ದೆವ್ವದ ನಡೆ
ನಾನು ಪಿಯುಸಿ ಓದುತ್ತಿದ್ದ ದಿನಗಳು. ಕಂಬಳ, ನಾಟಕ, ಯಕ್ಷಗಾನ ಮುಂತಾದ ಹುಚ್ಚುಗಳು ಅತಿಯಾಗಿದ್ದ ದಿನಗಳವು. ನಮ್ಮ ಪಕ್ಕದೂರು ಮಿತ್ತಕೋಡಿಯಲ್ಲಿ ಜೋಡುಕರೆ ಲವ-ಕುಶ ಹೊನಲು ಬೆಳಕಿನ ಕಂಬಳವಿತ್ತು. ಸಂಜೆ ಏಳು ಗಂಟೆಯ ಬಸ್ಸು ಹತ್ತಿ ಕಂಬಳಕ್ಕೆ ಹೋಗಿದ್ದೆವು. ಕಂಬಳವಿನ್ನೂ ಪ್ರಾರಂಭವಾಗಿರಲಿಲ್ಲ. ಅಲ್ಲಿಲ್ಲಿ ಸಂತೆ ತಿರುಗಾಡಿದೆವು. ಕೊನೆಯ ಬಸ್ಸು ಬರುವವರೆಗೂ ಕಂಬಳ ಶುರುವಾಗಿರಲಿಲ್ಲ. ಗೆಳೆಯರೆಲ್ಲಾ ಕೊನೆಯ ಬಸ್ಸಿಗೆ ಹಿಂದಿರುಗುವುದೆಂದು ನಿರ್ಧರಿಸಿದರು. ನನ್ನ ಮನಸ್ಸೇಕೋ ಕಂಬಳ ವೀಕ್ಷಿಸದೇ ಹಿಂದಿರುಗಲು ಒಪ್ಪಲಿಲ್ಲ. ನಾನು ನಿಂತೇ ಬಿಟ್ಟೆ. ಸುಮಾರು ಹತ್ತು ಗಂಟೆಯ ಹೊತ್ತಿಗೆ ಕಂಬಳ ಶುರುವಾಯಿತು.ಕಂಬಳ ನೋಡುತ್ತಾ ಗಂಟೆ ಹನ್ನೆರಡಾದದ್ದು ತಿಳಿಯಲೇ ಇಲ್ಲ ಎನ್ನುವುದಕ್ಕಿಂತಲೂ ಕಂಬಳ ವೀಕ್ಷಣೆಯ ಹುಚ್ಚು ಸಮಯ ಮೀರುತ್ತಿರುವುದರತ್ತ ಗಮನ ನೀಡದಂತೆ ಮಾಡಿತ್ತು.ಆಟೊದಲ್ಲಿ ಬರೋಣವೆಂದರೆ ಕೈಯಲ್ಲಿ ಕಾಸಿಲ್ಲ. ರಸ್ತೆ ಬದಿ ನಿಂತು ಇದ್ದವರ ಸ್ಕೂಟರ್, ಬೈಕುಗಳಿಗೆಲ್ಲಾ ಕೈ ತೋರಿಸಿ ತೋರಿಸಿ ಸುಸ್ತಾದೆ. ಕೊನೆಗೂ ಒಬ್ಬ ಪುಣ್ಯಾತ್ಮ ಸ್ಕೂಟರ್ ನಿಲ್ಲಿಸಿದ. ಆತನ ಜೊತೆ ಕೊಣಾಜೆಯವರೆಗೆ ಬಂದೆ. ಕೊಣಾಜೆಯಿಂದ ಪಜೀರು ಪೆರ್ಣಪಾಡಿಯ ನಮ್ಮ ಮನೆಗೆ ಬರಲು ಒಂದೂವರೆ ಕಿಲೋ ಮೀಟರ್ ನಡೆಯಬೇಕಿತ್ತು. ವಾಚಿನ ಮುಳ್ಳು ಒಂದು ಗಂಟೆಯ ಸಮೀಪವಿತ್ತು. ರಾತ್ರಿ ಹೊತ್ತು ಅಲ್ಲಲ್ಲಿ ಬೀದಿ ನಾಯಿಗಳ ಗಲಾಟೆ ಸರ್ವೇ ಸಾಮಾನ್ಯವಾದರೂ ಕೆಲವು ದಿನಗಳಿಂದ ನಮ್ಮೂರಿನಲ್ಲಿ ಹರಿದಾಡುತ್ತಿದ್ದ ಗಾಳಿ ಸುದ್ಧಿಯೊಂದು ಸ್ಮತಿಪಟಲಕ್ಕೆ ಅಪ್ಪಳಿಸಿ ಎದೆ ದಸಕ್ಕೆಂದಿತು.
