ಶಿವಮೊಗ್ಗ ಜಿಲ್ಲೆಯ 27 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ

Update: 2019-05-01 13:21 GMT

ಶಿವಮೊಗ್ಗ, ಮೇ 1: ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಕಳೆದ ಕೆಲ ದಿನಗಳಿಂದ ಅಕಾಲಿಕ ಮಳೆ ಬೀಳುತ್ತಿರುವ ಹೊರತಾಗಿಯೂ, ಕುಡಿಯುವ ನೀರಿನ ಅಭಾವ ತೀವ್ರ ಸ್ವರೂಪದಲ್ಲಿದೆ. ಬಿಸಿಲಿನ ಬೇಗೆ ಹೆಚ್ಚಾಗಿದೆ. ಇದರಿಂದ ಜಿಲ್ಲೆಯ ವಿವಿಧ ತಾಲೂಕುಗಳ ನೂರಾರು ಕೆರೆಗಳು ನೀರಿಲ್ಲದೆ ಬರಿದಾಗಿವೆ. ಅಂತರ್ಜಲ ಮಟ್ಟ ಗಂಭೀರ ಸ್ಥಿತಿಗೆ ತಲುಪಿದೆ. ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಎದುರಾಗಿದೆ. 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೂಲಗಳು ಹೇಳುವ ಪ್ರಕಾರ, ಸದ್ಯ ಜಿಲ್ಲೆಯ 27 ಕ್ಕೂ ಅಧಿಕ ಗ್ರಾಮಗಳಲ್ಲಿ ಕುಡಿಯುವ ನೀರಿನ ತತ್ವಾರವಿದೆ. ಇಲ್ಲಿಯವರೆಗೂ ಸರಿಸುಮಾರು 800 ಅಧಿಕ ಟ್ಯಾಂಕರ್ ನೀರು ಪೂರೈಕೆ ಮಾಡಲಾಗಿದೆ. 500 ಕ್ಕೂ ಅಧಿಕ ಕೆರೆಕಟ್ಟೆಗಳು ನೀರಿಲ್ಲದೆ ಬರಿದಾಗಿವೆ. ನೂರಾರು ಬೋರ್‍ವೆಲ್, ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ ಎಂದು ಹೇಳುತ್ತವೆ. 

ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ, ಪ್ರಸ್ತುತ ವರ್ಷ ಜಿಲ್ಲೆಯಲ್ಲಿ ತಾಪಮಾನದ ಪ್ರಮಾಣ ಹೆಚ್ಚಿದೆ. ಕಳೆದ ಜನವರಿಯಿಂದಲೇ ಜಿಲ್ಲೆಯಲ್ಲಿ ಉಷ್ಣಾಂಶದ ಪ್ರಮಾಣ ಏರುಗತಿಯಲ್ಲಿತ್ತು. ಇದೀಗ 35 ರಿಂದ 40 ಡಿಗ್ರಿ ಆಸುಪಾಸಿನಲ್ಲಿ ಉಷ್ಣಾಂಶ ದಾಖಲಾಗುತ್ತಿದೆ. ಹೆಚ್ಚುತ್ತಿರುವ ಬಿಸಿಲಿನಿಂದ ಜಲಮೂಲಗಳು ಬರಿದಾಗುತ್ತಿವೆ. ಅಂತರ್ಜಲ ಮಟ್ಟವೂ ಗಂಭೀರ ಸ್ಥಿತಿಗೆ ತಲುಪುವಂತಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. 

ಇದರಿಂದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುವಂತಾಗಿದೆ. ಸಮಸ್ಯೆ ಕಂಡುಬರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ಹಾಗೆಯೇ ಕಾಲಮಿತಿಯಲ್ಲಿ ಸಮಸ್ಯೆ ಪರಿಹಾರಕ್ಕೂ ಸಂಬಂಧಿಸಿದ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಾಗರೀಕರ ಅನುಕೂಲಕ್ಕೆ ಸಹಾಯವಾಣಿ ಕೇಂದ್ರ ಕೂಡ ತೆರೆಯಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಕಚೇರಿಯ ಹಿರಿಯ ಅಧಿಕಾರಿಯೋರ್ವರು ಮಾಹಿತಿ ನೀಡುತ್ತಾರೆ. 

