ಪದ ಕಳೆದುಕೊಳ್ಳುತ್ತಿರುವ ಜನಪದ ‘ಗೊರವರ ಕುಣಿತ!’

Update: 2019-04-20 14:56 GMT

ಕಳಕೇಶ್ ಗೊರವರ, ರಾಜೂರ

ತಿಹಾಸಕಾರರ ಪ್ರಕಾರ, ನಮ್ಮ ಪೂರ್ವಜರು ತಮ್ಮ ಅಂತರಾಳದ ತುಡಿತ, ಮಿಡಿತಗಳನ್ನು ಹೊರಹಾಕಲು ತಾವು ನಂಬಿದ ಸಮುದಾ ಯದ ನಾಯಕ, ದೈವದ ಮಹಿಮೆ, ಲೀಲೆ, ಪವಾಡ, ಪುರಾಣಗಳನ್ನು ಹಾಡಿ, ಕಥನಿಸಿ, ಆವೇಶದುಂಬಿ ಕುಣಿದು ಇಡೀ ವೃಂದದ ಮೇಲೆ ಗಾಢವಾದ ಪ್ರಭಾವಬೀರುತ್ತ, ಎಲ್ಲವನ್ನೂ ಕಾಪಿಟ್ಟುಕೊಂಡು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವ ವೀರಗಾಸೆ, ಡೊಳ್ಳುಕುಣಿತ, ಕೋಲಾಟ, ಕಂಸಾಳೆ, ಗೊರವರ ಕುಣಿತ ಹಾಗೂ ಇಂತಹ ಎಲ್ಲ ಜನಪದ ಕುಣಿತಗಳು ಅಲಿಖಿತರೂಢಿ ಪರಂಪರೆಗಳ ಮೂಲಕ ವಿವಿಧ ಜನಪದವೃಂದಗಳಲ್ಲಿ ಪರಿಚಲನೆಗೊಳ್ಳುತ್ತ ನಮ್ಮ ಸಂಸ್ಕೃತಿಯ ಸಂವಾಹಕ ಕಲಾರೂಪಗಳಾಗಿವೆ. ಇಂತಹ ಜನಪದ ಕುಣಿತಗಳು ಬಹು ವ್ಯಾಪಕ ಮತ್ತು ಅಷ್ಟೇ ವೈವಿಧ್ಯ ಪೂರ್ಣ. ಅನೂಚಾನವಾಗಿ ಅನುಸರಿಸುತ್ತ ಬಂದ ಕುಣಿತಗಳಲ್ಲಿ ಆಯಾಜನಾಂಗದಆಚರಣೆ, ಸಂಪ್ರದಾಯ, ನಂಬಿಕೆಗಳನ್ನು ಮನಗಾಣ ಬಹುದಾಗಿದೆ.

ನಮ್ಮ ಆದಿಮ ಪರಂಪರೆಯ ಬೇರುಗಳಂತಿರುವ ಗೊರವರ ಕುಣಿತ, ಕುರುಬ ಗೌಡ ಜನಾಂಗವೊಂದರ ಸಾಂಸ್ಕೃತಿಕ ಅಭಿವ್ಯಕ್ತಿಯಾಗಿದೆ. ಇದು ಒಂದು ಸಮುದಾಯದ ಹಿರೀಕರ ಸಾಮೂಹಿಕ ನಂಬುಗೆಯನ್ನು ವ್ಯಾಖ್ಯಾನಿಸುತ್ತದೆ. ಈ ಕುಣಿತಗಳ ವಿಷಯ, ವೇಷಭೂಷಣ ಹಾಗೂ ಸಾಮಗ್ರಿ ಒಟ್ಟು ಮನುಷ್ಯನ ಬದುಕೇ ಆಗಿದೆ.

