2019ರಲ್ಲಿ ತಪ್ಪಿ ಹೋಗಿರುವ ಮುಸ್ಲಿಂ ಮತ ಮತ್ತು ಧ್ವನಿ

Update: 2019-04-14 18:30 GMT

ರಾಷ್ಟ್ರೀಯ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಮುಸ್ಲಿಮರಿಗೆ ಒಂದು ಪಾಲುಗಾರಿಕೆ ನೀಡಲು ತನ್ನ ಕಕ್ಷೆ ಮೀರಿ ಒಂದು ಹೆಜ್ಜೆ ಮುಂದೆ ಇಡಲು ಆಳುವ ಪಕ್ಷ ಸಿದ್ಧವಿಲ್ಲ. ಮುಸ್ಲಿಮರಲ್ಲಿ ವ್ಯಾಪಕವಾಗಿರುವ ಬಡತನ ಮತ್ತು ಅವಕಾಶ ವಿಹೀನತೆ ಕೊರತೆಯ ಬಗ್ಗೆ ಅದಕ್ಕೆ ಪಶ್ಚಾತ್ತಾಪ ಭಾವನೆ ಇಲ್ಲ.

2014ರ ಲೋಕಸಭಾ ಚುನಾವಣೆಯ ಅತ್ಯಂತ ಆಶ್ಚರ್ಯಕರ, ಆಘಾತಕಾರಿ ವಿಷಯವೆಂದರೆ ಉತ್ತರ ಪ್ರದೇಶದಿಂದ ಲೋಕಸಭೆಗೆ ಚುನಾಯಿತರಾದ 80 ಮಂದಿ ಸಂಸತ್ ಸದಸ್ಯರಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸದಸ್ಯನಿಲ್ಲ. ದೇಶದ ಅತ್ಯಂತ ದೊಡ್ಡ ರಾಜ್ಯದಿಂದ ಮುಸ್ಲಿಂ ಪ್ರಾತಿನಿಧ್ಯವನ್ನು ಎಷ್ಟೊಂದು ಸಂಪೂರ್ಣವಾಗಿ ಅಳಿಸಿ ಹಾಕಲಾಯಿತೆಂದರೆ ಮುಸ್ಲಿಂ ನಾಯಕತ್ವವಾಗಲಿ ಅಥವಾ ಯಾವುದೇ ಸೆಕ್ಯೂಲರ್ ಸಂಘಟನೆಗಳಾಗಲಿ ಐದು ವರ್ಷಗಳ ಬಳಿಕ ಕೂಡ ಅದರ ಬಗ್ಗೆ ಮಾತನಾಡದಷ್ಟು ಆಘಾತಗೊಂಡವು. ಇನ್ನೊಂದೆಡೆ ದೇಶದ ಅತ್ಯಂತ ದೊಡ್ಡ ಅಲ್ಪಸಂಖ್ಯಾತ ಸಮುದಾಯಕ್ಕೆ ಯಾವುದೇ ರಿಯಾಯಿತಿ ತೋರುವ ಮಾತು ಬಿಡಿ; ಒಂದು ಸಾಂಕೇತಿಕವಾದ ಕ್ರಮವನ್ನು ಕೂಡ ತೆಗೆದುಕೊಳ್ಳದೆ ತಾನು ರಾಷ್ಟ್ರೀಯ ಅಧಿಕಾರವನ್ನು ಗೆಲ್ಲಬಲ್ಲೆ ಎಂದು ಬಿಜೆಪಿ ತೀರ್ಮಾನಕ್ಕೆ ಬಂತು. ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾಪಕ್ಷ 80 ಸ್ಥಾನಗಳಲ್ಲಿ 73 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ನರೇಂದ್ರ ಮೋದಿಯವರನ್ನು ಸರ್ವಾಧಿಕಾರದ ಶಿಬಿರಗಳ ಮೇಲೆ ಅಭಿಷಿಕ್ತರನ್ನಾಗಿಸಿದ್ದು ಇದೇ ಉತ್ತರ ಪ್ರದೇಶದ ಭಾರೀ ಗೆಲುವು.
