ಧಾರ್ಮಿಕ ತೆರಿಗೆ ವಿರೋಧಿಸಿ ಔರಂಗಜೇಬ್‌ಗೆ ಶಿವಾಜಿ ಬರೆದ ಪತ್ರ
ಛತ್ರಪತಿ ಶಿವಾಜಿ ಔರಂಗ್‌ಜೇಬ್‌ಗೆ ಬರೆದ ಪತ್ರವಿದು. ಚಕ್ರವರ್ತಿ ಅಲಮ್‌ಗೀರ್‌ಗೆ ಸೂರ್ಯನಿಗಿಂತಲೂ ಸ್ಪಷ್ಟವಾದ ದೇವರ ಅನುಗ್ರಹಕ್ಕೆ ಮತ್ತು ಚಕ್ರವರ್ತಿಯ ಔದಾರ್ಯಕ್ಕೆ ಧನ್ಯವಾದ ಅರ್ಪಿಸುತ್ತಾ , ಓರ್ವ ಸೇವಕ ನಿರ್ವಹಿಸಬೇಕಿರುವ ಕರ್ತವ್ಯ ಮತ್ತು ಕೃತಜ್ಞತೆಯೊಂದಿಗೆ ಅಚಲ ಮತ್ತು ನಿಷ್ಠ ಹಿತ ಚಿಂತಕ ಶಿವಾಜಿಯು ಘನತೆವೆತ್ತ ನಿಮ್ಮ ಗಮನಕ್ಕೆ ತರಲು ಬಯಸುವುದೇನೆಂದರೆ , ಇತ್ತೀಚೆಗೆ ನನ್ನ ಕಿವಿಗೆ ಬಿದ್ದಿರುವ ವಿಷಯವೇನೆಂದರೆ, ನನ್ನೊಂದಿಗೆ ನಡೆಸಿದ ಯುದ್ಧವು ನಿಮ್ಮ ಸಂಪತ್ತನ್ನು ಮತ್ತು ಖಜಾನೆಯನ್ನು ಬರಿದಾಗಿಸಿದ ನೆಲೆಯಲ್ಲಿ, ಘನತೆವೆತ್ತ ನೀವು ಸಾಮ್ರಾಜ್ಯದ ಅಗತ್ಯಗಳನ್ನು ಪೂರೈಸಲು ಹಿಂದೂಗಳಿಂದ ‘ಜಝಿಯಾ’ ಎಂಬ ಹೆಸರಿನಲ್ಲಿ ಹಣ ಸಂಗ್ರಹಿಸಲು ಆದೇಶ ನೀಡಿರುತ್ತೀರಿ. ಇದರಿಂದ ನಿಮಗೆ ಸಂತೋಷವಾಗಿರಬಹುದು. ಸಾಮ್ರಾಜ್ಯದ ನಿರ್ಮಾತೃ (ಜಲಾಲುದ್ದೀನ್) ಅಕ್ಬರ್ ಬಾದ್‌ಶಾ 52 ಚಾಂದ್ರವರ್ಷದವರೆಗೆ ಆಳ್ವಿಕೆ ನಡೆಸಿದ್ದು ಅವರು ಕ್ರಿಶ್ಚಿಯನ್, ಯೆಹೂದಿಗಳು, ಮುಸ್ಲಿಮರು, ದಾದೂರ ಅನುಯಾಯಿಗಳು, ಫಾಲಕಿಯಾ, ಮಲಾಕಿಯಾ, ಅನ್ಸಾರಿಯಾ, ದಹಾರಿಯಾ, ಬ್ರಾಹ್ಮಣರು ಹಾಗೂ ಜೈನರಂತಹ ವಿವಿಧ ಧರ್ಮೀಯರಿಗೆ ಸಂಬಂಧಿಸಿದಂತೆ ಸಾರ್ವತ್ರಿಕ ಸಾಮರಸ್ಯ ಎಂಬ ಶ್ಲಾಘನೀಯ ನೀತಿಯನ್ನು ಅಳವಡಿಸಿಕೊಂಡಿ ದ್ದರು. ಎಲ್ಲಾ ಜನರನ್ನು ರಕ್ಷಿಸಿ ಸಲಹುವುದು ಅವರ ಉದಾತ್ತ ಹೃದಯದ ಉದ್ದೇಶವಾಗಿತ್ತು. ಆದ್ದರಿಂದಲೇ ಅವರು ಜಗತ್ ಗುರು ಎಂಬ ಹೆಸರಿನಲ್ಲಿ ಪ್ರಸಿದ್ಧರಾದರು. ನಂತರ, ಚಕ್ರವರ್ತಿ ನೂರುದ್ದೀನ್ ಜಹಾಂಗೀರ್. 22 ವರ್ಷ ಜಗತ್ತಿನ ಶಿಖರದ ಮೇಲೆ ಅವರ ಉದಾರತೆಯ ನೆರಳು ವಿಸ್ತರಿಸಿತ್ತು ಮತ್ತು ಅವರು ತನ್ನ ಪ್ರಜೆಗಳಿಗಾಗಿ ಹೃದಯಾಂತ ರಾಳದ ಕೊಡುಗೆ ನೀಡಿದವರು.
