ಬಾಳಂತಿ ಪುರಾಣ: ಬಾಣಂತನದ ಕಥೆಗಳು

Update: 2019-04-16 18:40 GMT

ಹೆಣ್ಣಿನ ಹಲವು ಶಕ್ತಿಗಳಲ್ಲಿ ‘ಜನ್ಮ ನೀಡುವ’ ಆಕೆಯ ಅದಮ್ಯ ಚೈತನ್ಯವೂ ಒಂದು. ಮನಸ್ಸು ಮತ್ತು ದೇಹ ಎರಡೂ ಕೂಡಿ ಇನ್ನೊಂದು ಜೀವವನ್ನು ಗರ್ಭದೊಳಗಿಟ್ಟು ಆರೈಕೆ ಮಾಡಿ ಈ ಭೂಮಿಗೆ ಅರ್ಪಿಸುವ ದಿವ್ಯ ಕ್ಷಣಗಳ ಕುರಿತಂತೆ ಮಹಿಳೆಯರು ಗಾಢವಾಗಿ ಯೋಚಿಸಿ ಬರೆದಿರುವುದು ಕಡಿಮೆ. ಅನೇಕ ಸಂದರ್ಭದಲ್ಲಿ ಹೆರಿಗೆಯೆನ್ನುವುದು ಸ್ತ್ರೀಯನ್ನು ದುರ್ಬಲಳಾಗಿಸಿದೆ ಎಂಬ ಸ್ತ್ರೀವಾದಿ ಮನಸ್ಥಿತಿ ಕೂಡ, ಬಾಣಂತನದ ಅನುಭವದ ಕುರಿತ ನಿರ್ಲಕ್ಷಕ್ಕೆ ಕಾರಣವಾಗಿರಬಹುದು. ಒಂದು ಕಾಲವಿತ್ತು. ಹೆರಿಗೆಯೆಂದರೆ ಹೆಣ್ಣಿನ ಪಾಲಿಗೆ ಸಾವು-ಬದುಕಿನ ನಡುವಿನ ಹೋರಾಟ. ತನ್ನ ಮತ್ತು ತನ್ನ ಗರ್ಭದೊಳಗಿರುವ ಮಗುವಿನ ಉಳಿವಿಗಾಗಿ ಕಟ್ಟ ಕಡೆಯವರೆಗೆ ಹೋರಾಡಿ ಆಕೆ ಗೆಲ್ಲಬೇಕಾಗಿತ್ತು. ಇಂದು ಹೆರಿಗೆ ಮಹಿಳೆಯ ಪಾಲಿಗೆ ಅಷ್ಟೊಂದು ಅಪಾಯಕಾರಿಯಾಗಿಲ್ಲದೇ ಇದ್ದರೂ, ಎದುರಿಸಬೇಕಾದ ಮಾನಸಿಕ ಸಂಘರ್ಷಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇದೇ ಸಂದರ್ಭದಲ್ಲಿ ಅದೊಂದು ಸುಂದರ ಅನುಭೂತಿಯೂ ಹೌದು. ಆ ಸೃಜನಶೀಲ ಅನುಭೂತಿಯನ್ನು ಕಟ್ಟಿಕೊಡುವ ಅಪರೂಪದ ಪ್ರಯತ್ನವನ್ನು ಪತ್ರಕರ್ತೆ, ನೃತ್ಯಗಾತಿ ಡಿ.ಎಸ್. ಶ್ರೀಕಲಾ ‘ಬಾಳಂತಿ ಪುರಾಣ’ದಲ್ಲಿ ಮಾಡಿದ್ದಾರೆ. ಈ ಕೃತಿ ಮಹಿಳೆಯರಿಗೆ ಮಾತ್ರವಲ್ಲ, ಹೆಣ್ಣಿನ ಹೆರಿಗೆಯ ದಿನಗಳ ಬಗ್ಗೆ ಪುರುಷರನ್ನೂ ಸಾಕ್ಷರರನ್ನಾಗಿಸುತ್ತದೆ.
