ಗೋಧ್ರಾದಿಂದ ಪುಲ್ವಾಮದವರೆಗಿನ ಮೋದಿ ಪ್ರಯಾಣದಲ್ಲಿ ಸಾಮ್ಯತೆಗಳು

Update: 2019-04-10 18:32 GMT

ಭಾಗ-1

ಎರಡು ಸ್ವತಂತ್ರ ಮೂಲಗಳಿಂದ ಒಂದೇ ರೀತಿಯ ಮಾಹಿತಿ ಬಂದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಬೇಕೆಂಬುದು ಗುಪ್ತಚರ ವ್ಯವಸ್ಥೆಯ ಬಹಳ ಮುಖ್ಯವಾದ ನಿಯಮ. ಏನೋ ಅಪಾಯ, ಅನಾಹುತ ಸಂಭವಿಸಲಿದೆಯೆಂದು ಸಿಆರ್‌ಪಿಎಫ್‌ಗೆ ತಿಳಿದಿತ್ತು ಮತ್ತು ಅದು ತನ್ನ ಯೋಧರನ್ನು ವಿಮಾನದಲ್ಲಿ ಸಾಗಿಸುವಂತೆ ವಿನಂತಿಸಿಕೊಂಡಿತ್ತು ಕೂಡ. ಆದರೆ, ಆಶ್ಚರ್ಯಕರವಾಗಿ ಗೃಹಸಚಿವಾಲಯವು ಆ ವಿನಂತಿಯನ್ನು ತಳ್ಳಿಹಾಕಿತು. ಪ್ರಧಾನಿಯವರ ಸಚಿವಾಲಯಕ್ಕೆ ತಿಳಿಯದೆ ಅದು ಹಾಗೆ ವಿನಂತಿಯನ್ನು ತಳ್ಳಿ ಹಾಕಿರಲು ಸಾಧ್ಯವಿಲ್ಲದ ಕಾರಣ, ಅದು ಕಣ್‌ತಪ್ಪಿನಿಂದಾದ ಅಚಾತುರ್ಯವೇ? ಅಥವಾ ಉದ್ದೇಶಪೂರ್ವಕವೇ?

ಶತ್ರುಗಳ ಉಪಗ್ರಹಗಳನ್ನು ಹೊಡೆದುರುಳಿಸುವ ಭಾರತದ ಕ್ಷಿಪಣಿ ಸಾಮರ್ಥ್ಯದ ಕುರಿತಾದ ಮೋದಿಯವರ ಪ್ರಕಟನೆ ಚುನಾವಣಾ ನೀತಿಯನ್ನು ಉಲ್ಲಂಘಿಸುತ್ತದೆಯೋ ಇಲ್ಲವೋ ಎಂಬುದು ಮುಖ್ಯ ವಿಷಯವಲ್ಲ. ಈ ಕುರಿತು ನಡೆಯುತ್ತಿರುವ ಚರ್ಚೆಯು ಅವರು ಪ್ರಧಾನಿಯಾದಾಗ ಪ್ರತಿಜ್ಞಾವಿಧಿ ಸ್ವೀಕರಿಸುವ ವೇಳೆ ಮಾಡಿದ ಪ್ರತಿಜ್ಞೆಯ ಉಲ್ಲಂಘನೆ ಇದಕ್ಕಿಂತ ಬಹಳ ಹೆಚ್ಚು ಗಂಭೀರವಾದ ಒಂದು ಉಲ್ಲಂಘನೆ ಎಂಬುದನ್ನು ಮರೆಮಾಚಲು ನೆರವಾಗುತ್ತಿದೆ.
ಆ ಪ್ರತಿಜ್ಞೆಯ ಎರಡನೆಯ ಭಾಗ ಹೀಗೆ ಹೇಳುತ್ತದೆ:
‘‘..ಸಂವಿಧಾನ ಮತ್ತು ಕಾನೂನಿಗೆ ಅನುಗುಣವಾಗಿ, ಯಾವುದೇ ಭಯ ಅಥವಾ ಪಕ್ಷಪಾತವಿಲ್ಲದೆ... ನಾನು ಎಲ್ಲ ರೀತಿಯ ಜನರಿಗೆ ಸರಿಯಾದುದನ್ನೇ ಮಾಡುತ್ತೇನೆ.’’