2014ರ ಯುಪಿ ಫಲಿತಾಂಶವು ನಮ್ಮ ಸಾಂವಿಧಾನಿಕ ನಟನೆಗಳಿಗೆ,ಊಹೆಗಳಿಗೆ, ಬದ್ಧತೆಗಳಿಗೆಮತ್ತು ರಾಷ್ಟ್ರೀಯ ಅಧಿಕಾರ ಹಂಚಿಕೆಯಲ್ಲಿ ಮುಸ್ಲಿಮರಿಗೆ ಒಂದು ಮುಖ್ಯವಾದ ಧ್ವನಿ ಇದೆ ಎಂಬ ಅನ್ನಿಸಿಕೆಗೆ ಬದ್ಧ ಮಾರಕ ಹೊಡೆತವಾಗಿತ್ತು. 2017ರ ಅಸೆಂಬ್ಲಿ ಚುನಾವಣೆಗಳಲ್ಲಿ ಮುಸ್ಲಿಮರನ್ನು ಅಂಚಿಗೆ ತಳ್ಳುವ, ಮಾರ್ಜಿನಲೈಸ್ ಮಾಡುವ ಗುಜರಾತ್ ಮಾದರಿಯ ಪ್ರಯತ್ನಕ್ಕೆ ಸಿಂಧುತ್ವ ಆಶೀರ್ವಾದ ದೊರಕಿತು. ಇದರ ಕಂಪನಗಳು ಗುಜರಾತ್‌ನ ಆಚೆಗೂ ಅನುಭವಕ್ಕೆ ಬಂದಿವೆ.ಎಮ್‌ಐಎಮ್‌ನ ಅಸದುದ್ದೀನ್ ಉವೈಸಿಯನ್ನು ಹೊರತುಪಡಿಸಿ, ಯಾವುದೇ ರಾಜಕೀಯ ಪಕ್ಷವಾಗಲಿ ಅಥವಾ ನಾಯಕನಾಗಲಿ ತಾನು ಮುಸ್ಲಿಮರ ಪರವಾಗಿ ಮಾತಾಡುತ್ತಿದ್ದೇವೆ ಎಂದು ತೋರಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಮುಸ್ಲಿಮರ ಕಾಳಜಿಗಳು, ಆತಂಕಗಳು, ಅವರ ಅಭದ್ರತೆ, ಅವರ ಅಸಹಾಯಕತೆಯ ಬಗ್ಗೆ ಮಾತನಾಡಿದರೆ ತಾವು ಎಲ್ಲಿ ‘ಅಲ್ಪಸಂಖ್ಯಾತರ ತುಷ್ಠೀಕರಣ’ದ ಆಪಾದನೆಗೆ ಗುರಿಯಾಗುತ್ತೇವೋ ಎಂದು ತಿಳಿಯುವಂತಾಗಿದೆ.
ಅಲ್ಪಸಂಖ್ಯಾತರಿಗೆ ನೀಡಲಾಗಿದ್ದ ಭಾಗೀದಾರಿಕೆಯ, ಬದ್ಧತೆಯ, ಆಶ್ವಾಸನೆಯ ಈಡೇರಿಕೆಯಿಂದ ಹಿಂದೆ ಸರಿದಿರುವುದರ ವಿರುದ್ಧ ಪ್ರತಿಭಟಿಸಲು ಯಾರೂ ಸಿದ್ಧರಾಗಿರುವಂತೆ ಕಾಣುತ್ತಿಲ್ಲ. ಈ ಆಶ್ವಾಸನೆಯನ್ನು ಸಂಪೂರ್ಣವಾಗಿ ತ್ಯಜಿಸಲಾಗಿಲ್ಲವಾದರೂ,ಇದು ದುರ್ಬಲಗೊಂಡಿದೆ; ತನ್ನ ಹಿಂದಿನ ಕಾವನ್ನು ಕಳೆದುಕೊಂಡಿದೆ ಎಂದು ಹೇಳಲು ಕೂಡ ಯಾರೂ ಸಿದ್ಧರಿಲ್ಲ. ಪ್ರತಿಯೊಬ್ಬರು ನಮ್ಮ ಸಾಂಸ್ಕೃತಿಕ ಹಾಗೂ ಧಾರ್ಮಿಕ ವಿವಿಧತೆಗಳನ್ನು, ಬಹುಮುಖತ್ವವನ್ನು ರಕ್ಷಿಸಲು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಜುಮ್ಲಾ ಸಾಕು; ಬೇರೆ ಇನ್ನೇನೂ ಬೇಕಿಲ್ಲ ಎಂದು ನಟಿಸುವುದರಲ್ಲೇ ತೃಪ್ತರಾಗಿದ್ದಾರೆ.
