ಲೋಕಸಭೆ ಚುನಾವಣೆ ಮತ ಜಾಗೃತಿ: 1 ಲಕ್ಷಕ್ಕೂ ಅಧಿಕ ಜನರನ್ನು ಖುದ್ದು ಭೇಟಿಯಾದ ಶಿವಮೊಗ್ಗ ಜಿಲ್ಲಾಧಿಕಾರಿ

Update: 2019-04-13 18:48 GMT

ಶಿವಮೊಗ್ಗ, ಏ. 13: 'ಯಾರಿಗಾದ್ರೂ ಓಟ್ ಹಾಕಿ. ಆದ್ರೆ ಕಡ್ಡಾಯವಾಗಿ ಮತದಾನ ಮಾಡಿ...' ಇದು, ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ್‍ರವರ ಮಾತುಗಳು. ಸದ್ಯ ಈ ಮಾತುಗಳು, ಶಿವಮೊಗ್ಗ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಹೊಸ ಟ್ರೆಂಡಿಂಗ್ ಸೃಷ್ಟಿಸಿದೆ. ಸಾಕಷ್ಟು ಗಮನ ಸೆಳೆಯುತ್ತಿದೆ. 

ಹೌದು. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಮತದಾನ ಹೆಚ್ಚಳಕ್ಕೆ, ಚುನಾವಣಾ ಆಯೋಗವು ವ್ಯಾಪಕ ಕ್ರಮಕೈಗೊಂಡಿದೆ. ಹತ್ತು ಹಲವು ಪ್ರಚಾರ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಆದರೆ ಇದಕ್ಕೂ ಒಂದು ಹೆಜ್ಜೆ ಮುಂದಿಟ್ಟಿರುವ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ್‍ರವರು, ಮತದಾರರಿದ್ದ ಸ್ಥಳಕ್ಕೆ ತೆರಳಿ ಪ್ರಸ್ತುತ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ವಿನಮ್ರ ಮನವಿ ಮಾಡಿಕೊಳ್ಳುತ್ತಿದ್ದಾರೆ. 

ಕಳೆದ ಹಲವು ದಿನಗಳಿಂದ ಜಿಲ್ಲೆಯ ನಗರ-ಪಟ್ಟಣ, ಹೋಬಳಿ ಕೇಂದ್ರಗಳು ಮಾತ್ರವಲ್ಲದೆ, ಗ್ರಾಮ ಮಟ್ಟಕ್ಕೂ ತೆರಳಿ ಜಿಲ್ಲಾಧಿಕಾರಿಗಳು ಮತ ಜಾಗೃತಿ ನಡೆಸುತ್ತಿದ್ದಾರೆ. ಬಹುತೇಕ ಕಡೆ ಮನೆ ಮನೆಗೆ ತೆರಳಿ ಮತದಾನ ಕಾರ್ಯದಲ್ಲಿ ಕಡ್ಡಾಯವಾಗಿ ಭಾಗಿಯಾಗುವಂತೆ ಕೋರಿಕೊಳ್ಳುತ್ತಿದ್ದಾರೆ. 
'ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯನ್ನು ಯಶಸ್ವಿಗೊಳಿಸಿ. ಈ ಮೂಲಕ ಸದೃಢ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಾಣಕ್ಕೆ ಮುಂದಾಗೋಣ. ಯಾರಿಗಾದ್ರೂ ಓಟ್ ಹಾಕಿ. ಆದರೆ ಕಡ್ಡಾಯವಾಗಿ ಮತ ಹಾಕಿ' ಎಂದು ತಿಳಿಸುತ್ತಿದ್ದಾರೆ. 

ದಾಖಲೆ ನಿರ್ಮಾಣ: ಜಿಲ್ಲಾಧಿಕಾರಿ ಕಚೇರಿ ಮೂಲಗಳು ಹೇಳುವ ಪ್ರಕಾರ, ಇಲ್ಲಿಯವರೆಗೂ ಡಿ.ಸಿ. ಕೆ.ಎ.ದಯಾನಂದ್‍ರವರು ಸರಿಸುಮಾರು 1 ಲಕ್ಷಕ್ಕೂ ಅಧಿಕ ನಾಗರಿಕರನ್ನು ಭೇಟಿಯಾಗಿ ಮತ ಜಾಗೃತಿ ಮೂಡಿಸಿದ್ದಾರೆ. ಡಿಸಿ ಯೋರ್ವರು ಇಷ್ಟೊಂದು ದೊಡ್ಡ ಸಂಖ್ಯೆಯ ಜನರನ್ನು, ಸೀಮಿತಾವದಿಯಲ್ಲಿ ಖುದ್ದು ಭೇಟಿಯಾಗಿ ಮತಯಾಚಿಸಿದ್ದು ಇಡೀ ದೇಶ ಹಾಗೂ ರಾಜ್ಯದಲ್ಲಿ ಹೊಸ ದಾಖಲೆಯಾಗಿದೆ ಎಂದು ಹೇಳುತ್ತವೆ. 

