ಅರಣ್ಯ ಹಕ್ಕುಗಳ ಒತ್ತುವರಿ
ಪ್ರಸ್ತಾಪಿತ ಕರಡಿನಲ್ಲಿ ಉಲ್ಲೇಖಿಸಿರುವಂತೆ ಅರಣ್ಯ ಕಾನೂನಿಗೆ ಸಂಬಂಧಿಸಿದ ಅಪರಾಧವೊಂದನ್ನು ಎಸಗಬಹುದೆಂಬ ಅನುಮಾನ ಮಾತ್ರದಿಂದಲೇ ಅರಣ್ಯಾಧಿಕಾರಿಗಳು ಅನುಮಾನಿತರ ಮೇಲೆ ಗುಂಡು ಹಾರಿಸುವ, ಶೋಧ ನಡೆಸುವ, ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮತ್ತು ಬಂಧಿಸುವ ಅಧಿಕಾರವನ್ನು ಅರಣ್ಯಾಧಿಕಾರಿಗಳಿಗೆ ನೀಡುತ್ತದೆ.
ಭಾರತೀಯ ಅರಣ್ಯ ಹಕ್ಕುಗಳ ಕಾಯ್ದೆ- 2019ರ ಕರಡು ಮಸೂದೆಯು ಭಾರತದಲ್ಲಿರುವ 7,08,273 ಚದರ ಕಿ.ಮೀ.ನಷ್ಟು ವಿಸ್ತಾರವಾಗಿರುವ ಭಾರತದ ಅರಣ್ಯ ಪ್ರದೇಶದ ಆಡಳಿತಾತ್ಮಕ ನಿರ್ವಹಣೆಯ ಅಧಿಕಾರವನ್ನು ಅರಣ್ಯ ಇಲಾಖೆಯ ಆಡಳಿತಶಾಹಿಗೆ ವಹಿಸಿಕೊಡುತ್ತದೆ. ಮತ್ತು ಆ ಮೂಲಕ ದಮನಕಾರಿ ಆಡಳಿತ ವ್ಯವಸ್ಥೆಗೆ ಅವಕಾಶ ಮಾಡಿಕೊಡುತ್ತಿದೆ ಹಾಗೂ ಅದರ ಜೊತೆಗೆ ನವ ಉದಾರವಾದಿ ನೀತಿಗಳನುಸಾರ ಅರಣ್ಯವನ್ನು ವಾಣಿಜ್ಯೀಕರಿಸುವ ಅಂಶಗಳನ್ನೂ ಕೂಡಾ ಒಳಗೊಂಡಿದೆ.
ಕರಡು ನೀತಿಯು 2006ರ ಅರಣ್ಯ ಹಕ್ಕು ಕಾಯ್ದೆಯಲ್ಲಿದ್ದ ಹಲವಾರು ಅಂಶಗಳನ್ನು ಕಿತ್ತು ದಮನಕಾರಿ ಅಂಶಗಳನ್ನು ಸೇರಿಸಿದೆಯಲ್ಲದೆ ರಾಜ್ಯ ಸರಕಾರಗಳಿಗಿದ್ದ ಶಾಸನಾತ್ಮಕ ಮತ್ತು ಆಡಳಿತಾತ್ಮಕ ಅಧಿಕಾರಗಳನ್ನು ಹಿಂದಕ್ಕೆ ಸರಿಸುವ ಅಂಶಗಳನ್ನೂ ಸಹ ಒಳಗೊಂಡಿದೆ. ಈ 2018ರ ಕರಡನ್ನೂ ಈಗ ರಾಜ್ಯ ಸರಕಾರಗಳ ಪರಿಶೀಲನೆ ಮತ್ತು ಸಲಹೆಗಳಿಗಾಗಿ ಕಳಿಸಿಕೊಡಲಾಗಿದೆ. ಈ ಕರಡು ಮಸೂದೆನ್ನು ಕೇಂದ್ರ ಸರಕಾರವು 2006ರ ಕಾಯ್ದೆಯನ್ನು ಸರಿಯಾಗಿ ಸಮರ್ಥಿಸಿಕೊಳ್ಳದಿದ್ದರಿಂದ ಸುಪ್ರೀಂ ಕೋರ್ಟು 2019ರ ಫೆಬ್ರವರಿಯಲ್ಲಿ ನೀಡಿದ ವಿವಾದಾಸ್ಪದ ಆದೇಶದ ನಂತರದಲ್ಲಿ ರೂಪಿಸಲಾಗಿದೆಯೆಂಬುದನ್ನು ಇಲ್ಲಿ ಗುರುತಿಸಬೇಕಿದೆ. ಸಾಮಾಜಿಕವಾಗಿ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ಹಕ್ಕುಗಳನ್ನು ಕಸಿದುಕೊಳ್ಳುವ ಇಂತಹ ಒಂದು ಮಸೂದೆಯನ್ನು ಎನ್‌ಡಿಎ ಸರಕಾರವು ಚುನಾವಣೆಯು ಸನಿಹದಲ್ಲಿರುವಾಗ ಪ್ರಸ್ತಾಪಿಸಿರುವುದು ಒಂದು ವಿಪರ್ಯಾಸವೇ ಸರಿ.
