ಕಾಗದದ ಮೇಲಿನ ಅಕ್ಷರಗಳಿಗೆ ಕಟ್ಟುಬಿದ್ದ ಕವಿ ವರವರ ರಾವ್

Update: 2019-04-28 09:44 GMT

ಇದು ಕಾಲದೊಂದಿಗೆ ಬೆಳಕನ್ನು ಹೊರ ಚಿಮ್ಮುತ್ತಾ ಓಟ ತೆಗೆದ ಅಕ್ಷರಗಳ ಸಂಗತಿ. ನೀಲಾಗಸದಲ್ಲಿ ಉದಯಿಸಿದ ಸೋಷಲಿಸ್ಟ್ ಚಂದ್ರನನ್ನು ಪರಿಚಯಿಸಿ, ಆಗಸದಂಚಿನ ಮೇಲೆ ವಿಕಸಿತಗೊಂಡ ಭೂತಾಯಿಯ ಪ್ರಸ್ತಾಪ. ಉದುರಿ ಹೋದ ತಾರೆಗಳ ನೆತ್ತರು ಕುಡಿದು ಕತ್ತಲನ್ನು ಸುರಿಸುತ್ತಿರುವ ರಾತ್ರಿಯನ್ನು ಕೊನೆಗಾಣಿಸಿದ ಚಳಿ ಮೊಸಳೆಯ ಚರಿತ್ರೆ-ಜೈಲುಗೋಡೆಯ ಮುಳ್ಳು ತಂತಿಯ ಮೇಲೆ ಕುಳಿತು ಪಕ್ಷಿಗಳು ಹಾಡುತ್ತಿರುವ ಸ್ವೇಚ್ಛಾಗೀತೆ.

ವರವರರಾವ್ (ವಿವಿ) ಐವತ್ತು ವರ್ಷಗಳಿಂದಲೂ ಕವಿತೆ ಬರೆಯುತ್ತಿ ದ್ದಾರೆ. ಒಂದು ರೀತಿಯಲ್ಲಿ 50 ವರ್ಷಗಳ ತೆಲುಗು ಸಾಮಾಜಿಕ ಚರಿತ್ರೆಗೆ ಅವರ ಕವಿತ್ವ ಒಂದು ದಾಖಲೆ. ಬಹುಶಃ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಅಂಶಗಳ ವಸ್ತುವಾಗಿಸಿಕೊಂಡು ಇಷ್ಟು ವಿಸ್ತಾರವಾಗಿ ಬರೆದ ಕವಿ ತೆಲುಗಿನಲ್ಲಿ ಮತ್ತೊಬ್ಬರಿಲ್ಲ. ಪ್ರತಿಭಟನಾ ಧ್ವನಿಯಾಗಿ ಪ್ರಸ್ಥಾನ ಆರಂಭಿಸಿ, ವಿಪ್ಲವ-ಕವಿಯಾಗಿ ರೂಪುಗೊಂಡ ಮೇಲೆ ಆತನು ಕಾಗದದ ಮೇಲಿಟ್ಟ ಅಕ್ಷರಗಳಿಗೆ ಕಮಿಟ್ ಆಗಿದ್ದಾರೆ. ‘ಎರಸಂ’ (ವಿಪ್ಲವ ರಚಯತ ಸಂಘಂ)ನ ವ್ಯವಸ್ಥಾಪಕ ಸದಸ್ಯರಾಗಿ ಪ್ರಮುಖರಾಗಿ ವ್ಯವಹರಿಸಿದರು. ನಿಷೇಧಗಳು, ನಿರ್ಬಂಧಗಳು ಆತನ ಅಕ್ಷರಗಳಿಗೆ ಮಿತಿಗಳನ್ನು ವಿಧಿಸಲಾರದೇ ಹೋದವು. ಬದಲಿಗೆ ಅಕ್ಷರಗಳು ಮತ್ತಷ್ಟು ಹರಿತವಾದವು.

