'ಕಾಳನಾಮ ಚರಿತೆ'ಯ ಪ್ರಬಂಧ ಮೀಮಾಂಸೆ

Update: 2019-04-20 18:09 GMT

ಆಧುನಿಕ ಹೊಸಕಾವ್ಯದಲ್ಲಿ ತನ್ನದೇ ಆದ ಓಘ, ಬರಹದ ಶೈಲಿ, ರೀತಿ, ಅಲಂಕಾರಗಳು, ವ್ಯತ್ಪತ್ತಿ, ವಕ್ರೋಕ್ತಿ ಹೀಗೆ ಕಾವ್ಯಮೀಮಾಂಸೆಯನ್ನು ಮೀರಿ ಒಂದು ತೆರನಾದ ಕಾವ್ಯದ ಪ್ರಯೋಗಗಳು ನಡೆ ಯುತ್ತಲೇ ಇವೆ. ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಪ್ರಬಂಧ ಸಾಹಿತ್ಯವೂ ಕೂಡ ಒಂದು ಬಗೆಯ ಸಾಹಿತ್ಯಶೈಲಿಯಾಗಿದೆ. ಇಂಗ್ಲಿಷ್‌ನಲ್ಲಿ "Eassy" ಎನ್ನುವ ಪದಕ್ಕೆ ಕನ್ನಡದಲ್ಲಿ ಪ್ರಬಂಧವೆಂದು ಕರೆದಿದ್ದೇವೆ. ಪ್ರಬಂಧ ಸಾಹಿತ್ಯ ಮುಖ್ಯವಾಗಿ ಗದ್ಯರೂಪವನ್ನು ಪಡೆದಿರುತ್ತದೆ, ಬರಹಗಾರ ತನ್ನ ಬಾಲ್ಯ, ಕಾಯಕ, ಬದುಕು, ಅನುಭಾವ ಮುಂತಾದ ಆಯಾಮಗಳನ್ನು ತನ್ನ ಬರಹದ ಮೂಲಕ ಬರೆಯುತ್ತಾನೆ. ಅದರಲ್ಲಿ ಹಾಸ್ಯ, ಹರಟೆ, ಗಹನವಾದ ವಿಚಾರಗಳು, ಮನೋಹರವಾದ ಶೈಲಿ, ತತ್ತ್ವಶಾಸ್ತ್ರ, ಬೌದ್ಧಿಕಶಾಸ್ತ್ರ, ಮನೋಸಂಗಾತ, ಹರ್ಷ, ನಿಬಂಧ,ಗಹನ,ಲಾಲಿತ್ಯ, ಆತ್ಮ ವಿಮರ್ಶೆಗಳನ್ನು ಈ ಪ್ರಬಂಧಗಳ ಮೂಲಕ ಬರೆಯುತ್ತಾನೆ.

ಪ್ರಬಂಧಕ್ಕೆ ಇಂಥದ್ದೇ ವಿಷಯ ಇರಬೇಕೆಂಬ ನಿಯಮವಿಲ್ಲ, ಲೇಖಕನ ಅನುಭವದ ಚಿತ್ರಣಗಳನ್ನು ಸಮಾಜದ ಕನ್ನಡಿಯಂತೆ ಎತ್ತಿ ಹಿಡಿಯುವುದು ಬರಹಗಾರನ ಕೆಲಸವಾಗಿರುತ್ತದೆ. ಪ್ರಬಂಧ ಅನ್ನೋ ಸಾಹಿತ್ಯ ಪ್ರಕಾರವನ್ನು ಮೊದಲ ಬಾರಿಗೆ ಪರಿಚಯಿಸಿದವನು ಫ್ರಾನ್ಸಿನ ಮಾಂಟೇನ್.