ಫೆಬ್ರವರಿ 14ರಂದು ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 40ಕ್ಕೂ ಹೆಚ್ಚು ಮಂದಿ ಯೋಧರು ಭಯೋತ್ಪಾದಕ ದಾಳಿಯೊಂದರಲ್ಲಿ ಮಡಿದಾಗ ಮೋದಿಯವರು ಈ ಪ್ರತಿಜ್ಞೆಯನ್ನು ಉಲ್ಲಂಘಿಸಿದರು. ಓರ್ವ ಚತುರ ರಾಜಕಾರಣಿಯಾಗಿ, ಮುಂದಿನ ಚುನಾವಣೆಗಳಲ್ಲಿ, ಒಂದು ಬಹಳ ದೊಡ್ಡ ಘಟನೆ ಬಿಜೆಪಿಗೆ ಮತ ದೊರಕಿಸುವ ಸಾರ್ವಜನಿಕ ಆಕ್ರೋಶವನ್ನು ಹುಟ್ಟು ಹಾಕುತ್ತದೆಂದು ಅವರಿಗೆ ತಿಳಿದಿತ್ತು. ಅಂದಿನ ಲಾಗಾಯಿತು ಅವರು ಕಾಶ್ಮೀರ ಮತ್ತು ಪಾಕಿಸ್ತಾನದ ಬಗ್ಗೆ ಹೇಳಿದ ಮತ್ತು ಮಾಡಿದ ಎಲ್ಲವೂ ಕೇವಲ ನಾಟಕ; ನಾಟಕೀಯ.
ಸಿಆರ್‌ಪಿಎಫ್ ಯೋಧರಿಗೆ ಇದ್ದ ಬೆದರಿಕೆಯ ಬಗ್ಗೆ ಅವರು ತೋರಿದ ಉದಾಸೀನ, ಅಸಡ್ಡೆ ಕಳೆದ ಐದು ವರ್ಷಗಳಲ್ಲಿ ಅವರ ಸರಕಾರದ ಪ್ರತಿಯೊಂದು ವಿಭಾಗದ, ಇಲಾಖೆಯ ಸೋಲನ್ನು ಸೂಚಿಸುತ್ತದೆ. ಅರ್ಥವ್ಯವಸ್ಥೆ, ಕಾನೂನು ಮತ್ತು ವ್ಯವಸ್ಥೆ, ಕೋಮುಸಾಮರಸ್ಯ, ಅಂತರ್‌ರಾಷ್ಟ್ರೀಯ ಹಾಗೂ ಅಂತರ್-ರಾಜ್ಯಸಂಬಂಧಗಳು ಎಲ್ಲದರಲ್ಲೂ ಅವರ ಸರಕಾರದ ವೈಫಲ್ಯದ ಸೂಚಕ ಪುಲ್ವಾಮ ದಾಳಿ.
ಇದು ಬೇರೆಲ್ಲಕಿಂತ ಹೆಚ್ಚಾಗಿ ಅರ್ಥವ್ಯವಸ್ಥೆಯಲ್ಲಿ ಎದ್ದು ತೋರುತ್ತದೆ. ಅವರು ಚುನಾವಣೆಗೆ ಮೊದಲು ನೀಡಿದ್ದ ಆಶ್ವಾಸನೆಯಂತೆ, ವರ್ಷವೊಂದರ ಮಿಲಿಯಗಟ್ಟಲೆ ಉದ್ಯೋಗಗಳನ್ನು ಸೃಷ್ಟಿಸುವ ಬದಲು ಅವರು ನಿರುದ್ಯೋಗಿಗಳ ಸಂಖ್ಯೆಯ ಏರಿಕೆಗೆ ಕಾರಣರಾದರು, ಇತ್ತೀಚಿನ ನ್ಯಾಶನಲ್ ಸ್ಯಾಂಪಲ್ ಸರ್ವೇ ವರದಿಯ ಪ್ರಕಾರ, ಐದು ವರ್ಷಗಳ ಹಿಂದೆ ಔದ್ಯಮಿಕ ರಂಗದಲ್ಲಿ ಇದ್ದ ಉದ್ಯೋಗಗಳಿಗಿಂತ ಈಗ 11 ಮಿಲಿಯ ಕಡಿಮೆ ಉದ್ಯೋಗಿಗಳಿದ್ದಾರೆ. ಇದಕ್ಕಿಂತ ಹೆಚ್ಚು ಆಘಾತಕಾರಿ ವಿಷಯವೆಂದರೆ, ಗ್ರಾಮೀಣ ಪ್ರದೇಶಗಳಲ್ಲಿ 40 ಮಿಲಿಯ ಕಾರ್ಮಿಕರಿಗೆ ಈಗ ಯಾವುದೇ ಉದ್ಯೋಗವಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ 15 ಮತ್ತು 19 ವರ್ಷ ನಡುವಿನ ಯುವ ಜನತೆಯ ಪ್ರತಿ ಆರು ಮಂದಿಯಲ್ಲಿ ಒಬ್ಬನಿಗೆ ಯಾವುದೇ ನೌಕರಿ ಇಲ್ಲ. ಐದು ವರ್ಷಗಳ ಹಿಂದೆ ಪ್ರತಿ 20 ಮಂದಿಯಲ್ಲಿ ಒಬ್ಬನಿಗೆ ನೌಕರಿ ಇರಲಿಲ್ಲ. ಪಟ್ಟಣಗಳಲ್ಲಿ ಹಾಗೂ ನಗರಗಳಲ್ಲಿ ಪ್ರತಿ ಐದು ಮಂದಿಯಲ್ಲಿ ಒಬ್ಬ ನಿರುದ್ಯೋಗಿ, ಐದು ವರ್ಷಗಳ ಹಿಂದೆ ಪ್ರತಿ ಎಂಟು ಮಂದಿಯಲ್ಲಿ ಒಬ್ಬ ನಿರುದ್ಯೋಗಿಯಾಗಿದ್ದ. ಮಹಿಳೆಯರಲ್ಲಿ ನಿರುದ್ಯೋಗ ಇಷ್ಟೇ ಆಘಾತಕಾರಿಯಾಗಿದೆ.
