ಈ ನೆಲದ ಬಹುದೊಡ್ಡ ಮಾತೃ ಹೃದಯಿ ಡಾ. ಅಂಬೇಡ್ಕರ್

Update: 2019-04-13 18:31 GMT

ಅವರ ಬದುಕಿನಲ್ಲಿ ಎಂದೆಂದೂ ರಾಷ್ಟ್ರ ಮಟ್ಟದ ನಾಯಕರಿಗೆ ತಲೆ ಬಾಗಲಿಲ್ಲ. ಅಮಾಯಕ ಜನ ಸಮೂಹ ಡಾ. ಅಂಬೇಡ್ಕರರನ್ನು ಎಷ್ಟೇ ತಿರಸ್ಕರಿಸಿದರೂ, ಅವರ ಉಸಿರಿನ ಕೊನೆಯ ತನಕ ಅವರನ್ನು ಕೈಬಿಡಲಿಲ್ಲ. ಕಾರಣ ಪ್ರಜ್ಞೆ ಇಲ್ಲದ ಮಕ್ಕಳನ್ನು ಕೈ ಹಿಡಿದು ಎತ್ತುವುದು ಮಾತೃ ಹೃದಯ ಲಕ್ಷಣವಾಗಿತ್ತು ಮತ್ತು ಅವರಿಗೆ ಈ ಜನರು ಬದಲಾವಣೆಯಾಗುತ್ತಾರೆ ಎಂಬ ಅಪಾರ ವಿಶ್ವಾಸವಿತ್ತು.

ಇಂದು ಭಾರತದಲ್ಲಿ ಬಡವ, ನಿರ್ಗತಿಕ, ಅವಮಾನಿತ ಶೋಷಿತರ ಬಗ್ಗೆ ಸಾವಿರಾರು ಜನ ಮಾತನಾಡುತ್ತಿರಬಹುದು. ಆದರೆ ಅಂದಿನ ಭಾರತದಲ್ಲಿ ಅಂದರೆ 100 ವರ್ಷಗಳ ಹಿಂದೆ ಇಡೀ ಭಾರತದ ಬಡವನ ಪರ ಮಾತನಾಡಲು ಇದ್ದ ಏಕೈಕ ಧ್ವನಿ ಡಾಕ್ಟರ್ ಅಂಬೇಡ್ಕರ್. ತನ್ನ ಮಕ್ಕಳ ಹಸಿವನ್ನು ನೀಗಲು ನಿರಂತರವಾಗಿ ದುಡಿಯುವಂತಹ ತಾಯಿಯಂತೆ, ಅಮಾಯಕ ಜನರ ಭವಿಷ್ಯವನ್ನು ರೂಪಿಸಲು ದುಡಿದ ಬಾಬಾಸಾಹೇಬರು, ಒಂಟಿ ಕಾಲಿನ ತಪಸ್ವಿಯಂತೆ. ಅಂದು ಬ್ರಿಟಿಷ್ ಕೌನ್ಸಿಲ್‌ಗಳ ಮುಂದೆ, ದಂಡು ಮೇಜಿನ ಸಭೆಗಳ ಮುಂದೆ, ಇಡೀ ಭಾರತದ ಪ್ರತಿಯೊಬ್ಬ ನಾಗರಿಕನ ಹಕ್ಕುಗಳಿಗಾಗಿ ಕೂಗನ್ನು ಆರಂಭಿಸಿ ದಾಗ, ಒಂದೇ ಒಂದು ಧ್ವನಿ ಕೂಡಾ ಇವರ ಜೊತೆ ಸೇರಲಿಲ್ಲ. ಬದಲಿಗೆ ಈ ಧ್ವನಿಯ ವಿರುದ್ಧ ದಿಕ್ಕಿನಲ್ಲಿ ನೂರಾರು ಧ್ವನಿಗಳು ಪ್ರತಿಧ್ವನಿಸಿದವು. ಪ್ರತಿ ನಾಗರಿಕನಿಗೂ ಓಟಿನ ಹಕ್ಕನ್ನು ಕೇಳುವಾಗ, ಭಾರತೀಯ ಪ್ರತಿಯೊಬ್ಬ ಹೆಣ್ಣುಮಗಳ ಹಕ್ಕನ್ನು ಪ್ರತಿಪಾದಿಸಿದಾಗ, ಅವಮಾನಿತ, ಅಮಾಯಕರ, ಧ್ವನಿಯಾದಾಗ, ಅನಿಷ್ಟ ಪದ್ಧತಿಗಳ ವಿರುದ್ಧ ಈಜಿ ದಾಗ, ಅಮಾನವೀಯ ಮೌಲ್ಯಗಳನ್ನು ಸೀಳಿದಾಗ, ಮಾನವೀಯ ಮೆಟ್ಟಿಲುಗಳನ್ನು ನಿರ್ಮಿಸುವಾಗ, ಜಾತಿ ಧರ್ಮ ಕುಲವನ್ನು ಧಿಕ್ಕರಿಸಿ ನಿಂತಾಗ, ಪ್ರತಿ ಭಾರತೀಯನ ನಾಗರಿಕ ಹಕ್ಕುಗಳ ಜೀವಂತಿಕೆಗಾಗಿ ಜೀವನ ಪೂರ್ತಿ ಕೂಗಿದ್ದ, ಅಂದಿನ ಏಕೈಕ ಧ್ವನಿ ಡಾ. ಅಂಬೇಡ್ಕರ್.