ರಾಷ್ಟ್ರೀಯ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಮುಸ್ಲಿಮರಿಗೆ ಒಂದು ಪಾಲುಗಾರಿಕೆ ನೀಡಲು ತನ್ನ ಕಕ್ಷೆ ಮೀರಿ ಒಂದು ಹೆಜ್ಜೆ ಮುಂದೆ ಇಡಲು ಆಳುವ ಪಕ್ಷ ಸಿದ್ಧವಿಲ್ಲ. ಮುಸ್ಲಿಮರಲ್ಲಿ ವ್ಯಾಪಕವಾಗಿರುವ ಬಡತನ ಮತ್ತು ಅವಕಾಶ ವಿಹೀನತೆ ಕೊರತೆಯ ಬಗ್ಗೆ ಅದಕ್ಕೆ ಪಶ್ಚಾತ್ತಾಪ ಭಾವನೆ ಇಲ್ಲ.
ಉತ್ತರ ಪ್ರದೇಶದ ಅಸೆಂಬ್ಲಿ ಚುನಾವಣೆಗಳಲ್ಲಿ ಹಿಂದೂ ಮತಗಳ ಭರ್ಜರಿ ಕೊಯ್ಲ್ಲಿನ ಬಳಿಕ ದೇಶದ ಮೇಲೆ ತ್ರಿವಳಿ ತಲಾಖ್ ಮಸೂದೆಯನ್ನು ಹೇರಲಾಯಿತು.ಈಗ ಮುಸ್ಲಿಂ ‘ನಾಯಕತ್ವ’ದಿಂದ ವ್ಯಕ್ತವಾದ ವಕಸೂತ್ರವಿಲ್ಲದ ಪ್ರತಿಭಟನೆಯನ್ನು ಹಿಂದುಳಿದಿರುವಿಕೆ ಮತ್ತು ಸಮಾಜವನ್ನು ಹಿಂದಕ್ಕೆ ತಳ್ಳುವ ಧಾರ್ಮಿಕ ಆಚರಣೆಗಳಲ್ಲಿ ಬಿದ್ದು ಹೊರಳಾಡುತ್ತಿರುವ ಒಂದು ಸಮುದಾಯದ ಪಡಿಯಚ್ಚು (ಸ್ಟೀರಿಯೋಟೈಪ್) ಪ್ರತಿಮೆಗಳನ್ನು ಇನ್ನಷ್ಟು ಆಳವಾಗಿ ಊರಲು ಬಳಸಿಕೊಳ್ಳಲಾಯಿತು. ಹಿಂದೂ ಮಧ್ಯಮ ವರ್ಗಗಳಿಗೆ ತಾವು ಮುಸ್ಲಿಮರಿಗಿಂತ ನೈತಿಕವಾಗಿ ಉತ್ತಮ ಮತ್ತು ಸಾಂಸ್ಕೃತಿಕವಾಗಿ ಅವರಿಗಿಂತ ಮೇಲು ಎಂದು ಅನ್ನಿಸುವಂತೆ ಮಾಡಲಾಯಿತು. ಮೋದಿಯವರ ಜನಸಂದಣಿಯನ್ನು,ಗುಂಪನ್ನು ಅದು (ಮುಸ್ಲಿಮರನ್ನು) ಆಧುನೀಕರಿಸುವಲ್ಲಿ ತೋರಿದ ಭಾರೀ ಕಾಳಜಿಗಾಗಿ ಹಾಡಿಹೊಗಳಲಾಯಿತು., ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
