನಾಯಕರು ಶಿವಮೊಗ್ಗ ಕ್ಷೇತ್ರದಲ್ಲಿಯೂ ಪ್ರಚಾರ ಕಾರ್ಯಕ್ಕೆ ಆಗಮಿಸುವ ಸಾಧ್ಯತೆಯಿದೆ. 

ಬಿಸಿಲ ಹೊಡೆತ: ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ, ಪ್ರಸ್ತುತ ಬೇಸಿಗೆ ಅವದಿಯಲ್ಲಿ ಜಿಲ್ಲೆಯಲ್ಲಿ ದಾಖಲಾಗುತ್ತಿರುವ ತಾಪಮಾನದ ಪ್ರಮಾಣ ಅತ್ಯದಿಕವಾಗಿದೆ. ಉಷ್ಣಾಂಶದ ಪ್ರಮಾಣ  ಹೆಚ್ಚಿದೆ. ರಣ ಬಿಸಿಲ ಬೇಗೆಯು, ರಾಜಕೀಯ ನಾಯಕರಿಗೆ ದೊಡ್ಡ ಅಡೆತಡೆಯಾಗಿ ಪರಿಣಮಿಸಿದೆ. ಬಿರು ಬಿಸಿಲಿನ ನಡುವೆಯೂ ಅಭ್ಯರ್ಥಿಗಳು ಹಾಗೂ ನಾಯಕರು ಮತಯಾಚನೆ ನಡೆಸುತ್ತಿದ್ದಾರೆ. 

Writer - ವರದಿ: ಬಿ.ರೇಣುಕೇಶ್

contributor

Editor - ವರದಿ: ಬಿ.ರೇಣುಕೇಶ್

contributor

Similar News