ದಿಲ್ಲಿ ದರ್ಬಾರ್
ಲಾಲು ಜೈಲಲ್ಲಿದ್ದರೇನು?
ನೀವು ಲಾಲು ಪ್ರಸಾದ್ ಅವರನ್ನು ರಾಜಕೀಯದಿಂದ ಬೇರ್ಪಡಿಸಬಹುದು; ಆದರೆ ಲಾಲು ಅವರಿಂದ ರಾಜಕೀಯವನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಮೇವು ಹಗರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ರಾಷ್ಟ್ರೀಯ ಜನತಾದಳ ಮುಖಂಡ ಇದೀಗ ರಾಂಚಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಜಾಮೀನು ನಿರಾಕರಿಸಿದರೂ, ಅವರ ನಡೆಯಿಂದಾಗಿ, ಹಿರಿಯ ಪುತ್ರ ತೇಜ್‌ಪ್ರತಾಪ್ ಯಾದವ್ ಅವರ ಬಂಡಾಯದಿಂದ ಪಕ್ಷವನ್ನು ರಕ್ಷಿಸಿದೆ, ಕುಟುಂಬವನ್ನು ಒಗ್ಗಟ್ಟಾಗಿ ಇರಿಸಿದೆ; ಹಿರಿಯ ಪುತ್ರಿ ಮಿಸಾ ಭಾರ್ತಿಗೆ ಪಾಟಲೀಪುತ್ರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ದಕ್ಕಿದೆ ಮತ್ತು ಸರನ್ ಲೋಕಸಭಾ ಕ್ಷೇತ್ರದಲ್ಲಿ ಕುಟುಂಬದ ಹಿಡಿತವನ್ನು ಖಾತ್ರಿಪಡಿಸಿದೆ. ಎಪ್ರಿಲ್ 1ರಂದು ಸೋಮವಾರ ತೇಜ್‌ಪ್ರತಾಪ್ ಯಾದವ್, ತಂದೆ-ತಾಯಿ ಹೆಸರಿನಲ್ಲಿ ‘ಲಾಲು ರಾಬ್ರಿ ಮೋರ್ಚಾ’ ಎಂಬ ಹೊಸ ಪಕ್ಷವನ್ನು ಘೋಷಿಸಿದ್ದರು. ಜೆಹನಾಬಾದ್ ಮತ್ತು ಶೆಯೋಹಾರ್ ಕ್ಷೇತ್ರಗಳನ್ನು ತಮ್ಮ ನಿಷ್ಠರಿಗೆ ಬಿಟ್ಟುಕೊಡದಿದ್ದರೆ, ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಾಗಿ ಬೆದರಿಕೆ ಹಾಕಿದ್ದರು. ಕಿರಿಯ ಸಹೋದರ ತೇಜಸ್ವಿ ಪ್ರಸಾದ್ ಯಾದವ್ ಜತೆ ಗುದ್ದಾಡುವುದಕ್ಕಿಂತ, ಅಷ್ಟೊಂದು ಚಿರಪರಿಚಿತವಲ್ಲದ ಚಿಕ್ಕ ಪಕ್ಷಕ್ಕೆ ಸೇರುವುದೇ ಲೇಸು ಎಂಬ ನಿರ್ಧಾರಕ್ಕೆ ತೇಜ್‌ಪ್ರತಾಪ್ ಬಂದಿದ್ದರು. ಆದರೆ ಪಕ್ಷದ ವರ್ತುಲಕ್ಕೆ ಯಾವುದೇ ಧಕ್ಕೆಯಾಗದಂತೆ ಮತ್ತು ಆ ವಿಚಾರಗಳನ್ನು ತೇಜಸ್ವಿಯಾದವ್ ನಿರ್ವಹಿಸುವಂತೆ ಮಾಡುವ ನಿಟ್ಟಿನಲ್ಲಿ ಹಿರಿಯ ಮಗನ ಮನವೊಲಿಸುವಲ್ಲಿ ಲಾಲು ಯಶಸ್ವಿಯಾಗಿದ್ದಾರೆ. ಇದೀಗ ಸಮಸ್ಯೆ ತಿಳಿಯಾದಂತಿದೆ. ಆದರೆ ಅವರ ಅನುಪಸ್ಥಿತಿಯಲ್ಲಿ ಮೋದಿ- ಶಾ-ನಿತಿನ್ ಅಲೆಯನ್ನು ಮೆಟ್ಟಿ ಆರ್‌ಜೆಡಿ ಹೇಗೆ ಸಾಧನೆ ಮಾಡಬಲ್ಲದು ಎನ್ನುವುದು ಪ್ರಶ್ನೆ.