ಇದೆಲ್ಲದರ ಫಲಿತಾಂಶ ಊಹಿಸಿದಂತೆಯೇ ಇತ್ತು: ಹಿಂದೂ ಮತ ಬ್ಯಾಂಕ್ ಕ್ರೊಡೀಕರಣ, ಮತ ಬ್ಯಾಂಕ್ ಧ್ರುವೀಕರಣ ಮತ್ತೊಮ್ಮೆ ಸಿಂಧುಗೊಳಿಸಲ್ಪಟ್ಟಿತು.ಇದರಿಂದ ಇನ್ನಷ್ಟು ಧೈರ್ಯ ಪಡೆದ ನವಚಾಣಕ್ಯರು ಮತ್ತಷ್ಟು ಮುಂದಕ್ಕೆ ಸಾಗಿ, ಒಂದು ಪೌರತ್ವ ಮಸೂದೆಯನ್ನು ಮಂಡಿಸಿದರು. ಇದರಲ್ಲಿ ಮುಸ್ಲಿಮರನ್ನು ಗಮನಾರ್ಹವಾಗಿ ಹೊರಗಿಡಲಾಗಿತ್ತು. ಬಹಳ ಅರ್ಥ ತುಂಬಿರುವ ‘ಗೆದ್ದಲು ಹುಳುಗಳು’ ಮತ್ತು ‘ಒಳಗಿನ ಶತ್ರುಗಳು’ ಎಂಬಂತಹ ಶಬ್ದಗಳಿಂದ ಕೂಡಿದ ವಿಷಕಾರಿಯಾದ ಒಂದು ಕಥಾನಕವನ್ನು ಸೃಷ್ಟಿಸಲಾಯಿತು.
ಸರಕಾರಕ್ಕೆ ಪೌರತ್ವ ಮಸೂದೆಯಾಗಲಿ, ಅಥವಾ ತ್ರಿವಳಿ ತಲಾಖ್ ಮಸೂದೆಯಾಗಲಿ ಜಾರಿಯಾಗಲೇಬೇಕೆಂಬ ಉದ್ದೇಶವಿರಲಿಲ್ಲ.ಮುಖ್ಯವಾಗಿ 9/11ರ ನಂತರದ ಹಿಂದೂಗಳ ಪೂರ್ವಗ್ರಹಗಳನ್ನು ಮತ್ತು ಭಾವೋದ್ರೇಕಗಳನ್ನು ಇಸ್ಲಾಂ ಧರ್ಮದ ಹಾಗೂ ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವುದು ಹಾಗೂ ಕ್ರೋಡೀಕರಿಸುವುದೇ ಅದರ ಉದ್ದೇಶ ಆಗಿತ್ತು. ಹಿಂದೂಗಳ ಸುತ್ತ ಹೊಸ ಬುಡಕಟ್ಟು ಆದಿವಾಸಿ ಗಡಿರೇಖೆಗಳನ್ನು ಎಳೆಯಲಾಯಿತು.
ಬಿಜೆಪಿ ಅಧಿಕಾರಕ್ಕೆ ಏರಿದ್ದರ ಪರಿಣಾಮವಾಗಿ ಭಾರತದಲ್ಲಿ ಮುಸ್ಲಿಂ ಕಾನೂನು ರಚನೆಕಾರರ ಸಂಖ್ಯೆ ಕೂಡ ಕುಸಿಯುತ್ತಾ ಹೋಯಿತು.ಮುಸ್ಲಿಮರನ್ನು ದೇಶದ ಮುಖ್ಯವಾಹಿನಿಯಿಂದ ಮತ್ತಷ್ಟು ಬದಿಗೆ ಸರಿಸುವ ಪ್ರಯತ್ನಗಳು ನಡೆದವು. ರಾಜಕೀಯ ಪರಿಭಾಷೆಯ ನುಡಿಗಟ್ಟುಗಳು ಬದಲಾಗತೊಡಗಿದವು. ಸಮುದಾಯದ ಹೆಸರನ್ನು ಹೇಳದೆ ‘ಗೆದ್ದಲುಹುಳು’ ಮತ್ತು ‘ನುಸುಳುಕೋರರು’ ಇತ್ಯಾದಿ ಪದಗಳನ್ನು ಬಳಸಿ ಅವುಗಳು ಯಾರನ್ನು ಉದ್ದೇಶಿಸಿ ಬಳಸಲಾದ ಪದಗಳೆಂಬುದನ್ನು ದೇಶದ ಜನತೆಯ ಊಹೆೆಗೆ ಬಿಡಲಾಯಿತು.
