ಕಲಿಕೆ ವಿವಿಧ ಹಂತಗಳಲ್ಲಿ...

Update: 2019-04-20 18:15 GMT

ಕಲಿಕೆಯೆಂಬ ಪ್ರಕ್ರಿಯೆ

ಭಾಗ-16

ಒಂದು ಮಗುವು ಶಾಲೆಗೆ ದಾಖಲಾದ ಮೇಲೆ ಏನೇನೆಲ್ಲಾ ಕಲಿಯಬೇಕು ಎಂದು ನಿರೀಕ್ಷಿಸುವುದಕ್ಕಿಂತ, ಮಗುವು ಕಿಶೋರಾವಸ್ಥೆಯನ್ನು ದಾಟುವ ಹೊತ್ತಿಗೆ ಕುಟುಂಬ, ಸಮಾಜ ಮತ್ತು ಪರಿಸರದಲ್ಲಿ ವ್ಯಕ್ತಿಗತವಾಗಿ ತನ್ನ ಬದುಕನ್ನು ರೂಪಿಸಿಕೊಳ್ಳಲು ಮಗುವನ್ನು ಹೇಗೆ ಸಿದ್ಧಗೊಳಿಸಿರಬೇಕು ಎಂಬುದನ್ನು ನಾವು ಯೋಜಿಸಬೇಕು. ಇಲ್ಲಿ ನಾವು ಎಂದರೆ ಹಿರಿಯರು ಎಂದಷ್ಟೇ ಪರಿಗಣಿಸಿಕೊಳ್ಳೋಣ. ಈ ಹಿರಿಯರಲ್ಲಿ ಕುಟುಂಬದವರು, ಶಿಕ್ಷಕರು ಮತ್ತು ಮಗುವಿನ ಸಂಪರ್ಕಕ್ಕೆ ಬರುವ ಯಾರೇ ಆದರೂ ಇತರ ಹಿರಿಯರು. ಅವರನ್ನು ಅತಿಥಿ ಶಿಕ್ಷಕರು ಎಂದು ಕರೆಯುತ್ತೇನೆ. ಇನ್ನು ಪೋಷಕರನ್ನು ಮೂಲ ಶಿಕ್ಷಕರು ಎಂದರೆ, ಶಾಲಾ ಶಿಕ್ಷಕರನ್ನು ಹಾಗೆಯೇ ಕರೆಯೋಣ. ಕಲೆ ಮತ್ತು ಕ್ರೀಡೆಯ ಶಿಕ್ಷಕರನ್ನು ಹೊರತುಪಡಿಸಿ ಇನ್ನುಳಿದಂತೆ ಸಾಂದರ್ಭಿಕವಾಗಿ ಅನೌಪಚಾರಿಕ ಶಿಕ್ಷಣವನ್ನು ನೀಡುವಂತಹ ಎಲ್ಲರೂ ಅತಿಥಿ ಶಿಕ್ಷಕರೇ ಆಗುತ್ತಾರೆ. ಕಲಿಸುವ ಅಥವಾ ಕಲಿಯುವ ಕ್ರಿಯೆಯು ಭೌತಿಕವಾಗಿ ತನ್ನ ಪರಿಮಿತಿಯನ್ನು ಹೊಂದುವುದರಿಂದ, ಮಗುವನ್ನು ತಾನು ಜೀವಿಸುವ ವಿವಿಧ ಪರಿಸರಗಳಲ್ಲಿ ಸಮರ್ಥವಾಗಿ ಬದುಕುವುದಕ್ಕೆ ಸಿದ್ಧಪಡಿಸುವುದು ಹೆಚ್ಚು ಪ್ರಕ್ರಿಯೆಯಿಂದ ಕೂಡಿದ್ದು, ಅರ್ಥ ವ್ಯಾಪ್ತಿಯೂ ಕೂಡಾ ಹೆಚ್ಚು ವಿಸ್ತಾರಕ್ಕೊಳಗಾಗುತ್ತದೆ. ಇಷ್ಟು ತಿಳಿದುಕೊಳ್ಳೋಣ. ಮಗುವು ತಾನೊಂದು ವ್ಯಕ್ತಿಯಾಗಿ ಕುಟುಂಬ, ಸಮಾಜ, ಶಾಲೆ ಮತ್ತು ನೈಸರ್ಗಿಕ ಪರಿಸರ ಇಷ್ಟರ ಪರಿಧಿಯಲ್ಲಿ ಜೀವಿಸಲು ಏನೆಲ್ಲಾ ಕಲಿಯುವ ಅಗತ್ಯವಿದೆ ಎಂಬುದನ್ನು ಗಮನಿಸೋಣ.