ಈ ದಮನಕಾರಿ ಮತ್ತು ವಿವಾದಸ್ಪದ ಮಸೂದೆಯು 1927ರ ಭಾರತೀಯ ಅರಣ್ಯ ಕಾಯ್ದೆಯ ಹಲವಾರು ಅಂಶಗಳಿಗೆ ತಿದ್ದುಪಡಿಯನ್ನು ಪ್ರಸ್ತಾಪಿಸುತ್ತದೆಯಲ್ಲದೆ 2006ರ ಅರಣ್ಯ ಕಾಯ್ದೆಯ ಪ್ರಮುಖ ಅಂಶಗಳನ್ನು ಉಲ್ಲಂಘಿಸುತ್ತದೆ. ಅರಣ್ಯಾಧಿಕಾರಿಗಳಿಗೆ ಹಲವು ವಿಷಯಗಳಲ್ಲಿ ವಿಟೊ ಪರಮಾಧಿಕಾರವನ್ನು ಕೊಡುವ ಪ್ರಸ್ತಾಪ ಈ ಕರಡಿನಲ್ಲಿದೆ. ಕರಡು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿರುವ ಅತ್ಯಂತ ವಿವಾದಾಸ್ಪದವಾದ ಅಂಶವೆಂದರೆ ಅರಣ್ಯಾಧಿಕಾರಿಗಳಿಗೆ ಅರೆ-ನ್ಯಾಯಿಕ (ಕ್ವಾಸಿ-ಜುಡಿಷಿಯಲ್) ಅಧಿಕಾರವನ್ನು ನೀಡುವುದು ಮತ್ತು ಅರಣ್ಯ ಕಾನೂನುಗಳ ಉಲ್ಲಂಘನೆಯನ್ನು ತಡೆಗಟ್ಟಲು ಅರಣ್ಯಾಧಿಕಾರಿಗಳಿಗೆ ಬಂದೂಕನ್ನು ಬಳಸುವ ಅಧಿಕಾರವನ್ನು ಕೊಟ್ಟಿರುವುದು. ಪ್ರಸ್ತಾಪಿತ ಕರಡಿನಲ್ಲಿ ಉಲ್ಲೇಖಿಸಿರುವಂತೆ ಅರಣ್ಯ ಕಾನೂನಿಗೆ ಸಂಬಂಧಿಸಿದ ಅಪರಾಧವೊಂದನ್ನು ಎಸಗಬಹುದೆಂಬ ಅನುಮಾನ ಮಾತ್ರದಿಂದಲೇ ಅರಣ್ಯಾಧಿಕಾರಿಗಳು ಅನುಮಾನಿತರ ಮೇಲೆ ಗುಂಡು ಹಾರಿಸುವ, ಶೋಧ ನಡೆಸುವ, ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮತ್ತು ಬಂಧಿಸುವ ಅಧಿಕಾರವನ್ನು ಅರಣ್ಯಾಧಿಕಾರಿಗಳಿಗೆ ನೀಡುತ್ತದೆ. ಆದರೆ ತಮ್ಮ ನಿರಪರಾಧಿತನವನ್ನು ಸಾಬೀತುಪಡಿಸುವ ಹೊಣೆಗಾರಿಕೆಯು ಮಾತ್ರ ಸಂಪೂರ್ಣವಾಗಿ ಆರೋಪಿಯ ಮೇಲಿರುತ್ತದೆ. ಮತ್ತೊಂದು ಕಡೆ ಸೈನಿಕ ಬಲಗಳೊಡನೆ ಘರ್ಷಣೆ ನಡೆಯುತ್ತಿರುವ ಪ್ರದೇಶಗಳಲ್ಲಿ 1958ರ ಸಶಸ್ತ್ರ ಬಲಗಳ ವಿಶೇಷಾಧಿಕಾರ ಕಾಯ್ದೆಯು (ಆರ್ಮಡ್ ಫೋರ್ಸಸ್ ಸ್ಪೆಷಲ್ ಪವರ್ಸ್ ಆ್ಯಕ್ಟ್) ಸೈನಿಕರಿಗೆ ಒದಗಿಸುವಂತ ರಕ್ಷಣೆಯನ್ನು ಅರಣ್ಯಾಧಿಕಾರಿಗಳಿಗೂ ನೀಡುವ ಪ್ರಸ್ತಾಪವು ಈ ಮಸೂದೆಯಲ್ಲಿದೆ.