ಗುರುವಿಗೇ ಮೋದಿ ತಿರುಮಂತ್ರ
ಮೋದಿಯವರನ್ನು ತರಾಟೆಗೆ ತೆಗೆದುಕೊಳ್ಳಲು ಅಡ್ವಾಣಿ ವಿಳಂಬ ಮಾಡಿದರು. ಬಹುಶಃ ಮೋದಿ ಅದಕ್ಕೆ ಸಜ್ಜಾಗಿಯೇ ಇದ್ದರು ಹಾಗೂ ಮೋದಿ ವಿರುದ್ಧದ ಟೀಕೆಯ ಪರಿಣಾಮ ಶೂನ್ಯಗೊಳಿಸಲು ಕಾರ್ಯತಂತ್ರ ಹೆಣೆದಿದ್ದರು. ಬ್ಲಾಗ್‌ನಲ್ಲಿ ಅಡ್ವಾಣಿಯವರು ನರೇಂದ್ರ ಮೋದಿ- ಅಮಿತ್ ಶಾ ಕಾರ್ಯವೈಖರಿಯಲ್ಲಿ ಟೀಕಿಸಿದ್ದರು. ಇದು ದಿಲ್ಲಿಯಲ್ಲಿ ಪಕ್ಷ ನಿರ್ವಹಿಸುವವರಿಗೆ ಆಘಾತಕಾರಿಯಾಗಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಪಿತೂರಿ ಅಡಗಿರುವ ಸಾಧ್ಯತೆಯ ಸುಳಿವು ಅವರಿಗೆ ದೊರಕಿತು. ಅಡ್ವಾಣಿಯವರ ಬ್ಲಾಗ್ ಬಗ್ಗೆ ಮೋದಿ ಕ್ಷಿಪ್ರವಾಗಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿ, ಹಿರಿಯ ಮುತ್ಸದ್ದಿಯ ಟೀಕೆಯನ್ನು ಹೊಗಳಿಕೆಯಾಗಿ ಪರಿವರ್ತಿಸಿಕೊಂಡರು. ‘‘ಅಡ್ವಾಣಿಯವರು ಬಿಜೆಪಿಯ ತಿರುಳನ್ನು ಸಮ ರ್ಪಕವಾಗಿ ಬಿಂಬಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಮಾರ್ಗದರ್ಶಿ ಮಂತ್ರ ಎನಿಸಿದ ‘ನೇಷನ್ ಫಸ್ಟ್, ಪಾರ್ಟಿ ನೆಕ್ಸ್ಟ್, ಸೆಲ್ಫ್ ಲಾಸ್ಟ್’ ಎನ್ನುವ ನೈಜ ಅಂಶವನ್ನು ಬಿಂಬಿಸಿದ್ದಾರೆ’’ ಎಂದು ಹೇಳಿದರು. ಇಷ್ಟು ಮಾತ್ರವಲ್ಲದೆ ಅಡ್ವಾಣಿಯವರನ್ನು ಶ್ರೇಷ್ಠ ನಾಯಕ ಎಂದು ಕರೆದರು. ಆದರೆ ‘‘ಬಿಜೆಪಿ ಎಂದೂ ತನ್ನ ಟೀಕಾಕಾರರನ್ನು ವೈರಿಗಳು ಅಥವಾ ರಾಷ್ಟ್ರದ್ರೋಹಿಗಳು ಎಂದು