ಇದರ ರಾಜಕೀಯ ಪರಿಣಾಮಗಳನ್ನು ಮೋದಿ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಯಾಕೆಂದರೆ 2014ರಲ್ಲಿ ಅವರು ನೀಡಿದ ಆಶ್ವಾಸನೆಗಳನ್ನು ನಂಬಿ ಅವರಿಗೆ ಮತನೀಡಿ ಅವರನ್ನು ಅಧಿಕಾರಕ್ಕೆ ತಂದದ್ದು ಇದೇ ವಯೋಮಾನದವರು. ಸದ್ಯದಲ್ಲೇ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ಒಗ್ಗಟ್ಟಿನಿಂದಾಗಿ ಬಿಜೆಪಿಗೆ ಬಹುಮತ ಸಿಗುವುದಿಲ್ಲವೆಂದು ಅವರಿಗೆ ತಿಳಿದಿದೆ. ಪ್ರಧಾನಿಯಾಗಿ ಅವರ ದಿನಗಳು ಅಂತ್ಯಗೊಳ್ಳ್ಳುತ್ತಿವೆ. ಆದ್ದರಿಂದ ಚುನಾವಣೆಗಳಲ್ಲಿ ಗೆಲ್ಲುವುದಕ್ಕಾಗಿ ಅವರು ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ಹೀಗಾಗಿ ಅವರು ಸಂಘಪರಿವಾರದ ಅಂತಿಮ ಅಸ್ತ್ರಕ್ಕೆ ಮೊರೆ ಹೋಗಿದ್ದಾರೆ; ಹಿಂದೂಗಳಲ್ಲಿ ಭಯಹುಟ್ಟಿಸುವುದು ಮತ್ತು ಯುದ್ಧದ ನಗಾರಿ ಬಾರಿಸುವುದೇ ಆ ಅಸ್ತ್ರ; ಆ ಅಂತಿಮ ತಂತ್ರ. ಆದ್ದರಿಂದ ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರನ್ನು ಸಾಗಿಸುತ್ತಿದ್ದ ವಾಹನಗಳ ಮೇಲೆ ನಡೆದ ಭಯೋತ್ಪಾದಕ ದಾಳಿ ಅವರ ಪಾಲಿಗೆ ಒಂದು ವರದಾನವಾಗಿ ಬಂತು. ಆದರೆ ಮುಂದಿನ ದಿನಗಳಲ್ಲಿ ಪ್ರತಿಯೊಂದು ವೇದಿಕೆಯಿಂದ ಅವರು ಕಾರಿದ ಕ್ರೋಧದ ಬೆಂಕಿ ಸಾಚಾವೇ ಅಥವಾ ಕೃತಕವೇ? ನಾಟಕವೇ? ಭಯೋತ್ಪಾದಕ ದಾಳಿ ಅವರಿಗೆ ಅನಿರೀಕ್ಷಿತವೇ? ಅಥವಾ ಎಚ್ಚರಿಕೆಗಳಿಗೆ ಗಮನ ಕೊಡದೆ ಅವರು ಆ ದಾಳಿ ನಡೆಯಲು ಬಿಟ್ಟರೇ? ದಾಳಿ ನಡೆದ ಕೆಲವೇ ಗಂಟೆಗಳೊಳಗಾಗಿ ಈ ಅನುಮಾನ ಮೂಡಿತ್ತು. ಯಾಕೆಂದರೆ ಕಾಶ್ಮೀರದಲ್ಲಿ ಒಂದು ಭಾರೀ ಭಯೋತ್ಪಾದಕ ದಾಳಿ ನಡೆಯಲಿದೆ ಎಂದು ಗುಪ್ತಚರ ಸಂಸ್ಥೆ ಕೇಂದ್ರ ಗೃಹ ಸಚಿವಾಲಯಕ್ಕೆ ದಾಳಿ ನಡೆಯುವ ಹಿಂದಿನ ದಿನಗಳಲ್ಲೇ ಎಚ್ಚರಿಕೆ ನೀಡಿತ್ತೆಂಬುದು ಮಾಧ್ಯಮಗಳಿಗೆ ತಿಳಿದು ಬಂದಿತ್ತು. ಅಲ್ಲದೆ ಕಾಶ್ಮೀರದ ಪೊಲೀಸರಿಂದ ಕೂಡ ಒಂದು ಪ್ರತ್ಯೇಕ ಎಚ್ಚರಿಕೆ ಬಂದಿತ್ತು.
