ಭಾರತದ ಲೋಕಸಭೆ ಮತ್ತು ಮುಸ್ಲಿಮರ ಪ್ರತಿನಿಧಿತ್ವ

Update: 2019-04-10 18:32 GMT

ಭಾಗ-4

ಕ್ಷೇತ್ರ ಪುನರ್ ವಿಂಗಡನಾ ಆಯೋಗ 2001ರ ಜನಗಣತಿಯ ಆಧಾರದ ಮೇಲೆ 2002ರಲ್ಲಿ ಲೋಕಸಭಾ ಕ್ಷೇತ್ರಗಳನ್ನು ಪುನರ್‌ವಿಂಗಡಿಸಿದೆ. ಇಲ್ಲಿ ಜನಸಂಖ್ಯೆಯನ್ನು ಪ್ರಮುಖ ಮಾನದಂಡವನ್ನಾಗಿ ಪರಿಗಣಿಸಲಾಗಿದ್ದು ಜಿಲ್ಲಾ ವ್ಯಾಪ್ತಿಯನ್ನಲ್ಲ. ಕರ್ನಾಟಕದ 61 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ. 15-49ರ ವರೆಗೆ ಮುಸ್ಲಿಂ ಮತದಾರರು ಹರಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಕ್ಷೇತ್ರಗಳನ್ನು ಅವಲೋಕಿಸಿದಾಗ ಒಂದು ಒಟ್ಟಾರೆ ಚಿತ್ರಣ ಸಿಗಬಹುದು ಅದರ ವಿವರ ಹೀಗಿದೆ. (ಕೆಳಗಿನ ಕೋಷ್ಟಕ ನೋಡಿ)
ಈ ಲೋಕಸಭಾ ಕ್ಷೇತ್ರವಾರು ಮತ್ತು ಅವುಗಳ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರ ಗಳನ್ನು ಅವಲೋಕಿಸಿದರೆ ಹಲವಾರು ಲೋಕಸಭಾ ಕ್ಷೇತ್ರಗಳು ವಿವಿಧ ಜಿಲ್ಲೆಗಳ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಬೀದರ, ಕಲಬುರ್ಗಿ, ದಕ್ಷಿಣ ಕನ್ನಡ, ಧಾರವಾಡ, ಹಾವೇರಿ ಮತ್ತು ಕೋಲಾರ ಮುಂತಾದ ಒಟ್ಟು 17 ಲೋಕಸಭಾ ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದಲ್ಲಿ ಮುಸ್ಲಿಂ ಮತದಾರರಿದ್ದಾರೆ. ಈ ಕ್ಷೇತ್ರಗಳಲ್ಲಿ ನಗರಪ್ರದೇಶಗಳು ಹೆಚ್ಚಿದ್ದು ಸಾಮಾನ್ಯವಾಗಿ ಮುಸ್ಲಿಮರು ನಗರಗಳಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಈ ಲೋಕಸಭಾ ಕ್ಷೇತ್ರಗಳ ಫಲಿತಾಂಶದ ಮೇಲೆ ಪ್ರಭಾವ ಬೀರಲು ಸಾಧ್ಯತೆ ಹೆಚ್ಚಿದೆ. ಮೇಲಿನ ಅಂಕಿ ಅಂಶಗಳ ಪ್ರಕಾರ ಈ 17 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ 1-6 ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರ ಅಂದಾಜನ್ನು ಮಾಡಲಾಗಿದ್ದು, ಇದರ ಪ್ರಕಾರ ಬೆಂಗಳೂರು ನಗರ ಜಿಲ್ಲೆಯ 3 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ 4-5 ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರು ಗಣನೀಯ ಪ್ರಮಾಣದಲ್ಲಿದ್ದಾರೆ. ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರು ಚುನಾವಣೆಯ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಇನ್ನುಳಿದ 13 ಕ್ಷೇತ್ರಗಳಲ್ಲಿ 1-4 ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರ ಪ್ರಮಾಣ ಹೆಚ್ಚಿದ್ದು ಅಭ್ಯರ್ಥಿಗಳ ಸೋಲು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಮರು ಗಣನೀಯವಾಗಿರುವ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಪ್ರಮುಖ ಸಮಸ್ಯೆಯೆಂದರೆ, ಕರ್ನಾಟಕದಲ್ಲಿ ಸುಮಾರು 15 ಲಕ್ಷ ಮುಸ್ಲಿಮರು ಮತಚಲಾಯಿಸಲು ಗುರುತಿನ ಚೀಟಿಯ ಸಮಸ್ಯೆ ಇದೆ ಮತ್ತು ನಮ್ಮ ದೇಶದಲ್ಲಿ ಒಟ್ಟಾರೆ ಸುಮಾರು ಮೂರುಕೋಟಿ ಮುಸ್ಲಿಂ ಮತದಾರರು ಗುರುತಿನ ಚೀಟಿಯ ತೊಂದರೆಗೆ ಒಳಗಾಗಿದ್ದಾರೆ.