 ಅಂದಿನ ಕಾಲಕ್ಕೆ ಡಾ. ಅಂಬೇಡ್ಕರ್ ಎರಡು ದೊಡ್ಡ ಪ್ರವಾಹಗಳ ವಿರುದ್ಧ ಈಜ ಬೇಕಿತ್ತು. ಒಂದು ಅಂಬೇಡ್ಕರ್ ಅವರನ್ನು ಪ್ರತಿ ಹಂತದಲ್ಲಿ ಧಿಕ್ಕರಿಸಿ ನಿಲ್ಲುತ್ತಿದ್ದ ರಾಷ್ಟ್ರೀಯ ಮಟ್ಟದ ನಾಯಕರ ವಿರೋಧದ ಅಲೆ. ಮತ್ತೊಂದು ಯಾರ ಹಕ್ಕುಗಳಿಗಾಗಿ ದುಡಿಯುತ್ತಿದ್ದರೊ ಅಂತಹ ಅಮಾಯಕ ಮುಗ್ಧ ಜನರ ತಿರಸ್ಕಾರದ ಅಲೆ. ಆದರೆ ಅವರ ಬದುಕಿನಲ್ಲಿ ಎಂದೆಂದೂ ರಾಷ್ಟ್ರ ಮಟ್ಟದ ನಾಯಕರಿಗೆ ತಲೆ ಬಾಗಲಿಲ್ಲ. ಅಮಾಯಕ ಜನ ಸಮೂಹ ಡಾ. ಅಂಬೇಡ್ಕರರನ್ನು ಎಷ್ಟೇ ತಿರಸ್ಕರಿಸಿದರೂ, ಅವರ ಉಸಿರಿನ ಕೊನೆಯ ತನಕ ಅವರನ್ನು ಕೈಬಿಡಲಿಲ್ಲ. ಕಾರಣ ಪ್ರಜ್ಞೆ ಇಲ್ಲದ ಮಕ್ಕಳನ್ನು ಕೈ ಹಿಡಿದು ಎತ್ತುವುದು ಮಾತೃ ಹೃದಯ ಲಕ್ಷಣವಾಗಿತ್ತು ಮತ್ತು ಅವರಿಗೆ ಈ ಜನರು ಬದಲಾವಣೆಯಾಗುತ್ತಾರೆ ಎಂಬ ಅಪಾರ ವಿಶ್ವಾಸವಿತ್ತು. ಅದಕ್ಕಾಗಿಯೇ ಅದೆಂತಹ ಕಠಿಣ ಪರಿಸ್ಥಿತಿಯಲ್ಲೂ, ಅವರು ಶೋಷಿತ ಸಮುದಾಯಗಳ ಪರ ಹೋರಾಟವನ್ನು ಕೈಬಿಡದೆ, ಬಿಸಿಲು-ಮಳೆ-ಬಿರುಗಾಳಿಯಲ್ಲಿ ಗಟ್ಟಿಗೊಂಡ ಬಂಡೆಯಂತಾದರು.
 ಸ್ವಾತಂತ್ರ್ಯ ಚಳವಳಿಯ ಹೋರಾಟ ಗಾರರು ಭಾರತವನ್ನು ಬಹಿರಂಗವಾಗಿ ಕಟ್ಟಿದರೆ, ಡಾ ಅಂಬೇಡ್ಕರ್ ಭಾರತವನ್ನು ಆಂತರಿಕವಾಗಿ ಕಟ್ಟಿದರು. ರಾಷ್ಟ್ರೀಯ ಚಳುವಳಿ ಭಾರತದ ಅಖಂಡತೆಯ ಕನಸನ್ನು ಕಂಡರೆ, ಅಂಬೇಡ್ಕರ್ ಚಳುವಳಿ ಭಾರತದ ಅಂತಃಕರಣದ ಕನಸನ್ನು ಕಂಡಿತು. ಒಂದು ರಾಜಕೀಯ ಹಕ್ಕುಗಳ ಹೋರಾಟವಾದರೆ, ಮತ್ತೊಂದು ನಾಗರಿಕ ಹಕ್ಕುಗಳ ಹೋರಾಟ. ಅವರು ಮಹಾನ್ ಭಾರತಕ್ಕಾಗಿ ದುಡಿದರು, ಆದರೆ ಅಂಬೇಡ್ಕರರು ಮಾನವೀಯ ಭಾರತಕ್ಕಾಗಿ ದುಡಿದರು. ಈ ಎರಡೂ ಹೋರಾಟಗಳು ಏಕಕಾಲದಲ್ಲಿ ಚಲಿಸಿದ ಕಾರಣಕ್ಕಾಗಿಯೇ ಇಂದಿನ ಭಾರತ ವಿಶ್ವಗುರುವಿನ ಸ್ಥಾನದಲ್ಲಿ ಉಳಿದಿದೆ. ಆದರೆ ಭಾರತೀಯರಿಗೆ ಬಹಿರಂಗ ಭಾರತ ಅರ್ಥವಾದಷ್ಟು, ಅಂತರಂಗದ ಭಾರತ ಅರ್ಥವಾಗಿಲ್ಲ. ಕಾರಣ ಭಾರತದ ಅಂತರಂಗದಲ್ಲಿ ಅಡಕವಾಗಿರುವ ಅಂಬೇಡ್ಕರರು ಕೂಡ ಪ್ರಸ್ತುತ ಭಾರತಕ್ಕೆ ಅರ್ಥವಾಗಿಲ್ಲ. ಇದಕ್ಕೆ ಪೂರಕವಾಗಿ ಒಂದು ಘಟನೆಯನ್ನು ನಿಮಗೆ ನೆನಪಿಸುತ್ತೇನೆ.
ಅಂಬೇಡ್ಕರ್‌ರ ಆತ್ಮಚರಿತ್ರೆ ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ ಪಠ್ಯಪುಸ್ತಕವಾಯಿತು. ಆದರೆ ನಾವು ಅಂಬೇಡ್ಕರ್‌ರನ್ನು ಗೌರವಿಸುವುದು ಸರಕಾರಿ ಸುತ್ತೋಲೆಗಳ ಅನಿವಾರ್ಯತೆಗಾಗಿ..ಬಹಿರಂಗದ ಒತ್ತಡಕ್ಕಾಗಿ..ಅಂತರಂಗ ಇನ್ನೂ ಕೊಳಕಾಗಿದೆ..
 ಬಹುಶಃ ಡಾ.ಅಂಬೇಡ್ಕರ್ ಅವರನ್ನು ಅಮೆರಿಕದವರು ಗೌರವಿಸಿದಷ್ಟು ಮತ್ತಾವುದೇ ದೇಶವು ಗೌರವಿಸಿರಲಾರದು ಎನಿಸುತ್ತದೆ. ಡಾ ಅಂಬೇಡ್ಕರ್ 1935-36 ಅಮೆರಿಕ, ಯೂರೋಪ್‌ನಿಂದ ವಾಪಸ್ ಬಂದ ಮೇಲೆ ತಮ್ಮ ಬಾಲ್ಯದ ದಿನಗಳಲ್ಲಿ ಭಾರತದಲ್ಲಿ ಅನುಭವಿಸಿದ ಜಾತಿ ವ್ಯವಸ್ಥೆಯ ಕರಾಳ ಅನುಭವಗಳನ್ನು ‘ದಿ ವೈಟಿಂಗ್ ಫಾರ್ ವೀಸಾ’ ಎಂಬ 20 ಪುಟಗಳ ತಮ್ಮ ಪುಸ್ತಕದಲ್ಲಿ ದಾಖಲಿಸಿದರು. ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾನಿಲಯವು ಈ ಪುಸ್ತಕವನ್ನು ತನ್ನ ದೇಶದ ವಿದ್ಯಾರ್ಥಿಗಳಿಗೆ ಅಂಬೇಡ್ಕರ್‌ರವರ ಬದುಕನ್ನು ಪರಿಚಯಿಸುವ ಅಗತ್ಯತೆಯಿದೆಯೆಂದು ತುಂಬ ಹೆಮ್ಮೆಯಿಂದ ತನ್ನ ದೇಶದಲ್ಲಿ ಪಠ್ಯ ಪುಸ್ತಕ ಆಗಿ ಸ್ವೀಕರಿಸಿತು.