ಪರಿಗಣಿಸಿರಲಿಲ್ಲ’’ ಎಂದು ಅಡ್ವಾಣಿಯವರು ಹೇಳಿದ ಅಂಶವನ್ನು ಮೋದಿ ನಿರ್ಲಕ್ಷಿಸಿದರು. ಇದಾದ ಸ್ವಲ್ಪಹೊತ್ತಿನಲ್ಲೇ ಮಾಧ್ಯಮ ಇಲಾಖೆಯು ಅಧಿಕೃತವಾಗಿ ಅಡ್ವಾಣಿಯವರ ಬ್ಲಾಗ್ ಅಂಶಗಳನ್ನು ಪತ್ರಿಕಾ ಪ್ರಕಟನೆಯಾಗಿ ಬಿಡುಗಡೆ ಮಾಡಿತು. ಪಕ್ಷದ ಮುಖಂಡರು, ಶಿಷ್ಯ ಗುರುವಿಗಿಂತಲೂ ಸ್ಮಾರ್ಟ್ ಎಂದು ಮೋದಿಯವರ ಗುಣಗಾನ ಮಾಡಿದರು. ಅದು ಚೆಕ್‌ಮೇಟ್ ಹಾಗೂ ಮೋದಿಯ ಗೆಲುವು. ದಿಲ್ಲಿ ಮಾಧ್ಯಮ ಸಹಜವಾಗಿಯೇ ಅಡ್ವಾಣಿಯವರ ಮೂಲ ಪೋಸ್ಟ್‌ಗಿಂತ ಹೆಚ್ಚಾಗಿ ಮೋದಿಯವರ ಪ್ರತಿಕ್ರಿಯೆಯನ್ನೇ ಬಿಂಬಿಸಿತು. ಅದು ಮೋದಿ ಶೈಲಿ.
ಜಿತಿನ್ ಬಂಡಾಯ ಮತ್ತು ಶಮನ
ಗಾಂಧಿ ಕುಟುಂಬದ ನಿಷ್ಠ ಮತ್ತು ರಾಹುಲ್‌ಗಾಂಧಿಯವರ ಸ್ನೇಹಿತ ಜಿತಿನ್ ಪ್ರಸಾದ್, ಅಪ್ಪಟ ಕಾಂಗ್ರೆಸ್ ಕುಟುಂಬದಿಂದ ಬಂದವರು. ಅವರು ಬಿಜೆಪಿ ಸೇರುತ್ತಾರೆ ಎಂಬ ವದಂತಿ ಬಗ್ಗೆ ಮಾಧ್ಯಮವನ್ನು ತುದಿಗಾಲಲ್ಲಿ ನಿಲ್ಲಿಸಿದರು. ಬಿಜೆಪಿ ಸೇರುವ ಬಗೆಗಿನ ವದಂತಿಯನ್ನು ಅವರು ತಳ್ಳಿಹಾಕಲಿಲ್ಲ. ಅವರ ಬಂಡಾಯ ಖಂಡಿತವಾಗಿಯೂ ಪಕ್ಷಕ್ಕೆ ದೊಡ್ಡ ಹೊಡೆತವಾದ್ದರಿಂದ ಕಾಂಗ್ರೆಸ್ ತಳಮಳ ಹೆಚ್ಚಲು ಕಾರಣವಾದರು. ಇವರು ಉತ್ತರ ಪ್ರದೇಶದಲ್ಲಿ ವರ್ಚಸ್ವಿ ಬ್ರಾಹ್ಮಣ ಮುಖಂಡ. ಇವರ ಮೂಲಕ ಬ್ರಾಹ್ಮಣರು ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ತ್ಯಜಿಸುತ್ತಿರುವ ಸಂದೇಶವನ್ನು ಬ್ರಾಹ್ಮಣ ಸಮುದಾಯ ರವಾನಿಸಿತು. ಪ್ರಿಯಾಂಕಾಗಾಂಧಿ ಹಾಗೂ ಇತರರು ಮೇಲ್ವರ್ಗವನ್ನು ಆಕರ್ಷಿಸುವ ಬದಲಾಗಿ ಇತರ ಹಿಂದುಳಿದ ವರ್ಗಗಳನ್ನು ಸೆಳೆಯಲು ಮಾಡುತ್ತಿರುವ ಪ್ರಯತ್ನಗಳು ಇವರ ಮುನಿಸಿಗೆ ಕಾರಣ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ವ್ಯಾಪ್ತಿ ಇರುವುದೇ ಬ್ರಾಹ್ಮಣರು ಮತ್ತು ಇತರ ಕೆಲ ಸಮುದಾಯದಲ್ಲಿ. ಆದ್ದರಿಂದ ಪ್ರಸಾದ್ ಅವರ ಬಂಡಾಯ ಶಮನಗೊಳಿಸುವ ಪ್ರಯತ್ನ ನಡೆದಿದೆ. ಅವರ ಬಂಡಾಯ ಶಮನವಾಗಿದ್ದರೂ, ಅವರು ಏಕೆ ಕೋಪಗೊಂಡಿದ್ದರು ಎನ್ನುವ ಮಾಹಿತಿ ಇದೀಗ ತಿಳಿದುಬರುತ್ತಿದೆ. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರು ಈ ಚುನಾವಣೆಯಲ್ಲಿ ಕೆಲವೆಡೆಯಾದರೂ ಕತ್ತುಕತ್ತಿನ ಹೋರಾಟಕ್ಕೆ ಯೋಜಿಸಿದ್ದರು. ಗೃಹ ಸಚಿವ ರಾಜನಾಥ್ ಸಿಂಗ್ ಕಣದಲ್ಲಿರುವ ಲಕ್ನೋ, ಹೀಗೆ ಆಯ್ಕೆ ಮಾಡಿಕೊಂಡ ಕ್ಷೇತ್ರಗಳಲ್ಲೊಂದು. ಯುವ ನೇತಾರ ಜಿತಿನ್ ಪ್ರಸಾದ್ ಅವರನ್ನು ಸಿಂಗ್ ವಿರುದ್ಧ ಸ್ಪರ್ಧಿಸುವಂತೆ ಪ್ರಿಯಾಂಕಾ ಕೇಳಿಕೊಂಡಿದ್ದರು. ಹೇಗೂ ಅವರು ಅದರಿಂದ ತಪ್ಪಿಸಿಕೊಂಡರು. ತಮ್ಮ ವಿರುದ್ಧ ಏನೋ ಪಿತೂರಿ ನಡೆದಿದೆ ಎನ್ನುವುದನ್ನು ಮನಗಂಡು ಬಂಡಾಯಕ್ಕೆ ಮುಂದಾದರು. ಅಂತಿಮವಾಗಿ ಅವರು ಪಕ್ಷ ತೊರೆಯಲಿಲ್ಲ ಎನ್ನುವುದು ಬೇರೆ ವಿಚಾರ. ಇದೀಗ ರಾಜನಾಥ್ ವಿರುದ್ಧ ಸೆಣೆಸಲು ಬೇರೆಯವರ ಹುಡುಕಾಟದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಸೂಕ್ತ ಅಭ್ಯರ್ಥಿ ಸಿಕ್ಕಿಲ್ಲ.