ಗೊರವ ಕಲಾವಿದರು ತಮ್ಮ ಎದೆಯಲ್ಲಿ ನೂರಾರು ಹಾಡು, ಕಥೆ ಗಳನ್ನು ಇಟ್ಟುಕೊಂಡ ಪ್ರತಿಭಾವಂತರು. ಕುದುರೆಕಾರರು, ಕಾರಣಿಕದ ಗೊರವರು ಹಾಗೂ ಕಂಚಾವೀರರು ಎಂದು ಗೊರವರ ಕುಣಿತದಲ್ಲಿ ಪ್ರಮುಖವಾಗಿ ಮೂರು ಪ್ರಕಾರಗಳಿದ್ದು, ಕರ್ನಾಟಕದ ಉತ್ಕೃಷ್ಟ ವೃತ್ತಿಗಾಯಕ ಪರಂಪರೆಗೆ ಸೇರಿದ ಗೊರವರು ತಮ್ಮ ಶೈವ ಸಂಬಂಧಿ ಸಾಂಪ್ರದಾಯಿಕ ಕುಣಿತದಲ್ಲಿ ಆಕರ್ಷಕ, ಕಲಾತ್ಮಕ ಸ್ವರೂಪವನ್ನು ಹಾಗೂ ಮನುಷ್ಯನ ಮೃಗೀಯ ಪ್ರವೃತ್ತಿಯನ್ನು ಏಕಕಾಲದಲ್ಲಿ ಅಭಿವ್ಯಕ್ತಿಸುತ್ತಾರೆ. ನೂರು ಮಾತಿನಲ್ಲಿ ಹೇಳಲಾಗದ್ದನ್ನ ಹಲವು ಭಾವಭಂಗಿಯಲ್ಲಿ ಸಹ್ಯ ವಾಗಿ ತೋರುವ ಗೊರವರ ಕುಣಿತವನ್ನು ನೋಡುವುದೇ ಒಂದು ಸೊಗಸು. ಗೊರವರ ಕಾವ್ಯಕಥನದ ರೀತಿ ಕೂಡಾ ಸಮ್ಮೋಹಕವಾಗಿದೆ.

ಯಾರು ಈ ಗೊರವರು?:

ಗೊರವರು ಮೈಲಾರಲಿಂಗನ ಗುಡ್ಡರುಅಂದರೆ ಭಕ್ತರು. ಗೊರವರನ್ನು ಕರ್ನಾಟಕದ ದಕ್ಷಿಣ ಭಾಗದಲ್ಲಿ ಗೊರವ,ಗೊಗ್ಗಯ್ಯ, ಗಡಬಡ್ಡಯ್ಯ ಎಂದು ಹಾಗೂ ಉತ್ತರ ಭಾಗದಲ್ಲಿ ಗ್ವಾರಪ್ಪ, ವಗ್ಗ, ವಾಘ್ಯಾ ಎಂದೂ ಕರೆಯುತ್ತಾರೆ. ಈ ಗೊರವರು ಮೈಲಾರಲಿಂಗನ ಲೀಲೆಗಳನ್ನು ಪ್ರಮುಖವಾಗಿ ಹಾಡುವುದಾದರೂ ದಕ್ಷಿಣ ಭಾಗದ ‘ಮುಡುಕುತೊರೆ’ ಕ್ಷೇತ್ರಕ್ಕೆ ಸೇರಿದ ಗೊರವರು ಮಾದೇಶ್ವರ ಮತ್ತು ಮಂಟೇಸ್ವಾಮಿ ಕಥನಗಳನ್ನು ಹಾಡುವುದಿದೆ. ದಕ್ಷಿಣ ಕರ್ನಾಟಕದ ಹಾಗೂ ಉತ್ತರ ಕರ್ನಾಟಕದ ಗೊರವರ ಕುಣಿತದಲ್ಲಿ ಬಹುಮಟ್ಟಿನ ಸಾಮ್ಯ ಕಂಡುಬಂದರೂ ವೇಷಭೂಷಣದಲ್ಲಿ ಅಲ್ಪಸ್ವಲ್ಪವ್ಯತ್ಯಾಸಗಳಿವೆ. ಗೊರವರಲ್ಲೂ ದೀಕ್ಷೆ ಕೊಡುವ ಸಂಪ್ರದಾಯವಿದ್ದು, ಮನೆಯ ಹಿರಿಮಗ ಈ ದೀಕ್ಷೆಗೆ ಅರ್ಹಎನ್ನುವ ನಂಬಿಕೆ ಇದೆ. ಇವರಿಗೆ ಒಂದು ನಿರ್ದಿಷ್ಟ ದಿನದಂದು ದೀಕ್ಷೆ ಕೊಡಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಈ ಕುಣಿತಗಳನ್ನು ಹೆಚ್ಚಾಗಿ ನಾಯಿ ಗೊರವರು ನಡೆಸಿಕೊಡುತ್ತಾರೆ. ಪ್ರತೀ ವರ್ಷ ನಡೆಯುವ ಮೈಲಾರನ ಕಾರಣಿಕೋತ್ಸವದಲ್ಲಿ ಮೈಲಾರನ ಕುರಿತಾಗಿರುವ ಕಾವ್ಯದ ಕೆಲವು ಭಾಗ ಗಳನ್ನು ಪುನರಭಿನಯಿಸಿ ತೋರಿಸಲಾಗುತ್ತದೆ. ಅಂದು ಕಾರಣಿಕ ಗೊರವರು ಕಾರಣಿಕ ನುಡಿಯುತ್ತಾರೆ.