ಈಗ ರಾಷ್ಟ್ರೀಯವಾದಿ ಕಥಾನಕಗಳ ಒಂದು ಮಹಾಪೂರವೇ ಹರಿದು ಬರುತ್ತಿದೆ. ಸರ್ಜಿಕಲ್ ದಾಳಿಯ ಬಳಿಕ ಒಂದು ಕಥಾನಕ, ಪುಲ್ವಾಮ ದಾಳಿಯ ಬಳಿಕ ಒಂದು ಕಥಾನಕ, ಬಾಲಕೋಟ್ ಕಥಾನಕ. ಪ್ರತಿ ಕಥಾನಕವೂ ಹಿಂದಿನ ಕಥಾನಕಕ್ಕಿಂತ ಹೆಚ್ಚು ಗಮನವನ್ನು ಬೇಡುವ ಒಂದು ಸಮುದಾಯವನ್ನು ಹಿಂದಿನ ಕಥಾನಕಕ್ಕಿಂತ ಹೆಚ್ಚು ಸಣ್ಣದಾಗಿಸುವ, ದೇಶದ ಒಳಗೆ ಮತ್ತು ಹೊರಗೆ ಇರುವ ಶತ್ರುಗಳ ಬಗ್ಗೆ ನಮ್ಮನ್ನು ಹೆಚ್ಚು ಬೆದರಿಸುವ, ಹೆದರಿಸುವ ಕಥಾನಕ.
ಹೀಗಾಗಿ ಪ್ರಧಾನಿಯವರು ತನ್ನ ಎಲ್ಲಾ ರಾಜಕೀಯ ಎದುರಾಳಿಗಳನ್ನು ಮತ್ತು ಟೀಕಾಕಾರರನ್ನು ಪಾಕಿಸ್ತಾನದ ಏಜಂಟರುಗಳೆಂದು ಕರೆಯುತ್ತಾ ದೇಶದಾದ್ಯಂತ ಸಂತೋಷದಿಂದ ಓಡಾಡುತ್ತಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ ಮತ್ತು ಈ ಎಲ್ಲಾ ಖಂಡನೆಗಳ ಉಪಪಠ್ಯ, ಸೂಚ್ಯಾರ್ಥವೆಂದರೆ ಮುಸ್ಲಿಮರ ಬಗ್ಗೆ ಹಾಗೂ ಅವರು ಸಾಕಷ್ಟು ರಾಷ್ಟ್ರೀಯ ಭಾವನೆಗಳನ್ನು, ದೇಶಪ್ರೇಮವನ್ನು ಹೊಂದಿಲ್ಲ ಎಂಬ ಬಗ್ಗೆ ಬೇಕಾಬಿಟ್ಟಿ ಆಪಾದನೆ.
2002ರ ಗುಜರಾತ್ ಚುವನಾವಣೆಗಳಲ್ಲಿ ಮೊದಲ ಬಾರಿಗೆ ಮಾಡಲಾದ ಮುಸ್ಲಿಮರ ಮತ್ತು ಪಾಕಿಸ್ತಾನದ ನಡುವೆ ಕೊಂಡಿಬೆಸೆಯುವ ಈ ಕೆಲಸವನ್ನು ಈಗ ರಾಷ್ಟ್ರಮಟ್ಟದಲ್ಲಿ ಪುನಃ ಪುನಃ ಮಾಡಲಾಗುತ್ತಿದೆ; ಪುನರಾವರ್ತಿಸಲಾಗುತ್ತಿದೆ. ಪಾಕಿಸ್ತಾನದಿಂದ ಕಾರ್ಯವೆಸಗುವ ಜಿಹಾದಿಗಳ ಜತೆ ಭಾರತದ ಮುಸ್ಲಿಮರು ಗುಟ್ಟಾಗಿ ಕೈ ಜೋಡಿಸಿದ್ದಾರೆ ಎಂಬ ರೀತಿಯಲ್ಲಿ ಅವರನ್ನು ಬಿಂಬಿಸಲಾಗುತ್ತಿದೆ. ಬಾಹ್ಯ ಶತ್ರುವಿಗೆ ನೆರವು ನೀಡುವ,ಬಾಹ್ಯ ಶತ್ರುವನ್ನು ಪ್ರೋತ್ಸಾಹಿಸುವ ಆಂತರಿಕ ಶತ್ರು ಎಂದು ಮುಸ್ಲಿಮರನ್ನು ತೋರಿಸಲಾಗುತ್ತಿದೆ.
