ಇಂದಿರಾ ಗಾಂಧಿ ಅನರ್ಹತೆ: ಇದೀಗ ಮೋದಿ ಸರದಿ?

Update: 2019-05-02 18:33 GMT

ಹಾಲಿ ಪ್ರಕರಣದಲ್ಲಿ ಆರೋಪಗಳು ಸಮರ್ಥನೆಯನ್ನು ಪಡೆದುಕೊಂಡರೆ ಉಲ್ಲಂಘನೆಯು ಮಾರ್ಚ್ ಅಂತ್ಯದಿಂದ ಎಪ್ರಿಲ್ ಪೂರ್ವಾರ್ಧದ ನಡುವೆ ನಡೆದಿತ್ತು. ಮತದಾನ ಆರಂಭಗೊಳ್ಳಲು ಕೇವಲ ಎರಡು ದಿನಗಳ ಮೊದಲೂ ಆಡಳಿತ ಪಕ್ಷದ ಪ್ರಚಾರಕ್ಕೆ ನೆರವಾಗುವಂತೆ ಕೆಲವು ಗೆಝೆಟೆಡ್ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.
ಉತ್ತರ ಪ್ರದೇಶ ಸರಕಾರದ ವಿರುದ್ಧದ ರಾಜನಾರಾಯಣ ಪ್ರಕರಣವು 2019ರಲ್ಲಿ ಪುನರಾವರ್ತನೆಗೊಂಡರೆ ಅದೂ ಭಾರತದ ಪಾಲಿಗೆ ಕೆಟ್ಟ ಸುದ್ದಿಯಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಪ್ರಚಾರಕ್ಕಾಗಿ ಭೇಟಿ ನೀಡಲಿರುವ ಸ್ಥಳಗಳ ಕುರಿತು ಮಾಹಿತಿಗಳನ್ನು ಪ್ರಧಾನಿ ಕಚೇರಿಗೆ ಒದಗಿಸುವಂತೆ ನೀತಿ ಆಯೋಗವು ಅಧಿಕಾರಿಗಳಿಗೆ ಸೂಚಿಸಿತ್ತು ಎನ್ನುವುದಕ್ಕೆ ಸಾಕ್ಷವೊಂದು ಸುದ್ದಿ ಜಾಲತಾಣ ‘ಸ್ಕ್ರೋಲ್ ಡಾಟ್ ಇನ್’ ಕೈಗೊಂಡ ತನಿಖೆಯಲ್ಲಿ ಲಭ್ಯವಾಗಿದೆ.
ಈ ಸಾಕ್ಷವು ದೃಢಪಟ್ಟರೆ ಪ್ರಧಾನಿಯವರು ನೀತಿ ಸಂಹಿತೆಯನ್ನು ಮಾತ್ರವಲ್ಲ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ದೋಷನಿರ್ಣಯವನ್ನು ಎತ್ತಿಹಿಡಿದಿದ್ದ ಅದೇ ಕಾನೂನನ್ನು ಉಲ್ಲಂಘಿಸಿದ್ದಾರೆ ಎನ್ನುವುದು ಖಚಿತವಾಗುತ್ತದೆ. 1975ರಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯವು ಇಂದಿರಾ ದೋಷಿ ಎಂದು ಘೋಷಿಸಿದ್ದು ಸಂಸತ್ತಿನಿಂದ ಅವರನ್ನು ನಿಷೇಧಿಸಿತ್ತು. ಇದರ ಬೆನ್ನಲ್ಲೇ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಮೂಲಕ ಇಂದಿರಾ ಕಾನೂನಿಗೇ ಸವಾಲೊಡ್ಡಿದ್ದರು.
‘ಸ್ಕ್ರೋಲ್ ಡಾಟ್ ಇನ್’ಗೆ ಲಭ್ಯವಾಗಿರುವ ಇ-ಮೇಲ್‌ನ್ನು ನೀತಿ ಆಯೋಗದ ಆರ್ಥಿಕ ಅಧಿಕಾರಿ(ರಾಜ್ಯಗಳ ಸಮನ್ವಯ) ಪಿಂಕಿ ಕಪೂರ್ ಅವರು ಕೆಲವು ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳಿಗೆ ಬರೆದಿರುವಂತಿದೆ.