ಮೈಲಾರಲಿಂಗನ ಕ್ಷೇತ್ರಗಳು ದಕ್ಷಿಣ ಭಾರತದಲ್ಲಿ ಬೇಕಾದಷ್ಟು ಕಡೆ ಇದ್ದರೂ, ಕರ್ನಾಟಕದಲ್ಲಿ ಪ್ರಮುಖವಾಗಿ ವ್ಯಾಪಿಸಿವೆ. ಮಂಜುನಾಥ ಬೇವಿನಕಟ್ಟಿ ಅವರು ಹೇಳುವ ಹಾಗೆ ‘ಸ್ಥಾಪಿತ ಧರ್ಮಗಳಾದ ಬ್ರಾಹ್ಮಣ,ವೀರಶೈವಗಳಂತಹ ಬಹುಸಂಖ್ಯಾತ ಜನಾಂಗದ ದಬ್ಬಾಳಿಕೆಯ ಪ್ರವೃತ್ತಿಯನ್ನು ಮೈಲಾರಲಿಂಗ ಎದುರಿಸಿದ್ದಾನೆ. ಈ ಮೂಲಕ ಉತ್ತರ ಮತ್ತು ಮಧ್ಯ ಕರ್ನಾಟಕದ ಇಡೀ ಕೆಳವರ್ಗದ ಶೂದ್ರ ಸಮುದಾಯ ವನ್ನು ಒಂದುಗೂಡಿಸಿದ ಕೀರ್ತಿಗೆ ಮೈಲಾರಲಿಂಗ ಪಾತ್ರನಾ ಗುತ್ತಾನೆ’ ಎಂದು ತಮ್ಮ ‘ಮೈಲಾರಲಿಂಗ ಕಾವ್ಯ’ದ ಪ್ರಸ್ತಾವದಲ್ಲಿ ಬರೆದಿದ್ದಾರೆ (ಬೇವಿನಕಟ್ಟಿ 1999,9). ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಹಿರೇಮೈಲಾರದಲ್ಲಿ ಪ್ರತಿವರ್ಷ ಭರತ ಹುಣ್ಣಿಮೆಯಂದು ನಡೆಯುವ ‘ಕಾರಣಿಕೋತ್ಸವ’ದಲ್ಲಿ ಏನಿಲ್ಲವೆಂದರೂ ಕನಿಷ್ಠ 5ರಿಂದ 6ಲಕ್ಷ ಜನ ಸೇರುತ್ತಾರೆಂದು ಪುರುಷೋತ್ತಮ ಬಿಳಿಮಲೆಯವರು ಬರೆದಿರುವುದನ್ನು ಗಮನಿಸಿದರೆ, ಮೈಲಾರನು ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಎಷ್ಟು ಮುಖ್ಯನು ಎಂಬುದು ಅರ್ಥವಾಗುತ್ತದೆ (ನೇಗಿನಹಾಳ 1995; ಬಿಳಿಮಲೆ 1997).