ಎರಡು ಸ್ವತಂತ್ರ ಮೂಲಗಳಿಂದ ಒಂದೇ ರೀತಿಯ ಮಾಹಿತಿ ಬಂದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಬೇಕೆಂಬುದು ಗುಪ್ತಚರ ವ್ಯವಸ್ಥೆಯ ಬಹಳ ಮುಖ್ಯವಾದ ನಿಯಮ. ಏನೋ ಅಪಾಯ, ಅನಾಹುತ ಸಂಭವಿಸಲಿದೆಯೆಂದು ಸಿಆರ್‌ಪಿಎಫ್‌ಗೆ ತಿಳಿದಿತ್ತು ಮತ್ತು ಅದು ತನ್ನ ಯೋಧರನ್ನು ವಿಮಾನದಲ್ಲಿ ಸಾಗಿಸುವಂತೆ ವಿನಂತಿಸಿಕೊಂಡಿ ತ್ತು ಕೂಡ. ಆದರೆ, ಆಶ್ಚರ್ಯಕರವಾಗಿ ಗೃಹಸಚಿವಾಲಯವು ಆ ವಿನಂತಿಯನ್ನು ತಳ್ಳಿಹಾಕಿತು. ಪ್ರಧಾನಿಯವರ ಸಚಿವಾಲಯಕ್ಕೆ ತಿಳಿಯದೆ ಅದು ಹಾಗೆ ವಿನಂತಿಯನ್ನು ತಳ್ಳಿ ಹಾಕಿರಲು ಸಾಧ್ಯವಿಲ್ಲದ ಕಾರಣ, ಅದು ಕಣ್‌ತಪ್ಪಿನಿಂದಾದ ಅಚಾತುರ್ಯವೆ? ಅಥವಾ ಉದ್ದೇಶಪೂರ್ವಕವೇ ?
ರಾಹುಲ್ ಗಾಂಧಿ ಈ ಪ್ರಶ್ನೆ ಕೇಳಲು ಹಿಂದೆಮುಂದೆ ನೋಡಿದರು. ಆದರೆ ಮಮತಾ ಬ್ಯಾನರ್ಜಿ ನೇರವಾಗಿ ಕೇಳಿಯೇ ಬಿಟ್ಟರು: ‘‘ಪುಲ್ವಾಮ ದಾಳಿ ನಡೆದಾಗ ನೀವೆಲ್ಲಿದ್ದಿರಿ? ಒಂದು ದಾಳಿ ನಡೆಯಬಹುದೆಂಬುದು ನಿಮಗೆ ಗೊತ್ತಿತ್ತು. ನಿಮ್ಮ ಸರಕಾರಕ್ಕೆ ಅದಾಗಲೇ ದಾಳಿಯ ಬಗ್ಗೆ ಗುಪ್ತಚರ ಇಲಾಖೆಯ ಮಾಹಿತಿ ಲಭಿಸಿತ್ತು. ಆದರೂ ಯೋಧರನ್ನು ಯಾಕೆ ವಿಮಾನಗಳಲ್ಲಿ ಕೊಂಡೊಯ್ಯಲಿಲ್ಲ? ನೀವ್ಯಾಕೆ ಅವರನ್ನು ಸಾವಿನ ಅಂಚಿಗೆ ತಳ್ಳಿದಿರಿ? ಬರಲಿರುವ ಚುನಾವಣೆಗಳ ಮೊದಲು ನೀವು ರಾಜಕೀಯ ಆಟ ಆಡಬಹುದೆಂದೇ? ನಮ್ಮ ಜವಾನರ ನೆತ್ತರು ಬಳಸಿ ರಾಜಕಾರಣ ಮಾಡುವಂತಿಲ್ಲ.’’
ಯೋಧರು ಸಾಗುವ ಮಾರ್ಗದಲ್ಲಿ ಸರಿಯಾದ ನಾಕಾ ಪರೀಕ್ಷೆಗಳನ್ನು ತಪಾಸಣೆಗಳನ್ನು ಮಾಡಿರಲಿಲ್ಲ; ರಸ್ತೆಗಳ ಉದ್ದಕ್ಕೂ ಸೂಕ್ತ ತಪಾಸಣೆ ನಡೆಸಿ ಅವುಗಳನ್ನು ಸುರಕ್ಷಿತಗೊಳಿಸಲಾಗಿರಲಿಲ್ಲ ಎಂದೂ ಮಮತಾ ಬ್ಯಾನರ್ಜಿ ನೇರವಾಗಿಯೇ ಹೇಳಿದರು.