ಕೃಷ್ಣ ಶಾಸ್ತ್ರಿ ಪ್ರಭಾವದಿಂದ ಹೊರಬಿದ್ದ ಶ್ರೀ ಶ್ರೀ ಪ್ರಗತಿಶೀಲ ಕವಿತ್ವಕ್ಕೆ ದಾರಿ ಹಾಕಿದರು. ವಿವಿ ನೇರವಾಗಿ ಶ್ರೀ ಶ್ರೀ ಪ್ರಭಾವದೊಳಗೆ ಹೋದರು. ಪೆಂಡ್ಯಾಲ ಕಿಷನ್‌ರಾವ್ ವಿವಿಗೆ ಕೃಷ್ಣಶಾಸ್ತ್ರಿಗಳನ್ನು, ಶ್ರೀ ಶ್ರೀಯವರನ್ನು ಪರಿಚಯ ಮಾಡಿಸಿದರು. ವರವರ ರಾವ್ ಮಾತುಗಳಲ್ಲೇ ಹೇಳಬೇಕೆಂದರೆ ‘‘ನಮಗೆ ಕಿಷನ್‌ರಾವ್‌ರವರು ಸಾಹಿತ್ಯದ ಕಿಟಕಿಗಳನ್ನೇ ಅಲ್ಲ ಬಾಗಿಲುಗಳನ್ನೂ ತೆರೆದರು’’. ಕಾಳೋಜಿ, ಪೊಟ್ಟಪಲ್ಲಿ ರಾಮಾರಾವು ಶ್ರೀ ಶ್ರೀ ಹಾಡುಗಳನ್ನು ಹಾಡುತ್ತಾ ತೊಗರಿ ಹೊಲಗಳಲ್ಲಿ ತಿರುಗಿದ ಬಾಲ್ಯ ವರವರರಾವ್‌ರನ್ನು ಕವಿತ್ವದತ್ತ ಹೊರಳಿಸಿತು.