ಗೊರವರ ಕುಣಿತ:

ಗೊರವರ ಕುಣಿತದಲ್ಲಿ ಧಾರ್ಮಿಕ ಸೊಗಡ ನ್ನು ಬಿಂಬಿಸುತ್ತಾ ಪಾರಂಪರಿಕ ಉತ್ಸವ, ಹಬ್ಬ, ಜಾತ್ರೆಗಳಲ್ಲಿ ಮತ್ತು ಮೈಲಾರಲಿಂಗನ ಭಕ್ತರ ಆಹ್ವಾನದ ಮೇರೆಗೆ ಅವರ ಮನೆಗಳಲ್ಲಿ ಪ್ರದರ್ಶಿಸಲಾಗುತ್ತದೆ. ಗೃಹ ಪ್ರವೇಶಗಳಲ್ಲಿ ಭಕ್ತರು ಗೊರವರನ್ನು ಮನೆಗೆ ಕರೆಸುತ್ತಾರೆ. ಇದನ್ನು ಮಣೆ ಸೇವೆ ಅಥವಾ ಓಗುಸೇವೆ ಎನ್ನ ಲಾಗುತ್ತದೆ. ಸ್ನಾನ, ಮಡಿ ಮಾಡಿಕೊಂಡು ಪ್ರಶಸ್ತವಾದ, ಸಮತಟ್ಟಾದ ಬಯಲಿನಲ್ಲಿ ಇಲ್ಲವೆ ಎತ್ತರದ ಕಟ್ಟೆಯ ಮೇಲೆ ಕಂಬಳಿ ಹಾಸಿ ಗದ್ದಿಗೆ ಸಿದ್ಧಪಡಿಸುತ್ತಾರೆ. ಗದ್ದಿಗೆ ಮೇಲೆ ದೇವರ ಸಂಬಂಧಿಯಾದ ಸಲಕರಣೆಗಳು, ದೋಣಿಗಳ ನ್ನಿಟ್ಟು, ದೋಣಿಗಳಿಗೆ ಹಾಲು, ತುಪ್ಪ, ಸಕ್ಕರೆ, ಬಾಳೆಹಣ್ಣುತುಂಬುತ್ತಾರೆ. ಇಂತಹ ಕಡೆ ಸುಮಾರು ಹತ್ತರಿಂದ ಹನ್ನೆರಡು ಮಂದಿ ಗೊರವರು ತಮ್ಮ ಸಾಂಪ್ರದಾಯಿಕ ವೇಷ ಭೂಷಣ ಧರಿಸಿ ಸಾಲಾಗಿ ನಿಂತರೆಂದರೆ ಅಲ್ಲಿ ಒಂದು ರೀತಿಯ ರುದ್ರರಮಣೀಯ ನೋಟವೇ ತೆರೆದುಕೊಳ್ಳುತ್ತದೆ.