ಇದು ಬಹು ಪ್ರಾಚೀನವಾಗಿ ಪ್ರಬಂಧ ಎಂಬ ಪ್ರಕಾರ ಗದ್ಯ ಸಾಹಿತ್ಯ ದಲ್ಲಿಯೋ, ಪದ್ಯ ಸಾಹಿತ್ಯದಲ್ಲಿಯೋ ಇರಬಹುದು ಆದರೆ ಪ್ರಬಂಧವೂ ಕೂಡ ಒಂದು ಸಾಹಿತ್ಯ ಪ್ರಕಾರವಾಗುತ್ತದೆ ಮತ್ತು ವಾಸ್ತವ ಚಿತ್ರಣಗಳನ್ನು ಈ ಪ್ರಬಂಧಗಳ ಮೂಲಕ ಲೇಖಕ ಬರೆಯುತ್ತಾನೆ ಎಂಬುದರ ಬಗ್ಗೆ ಅರಿವು ಮೂಡಿದ್ದು 16ನೇ ಶತಮಾನದಲ್ಲಿ. ಮಾಂಟೇನ್ ಅವನ ತೋಟದ ಮನೆಯ ಚಿತ್ರಣಗಳು, ಹುಲ್ಲುಗಾವಲಿನ ಬಗ್ಗೆ, ಪರಿಸರದ ಸೊಬಗಿನ ಬಗ್ಗೆ ಅದ್ಭುತವಾಗಿ ಪ್ರಬಂಧ ಲೇಖ ನಗಳ ಬರೆದ. ಮುಂದೆ ಇವನನ್ನು ಅನುಸರಿಸಿ ಹಲವಾರು ಪ್ರಬಂಧಕಾರರು ಹುಟ್ಟಿಕೊಂಡರು .

ಕೌಲಿ, ಅಡಿಸನ್, ಬೇಕನ್, ಗಾರ್ಡ್ ನರ್, ಸ್ಟೀವನ್ ಸನ್, ಜಾನ್ ರಸ್ಕಿನ್, ಗೋಲ್ಡ್ ಸ್ಮಿತ್, ಥೋರೋ, ಅರ್ನಾಲ್ಡ್ ಮುಂತಾದ ಲೇಖಕರು ವಿಶಿಷ್ಟ ಬಗೆಯ ಪ್ರಬಂಧಗಳನ್ನು ಬರೆದರು, ಅವು ವಿಶ್ವಸಾಹಿತ್ಯದ ಪ್ರಕಾರಗಳಲ್ಲಿ ಮನ್ನಣೆ ಪಡೆದವು.

 ಪ್ರಬಂಧ ರಚನೆಯಲ್ಲಿ ಎರಡು ವಿಭಾಗಗಳಾಗಿ ಗುರುತಿಸಬಹುದು, ಮೊದಲನೆಯದು ಗಂಭೀರವಾಗಿ ಚಿಂತಿಸಿ ಒಂದು ಪ್ರತಿಮಾ ಸೃಷ್ಟಿಯಿಂದ ಹಲವಾರು ವಿಷಯಗಳನ್ನು ಗಹನವಾಗಿ ಚರ್ಚಿಸುವುದು. ಈ ಮೊದಲನೆ ಪ್ರಬಂಧ ರಚನಕಾರರಲ್ಲಿ ಬೇಕನ್, ಲಾಕ್, ಡ್ರೈಡನ್, ಹ್ಯೂಮ್, ರಸ್ಕಿನ್ ಮುಂತಾದವರು ಸೇರುತ್ತಾರೆ .

ಎರಡನೆ ವಿಭಾಗದಲ್ಲಿ ಲಲಿತ ಪ್ರಬಂಧಗಳು ಸೇರಿವೆ. ಇವುಗಳ ಶೈಲಿ ಹಾಗೂ ಭಾಷೆ ಸಂಭಾಷಣೆಯ ರೀತಿಯಲ್ಲಿ ಕಾಣುತ್ತವೆ. ಲಲಿತಪ್ರಬಂಧಗಳನ್ನು ಓದುವಾಗ ಒಂದು ರೀತಿ ನೀತಿಶಾಸ್ತ್ರ, ಜ್ಞಾನಶಾಖೆಗಳು, ಬೌದ್ಧಿಕ ಪ್ರಜ್ಞೆಯೊಂದಿಗೆ ಹಾಸ್ಯ, ಹರ್ಷವೂ ಕೂಡ ಸೇರಿರುತ್ತದೆ. ಈ ಗುಂಪಿನಲ್ಲಿ ಮಾಂಟೇನ್, ಅಡಿಸನ್, ಗೋಲ್ಡ್ ಸ್ಮಿತ್ ಮುಂತಾದವರನ್ನು ಹೆಸರಿಸಬಹುದು. ಪ್ರಬಂಧ ಎನ್ನುವಾಗ ಇದು ಆತ್ಮಕತೆ ಎಂದು ಕೆಲವರು ಹೇಳುವುದುಂಟು. ಆದರೆ ಇದು ಬರಹಗಾರರ ಜೀವನ ಚಿತ್ರಣಗಳೊಂದಿಗೆ ಸಮಾಜದ ವಿವಿಧ ಸಮಸ್ಯೆಗಳು ಮತ್ತು ದೇಶದ ರಾಜಕೀಯಗಳು ಮುಂತಾದ ರೀತಿಯಲ್ಲಿ ಹಾಸ್ಯ ಪ್ರಜ್ಞೆಯೊಂದಿಗೆ ಪ್ರಬಂಧಗಳು ಬಂದಿರುವುದನ್ನು ಕಾಣಬಹುದು.