 ಎ.8ರ ಈ ಇ-ಮೇಲ್‌ನಲ್ಲಿ ಕಪೂರ್ ಅವರು ‘‘ಪ್ರಧಾನ ಮಂತ್ರಿಗಳು ಶೀಘ್ರವೇ ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಕೇಂದ್ರಾಡಳಿತ ಪ್ರದೇಶಗಳ ಐತಿಹಾಸಿಕತೆ, ಸ್ಥಳೀಯ ಮಹಾನ್ ವ್ಯಕ್ತಿಗಳು, ಸಂಸ್ಕೃತಿ, ಧಾರ್ಮಿಕ ಮತ್ತು ಆರ್ಥಿಕ (ಪ್ರಮುಖ ಬೆಳೆಗಳು, ಕೈಗಾರಿಕೆಗಳಂತಹ ವಿವರಗಳು ಸೇರಿದಂತೆ) ಮುಖ್ಯಾಂಶಗಳು ಮತ್ತು ಪ್ರಮುಖ ವೈಶಿಷ್ಟಗಳು ಹಾಗೂ ಪ್ರವಾಸೋದ್ಯಮ, ಕೃಷಿ ಮತ್ತು ಉದ್ಯೋಗ/ಜೀವನೋಪಾಯಗಳ ವಿಶೇಷ ಪ್ರಸ್ತಾಪಗಳೊಂದಿಗೆ ಕೇಂದ್ರಾಡಳಿತ ಪ್ರದೇಶಗಳ ಚಿತ್ರಣ ಇವುಗಳ ಕುರಿತು ವರದಿಯೊಂದು ಎ.9ರಂದು ಅಪರಾಹ್ನ ಎರಡು ಗಂಟೆಯೊಳಗೆ ತನ್ನ ಕೈಸೇರಬೇಕೆಂದು ಪ್ರಧಾನಿ ಕಚೇರಿಯು ಬಯಸಿದೆ. ಹೀಗಾಗಿ ಸೂಚಿತ ಗಡುವಿನೊಳಗೆ ಇವುಗಳನ್ನು ಪ್ರಧಾನಿ ಕಚೇರಿಗೆ ಒದಗಿಸಬೇಕು’’ ಎಂದು ಬರೆದಿದ್ದಾರೆ.
 ಬಿಜೆಪಿ ಆಡಳಿತದ ಮಹಾರಾಷ್ಟ್ರದ ಜಿಲ್ಲಾಧಿಕಾರಿಯೋರ್ವರಿಗೂ ಇಂತಹುದೇ ಮನವಿಯ ಸಾಕ್ಷಾಧಾರವನ್ನು ತಾನು ನೋಡಿರುವುದಾಗಿ ‘ಸ್ಕ್ರೋಲ್ ಡಾಟ್ ಇನ್’ ಹೇಳಿದೆ. ಪ್ರಧಾನಿ ಮೋದಿಯವರು ರಾಜ್ಯದ ವಾರ್ಧಾ, ಗೊಂಡಿಯಾ ಮತ್ತು ಲಾತೂರುಗಳಲ್ಲಿ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುವ ಕೆಲವೇ ಗಂಟೆಗಳ ಮೊದಲು ಗೊಂಡಿಯಾ ಜಿಲ್ಲಾಧಿಕಾರಿ ಕಾದಂಬರಿ ಬಲಕವಡೆ ಅವರು ಜಿಲ್ಲೆಯ ಪಾರ್ಶ್ವನೋಟದೊಂದಿಗಿನ ಟಿಪ್ಪಣಿಯೊಂದನ್ನು ನೀತಿ ಆಯೋಗಕ್ಕೆ ಕಳುಹಿಸಿದ್ದರು. ‘ಪ್ರಧಾನಿ ಕಚೇರಿಗಾಗಿ ಗೊಂಡಿಯಾ ಜಿಲ್ಲೆಯ ಕುರಿತು ಬರಹ/ಮಾಹಿತಿ’ ಎಂದು ಇ-ಮೇಲ್‌ನ ಸಬ್ಜೆಕ್ಟ್ ಲೈನ್‌ನಲ್ಲಿ ಉಲ್ಲೇಖಿಸಲಾಗಿತ್ತು.