ಆಗಿನ್ನೂ ಭಾರತೀಯರಿಗೆ ಗಣರಾಜ್ಯೋತ್ಸವದ ದಿನದಂದು ಅಂಬೇಡ್ಕರ್ ಫೋಟೊ ಇಡಬೇಕೇ? ಬೇಡವೇ? ಎಂದು ಯೋಚಿಸುತ್ತಿದ್ದ ಕಾಲ. ಎಷ್ಟೋ ಕಡೆಗಳಲ್ಲಿ ಇಂದಿಗೂ ಈ ಜಿಜ್ಞಾಸೆ ಇದೆ. ಈ ವಿಚಾರದಲ್ಲಿ ಗಲಭೆ ಘರ್ಷಣೆಗಳಾಗುತ್ತಿವೆ. ನಾವು ಅಂಬೇಡ್ಕರ್‌ರನ್ನು ಗೌರವಿಸುವುದು ಸರಕಾರಿ ಸುತ್ತೋಲೆಗಳ ಅನಿವಾರ್ಯತೆಗಾಗಿ ಎನಿಸಿ ಬಿಟ್ಟಿದೆ. ಇದು ಅಂತರಾತ್ಮದ ಬದಲಾವಣೆಯಲ್ಲ. ಈ ನೆಲದಲ್ಲಿ ಅಂಬೇಡ್ಕರನ್ನು ಬಹಿರಂಗವಾಗಿ ಗೌರವಿಸುವುದೆಂದರೆ ಅದೊಂದು ಅವಮಾನಕರ ಸಂಗತಿಯಾಗಿ ಬಿಟ್ಟದೆ. ಈ ವಿಚಾರದಲ್ಲಿ ಅಮೆರಿಕನ್ನರು ಅಂಬೇಡ್ಕರ್‌ರ ಅಂತರಂಗವನ್ನು ಅರಿತಷ್ಟು ನಾವು ಅರಿಯಲಿಲ್ಲ
ಅಂಬೇಡ್ಕರ್ ಜೀವನ ಚರಿತ್ರೆ ಈ ನೆಲದಲ್ಲಿ ಪಠ್ಯಪುಸ್ತಕವಾಗಲು ಚಳವಳಿಗಳಾಗಿವೆ; ಚರ್ಚೆಗಳಾಗಿವೆ. ಪ್ರತೀ ದಿನ ದೇಶದ ಯಾವುದಾದರೂ ಒಂದು ಮೂಲೆಯಲ್ಲಿ ಅಂಬೇಡ್ಕರ್‌ರವರಿಗೆ ಅವಮಾನ ಮಾಡುವುದು ಒಂದು ಸಂಪ್ರದಾಯವಾಗಿ ಬಿಟ್ಟಿದೆ.. ಇಂತಹ ವೈರುಧ್ಯಗಳ ನಡುವೆಯೂ ನಾವು ಅವರ 128ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದೇವೆ.