ಪಾಕಿಸ್ತಾನದಿಂದ ಬಂದ ಗುಪ್ತಚರ ಮಾಹಿತಿ
ಮೋದಿಯವರ ಮೇಲೆ ವಿಪಕ್ಷಗಳು ನಡೆಸಿದ ಈ ವಾಗ್ದಾಳಿಯನ್ನು ತಳ್ಳಿಹಾಕಲು ಅವರಿಗೆ ಯಾಕೆ ಸಾಧ್ಯವಾಯಿತು ಮತ್ತು ಅವರ ಟೀಕಾಕಾರರನ್ನು ‘‘ರಾಷ್ಟ್ರ-ವಿರೋಧಿಗಳು’’ ಎಂದು ಆ ಟೀಕಾಕಾರರ ಮೇಲೆ ಆಪಾದನೆ ಹೊರಿಸುವುದು ಅವರಿಗೆ ಯಾಕೆ ಸಾಧ್ಯವಾ ಯಿತು? ಈ ಪ್ರಶ್ನೆಗೆ ಉತ್ತರ ಸರಳ: ಪುಲ್ವಾಮ ದಾಳಿಗೆ ಕಾರಣವಾದ ಸರಕಾರದ ತಪ್ಪುಗಳನ್ನು ಬೇಜವಾಬ್ಧಾರಿತವನ್ನು ಅರ್ಥ ಮಾಡಿಕೊಳ್ಳಲು ಮಾಧ್ಯಮಗಳ ಯಾರಿಗೂ ಆಸಕ್ತಿಯಿಲ್ಲ. ಕಳೆದ ಒಂದು ಲೇಖನದಲ್ಲಿ ನಾನು ಮೋದಿಯವರಿಗೆ ಅನುಮಾನದ ಲಾಭವನ್ನು (ಬೆನಿಫಿಟ್ ಆಫ್ ಡೌಟ್) ನೀಡಿದ್ದೆ. ಆದರೆ ಆ ಲೇಖನ ಬರೆದ ಬಳಿಕ, ಸದ್ಯದಲ್ಲಿ ಒಂದು ಭಯೋತ್ಪಾದಕ ದಾಳಿ ನಡೆಯಲಿದೆ ಎಂದು ಪಾಕಿಸ್ತಾನದಿಂದ ಭಾರತದ ಗುಪ್ತಚರ ಸಂಸ್ಥೆಗೆ ಬಂದಿದ್ದ ಮಾಹಿತಿಯನ್ನು ಮೋದಿ ಉಪೇಕ್ಷಿಸಿದರು ಮತ್ತು ಹೀಗಾಗಿ ಪುಲ್ವಾಮ ದಾಳಿಯನ್ನು ತಡೆಯಲು ವಿಫಲರಾದರು ಎಂಬುದನ್ನು ದೃಢೀಕರಿಸುವ ಇನ್ನಷ್ಟು ಮಾಹಿತಿ ನನಗೆ ಲಭಿಸಿದೆ. ಫೆಬ್ರವರಿ 7ರ ಸುಮಾರಿಗೇ ಪಾಕಿಸ್ತಾನ ಸರಕಾರಕ್ಕೆ ಸದ್ಯದಲ್ಲೇ ಒಂದು ಆತ್ಮಹತ್ಯಾ ದಾಳಿ ನಡೆಯಲಿದೆ ಎಂಬ ಮಾಹಿತಿ ದೊರಕಿತ್ತು ಮತ್ತು ಇದಕ್ಕೆ ಭಾರತದಿಂದ ಪ್ರತೀಕಾರ ದಾಳಿ ನಡೆಯಬಹುದೆಂಬ ಭೀತಿಯಿಂದ ಅದು ತನ್ನ ಸೇನೆಯನ್ನು ಯುದ್ಧ ತಾಣಗಳಿಗೆ ರವಾನಿಸಲು ಆರಂಭಿಸಿತ್ತು ಎಂದು ನನಗೆ ನಂಬಲರ್ಹ ಮೂಲಗಳು ತಿಳಿಸಿವೆ.
