ಗೋಡ್ಸೆಯಿಂದ ತಪ್ಪೊಪ್ಪಿಗೆ, ಸಾವರ್ಕರ್‌ರಿಂದ ನಿರಾಕರಣೆ
ಭಾಗ -22
ಗೋಡ್ಸೆಯ ಮಾತುಗಳನ್ನು ಕೇಳಿದ ಪ್ರೇಕ್ಷಕರು ಎದ್ದುಕಾಣುವಂತೆ ಭಾವಾವೇಷ ಭರಿತರಾದರು. ಕೆಲವು ಮಹಿಳೆಯರು ಅತ್ತರು ಎಂಬುದಾಗಿ ನ್ಯಾಯಮೂರ್ತಿ ಜಿ.ಡಿ.ಖೋಸ್ಲಾ ದಾಖಲಿಸಿದ್ದಾರೆ. ಅವರು ಹೇಳುತ್ತಾರೆ: ‘‘ಒಂದು ವೇಳೆ ಅಲ್ಲಿ ನೆರೆದಿದ್ದ ಜನರು ‘ಜೂರಿ’(Jury)ಗಳಾಗಿದ್ದ ಪಕ್ಷದಲ್ಲಿ ನಾಥೂರಾಂ ನಿರ್ದೋಷಿ ಎಂದೇ ಅಭಿಪ್ರಾಯಪಡುತ್ತಿದ್ದರು!’’
‘‘ಅಷ್ಟೇ ಅಲ್ಲ, ದಿಲ್ಲಿಗೆ ಬಂದ ಮೇಲೆ ಭಂಗಿ ಕಾಲನಿಯಲ್ಲಿ ಪ್ರಾರ್ಥನಾ ಸಭೆಗಳನ್ನು ಒಂದು ಹಿಂದೂ ದೇವಾಲಯದಲ್ಲಿ ಏರ್ಪಡಿಸಿ, ಹಿಂದೂ ಅರ್ಚಕರು, ಭಕ್ತರು ವಿರೋಧಿಸಿದರೂ ಕುರ್‌ಆನ್ ಭಾಗಗಳನ್ನು ಪಠಿಸಿದರು. ಆದರೆ ಮುಸ್ಲಿಮರ ವಿರೋಧವನ್ನೆದುರಿಸಿ ಮಸೀದಿಗಳಲ್ಲಿ ಗೀತಾ ಪಠಣ ಮಾಡಲು ಅವರಿಗೆ ಎದೆಗಾರಿಕೆ ಇರಲಿಲ್ಲ. ಹಾಗೆ ಅವರು (ಗೀತಾಪಠಣ) ಮಾಡಿದ್ದರೆ ಮುಸ್ಲಿಮರಿಂದ ಎಂಥ ಭಯಂಕರವಾದ ಪ್ರತಿಕ್ರಿಯೆ ಉಂಟಾಗುತ್ತಿತ್ತೆಂಬುದು ಅವರಿಗೆ ಗೊತ್ತಿತ್ತು. ಆದರೆ ಹಿಂದೂ ಭಾವನೆಗಳನ್ನು ಸುರಕ್ಷಿತವಾಗಿ ತೊತ್ತಳದುಳಿಯಬಹುದಾಗಿತ್ತು. ಅವರ ಈ ನಂಬುಗೆಯನ್ನು ಹುಸಿಗೊಳಿಸಲು ಹಿಂದೂ ತನ್ನ ಗೌರವಕ್ಕೆ ಅವಮಾನವಾದಾಗ ಅವನೂ ಸಹಿಸಲಾರ ಎಂಬುದನ್ನು ತೋರಿಸಬೇಕೆಂದು ನಾನು ದೃಢಸಂಕಲ್ಪ ಮಾಡಿದೆ.’’