ಹೆರಿಗೆಯ ಕ್ಷಣಗಳು, ಆಗ ಗರ್ಭಿಣಿ ಮಹಿಳೆ ನಿರ್ವಹಿಸಬೇಕಾದ ಕರ್ತವ್ಯಗಳು, ವೈದ್ಯರೊಂದಿಗೆ ಆಕೆ ಹೇಗೆ ಸಹಕರಿಸಬೇಕು, ಹೆರಿಗೆ ಸುಲಭವಾಗಬೇಕಾದರೆ ಅನುಸರಿಸಬೇಕಾದ ತಂತ್ರಗಳು ಇವುಗಳನ್ನೆಲ್ಲ ಈ ಕೃತಿ ವಿವರಿಸುತ್ತದೆ.
 ಹೆರಿಗೆಯಾದಾಕ್ಷಣ ಎಲ್ಲವೂ ಮುಗಿಯಿತು ಎನ್ನುವಂತಿಲ್ಲ. ಅಲ್ಲಿಂದಲೇ ಎಲ್ಲವೂ ಆರಂಭ. ಆಗಷ್ಟೇ ಹುಟ್ಟಿದ ಮಗುವನ್ನು ಹೂವಿನ ಎಸಳಿನಂತೆ ಮೃದುವಾಗಿ ಬಳಸಬೇಕು. ಈ ಸಂದರ್ಭದಲ್ಲಿ ಹಿರಿಯರು ಹತ್ತಿರವಿರುವುದರ ಅಗತ್ಯವನ್ನೂ ಲೇಖಕಿ ವಿವರಿಸುತ್ತಾರೆ. ಬಾಣಂತನದಲ್ಲಿ ಅಜ್ಜಿ ನಿರ್ವಹಿಸುವ ಪಾತ್ರವೇನು ಎನ್ನುವುದನ್ನು ಅವರು ಸ್ವಾರಸ್ಯಕರವಾಗಿ ಹೇಳುತ್ತಾರೆ. ಬಿಸಿ ನೀರಿನ ಸ್ನಾನ, ಕಂಬಳಿಯೊಳಗೆ ಬೆವರಿಳಿಸಿಕೊಳ್ಳುವುದು, ವಿವಿಧ ಅಜ್ಜಿ ಕಷಾಯ, ಬಾಣಂತನದ ಸಂದರ್ಭದ ವಿಶೇಷ ಔಷಧ, ಅವುಗಳನ್ನು ತಯಾರಿಸುವ ವಿಧಾನ ಇವೆಲ್ಲವನ್ನೂ ಕಥನ ರೂಪದಲ್ಲಿ ಲೇಖಕಿ ವಿವರಿಸಿದ್ದಾರೆ. ಹೆರಿಗೆಯ ಆನಂತರದ ಆರೈಕೆಯ ಕುರಿತಂತೆುೀ ಕೃತಿ ವಿಶೇಷವಾಗಿ ಗಮನ ಹರಿಸುತ್ತದೆ. ಎಲ್ಲೂ ಬರೇ ‘ಆರೋಗ್ಯ ಸಂಪದ’ ಪುಸ್ತಕವಾಗದೆ, ಹೆಣ್ಣಿನ ಬದುಕಿನ ಅಪೂರ್ವ ಕ್ಷಣಗಳಲ್ಲಿ ಒಂದಾದ ಹೆರಿಗೆಯನಂತರದ ದಿನಗಳನ್ನು ಸೃಜನಶೀಲವಾಗಿ ಲಲಿತ ಪ್ರಬಂಧ ರೂಪದಲ್ಲಿ ಕೃತಿ ಕಟ್ಟಿಕೊಡುತ್ತದೆ.
ಬಹುರೂಪಿ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 92. ಮುಖಬೆಲೆ 90 ರೂಪಾಯಿ. ಆಸಕ್ತರು 70191 82729 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News