ಅಷ್ಟೇ ಅಲ್ಲ. 2006ರ ಅರಣ್ಯ ಕಾಯ್ದೆಯ ಸ್ವರೂಪವನ್ನೇ ನಿರರ್ಥಕಗೊಳಿಸುವ ರೀತಿ ಮತ್ತೊಂದು ಪ್ತಸ್ತಾಪವನ್ನು ಈ ಕರಡು ಮಾಡುತ್ತದೆ. ಒಂದು ವೇಳೆ ಅರಣ್ಯ ಸಂರಕ್ಷಣೆಯ ದೃಷ್ಟಿಯಿಂದ ಅಗತ್ಯ ಎನಿಸಿದಲ್ಲಿ ಕೇಂದ್ರ ಸರಕಾರದ ಸಮಾಲೋಚನೆಯೊಂದಿಗೆ 2006ರ ಕಾಯ್ದೆಯ ಪ್ರಕಾರ ಅರಣ್ಯವಾಸಿಗಳಿಗೆ ದತ್ತವಾಗುವ ಹಕ್ಕುಗಳನ್ನು ರಾಜ್ಯ ಸರಕಾರಗಳು ಮೊಟಕುಗೊಳಿಸಬೇಕೆಂಬ ಪ್ರಸ್ತಾಪವೂ ಈ ಮಸೂದೆಯಲ್ಲಿದೆ. ಅರಣ್ಯ ವಾಸಿಗಳಿಗೆ ಪರ್ಯಾಯ ಭೂಮಿ ಅಥವಾ ಹಣವನ್ನು ನೀಡುವ ಮೂಲಕ ಇದನ್ನು ಜಾರಿಗೊಳಿಸಲಾಗುವುದು. ಹೀಗೆ ವಸಾಹತುಶಾಹಿ ಕಾಲದಿಂದಲೂ ಮತ್ತು ಆ ನಂತರದ ಸರಕಾರಗಳಿಂದಲೂ ಐತಿಹಾಸಿಕ ಅನ್ಯಾಯಗಳಿಗೆ ಗುರಿಯಾಗುತ್ತಿರುವ ಅರಣ್ಯವಾಸಿಗಳ ಹಕ್ಕುಗಳನ್ನು ಈ ಕರಡು ಮಸೂದೆಯು ಸಂಪೂರ್ಣವಾಗಿ ಉಲ್ಲಂಘಿಸುತ್ತಾ ಅವರನ್ನು ಅಂತಿಮವಾಗಿ ಅರಣ್ಯದಿಂದಲೇ ಎತ್ತಂಗಡಿ ಮಾಡಿಸುತ್ತದೆ.
ಅಷ್ಟು ಮಾತ್ರವಲ್ಲ. ಒಂದು ವೇಳೆ ಈ ವಿಷಯದಲ್ಲಿ ರಾಜ್ಯಸರಕಾರಗಳು ಮಾಡಿರುವ ಕಾನೂನುಗಳು ಕೇಂದ್ರ ಕಾನೂನುಗಳಿಗೆ ವ್ಯತಿರಿಕ್ತವಾಗಿದ್ದರೆ ಕೇಂದ್ರದ ಕಾನೂನೇ ಜಾರಿಯಾಗಬೇಕೆಂದು ಕರಡು ಮಸೂದೆಯು ಹೇಳುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಒಕ್ಕೂಟ ಸ್ಫೂರ್ತಿಯ ಸಂಬಂಧವಿರಬೇಕೆಂಬ ಸಾಂವಿಧಾನಿಕ ತತ್ವವನ್ನೇ ಈ ಮಸೂದೆ ಉಲ್ಲಂಘಿಸುತ್ತದೆ. ಇದರ ಜೊತೆಗೆ ಮಸೂದೆಯು ಪ್ರಸ್ತಾಪಿಸುವ ಗ್ರಾಮ ಅರಣ್ಯಗಳು ಗ್ರಾಮಸಭಾವನ್ನು ಹೊರಗಿಡುವುದರ ಮೂಲಕ ವಿಕೇಂದ್ರೀಕೃತ ಆಡಳಿತದ ತತ್ವವನ್ನೂ ಉಲ್ಲಂಘಿಸುತ್ತದೆ. ಹೀಗಾಗಿ ಒಂದು ವೇಳೆ ಈ ಪ್ರಸ್ತಾಪಿತ ತಿದ್ದುಪಡಿಗಳು ಜಾರಿಗೆ ಬಂದಲ್ಲಿ ಸಂವಿಧಾನವು ರಾಜ್ಯಗಳಿಗೆ ಮತ್ತು ನಾಗರಿಕರಿಗೆ ಕೊಟ್ಟಿರುವ ಮೂಲಭೂತ ಹಕ್ಕುಗಳು ಮತ್ತು ತತ್ವಗಳು ಹರಣವಾಗುತ್ತವೆ.