‘‘ಅದಾದ ಕೂಡಲೇ ಪಂಜಾಬ್ ಮತ್ತು ಭಾರತದ ಇತರೆಡೆಗಳಲ್ಲಿ ಮುಸ್ಲಿಮರ ಮತಾಂಧತೆ ಭಯಂಕರವಾಗಿ ಸ್ಫೋಟಗೊಂಡಿತು. ಬಿಹಾರ, ಕೋಲ್ಕತಾ, ಪಂಜಾಬ್ ಮತ್ತು ಇತರ ಕಡೆ ಮುಸ್ಲಿಮರನ್ನು ಪ್ರತಿರೋಧಿಸಲು ಧೈರ್ಯ ತೋರಿದ ಹಿಂದೂಗಳನ್ನು ಕಾಂಗ್ರೆಸ್ ಸರಕಾರ ಹಿಂಸಿಸಲು, ಕೇಸುಗಳನ್ನು ಹಾಕಲು ಗುಂಡಿಟ್ಟು ಕೊಲ್ಲಲು ಕಾರ್ಯತತ್ಪರವಾಯಿತು. ನಮ್ಮ ಅತ್ಯಂತ ಭೀಕರ ಅಂಜಿಕೆಗಳು ನಿಜವಾಗತೊಡಗಿದವು..... ಆಗ ಆಗಸ್ಟ್ 15ರಂದು ನಡೆದ ಸ್ವಾತಂತ್ರೋತ್ಸವವನ್ನು ಬಹಿಷ್ಕರಿಸಿ ಮುಸ್ಲಿಮರ ಆಘಾತಗಳನ್ನು ತಡೆದು ಅವರೊಡನೆ ಹೋರಾಡುವ ಕಾರ್ಯಕ್ರಮವನ್ನು ಹೂಡಲು ನಿರ್ಧರಿಸಿದೆವು.’’
‘‘ಐದು ಕೋಟಿ ಮುಸ್ಲಿಮರು ನಮ್ಮ ದೇಶದ ಪ್ರಜೆಗಳಾಗಿ ಉಳಿದಿಲ್ಲ.... ಒಂದು ಕೋಟಿ ಹತ್ತು ಲಕ್ಷ ಹಿಂದೂಗಳು ಮನೆ ಮಠ ತೊರೆದು ಪಾಕಿಸ್ತಾನದಿಂದ ದಿಕ್ಕೆಟ್ಟು ಬಂದರು... ಅಂಥ ಭಯಂಕರವಾದ ಫಲಗಳುಂಟಾದರೂ ಗಾಂಧೀಜಿ ಮುಸ್ಲಿಮರನ್ನು ಪುಸಲಾಯಿಸುವ, ತೃಪ್ತಿಪಡಿಸುವ ಕೆಲಸವನ್ನು ಮುಂದುವರಿಸಿದರು. ನನ್ನ ರಕ್ತ ಕುದಿಯಿತು. ಗಾಂಧೀಜಿಯನ್ನು ಇನ್ನು ಸಹಿಸಲಾರದೆ ಹೋದೆ. ಗಾಂಧೀಜಿಯ ವಿರುದ್ಧ ವೈಯಕ್ತಿಕವಾಗಿ ಕಠಿಣ ಪದ ಪ್ರಯೋಗ ಮಾಡಲಾರೆ ಅಥವಾ ಅವರ ಧೋರಣೆ ಮತ್ತು ಸಾಧನೋಪಾಯಗಳ ತಳಹದಿಯ ಬಗ್ಗೆ ನನ್ನ ತೀವ್ರ ಭಿನ್ನಮತವನ್ನು ಮತ್ತು ತಿರಸ್ಕಾರವನ್ನು ಮುಚ್ಚಿಟ್ಟುಕೊಳ್ಳುವುದೂ ನನ್ನಿಂದಾಗದು. ಗಾಂಧೀಜಿ ವಾಸ್ತವವಾಗಿ ಬ್ರಿಟಿಷರ ‘ಒಡೆದಾಳುವ’ ಧೋರಣೆಯನ್ನು ಅನುಸರಿಸುವುದರಲ್ಲಿ ಯಶಸ್ವಿಯಾದರು. ಬ್ರಿಟಿಷರು ದೇಶವನ್ನು ವಿಭಜಿಸಬೇಕೆಂಬುದನ್ನು ಬೆಂಬಲಿಸಿದರು.’’
ಮೂವತ್ತೆರಡು ವರ್ಷಗಳವರೆಗೆ ನನ್ನಲ್ಲಿ ತುಂಬಿಕೊಂಡಿದ್ದ ಆಕ್ರೋಶ, ಪ್ರಚೋದನೆ, ಗಾಂಧೀಜಿಯ ಕೊಟ್ಟಕೊನೆಯ ಮುಸ್ಲಿಮರ ಪರವಾದ ಕೃತ್ಯದಿಂದ ಗಾಂಧೀಜಿಯನ್ನು ಕೂಡಲೇ ಮುಗಿಸಲೇಬೇಕೆಂಬುದಕ್ಕೆ ಮೀಟುಗೋಲಾಯಿತು.