ಮೈಲಾರಲಿಂಗನ ಒಂದು ಸಣ್ಣ ಸ್ತುತಿಯೊಂದಿಗೆ ಗೊರವರ ಕುಣಿತ ಆರಂಭವಾಗುತ್ತದೆ. ಹಿರಿಯ ಗೊರವ ಕಲಾವಿದ ಕೊಳಲು ಊದಿ ತನ್ನ ಡಮರುಗವನ್ನು ‘ಢಗ ಢಗ ಢಗ’ ಎಂದು ನಾದ ಹೊರಡಿಸುತ್ತಿದ್ದಂತೆಯೇ ಉಳಿದ ಎಲ್ಲ ಕಲಾವಿದರು ಒಟ್ಟಾಗಿ ತಮ್ಮ ಡಮರುಗಗಳನ್ನು ಬಾರಿಸಲು ಆರಂಭಿಸುತ್ತಾರೆ. ‘ಮುಂದೆಜ್ಜೆ ಹಿಂದೆಜ್ಜೆ’ ಹಾಕುತ್ತ ಕುಣಿತ ಆರಂಭಗೊಳ್ಳುತ್ತದೆ. ಕಾಲಿನ ಗೆಜ್ಜೆಯ ನಿಯತ ಸದ್ದಿಗೂ, ಕೈಯಲ್ಲಿನ ಢಮರುಗದ ಗಂಭೀರ ನಿನಾದಕ್ಕೂ ನಡುವೆ ದೈವವನ್ನು ಕುರಿತ ಉದ್ಗಾರಗಳು ಇರುತ್ತವೆ. ಮಧ್ಯೆ ಮಧ್ಯೆ ತಮ್ಮ ತಲೆಗೆ ಧರಿಸಿದ ಕರಡಿ ಕುಲಾವಿಯನ್ನು ತೆಗೆದು ಮುಂದೆ ಚಾಚಿದಂತೆ ಮಾಡಿ ಮತ್ತೆ ತಲೆಗೆ ಧರಿಸುತ್ತಾರೆ. ಪರಾಕು ಹೇಳುತ್ತಾ ಹಿಂದೆ ಮುಂದೆ ತಿರುಗಿ ಗಿರಕಿ ಹೊಡೆಯುವುದು, ಮಂಡಲಾಕಾರದಲ್ಲಿ ಸುತ್ತುವುದು ತಲೆಯ ಮೇಲಿನ ಟೊಪ್ಪಿಗಳನ್ನು ತೆಗೆದು ಮಧ್ಯದಲ್ಲಿರಿಸಿ ಅದರ ಸುತ್ತಲೂ ಕುಣಿಯುತ್ತಾ ದೇವರ ಮಹಿಮೆಯನ್ನು ಹೇಳುತ್ತಾ ಹೇಳುತ್ತಾ ಕವುಚಿ ಮಲಗಿ ದೇವರಿಗೆಂದು ಮಧ್ಯದಲ್ಲಿರಿಸಿದ ಹಾಲು, ಬಾಳೆಹಣ್ಣು , ಕಜ್ಜಾಯಗಳನ್ನು ಕೈಯ ಸಹಾಯವಿರದೆ ತಿನ್ನುವ ದೃಶ್ಯ ನೋಡುಗರೊಳಗೆ ರೋಮಾಂಚನ ಮೂಡಿಸುತ್ತದೆ.

ಗೊರವರ ಕುಣಿತಕ್ಕೆ ಕೊಳಲು, ಡಮರುಗಗಳನ್ನು ಹೊರತುಪಡಿಸಿ ಬೇರೆ ಯಾವ ಹಿಮ್ಮೇಳ ವಾದ್ಯಗಳೂ ಇಲ್ಲ. ಡಮರುಗದ ವಿಶಿಷ್ಟವಾದ ತಾಳಲಯಗಳೊಂದಿಗೆ ಕೊಳಲಿನ ಲಯ ಮಿಳಿತಗೊಳ್ಳುತ್ತದೆ. ಅದರ ಗತಿಗೆ ಅನುಗುಣವಾಗಿ ಗೊರವರು ವಿಭಿನ್ನ ಭಾವಭಂಗಿಗಳನ್ನು ಅಭಿವ್ಯಕ್ತಿಸಿದಂತೆ ಕುಣಿತ ತೀವ್ರತೆಯನ್ನು ಪಡೆದುಕೊಳ್ಳುತ್ತದೆ. ಕಣ್ಣನ್ನು ಅರಳಿಸುತ್ತಾ, ಹುಬ್ಬೇರಿಸುತ್ತ ಗೊರವರು ಪ್ರೇಕ್ಷಕರನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಾರೆ. ಅಪೂರ್ವ ಕಲ್ಪನೆ, ನೈಜಚಿತ್ರಣ, ಆಯಾ ನೆಲದ ಭಾಷೆಯ ಅಪರೂಪದ ಶೈಲಿ ವಿಶಿಷ್ಟ ಸಂಭಾಷಣೆ ಇವುಗಳಿಂದಾಗಿ ಗೊರವರ ಕಥೆಗಾರಿಕೆ ಬಹಳ ಸೊಗಸಾದುದ್ದಾಗಿದೆ. ಗೊರವರ ಕುಣಿತ ಮುಗಿದ ಬಳಿಕ ಗೊರವ, ಗೊರವಿಯರಿಗೆ ಹಾಗೂ ದೀವಟಿಗೆ ಹಿಡಿದ ಗೊರಪ್ಪಗಳಿಗೆ ಕಾಣಿಕೆ ಸಲ್ಲುತ್ತದೆ.