ಅರಣ್ಯವನ್ನು ವಾಣಿಜ್ಯೀಕರಿಸುವ ಉದ್ದೇಶಕ್ಕೆ ಸಂಬಂಧಪಟ್ಟಂತೆ ಅರಣ್ಯವನ್ನು ಖಾಸಗೀಕರಿಸುವ ಪ್ರಸ್ತಾವಗಳನ್ನು ಮಾಡಿರುವುದಲ್ಲದೆ, ಉತ್ಪಾದಕ ಅರಣ್ಯಗಳನ್ನು ಹುಟ್ಟುಹಾಕುವ ಉದ್ದೇಶವನ್ನೂ ಮಸೂದೆಯು ಪ್ರಸ್ತಾಪಿಸುತ್ತದೆ. ಇದು 2006ರ ಕಾಯ್ದೆಯ ಮತ್ತು ಅರಣ್ಯ ಸಂಪನ್ಮೂಲಗಳ ಪ್ರಜಾತಾಂತ್ರಿಕ ನಿರ್ವಹಣೆಯ ಅಂಶಗಳ ಮತ್ತಷ್ಟು ಉಲ್ಲಂಘನೆಯಾಗಿದೆ. ಏಕೆಂದರೆ ಅದು ಅರಣ್ಯಭೂಮಿ ಮತ್ತು ಇತರ ಸಾಮುದಾಯಿಕ ಸಂಪನ್ಮೂಲಗಳ ಬಳಕೆಯ ವಿಷಯದಲ್ಲಿ ಈಗ ಅಸ್ತಿತ್ವದಲ್ಲಿರುವ ಸಹಕಾರಿ ಅಥವಾ ಜಂಟಿ ನಿರ್ವಹಣೆ ವ್ಯವಸ್ಥೆಯನ್ನು ಕಿತ್ತುಹಾಕಿ ಖಾಸಗಿ ಲೂಟಿಗೆ ಅವಕಾಶ ಮಾಡಿಕೊಡುತ್ತದೆ ಮತ್ತು ಆ ಮೂಲಕ ಈಗಾಗಲೇ ವಂಚಿತವಾಗಿರುವ ದುರ್ಬಲ ಸಮುದಾಯಗಳಿಗೆ ಮತ್ತಷ್ಟು ಅನ್ಯಾಯವನ್ನು ಮಾಡುತ್ತದೆ.
ಅರಣ್ಯವಾಸಿಗಳು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ವಂಚಿತ ಸಮುದಾಯಗಳಾಗಿದ್ದು ಅದರಲ್ಲೂ ಆದಿವಾಸಿ ಮತ್ತು ಬುಡಕಟ್ಟು ಸಮುದಾಯಗಳಂತೂ ತಮ್ಮ ಜೀವನ ನಿರ್ವಹಣೆಗೆ ಕಾಡುಗಳನ್ನೇ ಆಧರಿಸಿವೆ. ಹೀಗಿದ್ದರೂ ಈ ಅರಣ್ಯವಾಸಿಗಳ ನಾಗರಿಕ ಹಕ್ಕುಗಳನ್ನೇ ಕಸಿದು ಅವರನ್ನು ಮತ್ತಷ್ಟು ಅಪಾಯಕ್ಕೆ ದೂಡುವ ಇಂತಹ ಒಂದು ಸರ್ವಾಧಿಕಾರಿ ಮಸೂದೆಯನ್ನು ಜಾರಿ ಮಾಡಲು ಕೇಂದ್ರ ಸರಕಾರವು ಏಕೆ ಉತ್ಸುಕವಾಗಿದೆ? ಒಂದೆಡೆ ಆದಿವಾಸಿಗಳ ಹಕ್ಕುಗಳ ಉಲ್ಲಂಘನೆಯ ಬಗ್ಗೆ ದಿವ್ಯ ನಿರ್ಲಕ್ಷ್ಯವನ್ನು ತೋರುತ್ತಿರುವ ಸರಕಾರವು ಮತ್ತೊಂದೆಡೆ 2006ರ ಕಾಯ್ದೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾ ಅರಣ್ಯವಾಸಿಗಳ ಹಿತಾಸಕ್ತಿಗೆ ವಿರುದ್ಧವಾದ ತಿದ್ದುಪಡಿಗಳನ್ನು ತರಲು ಏಕೆ ಮುಂದಾಗಿದೆ? ಎಲ್ಲಕ್ಕಿಂತ ಹೆಚ್ಚಾಗಿ ಇದರ ಬಗ್ಗೆ ಕೂಲಂಕಷವಾದ ರಾಜಕೀಯ ಮತ್ತು ಸಾರ್ವಜನಿಕ ಚರ್ಚೆಯನ್ನೇ ಮಾಡದೆ ಇಂತಹ ತಿದ್ದುಪಡಿಗಳನ್ನು ತರಲು ಹೊರಟಿರುವುದು ಆಘಾತಕಾರಿಯಾಗಿದೆ.