19ನೇ ಶತಮಾನದ ಮುಂಬಾಗಿಲಿಗೆ ಇಂಗ್ಲಿಷ್ ಪ್ರಬಂಧಗಳು ಕ್ಷೀಣಿಸ ತೊಡಗಿದವು. ಅಡಿಸನ್‌ನ ಪ್ರಬಂಧಗಳು ಜಗತ್ತಿನ ಎಲ್ಲ ಭಾಷೆಗಳಿಗೆ ಅನುವಾದಗಳಾದವು. ಜಗತ್ತಿನ ಶ್ರೇಷ್ಠ ಪ್ರಬಂಧ ಕೃತಿಯೆಂದು ‘‘ಎಸ್ಸೇಸ್ ಆಫ್ ಎಲಿಯ’’ ಚಾರ್ಲ್ಸ್ ಲ್ಯಾಮ್‌ನ ಪ್ರಬಂಧಗಳು ಮನ್ನಣೆ ಪಡೆದವು.

ಪಾಶ್ಚಿಮಾತ್ಯರ ಪ್ರಭಾವದಿಂದ ಭಾರತೀಯ ಸಾಹಿತ್ಯದಲ್ಲಿ 1,808ರಲ್ಲಿ ಮೊದಲನೆಯ ಪ್ರಬಂಧ ಸಂಕಲನ ಪ್ರಕಟವಾಯಿತು ಅದು ಬಂಗಾಳಿಯ ಬಂಕಿಮ್ ಚಂದ್ರರ ‘‘ಲೋಕ ರಹಸ್ಯ’’ ಪ್ರಬಂಧಗಳನ್ನು ಶ್ರೀಯುತ. ಬಿ. ವೆಂಕಟಾಚಾರ್ಯರು ಕನ್ನಡಕ್ಕೆ ಅನುವಾದಿಸಿದರು. 1913ರಲ್ಲಿ ಕನ್ನಡದ ಮೊತ್ತ ಮೊದಲ ಸ್ವತಂತ್ರ ಪ್ರಬಂಧ ಬಿ.ವೆಂಕಟಾಚಾರ್ಯರ ‘‘ದಾಡಿಯ ಹೇಳಿಕೆ’’ ಪ್ರಕಟ ವಾಯಿತು. ಹೀಗೆ ಮುಂದೆ ಕನ್ನಡ ಸಾಹಿತ್ಯದಲ್ಲಿ ಪ್ರಬಂಧಸಾಹಿತ್ಯವೂ ಕೂಡ ಬೆಳೆಯಿತು ಎ.ಎನ್ ಮೂರ್ತಿರಾವ್, ವಿ ಸೀ, ಪುತಿನ, ಕುವೆಂಪು, ತೀನಂಶ್ರೀ, ಶಿವರಾಮಕಾರಂತರು, ಗೊರೂರು, ರಾ.ಕು ಮುಂತಾದವರು ಅಮೂಲ್ಯ ಪ್ರಬಂಧ ಸಂಕಲನಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ.

ಕನ್ನಡ ನವೋದಯ ಸಾಹಿತ್ಯದಿಂದ ಆಧುನಿಕ ಕನ್ನಡ ಸಾಹಿತ್ಯಕ್ಕೆ ಬರುವಾಗಲೇ ಪ್ರಬಂಧಸಾಹಿತ್ಯದ ಕಲೆ ಮಾಯವಾಯಿತು ಎನ್ನುವಾಗ ಪ್ರಸ್ತುತ ಕನ್ನಡ ಸಾಹಿತ್ಯದಲ್ಲಿ ಒಂದು ಹೊಸದಿಕ್ಕುಗಳನ್ನು ಕಟ್ಟುತ್ತಿರುವವರಲ್ಲಿ ಚಂದ್ರು ಆಲೂರು ಮತ್ತು ಎಂ.ಆರ್ ಕಮಲ ಅವರ ಪ್ರಬಂಧ ಸಂಕಲನಗಳು .

"An Essay is generally a piece of writing that

given the authors own argument..!''

ಎನ್ನುವಾಗ ಪ್ರಬಂಧ ದ ವಿಶಿಷ್ಟ ಛಾಯೆಗಳನ್ನು ಎಂ.ಆರ್. ಕಮಲ ಅವರ ‘‘ಕಾಳನಾಮ ಚರಿತೆ’’ಯಲ್ಲಿ ನೋಡಬಹುದು. ಕಾಳ ಎಂಬ ನಾಯಿಯನ್ನು ಪ್ರತಿಮೆಯಾಗಿ ಟ್ಟುಕೊಂಡು ಸುಮಾರು ಎಪ್ಪತ್ತೆರಡು ಪ್ರಬಂಧಗಳನ್ನು ಹಾಸ್ಯ,ವಿಡಂಬನೆ, ಗಹ ನೀಯ, ಹರ್ಷ, ಲಲಿತ ಮುಂತಾದ ರಸಗಳಲ್ಲಿ ಓದುಗರಿಗೆ ಕೊಟ್ಟಿರುವುದು ಗಮನೀಯ.

ಎಂ.ಆರ್ ಕಮಲ ಅವರ ಪ್ರಬಂಧಗಳನ್ನು ಓದುವಾಗ ಇ .ವಿ. ಲ್ಯೂಕಾಸ್ ಬರೆದಂತಹ ನಾಯಿಯ ಸ್ವಗತ ಎಂಬ ಪ್ರಬಂಧ ನೆನಪಾಯಿತು .