ಚಕ್ರವರ್ತಿ ಷಹಜಹಾನ್ 32 ವರ್ಷದ ಆಡಳಿತದಲ್ಲಿ ಜಗತ್ತಿನ ಶಿಖರದ ಮೇಲೆ ಆಶೀರ್ವಾದದ ನೆರಳನ್ನು ವಿಸ್ತರಿಸಿದರಲ್ಲದೆ ಅಲೌಖಿಕ ಬದುಕಿನ ಫಲ ಗಳಿಸಿಕೊಂಡರು. ಅಪಾರ ಸಂಪತ್ತನ್ನು ಸಂಪಾದಿಸಿದ ಅವರು ಒಳ್ಳೆಯ ಹೆಸರಿನೊಂದಿಗೆ ಬದುಕು ನಡೆಸಿದವರು. ಅವರು ಮಾಡಿದ ಒಳ್ಳೆಯ ಕೆಲಸದಿಂದಾಗಿ ಅವರ ನಿಧನಾನಂತರವೂ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಉನ್ನತ ಪ್ರವೃತ್ತಿಯ ಶುಭ ಪರಿಣಾಮದಿಂದಾಗಿ, ಘನತೆವೆತ್ತ ಅಕ್ಬರ್ ಹೋದ ಸ್ಥಳದಲ್ಲೆಲ್ಲಾ ಗೆಲುವು ಮತ್ತು ಯಶಸ್ಸು ಅವರ ದಾರಿಯನ್ನು ಸ್ವಾಗತಿಸಲು ಮುಂದೆ ಬಂದಿದೆ.ಅವರ ಆಡಳಿತದಲ್ಲಿ ಹಲವು ಸಾಮ್ರಾಜ್ಯ ಹಾಗೂ ಕೋಟೆಗಳನ್ನು ಅವರು ವಶಪಡಿಸಿಕೊಂಡಿದ್ದರು. ಅಲಮ್‌ಗೀರ್ ಬಾದ್‌ಶಾ (ಔರಂಗಜೇಬ್) ಈ ಚಕ್ರವರ್ತಿಗಳ ರಾಜಕೀಯ ವ್ಯವಸ್ಥೆಯನ್ನು ಮಾತ್ರ ಅನುಸರಿಸಲು ಹೋಗಿ ವಿಫಲನಾಗಿರುವುದನ್ನು ಗಮನಿಸಿದರೆ ಈ ಚಕ್ರವರ್ತಿಗಳ ಅಂತಸ್ತು ಮತ್ತು ಅಧಿಕಾರವನ್ನು ಸುಲಭದಲ್ಲಿ ಅರ್ಥ ಮಾಡಿಕೊಳ್ಳಬಹುದಾಗಿದೆ . ಇವರೂ ಜಝಿಯಾವನ್ನು ವಿಧಿಸಬಹುದಿತ್ತು. ಆದರೆ ಇವರೆಂದಿಗೂ ತಮ್ಮ ಹೃದಯದಲ್ಲಿ ಮತಾಂಧತೆಗೆ ಅವಕಾಶ ನೀಡಲಿಲ್ಲ.