ರಾಷ್ಟ್ರದಾದ್ಯಂತ ನಡೆಯುವ ಇಂತಹ ಮಿತಿಮೀರಿದ ಅಭಿಯಾನವನ್ನು ಪ್ರಗತಿಪರ ಹಾಗೂ ಪುರೋಗಾಮಿ ಧ್ವನಿಗಳು ಪ್ರತಿಭಟಿಸಿದಾಗ ಅವರನ್ನು ‘ಟುಕುಡೆ -ಟುಕುಡೆ ಗ್ಯಾಂಗ್’ ಎಂದು ಖಂಡಿಸಲಾಗುತ್ತದೆ, ಅವಮಾನಿಸಲಾಗುತ್ತದೆ.ಇವೆಲ್ಲದರ ಹಿಂದಿರುವ ಉದ್ದೇಶ ಸರಳವಾಗಿ ಮತ್ತು ಸ್ಪಷ್ಟವಾಗಿ ಹೇಳುವುದಾದರೆ, ಹಿಂದೂಗಳಿಗೆ ತಾವು ಅಭದ್ರರ ು,ತಮಗೆ ಇಲ್ಲಿ ಭದ್ರತೆ ಇಲ್ಲ, ತಮ್ಮ ಮೇಲೆ ಯಾವಾಗ ಬೇಕಾದರೂ ದಾಳಿ ನಡೆಯಬಹುದು ಎಂದು ಅನ್ನಿಸುವಂತೆ ಮಾಡುವುದು.ಸಂಪಾದಕೀಯ ಲೇಖಕರು ಇದನ್ನು ಉದ್ದೇಶ ಪೂರ್ವಕವಾದ,ಸಿನಿಕಲ್ ಆದ ಕರಾಮತ್ತಿನ ಓಟ್‌ಬ್ಯಾಂಕ್ ರಾಜಕಾರಣವೆಂದು ಟೀಕಿಸಬಹುದು; ಹಳಿಯಬಹುದು.ಆದರೆ ತಮ್ಮದೇ ರಾಗದಲ್ಲಿ ಸ್ತುತಿಸಲ್ಪಡುವ ಚಾಣಕ್ಯರು ನೈತಿಕತೆಯ ಕುರಿತಾದ ಯಾವುದೇ ಮಾತಿಗೂ ಜಗ್ಗುವವರಲ್ಲ. ಇದರ ಬಗ್ಗೆ ಅನುಮಾನ ಬೇಡ, ಅವರು ಹಿಂದೂ ಓಟ್ ಬ್ಯಾಂಕನ್ನು ಕ್ರೋಡೀಕರಿಸಲು ತಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಾರೆ. ಎಲ್ಲಾ ತಂತ್ರಗಳನ್ನು ಬಳಸುತ್ತಾರೆ.