ಈ ಎಲ್ಲ ಮಾಹಿತಿಗಳನ್ನು ಪ್ರಧಾನಿ ಕಚೇರಿಗೆ ಸಲ್ಲಿಸಬೇಕಾಗಿತ್ತು ಎನ್ನುವುದನ್ನು ಪರಿಗಣಿಸಿದರೆ ಪ್ರಧಾನ ಮಂತ್ರಿಗಳೇ ಇವುಗಳನ್ನು ಕೋರಿದ್ದರು ಎನ್ನುವುದು ಸುಲಭದ ತರ್ಕವಾಗಿದೆ. ಹೀಗಾಗಿ ಅವರಿಗೆ ಗೊತ್ತಿದ್ದೇ ಮತ್ತು ಅವರ ಒಪ್ಪಿಗೆಯೊಂದಿಗೇ ಈ ಅಧಿಕಾರಿಗಳು ಕಾರ್ಯ ನಿರ್ವಹಿಸಿದ್ದರು ಎನ್ನುವುದು ಸ್ಪಷ್ಟವಾಗುತ್ತದೆ.
ನ್ಯಾಯಸಮ್ಮತ ಚುನಾವಣೆಗಳ ಬುನಾದಿ
ಪ್ರಧಾನಿ ಕಚೇರಿಯ ಈ ಕೋರಿಕೆಗಳು ‘ರಾಜಕೀಯ ಪಕ್ಷಗಳು ಚುನಾವಣಾ ಕಾರ್ಯಗಳಿಗಾಗಿ ಅಧಿಕೃತ ಆಡಳಿತ ಯಂತ್ರವನ್ನು ಅಥವಾ ಸಿಬ್ಬಂದಿಯನ್ನು ಬಳಸಿಕೊಳ್ಳುವಂತಿಲ್ಲ’ ಎಂಬ ಮಾದರಿ ನೀತಿ ಸಂಹಿತೆಯಡಿಯ ನಿಯಮವನ್ನು ಉಲ್ಲಂಘಿಸಿರುವಂತೆ ಕಂಡುಬರುತ್ತಿದೆ. ಮಾದರಿ ನೀತಿ ಸಂಹಿತೆಯು ಸ್ವಯಂಪ್ರೇರಿತವಾಗಿದ್ದು, ಸೀಮಿತ ಕಾನೂನು ಬಲವನ್ನು ಹೊಂದಿದೆ.
ಆದರೆ ಈ ವಿಧದ ಉಲ್ಲಂಘನೆಯು ಭಾರತದಲ್ಲಿ ಚುನಾವಣೆಗಳ ಮೇಲೆ ಶಾಸನಬದ್ಧ ನಿಯಂತ್ರಣವನ್ನು ಹೊಂದಿರುವ ಜನತಾ ಪ್ರಾತಿನಿಧ್ಯ ಕಾಯ್ದೆ, 1951ಕ್ಕೆ ವಿರುದ್ಧವಾಗಬಹುದು ಮತ್ತು ಇದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಲ್ಲುದು, ಅಲ್ಲದೆ ಹಿಂದೆ ಆಗಿರುವಂತೆ ಇತಿಹಾಸದ ಸ್ವರೂಪಕ್ಕೆ ಧಕ್ಕೆಯನ್ನೂ ಉಂಟು ಮಾಡಬಹುದು.
1971ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವು ಆಗಷ್ಟೇ ವಿಭಜನೆಗೊಂಡಿದ್ದರೂ ಇಂದಿರಾ ಗಾಂಧಿಯವರ ಕಾಂಗ್ರೆಸ್ ಐತಿಹಾಸಿಕ ಗೆಲುವನ್ನು ಸಾಧಿಸಿತ್ತು. ಅವರ ಬಣವು ಶೇ.43ರಷ್ಟು ಮತಗಳಿಕೆಯೊಂದಿಗೆ ಲೋಕಸಭೆಯಲ್ಲಿ 352 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು.
ಇಂದಿರಾ ರಾಯಬರೇಲಿಯಲ್ಲಿ ಸೋಷಿಯಲಿಷ್ಟ್ ಅಭ್ಯರ್ಥಿ ರಾಜನಾರಾಯಣ್ ಅವರನ್ನು ಸೋಲಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು. ಆಗ ಜನತಾ ಪ್ರಾತಿನಿಧ್ಯ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ರಾಜನಾರಾಯಣ ಅವರು ಇಂದಿರಾರನ್ನು ನ್ಯಾಯಾಲಯಕ್ಕೆಳೆದಿದ್ದರು.