ಪ್ರಸ್ತುತ ಆಧುನಿಕ ಶಿಕ್ಷಣ, ಸಿನೆಮಾ, ದೂರದರ್ಶನ, ಮೊಬೈಲ್ ಎಲ್ಲ ಕ್ಷೇತ್ರಗಳ ಮೇಲೂ ಪ್ರವಾಹಕ್ಕಿಂತಲೂ ಹೆಚ್ಚಾಗಿ ಪ್ರರಿಣಾಮ ಬೀರುತ್ತಿವೆೆ. ಅಲ್ಲದೆ, ಆಧುನಿಕತೆಗೆ ಮಾರು ಹೋಗಿರುವ ನಾವು ಜನಪದ ನೃತ್ಯ, ಕಲೆಗಳನ್ನು ಕಡೆಗಣಿಸುತ್ತಿದ್ದೇವೆ. ಈಗೀಗ ಎಲ್ಲ ರಂಗಗಳಲ್ಲೂ ನೈತಿಕತೆಯ ಅಧಃಪತನವಾಗುತ್ತಿದೆ. ಬಹುತೇಕ ಜನಪದ ಕುಣಿತಗಳು ಅವಸಾನದತ್ತ ಮುಂದಡಿಯಿಡುತ್ತಿವೆ. ಕಲಾವಿದರಿಗೆ ಮನ್ನಣೆ ಸಿಗದೆ ಗ್ರಾಮೀಣ ಪ್ರದೇಶಗಳಿಂದಲೂ ಕಣ್ಮರೆಯಾಗುತ್ತಿರುವ ಜನಪದ ನೃತ್ಯಗಳಲ್ಲಿ ಗೊರವರ ಕುಣಿತವೂ ಒಂದು.