***
‘‘ಈ ಪ್ರಶ್ನೆಯನ್ನು ನಾನು ಸಂಪೂರ್ಣವಾಗಿ ಪರ್ಯಾಲೋಚಿಸಿ ಈ ಅಖೈರ್ ನಿರ್ಧಾರವನ್ನು ಕೈಗೊಂಡೆ. ಇದರ ವಿಚಾರವನ್ನು ಯಾರೊಬ್ಬರೊಡನೆಯೂ ಮಾತನಾಡಲಿಲ್ಲ. ನನ್ನ ಎರಡೂ ಕೈಗಳಲ್ಲಿ ಧೈರ್ಯ ತಂದುಕೊಂಡು, ಬಿರ್ಲಾ ಗೃಹದ ಪ್ರಾರ್ಥನಾ ಸಭೆಯಲ್ಲಿ ಜನವರಿ 30, 1948ರಂದು ಗಾಂಧೀಜಿಗೆ ಗುಂಡಿಟ್ಟು ಸುಟ್ಟೆ(ಕೊಂದೆ). ಇನ್ನು ಹೇಳುವುದೇನೂ ಉಳಿದಿಲ್ಲ. ದೇಶಭಕ್ತಿ ಪಾಪಕೃತ್ಯವೆಂದು ಭಾವಿಸುವುದಾದರೆ, ಅಂಥ ಪಾಪಕೃತ್ಯ ನನ್ನಿಂದಾಗಿದೆ ಎಂದು ಒಪ್ಪಿಕೊಳ್ಳುತ್ತೇನೆ. ಇದು ಶ್ರೇಷ್ಠ ಸತ್ಕಾರ್ಯವೆಂದು ಭಾವಿಸುವುದಾದರೆ ಅದಕ್ಕೆ ಸಲ್ಲುವ ಗೌರವಕ್ಕೆ ಪಾತ್ರ ನಾನೆಂದು ನಮ್ರವಾಗಿ ಹಕ್ಕು ಸಾಧಿಸುತ್ತೇನೆ.’’
***
‘‘ಹಿಂದೂಸ್ಥಾನವೆಂದು ಕರೆಯಲಾದ ಈ ದೇಶ ಮತ್ತೆ ಐಕ್ಯವಾಗಲಿ, ಒಂದಾಗಲಿ. ಇದು ನನ್ನ ಕೊನೆಯ ಆಶೆ ಮತ್ತು ಸರ್ವಶಕ್ತ ಭಗವಂತನಲ್ಲಿ ನನ್ನ ಪ್ರಾರ್ಥನೆ.’’
ಅವನ ಈ ಮಾತುಗಳನ್ನು ಕೇಳಿದ ಪ್ರೇಕ್ಷಕರು ಎದ್ದುಕಾಣುವಂತೆ ಭಾವಾವೇಷ ಭರಿತರಾದರು. ಕೆಲವು ಮಹಿಳೆಯರು ಅತ್ತರು ಎಂಬುದಾಗಿ ನ್ಯಾಯಮೂರ್ತಿ ಜಿ.ಡಿ.ಖೋಸ್ಲಾ ದಾಖಲಿಸಿದ್ದಾರೆ. ಅವರು ಹೇಳುತ್ತಾರೆ: ‘‘ಒಂದು ವೇಳೆ ಅಲ್ಲಿ ನೆರೆದಿದ್ದ ಜನರು ‘ಜೂರಿ’(Jury)ಗಳಾಗಿದ್ದ ಪಕ್ಷದಲ್ಲಿ ನಾಥೂರಾಂ ನಿರ್ದೋಷಿ ಎಂದೇ ಅಭಿಪ್ರಾಯಪಡುತ್ತಿದ್ದರು!’’
