ವರ್ತಮಾನವನ್ನು ಕಡೆಯುವ ಕಡಗೋಲು...

Update: 2019-04-14 18:31 GMT

ಡಾ. ಎಂ. ಎಸ್. ಮಣಿ ಅವರ ‘ಕಡಗೋಲು’ ಪತ್ರಿಕೋದ್ಯಮದ ಕರ್ತವ್ಯದ ಭಾಗಗಳಾಗಿ ಬರೆದ ಲೇಖನಗಳ ಸಂಗ್ರಹ. ಸತ್ಯ ಕಥೆಗಳ ಮಂಥನ ಎಂದು ಲೇಖಕರು ಈ ಕೃತಿಯನ್ನು ಸ್ವತಃ ಕರೆದುಕೊಂಡಿದ್ದಾರೆ. ಇಲ್ಲಿರುವ ಹಲವು ಲೇಖನಗಳು ಇಂದು ನಮ್ಮ ದೇಶ ಎದುರಿಸುತ್ತಿರುವ ಹಲವಾರು ಸಮಸ್ಯೆ, ಸಂಕಷ್ಟಗಳ ನಿಜರೂಪ ದರ್ಶನ ಮಾಡಿಸುತ್ತದೆ. ಅದು ಮೋದಿಯವರ ನೋಟು ನಿಷೇಧದಿಂದ ಜನತೆ ಅನುಭವಿಸಿದ ಯಾತನೆ, ಧರ್ಮಗುರುಗಳ ಧಾರ್ಮಿಕ ಭ್ರಷ್ಟತೆ, ಅವರು ನಡೆಸಿದರೆನ್ನಲಾದ ಅನಾಚಾರಗಳ ಅನಾವರಣ ಸೇರಿದಂತೆ ರಾಜಕೀಯ, ಸಾಮಾಜಿಕ ವಿಷಯಗಳ ಚರ್ಚೆ ಇಲ್ಲಿ ನಡೆದಿದೆ.
25ಕ್ಕೂ ಅಧಿಕ ಲೇಖನಗಳನ್ನು ಈ ಕೃತಿ ಹೊಂದಿದೆ. ಅಹಿಂದ ಚಳವಳಿಯ ಕುರಿತಂತೆ ಇರುವ ನಿರೀಕ್ಷೆ, ಭಾರತವನ್ನು ಕಾಡುತ್ತಿರುವ ಧಾರ್ಮಿಕ ಭ್ರಷ್ಟತೆ, ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಅಂಬೇಡ್ಕರ್ ಆಶಯ, ಮೋದಿ-ಸೂಕಿಯ ಗೋಸುಂಬೆ ಸಿದ್ಧಾಂತ, ಸಂವಿಧಾನ ವಿರೋಧಿಗಳ ಸಂಚಿನ ಒಳನೋಟ, ರಾಣಿ ಪದ್ಮಾವತಿ ಸಿನೆಮಾದ ಹೆಸರಿನಲ್ಲಿ ಬಹಿರಂಗಗೊಂಡ ಧಾರ್ಮಿಕ ಅಸಹನೀಯತೆ, ನೋಟು ನಿಷೇಧದಿಂದ ಬಡವರು ಎದುರಿಸಿದ ಸಂಕಷ್ಟ, ರಫೇಲ್ ಡೀಲ್ ಹೇಗೆ ದೇಶದ ರಕ್ಷಣಾ ಹಿತಾಸಕ್ತಿಯನ್ನು ಬಲಿಕೊಟ್ಟಿತು ಎನ್ನುವ ಕುರಿತ ಮಾಹಿತಿ, ಅಹಿಂದವರ್ಗಗಳ ಆತ್ಮಾವಲೋಕನದ ಅನಿವಾರ್ಯ, ಭೀಮಾ ಕೋರೆಗಾಂವ್ ಹಿನ್ನೆಲೆಯಲ್ಲಿ ದಲಿತ ಹೋರಾಟಗಳ ಕುರಿತಂತೆ ವಿಶ್ಲೇಷಣೆ....ಹೀಗೆ ದೇಶವನ್ನು ಸದ್ಯಕ್ಕೆ ಕಾಡುತ್ತಿರುವ ಬಲಪಂಥೀಯ, ಮನುವಾದಿ ರಾಜಕಾರಣದ ವಿರುದ್ಧ ಅತ್ಯಂತ ಸ್ಪಷ್ಟ ಧ್ವನಿಯಲ್ಲಿ ಈ ಕೃತಿ ಮಾತನಾಡುತ್ತದೆ. ತನ್ನ ದೈನಂದಿನ ಬದುಕಿನ ಅನುಭವಗಳನ್ನಿಟ್ಟುಕೊಂಡು ಕಥನ ರೂಪದಲ್ಲಿ ಬರೆಯುತ್ತಾ ಹೋಗುವ ಲೇಖಕರ ತಂತ್ರವೂ ಓದಿಸಿಕೊಂಡು ಹೋಗುವಲ್ಲಿ ಪೂರಕವಾಗಿ ಕೆಲಸ ಮಾಡುತ್ತದೆ. ಕಡಗೋಲನ್ನು ಲೇಖಕರು ಇಲ್ಲಿ ರೂಪಕವಾಗಿ ಬಳಸಿಕೊಂಡಿದ್ದಾರೆ. ದಲಿತ ಅಸ್ಮಿತೆಯ ತಳಹದಿಯಲ್ಲಿ ಲೇಖನ ತನ್ನ ಜೀವವನ್ನು ಹಿಡಿದುಕೊಂಡಿದೆ.
ಕೆ.ವಿ. ಪ್ರಭಾಕರ ಪ್ರಕಾಶನ ಹೊರತಂದಿರುವ ಕೃತಿಯ ಒಟ್ಟು ಪುಟಗಳು 184. ಮುಖಬೆಲೆ 200 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News