 ಲ್ಯೂಕಾಸ್ ಒಳ್ಳೆಯ ಪ್ರಬಂಧಕಾರ ರಷ್ ಎಂಬ ನಾಯಿಯು ತನ್ನ ವ್ಯಕ್ತಿತ್ವ ವನ್ನು ಹೇಳಿಕೊಳ್ಳುತ್ತಾ ಸ್ವಾರ್ಥದೊಂದಿಗೆ ಮತ್ತೊಂದು ನಾಯಿಯನ್ನು ದ್ವೇಷ ಮಾಡುವುದು , ಮಾಲಕರು ಮತ್ತೊಂದು ನಾಯಿಯನ್ನು ಪ್ರೀತಿಸದ್ದಂತೆ ನೋಡಿಕೊಳ್ಳುವುದು, ತಟ್ಟೆಯಲ್ಲಿ ಹಾಕಿದ ಊಟವನ್ನು ಅದರಿಂದ ಕಿತ್ತುಕೊಂಡು ತಿನ್ನುವುದು ಹೀಗೆ ಒಂದು ನಾಯಿ ಕಂಡರೆ ಮತ್ತೊಂದು ನಾಯಿಗೆ ಸಹಿಸಲು ಆಗುತ್ತಿರಲಿಲ್ಲ ! ರಷ್ ಎಂಬ ನಾಯಿಯ ಆತ್ಮಕತೆಯೆಂದು ಹೇಳಬಹುದಾದರೂ ಮತ್ತೊಂದು ನಾಯಿಯಾದ ‘ಪೀಟರ್’ ಎಂಬ ಹೆಸರಿನ ನಾಯಿಯನ್ನು ಕಂಡರೆ ಅಷ್ಟು ಇಷ್ಟವಿರಲಿಲ್ಲ ಎಲ್ಲಿ ಮಾಲೀಕರಿಂದ ತನ್ನ ಪ್ರೀತಿಯನ್ನು ಕಿತ್ತುಕೊಳ್ಳುವುದೋ ಎಂಬ ಭಾವನೆಯಿಂದ ರಷ್ ವಂಚಿಸಿ ಪೀಟರ್ ನ ಸಾವಿಗೆ ಕಾರಣವಾಗುತ್ತದೆ. ಹೀಗೆ ಲ್ಯೂಕಾಸ್ ಮನುಷ್ಯನ ದೌರ್ಬಲ್ಯವನ್ನು ಈ ನಾಯಿಗಳ ಮೂಲಕ ಚಿತ್ರಿಸಿದ್ದಾನೆ . ಹಾಗೇ, ಎಂ.ಆರ್ ಕಮಲ ಅವರು ಕಾಳ ಎಂಬ ನಾಯಿಯನ್ನು ಪ್ರತಿಮೆಯನ್ನಾಗಿ ಇಡೀ ಸಮಾಜದ ತಲ್ಲಣಗಳು, ಸಮಸ್ಯೆಗಳು, ಭಾಷೆಯ ವೈಪರೀತ್ಯಗಳು, ವೈಮನಸ್ಸು, ಕೌಟುಂಬಿಕ ಚಿತ್ರಣಗಳು,ಕಾವ್ಯದ ಗೀಳು, ಪ್ರೀತಿ-ಪ್ರಣಯ,ಸಂಸ್ಕೃತಿ,ಆಚಾರ ಹೀಗೆ ಗುರುತಿಸಲಾಗದಷ್ಟು ವಿಷಯ ಗಳು ಇವರ ‘‘ಕಾಳನಾಮಚರಿತೆ’’ಯಲ್ಲಿ ಅಡಕವಾಗಿವೆ. ಪ್ರಬಂಧದ ವಿಭಾಗ ಗಳಲ್ಲಿ ಇವರ ಪ್ರಬಂಧಗಳು ಮೊದಲನೆಯ ಜಾತಿಗೆ ಸೇರಿದರು ಕೂಡ ಒಂದು ಪ್ರತಿಮೆಯೊಂದಿಗೆ ಹಲವಾರು ಚಿತ್ರಣಗಳನ್ನು ಎಂ.ಆರ್ ಕಮಲ ಚಿತ್ರಿಸಿದ್ದಾರೆ. ಪು ತಿ ನ ಅವರ ‘‘ಮಸಾಲೆ ದೋಸೆ’’ಯ ಪ್ರಬಂಧ ಆಗಿನ ಕಾಲದಲ್ಲಿ ಸ್ವಾದಿಷ್ಟ ಹಾಗೂ ಅದರ ಪರಿಕರಗಳ ಬಗ್ಗೆ ಪುತಿನ ಅವರು ಕೊಟ್ಟಂತಹ ರೂಪಕಗಳು ಬಹುಮುಖ್ಯವಾಗಿವೆ. ಗೊರೂರು ಅವರ ‘‘ನಮ್ಮ ಎಮ್ಮೆಗೆ ಮಾತು ತಿಳಿಯುವುದೇ?’’ ಎಂಬ ಪ್ರಬಂಧ ಈಗಲೂ ಪ್ರಾಣಿ ಪ್ರಪಂಚದ ಭಾಷೆಗಳನ್ನು ಕಂಡು ಹಿಡಿಯುವ ಎಳೆಗಳನ್ನು ತೋರಿಸುತ್ತದೆ. ಆದರೆ ಎಂ.ಆರ್ ಕಮಲ ಅವರ ಈ ಕಾಳನಾಮ ಚರಿತೆಯಲ್ಲಿ ಒಂದು ಪ್ರಬಂಧ ಲಾಲಿತ್ಯಸೊಬಗಿದೆ, ಗಹನವಿದೆ, ಚಿಂತನೀಯ ವಿಚಾರಗಳಿವೆ, ಬೌದ್ಧಿಕಮಟ್ಟದ ವಿಶ್ಲೇಷಣೆಗಳಿವೆ, ಪ್ರಾಣಿಗಳ ಚಲನ ವಲನಗಳ ಬಗ್ಗೆ ಕೌತುಕವಿದೆ.

ಸಾಕುಪ್ರಾಣಿಗಳನ್ನು ಸಾಕುವುದು ಕೂಡ ಒಂದು ಕಾವ್ಯದ ವಿಶಿಷ್ಟ ಪ್ರಭೇದವೆಂದು ಹೇಳುವಲ್ಲಿ ಕಾಳನಾಮ ಚರಿತೆಯ ಓದಿ ತಿಳಿಯಬಹುದು. "Keri strickers" ಅವರ ಒಂದು ಕವಿತೆ ನೆನಪಾಯಿತು .

"I know, I can't speak

But this is all true,

I cry and hurt and play and love.

I have feelings just like you!"

"Anna sewell" ಎಂದು ನಾಯಿ ಮನುಷ್ಯರಿಗೆ ಹೇಳುವ ವಿಚಾರವಂತಿಕೆ ನಮ್ಮನ್ನು ನಿಬ್ಬೆರಗುಗೊಳಿಸುತ್ತದೆ. ಬರೆದ ‘ಬ್ಲಾಕ್ ಬ್ಯೂಟಿ’ ಎಂಬ ಕುದುರೆಯ ಕತೆಯಲ್ಲಿ ಹೀಗೆ ಲೇಖಕಿ ಉದ್ಗರಿಸುತ್ತಾಳೆ.