ತರಬೇತಿ ನೀಡುವುದು

ಮಗುವು ಮೊದಲು ತನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಸಶಕ್ತನಾಗುವಂತೆ ತರಬೇತಿಯನ್ನು ಕೊಡಬೇಕು. ದಯವಿಟ್ಟು ಶಿಕ್ಷಣ ಎಂದರೆ ತರಬೇತಿ ಎಂದೇ ತಿಳಿಯಿರಿ. ಕ್ರೀಡೆ, ಕಲೆ ಇತ್ಯಾದಿಗಳಲ್ಲಿ ತರಬೇತಿ ಕೊಡುವಂತೆ ಎಲ್ಲಾ ವಿಷಯಗಳಲ್ಲೂ ನಾವು ತರಬೇತಿ ಎಂಬ ಶಬ್ದ ಉಪಯೋಗಿಸದಿದ್ದರೂ ಅದು ತರಬೇತಿಯೇ ಆಗಿರುತ್ತದೆ. ಯಾವ ವಿಷಯವನ್ನು ನಾವು ಉದ್ದೇಶಪೂರ್ವಕವಾಗಿ ಹೇಳಿಕೊಡಬೇಕು ಎಂದು ತಿಳಿಯುತ್ತೇವೆಯೋ ಅದನ್ನು ಹಂತಹಂತವಾಗಿ ತರಬೇತಿಯನ್ನು ನೀಡುತ್ತಾ ಹೋಗುತ್ತೇವೆ. ಓದುವ, ಬರೆಯುವ, ಗುರುತಿಸುವ, ಬಣ್ಣ ಹಚ್ಚುವ, ಗಿಡ ನೆಡುವ, ಅಂಗಡಿಗೆ ಹೋಗಿ ಸಾಮಾನು ತರುವ, ರಸ್ತೆ ದಾಟುವ, ವ್ಯಾಪಾರ ಮಾಡುವ, ಎಣಿಸುವ, ಹಾಸಿಗೆಯಿಂದ ಎದ್ದ ಕೂಡಲೇ ಹೊದಿಕೆಗಳನ್ನು ಮಡಿಸಿಡುವ, ಕೋಣೆಯಿಂದ ಹೊರಬರುವಾಗ ದೀಪ ಆರಿಸುವ, ಫ್ಯಾನ್ ಸ್ವಿಚ್ ಆಪ್ ಮಾಡುವ, ತೆಗೆದ ಗೇಟನ್ನು ಹಾಕುವ, ಚಪ್ಪಲಿ ಅಥವಾ ಶೂವನ್ನು ಸರಿಯಾಗಿ ಬಿಡುವ; ಹೀಗೆ ಪ್ರತಿಯೊಂದೂ ಕೂಡಾ ಕಲಿಕೆಯಲ್ಲಿರುವಂತಹವೇ. ಒಟ್ಟಾರೆ ತಿಳಿಯಬೇಕಾದ್ದೇನೆಂದರೆ, ಕಲಿಕೆಯೆಂಬುದು ಕ್ರಿಯೆಯಲ್ಲ ಬದಲಾಗಿ ಪ್ರಕ್ರಿಯೆ. ಶಿಕ್ಷಣವೆಂದರೆ ಬರಿಯ ಬೋಧನೆಯಲ್ಲ, ತರಬೇತಿ ನೀಡುತ್ತಾ ರೂಢಿಸುವುದು.