ಎರಡನೇ ವಿಶ್ವ ಸಮರದ ಕಾಲದಲ್ಲಿ (ಜನವರಿ 3, 1940) ಭೂಮಿ ಮೇಲೆ ಬಿದ್ದ ವರವರರಾವ್ ಕಣ್ತೆರೆದು ಸಾಹಿತ್ಯದೊಳಗೆ ಹೆಜ್ಜೆ ಇಡುವ ಕಾಲಕ್ಕೆ ಅಧಿಕಾರ ಬದಲಾವಣೆಯಾಗಿ ಸಂವಿಧಾನ ಜಾರಿಗೆ ಬಂದಿತ್ತು. ಆಹಾರದ ಅಭಾವ, ಯುದ್ಧ ಕಲ್ಲೋಲ, ಗ್ರಂಥಾಲಯ ಚಳವಳಿ ತೆಲಂಗಾಣ ರೈತ ಸಂಘದ ಸಶಸ್ತ್ರ ಹೋರಾಟ ಮೊದಲಾದ ಪರಿಣಾಮಗಳನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ವಿವಿ ಅನುಭವಿಸಿದರು. ದೇಶೋದ್ಧಾರಕ ಗ್ರಂಥಮಾಲೆ ಪ್ರಕಾಶನದ ‘ಪ್ರಜಲ ಮನಿಷಿ’ ‘ಗಂಗು’ ಕಾದಂಬರಿಗಳು ಅವರಿಗೆ ಹೊಸ ಜಗತ್ತನ್ನು ಪರಿಚಯಿಸಿತು. ಅಸ್ತಿತ್ವವೇ ಚೈತನ್ಯವನ್ನು ನಿರ್ಧರಿಸುತ್ತದೆ ಎಂದು ಮಾರ್ಕ್ಸ್ ಹೇಳಿದಂತೆ-ಆತನ ಸುತ್ತಲೂ ಇದ್ದ ಚರಿತ್ರೆಯೇ ಕವಿಯಾಗಿ ವರವರರಾವ್ ವ್ಯಕ್ತಿತ್ವವನ್ನು ತಿದ್ದಿ ತೀಡಿತು. ಅದಷ್ಟೇ ಇಂದಿಗೂ ಆತನ ಕಲಂಗೆ ಅಷ್ಟು ಬದ್ಧತೆ ಇದೆ. ಸರಿಯಾಗಿ ಸಮಯದಲ್ಲೇ ಶ್ರಿ ಪತಿ(ಪಿ.ಚಲಪತಿರಾವ್) ವರವರರಾಯರಿಗೆ ಪಾಣಿಗ್ರಾಹಿಯವರನ್ನು ಪರಿಚಯಿಸಿದರು. ಪಾಣಿಗ್ರಾಹಿ ಹಾಡುಗಳ ಮೂಲಕ ವಿವಿಗೆ ನಕ್ಸಲ್ಬರಿ, ಶ್ರೀಕಾಕುಳಂ ರಾಜಕೀಯಗಳು ಪರಿಚಯವಾದವು. 1965ರ ಕಾಲಕ್ಕೇ ‘ಸೃಜನ’ ಸ್ಥಾಪನೆ. ರಚನಾಹವ್ಯಾಸಗಳ ಮೇಲೆ ನಕ್ಸಲ್ಬರಿ ರಾಜಕೀಯಗಳ ಪ್ರಭಾವ ಇತ್ತು. ಈ ಹಿನ್ನೆಲೆಯಲ್ಲೇ ವಾರಂಗಲ್ ಜಿಲ್ಲಾ ಲೇಖಕರ ಸಭೆಯಲ್ಲಿ (1968) ‘ಸ್ವತಂತ್ರ ಕವಿತ್ವ-ಸಾಮಾಜಿಕ ಬದ್ಧತೆ’ ಎಂಬ ಅಂಶದ ಮೇಲೆ ಮಾತನಾಡುತ್ತಾ ‘ಕಾಗದದ ಮೇಲಿಟ್ಟ ಅಕ್ಷರಕ್ಕೆ ಕಮಿಟ್ ಆಗಿರುವುದೇ ಕವಿಯ ಜವಾಬ್ದಾರಿ’ ಎಂದು ವರವರರಾವ್ ಹೇಳಿದರು . ಆತನೇ ಹೇಳಿದ ಮಾತಿಗೆ ಐದು ದಶಕಗಳಿಂದ ಆತನೇ ಬದ್ಧರಾಗಿದ್ದಾರೆ.