ಗುಂಡಿಕ್ಕಿ ಕೊಂದವನೆ, ತಾನು ಕೊಂದದ್ದು ನಿಜವೆಂದು ಒಪ್ಪಿಕೊಂಡ ಮೇಲೆ ಉಳಿದ ವಿಚಾರಣೆ ಏಕೆ ಬೇಕು? ತಾನು ಮಾಡಿದ ಈ ಕೃತ್ಯವನ್ನು ತಾನೊಬ್ಬನೇ ಮಾಡಿದೆನೆಂದೂ, ಮತ್ತೆ ಯಾರೊಡನೆಯೂ ಮಾತನಾಡಲಿಲ್ಲವೆಂದೂ ಗೋಡ್ಸೆ ಹೇಳಿದರೂ, ನ್ಯಾಯಾಲಯದ ಮುಂದೆ ಇನ್ನೂ ಎಂಟು ಜನ ಆರೋಪಿಗಳಿದ್ದರು. ಅವರ ಮೇಲಿದ್ದ ಆರೋಪಗಳಲ್ಲೆೆಲ್ಲ ಮುಖ್ಯವಾದದ್ದು ಅವರೆಲ್ಲ ಕೊಲೆ ಮಾಡಲು ಪಿತೂರಿ ಮಾಡಿದ್ದರೆಂಬುದು. ಆ ಪಿತೂರಿಯಲ್ಲಿ ಸಾವರ್ಕರ್‌ರೂ ಒಬ್ಬರೆಂದು ಸಾಬೀತುಪಡಿಸಬೇಕಾಗಿತ್ತು. ಆ ವಿಚಾರವಾಗಿ ಸಾಕ್ಷವನ್ನೂ ನ್ಯಾಯಾಲಯದಲ್ಲಿ ಸಾದರಪಡಿಸಲಾಗಿತ್ತು.ಆದ್ದರಿಂದ ಈ ಸಾಕ್ಷಧಾರಗಳನ್ನು ಇತರ ಆರೋಪಿಗಳ ಗಮನಕ್ಕೆ ತಂದು ಅವರ ಹೇಳಿಕೆ ಏನೆಂದು ನ್ಯಾಯಾಲಯ ದಾಖಲಿಸಬೇಕಾದ್ದು ಕಾನೂನು. ಅದರಲ್ಲಿ ಪಿತೂರಿ ಆರೋಪ ಹೊತ್ತಿದ್ದ ಸಾವರ್ಕರ್ ಏನು ಹೇಳುತ್ತಾರೆಂಬುದನ್ನು ನ್ಯಾಯಾಧೀಶರು ಕೇಳಲೇಬೇಕಾಗಿತ್ತು.ಹಾಗಾದರೆ ಅವರು ಏನು ಹೇಳಿದರೆಂಬುದನ್ನು ಗಮನಿಸೋಣ.
ಸಾವರ್ಕರ್ ತಮ್ಮ 57 ಪುಟಗಳ ಸುದೀರ್ಘ ಲಿಖಿತ ಹೇಳಿಕೆಯನ್ನು ನ್ಯಾಯಾಲಯದಲ್ಲಿ ಓದಿದರು. ಸ್ವತಃ ಬ್ಯಾರಿಸ್ಟರ್ ಪದವಿ ಪಡೆದಿದ್ದ ಅವರು ಎಂದೂ ನ್ಯಾಯಾಲಯದಲ್ಲಿ ಒಂದೇ ಒಂದು ದಿನ ವಕಾಲತ್ತು ಮಾಡದಿದ್ದರೂ ತಮ್ಮ ಅಪಾರ ವಿದ್ವತ್ತಿನಿಂದ, ಅಗಾಧ ಪ್ರತಿಭೆಯಿಂದ ತಾವು ನಿರ್ದೋಷಿಗಳೆಂದು ಪ್ರಬಲವಾಗಿ ಸಮರ್ಥಿಸಿಕೊಂಡರು. ತಮ್ಮ ಜೀವನ ವೃತ್ತಾಂತವನ್ನು ಸಂಕ್ಷಿಪ್ತವಾಗಿ ರೂಪಿಸಿ, ‘‘1937ರಲ್ಲಿ ನನ್ನನ್ನು ಹಿಂದೂ ಮಹಾಸಭೆಯ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದರು. ಆ ಸ್ಥಾನದಲ್ಲಿ ನಾನು ಆರು ವರ್ಷ ಕಾರ್ಯ ನಿರ್ವಹಿಸಿದೆ. ಅನಾರೋಗ್ಯದ ನಿಮಿತ್ತ ರಾಜೀನಾಮೆ ಕೊಟ್ಟೆ. ಮಹಾಸಭೆಯ ಧ್ಯೇಯೋದ್ದೇಶ ಹಿಂದೂಗಳನ್ನೆಲ್ಲ ಸಂಘಟಿಸಿ ಅವರನ್ನು ಶೂರ ಹೋರಾಟಗಾರ (ಯೋಧ)ರನ್ನಾಗಿ ಮಾಡುವುದು.’’