"we call them dumb animals and so they are for they can not tell us how they feel, but they do not suffer loss because they have no words". ಎನ್ನುವ ಮಾತುಗಳು ಮನುಷ್ಯ ಪ್ರಪಂಚಕ್ಕೆ ಎಚ್ಚರಿಸುವ ನುಡಿಗಳಾಗಿವೆ.

"There is no religion, without love" ಎಂದು ಪ್ರಾಣಿಗಳ ಮೂಲಕವೇ ಹೇಳಿಸುವ ಕಲೆ ಕವಿಯದ್ದು.

 Animal farm ನಲ್ಲಿ ಒಂದು ವಾಕ್ಯವಿದೆ "weak or strong, cleaver or do mole we are all brothers'' ಎಂದು ಎಲ್ಲ ಪ್ರಾಣಿ ವರ್ಗಗಳು ಒಂದಾಗುವ ಮಾರ್ಗ ಮನುಷ್ಯನಿಗೆ ತಿಳಿಯಬೇಕಿದೆ.

"man serves the interests of no creature except himself" ಎಂದು ಕೂಡ ಜಾರ್ಜ್ ಆರ್ವೆಲ್ ಹೇಳುತ್ತಾನೆ. ಇವೆಲ್ಲ ಕತೆ, ಕಾವ್ಯಗಳಲ್ಲಿ ಒಂದಾದರೆ ಪ್ರಬಂಧಸಾಹಿತ್ಯದಲ್ಲಿ ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿಯನ್ನು ಮತ್ತು ಅದರ ಭಾವನೆಗಳನ್ನು ಹಾಸ್ಯ, ಹರ್ಷದ ಮೂಲಕ ಎಂ.ಆರ್ ಕಮಲ ಅವರು ಪ್ರಸ್ತುತ ಪಡಿಸಿದ್ದರೂ ಕೂಡ ಕಾಳನ ಮೇಲಿರುವ ಪ್ರೀತಿ, ಮಮತೆಯನ್ನು ಈ ಪ್ರಬಂಧಗಳಲ್ಲಿ ಮೆಚ್ಚುವಂತಹದ್ದು.

ಎಂ.ಆರ್. ಕಮಲ ಅವರು ಈಗಾಗಲೇ ಕನ್ನಡ ಸಾಹಿತ್ಯದ ಪ್ರಸಿದ್ಧ ಅನುವಾದಕರಾಗಿ, ಕವಿಯಾಗಿ, ಪ್ರಬಂಧಕಾರ್ತಿಯಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಚೀನಾದ Yu xiahua ಬರೆದಂತಹ ಬರಹಗಳು ಎಂ.ಆರ್ ಕಮಲ ಅವರ ಬರಹಗಳಲ್ಲಿ ಕಾಣಬಹುದು. ಪ್ರಾಣಿಗಳಿಗೆ ಭಾಷೆ ತಿಳಿಯುವುದೇ? ಎಂಬ ಪ್ರಶ್ನೆಗೆ ಕಾಳ ಕೊಡುವ ಪ್ರತಿಕ್ರಿಯೆಗಳನ್ನು ಗಮನಿಸಬಹುದು, ಮಾತೃಭಾಷಾ ಪ್ರೇಮಿಯಾದ ಕಾಳ ಇಂಗ್ಲಿಷ್‌ನ್ನು ಇಂಗಿಸುವುದು ಇಲ್ಲ, ಸದಾ ಮನುಷ್ಯರಂತೆಯೇ ರಾದ್ಧಾಂತ, ಜಗಳ, ಕವಿಯಾಗಿಯೂ ಕೂಡ ಕಾಳ ನಮಗೆ ಕಾಣಿಸುತ್ತಾನೆ. ಪ್ರಾಣಿಗಳಿಗೆ ಪ್ರಜ್ಞಾತ್ಮಕ ಶಕ್ತಿಯಿದೆಯೇ ಎಂದು ನಾವು ಪ್ರಶ್ನಿಸಿಕೊಂಡರೆ ಕಾಳನ ಮೂಲಕ ಪ್ರಾಣಿಗಳ ಸೂಕ್ಷ್ಮಪ್ರಜ್ಞೆ ಹಾಗೂ ಬೌದ್ಧಿಕಮಟ್ಟವನ್ನು ಕೂಡ ಅಳೆಯಬಹುದು .