ಹುಟ್ಟಿದ ದೇಶದ ಕತೆ ಹೀಗಾದರೆ ಜಗತ್ತಿನ ಪ್ರತಿಷ್ಠಿತರಾದ ಅಮೆರಿಕನ್ನರು ಅಂಬೇಡ್ಕರ್ ರವರ ಪುತ್ಥಳಿಯನ್ನು ನಿರ್ಮಿಸಿ ಅದರ ಕೆಳಗಡೆ ‘ದಿ ಸಿಂಬಲ್ ಆಫ್ ನಾಲೆಡ್ಜ್’ ಎಂದು ಬರೆದದ್ದು ಅಂಬೇಡ್ಕರ್ ಭಾರತದಿಂದಾಚೆ ಅತ್ಯಂತ ಗೌರದಿಂದ ಬದುಕಿದ್ದಾರೆ ಎಂಬುದರ ಸಂಕೇತ....ಡಾ. ಅಂಬೇಡ್ಕರ್‌ರವರ ಈ ಅಂತಃಕರಣದ ಅರಿವಿಗಾಗಿ ಮತ್ತೊಂದು ಘಟನೆಯನ್ನು ನೀವು ಓದಲೇಬೇಕು.
ಡಾಕ್ಟರ್ ಜಾಫರ್ ಸನ್ ಅವರು ಅಮೆರಿಕದ ಸಂವಿಧಾನ ರಚಿಸುವಾಗ ಅಲ್ಲಿನ ನೀಗ್ರೋಗಳ ನಾಯಕ ಹೋರಸ್ ಗ್ರಿಲ್ ಸ್ವಲ್ಪಎಚ್ಚರ ತಪ್ಪಿದ್ದರಿಂದ ಅಮೆರಿಕದ ಸಂವಿಧಾನದಲ್ಲಿ ನೀಗ್ರೋಗಳಿಗೆ ಸ್ವಾತಂತ್ರ್ಯ ಸಿಗಲಿಲ್ಲ. ಆನಂತರ ಅಲ್ಲಿ ಅಮೆರಿಕದ ಅಧ್ಯಕ್ಷರಾದ ಅಬ್ರಹಾಂ ಲಿಂಕನ್ ಅವರು ಸಂವಿಧಾನಕ್ಕೆ 14ನೇ ತಿದ್ದುಪಡಿ ತರುವ ಮೂಲಕ ನೀಗ್ರೋಗಳಿಗೆ ಸ್ವಾತಂತ್ರ್ಯ ನೀಡಿ ಮಾನವೀಯತೆ ಮೆರೆದರು. ಅಂದರೆ ಹೋರಸ್ ಗ್ರಿಲ್ ಅವರು ಸ್ವಲ್ಪಎಚ್ಚರ ತಪ್ಪಿದ್ದರಿಂದ ನೀಗ್ರೋಗಳು ಸ್ವಾತಂತ್ರ್ಯ ಪಡೆಯಲು ಮತ್ತೆ ಎಪ್ಪತ್ತಾರು ವರ್ಷಗಳ ಕಾಲ ಕಾಯಬೇಕಾಯಿತು. ಹಾಗಾಗಿ ನಾನು ಶೋಷಿತರಿಗೆ ಸ್ವಾತಂತ್ರ್ಯ ಕೊಡಿಸಲು ಸ್ವಲ್ಪವೂ ಎಚ್ಚರ ತಪ್ಪುವುದಿಲ್ಲ ಎಂದು ಅಂಬೇಡ್ಕರ್ ಪದೇ ಪದೇ ಹೇಳುತ್ತಿದ್ದರು ಮತ್ತು ಹಾಗೆ ಮಾಡಿದರು ಕೂಡ.
ಅಬ್ರಹಾಂ ಲಿಂಕನ್ ಅವರು ನೀಗ್ರೋಗಳಿಗೆ ಸ್ವಾತಂತ್ರ್ಯ ನೀಡುವ ಆದೇಶಕ್ಕೆ ಸಹಿ ಮಾಡಲಿಕ್ಕಾಗಿಯೇ ಒಂದು ವಿಶೇಷ ಚಿನ್ನದ ಪೆನ್ನನ್ನು ಮಾಡಿಸಿದ್ದರು. ಆ ಪೆನ್ನು ಇನ್ನೂ ಸಹ ಇದೆ.
