ಅಪ್ಟೆಯ ಹೇಳಿಕೆಗಳು...
ಭಾಗ-23
‘‘ನನ್ನ ವಿರುದ್ಧವಾಗಿ ಸಂಗ್ರಹಿಸಿ ದಾಖಲಿಸಿದ ಸಾಕ್ಷ ಎಲ್ಲ ಸೃಷ್ಟಿಸಿದ್ದು. ನಾನು ಹಿಂದೂ ಮಹಾಸಭಾ ಭವನದ ಹಿಂದಿನ ಜಾಗ ತೋರಿಸಿದಾಗ, ಗ್ವಾಲಿಯರ್‌ನಲ್ಲಿ ಡಾ.ಪರಚುರೆ ಮನೆ ತೋರಿಸಿದಾಗ ನಾನು ಸಂಪೂರ್ಣವಾಗಿ ಪೊಲೀಸರ ಅಸ್ವತಂತ್ರ ಸೆರೆಯಾಳಾಗಿದ್ದೆ. ಪೊಲೀಸರು ಹೇಳಿದಂತೆ ಮಾಡದಿದ್ದರೆ ನನ್ನನ್ನು ಕೊಲ್ಲುವುದಾಗಿ, ನನ್ನ ಕುಟುಂಬ ವರ್ಗದವರನ್ನು ಚಿತ್ರಹಿಂಸೆಗೆ ಒಳಪಡಿಸುವುದಾಗಿ ಹೆದರಿಸಿದರು. ನಾನು ಸಂಪೂರ್ಣ ಅವರ ಕೃಪಾಧೀನನಾಗಿದ್ದೆ.’’
ಓದಿ ಮುಗಿಸಿದ ಮೇಲೆ ನ್ಯಾಯಾಧೀಶರು ಸಾವರ್ಕರ್‌ಗೆ ಪ್ರಶ್ನೆ ಹಾಕಿದರು.
ಪ್ರಶ್ನೆ : ಜನವರಿ 48ರ ಮೊದಲನೇ ವಾರದಲ್ಲಿ ಮದನ್‌ಲಾಲ್, ಡಾ.ಜೈನ್ ಅವರ ಮುಂದೆ ಅವನು ಅಹಮದ್ ನಗರದಲ್ಲಿ ಮಾಡಿದ ಸಾಹಸ ಕೃತ್ಯಗಳನ್ನು ಹೇಳಿದನೆಂದೂ ಅವನನ್ನು ನೀವು ಕರೆಸಿ ಭೇಟಿಮಾಡಿ ಅವನ ಕೃತ್ಯಗಳನ್ನು ಶ್ಲಾಘಿಸಿದಿರೆಂದೂ ಸಾಕ್ಷ ನುಡಿದಿದ್ದಾರೆ. ಅದಕ್ಕೆ ನೀವು ಏನು ಹೇಳುವಿರಿ?
ಉತ್ತರ: ಅದು ಶುದ್ಧ ಸುಳ್ಳು.
ಪ್ರಶ್ನೆ: ಜನವರಿ 17 ರಂದು ರಾತ್ರಿ 9:00 ಗಂಟೆ ಹೊತ್ತಿನಲ್ಲಿ ನಾಥೂರಾಮ್ ಗೋಡ್ಸೆ, ನಾರಾಯಣ ಅಪ್ಟ್ಟೆ ನಿಮ್ಮ ಮನೆಗೆ ಬಂದಿದ್ದರೆಂದೂ ಅವರು ಬಾಂಬ್ ಮತ್ತು ಸ್ಫೋಟಕ ಸಾಮಗ್ರಿ ಇದ್ದ ಒಂದು ಚೀಲವನ್ನು ಹಿಡಿದುಕೊಂಡಿದ್ದರೆಂದೂ, ಸ್ವಲ್ಪ ಹೊತ್ತಿನ ನಂತರ ಅವರು ಹೋದರೆಂದೂ ಹೇಳಿದ್ದಾರೆ.
ಉತ್ತರ: ಇದೆಲ್ಲ ಸುಳ್ಳು.