ವರವರರಾವ್ ಕವಿ, ಸಂಶೋಧಕ, ವಿಮರ್ಶಕರಿಗಿಂತ ಲೇಖನ ಬರಹಗಾರರಾಗಿಯೇ ಹೆಚ್ಚಾಗಿ ಗೊತ್ತು. 5 ದಶಕಗಳಿಂದ ಕಣ್ ಮುಂದಿನ ಕಾಲವನ್ನು ವ್ಯಾಖ್ಯಾನಿಸುತ್ತಾ ಬರುತ್ತಿದ್ದಾರೆ. ಕ್ರಾಂತಿ, ಯುದ್ಧ, ನಿರ್ಬಂಧ, ದಲಿತರು ಆದಿವಾಸಿಗಳು, ಮುಸ್ಲಿಮರು, ವ್ಯವಸಾಯ, ಔದ್ಯಮಿಕ ಕ್ಷೇತ್ರ, ಪ್ರಾದೇಶಿಕ, ರಾಷ್ಟ್ರೀಯ ಆಂದೋಲಗಳು, ಶಿಕ್ಷಣಕ್ಷೇತ್ರ, ಜಾಗತೀಕರಣ, ಕೇಂದ್ರ-ರಾಜ್ಯ ಸರಕಾರಿ ನೀತಿಗಳು- ಹೀಗೆ ಅನೇಕ ವಿಷಯಗಳ ಮೇಲೆ ನೂರಾರು ಬರಹಗಳನ್ನು ಬರೆದಿದ್ದಾರೆ. ಒಂದು ಸಮಸ್ಯೆ ಮೇಲೆ ವೈಜ್ಞಾನಿಕವಾದ ಅರಿವನ್ನು ಏರ್ಪಡಿಸಿಕೊಳ್ಳುವುದಕ್ಕೆ ವರವರರಾವ್ ಬರಹಗಳಿಗೋಸ್ಕರ ಎದುರು ನೋಡುವ ಮೇಧಾವಿ ವರ್ಗ ಈಗಲೂ ಇದೆ ಎಂದರೆ ತೆಲುಗು ಸಮಾಜದ ಮೇಲೆ ಆತನ ಮುದ್ರೆ ಎಂತಹದ್ದೋ ಎಂದು ಅರ್ಥ ಮಾಡಿಕೊಳ್ಳಬಹುದು. ಕವಿತ್ವಕ್ಕಿಂತ ತಕ್ಷಣದ ಪ್ರತಿಕ್ರಿಯೆಯಾಗಿ ಆತನು ಬರಹಗಳನ್ನು ಆರಿಸಿಕೊಳ್ತಾರೆ. ಹೇಳಬೇಕೆಂದುಕೊಂಡ ವಿಷಯ ಅಧಿಕ ಮಂದಿ ಓದುಗರಿಗೆ ಮುಟ್ಟಬೇಕೆಂದರೆ ಬರಹ ಮಾಧ್ಯಮದ ಹೊರತು ಮತ್ತೊಂದು ಇಲ್ಲ ಎಂದು ಭಾವಿಸುತ್ತಾರೆ.

ವರವರರಾವ್ ಉತ್ತಮ ಸಂಶೋಧಕರೆಂಬ ವಿಷಯ ಕೆಲವರಿಗಷ್ಟೇ ಗೊತ್ತು. ಉಸ್ಮಾನಿಯಾ ವಿಶ್ವವಿದ್ಯಾನಿಲಯ ತೆಲುಗು ಇಲಾಖೆಯಲ್ಲಿ ಸಾಹಿತ್ಯ ಓದಿಕೊಂಡರು. ‘ಎ’ ಹಾಸ್ಟೆಲ್‌ನಿಂದ ಅತ್ತ ಎನ್‌ಸಿಸಿ, ಇತ್ತ ತಾರ್ನಾಕಂ ವರೆಗೆ ಕ್ಯಾಂಪಸ್ ದಾರಿಯುದ್ಧಕ್ಕೂ ಸುರಿದ ಕಾಡುಮಲ್ಲಿಗೆಗಳು ಹೊರಸೂಸುವ ಸುವಾಸನೆಯಂತೇ ಆತನ ಕವಿತ್ವ ವಿಕಸಿಸಿತು. ಸೃಜನಾತ್ಮಕ ಪ್ರಕ್ರಿಯೆಯಲ್ಲೇ ನಿಂತುಹೋಗದೇ ಆತನಲ್ಲಿನ ಸಂಶೋಧಕನೂ ಜಾಗೃತಗೊಂಡನು. ಪರಿಣಾಮವಾಗಿ ‘ತೆಲಂಗಾಣ ವಿಮೋಚನಾ ಚಳವಳಿ- ತೆಲುಗು ಕಾದಂಬರಿಗಳು- ವಿಶ್ಲೇಷಣಾಗ್ರಂಥ ಬಂದಿತು. ಕಾದಂಬರಿಯಲ್ಲಿ ಪ್ರತಿಫಲಿಸಿದ ಸಮಾಜವನ್ನು ಗತಿತಾರ್ತಿಕ ಪದ್ಧತಿ ಮೂಲಕ ವಿವರಿಸುವ ಸಂಶೋಧನಾ ಲಕ್ಷಣವನ್ನು ವರವರರಾವ್ ಪ್ರವೇಶಗೊಳಿಸಿದರು.