 ಕಾಯ್ದೆಯ ಕಲಂ 123(7)(ಎ) ಅಡಿ ಅಭ್ಯರ್ಥಿ ಅಥವಾ ಅವರ ಏಜೆಂಟ್ ಅಥವಾ ಅಭ್ಯರ್ಥಿಯ ಒಪ್ಪಿಗೆಯ ಮೇರೆಗೆ ಕಾರ್ಯಾಚರಿಸುವ ಯಾವುದೇ ವ್ಯಕ್ತಿ ಅಭ್ಯರ್ಥಿಯ ಚುನಾವಣಾ ಭವಿಷ್ಯವನ್ನು ಇನ್ನಷ್ಟು ಉತ್ತಮಗೊಳಿಸಲು ಯಾವುದೇ ಪತ್ರಾಂಕಿತ ಅಧಿಕಾರಿಯ ನೆರವು ಪಡೆದುಕೊಳ್ಳುವುದನ್ನು ‘ಭ್ರಷ್ಟ ಪದ್ಧತಿ’ ಎಂದು ವ್ಯಾಖ್ಯಾನಿಸಲಾಗಿದೆ.
ಇಂದಿರಾ ಗಾಂಧಿಯವರ ಪ್ರಕರಣದಲ್ಲಿ, ಅವರು ಸರಕಾರಿ ಅಧಿಕಾರಿ ಯಶಪಾಲ ಕಪೂರ್ ಎನ್ನುವವರನ್ನು ತನ್ನ ಪ್ರಚಾರ ಸಂಘಟಕರನ್ನಾಗಿ ನೇಮಕಗೊಳಿಸಿದ್ದರು ಎಂದು ಆರೋಪಿಸಲಾಗಿತ್ತು. ಅಲ್ಲದೆ ಇಂದಿರಾರ ಪ್ರಚಾರ ಸಭೆಗಳನ್ನು ವ್ಯವಸ್ಥೆಗೊಳಿಸುವಂತೆ ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸರಿಗೆ ನಿರ್ದೇಶ ನೀಡಲಾಗಿತ್ತು ಎಂದೂ ಆರೋಪಿಸಲಾಗಿತ್ತು.
ಕಪೂರ್ ಅವರು ಪ್ರಧಾನಿಗಳ ಸಚಿವಾಲಯಕ್ಕೆ ತನ್ನ ರಾಜೀನಾಮೆಯನ್ನು ಸಲ್ಲಿಸಿದ್ದರು. ಕಪೂರ್ ಇಂದಿರಾರ ಚುನಾವಣಾ ಪ್ರಚಾರ ಕುರಿತು ತನ್ನ ಕಾರ್ಯವನ್ನು ಆರಂಭಿಸುವ ಮುನ್ನ ಅವರ ರಾಜೀನಾಮೆಯು ಅಧಿಕೃತವಾಗಿ ಅಂಗೀಕಾರವಾಗಿತ್ತೇ ಎನ್ನುವುದು ಅಲಹಾಬಾದ್ ಉಚ್ಚ ನ್ಯಾಯಾಲಯದ ಮುಂದಿದ್ದ ವಿಷಯವಾಗಿತ್ತು.
ಕಾಯ್ದೆಯ ಕಲಂ 123(7)(ಎ) ಅಡಿ ಇಂದಿರಾ ತಪ್ಪಿತಸ್ಥರಾಗಿದ್ದಾರೆ ಎಂದು 1975, ಜೂನ್ 12ರಂದು ಘೋಷಿಸಿದ್ದ ಅಲಹಾಬಾದ್ ಉಚ್ಚ ನ್ಯಾಯಾಲಯವು, ಆರು ವರ್ಷಗಳ ಅವಧಿಗೆ ಅವರು ಚುನಾಯಿತ ಹುದ್ದೆಯನ್ನು ವಹಿಸುವುದನ್ನು ನಿಷೇಧಿಸಿತ್ತು, ತನ್ಮೂಲಕ ಇಂದಿರಾ ಪ್ರಧಾನಿ ಹುದ್ದೆಯನ್ನು ಕಳೆದುಕೊಳ್ಳುವಂತಾಗಿತ್ತು.
ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಇಂದಿರಾ ಮೇಲ್ಮನವಿಯನ್ನು ಸಲ್ಲಿಸಿದ್ದರು. ಆದರೆ ಪ್ರತಿಪಕ್ಷಗಳ ಪ್ರತಿಭಟನೆಗಳು ಮತ್ತು ತನ್ನ ರಾಜೀನಾಮೆಗಾಗಿ ಆಗ್ರಹಗಳ ಹಿನ್ನೆಲೆಯಲ್ಲಿ ಇಂದಿರಾ ಎರಡು ವಾರಗಳ ಬಳಿಕ, ಜೂನ್ 25ರಂದು ದೇಶಾದ್ಯಂತ ತುರ್ತು ಸ್ಥಿತಿಯನ್ನು ಘೋಷಿಸಿದ್ದರು.
ಸಣ್ಣ ಕಾರಣವೂ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ
ಭಾರೀ ಪ್ರಮಾಣದಲ್ಲಿ ನಡೆಯುತ್ತಿದ್ದ ಚುನಾವಣಾ ಅವ್ಯವಹಾರಗಳಿಗೆ ಹೋಲಿಸಿದರೆ ಇಂದಿರಾರ ಅನರ್ಹತೆಗೆ ಕಾರಣವಾಗಿದ್ದ ಉಲ್ಲಂಘನೆ ಆರೋಪ ಅಷ್ಟೊಂದು ಗಂಭೀರ ಸ್ವರೂಪದ್ದಾಗಿರಲಿಲ್ಲ. ಆದರೆ ಕಾನೂನು ಕಾನೂನೇ ಮತ್ತು ಇಂದಿರಾ ಚುನಾವಣೆಯಲ್ಲಿ ಭಾರಿ ಜಯ ಗಳಿಸಿದ್ದರೂ ಕಾನೂನನ್ನು ಎತ್ತಿ ಹಿಡಿಯಲೇಬೇಕಿತ್ತು. ನಂತರದ ತುರ್ತು ಸ್ಥಿತಿ ಈಗ ಇತಿಹಾಸದ ಪುಟಗಳಲ್ಲಿ ಸೇರಿದೆ.
ತನ್ನ ಮೇಲ್ಮನವಿ ನಿರ್ಧಾರವಾಗುವವರೆಗೂ ರಾಜೀನಾಮೆ ನೀಡಲು ಇಂದಿರಾ ನಿರಾಕರಿಸಬಹುದಿತ್ತು. ಬದಲಿಗೆ ಅವರು ನಾಗರಿಕ ಹಕ್ಕುಗಳ ಅಮಾನತು, ಪ್ರತಿಪಕ್ಷ ನಾಯಕರ ಬಂಧನ ಮತ್ತು ಭಾರತೀಯ ಪ್ರಜಾಪ್ರಭುತ್ವದ ಬುನಾದಿಯೊಂದಿಗೆ ರಾಜಿಯ ಮೂಲಕ ದೇಶವನ್ನು 19 ತಿಂಗಳ ತುರ್ತು ಸ್ಥಿತಿಯ ಸಂಕಷ್ಟಕ್ಕೆ ತಳ್ಳಿದ್ದರು.
ಇಂದಿರಾರ ಪ್ರಕರಣದಲ್ಲಿ ದೋಷಾರೋಪಣೆ ಮಾಡಬಹುದಾದ ಅವಧಿ ಜನವರಿ ಆಗಿತ್ತು. ಅವರು ಫೆ.1ರಂದಷ್ಟೇ ತನ್ನ ಉಮೇದುವಾರಿಕೆಯನ್ನು ಪ್ರಕಟಿಸಿದ್ದರು ಮತ್ತು ಮಾರ್ಚ್ ಆರಂಭದಲ್ಲಿ ಮತದಾನ ನಡೆದಿತ್ತು.