'ಲೋಕಸಭೆ ಚುನಾವಣಾ ಸಂದರ್ಭದಲ್ಲಿನ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ, ವಿವಿಧ ಸಂಘಸಂಸ್ಥೆ ಹಾಗೂ ವಿದ್ಯಾರ್ಥಿಗಳ ಜೊತೆಗೂಡಿ ಡಿ.ಸಿ.ಯವರು ಜಿಲ್ಲೆಯ ವಿವಿಧೆಡೆ ನಾಗರೀಕರನ್ನು ಭೇಟಿಯಾಗುತ್ತಿದ್ದಾರೆ. ಸ್ವತಃ ಡಿಸಿ ಯವರೇ ಆಗಮಿಸಿ, ಮತದಾನ ಕಾರ್ಯದಲ್ಲಿ ಭಾಗಿಯಾಗುವಂತೆ ಮನವಿ ಮಾಡುತ್ತಿರುವುದು ನಾಗರಿಕರಲ್ಲಿ ಅಚ್ಚರಿಯ ಜೊತೆಗೆ ಹೊಸ ಪ್ರೇರೇಪಣೆ ಉಂಟು ಮಾಡುತ್ತಿದೆ. 

ಡಿಸಿಯವರ ಈ ಓಡಾಟದಿಂದ ಹತ್ತು ಹಲವು ಸಂಘಸಂಸ್ಥೆಗಳು ದಿನನಿತ್ಯ ಜಿಲ್ಲೆಯ ವಿವಿಧೆಡೆ ಮತ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಕಡ್ಡಾಯವಾಗಿ ಮತದಾನ ಕಾರ್ಯದಲ್ಲಿ ಭಾಗಿಯಾಗುವಂತೆ ಮನವಿ ಮಾಡುತ್ತಿರುವುದು ಕಂಡುಬರುತ್ತಿದೆ. ಜಿಲ್ಲಾಡಳಿತದ ಮತಜಾಗೃತಿ ಕಾರ್ಯಕ್ರಮಕ್ಕೆ ಭಾರೀ ದೊಡ್ಡ ಮಟ್ಟದ ಜನಬೆಂಬಲ ವ್ಯಕ್ತವಾಗುವಂತಾಗಿದೆ' ಎಂದು ಹೆಸರೇಳಲಿಚ್ಚಿಸದ ಹಿರಿಯ ಅಧಿಕಾರಿಯೋರ್ವರು ಮಾಹಿತಿ ನೀಡುತ್ತಾರೆ. 

'ಜಿಲ್ಲಾಧಿಕಾರಿಗಳು ತಮ್ಮ ಮನೆಗೆ ಆಗಮಿಸಿ, ಮತದಾರರ ಪಟ್ಟಿಯಲ್ಲಿ ಹೆಸರಿರುವ ನಿಮ್ಮ ಕುಟುಂಬ ಸದಸ್ಯರೆಲ್ಲರೂ ಕಡ್ಡಾಯವಾಗಿ ಮತದಾನ ಕಾರ್ಯದಲ್ಲಿ ಭಾಗಿಯಾಗಿ. ಯಾವುದೇ ಕಾರಣಕ್ಕೂ ಮತದಾನ ಕಾರ್ಯದಿಂದ ತಪ್ಪಿಸಿಕೊಳ್ಳಬೇಡಿ ಎಂದು ಹೇಳಿದರು. ಡಿಸಿಯೊಬ್ಬರು ತಮ್ಮ ಮನೆಗೆ ಆಗಮಿಸಿ ಮನವಿ ಮಾಡಿಕೊಂಡಿದ್ದು, ಇದೇ ಮೊದಲಾಗಿದೆ. ಇದು ತಮ್ಮಲ್ಲಿ ಸಂತಸ ಉಂಟು ಮಾಡಿದೆ. ನಮ್ಮ ಕುಟುಂಬ ಸದಸ್ಯರೆಲ್ಲರೂ ತಪ್ಪದೆ ಮತದಾನ ಕಾರ್ಯದಲ್ಲಿ ಭಾಗಿಯಾಗುತ್ತೆವೆ' ಎಂದು ಶಿವಮೊಗ್ಗದ ತಿಲಕ್‍ನಗರದ ನಿವಾಸಿಯೋರ್ವರು ಹೇಳುತ್ತಾರೆ. 

ಒಟ್ಟಾರೆ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ್‍ರವರ ಮತ ಜಾಗೃತಿಯೂ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಅವರ ಶ್ರಮ ಫಲದಾಯಕವಾಗಲಿದೆಯೇ? ಎಂಬುವುದನ್ನು ಮೇ 23 ರವರೆಗೆ ಕಾದು ನೋಡಬೇಕಾಗಿದೆ. 