between the lines

‘ಸಾಹಿತ್ಯ ಸಾಮಾಜಿಕ ಚೈತನ್ಯದ ಸ್ವರೂಪವಾಗಿದ್ದರಿಂದ ಈ ಸಾಹಿತ್ಯವನ್ನು ಪರಿಶೀಲಿಸುವಾಗ ಉತ್ಪಾದನಾ ಶಕ್ತಿಗಳ ಅಭಿವೃದ್ಧಿ, ಉತ್ಪಾದನಾ ಸಂಬಂಧಗಳ ಪರಿವರ್ತನಾ ದೃಷ್ಟಿಯಿಂದಲೇ ಪರಿಶೀಲಿಸಬೇಕು. ಸಾಮಾಜಿಕ ಅಸ್ತಿತ್ವದೊಂದಿಗೆ ಅನ್ವಯಿಸದೇ ಸಾಹಿತ್ಯವನ್ನು ಪರಿಶೀಲಿಸಕೂಡದು’ (ಸಾಹಿತ್ಯದಲ್ಲಿ ಸಮಾಜ ಚಲನೆಯ ಪ್ರತಿಫಲನ,2013 ಪ್ರ-3) ಎಂದು ವರವರರಾವ್ ತನ್ನ ಸಂಶೋಧನೆ ಮೂಲಕ ಅಂದೇ ಪ್ರತಿಪಾದಿಸಿದ್ದಾರೆ. ವರವರರಾವ್ ವಿಮರ್ಶಕರು ಸಹಾ ನೂರಾರು ಪುಸ್ತಕಗಳಿಗೆ ಪೀಠಿಕೆ ಬರೆದಿದ್ದಾರೆ. ಮುನ್ನುಡಿಗಳಲ್ಲಿ ಕೇವಲ ವಾಚಕ ವಿಶ್ಲೇಷಣೆ ಅಲ್ಲದೇ ನೇಪಥ್ಯ ವಿವರಣೆ, ನಲ್ಲಿರುವ ಭಾವ , ರಚನೆಗೆ ರಚನಕಾರನಿಗೆ ಮಧ್ಯ ಇರುವ ಗತಿ ತಾರ್ಕಿಕ ಸಂಬಂಧ ಕಾವ್ಯದ ವಸ್ತು- ಕಾವ್ಯ ಸೌಂದರ್ಯಕ್ಕೆ ಮಧ್ಯೆ ಇರುವ ಸಾಮಾಜಿಕ -ಸಾಹಿತ್ಯ ಸಂಬಂಧಗಳ ವಿಶ್ಲೇಷಣೆ ಆತನ ಪೀಠಿಕೆಯಲ್ಲಿ ಇರುತ್ತದೆ. ಯಾವ ರಚನೆಗಾದರೂ ಅದಕ್ಕೇ ಆದ ಅಸ್ತಿತ್ವ ಏನೂ ಇಲ್ಲವೆಂದು, ಸಾಮಾಜಿಕ ಅಂತರ್ ಘರ್ಷಣೆಯ ಪ್ರತಿ ಬಿಂಬವೇ ಸಾಹಿತ್ಯ ವ್ಯಕ್ತೀಕರಣ ಎಂದು ವರವರರಾವ್ ದೃಷ್ಟಿಕೋನ. ಆತನ ವಿಮರ್ಶಾ ಶಕ್ತಿಯನ್ನು ಹಿಡಿದುಕೊಳ್ಳಬೇಕೆಂದರೆ ಶುದ್ಧ ಸಾಹಿತ್ಯ ಜ್ಞಾನ ಸಾಕಾಗುವುದಿಲ್ಲ. ಚರಿತ್ರೆ, ರಾಜಕೀಯ, ಆರ್ಥಿಕ ಅಧ್ಯಯನ ಸಂಸ್ಕಾರ ಇದ್ದೇ ತೀರಬೇಕು ‘ ಭೂಮಿಯೊಂದಿಗೆ ಮಾತನಾಡು; ಕಲ್ಪನಾ ಸಾಹಿತ್ಯ- ವಸ್ತು ವಿವೇಚನೆ’ - ಎಂದು 2005ರಲ್ಲಿ ಒಂದು ಪುಸ್ತಕ ಬಂದಿತ್ತು. ‘ಪ್ರಜಲ ಮನಿಷಿ’ ‘ಗಂಗು’ ‘ಕೌಮುರಂ ಬೀಮ್’ ‘ಕೊಲಿಮಿ ಅಂಟುಕುನ್ನದಿ’-ಮೊದಲಾದ ಕಾದಂಬರಿಗಳು, ಕೆಲವು ಕಥೆಗಳ ಮೇಲೆ ವರವರರಾವ್ ಬರೆದ 23 ಬರಹಗಳೊಂದಿಗೆ ಈ ಪುಸ್ತಕ ಬಂದಿತ್ತು.