ನಾನು ಎಳೆಯ ಹುಡುಗನಾಗಿದ್ದಾಗ ನಮ್ಮ ಮನೆ ಪಕ್ಕದ ಬಾಬು ಪೂಜಾರಿಯವರ ಹೆಣವನ್ನು ನಮ್ಮ ಮನೆಯ ಕಡೆ ಹೋಗುವ ರಸ್ತೆಯ ಬದಿಯಿರುವ ಗುಡ್ಡವೊಂದರಲ್ಲಿ ಸುಡಲಾಗಿತ್ತು. ಅಲ್ಲಿ ದೆವ್ವದ ಉಪಟಳವಿದೆ. ರಾತ್ರಿ ಹೊತ್ತು ಅಲ್ಲಿ ದೆವ್ವಗಳು ತಿರುಗಾಡುತ್ತಿರುತ್ತವೆ.... ಇತ್ಯಾದಿ ಇತ್ಯಾದಿ...
ನಾಯಿಗಳ ಅರ್ಭಟ ಜೋರಾದಂತೆಯೇ ನಾಯಿಗಳಿಗೆ ದೆವ್ವಗಳು ಕಾಣಿಸುತ್ತವೆಯಂತೆ. ಅದಕ್ಕೆ ಅವುಗಳು ಜೋರಾಗಿ ಬೊಗಳುತ್ತವಂತೆ..... ಎಂದೆಲ್ಲಾ ಗೆಳೆಯರು ಹೇಳುತ್ತಿದ್ದ ಕತೆಗಳು ನೆನಪಾಗಿ ಎದೆ ಬಡಿತ ಇಮ್ಮಡಿಯಾಯಿತು. ಭಯದಲ್ಲೇ ನಡೆಯುತ್ತಾ ಪಜೀರು ಮಸೀದಿಯ ಬಳಿ ತಲುಪಿದಾಗ ಮಸೀದಿಯಲ್ಲಿ ಮಲಗಿ ಮುಂಜಾನೆದ್ದು ಹೋದರೆ ಹೇಗೆಂಬ ಚಂಚಲತೆಯಲ್ಲಿ ಮನಸ್ಸು ಹೊಯ್ದಾಡಿತು. ಯಾವತ್ತೂ ಮಸೀದಿಯಲ್ಲಿ ಮಲಗದವ ಇಂದು ಒಬ್ಬಂಟಿಯಾಗಿ ಮಸೀದಿಯಲ್ಲಿ ಮಲಗಿದರೆ ಪ್ರಭಾತದ ನಮಾಝ್‌ಗೆ ಬರುವ ಮಸೀದಿಯ ಮೌಲವಿ ನನ್ನನ್ನು ವಿಚಾರಣೆ ಮಾಡಿದರೆ ಅವರಿಂದ ಹೇಗಾದರೂ ತಪ್ಪಿಸಿಕೊಳ್ಳಬಹುದು. ಆದರೆ ಹೆಚ್ಚಿನ ವಿಚಾರಣೆ ನಡೆದರೆ ಸುದ್ದಿ ತಿಳಿಯುತ್ತದೆ. ಗೆಳೆಯರು ಯಾರಾದರೂ ಬಾಯಿ ಬಿಟ್ಟರೆ ಮುಂದಿನ ಶುಕ್ರವಾರ ಅವರ ಪ್ರವಚನಕ್ಕೆ ವಸ್ತುವಾಗುತ್ತೇನೆಂದು ಹೆದರಿ ನಿರ್ಧಾರ ಬದಲಿಸಿ ಹೆಜ್ಜೆಗಳನ್ನು ಮನೆಯ ದಾರಿಯತ್ತ ತಿರುಗಿಸಿದೆ. ಮನೆಯ ಕಡೆ ಹೋಗುವ ಇಳಿಜಾರು ರಸ್ತೆಯಲ್ಲಿ ನಡೆಯುತ್ತಿರ ಬೇಕಾದರೆ ಮನದಲ್ಲಿದ್ದ ಬಿಳಿ ದಿರಿಸು ಧರಿಸಿದ, ಕಾಲವರೆಗೆ ಕೂದಲು ಇಳಿಬಿಟ್ಟ, ತಿರುಚಿದ ಪಾದಗಳ ದೆವ್ವದ ರೂಪ ಕಣ್ಮುಂದೆ ಸುಳಿದಂತಾಗಿ ಅಧೀರನಾಗಿ ಬಿಟ್ಟೆ. ಜೇಬಿಗೆ ಕೈ ಹಾಕಿದಾಗ ಕೊನೆಯ ಬೀಡಿ ಮತ್ತು ಮಿಂಟೋಸ್ ಚಾಕ್ ಲೇಟ್ ಉಳಿದಿತ್ತು. (ಆ ದಿನಗಳಲ್ಲಿ ಕಾಲೇಜು ಪರಿಸರದಲ್ಲಿ ಸಿಗರೇಟು ಸೇದುತ್ತಿದ್ದೆನಾದರೂ ಊರಲ್ಲಿ ಆ ಕಾಲಕ್ಕೆ ರೂಪಾಯಿಗೆ ನಾಲ್ಕು ಸಿಗುತ್ತಿದ್ದ ಬೀಡಿಯೇ ಗತಿ) ಕೊನೆಯ ಬೀಡಿ ಹಚ್ಚಿ ಬಿರಬಿರನೆ ನಡೆದೆ.
ಉಹುಂ... ದೆವ್ವದ ಭಯ ಮನದೊಳಗೆ ಏರುತ್ತಲೇ ನನ್ನೊಳಗೆ ಅಮೂರ್ತ ರೂಪದಲ್ಲಿದ್ದ ದೆವ್ವ ಮೂರ್ತ ರೂಪ ತಳೆಯುತ್ತಲೇ ಇತ್ತು. ಅದೇ ಬಿಳಿ ಧಿರಿಸು..... ಕಾಲವರೆಗೂ ಇಳಿಬಿಟ್ಟ ಕೂದಲ ರಾಶಿ.... ತಿರುಚಿದ ಪಾದ..... ಬಾಬು ಪೂಜಾರಿಯ ಹೆಣ ಸುಟ್ಟ ಜಾಗದ ಸನಿಹ ತಲುಪುತ್ತಲೇ ಎದೆ ಬಡಿತದ ಸದ್ದು ಡೋಲು ಬಡಿತದ ಸದ್ದಿನಂತಾಗಿ ಬಿಟ್ಟು ಕಿವಿ ತಮಟೆಗೆ ಅಪ್ಪಳಿಸತೊಡಗಿತು.
ಭಯದಿಂದ ಕೈ ಕಾಲುಗಳು ಕಂಪಿಸತೊಡಗಿದವು. ನಡಿಗೆಯ ವೇಗ ಹೆಚ್ಚಿಸಿದೆ. ಹೆಚ್ಚು ಕಡಿಮೆ ಆ ಜಾಗ ತಲುಪಿಯೇ ಬಿಟ್ಟೆ. ಗುಡ್ಡದಲ್ಲಿ ಏನೋ ಚರಪರ ಸದ್ದು ಕೇಳಿಸಿದ್ದೊಂದುಂಟು... ಕೈಯಲ್ಲಿದ್ದ ಬೀಡಿ ಎಸೆದು ಹವಾಯಿ ಚಪ್ಪಲಿ ಕೈಯಲ್ಲಿ ಹಿಡಿದು ಬದುಕಿದರೆ ಬೇಡಿ ತಿಂದೇನೆಂದು ಓಡಿಯೇ ಬಿಟ್ಟೆ. ಮನೆ ತಲುಪುವವರೆಗೂ ಅದೇ ವೇಗದಲ್ಲಿ ಓಡಿದ್ದೆ. ಬದುಕಿದೆಯಾ ಬಡ ಜೀವ ಎನ್ನುತ್ತಾ ನಿಟ್ಟುಸಿರು ಬಿಡಬೇಕಾದರೆ ಅಕ್ಷರಶಃ ಸ್ನಾನ ಮಾಡಿದಷ್ಟು ಬೆವೆತು ಬಿಟ್ಟಿದ್ದೆ. ಬಟ್ಟೆ ಪೂರಾ ಬೆವರಿನಿಂದ ಒದ್ದೆಯಾಗಿತ್ತು. ಕಾಲುಗಳು ಇನ್ನೂ ನಡುಗುತ್ತಲೇ ಇತ್ತು....