ವೈಯಕ್ತಿಕ ಪೋಷಣೆ

ಮಗುವು ಮೊತ್ತ ಮೊದಲಿಗೆ ತನ್ನ ದೇಹದ ಆರೋಗ್ಯವನ್ನು ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳುವುದನ್ನು ರೂಢಿಸಬೇಕು. ಶುದ್ಧವಾದ ನೀರು, ಗಾಳಿ ಮತ್ತು ಆಹಾರವನ್ನು ಗುರುತಿಸುವುದು ಮತ್ತು ಅದನ್ನು ಸೇವಿಸುವುದು. ತನ್ನ ಮೈ, ಕೈ, ಜಾಗ ಮತ್ತು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ರೂಢಿಸಬೇಕು. ಕೆಲವು ಮಕ್ಕಳಿಗೆ ತಮ್ಮ ಮೈ ಮೇಲಿರುವ ಕೊಳೆ, ಬಟ್ಟೆಯಲ್ಲಿರುವ ಗಲೀಜು, ಪರಿಸರದಲ್ಲಿರುವ ಮಾಲಿನ್ಯವನ್ನು ಕೂಡಾ ಗುರುತಿಸಲಾರದಷ್ಟು ಸಂವೇದನಾರಹಿತರಾಗಿರುತ್ತಾರೆ. ನನಗೆ ಅತ್ಯಂತ ಆಶ್ಚರ್ಯವಾಗಿ ಕಾಣುವುದೇನೆಂದರೆ, ಗಲೀಜನ್ನು ಗಲೀಜೆಂದು ಅಂದುಕೊಳ್ಳದೇ ಅದರಲ್ಲಿ ಬಹಳ ಆರಾಮವಾಗಿರುವ ಅವರ ಹಿತ. ಹಳೆಯ ವಸ್ತುಗಳು, ದುರ್ಬಲ ರಚನೆಗಳು, ಬೆಲೆಬಾಳುವಂತಹ ಸಾಮಾನುಗಳಲ್ಲ. ನಾವು ಗಮನಿಸಬೇಕಾಗಿರುವುದು. ಇರುವುದನ್ನು ಸ್ವಚ್ಛವಾಗಿ, ಶುದ್ಧವಾಗಿ ಇಟ್ಟುಕೊಳ್ಳುವುದು. ಇದರಿಂದ ಅನೇಕ ರೋಗಾಣುಗಳ ಆಕ್ರಮಣವನ್ನು ತಡೆಯಬಹುದು. ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದಲ್ಲದೇ ಮಾನಸಿಕವಾಗಿಯೂ ಕೂಡಾ ಇದು ಬಹಳ ಅಗತ್ಯವಾಗಿರುವ ಗಮನವೆಂದೇ ನನ್ನ ಭಾವನೆ. ಇದರ ನಂತರ ತಮ್ಮ ಶರೀರ ಪೋಷಣೆಗೆ ಅಗತ್ಯವಿರುವಂತಹ ಆಹಾರವನ್ನು ಸೇವಿಸುವುದು. ಹಣ್ಣು, ತರಕಾರಿ, ಸೊಪ್ಪು, ಮಾಂಸ; ಇತರ ಯಾವುದೇ ಆಹಾರ ಪದಾರ್ಥಗಳಾದರೂ ತಮಗೆ ಏಕೆ ಬೇಕು? ಅದರಿಂದ ತಮಗೇನು ಲಭಿಸುತ್ತದೆ. ಇದರಿಂದ ತಮ್ಮ ಶರೀರ ಪೋಷಣೆ ಹೇಗಾಗುತ್ತದೆ? ಇದರಿಂದ ತಮಗೆ ಆರೋಗ್ಯವಾಗಿ ಇರಲು ಹೇಗೆ ಸಾಧ್ಯ? ಇತ್ಯಾದಿಗಳೆಲ್ಲಾ ತಿಳಿಯಲೇಬೇಕು. ತಮ್ಮ ಬಟ್ಟೆ, ಚಪ್ಪಲಿ ಮತ್ತು ಇತರೇ ವಸ್ತುಗಳನ್ನು ಸರಿಯಾಗಿ ಉಪಯೋಗಿಸುವ ವಿಧಾನ ಮತ್ತು ಅವುಗಳನ್ನು ಸ್ವಚ್ಛವಾಗಿಟ್ಟುಕೊಂಡು ಅವುಗಳ ವೌಲ್ಯವನ್ನು ಗುರುತಿಸುವ ಮತ್ತು ಗೌರವಿಸುವ ಗುಣವನ್ನು ರೂಢಿಸಬೇಕು. ಈ ವಿಷಯದಲ್ಲಿ ಮನೆಯವರೂ ಮತ್ತು ಶಿಕ್ಷಕರೂ ಒಟ್ಟಾಗಿ ಕೆಲಸ ಮಾಡುವಂತಹ ಅಗತ್ಯವಿದೆ. ಇಬ್ಬರೂ ಇದಕ್ಕೆ ಪೂರಕವಾದಂತಹ ತರಬೇತಿಯನ್ನೇ ನೀಡಬೇಕು.