ಅಂತಹ ಒಂದು ಬೃಹತ್ ಮಿಲಿಟರಿ ಬೆಳವಣಿಗೆಯನ್ನು ರಹಸ್ಯವಾಗಿ ಇಡಲು ಸಾಧ್ಯವಿಲ್ಲ. ಯಾಕೆಂದರೆ ಸೇನೆಯನ್ನು ಕಳುಹಿಸುವುದಷ್ಟೇ ಅಲ್ಲದೆ ವಾಯುಪಡೆ, ಯಾಂತ್ರೀಕೃತ ಪದ್ಧತಿ ಇತ್ಯಾದಿಗಳನ್ನು ಸಜ್ಜುಗೊಳಿಸುವುದು ಆ ಬೆಳವಣೆಗೆಯಲ್ಲಿ ಸೇರಿರುತ್ತದೆ. 36 ವರ್ಷಗಳ ಹಿಂದೆ ಪಾಕಿಸ್ತಾನ ಅಂತಹದೇ ಒಂದು ಸೇನೆ ನಿಯೋಜನೆ ಮಾಡಿದಾಗ (ಆಪರೇಶನ್ ಬ್ರಾಸ್ ಟಾಕ್ಸ್), ಭಾರತಕ್ಕೆ ಆ ಸೇನಾ ನಿಯೋಜನೆ ಆರಂಭವಾದ ಕೆಲವೇ ದಿನಗಳಲ್ಲಿ ಅದರ ಮಾಹಿತಿ ಸಿಕ್ಕಿತ್ತು. ಈಗ ಭಾರತದ ಬಳಿ ಇರುವ ಅತ್ಯಾಧುನಿಕ ಬೇಹುಗಾರಿಕೆ ಸಾಮರ್ಥ್ಯಗಳಿಂದಾಗಿ ಗಡಿಯಾಚೆ ಏನು ನಡೆಯುತ್ತಿದೆ ಎಂಬುದು ಅದಕ್ಕೆ ಕೆಲವೇ ಗಂಟೆಗೊಳಗಾಗಿ ತಿಳಿದಿರಬೇಕು.
ಯುದ್ಧ ತಾಣಗಳಲ್ಲಿ ಸೇನಾಪಡೆಗಳನ್ನು ಅನಿಶ್ಚಿತ ಅವಧಿಯವರೆಗೆ ನಿಯೋಜಿಸಿ ಇಟ್ಟಿರುವುದು ಸಾಧ್ಯವಲ್ಲವಾದ್ದರಿಂದ, ಗಡಿಯಾಚೆಗಿನ ಪಾಕಿಸ್ತಾನಿ ಸೇನಾ ನಿಯೋಜನೆ ಸದ್ಯದಲ್ಲೇ ಒಂದು ದಾಳಿ ನಡೆಯಲಿದೆ ಎಂಬುದರ ಸ್ಪಷ್ಟ ಸೂಚನೆಯಾಗಿತ್ತು. ಈ ಎಲ್ಲ ಅಂಶಗಳನ್ನು ಗಮನಿಸುವಾಗ ಮತ್ತು ಮಾಹಿತಿ ಸಂಸ್ಥೆ ಹಾಗೂ ಪೊಲೀಸರಿಂದ ನಿರ್ದಿಷ್ಟ ಗುಪ್ತಚರ ಎಚ್ಚರಿಕೆಗಳು ಬಂದಿರುವಾಗ, ಯೋಧರನ್ನು ವಿಮಾನಗಳಲ್ಲಿ ಸಾಗಿಸಬೇಕೆಂದು ಸಿಆರ್‌ಪಿಎಫ್ ಮಂಡಿಸಿದ ಬೇಡಿಕೆಯನ್ನು ಕೇಂದ್ರ ಗೃಹಸಚಿವಾಲಯ ತಳ್ಳಿಹಾಕಿದ್ದು, ಖಂಡಿತವಾಗಿಯೂ ಬೇಜವಾಬ್ದಾರಿಯ ಪರಮಾವಧಿ ಅನ್ನಿಸುತ್ತದೆ.
ಪುಲ್ವಾಮ ದಾಳಿ ನಡೆಯುವುದರವರೆಗಿನ ಈ ಎಲ್ಲ ವಿವರಗಳು, ವರದಿಗಳು ನಿಜವಾದಲ್ಲಿ ಆಗ ಮೋದಿಯವರ ಪ್ರತಿಕ್ರಿಯೆಯಲ್ಲಿ ವಿಪಕ್ಷಗಳು ಕಂಡ ಹಲವಾರು ವೈದೃಶ್ಯಗಳು, ವಿಚಿತ್ರ ಪ್ರಕ್ರಿಯೆಗಳು ಸ್ಪಷ್ಟವಾಗಬಲ್ಲವು.