ಹೋರಾಟಗಾರ್ತಿ ಮಮತಾ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ವೇಗವಾಗಿ ಬೆಳೆಯುತ್ತಿದೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮತಗಳನ್ನು ಸೆಳೆಯುತ್ತದೆ ಎಂಬ ಬರಹಗಳು ಗೋಡೆಗಳಲ್ಲಿ ಕಂಡುಬರುತ್ತಿವೆ. ಈ ರಾಜ್ಯದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯುತ್ತಿದೆ. ರಾಜ್ಯಾದ್ಯಂತ ಸುತ್ತಾಡಿ ರ್ಯಾಲಿಗಳನ್ನು ನಡೆಸಲು ಮತ್ತು ಬಿಜೆಪಿಯತ್ತ ಮತದಾರರನ್ನು ಸೆಳೆಯಲು ಪ್ರಧಾನಿ ಮೋದಿಯವರಿಗೆ ಸಾಕಷ್ಟು ಸಮಯಾವಕಾಶವಿದೆ. ತಳಮಟ್ಟದ ವರದಿಗಳನ್ನು ನಂಬಬಹುದಾದರೆ, ಬಿಜೆಪಿಗೆ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ದೊಡ್ಡ ಲಾಭವಾಗುತ್ತದೆ. ಆದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕಿ ಹೋರಾಟದ ಕೆಚ್ಚು ಬಿಟ್ಟಿಲ್ಲ. ಏಳು ಹಂತಗಳಲ್ಲಿ ಚುನಾವಣೆ ಇರುವುದರಿಂದ ಪಕ್ಷವನ್ನು ಬಿಜೆಪಿಗಿಂತ ಹೆಚ್ಚಾಗಿ ಸಂಘಟಿಸಬಹುದು ಎನ್ನುವುದು ಅವರ ನಂಬಿಕೆ. ಏಕೆಂದರೆ ಬಿಜೆಪಿಗೆ ಮತಗಟ್ಟೆ ಹಂತದಲ್ಲಿ ಒಳ್ಳೆಯ ಸಮನ್ವಯ ಇಲ್ಲ. ಕಳೆದ ವಾರ ಮೊದಲ ಹಂತದ ಮತದಾನ ನಡೆದ ಕ್ಷೇತ್ರಗಳಲ್ಲಿ ಎಲ್ಲೆಲ್ಲಿ ಬಿಜೆಪಿ ಪ್ರಬಲವಾಗಿದೆಯೋ ಅಲ್ಲೆಲ್ಲ ದೀದಿ ಸ್ವತಃ ಠಿಕಾಣಿ ಹೂಡಿ, ಕಾರ್ಯಕರ್ತರನ್ನು ಸಂಘಟಿಸುವ ಮೂಲಕ ಬಿಜೆಪಿಯನ್ನು ಹಿಂದಿಕ್ಕಿದ್ದಾರೆ. ಬಿಜೆಪಿಗೆ ಆಗಬಹುದಾಗಿದ್ದ ಅಲ್ಪಸ್ವಲ್ಪಲಾಭವನ್ನು ಮತ್ತೆ ಕಸಿದುಕೊಳ್ಳುವಲ್ಲಿ ಟಿಎಂಸಿ ನಾಯಕಿ ಯಶಸ್ವಿಯಾಗಿದ್ದಾರೆ ಎನ್ನುವುದು ದಿಲ್ಲಿಯಲ್ಲಿರುವ ಟಿಎಂಸಿ ಮುಖಂಡರ ಅನಿಸಿಕೆ. ಮೊದಲ ಹಂತದ ಮತದಾನದಲ್ಲಿ ದೀದಿ ಮ್ಯಾಜಿಕ್ ಎಷ್ಟು ಕೆಲಸ ಮಾಡಿದೆ ಎನ್ನುವುದನ್ನು ಕಾದು ನೋಡಬೇಕು. ಟಿಎಂಸಿ ಮುಖಂಡರೊಬ್ಬರು ಹೇಳುವಂತೆ, ಈ ಹೆಣ್ಣುಹುಲಿಗೆ ಏಟಾಗಿದ್ದು, ಖಂಡಿತವಾಗಿಯೂ ಪ್ರತಿಹೋರಾಟ ನಡೆಸುತ್ತಾರೆ. ಇದು ಎಷ್ಟು ನಿಜ ಎನ್ನುವುದು ಮಾತ್ರ ಫಲಿತಾಂಶ ಪ್ರಕಟವಾದ ಬಳಿಕವಷ್ಟೇ ತಿಳಿಯಬೇಕು.