ಪ್ರಶ್ನೆ: ಮಹಾತ್ಮಾ ಗಾಂಧಿ, ಪಂಡಿತ ನೆಹರೂ, ಸುಹ್ರವರ್ದಿ ಇವರನ್ನು ಮುಗಿಸಬೇಕೆಂಬ ನಿರ್ಧಾರವನ್ನು ನೀವು ಮಾಡಿರುವುದಾಗಿ, ದೀಕ್ಷಿತ್ ಮಹರಾಜರ ಮನೆಯ ಮುಂದಿನ ಕಾಂಪೌಂಡಿನಲ್ಲಿ ಜನವರಿ 15ರ ಬೆಳಗ್ಗೆ ನಾಥೂರಾಮನ ಸಮ್ಮುಖದಲ್ಲಿ ಬಡ್ಗೆ ಹೇಳಿದನೆಂದು ಹೇಳುತ್ತಾರೆ.
ಉತ್ತರ: ಅಂತಹ ಮಾತನ್ನು ಅಪ್ಟ್ಟೆ, ಗೋಡ್ಸೆ ಮತ್ತೆ ಯಾರಿಗಾದರೂ ನಾನು ಹೇಳಿಲ್ಲ.
ಪ್ರಶ್ನೆ: ಜನವರಿ 17ರಂದು ನಾಥೂರಾಮ್ ಗೋಡ್ಸೆ, ಅಪ್ಟ್ಟೆ, ಬಡ್ಗೆ ನಿಮ್ಮ ಮನೆಗೆ ಬಂದರೆಂದೂ, ಸುಮಾರು ಅಂದಾಜು ಹತ್ತು ನಿಮಿಷಗಳ ನಂತರ ಅವರೊಡನೆ ನೀವು ಹೊರಬಂದು: ‘ಯಶಸ್ವಿಯಾಗಿ ಹಿಂದಿರುಗಿ ಬನ್ನಿ’ ಎಂದು ಹೇಳಿದಿರೆಂದು ನುಡಿಯುತ್ತಾರೆ.
ಉತ್ತರ: ಇದು ನಿಜವಲ್ಲ.
ಪ್ರಶ್ನೆ: ಜನವರಿ 17ಕ್ಕಿಂತ ಮೊದಲು ನಿಮಗೆ ನಾಥೂರಾಮ್ ಗೋಡ್ಸೆ, ನಾರಾಯಣ ಅಪ್ಟ್ಟೆ ಮತ್ತು ಕರ್ಕರೆ, ಪರಚುರೆ, ಬಡ್ಗೆ, ಮದನ್‌ಲಾಲ್‌ರ ಪರಿಚಯ ಇತ್ತೆಂದು ಹೇಳಿದ್ದಾರೆ.
ಉತ್ತರ: ಗೋಡ್ಸೆ ಮತ್ತು ಅಪ್ಟ್ಟೆ ಹಿಂದೂ ಮಹಾಸಭೆಯ ಚಟುವಟಿಕೆಗಳ ಸಂಬಂಧವಾಗಿ ನನಗೆ ಚೆನ್ನಾಗಿ ಗೊತ್ತು. ಕರ್ಕರೆ, ಪರಚುರೆ, ಬಡ್ಗೆ ಇವರ ಹೆಸರುಗಳನ್ನು ಕೇಳಿದ್ದೆ. ಅವರ ಪ್ರತ್ಯಕ್ಷ ಪರಿಚಯ ನನಗಿಲ್ಲ. ಮದನ್‌ಲಾಲ್ ನನಗೆ ಗೊತ್ತೇ ಇಲ್ಲ.
ಪ್ರಶ್ನೆ: ಮತ್ತೇನಾದರೂ ಹೇಳುವುದಿದೆಯೇ?
ಉತ್ತರ: ‘‘ಏನೂ ಇಲ್ಲ. ನನ್ನ ಪರ ಸಾಕ್ಷಿಗಳಿಲ್ಲ’’ ಎಂದು ಹೇಳಿ ಮುಗಿಸಿದರು.