ಅತ್ಯಂತ ಹಿಂದುಳಿದ ಆದಿವಾಸಿ ಪ್ರದೇಶಗಳಲ್ಲೇ ಬಡತನವು ಹೆಚ್ಚಾಗಿರುವ ಮತ್ತು ದಿನಗಳೆದಂತೆ ಅಸಮಾನತೆಯು ಹೆಚ್ಚಾಗುತ್ತಿರುವ ದೇಶವೊಂದರಲ್ಲಿ ಅರಣ್ಯ ನಿರ್ವಹಣೆಗೆ ಮತ್ತು ಅರಣ್ಯ ಹಕ್ಕುಗಳಿಗೆ ಸಂಬಂಧಪಟ್ಟ ಸಂಗತಿಗಳು ಒಂದು ಸಮಸ್ಯೆಯೇ ಅಲ್ಲವೆಂಬಂತೆ ರಾಜಕೀಯ ಪಕ್ಷಗಳು ನಿರ್ಲಕ್ಷ್ಯ ಮಾಡುತ್ತಿರುವುದು ದುರದೃಷ್ಟಕರ. ಕಾಂಗ್ರೆಸ್ ಪ್ರಣಾಳಿಕೆಯು ಕನಿಷ್ಠ ಅರಣ್ಯ ನಿರ್ವಹಣೆಯಲ್ಲಿ ಸ್ಥಳೀಯ ಸಮುದಾಯಗಳನ್ನು ಒಳಗೊಳ್ಳುವಂಥ ಸಮಗ್ರ ಚೌಕಟ್ಟನ್ನು ರೂಪಿಸುವ ಮಾತುಗಳನ್ನಾದರೂ ಆಡಿದೆ. ಆದರೆ ಬಿಜೆಪಿಯು ಮಾತ್ರ 2006ರ ಕಾಯ್ದೆಯನ್ನು ಅನುಷ್ಠಾನ ಮಾಡುವಲ್ಲಿನ ಸಮಸ್ಯೆಗಳ ಬಗ್ಗೆ ಒಂದು ಮಾತನ್ನೂ ಸಹ ಆಡಿಲ್ಲ.
ಅದೇನೇ ಇದ್ದರೂ, ಅರಣ್ಯಾಧಾರಿತ ಸಮುದಾಯಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದಲ್ಲಿ ಅರಣ್ಯ ಕಾನೂನಿಗೆ ತರಬೇಕೆಂದಿರುವ ಎಲ್ಲಾ ಬಗೆಯ ದಮನಕಾರಿ ಮತ್ತು ಅನ್ಯಾಯಯುತ ತಿದ್ದುಪಡಿಗಳನ್ನು ಕೈಬಿಡಬೇಕು ಮತ್ತು ಅರಣ್ಯ ನಿರ್ವಹಣೆಯಲ್ಲಿ ಪ್ರಜಾತಾಂತ್ರಿಕ ಧೋರಣೆಯನ್ನು ಅಳವಡಿಸಿಕೊಳ್ಳಬೇಕು; ಏಕೆಂದರೆ ಒಂದು ವೇಳೆ ಈ ತಿದ್ದುಪಡಿಗಳು ಜಾರಿಯಾದಲ್ಲಿ ಪ್ರಭುತ್ವವೇ ಅರಣ್ಯಭೂಮಿಯ ಗಡಿರೇಖೆಗಳನ್ನು ಬದಲಿಸುತ್ತಾ ಹೊಸಬಗೆಯ ಅಸಮಾನತೆಗಳಿಗೆ ಮತ್ತು ಪೌರತ್ವ ನಿರಾಕರಣೆಗೆ ಕಾರಣವಾಗುತ್ತದೆ.