ಈ ವೈಚಿತ್ರಗಳಲ್ಲಿ ಮೊದಲನೆಯದು, ದಾಳಿ ನಡೆದ ಸುದ್ದಿ ತಿಳಿದ ಬಳಿಕ ಹಲವು ಗಂಟೆಗಳವರೆಗೆ ಅವರು ಕಾರ್ಬೆಟ್ ಪಾರ್ಕ್ ನಲ್ಲಿ ಫೋಟೊ-ಶೂಟ್ ಮುಂದುವರಿಸಲು ನಿರ್ಧರಿಸಿದ್ದು, ಒಂದು ದೊಡ್ಡ ದಾಳಿ ನಡೆಯಲಿದೆಯೆಂದು ಮೋದಿಯವರಿಗೆ ಗೊತ್ತಿತ್ತು ಮತ್ತು ಅವರು ಅದಕ್ಕಾಗಿ ಕಾಯುತ್ತಿದ್ದರು. ಆದ್ದರಿಂದ ಅವರಿಗೆ ಆಘಾತಗೊಳ್ಳಲು ಮರೆತುಹೋಯಿತು ಮತ್ತು ಅವರು ಮಾಮೂಲಿನ ಹಾಗೆಯೇ ತನ್ನ ಕೆಲಸದಲ್ಲಿ (ಫೋಟೊ-ಶೂಟ್‌ನಲ್ಲಿ) ಮಗ್ನರಾಗಿದ್ದರು.
40 ಯೋಧರ ಸಾವಿನ ಸುದ್ಧಿ ತಿಳಿದಾಗ ಒಂದು ದಿನದ ರಾಷ್ಟ್ರೀಯ ಶೋಕಾಚರಣೆ ಘೋಷಿಸಲು ಅವರು ವಿಫಲರಾದದ್ದು ಪುಲ್ವಾಮ ದಾಳಿಯನ್ನು ರಾಜಕೀಯವಾಗಿ ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳುವ ಅವರ ಸಿನಿಕಲ್ ಬಯಕೆಯನ್ನು ಸೂಚಿಸುತ್ತದೆ. ಅಲ್ಲದೆ ಯೋಧರ ಸಾವಿನಿಂದಾಗಿ ದೇಶದಾದ್ಯಂತ ವ್ಯಕ್ತವಾಗುವ ಪರಿಣಾಮವನ್ನು (ಬ್ಯಾಕ್ ಲ್ಯಾಶ್) ಕನಿಷ್ಠಗೊಳಿಸುವಂತಹ ಯಾವುದೇ ಒಂದು ಮಾತನ್ನು ಅವರು ಆಡದೇ ಇದ್ದದ್ದು ಹಾಗೂ ಏನೊಂದನ್ನೂ ಮಾಡದೆ ಇದ್ದದ್ದು ಕೂಡ ಅವರ ಈ ಬಯಕೆಯನ್ನೇ ವಿವರಿಸುತ್ತದೆ. ಇದೇನನ್ನೂ ಮಾಡುವುದಕ್ಕೆ ಬದಲಾಗಿ ಅವರು ತನ್ನ ಮಾಮೂಲಿ ವೌನವನ್ನು ಬಳಸಿಕೊಂಡರು ಹಾಗೂ ಪಾಕಿಸ್ತಾನ, ಕಾಶ್ಮೀರಿ ಭಯೋತ್ಪಾದಕರ ವಿರುದ್ಧ ಹಾಗೂ ಕೊನೆಗೆ ಮುಸ್ಲಿಮರ ವಿರುದ್ಧ ರೇಗಾಡಿದರು. ಜಮ್ಮು, ಹರ್ಯಾಣ, ದಿಲ್ಲಿ, ಪೂನಾದಂತಹ ದೂರ ದೂರದ ಸ್ಥಳಗಳಲ್ಲಿ ಕೂಡ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಕೇಸರಿ ಗೂಂಡಾಗಳು ದಾಳಿ ನಡೆಸಿ ಅವರಿಗೆ ಬೆದರಿಕೆ ಒಡ್ಡಿದಾಗಲೂ ಮೋದಿ ವೌನತಾಳಿದರು.