ರಾಜ್ಯದಲ್ಲಿಯೇ ಪ್ರಥಮ ಸ್ಥಾನಕ್ಕೆ ಪ್ರಯತ್ನ 

ಶೇಕಡವಾರು ಮತದಾನ ಕಾರ್ಯದಲ್ಲಿ, ಶಿವಮೊಗ್ಗ ಜಿಲ್ಲೆಯು ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಬೇಕು ಎಂಬುವುದು ಡಿಸಿ ಕೆ.ಎ.ದಯಾನಂದ್‍ರವರ ಮಹಾದಾಸೆಯಾಗಿದೆ. ಈ ಕಾರಣದಿಂದ ಜಿಲ್ಲಾಧಿಕಾರಿಗಳು ಕಳೆದ ಹಲವು ದಿನಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಜಿಲ್ಲೆಯಾದ್ಯಂತ ಮತಜಾಗೃತಿ ನಡೆಸುತ್ತಿದ್ದಾರೆ. ಕೇವಲ ನಗರ-ಪಟ್ಟಣ ಮಾತ್ರವಲ್ಲದೆ, ಗ್ರಾಮೀಣ ಭಾಗಗಳಿಗೂ ಭೇಟಿಯಿತ್ತು ಕಡ್ಡಾಯ ಮತದಾನದ ಕುರಿತಂತೆ ಜನಜಾಗೃತಿ ಮೂಡಿಸುವ ಕಾರ್ಯದಲ್ಲಿ ತಲ್ಲೀನವಾಗಿದ್ದಾರೆ. ಬಿಡುವಿಲ್ಲದ ಸಭೆ-ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದಾರೆ. 

ಪ್ರತಿಯೋರ್ವರು ಕೈಜೋಡಿಸಬೇಕು: ಅಧ್ಯಕ್ಷ ಸಿ.ಎಸ್.ಷಡಾಕ್ಷರಿ

ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಮತದಾನ ಕಾರ್ಯದಲ್ಲಿ ಇಡೀ ರಾಜ್ಯಕ್ಕೆ ಶಿವಮೊಗ್ಗ ಜಿಲ್ಲೆ ಪ್ರಥಮ ಸ್ಥಾನ ಗಳಿಸಬೇಕು ಎಂಬ ಮಹತ್ತರ ಉದ್ದೇಶದಿಂದ ಜಿಲ್ಲಾಡಳಿತವು ವ್ಯಾಪಕ ಮತಜಾಗೃತಿ ಕಾರ್ಯಕ್ರಮ ನಡೆಸುತ್ತಿದೆ. ಜಿಲ್ಲಾಧಿಕಾರಿ ಕೆ.ಎ.ದಯಾನಂದ್‍ರವರೇ ನಾಗರಿಕರ ಬಳಿ ತೆರಳಿ ಕಡ್ಡಾಯವಾಗಿ ಮತದಾನ ಕಾರ್ಯದಲ್ಲಿ ಭಾಗಿಯಾಗಿ ಎಂದು ಹೇಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಜಿಲ್ಲಾಧಿಕಾರಿಗಳ ಈ ಪ್ರಯತ್ನಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕಾಗಿದೆ. ಅದರಂತೆ ಕಡ್ಡಾಯವಾಗಿ ಮತದಾನ ಕಾರ್ಯದಲ್ಲಿ ಭಾಗಿಯಾಗಿ, ಜಿಲ್ಲೆಯನ್ನು ಇಡೀ ರಾಜ್ಯದಲ್ಲಿಯೇ ಪ್ರಥಮ ಸ್ಥಾನಕ್ಕೆ ತರಲು ಪ್ರಯತ್ನಿಸಬೇಕಾಗಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿಯವರು ತಿಳಿಸುತ್ತಾರೆ. 

ಗ್ರಾಮ ವಾಸ್ತವ್ಯ ನಡೆಸುತ್ತಿದ್ದರು

ರಾಜ್ಯ ಸರ್ಕಾರ ಜನತಾ ದರ್ಶನ ನಡೆಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೂ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು. ಆದರೆ ಅದೆಷ್ಟೊ ಜಿಲ್ಲಾಡಳಿತಗಳು ಸರ್ಕಾರದ ಆದೇಶದ ಹೊರತಾಗಿಯೂ, ಜನತಾ ದರ್ಶನ ಆರಂಭಿಸಿರಲಿಲ್ಲ. ಆದರೆ ಶಿವಮೊಗ್ಗ ಡಿಸಿ ದಯಾನಂದ್‍ರವರು ಜನತಾ ದರ್ಶನದ ಜೊತೆಗೆ, ಗ್ರಾಮ ವಾಸ್ತವ್ಯ ಕೂಡ ಆರಂಭಿಸಿದ್ದರು. ನಕ್ಸಲ್ ಬಾಧಿತ, ಮಂಗನ ಕಾಯಿಲೆ ಪೀಡಿತ, ಕುಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಹೂಡಿ ಅಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು. ಡಿಸಿಯವರ ಈ ಕ್ರಮಕ್ಕೆ ಸರ್ಕಾರದ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. 

Writer - ವರದಿ: ಬಿ. ರೇಣುಕೇಶ್

contributor

Editor - ವರದಿ: ಬಿ. ರೇಣುಕೇಶ್

contributor

Similar News