ಇವೆಲ್ಲಾ ಒಂದು ಹಂತವಾದರೆ ಭಾಷಣಕಾರನಾಗಿ ವರವರರಾವ್ ಪ್ರಭಾವ ಈ ಸಮಾಜದ ಮೇಲೆ ಅದ್ಭುತವಾದುದು. ಆ ಪೀಳಿಗೆಯಲ್ಲಿ ಪ್ರಭಾವಶಾಲಿ ಭಾಷಣಕಾರರ ಹೆಸರಗಳನ್ನು ಹೇಳಬೇಕಾಗಿ ಬಂದರೆ ಕಾಶೀಪತಿ, ಜ್ವಾಲಾಮುಖಿ, ತ್ರಿಪುರನೇನಿ ಮಧುಸೂದನರಾವ್ ವರವರರಾವ್, ಕತ್ತಿ ಪದ್ಮಾರಾವ್: ಭಾಷಣವನ್ನು ಒಂದು ಕಲೆಯಾಗಿ ವರವರರಾವ್ ಅಭಿವೃದ್ಧಿ ಮಾಡಿದರು. 78 ವರ್ಷ ವಯಸ್ಸಿನಲ್ಲಿ ಕೂಡಾ ಆತನ ಕಂಚುಕಂಠದಲ್ಲಿನ ರಾಜಕೀಯ ಸ್ಪಷ್ಟತೆ ತಗ್ಗಿಲ್ಲ. ಕಾಗದದ ಮೂಲಕ ಅಕ್ಷರಕ್ಕೆ ಕಮಿಟ್ ಆದಂತೆ ಸಭೆಯಲ್ಲಿನ ಮಾತಿನ ಪ್ರವಾಹಕ್ಕೆ ಸಹ ಅವರು ನಿಷ್ಠರಾಗಿದ್ದಾರೆ. ‘‘ಗಾತ್ರವೆಲ್ಲಾ ಗಾತ್ರವಾಗಿ’’ ಎಂಬ ಮಾತು ಸಂಸ್ಕೃತದಲ್ಲುಂಟು. ಅಂದರೆ ದೇಹವೆಲ್ಲಾ ದನಿಯಾಗಿ ಎಂದರ್ಥ. ಸರಿಯಾಗಿ ಭಾಷಣಗಳ ಮೂಲಕ ಈ ಕೆಲಸ ಮಾಡುತ್ತಿದ್ದಾರೆ ವರವರರಾವ್