***
‘‘ಎರಡು ಅಸ್ಪಷ್ಟ ವಾಕ್ಯಗಳ ಆಧಾರದ ಮೇಲೆ ನನ್ನ ಮೇಲೆ ಆರೋಪ ಹೊರಿಸಲಾಗಿದೆ. ಗೋಡ್ಸೆ ಮತ್ತು ಆಪ್ಟೆ ಅವರ ಪತ್ರಿಕೆ ‘ಅಗ್ರಣಿ’ಗೆ ಲೇಖನ ಬರೆಯಲು ನಿರಾಕರಿಸಿದ್ದೆ. ಒಮ್ಮೆ ಅವನಿಗೆ ಆರ್ಥಿಕ ಸಹಾಯ ಮಾಡಿದ್ದೆ.ಆದರೆ ತರುವಾಯ ಅವನಿಗೆ ಯಾವುದೇ ಸಹಾಯ ಮಾಡಲು ನಿರಾಕರಿಸಿದ್ದೆ. ಗೋಡ್ಸೆ ನನ್ನೊಡನೆ ಪ್ರಯಾಣ ಮಾಡಬಾರದೆಂದು ಅನೇಕ ಸಲ ಅವನನ್ನು ತಿರಸ್ಕರಿಸಿದ್ದೆ. ‘ನೆಹರೂ, ಸುಹ್ರವರ್ದಿ ಮತ್ತು ಗಾಂಧಿಯನ್ನು ಕೊಲ್ಲಬೇಕೆಂದು ಸಾವರ್ಕರ್ ಹೇಳಿದರೆಂದು’ ಆಪ್ಟೆ, ಬಡ್ಗೆಯ ಮುಂದೆ ಹೇಳಿರುವುದು ಸುಳ್ಳಿರಲು ಸಾಧ್ಯ. ಹಿಂದೂ ಸಂಘಟನೆಗಳ ದೃಷ್ಟಿಯಲ್ಲಿ ನನ್ನನ್ನು ‘ಬದನಾಮಿ’ ಮಾಡಲು ಅವನು ಪ್ರಯತ್ನಿಸಿರಬಹುದು. ಆಪ್ಟೆ ಊಸರವಳ್ಳಿಯಂತೆ ಬಣ್ಣ ಬದಲಾಯಿಸುವ ವ್ಯಕ್ತಿ ಎಂದು ತೋರಿಸಲಾಗಿದೆ.’’
‘‘ಕಳೆದ ಐವತ್ತು ವರ್ಷಗಳಲ್ಲಿ ನಮ್ಮ ಮಾತೃಭೂಮಿಯ ಸ್ವಾತಂತ್ರ ಸಂಗ್ರಾಮಗಳಲ್ಲಿ ನಾನೊಬ್ಬ ಯೋಧನಾಗಿ ಭಾಗಿಯಾಗಿದ್ದೇನೆ. ಈ ನನ್ನ ಸಮಕಾಲೀನರ ಪೀಳಿಗೆಯ ಯಾವ ಸ್ವಾತಂತ್ರ ಯೋಧರಿಗಿಂತಲೂ ಕಿಂಚಿತ್ತೂ ಕಡಿಮೆಯಿಲ್ಲದ ತ್ಯಾಗವನ್ನು ನಾನು ಮಾಡಿದ್ದೇನೆ. ಗಾಂಧೀಜಿ ತಮ್ಮ ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ನನ್ನನ್ನು ಪ್ರಶಂಸಿಸಿ ಅನೇಕ ಮಾತುಗಳನ್ನು ಬರೆದಿದ್ದಾರೆ.’’