ಗೋಧ್ರಾದ ಪುನರಾವರ್ತನೆ
ಲೆಕ್ಕಾಚಾರಗಳು ಏನೇ ಇರಲಿ, ಪುಲ್ವಾಮ ದಾಳಿಯ ಬಳಿಕ ಮತ್ತು 2002ರ ಫೆಬ್ರವರಿ 27ರಂದು ಗೋಧ್ರಾದಲ್ಲಿ ಸಬರ್ಮತಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯನ್ನು ಸುಟ್ಟಬಳಿಕದ ಮೋದಿಯವರ ವರ್ತನೆ, ನಡವಳಿಕೆಯ ನಡುವೆ ಭಾರೀ ಸಾಮ್ಯತೆ ಇದೆ. ಗೋಧ್ರಾ ಘಟನೆಯ ಮೊದಲು ಕೂಡ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ‘‘ಏನೋ ಬಹಳ ದೊಡ್ಡದನ್ನು’’ ಮಾಡಲು ಯೋಜನೆ ರೂಪಿಸುತ್ತಿವೆ, ಯಾಕೆಂದರೆ ಅವುಗಳು ಕಠಾರಿ, ಲಾಠಿ ಮತ್ತು ತ್ರಿಶೂಲಗಳನ್ನು ಹಿಡಿದುಕೊಂಡು ಮೆರವಣಿಗೆ ಹೋಗುತ್ತಿವೆ ಮತ್ತು ಕವಾಯತು ನಡೆಸುತ್ತಿವೆ ಎಂದು ಗುಪ್ತಚರ ಸಂಸ್ಥೆಯಿಂದ 20ಕ್ಕೂ ಹೆಚ್ಚು ಎಚ್ಚರಿಕೆಗಳು ಬಂದಿದ್ದವು. ಮೋದಿಯವರು ಅದನ್ನೆಲ್ಲ ಉಪೇಕ್ಷಿಸಿದ್ದರು.
ಬೋಗಿಯನ್ನು ಸುಟ್ಟ ಬಳಿಕ, ಮುಸ್ಲಿಮರು ಹೂಡಿದ ಒಂದು ಒಳಸಂಚಿನಲ್ಲಿ 59 ಮಂದಿ ಕರ ಸೇವಕರು ಕೊಲ್ಲಲ್ಪಟ್ಟರೆಂದು ವಿಎಚ್‌ಪಿ ಒಂದೇ ಸಮನೆ ಬೊಬ್ಬೆ ಹೊಡೆಯಿತು. ಆ ಬಳಿಕ, ಒಂದು ವಾರದ ಉದ್ದಕ್ಕೂ ನಡೆದ ಹತ್ಯೆಗಳ ವೇಳೆ ಕೇಸರಿ ಗ್ಯಾಂಗ್‌ಗಳು ವ್ಯವಸ್ಥಿತವಾಗಿ ನಡೆಸಿದ ಹತ್ಯೆಗಳ ಬಗ್ಗೆ ಮೋದಿ ತುಟಿ ಬಿಚ್ಚಲಿಲ್ಲ. ಮಡಿದವರ ಶವಗಳನ್ನು ವಿಲೇವಾರಿ ಮಾಡುವ ಮೊದಲೇ, (ಗುಜರಾತ್)ರಾಜ್ಯ ಅಸೆಂಬ್ಲಿ ಚುನಾವಣೆಗಳನ್ನು 2003ರ ಮಾರ್ಚ್‌ನಿಂದ 2002ರ ಜುಲೈಗೆ ಪೂರ್ವ ನಿಗದಿಗೊಳಿಸುವಂತೆ ಅವರು ಚುನಾವಣಾ ಆಯೋಗವನ್ನು ಕೇಳಿಕೊಂಡರು.
 ಸಾಮ್ಯತೆಗಳು ಅಲ್ಲಿಗೆ ಕೊನೆಗೊಳ್ಳುವುದಿಲ್ಲ. ಚುನಾವಣೆಗಳಲ್ಲಿ ಗೆದ್ದ ಬಳಿಕ ಗುಜರಾತ್ ಪೊಲೀಸರು 22ಕ್ಕೂ ಹೆಚ್ಚು ಎನ್‌ಕೌಂಟರ್‌ಗಳಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಗುಂಪುಗಳು ಕಳುಹಿಸಿದ್ದು ಎನ್ನಲಾದ ಫಿದಾಯಿನ್‌ಗಳನ್ನು ಕೊಂದು ಹಾಕಿದರು. ಒಟ್ಟಿನಲ್ಲಿ, ಮೋದಿ, ಸುಲಭವಾಗಿ ಅಧಿಕಾರ ತ್ಯಜಿಸುವುದಿಲ್ಲ, ಚುನಾವಣೆಯಲ್ಲಿ ಗೆಲ್ಲಲು ಶತಾಯ ಗತಾಯ ಪ್ರಯತ್ನಿಸುತ್ತಾರೆ, ಎಂಬುದು ಸ್ಪಷ್ಟ. ಅಂದು ಅವರ ಮಹತ್ವಾಕಾಂಕ್ಷೆಗಳು ಗುಜರಾತಿಗೆ ಸೀಮಿತವಾಗಿದ್ದವು, ಇಂದು ಅವುಗಳು ಇಡೀ ದೇಶವನ್ನೇ ವ್ಯಾಪಿಸಿದೆ.
ಕೃಪೆ: thewire.in

Writer - ಪ್ರೇಮ್ ಶಂಕರ್ ಝಾ

contributor

Editor - ಪ್ರೇಮ್ ಶಂಕರ್ ಝಾ

contributor

Similar News

ಜಗದಗಲ
ಜಗ ದಗಲ