ಪುಣ್ಯಕ್ಕೆ ಮರುದಿನ ಜ್ವರವೇನೂ ಬಂದಿರಲಿಲ್ಲ.
ಮರುದಿನ ಸಾವಕಾಶವಾಗಿ ನಡೆದ ಘಟನೆಗಳನ್ನೆಲ್ಲಾ ನೆನಪಿಸಿ ಯೋಚಿಸತೊಡಗಿದೆ. ಅದೇನಿರಬಹುದು..ಆ ಚರಪರ ಸದ್ದು...? ನಿಜಕ್ಕೂ ದೆವ್ವದ್ದೇ ಸದ್ದಾಗಿದ್ದಿರಬಹುದೇ...?
ಮನದೊಳಗೆ ಅವ್ಯಕ್ತವಾಗಿದ್ದ ಭಯ. ಆ ದಾರಿಯಲ್ಲಿ ಹೋಗುವಾಗ ಇನಿತು ಆಚೀಚೆ ನೋಡಲೂ ಬಿಡಲಿಲ್ಲ. ಸದಾ ಕಾಲೇಜು ಬಿಟ್ಟು ಮೈದಾನದಲ್ಲಿ ಕ್ರಿಕೆಟ್ ಆಡಿ ಸುಮಾರು ಏಳು ಗಂಟೆಯ ಹೊತ್ತಿಗೆ ಊರು ತಲುಪಿದರೂ ಸೊಸೈಟಿ ಕಟ್ಟಡದ ಜಗಲಿಯಲ್ಲಿ ಇಸ್ಪೀಟೆಲೆಗಳನ್ನು ಕಲಸಿ ಎಂಟು ಗಂಟೆಯ ಬಳಿಕವೇ ಮನೆಯತ್ತ ಹೊರಡುತ್ತಿದ್ದವ ಒಂದು ವಾರ ಕಾಲ ಕತ್ತಲಾವರಿಸುವ ಮುನ್ನವೇ ಮನೆ ಸೇರತೊಡಗಿದೆ. ಅದೂ ಆ ಜಾಗ ತಲುಪುವ ಮುನ್ನವೇ ಓಟ ಪ್ರಾರಂಭಿಸುತ್ತಿದ್ದೆ.
ದಿನಗಳೆಯುತ್ತಿದ್ದಂತೆಯೇ ಮನದೊಳಗಿನ ಭಯವೂ ಕಳೆಯತೊಡಗಿತು. ಒಂದು ರವಿವಾರ ಧೈರ್ಯ ಮಾಡಿ ದೆವ್ವ ಇದ್ದಿರಬಹುದಾದ ಗುಡ್ಡದ ಬಳಿ ಹೋದೆ. ಅಲ್ಲೆಲ್ಲಾ ವೀಕ್ಷಿಸಿದಾಗ ಗುಡ್ಡದಲ್ಲಿ ನೆಲದ ತುಂಬಾ ಹರಡಿದ್ದ ತರಗೆಲೆಗಳು ನನ್ನ ಭಯಕ್ಕೆ ಸಮರ್ಪಕ ಉತ್ತರ ನೀಡಿದವು. ನಡೆದದ್ದಿಷ್ಟೇ, ತರಗೆಲೆಗಳ ಮೇಲೆ ಯಾವುದೋ ಪ್ರಾಣಿಗಳು ಸಂಚರಿಸುವಾಗ ಆಗುವ ಚರಪರ ಸದ್ದೇ ಆ ದೆವ್ವದ ನಡೆ...