ಸಾವರ್ಕರ್ ತಮ್ಮ ಹೇಳಿಕೆಯನ್ನು ಮುಂದುವರಿಸಿ, ‘‘ನಾಥೂರಾಮ್, ನಾರಾಯಣ ಆಪ್ಟೆ, ಡಾ.ಪರಚುರೆ, ಕರ್ಕರೆ ಹಿಂದೂ ಮಹಾಸಭೆಯ ಕಾರ್ಯಕರ್ತರೆಂದು ಮಾತ್ರ ನನಗೆ ಗೊತ್ತು. ಆಪ್ಟೆ, ಗೋಡ್ಸೆ ಮತ್ತು ನಮ್ಮೆಳಗೆ ನಡೆದ ಪತ್ರವ್ಯವಹಾರವನ್ನು ವಿಶ್ಲೇಷಿಸಿದರೆ ಅದರಲ್ಲಿ ಯಾವುದೇ ಕಾನೂನುಬಾಹಿರ ಅಂಶ ಇರುವುದಾಗಿ ಕಂಡುಬರುವುದಿಲ್ಲ. ನಾನು ಅವರಿಗೆ ರೂ.15,000ಗಳನ್ನು ಕೊಟ್ಟಿದ್ದೆ. ಈ ಪತ್ರಿಕೆ ಹಿಂದೂ ಮಹಾಸಭೆಯ ಪ್ರಕಟನೆ ಎಂಬ ಕಾರಣಕ್ಕಾಗಿ.
‘‘ನಾನು ‘ಯಶಸ್ವಿ ಹೋ ಯಾ’ ಎಂದು ಹೇಳಿದೆ ಎಂಬುದಾಗಿ ಬಡ್ಗೆ ಹೇಳಿದ್ದಾನೆ. ಈ ಬಗ್ಗೆ ನಾನು ಹೇಳುವುದಿಷ್ಟೆ: ಆಪ್ಟೆ ಮತ್ತು ಗೋಡ್ಸೆ 1948 ಜನವರಿ 17ರಂದು ಆಗಲಿ ಅಥವಾ ಅದರ ಎಡಬಲದಲ್ಲಿ ಆಗಲಿ ನನ್ನನ್ನು ಭೇಟಿಮಾಡಲೇ ಇಲ್ಲ.ಒಂದು ವೇಳೆ ಅವರು ಸಾವರ್ಕರ್ ಸದನಕ್ಕೆ ಬಂದಿದ್ದರೆಂದು ಇಟ್ಟುಕೊಂಡರೂ ಅವರು ನನ್ನನ್ನು ಭೇಟಿಯಾದರು ಎಂಬುದಕ್ಕೆ ಹಾಗೂ ಅವರು ಕೊಲೆಯ ಸಂಚಿನ ಬಗ್ಗೆ ಚರ್ಚಿಸಿದರೆಂಬುದಕ್ಕೆ ನಂಬಲರ್ಹವಾದ ಸಾಕ್ಷವಿಲ್ಲ. ಸಾವಿರ ಪತ್ರಗಳಿಂದಲೂ ನನ್ನ ವಿರುದ್ಧ ಆಕ್ಷೇಪಾರ್ಹವಾದದ್ದನ್ನೇನೂ ಕಾಣಲಿಲ್ಲ. ಇತರ ಆರೋಪಿಗಳೊಡನೆ ನನಗೆ ಪರಿಚಯವಿತ್ತು ಎಂದ ಮಾತ್ರಕ್ಕೆ ಪಿತೂರಿಯಲ್ಲಿ ನಾನು ಭಾಗಿಯಾಗಿದ್ದೇನೆಂದು ಭಾವಿಸಲು ಆಧಾರವಾಗದು. ನನ್ನ ವಿರುದ್ಧ ಮಾಡಿದ ಆಪಾದನೆಗಳೆಲ್ಲ ಕಪೋಲಕಲ್ಪಿತ ಮತ್ತು ಕೇವಲ (ಹುಸಿ)ಹುರುಳಿಲ್ಲದ ಆರೋಪಗಳು ಮಾತ್ರ. ಅವರು ನನ್ನ ವಿರುದ್ಧ ಸಂಶಯಾತೀತವಾಗಿ ಋಜುವಾತುಪಡಿಸುವುದರಲ್ಲಿ ಸೋತುಹೋಗಿದ್ದಾರೆ. ಮೈ ಲಾರ್ಡ್ ನಾನು ಕೇವಲ ನಿರಪರಾಧಿ ನನ್ನನ್ನು ಗೌರವಾನ್ವಿತವಾಗಿ ನಿರ್ದೋಷಿಯೆಂದು ಘೋಷಿಸಬೇಕು.’’