ಡಾಕ್ಟರ್ ಅಂಬೇಡ್ಕರ್ ‘‘ನೀವು ಲಿಂಕನ್‌ರಂತೆ ಶೋಷಿತ ಸಮುದಾಯಗಳ ವಿಮೋಚನೆಗಾಗಿ ಸಂವಿಧಾನ ರಚಿಸಿದ್ದೀರಿ. ಲಿಂಕನ್‌ರ ಹಾಗೆ, ಸಂವಿಧಾನ ಸಮರ್ಪಿಸುವಾಗ ಸಹಿ ಮಾಡಲು ನೀವು ಕೂಡ ವಿಶೇಷವಾದ ಚಿನ್ನದ ಪೆನ್ನನ್ನು ಖರೀದಿಸಿದ್ದೀರಾ?’’ ಎಂದು ಯಾರಾದರೂ ಪ್ರಶ್ನೆ ಕೇಳಿದ್ದಿದ್ದರೆ, ಡಾ ಅಂಬೇಡ್ಕರ್ ಅವರು ಇಲ್ಲ ನಾನು ಲಿಂಕನ್‌ರಂತೆ ಚಿನ್ನದ ಪೆನ್ನನ್ನು ತಯಾರಿಸಿಲ್ಲ. ಆದರೆ ಚಿನ್ನಕ್ಕಿಂತ ಮೌಲ್ಯವಾದ ಕಾನೂನುಗಳನ್ನು ಸಂವಿಧಾನದ ಮೂಲಕ ನೀಡಿದ್ದೇನೆ. ಅವು ಮುಂದಿನ ಭಾರತವನ್ನು ರಕ್ಷಿಸುತ್ತವೆ. ಇದು ಚಿನ್ನಕ್ಕಿಂತಲೂ ಮೌಲ್ಯವಾದದ್ದು ಎಂದು ಬಹುಶಃ. ಉತ್ತರಿಸುತ್ತಿದ್ದರು. ಆದರೆ ನಮ್ಮ ವರ್ತನೆ ಹೇಗಿದೆ?. ಇಲ್ಲಿ ಅಂಬೇಡ್ಕರ್ ರ ಬಗ್ಗೆ ಮಾತನಾಡುವುದೆಂದರೆ ಅದೊಂದು ಅವಮಾನ ಎಂಬ ಭಾವನೆ. ಬಹಿರಂಗವಾಗಿ ಆ ಹೆಸರು ಹೇಳಿದರೆ ಅವಮಾನ. ಮನೆಯಲ್ಲಿ ಫೋಟೊ ಇಟ್ಟರೆ ಅವಮಾನ, ಇಂದು ನಮ್ಮ ಮಕ್ಕಳ ಹೀರೋಗಳು ಸಿನಿಮಾ ತಾರೆಗಳು. ನಮ್ಮ ಮಾಡಲ್‌ಗಳೇ ಬೇರೆ. ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹಿಂಜರಿಕೆ. ಚಳವಳಿ ಮಾಡೋದಕ್ಕೆ ಬಡವರ ಮಕ್ಕಳು ಬೇಕು. ಲಾಭ ಮಾತ್ರ ಉಳ್ಳವರಿಗೆ. ಕೆಲವರಿಗೆ ಫೋಟೊ ಇಟ್ಟರೆ, ಕೆಲವರಿಗೆ ಬೋರ್ಡ್ ನೆಟ್ಟರೆ ಅವಮಾನ. ಪುತ್ಥಳಿಗಳ ನಿರ್ಮಾಣಕ್ಕಂತೂ ಪೊಲೀಸ್ ರಕ್ಷಣೆ ಬೇಕೇ ಬೇಕು. ಆದರೆ ವಿಚಾರರಹಿತ ಜಯಂತಿಗಳು, ಮೋಜು, ಕುಣಿತ, ಬಣ್ಣ, ಗಲಭೆ, ಕೇಸ್ ಇವೆೆಲ್ಲ ಮಾಮೂಲಿಯಾಗಿದೆ. ಇದು ನಮ್ಮ ಸಮಾಜ. ಇಲ್ಲಿ ನಾವು, ನೀವು ಎಲ್ಲಾ ಜೀವಿಸುತ್ತಿದ್ದೇವೆ. ಇದೆಲ್ಲ ನಡೆಯುತ್ತಿರುವುದು ನಾವು ಅವರ ತ್ಯಾಗವನ್ನು ಪೂರ್ಣವಾಗಿ ಗ್ರಹಿಸದ ಕಾರಣಕ್ಕಾಗಿಯೇ.