ಹಾಲಿ ಪ್ರಕರಣದಲ್ಲಿ ಆರೋಪಗಳು ಸಮರ್ಥನೆಯನ್ನು ಪಡೆದುಕೊಂಡರೆ ಉಲ್ಲಂಘನೆಯು ಮಾರ್ಚ್ ಅಂತ್ಯದಿಂದ ಎಪ್ರಿಲ್ ಪೂರ್ವಾರ್ಧದ ನಡುವೆ ನಡೆದಿತ್ತು. ಮತದಾನ ಆರಂಭಗೊಳ್ಳಲು ಕೇವಲ ಎರಡು ದಿನಗಳ ಮೊದಲೂ ಆಡಳಿತ ಪಕ್ಷದ ಪ್ರಚಾರಕ್ಕೆ ನೆರವಾಗುವಂತೆ ಕೆಲವು ಗೆಝೆಟೆಡ್ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.
ಉತ್ತರ ಪ್ರದೇಶ ಸರಕಾರದ ವಿರುದ್ಧದ ರಾಜನಾರಾಯಣ ಪ್ರಕರಣವು 2019ರಲ್ಲಿ ಪುನರಾವರ್ತನೆಗೊಂಡರೆ ಅದೂ ಭಾರತದ ಪಾಲಿಗೆ ಕೆಟ್ಟ ಸುದ್ದಿಯಾಗುತ್ತದೆ.
ಕಾನೂನು ತಜ್ಞರ ಅಭಿಪ್ರಾಯದಂತೆ ಉಲ್ಲಂಘನೆಯಿಂದ ಮೋದಿಯವರ ಸ್ವಂತ ಉಮೇದುವಾರಿಕೆಗಿಂತ ಕೇಂದ್ರಾಡಳಿತ ಪ್ರದೇಶಗಳು ಮತ್ತು ಮಹಾರಾಷ್ಟ್ರದಲ್ಲಿ ಅವರು ಯಾರ ಪರವಾಗಿ ಪ್ರಚಾರ ನಡೆಸಿದ್ದರೋ ಆ ಅಭ್ಯರ್ಥಿಗಳು ಹೆಚ್ಚಿನ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಅದು ಹೇಗಿದ್ದರೂ ಕಾನೂನು ಸಮರ ನಡೆಸುವ ಅವಕಾಶಗಳಿವೆ.
ಹೋಲಿಕೆಯು ಸರಿಯಾಗಿದೆ ಎಂದು ಸುದ್ದಿ ಜಾಲತಾಣಕ್ಕೆ ತಿಳಿಸಿದ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರು, ಇಂದಿರಾ ಗಾಂಧಿಯವರು ತುಂಬ ಸಣ್ಣ ಅಪರಾಧಕ್ಕಾಗಿ ಅನರ್ಹಗೊಂಡಿದ್ದರು ಎನ್ನುವುದು ತುಂಬ ದಿನಗಳಿಂದ ನನ್ನ ಮನಸ್ಸಿನಲ್ಲಿತ್ತು. ಇಂದು ರಾಜಕೀಯೇತರ ಸೇವೆಯಾಗಿರುವ ಇಡೀ ಸರಕಾರಿ ಸೇವೆಯು ಚುನಾವಣೆಗಳಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಗಳ ನೆರವಿಗಾಗಿ ಕೆಲಸ ಮಾಡುತ್ತಿದೆ ಎಂದರು.
ಇಂತಹ ಉಲ್ಲಂಘನೆಯು ಪ್ರಧಾನಿ ಕಚೇರಿಯ ಮೇಲೆ ಗಂಭೀರ ಹೊಣೆಗಾರಿಕೆಯನ್ನು ಹೊರಿಸಿದೆ. ಕಳೆದ ವಾರಗಳಲ್ಲಲ್ಲದಿದ್ದರೂ ಉಳಿದಿರುವ ವಾರಗಳಲ್ಲಾದರೂ ಅದು ಈ ಚುನಾವಣೆಯಲ್ಲಿ ನ್ಯಾಯಸಮ್ಮತವಾಗಿ ನಡೆದುಕೊಳ್ಳಬೇಕಿದೆ.
ಕೃಪೆ: thewire.in

Writer - ರಘು ಕಾರ್ನಾಡ್

contributor

Editor - ರಘು ಕಾರ್ನಾಡ್

contributor

Similar News

ಜಗದಗಲ
ಜಗ ದಗಲ