ಉನ್ನತ ವ್ಯಕ್ತಿಯಿರಲಿ ಅಥವಾ ಸಾಮಾನ್ಯ ವ್ಯಕ್ತಿಯಿರಲಿ ಎಲ್ಲರೂ ದೇವರ ಸೃಷ್ಟಿ ಮತ್ತು ಇವರೆಲ್ಲಾ ವೈವಿಧ್ಯಮಯ ಧರ್ಮ ಮತ್ತು ಮನೋಧರ್ಮದ ಜೀವಂತ ಸಾಕ್ಷಿ ಎಂದವರು ಭಾವಿಸಿದ್ದರು. ಇವರ (ಮೂವರ) ದಯೆ ಮತ್ತು ಉದಾರತೆ ಸಮಯದ ಪುಟಗಳಲ್ಲಿ ಅಚ್ಚಳಿಯದೆ ಉಳಿಯಲಿದೆ ಮತ್ತು ಈ ಮೂವರ ಆತ್ಮಗಳಿಗೆ ಮನುಕುಲದ ಪ್ರಾರ್ಥನೆ ಮತ್ತು ಶ್ಲಾಘನೆ ಎಂದಿಗೂ ಸಲ್ಲುತ್ತದೆ. ಸಮೃದ್ಧಿ ಎಂಬುದು ಒಬ್ಬರ ಉದ್ದೇಶದ ಫಲವಾಗಿದೆ. ಅವರ ಆಳ್ವಿಕೆಯಲ್ಲಿ ದೇವರ ಜೀವಿಗಳು ಶಾಂತಿ ಮತ್ತು ಸುರಕ್ಷತೆಯ ತೊಟ್ಟಿಲಲ್ಲಿ ಆರಾಮವಾಗಿದ್ದವು. . ಆದ್ದರಿಂದಲೇ ಅವರ ಸಂಪತ್ತು ಮತ್ತು ಅದೃಷ್ಟ ನಿರಂತರ ವೃದ್ಧಿಸುತ್ತಾ ಹೋಯಿತು. ಆದರೆ ಘನತೆವೆತ್ತ ನಿಮ್ಮ ಪ್ರಭುತ್ವದಲ್ಲಿ ಹಲವು ಕೋಟೆ, ಪ್ರದೇಶಗಳು ನಿಮ್ಮ ಕೈ ಜಾರಿ ಹೋದವು ಮತ್ತು ಉಳಿದವುಗಳಿಗೆ ಕೂಡಾ ಇದೇ ಪರಿಸ್ಥಿತಿ ಬರಲಿದೆ, ಯಾಕೆಂದರೆ ಇವನ್ನು ನಾಶ ಮಾಡಿ ಧ್ವಂಸ ಮಾಡಲು ನಾನು ಯಾವತ್ತೂ ಅಸಡ್ಡೆ ತೋರುವುದಿಲ್ಲ. ನಿಮ್ಮ ರೈತರು ತುಳಿಯಲ್ಪಟ್ಟಿದ್ದಾರೆ. ಪ್ರತೀ ಗ್ರಾಮದ ಉತ್ಪತ್ತಿ ಕ್ಷೀಣಿಸುತ್ತಾ ಸಾಗಿದೆ.
ಒಂದು ಲಕ್ಷ ರೂ. ಸಂಗ್ರಹಿಸಬೇಕಿದ್ದಲ್ಲಿ 1 ಸಾವಿರ ರೂ., 1 ಸಾವಿರ ರೂ. ಸಂಗ್ರಹವಾಗಬೇಕಿದ್ದಲ್ಲಿ ಕೇವಲ 10 ರೂಪಾಯಿಯನ್ನು, ಅದೂ ಕಷ್ಟದಲ್ಲಿ ಸಂಗ್ರಹಿಸುವ ಸ್ಥಿತಿಯಿದೆ. ಬಡತನ ಮತ್ತು ಕಡುಬಡತನ ಚಕ್ರವರ್ತಿ ಮತ್ತು ರಾಜಕುಮಾರಿಯ ಅರಮನೆಯಲ್ಲಿ ನೆಲೆಸಿದ್ದರೆ ಆಗ ಅಧಿಕಾರಿಗಳ ಮನೆಯ ಸ್ಥಿತಿ ಹೇಗಿದ್ದೀತು ಎಂಬುದನ್ನು ಸುಲಭದಲ್ಲಿ ಊಹಿಸಬಹುದಾಗಿದೆ. ಈ ಪ್ರಭುತ್ವದಲ್ಲಿ ಸೇನೆಯಲ್ಲಿ ಅಶಾಂತಿ, ವ್ಯಾಪಾರಿಗಳ ದೂರು,ಮುಸ್ಲಿಮರ ಆಕ್ರಂದನ, ಹಿಂದೂಗಳನ್ನು ಹಿಂಸಿಸುವುದು ಸಾಮಾನ್ಯವಾಗಿದೆ. ಹಲವು ಪುರುಷರು ರಾತ್ರಿ ಹಸಿದ ಹೊಟ್ಟೆ ಯಲ್ಲೇ ಮಲಗಿ, ಬೆಳಗ್ಗೆ ಯಾತನೆಯಲ್ಲಿ ತಮ್ಮ ಕೆನ್ನೆಯ ಮೇಲೆಯೇ ಹೊಡೆದುಕೊಳ್ಳುವ ಪರಿಸ್ಥಿತಿಯಿದೆ. ಇಂತಹ ಶೋಚನೀಯ ಪರಿಸ್ಥಿತಿಯಲ್ಲಿ ಜಝಿಯಾದ ಹೊರೆಯನ್ನು ಹೊರಿಸಲು ಅರಸೊತ್ತಿಗೆಯ ಚೇತನವು ನಿಮಗೆ ಹೇಗೆ ತಾನೇ ಅನುಮತಿ ನೀಡೀತು?