ರಾಜನಾಥ್‌ಗೆ ದಿಢೀರ್ ಮಹತ್ವ
ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವಂತೆ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಮಹತ್ವ ಹೆಚ್ಚುತ್ತಿದೆ. ಅವರನ್ನು ಬಿಜೆಪಿ ಪ್ರಚಾರಕ್ಕೆ ವ್ಯಾಪಕವಾಗಿ ಬಳಸಿಕೊಳ್ಳುತ್ತಿದೆ. ಕೇಸರಿ ಪಕ್ಷದ ಮಾಧ್ಯಮ ವಿಭಾಗ, ರಾಜನಾಥ್ ಸಿಂಗ್ ಭಾಷಣ ಮಾಡುವ ರ್ಯಾಲಿಗಳ ಬಗ್ಗೆ ನಿಯತವಾಗಿ ಮಾಹಿತಿ ನೀಡುತ್ತಿದೆ. ಉತ್ತರ ಪ್ರದೇಶದ ಹೃದಯಭಾಗದಿಂದ ಆಯ್ಕೆಯಾಗಬಯಸಿರುವ ರಾಜನಾಥ್ ಸಿಂಗ್ ಅವರು, ತಮ್ಮ ಬಹಳಷ್ಟು ಮಂದಿ ನಿಷ್ಠರಿಗೆ ಟಿಕೆಟ್ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವುದು ಪಕ್ಷದೊಳಗಿನಿಂದ ಕೇಳಿಬರುವ ಮಾತು. ಇತರ ಹಿರಿಯ ಮುಖಂಡರನ್ನು ಮೂಲೆಗುಂಪು ಮಾಡಿದ್ದರೂ, ರಾಜನಾಥ್ ಸಿಂಗ್ ಅವರಿಗೆ ಅಷ್ಟೊಂದು ಮಹತ್ವ ಸಿಗಲು ಮುಖ್ಯ ಕಾರಣವೇನು ಎಂಬ ಬಗ್ಗೆ ಪಕ್ಷದ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಹಲವರು ಅಭಿಪ್ರಾಯಪಡುವಂತೆ ಮೋದಿ-ಶಾ ಜೋಡಿ ಚಾಣಕ್ಯ ನೀತಿ ಅನುಸರಿಸಿ, ಪಕ್ಷದ ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇದು ಪಕ್ಷದಲ್ಲಿ ಬಂಡಾಯದ ಕಿಡಿ ಸಿಡಿಯಲೂ ಕಾರಣವಾಗಬಹುದು. ಸಿಂಗ್, ನಿತಿನ್ ಗಡ್ಕರಿ ಮತ್ತು ಅರುಣ್ ಜೇಟ್ಲಿಯವರ ಮಹತ್ವ ಈ ವರ್ಷದ ಚುನಾವಣೆ ಮುಗಿದ ಬಳಿಕ ಕಡಿಮೆಯಾಗಲಿದೆ. ಆದರೆ ಇದು ಮೋದಿ ಎಷ್ಟು ಅಂತರದಿಂದ ಗೆಲ್ಲುತ್ತಾರೆ ಎನ್ನುವುದನ್ನು ಅವಲಂಬಿಸಿದೆ ಎನ್ನುವುದು ಪಕ್ಷದ ಕೆಲ ಮುಖಂಡರ ವಿಶ್ಲೇಷಣೆ. 2014ರ ಚುನಾವಣೆಯಂತೆ ದೊಡ್ಡ ಬಹುಮತದೊಂದಿಗೆ ಮೋದಿ ಗೆದ್ದರೆ, ಈ ಮುಖಂಡರು ಮೂಲೆಗುಂಪಾಗಲಿದ್ದಾರೆ ಎಂಬ ಗಾಳಿಸುದ್ದಿ ಬಿಜೆಪಿ ವಲಯದಲ್ಲಿ ಹರಿದಾಡುತ್ತಿದೆ. ಈಗ ಅಗತ್ಯಕ್ಕಿಂತ ಹೆಚ್ಚು ಮಹತ್ವ ಅವರಿಗೆ ಸಿಗುತ್ತಿದ್ದರೂ, ಚುನಾವಣೆ ಬಳಿಕ ಚಿತ್ರಣ ಬದಲಾಗಬಹುದು ಎಂಬ ಕಲ್ಪನೆ ಅವರಿಗಿದೆ.