ಇಲ್ಲಿ ಪ್ರಬಂಧಕಾರರು ಕಾಳನನ್ನು ಯಾವುದೋ ಪ್ರಾಣಿಯನ್ನಾಗಿ ನೋಡದೆ ಕುಟುಂಬದ ಒಬ್ಬ ಸದಸ್ಯನಂತೆ ಪರಿಗಣಿಸಿ ಅವನೊಂದಿಗೆ ಹಾಸ್ಯ, ಹರ್ಷ , ಹರಟೆ ಮುಂತಾದ ನೆರವಿನಿಂದ ಕಾಲ ಕಳೆಯುವುದು ಕೂಡ ಸುಗಮವಾಗಿದೆ.

ನವೋದಯ ನವ್ಯ ಸಾಹಿತ್ಯ ಘಟ್ಟದಲ್ಲಿ ಅಡಿಗರು ಕೂಡ ನಾಯಿ ಪ್ರಿಯರಾಗಿದ್ದರು, ಕುವೆಂಪು ಕಟ್ಟಿಕೊಟ್ಟಂತಹ ‘ಹುಲಿಯನ’ ಚಿತ್ರಣ, ತೇಜಸ್ವಿ ಸೃಷ್ಟಿಸಿದ ‘ಕಿವಿ’ಯ ಜಾಣ್ಮೆ ಇವೆಲ್ಲದರ ಜೊತೆಗೆ ‘ಕಾಳ’ನ ಬೌದ್ಧಿಕ ಪ್ರಜ್ಞೆಯನ್ನು ಈ ಪ್ರಬಂಧಗಳ ಮೂಲಕ ಎಂ.ಆರ್ ಕಮಲ ಅವರು ಕಟ್ಟಿಕೊಟ್ಟಂತಹ ಬರಹಗಳು ಬಹುಮುಖ್ಯವಾಗಿವೆ.

ಪ್ರಾಣಿ ಪ್ರಪಂಚದೊಂದಿಗೆ ಮನುಷ್ಯ ಪ್ರಪಂಚವನ್ನು ಕೂಡ ಈ ಕಾಳನಾಮ ಚರಿತೆಯ ಪ್ರಬಂಧ ಸಂಕಲನದಲ್ಲಿ ಕಾಣಬಹುದು. ಕಾಳನೆಂಬ ವ್ಯಕ್ತಿಯನ್ನು ಪ್ರಬಂಧಕಾರ್ತಿಯರಾದ ಎಂ.ಆರ್ ಕಮಲ ಅವರು ಬಹು ಸೂಕ್ಷ್ಮಗ್ರಾಹಿ ಹಾಗೂ ಸಮಾಜದ ಒಳನೋಟಗಳು ಮತ್ತು ಹೊರನೋಟಗಳನ್ನು ಸ್ಪಷ್ಟವಾಗಿ ಬಿಚ್ಚಿಟ್ಟಿದ್ದಾರೆ.

‘‘ಮನುಷ್ಯರಿಗೆ ಪ್ರಾಣಿಗಳಿಗೆ ಬೇಕಾಗಿರೋದು ಸ್ವಾತಂತ್ರ ಮತ್ತು ಪ್ರೀತಿ’’ ಎಂದು ಹೇಳುವಾಗ ಪ್ರಬಂಧಕಾರರ ಚಿಂತನೀಯ ಕ್ರಮವನ್ನು ಗಮನಿಸಬಹುದು . ಕಾಳನಾಮ ಚರಿತೆ ಯಲ್ಲಿ ಸುಮಾರು ಪ್ರಬಂಧಗಳು ಹಾಸ್ಯ, ನಿಬಂಧ, ಹರ್ಷ, ಗಹನೀಯ ವಿಚಾರಗಳನ್ನು ಹೊಂದಿರುವ ಕೃತಿ .

‘ಜಾತ್ಯತೀತನಾದ ಕಾಳ’, ಕಾಳ ನೆನಪಿಸಿದ ಕತೆ,ಕವಿತೆ, ‘ಕಾವಲು ನಾಯಿ ಕಾಳ’, ‘ಅಡಿಗರ ಕವನದಲ್ಲಿ ಪುಟ್ಟ ಕಾಳ’, ‘ಕೆಂಚಿ ಎಂಬ ಮಳ್ಳಿ’, ‘ಕೆಂಚಿಯ ಮತ್ತೊಂದು ಮುಖ’., ‘ಡೊಂಕು ಬಾಲದ ನಾಯಕರೇ’, ‘ಕಾಳನೆಂಬ ಕೆಪ್ಪ’, ‘ಕೆಂಚಿಯ ಅವಕಾಶವಾದಿ ರಾಜಕಾರಣ’, ‘ಕೈ ಸನ್ನೆ ಬಾಯಿ ಸನ್ನೆ ಕಾಳ’ ಎಂಬ ಪ್ರಬಂಧಗಳು ವಿಶಿಷ್ಟವಾಗಿವೆ ಮತ್ತು ವೈಚಾರಿಕ ಹಿನ್ನೆಲೆಯ ಚಿಂತನೀಯ ಬರಹಗಳು.