ಭಿಕ್ಷುಕನ ಬಟ್ಟಲನ್ನೂ ಕೈವಶ ಮಾಡಿಕೊಳ್ಳುವ ಹಂಬಲದಲ್ಲಿ ಹಿಂದೂಸ್ಥಾನದ ಚಕ್ರವರ್ತಿಯು ಬ್ರಾಹ್ಮಣರು ಜೈನ ಸನ್ಯಾಸಿಗಳು, ದಿವಳಿಯಾದವರು, ಸನ್ಯಾಸಿಗಳು, ಬೈರಾಗಿಗಳು, ತಿರುಕರು, ಬರಗಾಲ ಪೀಡಿತರಿಂದ ಜಝಿಯಾ ವಸೂಲಿ ಮಾಡಿದ್ದಾರೆ ಎಂಬ ಕುಖ್ಯಾತಿ ಶೀಘ್ರದಲ್ಲೇ ಪಶ್ಚಿಮದಿಂದ ಪೂರ್ವದವರೆಗೂ ಹರಡುತ್ತದೆ ಮತ್ತು ಇದು ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ. ದಯವಿಟ್ಟು ಸಾರ್ವಭೌಮರೇ, ನೀವು ನಿಜವಾದ ಪವಿತ್ರ ಗ್ರಂಥ ಮತ್ತು ದೇವರ ಜಗತ್ತಿನಲ್ಲಿ ನಂಬಿಕೆ ಇರಿಸಿಕೊಂಡಿದ್ದರೆ, ನೀವು ರಬ್ಬುಲ್ ಆಲಮಿನ್( ಎಲ್ಲಾ ವ್ಯಕ್ತಿಗಳ ದೇವರು)ರನ್ನುಕಾಣುತ್ತೀರಿ (ಕೇವಲ ರಬ್ಬುಲ್ ಮುಸ್ಲಿಮೀನ್ - ಮುಸಲ್ಮಾನರ ದೇವರು ಮಾತ್ರವಲ್ಲ). ನಿಜವಾಗಿಯೂ ಇಸ್ಲಾಂ ಮತ್ತು ಹಿಂದೂ ಧರ್ಮಗಳಲ್ಲಿ ವಿಭಿನ್ನತೆಯಿದೆ. ಮಸೀದಿಯಲ್ಲಾದರೆ ಪ್ರಾರ್ಥನೆಯ ಕರೆಯನ್ನು ದೇವರ ಸ್ಮರಣೆಯಲ್ಲಿ ನುಡಿಯಲಾಗುತ್ತದೆ. ದೇವಸ್ಥಾನದಲ್ಲಿ ಆದರೆ ಗಂಟೆಯ ನಿನಾದ ದೇವರಿಗಾಗಿ ಮಾತ್ರ ಮೊಳಗಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಧರ್ಮ ಅಥವಾ ನಂಬಿಕೆಯ ವಿರುದ್ಧ ಧರ್ಮಾಂಧತೆ ತೋರುವುದು ಪವಿತ್ರ ಗ್ರಂಥದ ಪದಗಳನ್ನು ಬದಲಾಯಿಸಿದಂತಾಗುತ್ತದೆ. ಚಿತ್ರವೊಂದಕ್ಕೆ ಹೊಸ ಗೆರೆಗಳನ್ನು ಬರೆಯುವುದು ಚಿತ್ರ ಬರೆದ ಕಲಾವಿದನಲ್ಲಿ ತಪ್ಪು ಕಂಡು ಹಿಡಿದಂತಾಗುತ್ತದೆ. ಯಥಾರ್ಥವಾಗಿ ಜಝಿಯಾ ಎಂಬುದು ಕಾನೂನು ಸಮ್ಮತವಲ್ಲ. ಸುಂದರ ಮಹಿಳೆಯೊಬ್ಬಳು ಚಿನ್ನಾಭರಣಗಳನ್ನು ಧರಿಸಿಕೊಂಡು ಯಾವುದೇ ಪೀಡನೆಗೆ ಒಳಗಾಗದೆ ಒಂದೂರಿನಿಂದ ಇನ್ನೊಂದು ಊರಿಗೆ ಪ್ರಯಾಣಿಸುವ ಸ್ಥಿತಿಯಿದ್ದರೆ ಆಗ ರಾಜಕೀಯ ದೃಷ್ಟಿಯಿಂದ ಇದಕ್ಕೆ ಅವಕಾಶ ನೀಡಬಹುದು. ಆದರೆ ಪ್ರಸಕ್ತ ಸಂದರ್ಭದಲ್ಲಿ ನಗರಗಳೂ ಕೊಳ್ಳೆ ಹೊಡೆಯಲ್ಪಟ್ಟಿರುವಾಗ ದೇಶದ ಬಗ್ಗೆ ಏನು ಹೇಳುವುದು. ಜಝಿಯಾ ಹೇರಿಕೆ ಭಾರತದಲ್ಲಿ ಹೊಸ ಕಲ್ಪನೆಯಾಗಿದೆ ಮತ್ತು ಅನುಚಿತವಾಗಿದೆ.
ಧಾರ್ಮಿಕತೆಯ ಭಾವನೆಯಲ್ಲಿ ಹಿಂದೂಗಳಲ್ಲಿ ಭಯ ಹುಟ್ಟಿಸಲು ಮತ್ತು ಜನರ ಮೇಲೆ ದಬ್ಬಾಳಿಕೆ ನಡೆಸಲು ನೀವು ಜಝಿಯಾವನ್ನು ಹೇರಲು ಬಯಸುವುದಾದರೆ ಮೊದಲು ಹಿಂದೂಗಳ ಮುಖಂಡರಾದ ರಾಣಾ ರಾಜ್‌ಸಿಂಗ್‌ರ ಮೇಲೆ ಇದನ್ನು ವಿಧಿಸಿ. ಆಗ, ನಿಮ್ಮ ಸೇವೆಯಲ್ಲಿರುವ ನನ್ನಿಂದ ಸಂಗ್ರಹಿಸಲೂ ನಿಮಗೆ ಕಷ್ಟವಾಗದು. ಆದರೆ ನೊಣ, ಇರುವೆಗಳನ್ನು ಪೀಡಿಸುವುದು ನಿಮ್ಮ ಧೈರ್ಯ ಮತ್ತು ಶೌರ್ಯ ಮತ್ತು ಚೈತನ್ಯಕ್ಕೆ ತಕ್ಕುದಲ್ಲ. ರಾಜ್ಯದಲ್ಲಿರುವ ವಾಸ್ತವ ವಿಷಯವನ್ನು ನಿಮ್ಮ ಕಿವಿಗೆ ಹಾಕದಿರುವ ನಿಮ್ಮ ಅಧಿಕಾರಿಗಳ ನಿಷ್ಠೆಯ ಬಗ್ಗೆ ನನಗೆ ಆಶ್ಚರ್ಯವಾಗಿದೆ. ಆದರೆ ಇದು ಬೆಂಕಿಯ ಕೆನ್ನಾಲಗೆಯನ್ನು ಒಣಹುಲ್ಲಿನಿಂದ ಮುಚ್ಚಿದಂತಾಗಿದೆ. ನಿಮ್ಮ ಸಾಮ್ರಾಜ್ಯದ ಮೇಲಿರುವ ಸೂರ್ಯನು ಎಂದೆಂದಿಗೂ ಶ್ರೇಷ್ಠತೆಯ ದಿಗಂತದಲ್ಲಿ ನಿರಂತರವಾಗಿ ಪ್ರಕಾಶಿಸುತ್ತಿರಲಿ.