ಕೊನೆಯಲ್ಲಿ ಸಾವರ್ಕರ್ 1942ರಲ್ಲಿ ನೆಹರೂ ಅವರನ್ನು, 1940ರಲ್ಲಿ ಗಾಂಧಿಯನ್ನು ಅರೆಸ್ಟ್ ಮಾಡಿದ್ದನ್ನು ಖಂಡಿಸಿ ಪತ್ರಿಕಾ ಪ್ರಕಟನೆ ಕೊಟ್ಟದ್ದನ್ನು ನ್ಯಾಯಾಲಯಕ್ಕೆ ಸಾದರಪಡಿಸಿದರು. 1943ರಲ್ಲಿ ಗಾಂಧೀಜಿ ತಮ್ಮ ಉಪವಾಸವನ್ನು ನಿಲ್ಲಿಸಬೇಕೆಂದು ಮನವಿ ಮಾಡಿದ್ದನ್ನು, ಜಿನ್ನಾರ ಕೊಲೆಯ ಪ್ರಯತ್ನವನ್ನು ಖಂಡಿಸಿದ್ದ ಸಂಗತಿಯನ್ನು ನ್ಯಾಯಾಲಯದ ಗಮನಕ್ಕೆ ತಂದರು ಹಾಗೂ ಗಾಂಧಿ ಕೊಲೆಯನ್ನು ಸ್ಪಷ್ಟವಾಗಿ ಕಠಿಣ ಶಬ್ದಗಳಲ್ಲಿ ಖಂಡಿಸಿದ ಹೇಳಿಕೆಯನ್ನೂ ಹಾಜರುಪಡಿಸಿದರು. ‘‘ಈ ಹೇಳಿಕೆಗಳು ನಮ್ಮ ಮಾತೃಭೂಮಿಯನ್ನು ಬಂಧನದಿಂದ ಮುಕ್ತಗೊಳಿಸಲು ವಿವಿಧ ರಾಜಕೀಯ ಪಕ್ಷಗಳ ನಾಯಕರು ಮಾಡಿದ ತ್ಯಾಗದ ಫಲವನ್ನು ಕಾಣಲು ನಾನು ಇನ್ನೂ ಬದುಕಿರುವುದಕ್ಕಾಗಿ ನನಗೆ ಹೆಮ್ಮೆ ಎನಿಸುತ್ತದೆ. ಅದೊಂದು ವಿಶೇಷ ಸೌಲಭ್ಯ...’’
ತಮ್ಮ ಸುದೀರ್ಘ ಹೇಳಿಕೆಯನ್ನು ಓದಲು ಎರಡೂವರೆ ಗಂಟೆ ಹಿಡಿಯಿತು. ಅವರ ಆರೋಗ್ಯ ಅಷ್ಟೇನೂ ಸರಿಯಾಗಿಲ್ಲದಿದ್ದರೂ ದೇಹ ದುರ್ಬಲವಾಗಿದ್ದರೂ ನಿಂತುಕೊಂಡೇ ನಿರರ್ಗಳವಾಗಿ ಸ್ಪಷ್ಟ ದನಿಯಿಂದ ಓದಿದರು. ಹೇಳಿಕೆಯ ಐವತ್ತೊಂದನೇ ಪುಟದಲ್ಲಿ ದೇಶವನ್ನು ತುಂಡರಿಸಿದ ಭಾಗವನ್ನು ಓದುವಾಗ ಗಂಟಲು ಕಟ್ಟಿತು. ಮಾತು ಹೊರಡಲಿಲ್ಲ. ಕಣ್ಣೀರು ಕೆನ್ನೆಗುಂಟ ಇಳಿಯಿತು. ಕೆಲಹೊತ್ತು ಸುಮ್ಮನಿದ್ದು ಕರವಸ್ತ್ರದಿಂದ ಕಣ್ಣೀರು ಒರಸಿಕೊಂಡು ಹೇಳಿಕೆಯ ಉಳಿದ ಭಾಗವನ್ನು ಗಂಭೀರವಾಗಿ ಓದಿ ಮುಗಿಸಿದರು.