ಕಳೆದ ಐದು ವರ್ಷಗಳಲ್ಲಿ ಮೋದಿ ಆಡಳಿತದ ಸಾಧನೆಗಳ ಬಗ್ಗೆ ಬಿಜೆಪಿ/ಆರೆಸ್ಸೆಸ್ ಥಿಂಕ್-ಟ್ಯಾಂಕ್‌ಗಳು ಗಣನೀಯಪ್ರಮಾಣದಲ್ಲಿ ತೃಪ್ತಿಪಟ್ಟುಕೊಳ್ಳಬಹುದು. ಈಗ ಹಿಂದೂ ತನ್ನ ಪೂರ್ವಗ್ರಹಗಳ ಬಗ್ಗೆ ಪಶ್ಚಾತ್ತಾಪದ ಮಾತುಗಳನ್ನಾಡುವುದಿಲ್ಲ.ಹೊಸ ಭಾರತದಲ್ಲಿ ಒಂದು ಹೊಸ ಹೆಮ್ಮೆ ಇದೆ.ಇದೆಲ್ಲವೂ ‘ಈ ಜನಗಳ’ ವಿರುದ್ಧ ಇರಬೇಕಾದ, ಆವಶ್ಯಕವಾದ ಹಾಗೂ ಕ್ರಮಬದ್ಧವಾದ ದಾಳಿಯೆಂದು ಭಾವಿಸಲಾಗಿದೆ. ಹಿಂದೂಗಳಿಗೆ ತಾವು ಮುತ್ತಿಗೆಗೊಳಗಾಗಿದ್ದೇವೆ, ತಮಗೆ ಬೆದರಿಕೆಯಿದೆೆ ಎಂಬ ಭಾವನೆ ಬರುವಂತೆ ಮಾಡಲಾಗಿದೆ, ಮತ್ತು ‘ಮುಸ್ಲಿಮರಿಗೆ ಅವರ ಸ್ಥಾನವನ್ನು ತೋರಿಸಬೆೇಕು’ಎಂಬ ವಾದದ ಸುತ್ತ ಸೃಷ್ಟಿಸಲಾಗಿರುವ ರಾಷ್ಟ್ರೀಯವಾದಿ ಕೋಪದ ವೃತ್ತದೊಳಗೆ ಆಕರ್ಷಿಸಿ ಸೆಳೆದುಕೊಳ್ಳಲಾಗಿದೆ.
ಹಿಂದೂಗಳನ್ನು ಒಂದು ಪಂಗಡವಾಗಿ ಇತರ ಪಂಗಡಗಳೊಂದಿಗೆ ಕಾದಾಡುವ ಭಯಭೀತ ಸಮುದಾಯವಾಗಿ ಮಾಡಲಾಗಿರುವ ಇಂತಹ ಒಂದು ಸನ್ನಿವೇಶದಲ್ಲಿ 2019ರ ಚುನಾವಣೆ ನಡೆಯುತ್ತಿದೆ.ಹೀಗಿರುತ್ತಾ ‘ಮುಸ್ಲಿಂ ವೋಟ್’ಬಗ್ಗೆ ಯಾರೂ ಮಾತನಾಡದೆ ಇರುವುದರಲ್ಲಿ ಆಶ್ಚರ್ಯವಿಲ್ಲ.ರಾಜಕೀಯ ವಿಶ್ಲೇಷಕರು ಮತ್ತು ವೀಕ್ಷಕರು ಒಬಿಸಿ ವೋಟ್ ಅಥವಾ ದಲಿತ ವೋಟ್ ಬಗ್ಗೆ ಮಾತಾಡುತ್ತಿದ್ದಾರೆ.ಚಾಣಾಕ್ಷ ರಾಜಕೀಯ ನಾಯಕರು ಮತ್ತು ಮ್ಯಾನೇಜರ್‌ಗಳು ಜಾತಿ ವಿಷಯವನ್ನು ಕೆಣಕುವುದರಲ್ಲೇ ತೃಪ್ತರಾಗಿದ್ದಾರೆ.ದೇಶದ ಅತ್ಯಂತ ದೊಡ್ಡ ಅಲ್ಪಸಂಖ್ಯಾತ ಸಮುದಾಯವನ್ನು ಅದರ ಅಪ್ರಸ್ತುತೆಯಲ್ಲಿ ಅದರ ಪಾಡಿಗೆ ಬಿಟ್ಟುಬಿಡಲಾಗಿದೆ.