ಒಟ್ಟಾರೆ, ಕಾಳನಾಮ ಚರಿತೆ ಎಂಬ ಸಂಕಲನದಲ್ಲಿ ಕಾಳ ಎಂಬ ವ್ಯಕ್ತಿಯೋ, ನಾಯಿಯೋ. ಆದರೆ ಪ್ರಬಂಧಕಾರರು ಚಿತ್ರಿಸಿರುವ ಅದರೊಳಗಿನ ಮಜಲುಗಳು ಕನ್ನಡ ಪ್ರಬಂಧ ಸಾಹಿತ್ಯದಲ್ಲಿ ವಿಶಿಷ್ಟ ಹಾಗೂ ಸಮಾಜದ ದುರಂತಗಳ ಬಿಳಿಗನ್ನಡಿಯಲ್ಲಿಟ್ಟು ನೋಡುವಂತಾಗಿದೆ.

ಕನ್ನಡದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಎಂ.ಆರ್ ಕಮಲ ಅವರು ಹಳಗನ್ನಡ ಕಾವ್ಯಗಳನ್ನು ಅಲ್ಲಲ್ಲಿ ಪ್ರಬಂಧಗಳ ವಿಷಯದ ತಕ್ಕಂತೆ ವಿವರಿಸಿರುವುದು ಕೂಡ ಗಮ್ಯವಾಗಿದೆ. ಪ್ರಬಂಧ ಎಂಬ ತತ್ವಗಳನ್ನು ಮೀರಿ ನಿಂತಿರುವ ಈ ಕಾಳನಾಮ ಚರಿತೆಯನ್ನು ವಿಶ್ಲೇಷಿಸುವುದು ಕೂಡ ಕ್ಲಿಷ್ಟಕರವಾಗಿದೆ. ಆಂಗ್ಲರ ಪ್ರಬಂಧಗಳನ್ನು ಓದುವುದು ಒಂದು ಓಘವಾದರೆ, ಕನ್ನಡದಲ್ಲಿ ಕಾಳನಾಮ ಚರಿತೆಯನ್ನು ಕೂಡ ಕಾವ್ಯತ್ವಕ್ಕಿಂತ ವಿಭಿನ್ನವಾಗಿ ಕಾಣಿಸುತ್ತದೆ.

ಕಾವ್ಯಮೀಮಾಂಸೆಯಂತೆ ಪ್ರಬಂಧ ಮೀಮಾಂಸೆಯೂ ಕೂಡ ಆಧುನಿಕ ಕನ್ನಡ ಸಾಹಿತ್ಯದಲ್ಲಿ ವಿಮರ್ಶಿಸುವ ಮಾರ್ಗ ಬಹುಮುಖ್ಯವಾಗಿ ಕಾಣುತ್ತದೆ.

ಸರಳವಾಗಿ ಕಾವ್ಯದ ಸ್ವರೂಪದ ಜೊತೆಗೆ ಪ್ರಬಂಧದ ಧ್ವನಿ ಹಾಗೂ ರಸ, ಪ್ರತಿಮೆ, ನೀತಿ,ಅನುಕರಣ, ಪ್ರತಿಭೆ, ಭಾಷೆ ಮನೋವಿಜ್ಞಾನ ಮುಂತಾದ ವಿವಿಧ ಕಾವ್ಯ ಪರಿಕರಗಳನ್ನು ಕಾಳನಾಮ ಚರಿತೆಯೆಂಬ ಪ್ರಬಂಧ ಸಂಕಲನದಲ್ಲಿ ನೋಡಬಹುದಾಗಿದೆ.

Writer - ಸೂರ್ಯ ಕೀರ್ತಿ ಬೆಂಗಳೂರು

contributor

Editor - ಸೂರ್ಯ ಕೀರ್ತಿ ಬೆಂಗಳೂರು

contributor

Similar News