ವರವರರಾವ್‌ರ 50 ವರ್ಷಗಳ ಕವಿತ್ವವನ್ನು ಒಂದೇ ಸಂಕಲನದಲ್ಲಿ 2008ರಲ್ಲಿ ಪ್ರಕಟಿಸಿದರು. 1,030 ಪುಟಗಳ ರಚನೆ ಅದು. ಆದರೆ ತೆಲುಗು ಸಾಹಿತ್ಯ ಜಗತ್ತು ಅದನ್ನು ವಿಶ್ಲೇಷಿಸುವ, ಅಳೆಯುವ ಕೆಲಸ ಮಾಡಲಿಲ್ಲ. ಐದು ದಶಕಗಳಿಂದ ಕವಿತೆ ರಚನೆ ಮಾಡಿದ ಕವಿಯಾಗಿ ಗಣನೀಯವಾದ ಹೆಸರು ಹೊಂದಿರುವ ವಿವಿ ಕವಿತ್ವವನ್ನು ತೂಗುವ ವಿಮರ್ಶಕರು ಇಲ್ಲದೇ ಹೋಗಿರುವುದೇ? ಗಂಭೀರ ಶಾಸ್ತ್ರೀಯ ವಿಮರ್ಶೆ ಇಲ್ಲದ ಲೋಪದಿಂದಲೇ ಈ ಸಮಸ್ಯೆ ಇದೆ ಎಂದು ನನಗೆ ಅನಿಸುತ್ತಿದೆ.

ಈಗ ತೆಲುಗು ಸಾಹಿತ್ಯ ವಿಮರ್ಶಾರಾಹಿತ್ಯವನ್ನು ಎದುರಿಸುತ್ತಿದೆ. ವರವರರಾವ್ ಕವಿತ್ವವನ್ನು ಅಳೆಯ ಬೇಕೆಂದರೆ ಐದು ದಶಕಗಳ ಚರಿತ್ರೆ, ರಾಜಕೀಯ, ಆರ್ಥಿಕ ಪರಿವರ್ತನೆಗಳು, ಸಾಂಸ್ಕೃತಿಕ ಬದಲಾವಣೆಗಳ ಕುರಿತು ತಿಳಿದಿರಬೇಕು. ಆಗಲೇ ಆತನ ಕವಿತ್ವವನ್ನು ಸರಿಯಾಗಿ ಅಳೆಯಬಲ್ಲವರಾಗ್ತೇವೆ.

********

ಲೇಖಕರನ್ನು ಆಳುವವರು ಎಂದೂ ವಿರೋಧ ಪಕ್ಷದಂತೆಯೇ ನೋಡುತ್ತಾರೆ. ವಿರೋಧ ಪಕ್ಷಗಳು ಶೂನ್ಯವಾದ ಸಂದರ್ಭದಲ್ಲಿ ಲೇಖಕರು, ಕವಿಗಳ ಪಾತ್ರ ಮತ್ತಷ್ಟು ಪ್ರಮುಖವಾಗುತ್ತದೆ. ಆ ಪಾತ್ರವನ್ನು ವರವರರಾವ್‌ರಂಥವರು ನಿರ್ವಹಿಸುತ್ತಿದ್ದಾರೆ. ದೇಶದಲ್ಲಿ ಜಾರಿಯಾಗುತ್ತಿರುವ ಬ್ರಾಹ್ಮಣೀಯ ಹಿಂದುತ್ವ ಫ್ಯಾಶಿಸಂಗೆ ವಿರುದ್ಧವಾಗಿ ಕೊರಳೆತ್ತಿ ಮಾತನಾಡುತ್ತಿದ್ದಾರೆ. ವರವರರಾವ್ ಕವಿಯಾಗಿ ಪ್ರಜೆಗಳ ದಕ್ಷ, ಅಧ್ಯಾಪಕರಾಗಿ ವಿದ್ಯಾರ್ಥಿಗಳ ಪಕ್ಷ, ಚರ್ಚೆಗಳ ಪ್ರತಿನಿಧಿಯಾಗಿ ವಿಪ್ಲವಕಾರರ ಕಡೆ, ಲೇಖಕನಾಗಿ ಹೋರಾಟಗಾರರ ಕಡೆ, ಭಾಷಣಕಾರನಾಗಿ ಸಾಮಾನ್ಯರ ಧ್ವನಿಯನ್ನು ಕೇಳಿಸುವ ಕೊರಳು. ಆಳುವವರಿಗೆ ಇದು ಇಷ್ಟವಾಗಲಿಲ್ಲ. ‘ನನ್ನ ಪರ ನೀನು ಇಲ್ಲಾಂದ್ರೆ ನನ್ನ ಶತ್ರುವು’ ಎಂದು ಘೋಷಿಸಿದರು.