ಎಲ್ಲಾ ಕಡೆ ಅಂಬೇಡ್ಕರ್ ಇಂದು ಐಕಾನ್. ಎಲ್ಲರ ಬಾಯಲ್ಲೂ ಸ್ಲೋಗನ್, ಕಟೌಟ್, ಪೂಜೆ, ಭಾಷಣ, ಯೋಜನೆ-ಇದು ಅನಿವಾರ್ಯ ಕ್ಕಾಗಿ ನಡೆಯುವ ಕ್ರಿಯೆ. ಇವೆಲ್ಲ ಬಹಿರಂಗದ ಒತ್ತಡಕ್ಕಾಗಿ ನಡೆಯುತ್ತದೆ. ಆದರೆ ಅಂತರಂಗ ಇನ್ನೂ ಪೂರ್ತಿ ಕೊಳಕು.
 ಮಹಾಭಾರತದಲ್ಲಿ ಭೀಷ್ಮಾಚಾರ್ಯರು ಪಾಂಡವರ ಪಕ್ಷಪಾತಿ. ಮತ್ತು ಅವರನ್ನು ಗಾಢವಾಗಿ ಪ್ರೀತಿಸುತ್ತಿದ್ದರು. ಆದರೆ ಕೊನೆ ಕೊನೆಗೆ ಪಾಂಡವರ ವಿರುದ್ಧವೇ ಯುದ್ಧಕ್ಕೆ ನಿಂತರು. ಕಾರಣ; ಕೇಳಿದರೆ, ದುರ್ಯೋಧನನ ಅನ್ನದ ಋಣಕ್ಕಾಗಿ ನಾನು ಪಾಂಡವರ ವಿರುದ್ಧ ಯುದ್ಧ ಮಾಡಬೇಕಾಯಿತು! ಎಂದರು. ಅನ್ನದ ಋಣಕ್ಕಾಗಿ ಪ್ರೀತಿಸಿ ದವರ ವಿರುದ್ಧ ಯುದ್ಧ ಮಾಡುವ ಭೀಷ್ಮರಂತಹ ಒಣ ಪ್ರೇಮಿಗಳು ಮತ್ತು ಅವರಂತಹ ಒಣ ಪ್ರೇಮದ ರಾಜಕಾರಣಿಗಳು ನಮಗೆ ಬೇಡ.
ಮೇಲ್ನೋಟಕ್ಕೆ ಶೋಷಿತ ಸಮುದಾಯವನ್ನು ಅಪಾರವಾಗಿ ಪ್ರೀತಿಸುವಂತೆ ತೋರಿಕೊಂಡು ಯುದ್ಧದ ಸಮಯದಲ್ಲಿ ತನ್ನ ಸಮುದಾಯವನ್ನು ಬಲಿತೆಗೆದುಕೊಳ್ಳುವ ರಾಜಕಾರಣ ಬೇಡ.
ಹಾಗೆಯೇ ಇನ್ನೊಂದು ಮಾತು ಶೋಷಿತ ಸಮುದಾಯಗಳಿಗೆ ಉನ್ನತ ವರ್ಗದ ರಾಜಕಾರಣ ವಿಷದ ಹಾಲು ತುಂಬಿಕೊಂಡು ದಷ್ಟಪುಷ್ಟವಾಗಿ ಕಾಣುವ ಸ್ತನಗಳಂತೆ. ನೀವು ನಿಮ್ಮ ರಾಜಕೀಯ ದಾಹಕ್ಕೆ ಆ ಹಾಲನ್ನು ಕುಡಿದರೂ ಸಾಯುತ್ತೀರಿ , ಇಲ್ಲ ಹಸಿದು ಹಸಿದು ಸಾಯುತ್ತೀರಿ ಯೋಚಿಸಿ. ಇಷ್ಟೆಲ್ಲಾ ವೈರುಧ್ಯಗಳ ನಡುವೆಯೂ ಡಾ. ಅಂಬೇಡ್ಕರ್ ಈ ನೆಲದೊಳಗೆ ದಿನದಿಂದ ದಿನಕ್ಕೆ ವ್ಯಾಪಿಸುತ್ತಿದ್ದಾರೆ. ಅದಕ್ಕೆ ಕಾರಣ ಈ ನೆಲದೊಳಗೆ ಅವರು ಬಿತ್ತಿದ ಮಾತೃಪ್ರೇಮ.

Writer - ಮಲ್ಕುಂಡಿ ಮಹದೇವಸ್ವಾಮಿ

contributor

Editor - ಮಲ್ಕುಂಡಿ ಮಹದೇವಸ್ವಾಮಿ

contributor

Similar News

ಜಗದಗಲ
ಜಗ ದಗಲ