ಈ ಗೊರವರು ಹರಿಜನರು ಹಾಗೂ ಇತರ ಮತದವರು ವಿರಳ ವಾಗಿದ್ದು, ಹೆಚ್ಚಾಗಿ ಇವರು ಹಾಲುಮತದ ಕುರುಬರೇ ಆಗಿರುತ್ತಾರೆ. ಆದರೆ, ಕ್ರೀಡೆಗಳನ್ನು ದೇಶ, ಜಾತಿ, ಧರ್ಮ, ಲಿಂಗ ಹಾಗೂ ಪ್ರದೇಶಗಳನ್ನುಮೀರಿ ಮನರಂಜನಾತ್ಮಕವಾಗಿ ಬೆಳೆಸಿರುವ ಹಾಗೆ ಜನಪದ ಕಲೆಗಳಿಗೆಅಂಟಿಕೊಂಡಿರುವ ಇಂತಹ ಜಾತಿ, ಧರ್ಮ ಹಾಗೂ ಲಿಂಗ ಅಸಮಾನತೆ ಯಿಂದ ಬಿಡಿಸಿ ಪ್ರತ್ಯೇಕಗೊಳಿಸುವ ಮೂಲಕ ಹೀಗೆ ಅವಸಾನದ ಅಂಚಿನಲ್ಲಿ ಇರುವ ಗೊರವರ ಕುಣಿತ ಒಳಗೊಂಡಂತೆ ಎಲ್ಲ ಜನಪದದ ಮೂಲ ಕಲೆಯ ಪೋಷಣೆಗೆ ಮುಂದಾಗಬೇಕು. ಯಾವುದೇ ಒಂದುಜನಪದ ಕಲೆಯ ಹುಟ್ಟಿಗೆ ಇರುವ ನಿರ್ದಿಷ್ಟ ಕಾರಣ, ಕಾಲ, ಸಂದರ್ಭದ ಬಗ್ಗೆ ಹೆಚ್ಚೆಚ್ಚು ಸಂಶೋಧನೆಗಳು ನಡೆಯಬೇಕು. ಚೈನಾ, ಇಂಡೋನೇಷಿಯಾ ಸೇರಿದಂತೆ ಹಲವು ದೇಶಗಳಲ್ಲಿ ಈಗಾಗಲೇ ಜನಪದ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಗಂಭೀರ ಚಿಂತನೆಗಳು ನಡೆಯುತ್ತಿರುವಂತೆ ನಮ್ಮಲ್ಲಿಯೂ ಈ ಕೆಲಸ ತುರ್ತು ಆಗಬೇಕಿದೆ.

ದೇಶದ ಅಭಿವೃದ್ಧಿಗೆ ಆರ್ಥಿಕ ಸಂಪತ್ತಿನಷ್ಟೆ ಸಾಂಸ್ಕೃತಿಕ ಸಂಪತ್ತೂ ಮುಖ್ಯ. ಜನಪದ ನೃತ್ಯಗಳು ಕೇವಲ ಅನಕ್ಷರಸ್ಥರ, ಕೆಳವರ್ಗದವರ ನೃತ್ಯ ಎಂಬ ಮನೋಭಾವ ಬದಲಾಗುವ ಮೂಲಕ ಕಲೆಗಳ ಪ್ರದರ್ಶನ ಬದುಕಿನ ಭಾಗವಾಗಬೇಕಿದೆ. ಈ ಜಾನಪದ ಕಲೆಗಳು ಕೇವಲ ಸರಕಾರಿ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದೆ ಶಾಸ್ತ್ರೀಯ ನೃತ್ಯಗಳಂತೆ ಜಾನಪದ ನೃತ್ಯಗಳಿಗೂ ಮನ್ನಣೆ ಸಿಗಬೇಕಿದೆ. ಜನಪದ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರ ಜಿಲ್ಲಾ ಮತ್ತು ತಾಲೂಕುಮಟ್ಟದಲ್ಲಿ ವಸತಿಯುತ ಜನಪದ ಕಲೆಗಳ ತರಬೇತಿ ಶಾಲೆಗಳನ್ನು ತೆರೆಯಲು ಮುಂದಾಗಬೇಕು. ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪಠ್ಯದಲ್ಲಿ ಹೆಚಿ ್ಚನ ಪ್ರಮಾಣದಲ್ಲಿ ಜನಪದಕ್ಕೆ ಸಂಬಂಧಿಸಿದ ವಿಷಯಗಳನ್ನು ಸೇರಿಸಬೇಕು. ಪದವಿ ಹಂತದಲ್ಲೂ ಜನಪದ ವಿಷಯವನ್ನು ಐಚ್ಛಿಕ ವಿಷಯವನ್ನಾಗಿ ಪರಿಗಣಿಸಬೇಕು. ಪ್ರಾಥಮಿಕ ಶಾಲೆಗಳಲ್ಲಿ ಎಲ್ಲ ವಿಷಯಗಳಿಗೆ ಶಿಕ್ಷಕರು ಇರುವಂತೆಯೇ ಜನಪದ ಶಿಕ್ಷಕರನ್ನು ನೇಮಿಸಬೇಕು ಹಾಗೂ ಮತ್ತಿತರ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಅವಸಾನದ ಅಂಚಿನಲ್ಲಿರುವ ಜನಪದ ನೃತ್ಯ, ಕಲೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುವುದು ಸರಕಾರ ಮತ್ತು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಗೊರವರ ವೇಷಭೂಷಣಗಳು

ತಲೆಯ ಮೇಲೆ ಕರಡಿ ಕೂದಲಿನ ಕುಲಾವಿ, ಕರಿಯ ಕಂಬಳಿಯ ನಿಲುವಂಗಿ, ಎದೆಗೆ ಅಡ್ಡಲಾಗಿ ಕವಡೆ ಸರಗಳ ಪಟ್ಟಿ, ಹೆಗಲು ಜೋಳಿಗೆ,ದೋಣಿ, ಭಂಡಾರ ಚೀಲ, ಒಕ್ಕಳ ಗಂಟೆ, ತ್ರಿಶೂಲ, ನಾಗಬೆತ್ತ, ಬಲಗೈಯಲ್ಲಿ ಡಮರುಗ, ಎಡಗೈಯಲ್ಲಿ ಪಿಳ್ಳಂಗೋವಿ ಅಥವಾ ಕೊಳಲು, ಹಣೆಯಲ್ಲಿ ಢಾಳಾಗಿ ವಿಭೂತಿ ಮತ್ತು ಕುಂಕುಮ, ಕಣ್ಣಿನ ಸುತ್ತ ವಿಭೂತಿಯ ಲೇಪ ಇವಿಷ್ಟು ಗೊರವರ ವೇಷಭೂಷಣಗಳು. ಇಂತಹ ವಸ್ತ್ರ ವಿನ್ಯಾಸ ಈ ಜಾನಪದ ಕಲೆಯ ವಿಶೇಷತೆಯಾಗಿದೆ.

ಇವರಲ್ಲಿ ಕರಡಿ ಗೊರವರು ಸಾಮಾನ್ಯವಾಗಿ ಕವಡೆಯ ದೊಡ್ಡ ಸರಗಳನ್ನು ಧರಿಸಿದರೆ, ಕೆಲವರು ಕೊರಳಲ್ಲಿ ಒಂದೆರಡು ಕವಡೆಗಳನ್ನು ಮಾತ್ರ ಧರಿಸುತ್ತಾರೆ. ಇನ್ನೂ ಕರಡಿ ಗೊರವರ ವೇಷ ತಕ್ಷಣ ನೋಡಿದರೆ ಹೆದರಿಕೊಳ್ಳುವಂತಿರುತ್ತದೆ. ಅಳುವ ಮಕ್ಕಳನ್ನು ಸುಮ್ಮನಿರಿಸಲು ‘ಗೊರವಯ್ಯನನ್ನು ಕರಿತೀನಿ ನೋಡು ಮತ್ತೆ’ ಎಂದು ಹೆದರಿಸುವುದಿದೆ. ಗೊರವರು ನುಡಿಸುವ ವಾದ್ಯ ವಿಶಿಷ್ಟ ವಾಗಿದ್ದು, ಅದನ್ನು ‘ಪಾರಿ’ ಎಂದು ಕರೆಯಲಾಗುತ್ತದೆ. ಇದನ್ನು ಪಾರಿಗೊರವರು ಮಾತ್ರ ಧರಿಸುತ್ತಾರೆ. ಅಲ್ಲದೆ, ಕಿನ್ನರಿ ಗೊರವ ಕಿನ್ನರಿಯನ್ನು, ಮದ್ದಲೆ ಗೊರವ ಮದ್ದಲೆಯನ್ನೂ ಪಡೆದಿರುತ್ತಾನೆ.

Writer - ಕಳಕೇಶ್ ಗೊರವರ, ರಾಜೂರ

contributor

Editor - ಕಳಕೇಶ್ ಗೊರವರ, ರಾಜೂರ

contributor

Similar News