ಕುಟುಂಬ ನಿರ್ವಹಣೆ

ಮಗುವಿಗೆ ಕುಟುಂಬವನ್ನು ನಿರ್ವಹಿಸುವ ತರಬೇತಿಯನ್ನು ನೀಡಬೇಕು. ವೈಯಕ್ತಿಕ ಪೋಷಣೆಯಲ್ಲಿ ಹೇಗೆ ಕುಟುಂಬ ಮತ್ತು ಶಾಲೆ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆಯೋ ಅದೇ ರೀತಿ ಕುಟುಂಬ ನಿರ್ವಹಣೆಗೆ ಮಗುವಿನ ಕಾಣ್ಕೆಯ ವಿಷಯದಲ್ಲಿಯೂ ಕೂಡಾ ಇಬ್ಬರೂ ಒಟ್ಟಿಗೆ ಕೆಲಸ ಮಾಡುವ ಅಗತ್ಯವಿದೆ. ಕುಟುಂಬ ನಿರ್ವಹಣೆ ಎಂದರೆ, ಮನೆಗೆ ಸಾಮಾನು ತಂದುಹಾಕುವುದಲ್ಲ. ದುಡಿಯುವುದಲ್ಲ. ಆದರೆ ತಾಯಿ ಅಥವಾ ಕುಟುಂಬದ ಸದಸ್ಯರು ಯಾರೇ ಮನೆ ಕೆಲಸ ಮಾಡುತ್ತಿದ್ದರೂ ಅದಕ್ಕೆ ಸಹಕಾರಯುತವಾಗಿ ಮಕ್ಕಳು ನಡೆದುಕೊಳ್ಳುವುದನ್ನು ಕೂಡಾ ನಾವು ಕುಟುಂಬ ನಿರ್ವಹಣೆ ಎಂದೇ ಭಾವಿಸಬೇಕು. ಮಗುವು ತನ್ನ ವಸ್ತುಗಳನ್ನು ಬಳಸಿದ ಮೇಲೆ ಅದನ್ನು ಸರಿಯಾದ ಸ್ಥಳದಲ್ಲಿ ಎತ್ತಿಡದಿರುವುದು, ಬಟ್ಟೆಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು, ತಿಂದ ತಟ್ಟೆಗಳನ್ನು ಅಲ್ಲಲ್ಲಿಯೇ ಬಿಡುವುದು, ತಮ್ಮ ವಸ್ತುಗಳನ್ನು ನಿಗದಿತ ಸ್ಥಳದಲ್ಲಿ ಇಡದಿರುವುದು ಇವೆಲ್ಲವೂ ತಾಯಿ ಅಥವಾ ಮನೆ ವಾರ್ತೆ ನೋಡಿಕೊಳ್ಳುವ ಇತರರ ಮೇಲೆ ಕೆಲಸದ ಒತ್ತಡವನ್ನು ಹಾಕುತ್ತದೆ. ಬದಲಾಗಿ ತಮ್ಮ ಕೆಲಸದಲ್ಲಿ ಶಿಸ್ತು ಮತ್ತು ವಸ್ತುಗಳ ನಿರ್ವಹಣೆಯನ್ನು ಸರಿಯಾಗಿ ಕಲಿತಿದ್ದೇ ಆದರೆ ಕುಟುಂಬ ನಿರ್ವಹಣೆಗೆ ಎಷ್ಟೋ ಅನುಕೂಲವಾಗುತ್ತದೆ. ಅದೇ ರೀತಿ, ವಸ್ತುಗಳನ್ನು ಕೊಂಡುಕೊಳ್ಳುವುದರಲ್ಲಿ ಅಗತ್ಯ ಮತ್ತು ಆಸೆಗಳನ್ನು ಸರಿಯಾಗಿ ಗುರುತಿಸುವುದು. ವ್ಯರ್ಥವಾಗಿ ಕೊಂಡುಕೊಳ್ಳುವ ರೂಢಿಯಾಗದಿದ್ದರೆ ಮನೆಯ ಆರ್ಥಿಕ ಸ್ಥಿತಿಗತಿಗೆ ಪೂರಕವಾಗಿ ಮಕ್ಕಳಿದ್ದಾರೆ ಎಂದೇ ಅರ್ಥ. ಇಷ್ಟಪಟ್ಟಿದ್ದನ್ನೆಲ್ಲಾ ಬೇಕೆಂದು ಹಟ ಮಾಡಿ, ಕೊಂಡು ಅದನ್ನು ಮೂಲೆಗೆ ಎಸೆಯುವಂತಹ ರೂಢಿಯಾಗದಿದ್ದರೆ ಅಲ್ಲಿಗೆ ಮಗುವು ಕುಟುಂಬದ ಆರ್ಥಿಕ ನಿರ್ವಹಣೆಗೂ ಸಹಕಾರಿಯಾಗಿದೆ ಎಂದೇ ಅರ್ಥ. ಯಾವ ಮಗುವು ಇದನ್ನು ಕಲಿಯುವುದೋ, ಅದು ಸಹಜವಾಗಿ ತನ್ನ ಆರ್ಥಿಕ ಸಂಪನ್ಮೂಲಗಳ ನಿರ್ವಹಣೆಯ ಶಿಸ್ತನ್ನು ಕಲಿಯುತ್ತದೆ. ಕಂಡಕಂಡದ್ದೆಲ್ಲಾ ಬೇಕೆಂದು, ಅದನ್ನು ಕೊಡಿಸಿಕೊಳ್ಳುವ ಮಗುವು ರೂಢಿಯು ಮುಂದುವರಿದಂತೆ ಆರ್ಥಿಕ ಶಿಸ್ತನ್ನು ಕಳೆದುಕೊಳ್ಳುತ್ತದೆ. ಆರ್ಥಿಕ ಶಿಸ್ತು, ಕುಟುಂಬದ ಜೀವನ ಶೈಲಿಯ ಒಂದು ಮುಖ್ಯವಾದ ಭಾಗ. ಮಗುವಿನ ಅಗತ್ಯ ಕಲಿಕೆಯ ಬಗ್ಗೆ ಇನ್ನಷ್ಟು ಮುಂದೆ ತಿಳಿಯೋಣ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News