ಭಿನ್ನಾಭಿಪ್ರಾಯವನ್ನು ಒಪ್ಪಿಕೊಳ್ಳಲಾರದ ಕಾಲದಲ್ಲಿ ಜೀವಿಸುತ್ತಿದ್ದೇನೆ. ಪಾರ್ಲಿಮೆಂಟರಿ, ಪ್ರಜಾಪ್ರಭುತ್ವ ವ್ಯವಸ್ಥೆಗಳನ್ನು ನಿರ್ವೀರ್ಯ ಗೊಳಿಸುತ್ತಿರುವ ಸಂದರ್ಭದಲ್ಲಿ ಇದ್ದೇವೆ. ದಲಿತರು, ಮುಸ್ಲಿಮರು, ಆದಿವಾಸಿಗಳು, ಮಹಿಳೆಯರು, ಹೋರಾಟಗಾರರು, ನಾಸ್ತಿಕರು ಪ್ರಜಾಪ್ರಭುತ್ವವಾದಿಗಳ ಮೇಲೆ ನಾಲ್ಕು ಹೆಡೆಗಳ ಹೈಂದವ ಸರ್ಪ ಬುಸುಗುಡುತ್ತಿದೆ. ಈ ಸಂದರ್ಭದಲ್ಲಿ ಮಾನವತಾವಾದಿ ಮೇಧಾವಿಗಳ ಪಾತ್ರ ಮರೆಯಲಾಗದಂಥದ್ದು. ಭಾವಾಭಿವ್ಯಕ್ತಿ ಸ್ವಾತಂತ್ರಕ್ಕೋಸ್ಕರ ಸಾಮೂಹಿಕ ಸ್ವರ ಕೇಳಿಬಾರದೇ ಹೋದರೆ ಚರಿತ್ರೆಯಲ್ಲಿ ಅಪರಾಧಿಗಳಾಗಿ ನಿಲ್ಲುವ ಸ್ಥಿತಿ ಎಲ್ಲರಿಗೂ ಬರುವುದೇನೋ. ವರವರ ರಾವೇ ಬರೆದಿರುವಂತೆ.

ಅಪರಾಧವೇ ಅಧಿಕಾರವಾಗಿ

ಪ್ರಜೆಗಳನ್ನು ಅಪರಾಧಿಯಾಗಿಸಿ

ಬೇಟೆಮಾಡುತ್ತಿರುವಾಗ

ಸುಮ್ಮನೆ ಕುಳಿತಿರುವ

ಪ್ರತಿಯೊಬ್ಬನೂ ಅಪರಾಧಿಯೇ

(ಕವಿಯಾಗಿ 50 ವರ್ಷಗಳ ಪೂರೈಸುವ, ಇತ್ತೀಚೆಗೆ ಅರ್ಬನ್‌ನಕ್ಸಲ್ ಬಿರುದಾಂಕಿತರಾದ ವರವರರಾವ್ ಗೃಹ ಬಂಧನಕ್ಕೊಳಗಾಗಿರುವ ಸಂದರ್ಭದಲ್ಲಿ)

Writer - ಕಸ್ತೂರಿ

contributor

Editor - ಕಸ್ತೂರಿ

contributor

Similar News