ಜನಗಣತಿಯ ಇತಿಹಾಸ
ಕೆಲವು ರೀತಿಯ ಜನಸಂಖ್ಯೆ ಎಣಿಕೆ ಪ್ರಕ್ರಿಯೆಯನ್ನು ಕ್ರಿಸ್ತ ಪೂರ್ವ 800-600ರ ಅವಧಿಯಲ್ಲಿ ಭಾರತದಲ್ಲಿ ನಡೆಸಲಾಗುತ್ತಿತ್ತು ಎಂದು ಆರಂಭಿಕ ಸಾಹಿತ್ಯ ಋಗ್ವೇದದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಕೌಟಿಲ್ಯ ಬರೆದಿರುವ ಜನಪ್ರಿಯ ‘ಅರ್ಥಶಾಸ್ತ್ರ’ದಲ್ಲೂ ಜನಸಂಖ್ಯೆಯ ಅಂಕಿ ಅಂಶವನ್ನು ಸಂಗ್ರಹಿಸಿ ಇದನ್ನು ರಾಜ್ಯದಲ್ಲಿ ತೆರಿಗೆ ನಿರ್ಧರಿಸುವಾಗ ಬಳಸಲಾಗುತ್ತಿತ್ತು ಎಂದು ತಿಳಿಸಲಾಗಿದೆ. ಜನಗಣತಿ, ಆರ್ಥಿಕ ಮತ್ತು ಕೃಷಿ ಗಣತಿಯನ್ನು ನಡೆಸುವ ಬಗ್ಗೆ ಅರ್ಥಶಾಸ್ತ್ರದಲ್ಲಿ ವಿವರಿಸಲಾಗಿದೆ. ಮೊಗಲ್ ದೊರೆ ಅಕ್ಬರ್‌ನ ಆಡಳಿತಾವಧಿಯಲ್ಲಿ , ಆಡಳಿತಾತ್ಮಕ ವರದಿ ‘ಐನ್-ಇ-ಅಕ್ಬರಿ’ಯು ಜನಸಂಖ್ಯೆ, ಕೈಗಾರಿಕೆ, ಸಂಪತ್ತು ಹಾಗೂ ಇತರ ವಿಷಯಗಳ ಕುರಿತ ಸಮಗ್ರ ಅಂಕಿಅಂಶಗಳನ್ನು ಒಳಗೊಂಡಿದೆ.
ವ್ಯವಸ್ಥಿತ ಮತ್ತು ಆಧುನಿಕ ರೀತಿಯ ಜನಸಂಖ್ಯೆಯ ಗಣತಿಯನ್ನು ಈಗಿರುವ ಮಾದರಿಯಲ್ಲಿ 1865 ಮತ್ತು 1872ರ ಮಧ್ಯೆ ಏಕಕಾಲದಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆಸಲಾಗಿದೆ. 1872ರಲ್ಲಿ ಸಿದ್ಧಪಡಿಸಲಾದ ಈ ವರದಿಯು ಭಾರತದ ಪ್ರಪ್ರಥಮ ಜನಸಂಖ್ಯಾ ಗಣತಿ ಎಂದು ವರ್ಗೀಕರಿಸಲಾಗಿದೆ. ಆದರೆ, ದೇಶದಲ್ಲಿ ಏಕಕಾಲದಲ್ಲಿ ನಡೆದ ಪ್ರಥಮ ಜನಸಂಖ್ಯಾ ಗಣತಿ 1881ರಲ್ಲಿ ನಡೆದಿದೆ. ಅಂದಿನಿಂದ ದೇಶದಲ್ಲಿ ಪ್ರತೀ 10 ವರ್ಷಕ್ಕೊಮ್ಮೆ ಗಣತಿ ಅಡೆತಡೆಯಿಲ್ಲದೆ ನಡೆಯುತ್ತಿದೆ.
2001ರ ಜನಗಣತಿ ನಿರಂತರ ಸರಣಿಯಲ್ಲಿ 14ನೆಯದ್ದಾಗಿದೆ (1872ರಿಂದ ಪರಿಗಣಿಸಿದರೆ). ಸ್ವಾತಂತ್ರ ದೊರೆತ ಬಳಿಕ ಲೆಕ್ಕಹಾಕಿದರೆ ಆರನೆಯದ್ದಾಗಿದೆ. ಜನಗಣತಿಯ ಬೃಹತ್ ಕಾರ್ಯವನ್ನು ಎರಡು ಹಂತಗಳಲ್ಲಿ ಪೂರ್ಣಗೊಳಿಸಲಾಗಿದೆ. ಮನೆಪಟ್ಟಿ ಕಾರ್ಯಾ ಚರಣೆ ಎಂದು ಕರೆಯಲಾದ ಪ್ರಥಮ ಹಂತದಲ್ಲಿ ಎಲ್ಲಾ ಕಟ್ಟಡಗಳು, ನಿರ್ಮಿತಿಗಳು, ವಸತಿಗೃಹ, ವಸತಿಯೇತರ ಗೃಹಗಳನ್ನು ಗುರುತಿಸಿ ಪಟ್ಟಿ ಮಾಡಲಾಯಿತು ಮತ್ತು ಇವನ್ನು ಯಾವುದಕ್ಕೆ ಬಳಸಲಾಗುತ್ತಿದೆ ಎಂದು ದಾಖಲಿಸಲಾಗಿದೆ. ಮನೆಗಳ ಕುರಿತ ಮಾಹಿತಿ, ಮನೆಯ ಸೌಕರ್ಯಗಳು ಹಾಗೂ ಆಸ್ತಿಯ ವಿವರವನ್ನೂ ಸಂಗ್ರಹಿಸಲಾಗಿದೆ. ಜನಸಂಖ್ಯೆ ಎಣಿಕೆ ಎಂದು ಕರೆಯಲಾದ ಎರಡನೆಯ ಹಂತದಲ್ಲಿ ದೇಶದಲ್ಲಿ ವಾಸಿಸುವ ಪ್ರತೀ ವ್ಯಕ್ತಿಯ ಕುರಿತ ಸವಿವರ ಮಾಹಿತಿ, ಭಾರತೀಯ ಪ್ರಜೆಯೇ ಅಥವಾ ಅಲ್ಲವೇ ಎಂಬ ಮಾಹಿತಿ ನೀಡಲಾಗಿದೆ. 2010ರ ಜನಗಣತಿಯಲ್ಲಿ, ಪ್ರತಿಯೊಂದು ಮನೆಯನ್ನೂ ಸಂದರ್ಶಿಸಿ ಮಾಹಿತಿ ಸಂಗ್ರಹಿಸಲು ಸುಮಾರು 20ಲಕ್ಷಕ್ಕೂ ಹೆಚ್ಚು ಎಣಿಕೆಗಾರರನ್ನು ನಿಯೋಜಿಸಲಾಗಿತ್ತು. ಭಾರತದಲ್ಲಿ ನಡೆಯುವ ಜನಗಣತಿಯು ವಿಶ್ವದಲ್ಲಿ ನಡೆಯುತ್ತಿರುವ ಅತೀ ದೊಡ್ಡ ಆಡಳಿತಾತ್ಮಕ ಕಾರ್ಯದಲ್ಲಿ ಒಂದೆನಿಸಿದೆ.