ಹೀಗೆ ಒಬ್ಬೊಬ್ಬ ಆರೋಪಿಯ ವಿರುದ್ಧವಾಗಿ ದಾಖಲಾಗಿದ್ದ ಸಾಕ್ಷವನ್ನು ಅವರ ಗಮನಕ್ಕೆ ತಂದು ಅವರ ಸಮಜಾಯಿಷಿಯನ್ನು ನ್ಯಾಯಾಧೀಶರು ಬರೆದುಕೊಂಡರು. ಅವರೆಲ್ಲರ ವಿವರವಾದ ಹೇಳಿಕೆಗಳನ್ನು ಇಲ್ಲಿ ಪ್ರಸ್ತಾವಿಸುವ ಅಗತ್ಯವಿಲ್ಲ. ಆದರೆ ಈ ಕೃತ್ಯದಲ್ಲಿ ಪ್ರಮುಖ ಪಾತ್ರವಹಿಸಿದ, ಇನ್ನಿಬ್ಬರ ಬಗ್ಗೆ ಗಮನಹರಿಸಬೇಕಾದ್ದು ಅಗತ್ಯ. ನಾಥೂರಾಮನ ಮೆದುಳೂ ಬಲಗೈ ಬಂಟನೂ ಆಗಿದ್ದ ನಾರಾಯಣ ಅಪ್ಟ್ಟೆಯ ನಿಲುವು ಏನು?
ನಾರಾಯಣ ದತ್ತಾತ್ರೇಯ ಅಪ್ಟ್ಟೆ 22 ಪುಟಗಳ ಈ ಲಿಖಿತ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಾದರಪಡಿಸಿದ ಅವನ ಹೇಳಿಕೆ ಹೀಗಿದೆ: ‘‘ನಾನು ನಿರಪರಾಧಿ. ಖೂನಿ ಆದ ಸ್ಥಳದಲ್ಲಿ ಸಮಯದಲ್ಲಿ ನಾನಿರಲಿಲ್ಲ. ಮಹಾತ್ಮಾ ಗಾಂಧಿಯ ಕೊಲೆಯಲ್ಲಿ ಸಹಭಾಗಿ ಮತ್ತು ಆ ಕೊಲೆ ಮಾಡಲು ನಾನು ಪ್ರೋತ್ಸಾಹ ಕೊಟ್ಟೆ. ಅದರ ಯೋಜನೆ ರೂಪಿಸದೆ ಮತ್ತು ಕೊಲೆಗೆ ನೆರವಾದೆ ಎಂಬ ಎಲ್ಲಾ ಆರೋಪಗಳು ಶುದ್ಧಾಂಗ ಸಳ್ಳು.’’
‘‘ನನ್ನ ವಿರುದ್ಧವಾಗಿ ಸಂಗ್ರಹಿಸಿ ದಾಖಲಿಸಿದ ಸಾಕ್ಷ ಎಲ್ಲ ಸೃಷ್ಟಿಸಿದ್ದು. ನಾನು ಹಿಂದೂ ಮಹಾಸಭಾ ಭವನದ ಹಿಂದಿನ ಜಾಗ ತೋರಿಸಿದಾಗ, ಗ್ವಾಲಿಯರ್‌ನಲ್ಲಿ ಡಾ.ಪರಚುರೆ ಮನೆ ತೋರಿಸಿದಾಗ ನಾನು ಸಂಪೂರ್ಣವಾಗಿ ಪೊಲೀಸರ ಅಸ್ವತಂತ್ರ ಸೆರೆಯಾಳಾಗಿದ್ದೆ. ಪೊಲೀಸರು ಹೇಳಿದಂತೆ ಮಾಡದಿದ್ದರೆ ನನ್ನನ್ನು ಕೊಲ್ಲುವುದಾಗಿ ನನ್ನ ಕುಟುಂಬ ವರ್ಗದವರನ್ನು ಚಿತ್ರಹಿಂಸೆಗೆ ಒಳಪಡಿಸುವುದಾಗಿ ಹೆದರಿಸಿದರು. ನಾನು ಸಂಪೂರ್ಣ ಅವರ ಕೃಪಾಧೀನನಾಗಿದ್ದೆ.’’ ಅವನ ಹಿನ್ನೆಲೆ ಏನು ಎಂಬುದನ್ನು ಹೀಗೆ ಹೇಳಿಕೊಂಡಿದ್ದ: ‘‘ನಾನು ಹಿಂದೂ ಎಂಬುದು ನನಗೆ ಬಹು ಹೆಮ್ಮೆಯ ವಿಷಯ. ಹಿಂದೂಗಳು ಒಗ್ಗಟ್ಟಾಗಿ ಬಹು ಪ್ರಬಲರಾಗಬೇಕು. ಗಾಂಧೀಜಿಯ ಅಹಿಂಸಾ ನೀತಿ ಹಿಂದುತ್ವಕ್ಕೆ ಅಪಾರ ಅಪಾಯಕಾರಿ ಎಂಬುದು ನನ್ನ ದೃಢ ನಂಬುಗೆ.’’ ಜನವರಿ 20 ರಂದು ದಿಲ್ಲಿಯಲ್ಲಿ ಇದ್ದನೆಂದು ಒಪ್ಪಿಕೊಂಡ ಅಪ್ಟ್ಟೆ ಹೇಳುತ್ತಾನೆ: ‘‘ಅಂದು ಸಂಜೆ ಪ್ರಾರ್ಥನಾ ಸಭೆಗೆ ಹಾಜರಾಗಿ ಗಾಂಧೀಜಿಯನ್ನು ಮುಖಾಮುಖಿಯಾಗಿ, ಹಿಂದುಸ್ಥಾನ ಸರಕಾರ ತನ್ನ ಮೊದಲ ನಿಲುಮೆಯನ್ನು ಬದಲಾಯಿಸಿ ಪಾಕಿಸ್ತಾನಕ್ಕೆ 55 ಕೋಟಿ ರೂಪಾಯಿಗಳನ್ನು ಕೊಡಲು ನಿರ್ಧರಿಸಿದ್ದರಲ್ಲಿ ತಮ್ಮ ಪಾತ್ರ, ಪ್ರಭಾವ ಎಷ್ಟಿತ್ತು ಎಂದು ಪ್ರಶ್ನಿಸಬೇಕೆಂದಿದ್ದೆ. ಆ ಸಂಜೆ ಧ್ವನಿವರ್ಧಕ ಯಂತ್ರ ಕೆಟ್ಟುಹೋದದ್ದರಿಂದ ನಾವು ಅಲ್ಲಿ ಪ್ರದರ್ಶನ ಮಾಡಬೇಕೆಂದಿದ್ದ ಯೋಜನೆ ಕೈಗೊಳ್ಳುವುದು ಅಸಾಧ್ಯವೆಂದು ನನಗನಿಸಿತು. ನಾನು ಜನವರಿ 15ರಂದು ಬಡ್ಗೆಯನ್ನು ಕಂಡದ್ದು ನಿಜ. ಅವನು ದಿಲ್ಲಿಯಲ್ಲಿ ಪ್ರದರ್ಶನದಲ್ಲಿ ಭಾಗಿ ಆಗಲು ಅವನೇ ಸ್ವಬುದ್ಧಿಯಿಂದ ಬರಲೊಪ್ಪಿದ್ದ. ಅವನು ಯಾವುದೇ ಆಯುಧವನ್ನು, ಸ್ಫೋಟಕ ಸಾಮಗ್ರಿಯನ್ನು ದಿಲ್ಲಿಗೆ ತರಬಾರದೆಂದು ನಿಷೇಧಿಸಿದ್ದೆ. ಯಾಕೆಂದರೆ ನಾವು ಶಾಂತಿಯುತವಾಗಿ ಪ್ರದಶರ್ನಮಾಡಲು ಉದ್ದೇಶಿಸಿದ್ದೆವು. ಆದರೂ ಅವನು ಕೆಲವು ಬಾಂಬುಗಳನ್ನು, ಸ್ಫೋಟಕ ಸಾಮಗ್ರಿಗಳನ್ನೂ ತಂದಿದ್ದ. ಅವುಗಳನ್ನೆಲ್ಲ ದಿಲ್ಲಿಯಲ್ಲಿದ್ದ ನಿರಾಶ್ರಿತರಿಗೆ ಹಂಚಿದೆವು.ಅವರಲ್ಲಿ ಮದನ್‌ಲಾಲ್‌ನಿದ್ದ.