ಈಗ ನಮ್ಮ ರಾಷ್ಟ್ರೀಯ ವ್ಯವಹಾರಗಳಲ್ಲಿ ಒಂದು ಹೊಸ ಸಮೀಕರಣ ಹುಟ್ಟಿಕೊಂಡಿದೆ. ಸೌದಿಗಳು,ಕೊಲ್ಲಿ ರಾಷ್ಟ್ರಗಳು,ಮತ್ತು ಪಾಕಿಸ್ತಾನ ಕೂಡ ಮೋದಿಯವರ ಅತಿ-ರಾಷ್ಟ್ರೀಯವಾದಿ ಕಥಾನಕವನ್ನು ಮತ್ತಷ್ಟು ಗಟ್ಟಿಗೊಳಿಸಲು ತಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿರುವಂತೆ ಕಾಣಿಸುತ್ತದೆ.
ಸಮಾಧಾನದ ಸಂಗತಿ ಎಂದರೆ ಮುಸ್ಲಿಮರಿಗೆ ಇನ್ನೂ ಮತದಾನದ ಹಕ್ಕು ಇದೆ. ಹಿಂದೂಗಳು ಮೋದಿಯ ಕಡೆಗೆ ಸಾಗದಂತೆ ತಡೆಯಲು ಅವರು ಏನಾದರೂ ಮಾಡಲು ಸಾಧ್ಯವೇ? ಮೋದಿ ಗುಂಪು ಹಿಂದೂಗಳು ಬೋನಿನೊಳಗೆ ಬೀಳುವಂತೆ ಮಾಡಿದೆ.ಈ ಬೋನಿನಿಂದ ಅವರು ಹೊರಬರುವಂತೆ ಅವರಿಗೆ ಮುಸ್ಲಿಮರು ನೆರವಾಗಬಲ್ಲರೇ?ರಾಷ್ಟ್ರೀಯವಾಗಿ ಸನ್ನಿಯನ್ನು ಹಿಮ್ಮುಖವಾಗುವಂತೆ ಮಾಡಲು ಮುಸ್ಲಿಮರ ಧಾರ್ಮಿಕ ಸಂಕೇತಗಳನ್ನು ಹಾಗೂ ಭಾವನೆಗಳನ್ನು ಬಳಸಲಾದಿತೇ?
ಈ ಪ್ರಶ್ನೆಗಳಿಗೆ ಸುಲಭದ ಅಥವಾ ಸ್ಪಷ್ಟವಾದ ಉತ್ತರಗಳಿಲ್ಲ. ಸೆಕ್ಯುಲರ್ ತತ್ವಗಳನ್ನು ಹಾಗೂ ಆಚರಣೆಗಳನ್ನು ಉಳಿಸಲು ಹೋರಾಡುವುದು ಹಿಂದೂಗಳ ಕೆಲಸ, ಮುಸ್ಲಿಮರ ಕೆಲಸವಲ್ಲ ಎಂದು ಕೂಡ ವಾದಿಸಬಹುದಾಗಿದೆ. ಪ್ರಾಯಶಃ ಇದು ನಿಜ. ಆದರೆ ಸೆಕ್ಯುಲರ್ ಹಿಂದೂಗಳು ಬೇರೆ ಯಾರ ನೆರವೂ ಇಲ್ಲದೆ ತಾವಾಗಿಯೇ ಗೆಲ್ಲಬಹುದಾದ ಒಂದು ಹೋರಾಟ ಇದಲ್ಲ. ಇದು ಒಂದು ಸಂಘಟಿತ ಕೆಲಸ,ಎಲ್ಲರೂ ಕೂಡಿ ನಡೆಸಬೆೇಕಾದ ಹೋರಾಟ. ಯಾಕೆಂದರೆ ಈಗ ಅಪಾಯ ಬಂದಿರುವುದು ರಿಪಬ್ಲಿಕನ್ ಭಾರತದ, ಗಣಸತ್ತಾತ್ಮಕ ಭಾರತದ ಮೂಲಭೂತವಾದದ ಚೌಕಟ್ಟಿಗೆ.
ಕೃಪೆ: thewire.in

Writer - ಹರೀಶ್ ಖರೆ

contributor

Editor - ಹರೀಶ್ ಖರೆ

contributor

Similar News

ಜಗದಗಲ
ಜಗ ದಗಲ