ಶಿವಮೊಗ್ಗ ಲೋಕಸಭಾ ಕ್ಷೇತ್ರ: ಅಬ್ಬರದ ಬಹಿರಂಗ ಪ್ರಚಾರಕ್ಕೆ ಅಂತಿಮ ತೆರೆ
ಶಿವಮೊಗ್ಗ, ಎ.21: ಕಳೆದ ಮೂರು ದಿನಗಳಿಂದ ಅಬ್ಬರದ ಪ್ರಚಾರ ಹಾಗೂ ಘಟಾನುಘಟಿ ರಾಜಕಾರಣಿಗಳ ಬಿರುಸಿನ ಪ್ರಚಾರಕ್ಕೆ ಸಾಕ್ಷಿಯಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ರವಿವಾರ ಸಂಜೆ ಬಹಿರಂಗ ಪ್ರಚಾರಕ್ಕೆ ಅಂತಿಮ ತೆರೆ ಬಿತ್ತು. ಸೋಮವಾರ ಮನೆ ಮನೆ ಪ್ರಚಾರಕ್ಕೆ ಅವಕಾಶವಿದ್ದು, ಎ. 23 ರಂದು ಮತದಾನ ನಡೆಯಲಿದೆ.
ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಮುನ್ನ ಎಲ್ಲ ರೀತಿಯ ಬಹಿರಂಗ ಪ್ರಚಾರ ಕಾರ್ಯ ಸ್ಥಗಿತಗೊಳಿಸಬೇಕು. ಹಾಗೆಯೇ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಕ್ಷೇತ್ರದ ಮತದಾರರಲ್ಲದ ರಾಜಕೀಯ ನಾಯಕರು ಕ್ಷೇತ್ರ ಬಿಟ್ಟು ತೆರಳಬೇಕು. ಈ ಕಾರಣದಿಂದ ಅಂತಿಮ ದಿನವಾದ ರವಿವಾರ ಕೂಡ ಕ್ಷೇತ್ರದಾದ್ಯಂತ ಪ್ರಚಾರದ ಭರಾಟೆ ಜೋರಾಗಿತ್ತು. ಬಿಜೆಪಿ ಹಾಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟವು, ಮತದಾರರ ಗಮನ ಸೆಳೆಯಲು ಭಾರೀ ಕಸರತ್ತು ನಡೆಸಿದವು. ರೋಡ್ ಶೋ, ಪಾದಯಾತ್ರೆ, ಸಭೆ, ಸಮಾರಂಭ, ಸುದ್ದಿಗೋಷ್ಠಿಗಳ ಸಂಖ್ಯೆ ಹೆಚ್ಚಾಗಿದ್ದವು.
ಎರಡು ಕಡೆಯ ರಾಜ್ಯ ನಾಯಕರ ದೊಡ್ಡ ದಂಡೇ ಕ್ಷೇತ್ರಕ್ಕೆ ದೌಡಾಯಿಸಿತ್ತು. ತಮ್ಮ ಅಭ್ಯರ್ಥಿಗಳ ಪರವಾಗಿ ಬಿರುಸಿನ ಮತಯಾಚನೆ ನಡೆಸಿದರು. ಭಾರೀ ದೊಡ್ಡ ಮಟ್ಟದಲ್ಲಿಯೇ ಆರೋಪ-ಪ್ರತ್ಯಾರೋಪಗಳ ವಿನಿಮಯವಾಯಿತು.
ಶಕ್ತಿ ಪ್ರದರ್ಶನ: ಮೊದಲ ಹಂತದ ಚುನಾವಣೆ ಪೂರ್ಣಗೊಂಡ ನಂತರ, ಶಿವಮೊಗ್ಗ ಕ್ಷೇತ್ರದಲ್ಲಿ ಪ್ರಚಾರ ಕಣ ಭಾರೀ ರಂಗೇರುವಂತೆ ಮಾಡಿತ್ತು. ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ನಾಯಕರು ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.
ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರವಾಗಿ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್, ಮಾಜಿ ವಿದೇಶಾಂಗ ಸಚಿವೆ ಎಸ್.ಎಂ.ಕೃಷ್ಣ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮೊದಲಾದವರು ಪ್ರಚಾರ ನಡೆಸಿದ ನಾಯಕರಾಗಿದ್ದಾರೆ.
ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ, ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಸೇರಿದಂತೆ ಸಮ್ಮಿಶ್ರ ಸರ್ಕಾರದ ಹಲವು ಮಂತ್ರಿ ಹಾಗೂ ನಾಯಕರು ಪ್ರಚಾರ ನಡೆಸಿದ್ದಾರೆ.
ನಾಯಕರ ದಂಡು: ಪ್ರಚಾರಕ್ಕೆ ರಾಜ್ಯ ನಾಯಕರ ಕೊರತೆ ಎದುರಿಸುತ್ತಿದ್ದ ಮೈತ್ರಿಕೂಟ ಅಭ್ಯರ್ಥಿಗೆ ಕೊನೆಯ ಮೂರು ದಿನಗಳಲ್ಲಿ ನಾಯಕರ ದೊಡ್ಡ ಬಲವೇ ದೊರಕಿತು. ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಘಟಾನುಘಟಿ ನಾಯಕರುಗಳು ಕ್ಷೇತ್ರ ಸುತ್ತು ಹಾಕಿದರು. ಇದು ಕ್ಷೇತ್ರದ ಪ್ರಚಾರ ಕಣದಲ್ಲಿ ಹೊಸ ಸಂಚಲನ ಸೃಷ್ಟಿಯಾಗುವಂತೆ ಮಾಡಿತು.
ನೇರ ಹಣಾಹಣಿ: ಕ್ಷೇತ್ರಕ್ಕೆ ಕಳೆದ ಐದು ತಿಂಗಳ ಹಿಂದೆ ನಡೆದ ಉಪ ಚುನಾವಣೆಯಲ್ಲಿ ಎದುರಾಳಿಗಳಾಗಿದ್ದ ಬಿ.ವೈ.ರಾಘವೇಂದ್ರ ಹಾಗೂ ಮಧು ಬಂಗಾರಪ್ಪ ಈ ಬಾರಿಯ ಚುನಾವಣೆಯಲ್ಲಿಯೂ ಮುಖಾಮುಖಿಯಾಗಿದ್ದಾರೆ. ಉಪ ಚುನಾವಣೆ ರೀತಿಯಲ್ಲಿ, ಈ ಬಾರಿಯೂ ಇವರಿಬ್ಬರ ನಡುವೆಯೇ ನೇರ ಹಣಾಹಣಿ ಏರ್ಪಟ್ಟಿದೆ. ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ.
ಕಳೆದ ಹಲವು ದಿನಗಳಿಂದ ಇವರಿಬ್ಬರು, ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಕ್ಷೇತ್ರದಾದ್ಯಂತ ಬಿರುಸಿನ ಓಡಾಟ ನಡೆಸುತ್ತಿದ್ದಾರೆ. ಹಗಲಿರುಳೆನ್ನದೆ ಕ್ಷೇತ್ರ ಸುತ್ತುತ್ತಿದ್ದಾರೆ. ಮತದಾರರ ಮನವೊಲಿಕೆಗೆ ಭಾರೀ ಕಸರತ್ತು ನಡೆಸುತ್ತಿದ್ದಾರೆ.
ಒಟ್ಟಾರೆ ಮಾಜಿ ಮುಖ್ಯಮಂತ್ರಿಗಳ ಪುತ್ರರಿಬ್ಬರ ಅಖಾಡದಿಂದ 'ಹೈವೋಲ್ಟೇಜ್' ಕಣವಾಗಿ ಪರಿವರ್ತಿತವಾಗಿರುವ ಶಿವಮೊಗ್ಗ ಕ್ಷೇತ್ರವು, ಎಲ್ಲರ ಗಮನ ತನ್ನತ್ತ ಸೆಳೆದಿದೆ. ರಾಷ್ಟ್ರ-ರಾಜ್ಯದ ಗಮನ ಸೆಳೆದಿರುವ ಕುತೂಹಲ ಕ್ಷೇತ್ರಗಳಲ್ಲೊಂದಾಗಿದೆ. ಜಯದ ಮಾಲೆ ಯಾರಿಗೆ ಬೀಳಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.