‘‘ಮದನ್‌ಲಾಲ್‌ನನ್ನು ಅರೆಸ್ಟ್ ಮಾಡಿದ ಸುದ್ದಿ ಕೇಳಿದ ಕೂಡಲೇ ನಾನು ದಿಲ್ಲಿಯನ್ನು ಬಿಟ್ಟು ಮುಂಬೈಗೆ ಬಂದೆ. ಅಲ್ಲಿ ಗೋಡ್ಸೆಯನ್ನು ಕಂಡೆ. ಮತ್ತೆ ನಾವಿಬ್ಬರೂ ದಿಲ್ಲಿಯಲ್ಲಿ ಪ್ರದರ್ಶನ ಮಾಡಲು ನಿರ್ಧರಿಸಿದೆವು. ಆದರೆ ಪ್ರದರ್ಶನಕ್ಕೆ ಸಾಕಷ್ಟು ಜನ ಪ್ರದರ್ಶನಕಾರರು ಸಿಗಲಿಲ್ಲ. ಕೆಲವರು ಭೂಗತರಾಗಿದ್ದರು. ಮತ್ತೆ ಕೆಲವರನ್ನು ಸೆರೆಹಿಡಿಯಲಾಗಿತ್ತು. ಮುಂಬೈಯಿಂದ ದಿಲ್ಲಿಗೆ ಪ್ರದರ್ಶನಕಾರರನ್ನು ಕರೆದೊಯ್ಯುವುದು ಕಷ್ಟವಾಗಿತ್ತು. ಆದ್ದರಿಂದ ಗ್ವಾಲಿಯರ್‌ನಿಂದ ಕೆಲವರು ದಿಲ್ಲಿಯಲ್ಲಿ ಪ್ರದರ್ಶನಮಾಡಲು ಸ್ವಯಂ ಸೇವಕರನ್ನು ಒದಗಿಸುವರೋ ಎಂದು ಡಾ.ಪರಚುರೆಯನ್ನು ಕಾಣಲು ಗ್ವಾಲಿಯರ್‌ಗೆ ಹೋದೆವು. ಅಲ್ಲಿಯೂ ಪ್ರದರ್ಶನಕ್ಕಾಗಿ ಸ್ವಯಂ ಸೇವಕರು ದೊರೆಯಲಿಲ್ಲ. ಆದ್ದರಿಂದ ನಾಥೂರಾಮ್ ನನ್ನನ್ನು ಮುಂಬೈಗೆ ಹೋಗಲು ತಿಳಿಸಿದ. ನಾನು ಜನವರಿ 28 ರಂದು ಮುಂಬೈಗೆ ಹೊರಟೆ. ನಾಥೂರಾಮ್ ಗೋಡ್ಸೆ ದಿಲ್ಲಿಗೆ ಹೋದ. ನಾನು ಮುಂಬೈಗೆ 30 ರಂದು ಬಂದು ಸೇರಿದೆ. ಆ ಇಡೀ ದಿನ ಧನಸಂಗ್ರಹ ಮಾಡಲು, ಸ್ವಯಂಸೇವಕರನ್ನು ಸೇರಿಸಲು ಪ್ರಯತ್ನಿಸಿದೆ. ಆ ಸಂಜೆ ಗಾಂಧಿ ಕೊಲೆಯಾಗಿದೆ ಮತ್ತು ಗೋಡ್ಸೆ ಅರೆಸ್ಟ್ ಆಗಿದೆ ಎಂಬ ಸುದ್ದಿ ಕೇಳಿದೆ. ಕೂಡಲೇ ನಾನು ದಿಲ್ಲಿಗೆ ಹೋಗಲು ನಿರ್ಧರಿಸಿದೆ. ನಾನು ಗೋಡ್ಸೆ ಗೆಳೆಯನಾಗಿದ್ದುದರಿಂದ ನನ್ನನ್ನು ಅರೆಸ್ಟ್ ಮಾಡುವರೆಂಬ ಕಾರಣದಿಂದ ಹೋಗಲಿಲ್ಲ. ಜನವರಿ 15ರಂದು ನಾನು ಬಡ್ಗೆಗೆ, ಸಾವರ್ಕರ್‌ರು, ನೆಹರು, ಸುಹ್ರವರ್ದಿ ಮತ್ತು ಗಾಂಧಿಯನ್ನು ಕೊಲ್ಲಬೇಕೆಂದು ಹೇಳಿದರೆಂದೂ, ಆ ಜವಾಬ್ದಾರಿಯನ್ನು ನಮಗೆ ವಹಿಸಿದ್ದರೆಂಬುದು ಸುಳ್ಳು.’’