ತತ್ತರ: ಹೆಚ್ಚುತ್ತಿರುವ ಬಿಸಿಲಿನಿಂದ ಮೇವು ಹಾಗೂ ನೀರಿಗೆ ಜಾನುವಾರುಗಳು ಅಲೆದಾಡುವಂತಾಗಿದ್ದು, ಅಕ್ಷರಶಃ ತತ್ತರಿಸಿ ಹೋಗಿವೆ. ಜಿಲ್ಲೆಯ ಹಲವೆಡೆ ನದಿಗಳು ಸೇರಿದಂತೆ ಕೆರೆಕಟ್ಟೆಗಳು ಬರಿದಾಗಿವೆ. ಹಸಿರು ಒಣಗಿ ಹೋಗಿದೆ. ಇದರಿಂದ ಜಾನುವಾರುಗಳು ನೀರು, ಮೇವಿಗೆ ಪರದಾಡುವಂತಾಗಿದೆ. 
ಗದ್ದೆ, ತೋಟಗಳಲ್ಲಿ ಬೋರ್‍ವೆಲ್‍ಗಳು ಕೈಕೊಡುತ್ತಿರುವುದರಿಂದ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ. ಕೆಲ ರೈತರು ಹೊಸದಾಗಿ ಬೋರ್‍ವೆಲ್ ಕೊರೆಯಿಸಿದರೆ, ಮತ್ತೆ ಕೆಲವರು ಟ್ಯಾಂಕರ್ ಮತ್ತೀತರ ವ್ಯವಸ್ಥೆಗಳ ಮೂಲಕ ನೀರು ಪೂರೈಸಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ನಡೆಸುತ್ತಿದ್ದಾರೆ. 

ಅಕಾಲಿಕ ಮಳೆ: ಪ್ರಸ್ತುತ ವರ್ಷದ ಬೇಸಿಗೆ ವೇಳೆ, ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಹಿಂಗಾರು ಮಳೆಯಾಗದಿದ್ದು ಗಾಯದ ಮೇಲೆ ಬರೆ ಎಳೆಯುವಂತಹ ಅನುಭವ ಉಂಟು ಮಾಡಿತ್ತು. ಇತ್ತೀಚೆಗೆ ಜಿಲ್ಲೆಯ ಹಲವೆಡೆ ಮಳೆಯಾಗುತ್ತಿದೆ. ಇದೇ ರೀತಿ ಇನ್ನೂ ಕೆಲ ದಿನಗಳ ಕಾಲ ಮಳೆಯಾದರೆ ಪರಿಸ್ಥಿತಿಯಲ್ಲಿ ಕೊಂಚ ಸುಧಾರಣೆಯಾಗಬಹುದು ಎಂದು ನಾಗರೀಕರು ಅಭಿಪ್ರಾಯಪಡುತ್ತಾರೆ. 
ಒಟ್ಟಾರೆ ಈ ವರ್ಷದ ಬೇಸಿಗೆಯು ಮಲೆನಾಡಿಗರ ಪಾಲಿಗೆ ಕರಾಳವಾಗಿ ಪರಿಣಮಿಸಿರುವುದ್ದು, ಸುಡು ಬಿಸಿಲಿನ ಹೊಡೆತಕ್ಕೆ ಅಕ್ಷರಶಃ ಮಲೆನಾಡಿಗರು ತತ್ತರಿಸಿ ಹೋಗಿರುವುದಂತೂ ಸತ್ಯವಾಗಿದೆ. 

ರಾಜ್ಯದ ಜಲ ವಿದ್ಯುದಾಗಾರಗಳ ಮೇಲಿಲ್ಲ ವಿದ್ಯುತ್ ಉತ್ಪಾದನೆಯ ಒತ್ತಡ!
ಪ್ರತಿ ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗುವ ಕಾರಣದಿಂದ, ಜಲ ವಿದ್ಯುದಾಗಾರಗಳ ಮೇಲೆ ವಿದ್ಯುತ್ ಉತ್ಪಾದನೆಯ ಒತ್ತಡ ಹೆಚ್ಚಾಗುತ್ತದೆ. ನಿಗದಿಗಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಆದರೆ ಪ್ರಸ್ತುತ ಬೇಸಿಗೆಯಲ್ಲಿ, ಲಿಂಗನಮಕ್ಕಿ ಡ್ಯಾಂ ಸೇರಿದಂತೆ ರಾಜ್ಯದ ಜಲ ವಿದ್ಯುದಾಗಾರಗಳ ಮೇಲೆ ವಿದ್ಯುತ್ ಉತ್ಪಾದನೆಯ ಒತ್ತಡವಿಲ್ಲವಾಗಿದೆ!
ಹೌದು. ಇಂಧನ ಇಲಾಖೆಯು, ಸೋಲಾರ್ ಹಾಗೂ ಪವನ ವಿದ್ಯುತ್‍ನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ಪೂರೈಕೆ ಮಾಡುತ್ತಿದೆ. ಬಿಸಿಲು ಹಾಗೂ ಗಾಳಿಯ ತೀವ್ರತೆ ಹೆಚ್ಚಿರುವುದರಿಂದ ಈ ಎರಡು ಮೂಲಗಳಿಂದ ಉತ್ಪಾದನೆಯಾಗುತ್ತಿರುವ ವಿದ್ಯುತ್ ಪ್ರಮಾಣ ಏರುಗತಿಯಲ್ಲಿದೆ. ಈ ಕಾರಣದಿಂದ ಜಲವಿದ್ಯುತ್ ಮೂಲಗಳಲ್ಲಿನ ವಿದ್ಯುತ್ ಉತ್ಪಾದನೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡು, ನೀರಿನ ಸಂಗ್ರಹಕ್ಕೆ ಒತ್ತು ನೀಡಲಾಗಿದೆ. ಅಗತ್ಯವಿದ್ದಾಗ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಇಂಧನ ಇಲಾಖೆ ಮೂಲಗಳು ಮಾಹಿತಿ ನೀಡುತ್ತವೆ. 

ರಾಜ್ಯದ ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನಲ್ಲಿ ಶೇ. 25 ರಷ್ಟು ನೀರು ಸಂಗ್ರಹವಿದೆ. ಹಾಲಿ ಮಾಹಿತಿಯಂತೆ ಜಲಾಶಯದ ನೀರಿನ ಮಟ್ಟ 1767.15 (ಗರಿಷ್ಠ ಮಟ್ಟ : 1819) ಅಡಿಯಿದೆ. ಸದ್ಯ 17 ರಿಂದ 18 ಮಿಲಿಯನ್ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಡ್ಯಾಂನಲ್ಲಿರುವ ನೀರಿನ ಲಭ್ಯತೆಯ ಆಧಾರದ ಮೇಲೆ, ಪ್ರತಿನಿತ್ಯ 25 ಮಿಲಿಯನ್ ಯೂನಿಟ್‍ವರೆಗೂ ವಿದ್ಯುತ್ ಉತ್ಪಾದಿಸಬಹುದಾಗಿದೆ. 

ಆದರೆ ಸೋಲಾರ್ ಹಾಗೂ ಪವನ ವಿದ್ಯುತ್ ಮೂಲದಿಂದ ಲಭ್ಯವಾಗುತ್ತಿರುವ ವಿದ್ಯುತ್ ಪ್ರಮಾಣ ಹೆಚ್ಚಿರುವುದರಿಂದ, ಲಿಂಗನಮಕ್ಕಿ ಡ್ಯಾಂನಲ್ಲಿನ ವಿದ್ಯುತ್ ಉತ್ಪಾದನೆಯನ್ನು ಕಡಿಮೆಗೊಳಿಸಲಾಗಿದೆ. ಇದೇ ಪ್ರಮಾಣದಲ್ಲಿ ಡ್ಯಾಂನ ವಿದ್ಯುದಾಗಾರಗಳಲ್ಲಿ ವಿದ್ಯುತ್ ಉತ್ಪಾದನೆ ನಡೆಸಿದರೆ, ಜೂನ್ - ಜುಲೈವರೆಗೂ ವಿದ್ಯುತ್ ಉತ್ಪಾದಿಸಬಹುದಾಗಿದೆ ಎಂದು ಡ್ಯಾಂ ವ್ಯಾಪ್ತಿಯ ಮೂಲಗಳು ಮಾಹಿತಿ ನೀಡುತ್ತವೆ. 

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News